ಪಾಲು

ಕಥೆ

ಪಾಲು

ಜೀವಿ.ಹೆಗಡೆ

Arecanut Production - A Beginners Guide | Asia Farming

ಗಣೇಶ ಹಾಗು ಶ್ರೀನಿವಾಸ ಅಣ್ಣ ತಮ್ಮಂದಿರು. ಇಬ್ಬರೂ ರಾಮಲಕ್ಷ್ಮಣರ ಹಾಗೆ ಅಂತ ಊರಲ್ಲಿ ಹೇಳುತ್ತಿದ್ದರು. ರಾಮಲಕ್ಷ್ಮಣರಿಗಾದರೋ ತಂದೆ ಒಬ್ಬನೇ ಆದರೂ ತಾಯಿ ಬೇರೆ ಬೇರೆ. ರಾಮನಿಗೆ ಸಾಹೋದರ್ಯವನ್ನು ಹಂಚಿಕೊಳ್ಳಲು ಭರತ ಶತ್ರುಘ್ನರೂ ಇದ್ದರು. ಆದರೆ ಗಣೇಶನಿಗೆ ಹಾಗಲ್ಲ. ನಿಜವಾದ ‘ಸಹೋದರ’ ಶ್ರೀನಿವಾಸ.

ರಾಮ ಲಕ್ಷ್ಮಣರ ಅನ್ಯೋನ್ಯತೆಯನ್ನು ತಿಳಿಯಪಡಿಸುವ ಸಲುವಾಗಿ ರಾಮಲಕ್ಷ್ಮಣರ ಹಾಗೆ ಎನ್ನುತ್ತಾರೆ. ಆದರೆ  ಗಣೇಶ ಶ್ರೀನಿವಾಸರು ಒಂದೇ ಗರ್ಭದಿಂದ ಹುಟ್ಟಿದವರು. ಜೋಡುಮಕ್ಕಳು. ಅಶ್ವಿನೀಕುಮಾರರು ಎನ್ನ ಬಹುದೇ ವಿನಃ ‘ಹಿರಣ್ಯಾಕ್ಷ ಹಿರಣ್ಯಕಶಿಪು’ ಅಂತ ಹೇಳುವಂತಲ್ಲ.

ತಂದೆ ರಾಘವ ಹೆಗಡೆ ಹಾಗೂ ತಾಯಿ ವಿಶಾಲಾಕ್ಷಮ್ಮನ ಗುಣಗಳ ಎರಕ ಈ  ಜೋಡಿಯದು. ಸ್ವಭಾವತಃ ಸೌಮ್ಯ. ಎರಡು ಮಕ್ಕಳನ್ನು ಸಂಭಾಳಿಸಿ ಬೆಳೆಸುವದು ಸುಲಭವಲ್ಲ.  ಮಕ್ಕಳನ್ನು ಮುದ್ದಿನಿಂದಲೇ ಬೆಳೆಸಿದ್ದರು ಅಪ್ಪ ಅಮ್ಮ. ಮುದ್ದು ಹೆಚ್ಚಾಯಿತೊ ಏನೊ. ಆಟಗಳಲ್ಲಿ ಇರುವ ಶೃದ್ಧೆ ಪಾಟದಲ್ಲಿರಲಿಲ್ಲ.

ಜೋಡು ಮಕ್ಕಳಲ್ಲಿ ಹಿರಿಯವನು ಗಣೇಶ. ಶ್ರೀನಿವಾಸ ಕಿರಿಯವನು. ಒಂದೇ ಸಲ ಶಾಲೆಯ ಜೀವನವನ್ನು ಪ್ರಾರಂಭಿಸಿದರು. ಶಾಲೆಯು ಒಂದೇ. ತರಗತಿಯೂ ಒಂದೇ. ಕುಳಿತು ಕೊಳ್ಳುವ ಬೇಂಚೂ ಒಂದೇ. ಅಂದಮೇಲೆ ಶಿಕ್ಷಕರೂ ಒಂದೇ ಅಲ್ಲವೇ?. ಗಣೇಶ ಶ್ರೀನಿವಾಸರನ್ನು ಪ್ರತ್ಯೇಕವಾಗಿ ಗುರುತಿಸಲು ಹದಿನೈದುದಿನ ಬೇಕಾಯಿತು ಶಿಕ್ಷಕರಿಗೆ.

ರಾಘವ ಹೆಗಡೆಯವರ ಊರು ಕುಮಟಾದ ಸಮೀಪದ ಹಳ್ಳಿ, ಕೂಜಳ್ಳಿ. ದೊಡ್ಡದಾದ ಊರು. ರೆವಿನ್ಯೂ ಮಟ್ಟದಲ್ಲಿ ಹೋಬಳಿ ಸ್ಥಳ. ತಂದೆ ರಾಘವ ಹೆಗಡೆಗೆ ಇಬ್ಬರು ಮಕ್ಕಳು. ಗಣೇಶ ಹಿರಿಯವ, ಶ್ರೀನಿವಾಸ ಕಿರಿಯವ. ಸಣ್ಣ ಹಿಡುವಳಿ. ಪಾಲಾಗುವಾಗ ಬಂದಿದ್ದು ಕೇವಲ ಮೂವತ್ತು ಗುಂಟೆ ಅಡಿಕೆ ತೋಟ, ಒಂದು ಎಕರೆ ಬೇಣ ಹಾಗೂ ಇಪ್ಪತ್ತೆರಡು ಗುಂಟೆ ಶರವಿನ ಗದ್ದೆ ಅಷ್ಟೇ, ಕೇವಲ ಮಳೆನೀರನ್ನು ಆಶ್ರಯಿಸಿದ್ದು.

ಕಲ್ಲಿನಿಂದ ಕೂಡಿದ ಬೇಣ ಹಾಗೂ ಗದ್ದೆ, ಸ್ವಲ್ಪ ದೂರದಲ್ಲಿ ಇತ್ತು. ಬಾವಿ ತೋಡಿದರೂ ನೀರು ಬರದೇ ಇದ್ದುದರಿಂದ ಗದ್ದೆಯಲ್ಲಿ ಅಡಿಕೆ ತೋಟ ಎಬ್ಬಿಸಿರಲಿಲ್ಲ. ಕೆಲವು ಗೇರು ಗಿಡಗಳನ್ನು ಹಾಕಿದ್ದರೂ ಸಹ ಮಳೆಗಾಲದಲ್ಲಿ ನೀರು ತುಂಬುವ ಕಾರಣ ಗಿಡಗಳು ಎದ್ದಿರಲಿಲ್ಲ.

ಮಕ್ಕಳು ಇಬ್ಬರೂ ಕಲಿಕೆಯಲ್ಲಿ ಹಿಂದಿರುವದರಿಂದ ಶಿಕ್ಷಣ ಮುಂದುವರಿಸಲಾಗಲಿಲ್ಲ.  ಅಂತೂ ಮಲ್ಲಾಪುರ ಹೈಸ್ಕೂಲಿನಲ್ಲಿ  ಎಸ್.ಎಸ್.ಎಲ್.ಸಿ. ಮುಗಿಸಿ ಮನೆಯಲ್ಲಿಯೇ ಉಳಿದರು. ಮೂರು ಗೇಣು ಜಮೀನಿನಲ್ಲಿ ಎರಡು ಜೋಡಿ ಹೊಟ್ಟೆ ಹೊರೆಯಲು ಸಾಧ್ಯವೇ?

ಇರುವ ಸ್ಥಳದಲ್ಲಿಯೇ ಉತ್ಪನ್ನ ಹೆಚ್ಚಾಗಬೇಕು. ಇಲ್ಲವಾದಲ್ಲಿ  ಹೆಚ್ಚು ಉತ್ಪನ್ನಕ್ಕಾಗಿ ಸ್ಥಳ ವಿಸ್ತಾರವಾಗಬೇಕು. ಕೂಜಳ್ಳಿಯಲ್ಲಿ ಏನು ಮಾಡಲು ಸಾಧ್ಯ? ಸ್ಥಳವೂ ಹೆಚ್ಚಾಗದು ಉತ್ಪನ್ನವೂ ಉಹೂಂ.

ಜಮೀನು ಮಾಡುವದು ಸುಲಭವೇ? ಹತ್ತಿರದಲ್ಲೆಲ್ಲೂ ತಯಾರೀ ಜಮೀನು ಸಿಗಲಿಕ್ಕಿಲ್ಲ. ಸಿಗುವದಾದರೂ ದುಬಾರಿ. ಹೇಗೂ ಮಕ್ಕಳು ಚಿಕ್ಕವರು. ಅವರ ಕುಟುಂಬವಾಗುವದರೊಳಗೆ ಫಲ ಕೈಸೇರುವ ಹಾಗಾದರಾಯಿತು. ಅಲ್ಲಿಯತನಕ ಮನೆಯಿಂದ ಸಹಾಯಮಾಡಬಹುದು. ಆಮೇಲೆ ಅವರ ಕಾಲಮೇಲೆ ಅವರು ನಿಲ್ಲ ಬೇಕಲ್ಲವೇ?

ಮನೆಯಲ್ಲಿ ಒಬ್ಬ ಹೇಗೂ, ಆರಕ್ಕೆ ಏರದೇ ಮೂರಕ್ಕೆ ಇಳಿಯದೇ ಜೀವನ ಸಾಗಿಸಬಹುದು. ಫಲಭರಿತ ತೋಟ. ಕಟ್ಟಿದ ಮನೆ. ಬೇರೆಯಾದ ಮೇಲೆ ರಾಘವ ಹೆಗಡೆಯವರೇ ಕಟ್ಟಿಸಿದ್ದರು. ತಮ್ಮದೇ ಬೇಣದಲ್ಲಿಯ ಎರಡು ದೊಡ್ಡ ಮರಗಳನ್ನು ಕಡಿಸಿ, ಒಂದು ಹಲಸು ಇನ್ನೊಂದು ಹೊನಗಲು,  ಕಟ್ಟಿಗೆ ಮಾಡಿಸಿ  ಮನೆ ಕಟ್ಟಿಸಿದ್ದರು. ಕಿಟಕಿ ಬಾಗಿಲಿಗೆ,  ಜಂತಿಗೆ, ಪಕಾಸು ರೀಪು ಹೀಗೆ ಎಲ್ಲ ಕಟ್ಟಿಗೆಗಳೂ ಮನೆಯ ಬೇಣದಲ್ಲಿ ಬೆಳೆದ ಮರದಿಂದಲೇ ಮಾಡಿಸಿದ್ದು. ಮರಕಡಿಸಲು ಪರ್ಮೀಶನ್ ತೆಗೆದುಕೊಂಡಿರಲಿಲ್ಲ. ಫೋರೆಸ್ಟನಿಗೆ ಹೇಳಿ ಧಡೆ ಹಾಕಿ ಕಟ್ಟಿಗೆ ಕೊಯ್ಸಿದ್ದರು. ‘ನಿಮ್ಮಿಂದ ನಾನೇನೂ ಬಯಸುವದಿಲ್ಲ. ಆದರೆ ರೇಂಜರ್ ಗೆ ಕೊಡಬೇಕು. ಎರಡು ಸಾವಿರ ಕೊಡಿರಿ. ನಾನು ಸುಧಾರಿಸಿಕೊಡುತ್ತೇನೆ.’ ಅಂತ ಹೇಳಿ ಎರಡು ಸಾವಿರ ಪೀಕಿದ್ದನು ಫೋರೆಸ್ಟ. ಆದರೂ ಇರಲಿ ಅಂತ ಮರಾಕಲ್  ಸರಕಾರೀ ಡೀಪೋದಲ್ಲಿ ಲಿಲಾವಿನಲ್ಲಿ ಭಾಗವಹಿಸಿ, ಪ್ರಯೋಜನಕ್ಕೆ ಬಾರದ ಹಲಸಿನ ಹಾಗೂ ಹೊನಗಲಿನ ಎರಡು ತುಂಡುಗಳನ್ನು ಕಡಿಮೆ ಬೆಲೆಗೆ ತೆಗೆದು ಕೊಂಡಿದ್ದರು ರಾಘವಹೆಗಡೆಯವರು. ಆ ತುಂಡುಗಳನ್ನು ಧಡೆಯ ಸಮೀಪ ತರಿಸಿಟ್ಟಿದ್ದರು, ಫೋರೆಸ್ಟ ನ ಸಲಹೆಯ ಮೇರೆಗೆ. ಅದರಲ್ಲಿ ಧಡೆಯನ್ನು ಅಧಿಕೃತ ಮಾಡುವ ಹುನ್ನಾರವಿತ್ತು. ವಾಲಗಳ್ಳಿಯ ಕಲ್ಲಿನಿಂದ ಗೋಡೆಗಳು. ಅಂಕಣಕ್ಕೆ ಹಲಗೆ ಹಾಗೂ ಮಂಗಳೂರು ಹಂಚಿನ ಛಾವಣಿ. ನೂರು ವರ್ಷಕ್ಕೆ  ತೊಂದರೆ ಇಲ್ಲ.

ಇಷ್ಟಿದ್ದ ಮೇಲೆ ತಾವು ಬೇರೆಕಡೆಗೆ ಹೇಗೆ ಹೋಗುವದು? ಒಬ್ಬ ಮಗ ಇಲ್ಲೇ ಇರಲಿ.  ಇಲ್ಲಿಯ ಉತ್ಪನ್ನ ಒಂದು ಸಂಸಾರಕ್ಕೆ ತೊಂದರೆ ಇಲ್ಲ. ಇಬ್ಬರೂ ಮಕ್ಕಳು ಈ ಸಣ್ಣ ಹಿಡುವಳಿಯಲ್ಲಿ ಇರಲು ಸಾಧ್ಯವಿಲ್ಲವೆಂಬ ಅಭಿಪ್ರಾಯ ರಾಘವ ಹೆಗಡೆಯವರದು.

‘ಹಿರಿಯ ಮಗ ಗಣೇಶ ಇಲ್ಲೇ ಇರಲಿ. ಹಿರಿಯವನು ಪಿತೃ ಸ್ಥಾನದಲ್ಲಿರುವದೇ ಸರಿ. ಮತ್ತೆ ಸಧ್ಯದಲ್ಲಿಯೇ ಅವನಿಗೆ ಮದುವೆ ಮಾಡಿಸಬೇಕಿದೆ. ಅದರ ಒಳಗಾಗಿ, ಜಮೀನು ಖರೀದಿ ಮಾಡಿ ಶ್ರೀನಿವಾಸನನ್ನು ನೆಲೆಗೊಳಿಸಬೇಕು. ಜಮೀನನ್ನು ಶ್ರೀನಿವಾಸನ ಹೆಸರಿಗೇ ಖರೀದಿ ಮಾಡಿದರಾಯಿತು. ಆಮೇಲೆ ಪಾಲು ಮಾಡುವಾಗ ಈಗಿನ ಮನೆಯನ್ನು ಗಣೇಶನಿಗೆ ಹಂಚಿದರಾಯಿತು.’  ಇದು ರಾಘವ ಹೆಗಡೆಯವರ ನಿರ್ಧಾರ.

ಅದೆಲ್ಲಾ ಹೌದು ಜಮೀನು ಖರೀದಿಗೆ ಹಣ? ಅದಕ್ಕೂ ದಾರಿ ಕಂಡುಕೊಂಡರು ಹೆಗಡೆಯವರು. ಇರುವ ಒಂದು ಎಕರೆ ಬೇಣದಿಂದ ಯಾವುದೇ ಉತ್ಪನ್ನ ಇಲ್ಲ. ಆದರೆ ರಸ್ತೆಯ ಸಮೀಪದ ಜಾಗವಾದುದರಿಂದ ಬೇಡಿಕೆ ಇದೆ. ಗುಂಟೆಗೆ ಇಪ್ಪತ್ತು ಸಾವಿರ ಬರಬಹುದು. ಒಟ್ಟೂ ಎಂಟು ಲಕ್ಷ ಆದೀತು. ಖರೀದಿಸಲು ತಯಾರೀ ತೋಟವೇ ಬೇಕು ಅಂತ ಇಲ್ಲದೇ ಇರುವದರಿಂದ ಹಣದ ಸಮಸ್ಯೆ ಅಷ್ಟು ಬರಲಿಕ್ಕಿಲ್ಲ ಅಂದುಕೊಂಡರು ಹೆಗಡೆಯವರು. ಮತ್ತೆ ಹೊಸಜಾಗದಲ್ಲಿ ಮನೆ-ಕೊಟ್ಟಿಗೆ ಇದ್ದರೆ ಸರಿ. ಇಲ್ಲವಾದಲ್ಲಿ ಅವುಗಳನ್ನು ಕಟ್ಟಿಸಬೇಕು.

ಪರಿಚಯದವರನ್ನು ವಿಚಾರಿಸುತ್ತಿದ್ದರು ಹೆಗಡೆಯವರು. ಪರಿಚಯದವರಾದ ಕಲವೆಯ ರಾಮ ಭಟ್ಟರಲ್ಲಿಯೂ ಪ್ರಸ್ತಾಪಿಸಿದ್ದರು. ಬಡಾಳ ಸಮೀಪದ ಬಂಗಣೆಯಲ್ಲಿ ಜಾಗ ಇರುವ ಸುದ್ಧಿ ಸಿಕ್ಕಿತು. ಬಂಗಣೆಯಲ್ಲಿ ಪುತ್ತು ಮರಾಠೆ ಎನ್ನುವವನು, ಪೀ.ಎಲ್.ಡಿ. ಬ್ಯಾಂಕ್ ನಲ್ಲಿ ಭೂ ಸುಧಾರಣೆಗೆ ಅಂತ ಸಾಲತೆಗೆದು ಕೊಂಡಿದ್ದನು. ಭೂಮಿ ಸುಧಾರಣೆಗೊಳ್ಳದಿದ್ದರೂ ತೆಗೆದು ಕೊಂಡ ಸಾಲದಲ್ಲಿ ‘ಸುಧಾರಣೆ’ ಯಾಗಿತ್ತು. ಸಾಲ ತೀರಿಸಲಾರದೇ ಕಟಬಾಕಿಯಾಗಿ ಜಮೀನು ಹರಾಜಿಗೆ ಬಂದು ನಿಂತಿತ್ತು.

‘ಹರಾಜು ಮಾಡಿದಲ್ಲಿ ಸಮಾಜದಲ್ಲಿ ಅವಮಾನವಾಗುತ್ತದೆ. ಒಂದು ಲಕ್ಷ ಹೆಚ್ಚುಕಡಿಮೆ ಆದರೂ ತೊಂದರೆ ಇಲ್ಲ. ಹಣಕೊಟ್ಟ ಬಗ್ಗೆ ಎಗ್ರೀಮೆಂಟ್ ಮಾಡಿಕೊಂಡು ನೀನೇ ಸಾಲ ಮರುಪಾವತಿ ಮಾಡಿ, ಬ್ಯಾಂಕ್ ಹೆಸರನ್ನು ತೆಗೆಸಿ ಮಾರಿಬಿಡಬಹುದು’ ಅಂತ ಕಲವೆಯ ರಾಮಭಟ್ಟರು ಪುತ್ತುವಿನ ಮನವೊಲಿಸಿದ್ದರು. ಕೂಜಳ್ಳಿಯ ರಾಘವ ಹೆಗಡೆಯವರು, ರಾಮ ಭಟ್ಟರಲ್ಲಿ ಜಮೀನಿನ ಖರೀದಿಯ ಬಗ್ಗೆ ಪ್ರಸ್ತಾಪಿಸಿದ್ದು ಗೊತ್ತಷ್ಟೇ?. ಆಗ ಪುತ್ತುವಿನ ಜಮೀನಿನ ಹರಾಜು ರಾಮ ಭಟ್ಟರಿಗೆ ನೆನಪಿಗೆ ಬಂದಿತು. ರಾಮ ಭಟ್ಟರು ಆ ಭಾಗದ ಪೀ.ಎಲ್.ಡಿ.ಬ್ಯಾಂಕ್ ನ ಮೇಂಬರರು. ‘ಹರಾಜಾದಲ್ಲಿ ಯಾರು ಹೆಚ್ಚು ಬಿಡ್ ಮಾಡಬಹುದು ಎನ್ನುವ ಖಾತ್ರಿ ಇರದೇ ಇರುವದರಿಂದ, ಮೊದಲು ಸಾಲತೀರಿಸಿ ಸ್ವಂತಕ್ಕೆ   ಮಾಡಿಕೊಂಡು ಆಮೇಲೆ ಮಾರಿದರೆ ಒಳ್ಳೆಯದು’ ಎನ್ನುವ ರಾಜಕಾರಣ ತಲೆ ರಾಮ ಭಟ್ಟರದು.

ಸಾಲ, ಬಡ್ಡಿ ಹಾಗೂ ಇತರೇ ಖರ್ಚು ಸೇರಿ ನಾಲ್ಕೂವರೆ ಲಕ್ಷ ಬ್ಯಾಂಕಿಗೆ ಸಂದಾಯತ ಮಾಡುವದಿತ್ತು. ಐದು ಲಕ್ಷಕ್ಕೆ ಖರೀದಿ ಹೊಂದಿಕೆಯಾಯಿತು. ರಾಮ ಭಟ್ಟರು ತಾನು ಯಾವುದೇ ಕಮೀಶನ್ ತೆಗೆದುಕೊಳ್ಳುವದಿಲ್ಲ ಅಂತ ಹೇಳಿ ಉಳಿದ  ಪೂರ್ತಿ ಐವತ್ತು ಸಾವಿರವನ್ನು ಪುತ್ತುವಿನ ಕೈಗೇ ಕೊಡಿಸಿದ್ದರು. ರಾಘವ ಹೆಗಡೆಯವರ ಮೇಲಿನ ಪ್ರೀತಿಗಿಂತ, ‘ನಮ್ಮ ಜನ’ ಹತ್ತಿರದಲ್ಲಿರುತ್ತಾರೆ ಎನ್ನುವ ಆಸಕ್ತಿ ಅವರದು. ಪುತ್ತುವಿಗೆ ಸಮಾಧಾನವಾದಲ್ಲಿ ಮುಂದೆ ತನಗಾಗಲೀ ರಾಘವ ಹೆಗಡೆಯವರಿಗಾಗಲೀ ಕೆಲಸಕ್ಕೆ ಅನುಕೂಲವಾದೀತೆನ್ನುವ ದೂರಾಲೋಚನೆಯೂ ಇತ್ತು.

ಬಂಗಣೆ ಜಮೀನು ತಮ್ಮ ಕುಮಟಾ ತಾಲೂಕಿನಲ್ಲಿಯೇ ಬರುವದರಿಂದ ರೆಜಿಸ್ಟ್ರೇಶನ್  ತಿರುಗಾಟ ಸುಲಭವಾಯಿತು ಹೆಗಡೆಯವರಿಗೆ. ಬೇಣವನ್ನು ಮಾರುವಾಗ ಗೊತ್ತುಮಾಡಿದ್ದ ಶಾನುಭಾಗ ವಕೀಲರಿಗೇ ಕಾಗದಪತ್ರದ ಜವಾಬುದಾರಿಯನ್ನು ಹಚ್ಚಿದರು. ಹಿಂದಿನ ತಲೆಮಾರಿನಿಂದಲೇ ಶಾನುಭಾಗ ವಕೀಲರ ಕುಟುಂಬದ ಜೊತೆ ‘ವಕೀಲಿಕೆ’ ಸಂಬಂಧ ಇತ್ತು ರಾಘವ ಹೆಗಡೆಯವರಿಗೆ.  ಪುತ್ತು ಮರಾಠೆಯ ಸ್ವಂತ ಹೆಸರಿನಲ್ಲಿದ್ದ ಎರಡೂವರೆ ಎಕರೆ ಜಮೀನಿನ ಜೊತೆ ಮುಕ್ಕಾಲು ಎಕರೆ ಅತಿಕ್ರಮಣದ ಜಾಗವೂ ಇತ್ತು. ಅದು ಪುತ್ತುವಿನ ಹೆಸರಿನಲ್ಲಿರುವ ಅತಿಕ್ರಮಣವಾದರೂ ರಾಘವ ಹೆಗಡೆಯವರೇ ನೋಡಿಕೊಳ್ಳಬೇಕೆಂದೂ ಸಕ್ರಮವಾಗುವಾಗ ರಾಘವ ಹೆಗಡೆಯವರಿಗೇ ಸಲ್ಲಬೇಕೆಂದೂ ತೋಂಡೀ ಕರಾರು ಆಯಿತು.

“ಶಾನಭಾಗರೆ, ಹೇಗೂ ಎರಡೂ ಗಂಡುಮಕ್ಕಳು ನನಗೆ. ಶ್ರೀನಿವಾಸನ ಹೆಸರಿಗೆ ಈಗ ಖರೀದಿಸುವ  ಜಮೀನನ್ನು ಮಾಡಿಸಿದಲ್ಲಿ ನನ್ನ ಜವಾಬ್ದಾರಿ ಮುಗಿಯಿತು.” ತಮ್ಮ ಪ್ರಾಮಾಣಿಕ ಅನಿಸಿಕೆಗಳನ್ನು ವಕೀಲರಲ್ಲಿ ತಿಳಿಸಿದರು ಹೆಗಡೆಯವರು.

“ಮತ್ತೆ ಗಣೆಶನಿಗೆ?”  ಸಹಜವಾಗಿ ಪ್ರಶ್ನಿಸಿದರು ವಕೀಲರು.

“ಅರೆ, ನಾನಿಲ್ಲವೆ. ಕೂಜಳ್ಳಿಯಲ್ಲಿ ನಾನು ನಿಲ್ಲುತ್ತೇನೆ. ಗಣೇಶ ನನ್ನ ಜೊತೆಯಲ್ಲಿಯೇ ಇಲ್ಲಿ ಇರುತ್ತಾನೆ. ಇಲ್ಲಿಯ ಆಸ್ತಿಯನ್ನು ಅವನ ಹೆಸರಿಗೇ ಬರೆದರಾಯಿತು ಆಮೇಲೆ. ಅವನು ಹಿರಿಯವನಲ್ಲವೇ?” ತಮ್ಮ ಇಲ್ಲಿಯ ತನಕದ ಅಸ್ಪಷ್ಟ ಅಭಿಪ್ರಾಯಕ್ಕೆ ಮೂರ್ತ ರೂಪ ಕೊಟ್ಟರು ಹೆಗಡೆಯವರು.

“ಹೆಗಡೆಯವರೆ ನಾನು ಹೀಗೆ ಹೇಳುತ್ತೇನೆ ಅಂತ ತಪ್ಪು ತಿಳಿಯಬಾರದು. ಜಮೀನನ್ನು ನಿಮ್ಮ ಹೆಸರಿಗೇ ಮಾಡಿಸಿಕೊಳ್ಳುವದು ಒಳ್ಳೆಯದು.” ಶಾನಭೋಗರು ತಮ್ಮ ಅಭಿಪ್ರಾಯ ಹೇಳಿದರು.

“ಅದು ಡಬಲ್ ಕೆಲಸ ಆಗುವದಿಲ್ಲವೇ?. ಮೊದಲು ನನ್ನ ಹೆಸರಿಗೆ ಆಗಿ ಆಮೇಲೆ ಅವರ ಹೆಸರಿಗೆ ಆಗಬೇಕು. ಅವರವರ ಹೆಸರಿಗೆ ಮಾಡಿಸಿದರೆ ಸಾಲ ತೆಗೆದು ಕೊಳ್ಳಲೂ ಅನುಕೂಲವಾಗುತ್ತದೆ. ನಾನು ಆರಾಂ ಇರಬಹುದು.” ಅಂತ ಹೇಳಿದವರು “ನಿಮಗೆ ಇನ್ನೊಂದು ಕೆಲಸ ಇರಲಿ ಅಂತ ಆಸೆ ಇರಬೇಕು.” ಅಂತೂ ಹೇಳಿ “ಅಲ್ಲ ತಮಾಶೆಗೆ ಹೇಳಿದ್ದು” ಅಂತ ಆಮೇಲೆ ನಗಾಡಿದರು.

“ಅದು ಹೌದಾದರೆ ಹೌದು ಅನ್ನಿ. ನನ್ನ-ನಿಮ್ಮ ವಕೀಲಿ ಸಂಬಂಧ ಮುಂದುವರಿಸಬೇಡವೆ?” ಅಂತ ನಗುತ್ತಾ ಹೇಳಿದವರು, “ವಿಷಯಕ್ಕೆ ಬರೋಣ. ಶ್ರೀನಿವಾಸನ ಹೆಸರಿಗೆ ಮಾಡಿಸಿದಲ್ಲಿ ನಾಳೆ ಅವನು ಹೇಗೂ ಇದು ತಮ್ಮ ಸ್ವಯಾರ್ಜಿತ ಅಂತ ಹೇಳಿ, ಮೂಲ ಮನೆಯಲ್ಲೂ ಪಾಲು ಕೇಳಬಹುದು. ಮನೆಯಲ್ಲಿದ್ದವನಿಗೆ ಸುಮ್ಮನೆ ತೊಂದರೆ. ಅದಿಲ್ಲ ಅಂದರೆ ಮನೆಯಲ್ಲಿದ್ದವನೇ ನಾಳೆ, ಉಳಿದವನು ‘ಜಮೀನು ಖರೀದಿಸಿದ್ದು ಪಿತ್ರಾರ್ಜಿತ ಆಸ್ತಿ ಮಾರಿ ಬಂದ ಹಣದಿಂದ, ಅವರಿಗೆ ಪ್ರತ್ಯೇಕ ಉತ್ಪನ್ನ ಎಲ್ಲಿತ್ತು?’ ಎಂದು ಆ ಆಸ್ತಿಯಲ್ಲೂ ಪಾಲು ಕೇಳಬಹುದು. ಹಾಗಾದರೂ ತೊಂದರೆಯೆ. ಆದ್ದರಿಂದ ನಿಮ್ಮ ಹೆಸರಿಗೇ ಆಸ್ತಿ ಖರೀದಿಸಿ ಒಟ್ಟೂ ಆಸ್ತಿಯನ್ನು ಮೂರು ಪಾಲುಮಾಡಿಬಿಟ್ಟರೆ ಯಾವುದೇ ತೂಂದರೆ ಇರುವದಿಲ್ಲ. ನಿಮ್ಮ ಪಾಲನ್ನು ಬೇಕಾದರೆ ಯಾರಿಗೆ ಅಂತ ವಿಲ್ ಮಾಡಿ ಇಡಬಹುದು. ಇಲ್ಲವಾದರೆ ಮತ್ತೆ ತೊಂದರೆ ಆದೀತು.” ಶಾನಭಾಗರು ತಮ್ಮ ವಕೀಲಿ ಅನುಭವದಿಂದ ಹೇಳಿದರು.

“ಹಾಗಾದರೆ ಅದನ್ನು ಆಮೇಲೆ ವಿಚಾರಿಸೋಣ. ಮೊದಲು ಆಸ್ತಿಯ ಕ್ರಯಪತ್ರ ಮುಗಿಯಲಿ. ಹೇಗೂ ಸದ್ಯವೇ ಶ್ರೀನಿವಾಸ ಅಲ್ಲಿಗೆ ಹೋಗಿ ಕೆಲಸ ಪ್ರಾರಂಭಿಸಲಿಕ್ಕೆ ತೊಂದರೆ ಇಲ್ಲ. ತುರ್ತು ಉಳಿಯಲಿಕ್ಕೆ ಜೋಪಡಿಯಂತಹ ಮನೆ ಇದೆ. ಪಕ್ಕದಲ್ಲೇ ಗಂಟಿ ಕಟ್ಟಬಹದು. ಹೇಗೂ ಆರಂಭದಲ್ಲಿ ಇಲ್ಲಿಂದಲೇ ಸಹಾಯ ಬೇಕಾಗುತ್ತದೆ. ಆಮೇಲೆ ಮನೆಯ ಬಗ್ಗೆ ವಿಚಾರಿಸಿದರಾಯಿತು. ಬೇಣ ಮಾರಿದ ಹಣವಂತೂ ಇದೆ. ಅಲ್ಲಿ ಮನೆ ಕೊಟ್ಟಿಗೆ ಕಟ್ಟಿಸಲು ತೊಂದರೆ ಇಲ್ಲ.” ಅಂದರು ಹೆಗಡೆಯವರು.

ರಾಘವ ಹೆಗಡೆಯವರು ಜಮೀನನ್ನು ತಮ್ಮ ಹೆಸರಿಗೇ ಮಾಡಿಸಿಕೊಂಡರು. ವಕೀಲರು ಸೂಚಿಸಿದ್ದು ಹಾಗೆ. ‘ಆಮೇಲೆ ಎರಡೂ ಕಡೆಯ ಜಮೀನುಗಳನ್ನು ನೀವೂ ಸೇರಿ ಮೂರು  ಜನರಿಗೆ ಹಂಚಿ ಪಾಲು ಮಾಡಬಹುದು’ ಎನ್ನುವದು ವಕೀಲರ ಹೇಳಿಕೆಯಾಗಿತ್ತು. ‘ಆಗಲಿ ನೋಡೋಣ’ ಎಂದು ರಾಘವ ಹೆಗಡೆಯವರು ತಿಳಿಸಿದ್ದರು.

ಬಂಗಣೆಯಲ್ಲಿ ಉಳಿಯಲು ಸರಿಯಾದ ಮನೆ ಇರಲಿಲ್ಲ. ಕೊಟ್ಟಿಗೆಯಂತಹ ಕಟ್ಟಡ ಇತ್ತು. ಅಲ್ಲಿಯೇ ಮನೆಕಟ್ಟಿ ಕೊಳ್ಳಲು ನಾಲ್ಕು ಲಕ್ಷರೂಪಾಯಿಗಳನ್ನು ಕೊಟ್ಟರು ರಾಘವ ಹೆಗಡೆಯವರು. ಬಂಗಣೆ ಒಂದೂವರೆ ಎಕರೆಯಂತೆ ತೋಟ ಎಬ್ಬಿಸಲು ಸಸಿ ಹಚ್ಚಲು ಆಲೋಚಿಸಿದ್ದರು.

ಬಂಗಣೆಗೆ ಕರೆಂಟ್ ಬಂದಿರಲಿಲ್ಲ. ತೋಟಕ್ಕೆ ನೀರಿಗಾಗಿ ಬಾವಿ ಇತ್ತು. ಪಕ್ಕದಲ್ಲಿ ಅಘನಾಶಿನಿ ನದಿ ಹರಿಯುತ್ತದೆ. ಜಮೀನು ನದಿಯಿಂದ  ಮುಕ್ಕಾಲು ಕಿಲೋಮೀಟರು ದೂರದಲ್ಲಿದೆ. ನದಿ ಪಾತ್ರದಿಂದ ಜಾಗ ಎತ್ತರದಲ್ಲಿದೆ. ಆದ್ದರಿಂದ ನದಿಯ ನೀರು ತರುವದು ಕಷ್ಟ. ನದಿ ಪಾತ್ರದ ಸಮೀಪ ಇರುವ ಜಮೀನಿನವರು ಹಳ್ಳಕ್ಕೇ ಪಂಪು ಹಾಕಿ ನೀರೆತ್ತುತ್ತಾರೆ.  ಮಳೆಗಾಲದಲ್ಲಿ ದೊಡ್ಡ ಮಹಾಪೂರ ಬಂದಾಗ ನೀರು ತೋಟವನ್ನು ಹತ್ತಬಹುದು. ಹತ್ತಬಹುದು ಏನು. ಹತ್ತುತ್ತದೆ ಅಂತ ಪುತ್ತುವೇ ಹೇಳಿದ್ದಾನೆ. ಪುತ್ತುವಿನ ಜಮೀನು ಪಕ್ಕದಲ್ಲಿಯೇ ಇದೆ. ಮನೆ ಸ್ವಲ್ಪ ದೂರದಲ್ಲಿದೆ ಅಷ್ಟೇ. ಜಮೀನಿನ ಕೆಲಸಕ್ಕಿಂತ ಆಳು ಕೆಲಸಕ್ಕೆ ಹೋದರೆ ಲಾಭ ಎನ್ನುವದು ಅವನ ಲೆಕ್ಕ. ದೊಡ್ಡದಾದ ಮಹಾಪೂರ ಬಂದು ತಮ್ಮ ಮನೆಯನ್ನೂ ಒಮ್ಮೆ ಕೊಚ್ಚಿಕೊಂಡು ಹೋಗಿತ್ತೆಂದು ಪುತ್ತುವಿನ ಅಪ್ಪ ಹೇಳಿದ್ದನಂತೆ.

ವಿಲ್ಲೀಯರ್ಸ್ ಮಶೀನ್’ ತೆಗೆದು ಕೊಂಡು ನೀರಿನ ವ್ಯವಸ್ಥೆ ಮಾಡಿಕೊಂಡನು ಶ್ರೀನಿವಾಸ. ಪುತ್ತು ಮರಾಠೆ ಕೆಲವು ತೆಂಗಿನ ಗಿಡಗಳನ್ನು ಅಲ್ಲಲ್ಲಿ ಹಾಕಿದ್ದನು. ಫಲ ಬಂದಿದ್ದವು. ಜಾಗದತುದಿಯಲ್ಲಿ ಹಾಗೂ ಪಕ್ಕದಲ್ಲಿ ಮುಕ್ಕಾಲು ಎಕರೆಗೆ ಅಲ್ಲಲ್ಲಿ ಗೇರುಗಿಡಗಳನ್ನು ಹಾಕಿದ್ದನು. ಪಕ್ಕದ ಸರಕಾರೀ ಜಾಗದಲ್ಲಿ ಇದ್ದ ಗೇರು ಬೆಳೆಯನ್ನು ಪುತ್ತುವೇ ಕೊಯ್ಯುತ್ತಿದ್ದನು.  ಶ್ರೀನಿವಾಸ ಜಮೀನು ಖರೀದಿಸಿದ ಕೂಡಲೇ ಬಾಳೆ ಹಾಕಿ ಆಮೇಲೆ ಅಡಿಕೆ ಗಿಡ ಹಾಕಿದ. ಮೊದಲು ಒಂದು ಎಕರೆ ರೇಗು ಮಾಡಿದ ಶ್ರೀನಿವಾಸ.

ಕುಮಟಾ ಸಿದ್ದಾಪುರ ಮುಖ್ಯರಸ್ತೆಗೆ ಬಡಾಳ ಸಮೀಪ ಎಡಗಡೆಗೆ ತಿರುಗಿದರೆ ಅರ್ಧ ಕಿಲೋಮೀಟರಿಗೇ ಬಂಗಣೆ ಹಳ್ಳಿ ಶುರುವಾಗುತ್ತದೆ. ಮಧ್ಯದಲ್ಲಿ ಹರಿಯುವ ಈ ಭಾಗದ ಜೀವನದಿ ಅಘನಾಶಿನಿಯೇ, ಸಂಚಾರಕ್ಕೆ ಸಮಸ್ಯೆ. ಬೇಸಿಗೆಯಲ್ಲಾದರೆ ಸ್ವಲ್ಪ ಮೇಲುಭಾಗದಲ್ಲಿ ದಾಟಬಹುದು ಅಥವಾ ದೋಣಿಯ ಸಹಾಯ ಸಿಕ್ಕೇ ಸಿಗುತ್ತದೆ. ಮಳೆಗಾಲದ ನಾಲ್ಕು ತಿಂಗಳುಗಳಲ್ಲಿ ‘ಜೀವನುಂಗುವ ನದಿ’ ಅಂತ ಇಲ್ಲಿನವರು ಹೇಳುತ್ತಾರೆ. ಬೇಸಗೆಯಲ್ಲಿ ‘ನಯನ ಮನೋಹರೆಯಾದರೆ’ ಮಳೆಗಾಲದಲ್ಲಿ ‘ರೌದ್ರರೂಪಿಣಿ’.

ಯಾಕೋ ಯಮನ ನಗರಕ್ಕೆ ಹೋಗುವ ವೈತರಣಿಯ ನೆನಪಾಗುತ್ತಿತ್ತು ಶ್ರೀನಿವಾಸನಿಗೆ. ಆದರೆ ಪಕ್ಕದ ‘ಮೊರಸೆಯೂ’ ಸೇರಿ ಎಪ್ಪತ್ತೈದು ಮನೆಗಳವರು ಇಲ್ಲಿ ಶತಮಾನಗಳಿಂದ ಜೀವನ ನಡೆಸುವದಿಲ್ಲವೇ? ಸರಕಾರಿ ಶಾಲೆಯೂ ಇದೆ. ಮಕ್ಕಳು ಐದನೇ ತರಗತಿಯತನಕ ಇಲ್ಲಿ ಅಭ್ಯಾಸಮಾಡಬಹುದು. ದೊಡ್ಡ ಮಳೆಗಾಲದ ಸಮಯವನ್ನು ಹೊರತುಪಡಿಸಿ ದೋಣಿಯಮೂಲಕ ದಾಟಾಡಬಹದು. ಹೊಳೆದಾಟಿಬಿಟ್ಟರೆ ಬಡಾಳ ಸಿಗುತ್ತದೆ. ಸಮೀಪದ ಸಂತೇಗುಳಿಯಲ್ಲಿ ಹೈಸ್ಕೂಲಿನ ತನಕ ಅಭ್ಯಾಸ ಮುಂದುವರಿಸುತ್ತಾರೆ. ಸಂತೆಗುಳಿಯಲ್ಲಿ ಎಲ್ಲಾರೀತಿಯ ವ್ಯಾಪಾರೀ ವ್ಯವಹಾರಗಳು ನಡೆಯುತ್ತವೆ. ಕೃಷಿಗೆ ಸಂಬಂಧಿಸಿದ ಒಂದು ಸೊಸೈಟಿಯೂ ಇದೆ. ಕೂಜಳ್ಳಿಯಲ್ಲೇ ಇದ್ದಲ್ಲಿ ಅರೆ ಹೊಟ್ಟೆಯೇ ಗತಿಯಾಗುತ್ತಿತ್ತು” ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದನು ಶ್ರೀನಿವಾಸ.

ಹೀಗೇ ಮೂರು ವರ್ಷ ಸಾಗಿತು. ಉತ್ಪನ್ನ ಬರಲು ಪ್ರಾರಂಭವಾಗಿತ್ತು. ಕೂಜಳ್ಳಿ ಮನೆಯಿಂದಲೇ ಬಂಗಣೆಗೆ ಬೇಕಾದ ದಿನಸಿ ಹಾಗೂ ವ್ಯವಸಾಯಕ್ಕೆ ಸಂಬಂಧಿಸಿದ ವಸ್ತುಗಳು ಸರಬರಾಜಾಗುತ್ತಿದ್ದವು. ರಾಘವ ಹೆಗಡೆಯವರು ಆಗಾಗ ಮಗನ ಜಮೀನಿನ ಕಡೆಗೆ ಹೋಗಿ ಬರುತ್ತಿದ್ದರು. ಆದರೆ ಹೆಂಡತಿ ವಿಶಾಲಾಕ್ಷಿಗೆ ಹೋಗಿ ಬರಲು ಸಾಧ್ಯವಾಗಿರಲಿಲ್ಲ . ಹೋಗಿ ಏನು ಮಾಡಲಿಕ್ಕಿದೆ ಅವಳು.? ಶ್ರೀನಿವಾಸನೇ ಎರಡೆರಡು ತಿಂಗಳಿಗೆ ಮನೆಗೆ ಹೋಗಿ ಬರುತ್ತಿದ್ದನು.

ಗಣೇಶನಿಗೆ ಕಡತೋಕಾದ ನಾಗವೇಣಿಯ ಜೊತೆ ಮದುವೆಯಾಯಿತು. ಮನೆಯಲ್ಲಿ ಸೊಸೆ ನಾಗವೇಣಿ ಕೆಲಸಕ್ಕೆ ಬಂದುದರಿಂದ ವಿಶಾಲಾಕ್ಷಿ ಎರಡು ಮೂರು ತಿಂಗಳು ಬಂಗಣೆಗೆ ಹೋಗಿ ಉಳಿದು ಬರುತ್ತಿದ್ದಳು. ಮನೆಯಲ್ಲಿ ಕೆಲಸ ಹೇಗೋ ನಡೆಯುತ್ತಿತ್ತು. ಹೇಗೂ ಸೊಸೆ ನಾಗವೇಣಿ ಕೆಲಸಕ್ಕೆ ಇದ್ದಾಳಲ್ಲ?.

ಈಗ ಶ್ರೀನಿವಾಸ  ತನ್ನ ಕಾಲಮೇಲೆ ನಿಲ್ಲುವಷ್ಟು ಗಟ್ಟಿಯಾಗಿದ್ದನು. ಬಾಳೆ ಹಾಗೂ ಸ್ವಲ್ಪ ಗದ್ದೆಯ ಫಸಲಿನ ಫಲ ಕೈಗೆ ಸಿಗುತ್ತಿದ್ದವು. ಕಲವೆ ರಾಮಭಟ್ಟರು  ಮೂರು ವರ್ಷಕ್ಕೆ ಫಲಕೊಡುವ ನಾಲ್ಕು ತೆಂಗಿನ ಗಿಡಗಳನ್ನು ಕೊಟ್ಟಿದ್ದರು. ಅದರಲ್ಲಿ ಎರಡು ಗಿಡಗಳು ಫಲಕೊಡಲು ಪ್ರಾರಂಭಿಸಿದ್ದವು. ಒಂದೊಂದು ಅಡಿಕೆ ಗಿಡಗಳೂ ಕೊನೆ ಬಿಡಲು ತೊಡಗಿದ್ದವು.

ಈ ಮಧ್ಯೆ ಕಲ್ಲು ಹಾಗೂ ಹಂಚುಗಳನ್ನು ಹಾಕಿ ಒಂದು ಮನೆಯನ್ನು ಕಟ್ಟಿಕೊಂಡನು ಶ್ರೀನಿವಾಸ. ಬಂಗಣೆಯಲ್ಲಿ ಕೆಲಸಗಾರರಿಗೆ ತೊಂದರೆಯೆನಿಸಲಿಲ್ಲ. ಮನೆಯಲ್ಲಿ ಸದಾ ಒಬ್ಬ ಗಂಡಾಳು ಕೆಲಸಕ್ಕೆ ಇರುತ್ತಿದ್ದ. ಪಕ್ಕದ ಊರು ಮೊರಸೆಯಲ್ಲಿ ಊರಕೇರಿಯವರೊಬ್ಬರು ಬಂದು ಜಮೀನು ಮಾಡಿ ಬಹಳ ವರ್ಷವಾಗಿತ್ತು. ಬಂಗಣೆಯಲ್ಲಿಯೇ ಎರಡು ಕಿಲೋಮೀಟರ್ ಒಳಗಡೆ ದೀವಳ್ಳಿಯವರು ಒಬ್ಬರು ಜಮೀನು ಮಾಡಿದ್ದರು. ಅವರ ಮಗ ಮುಂಬಯಿಗೆ ಹೋದಮೇಲೆ ಆ ಜಮೀನನ್ನು ಒಬ್ಬ ಮರಾಠೆಗೆ ಪಾಲಿಗೆ ಕೊಟ್ಟು ದೀವಳ್ಳಿಯಲ್ಲಿಯೇ ನೆಲೆಸಿದ್ದರು. ದೀವಳ್ಳಿ ಬಡಾಳದಿಂದ ಹದಿನೈದು ಕಿಲೋಮೀಟರಿನ ದೂರ ಅಷ್ಟೇ.

ಶ್ರೀನಿವಾಸನಿಗೆ ಹೆಣ್ಣು ಹುಡುಕಲು ಪ್ರಾರಂಭಿಸಿದರು ರಾಘವ ಹೆಗಡೆಯವರು. ಕಳೆದೊಂದು ವರ್ಷದಿಂದ ವಿಶಾಲಾಕ್ಷಿ ಕೂಜಳ್ಳಿಯಲ್ಲಿ ಇರುವುದೇ ಕಡಿಮೆಯಾಗಿತ್ತು. ಅವಳಿಗೆ ಮಗ ಅನಭವಿಸುತ್ತಿರುವ ಕಷ್ಟದ ಅರಿವಾಗಿತ್ತು. ಸಾಧ್ಯವಾದರೆ ಇದೇ ವರ್ಷ ಮದುವೆ ಮಾಡಿದರಾಯಿತು ಎಂದು ಗಂಡನಲ್ಲಿ ಹೇಳಿದ್ದಳು ಕೂಡ.

‘ತಾನು ಬಂದ ಕೂಡಲೇ ಮನೆಯ ಎಲ್ಲಾ ಜವಾಬ್ದಾರಿಯನ್ನೂ ತನ್ನ ಮೇಲೆ ದಾಟಿಸಿ ಇನ್ನೊಂದು ಮಗನ ಮನೆಗೆ ಹೊರಟು ಬಿಟ್ಟಿದ್ದಾಳೆ ಅತ್ತೆ. ಜನ ಎಲ್ಲಾ ನಾನು ಜಗಳಗಂಟಿಯಾದುದರಿಂದ ಅತ್ತೆ ಮನೆ ಬಿಟ್ಟು ಹೊರಟು ಬಿಟ್ಟಿದ್ದಾಳೆ’ ಅಂತ ಊರಲ್ಲಿ ಗುಸುಗುಸು ಹೇಳುತ್ತಿದ್ದಾರೆ ಅಂತ ನಾಗವೇಣಿ ಗಂಡನಲ್ಲಿ ಅಲವತ್ತು ಕೊಂಡಿದ್ದಳು.

“ಹಾಗೇನಿಲ್ಲ. ಇಲ್ಲಿ ಇಷ್ಟೆಲ್ಲಾ ಅನುಕೂಲತೆಗಳಿವೆ. ಕೊಟ್ಟಿಗೆ ಕೆಲಸಕ್ಕಂತೂ ಗಂಗೆ ದಿನಾಲೂ ಬರುತ್ತಿದ್ದಾಳೆ.  ಅಲ್ಲಿ ಪಾಪ ಶ್ರೀನಿವಾಸ ನಾಲ್ಕು ವರ್ಷಗಳಿಂದ ಕೈಸುಟ್ಟುಕೊಳ್ಳುತ್ತಿದ್ದಾನೆ. ಆದ್ದರಿಂದ ಅಮ್ಮ ಅಲ್ಲಿ ಉಳಿದಿದ್ದಾಳೆ. ಜನ ಹೇಳುತ್ತಾರೆ ಅಂತ ನೀನು ತಲೆ ಬಿಸಿ ಮಾಡಿಕೊಳ್ಳಬೇಡ. ಅವಳು ಹೋಗದಿದ್ದರೂ ಕೂಡ “ನೋಡು ಈ ಸೊಸೆಯನ್ನು, ಅತ್ತೆ, ಪಾಪ ಮನೆ ಮನೆ ಅಂತ ನಾಲ್ಕು ವರ್ಷಗಳಿಂದ ಬಂಗಣೆಗೆ ಹೋಗಿರಲಿಲ್ಲ. ಈಗ ಈ ಸೊಸೆ ಬಂದಮೇಲಾದರೂ ಸ್ವಲ್ಪದಿನದ ಮಟ್ಟಿಗೆ ಕಳಿಸಬೇಕಿತ್ತಲ್ಲ. ಪಾಪ ಶ್ರೀನಿವಾಸ, ಇಷ್ಟು ದಿನ ಯಾರೂ ಇರಲಿಲ್ಲ. ಸೊಸೆ ಮನೆಗೆ ಬಂದ ಮೇಲೂ ಯಾರೂ ಇಲ್ಲದ ಅನಾಥನ ಹಾಗಿರುವನೆಂದು” ಹೇಳುವದಿಲ್ಲವೇ ಅಂತ ಸಮಾಧಾನ ಮಾಡಿದನು. ಸಮಾಧಾನ ಬೇರೆಯವರು ಮಾಡುವದಲ್ಲ. ತಾವೇ ಆಗಬೇಕಾದುದು. ಇಡೀ ಮನೆಕೆಲಸ ತನ್ನ ಮೇಲೆ ಬಿಟ್ಟು ಹೋಗಿದ್ದಾಳೆ ಅತ್ತೆ ಎನ್ನುವ ಸಿಟ್ಟು ಕಡಿಮೆಯಾದೀತೇ? “ಪಾಪ ಒಬ್ಬನೇ ಇದ್ದಾನೆ ಬಾವ. ಅಲ್ಲಿ ಕೆಲಸವೂ ಹೆಚ್ಚು. ಮಾವನೂ ಹೋಗಿದ್ದರೆ ಅನುಕೂಲವಾಗುತ್ತಿತ್ತು ಅವನಿಗೆ.” ಅಂತ ಹೇಳಿದ್ದು ಹಂಗಿಸಲಿಕ್ಕಾಗಿ ಅಂತ ಗಣೇಶನಿಗೆ ಬೇರೆ ಹೇಳಬೇಕಾಗಿರಲಿಲ್ಲ.

ಗಣೇಶನಿಗೆ ಮದುವೆ ಮಾಡಿದಷ್ಟು ಸುಲಭವಾಗಿ ಶ್ರೀನಿವಾಸನಿಗೆ ಹೆಣ್ಣು ಸಿಗುವದಿಲ್ಲ ಅಂತ ಹೆಗಡೆಯವರಿಗೆ ಅನಿಸಹತ್ತಿತು. ಶ್ರೀನಿವಾಸ ಬಂಗಣೆ ಎನ್ನುವ ‘ಅಂದಮಾನಿನಲ್ಲಿ’ ಇರುವುದೂ ಒಂದು ಕಾರಣ. ಹೆಣ್ಣುಮಕ್ಕಳಿಗೆ ಶಿಕ್ಷಣ ದೊರಕುತ್ತಿರುವ ಕಾರಣ ಈಗಿತ್ತಲಾಗಿ ಹೆಣ್ಣುಮಕ್ಕಳು ‘ಮನೆಯಲ್ಲಿಯೇ ಇರುವ’ ಗಂಡುಮಕ್ಕಳನ್ನು ಮದುವೆಯಾಗಲು ಮುಂದೆ ಬರುತ್ತಿಲ್ಲ ಎನ್ನುವದೂ ಇನ್ನೊಂದು  ಕಾರಣ. ಶ್ರೀನಿವಾಸನಂತೂ ದ್ವೀಪದಂತಹ ಬಂಗಣೆಯಲ್ಲಿರುವವ. ಯಾರು ತಾನೇ ಮದುವೆಯಾಗಲು ಮುಂದೆ ಬಂದಾರು?

ಅಲ್ಲಲ್ಲಿ ‘ಘಾಟೀ’ ಹೆಣ್ಣುಮಕ್ಕಳನ್ನು ತಂದು ಮದುವೆ ಮಾಡಿಕೊಳ್ಳುತ್ತಿದ್ದರು. ಈ ರೀತಿಯ ಮದುವೆಮಾಡಿಸಲು ‘ಮಧ್ಯವರ್ತಿಗಳೂ’ ಸಹ ಸಿದ್ಧರಾಗಿದ್ದರು. ರಾಘವ ಹೆಗಡೆಯವರಿಗೆ, ಶ್ರೀನಿವಾಸನಿಗೆ ಈ ರೀತಿ ಹಾವೇರಿಯ ಕಡೆಯ ಹೆಣ್ಣನ್ನು ತಂದರೆ ಹೇಗೆ? ಅನಿಸುತ್ತಿತ್ತು. ‘ಮದುವೆ ಮಾಡುವದು ತಮ್ಮ ಜವಾಬ್ದಾರಿ. ಕಲಿತು ಪೇಟೆಯಲ್ಲಿರುವವರು ಬೇರೆ ಜಾತಿಯ ಹೆಣ್ಣುಗಳನ್ನು ಮದುವೆಯಾಗುವದಿಲ್ಲವೇ? ಈ ರೀತಿಯ ಮದುವೆಯನ್ನು ಈಗ ಹಳ್ಳಿಯ ಜನ ಒಪ್ಪಲಿಕ್ಕಿಲ್ಲ. ಆದರೆ ಕ್ರಮೇಣ ಎಲ್ಲರೂ ಒಪ್ಪಬೇಕಾಗುತ್ತದೆ. ಹೊಸ ಸಮಾಜ ನಿರ್ಮಾಣವಾಗುವದೇ ಹೀಗೆ. ಮುಂಚೆ ಸಗೋತ್ರ ವಿವಾಹವೂ ಇರಲಿಲ್ಲ. ಈಗ ಸಗೋತ್ರವಿವಾಹವೋ ಅಥವಾ ಬ್ರಾಹ್ಮಣರ ಉಪಪಂಗಡಗಳ ಮಧ್ಯದಲ್ಲಿಯ ವಿವಾಹವೋ ಸಾಮಾನ್ಯವಾಗಿದೆ. ಏನಿದ್ದರೂ ಒಮ್ಮೆ ಕಲವೆ ರಾಮ ಭಟ್ಟರಲ್ಲಿ ಕೇಳಿ ಆಮೇಲೆ ಶ್ರೀನಿವಾಸನನ್ನೂ ಮಾತಾಡಿಸಬೇಕು’ ಅಂದು ಕೊಂಡರು.

ರಾಮಭಟ್ಟರೂ ಶ್ರೀನಿವಾಸನ ಸಲುವಾಗಿ ಹೆಣ್ಣುನೋಡುತ್ತಲೇ ಇದ್ದರು. ಶ್ರೀನಿವಾಸ ಜಮೀನು ಸಾಗುವಳಿ ಪ್ರಾರಂಭಿಸಿ ಆರು ವರ್ಷವಾಗಿತ್ತು. ಇವನ ಪರಿಶ್ರಮ ಹಾಗೂ ಕೆಲಸದಲ್ಲಿಯ ಆಸಕ್ತಿಯನ್ನು ಕಂಡು ಅಕ್ಕಪಕ್ಕದವರಿಗೆ ಆಶ್ಚರ್ಯವಾಗುತ್ತಿತ್ತು. ರಾಮಭಟ್ಟರಿಗೂ ಶ್ರೀನಿವಾಸನ ಯಶಸ್ಸು ಕಂಡು ಸಂತೋಷವಾಗಿತ್ತು. ಈಗ ಶ್ರೀನಿವಾಸ ಸುತ್ತಮುತ್ತ ಒಂದು ಕುಳವಾಗಿ ಗುರ್ತಿಸಿಕೊಂಡಿದ್ದ. ಒಂದೆಕರೆ ಒತ್ತುವರಿಯೂ ಸೇರಿ ಮೂರೂವರೆ ಎಕರೆ ಸಾಗುವಳಿಯಾಗುತ್ತಿತ್ತು. ಒಂದು ಎಕರೆ ತೋಟದಲ್ಲಿ ಅಡಿಕೆ ಫಲಕೊಡಲು ಪ್ರಾರಂಭವಾಗಿತ್ತು. ಪ್ರತಿವಾರ  ಸೈಕಲ್ಲಿನಲ್ಲಿ ಬಾಳೆಗೊನೆ ಹೇರಿಕೊಂಡು ಸಂತೆಗುಳಿಯತನಕ ಹೋಗಿ ಮಾರಿ ಬರುತ್ತಿದ್ದ ಶ್ರೀನಿವಾಸ.

ಪದೇ ಪದೇ  ಸಂತೇಗುಳಿಯ ಸಂಪರ್ಕದಿಂದ ಅಲ್ಲಿಯ ಅಂಗಡಿಗಳವರ ಒಳ ಹೊರ ಗೊತ್ತಾಯಿತು ಶ್ರೀನಿವಾಸನಿಗೆ. ಸಣ್ಣ ಪ್ರಮಾಣದಲ್ಲಿ ವ್ಯಾಪಾರ ಆರಂಭಿಸಲು ಸಾಧ್ಯವಾಯಿತು.  ಈ ವರ್ಷ ಎರಡೂವರೆ ಕ್ವಿಂಟಲ್ ಅಡಿಕೆ ಬರುವ ನಿರೀಕ್ಷೆ ಇತ್ತು. ಪುತ್ತು ಮರಾಠೆ ಹಾಕಿದ್ದ ಹದಿನೈದು ತೆಂಗಿನ ಮರಗಳಿಂದಲೇ ಒಂದೂವರೆ ಸಾವಿರಕಾಯಿ ಉದುರುತ್ತಿತ್ತು. ಮೂರುವರ್ಷಕ್ಕೆ ಫಲ ಕೊಡುವ ತೆಂಗಿನ ಗಿಡಗಳಲ್ಲಿ ಒಂದು ಗಿಡ ಸತ್ತುಹೋಗಿತ್ತು.  ಇನ್ನು ಮೂರು ವರ್ಷದಲ್ಲಿ ಆರು ಕ್ವಿಂಟಲ್ ಅಡಿಕೆಯನ್ನು ಸುಲಭವಾಗಿ ಪಡೆಯಬಹುದು. ಪೂರ್ತಿ ಫಸಲು ಬರಲು ಇನ್ನೂ ಆರು ವರ್ಷ ಕಾಯಬೇಕು. ತೋಟದ ಕೆಲಸಕ್ಕೆ ಪುತ್ತು ಮರಾಠೆ ಪೂರ್ತಿ ಸಹಕರಿಸುತ್ತಿದ್ದ.

ಇಷ್ಟು ಅನುಕೂಲವಿದ್ದಲ್ಲಿ ಮದುವೆಗೆ ಏನು ತೊಂದರೆ? ರಾಮ ಭಟ್ಟರು ನಾಲ್ಕು ಕಡೆ ಓಡಾಡಿದವರು. ಸ್ವಲ್ಪ ದೂರದ ಹಳ್ಳಿಗಳಿಂದ ಹುಡುಗಿ ತರುವದು ಕಷ್ಟ ಅಲ್ಲ ಅಂತ ಗೊತ್ತಾಯಿತು. ಆದರೆ “ಈಗಿರುವ ಜಮೀನು ಶ್ರೀನಿವಾಸನ ಹೆಸರಿಗೆ ಇಲ್ಲವಂತಲ್ಲ?” ಅಂತ ಕೆಲವರು ವಿಚಾರಿಸಿದ್ದರು, ಹೆಣ್ಣು ಹೆತ್ತವರು. ಆ ವಿಚಾರವನ್ನು ರಾಘವ ಹೆಗಡೆಯವರಲ್ಲಿ ನೇರವಾಗಿಯೇ ಹೇಳಿದ್ದರು ರಾಮ ಭಟ್ಟರು.

ಈಗ ರಾಘವ ಹೆಗಡೆಯವರು ಸಂದಿಗ್ದಕ್ಕೆ ಸಿಲುಕಿದರು. ಬಂಗಣೆಯ ಜಮೀನನ್ನು ತಮ್ಮ ಹೆಸರಿಗೇ ಮಾಡಿಸಿಕೊಂಡ ಮೇಲೆ ಬೇರೆಮಾಡುವ ವಿಚಾರವನ್ನು ಬಿಟ್ಟಿದ್ದರು. “ಕೂಜಳ್ಳಿಯಲ್ಲಿ ಗಣೇಶನೂ, ಬಂಗಣೆಯಲ್ಲಿ ಶ್ರೀನಿವಾಸನೂ ಇರುವದು ಹೇಗೂ ಇದ್ದಿದ್ದೇ. ತಾವಿರುವವರೆಗೆ ಹೀಗೇ ಇರಲಿ. ನನ್ನ ನಂತರ ಅವರು ಹೇಗೂ ಪಾಲಾಗಬೇಕು. ಬೇರೆ ಮಕ್ಕಳಿಲ್ಲದೇ ಇದ್ದುದರಿಂದ ಏನೂ ತೊಂದರೆ ಇಲ್ಲ ಎನ್ನುವ ಧೈರ್ಯದಲ್ಲಿಯೇ ಇದ್ದರು. ಆದರೆ ಕಲವೆ ರಾಮಭಟ್ಟರ ಹೇಳಿಕೆ, ವಿಚಾರಮಾಡುವ ಹಾಗಾಯಿತು.

“ಬಂಗಣೆಯ ಜಮೀನನ್ನು ಶ್ರೀನಿವಾಸನಿಗಾಗಿಯೇ ಖರೀದಿಸಿದ್ದು. ಅವನು ನಾಲ್ಕೈದು ವರುಷಗಳಿಂದ ಅಲ್ಲಿಯೇ ಉಳಿದು ಜಮೀನಿನ ರೇಗು ಮಾಡಿದ್ದಾನೆ. ವ್ಯಾಪಾರದಲ್ಲಿಯೂ ತೊಡಗಿಸಿಕೊಂಡಿದ್ದಾನೆ. ಇನ್ನು ನಾಲ್ಕು ವರ್ಷಗಳಲ್ಲಿ ಹದಿಮೂರು ಹದಿನಾಲ್ಕು ಕ್ವಿಂಟಲ್ ಅಡಿಕೆ ಕೆಡವಲು ತೊಂದಲೆ ಇಲ್ಲ. ಎರಡು ಎಕರೆಯ ಮೇಲೆ ಅಡಿಕೆ ತೋಟವಾಗುತ್ತದೆ. ಕೂಜಳ್ಳಿಯಲ್ಲಾದರೆ ಮುಕ್ಕಾಲು ಎಕರೆ ತೋಟ ಅಷ್ಟೇ. ಹತ್ತು ಕ್ವಿಂಟಲ್ ಅಡಿಕೆ. ಬೇಣವನ್ನು ಮಾರಿದ್ದರೂ ಇಪ್ಪತ್ತೆರಡು ಗುಂಟೆ ಗದ್ದೆ ಇದೆ. ಹೈವೇ ಹತ್ತಿರ ಇರುವ ಅನುಕೂಲ ಕಡಿಮೆ ಅಲ್ಲ. ಆದರೂ ಸೊಸೆ ನಾಗವೇಣಿ, ತಮಗೆ ಅನ್ಯಾಯವಾಗಿದೆ ಅಂತ ಸೂಕ್ಷ್ಮವಾಗಿ ಹಂಗಿಸುತ್ತಲೆ ಇರುವದನ್ನು ನಾನು ಕೇಳಿದ್ದೇನೆ. ಇನ್ನು ಮೂರು ಪಾಲಾಗಿ ನಾನು ಕೂಜಳ್ಳಿಯಲ್ಲಿ ಪಾಲು ತೆಗೆದುಕೊಂಡರೆ ಗಣೇಶನಿಗೆ ಅರ್ಧ ಎಕರೆ ತೋಟವೂ ಬರುವದಿಲ್ಲ. ಬಂಗಣೆಯಲ್ಲಿ ತೆಗೆದುಕೊಳ್ಳೋಣವೋ, ಶ್ರೀನಿವಾಸನಿಗೆ ಅನ್ಯಾಯ ಮಾಡಿದ ಹಾಗಾಗುತ್ತದೆ. ಆದ್ದರಿಂದ ಶಾನಭಾಗ ವಕೀಲರನ್ನೇ ಕೇಳೋಣ” ಎನ್ನುವ ನಿರ್ಣಯಕ್ಕೆ ಬಂದರು.

ಮಾರನೆಯ ದಿನವೇ  ಕುಮಟಾಕ್ಕೆ ಹೋಗಿ ಶಾನಭಾಗ ವಕೀಲರನ್ನು ಭೇಟಿಯಾದರು ಹೆಗಡೆಯವರು. ವಿಷಯ ಪ್ರಸ್ತಾಪಕ್ಕೆ ಬಂದಿತು. “ಪಿತ್ರಾರ್ಜಿತವಿರಲಿ, ಸ್ವಾರ್ಜಿತವಿರಲಿ, ಇಬ್ಬರೇ ಮಕ್ಕಳು ನಿಮಗೆ. ನಿಮ್ಮ ನಂತರ ಇಬ್ಬರಿಗೂ ಸಮಪಾಲೇ ಸರಿ. ಆದರೂ ನೀವಿರುವವರೆಗೆ ನಿಮಗೂ ಒಂದು ಪಾಲಿರಲಿ. ಇಲ್ಲವಾದಲ್ಲಿ ಮಕ್ಕಳು ನಿಮ್ಮನ್ನು ಅಲಕ್ಷಿಸುವ ಸಂಭವವಿರುತ್ತದೆ. ನಿಮ್ಮ ಹೆಂಡತಿ ವಿಶಾಲಾಕ್ಷಿಯವರಿಗೂ ಸಮಾಧಾನವಾಗುತ್ತದೆ.” ವಕೀಲರು ಹೇಳಿದರು.

“ಇಲ್ಲ. ನನಗೆ ಪಾಲು ಬೇಡ. ಇಬ್ಬರು ಮಕ್ಕಳೂ ಒಳ್ಳೆಯವರೇ. ನಾಗವೇಣಿ ಒಳ್ಳೆಯ ಹುಡುಗಿ. ಆದರೆ ಸಣ್ಣವಳು. ಆದ್ದರಿಂದ ಸ್ವಲ್ಪ ದುಡುಕು ಅಷ್ಟೇ. ಈಗ ಬೇಕಾದುದು ಶ್ರೀನಿವಾಸನಿಗೆ ಮದುವೆ ಮಾಡುವ ಸಲುವಾಗಿ ಅವನ ಹೆಸರಿಗೆ ಜಮೀನು ಆಗಬೇಕಾದುದು. ಅದೂ ನನ್ನ ಕರ್ತವ್ಯದಲ್ಲಿಯೇ ಬರುತ್ತದೆ. ಇಬ್ಬರಲ್ಲಿ ಯಾರೂ ನಮ್ಮನ್ನು ತಿರಸ್ಕರಿಸಲಿಕ್ಕಿಲ್ಲ. ಉಳಿದದ್ದು ದೈವೇಚ್ಛೆ” ಎಂದರು ಹೆಗಡೆಯವರು.

“ಆಯಿತು. ಹಾಗೇ ಆಗಲಿ” ಅಂದರು ವಕೀಲರು.

ಅಂತೂ ಕೂಜಳ್ಳಿಯ ಜಮೀನು ಗಣೇಶನಿಗೆ ಹಾಗೂ ಬಂಗಣೆಯ ಜಮೀನು ಶ್ರೀನಿವಾಸನಿಗೆ ಅಂತ ಪಾಲಾಗಿ ದಸ್ತುವೇಜಾಯಿತು. ಹೆಗಡೆಯವರು ತಮ್ಮ ಹೆಸರಿಗೆ ಪಾಲು ತೆಗೆದುಕೊಳ್ಳಲಿಲ್ಲ. “ತಾವು ಎಲ್ಲಿಯ ಪಾಲು ತೆಗೆದು ಕೊಂಡರೂ ಇನ್ನೊಬ್ಬನಿಂದ ದೂರವಾಗುತ್ತೇನೆ. ಇಲ್ಲವಾದಲ್ಲಿ ನಮ್ಮ ಅನುಕೂಲದಂತೆ ಇಬ್ಬರಲ್ಲಿಯೂ ಇರಬಹುದು” ಎನ್ನುವ ಅಭಿಪ್ರಾಯವನ್ನು ವಕೀಲರೂ ಒಪ್ಪಿದರು. “ಆದರೆ ತಮ್ಮ ಖಾತೆಯಲ್ಲಿದ್ದ ಮೂರು ಲಕ್ಷ ರೂಪಾಯಿಗಳನ್ನು ಅವರೇ ಇಟ್ಟು ಕೊಳ್ಳಬೇಕೆಂದೂ, ಇಲ್ಲಿಯ ತನಕ ಇರುವ  ಕೂಜಳ್ಳಿಯ ಯಜಮಾನಿಕೆಯನ್ನು ಗಣೇಶನಿಗೆ ವಹಿಸಬೇಕೆಂದೂ” ಹೇಳಿದ ವಕೀಲರ ಮಾತನ್ನು ಎಲ್ಲರೂ ಒಪ್ಪಿದರು. ಈ ಮಾತನ್ನು ದಸ್ತುವೇಜಿನಲ್ಲಿ ಕಾಣಿಸಲಿಲ್ಲ. ರಾಮ ಭಟ್ಟರು “ನೀವೆಲ್ಲರೂ ತಿಳಿದವರಿದ್ದೀರಿ. ಆದ್ದರಿಂದ ಪಾಲು ಮಾಡುವ ಮಾತುಕತೆಗೆ ತಾನು ಬರುವದಿಲ್ಲ.” ಅಂತ ಹೇಳಿದರು.

ಕಲವೆಯ ರಾಮಭಟ್ಟರ ಅಕ್ಕನನ್ನು ದೊಡ್ಮನೆಯ ನಾಗಪ್ಪ ಹೆಗಡೆಯವರಿಗೆ ಕೊಟ್ಟು ಮದುವೆ ಮಾಡಿದ್ದರು. ದೊಡ್ಮನೆ ಸಿದ್ದಾಪುರ ತಾಲೂಕಾದರೂ ಬಡಾಳದಿಂದ “ದೊಡ್ಮನೆ ಘಟ್ಟ” ಎಂಟು ಕಿಲೋಮೀಟರ್ ಹತ್ತಿದರೆ ಊರು ಬರುತ್ತದೆ.  ಅವರಿಗೆ ಒಬ್ಬ ಗಂಡು ಎರಡು ಹೆಣ್ಣುಮಕ್ಕಳು. ಕಿರಿಯವಳು ಮಂಗಳೆಗೆ ಮದುವೆಯಾಗಿರಲಿಲ್ಲ. ವಯಸ್ಸು ಇಪ್ಪತ್ತನಾಲ್ಕರಲ್ಲಿತ್ತು.  ಹಿರಿಯಳನ್ನು ಸಿದ್ದಾಪುರ ತಾಲೂಕಿನ ಹೇರೂರಿನ ಆನಂದನಿಗೆ ಕೊಟ್ಟು ಮದುವೆ ಮಾಡಿದ್ದರು. ಓದುವದರಲ್ಲಿ ಇಬ್ಬರೂ ಅಷ್ಟಕ್ಕಷ್ಟೇ. ಊರಲ್ಲೇ ಹೈಸ್ಕೂಲು ಇರುವದರಿಂದ ‘ಹೈಸ್ಕೂಲು ಮೆಟ್ಟಿಲೇರಿದ್ದರು’ ಅಷ್ಟೇ.

ಮಂಗಳೆಯನ್ನು ಮನಸ್ಸಿನಲ್ಲಿಟ್ಟುಕೊಂಡೇ ರಾಘವ ಹೆಗಡೆಯವರಲ್ಲಿ ಪಾಲಿನ ವಿಷಯ ಪ್ರಸ್ತಾಪಿಸಿದ್ದು ರಾಮ ಭಟ್ಟರು. “ನಾಳಿನ ವಿಷಯ ಈಗ ಹೇಳುವ ಹಾಗಿಲ್ಲ. ಬಂಗಣೆಗೆ ಸೇತುವೆಯ ಪ್ರಯತ್ನ ನಡೆಯುತ್ತಲೇ ಇದೆ. ತೂಗು ಸೇತುವೆಯಂತೂ ಆಗಿಯೇ ಆಗುತ್ತದೆ. ಮೊರಸೆಯ ಮೇಲೆ ನೀಲಕುಂದ ಘಾಟಿನ ಮೂಲಕ ಸಿರ್ಸಿಗೆ ಹೆದ್ದಾರಿಯ ಪ್ರಸ್ತಾಪವೂ ಇದೆ. ಹಾಗಾದಲ್ಲಿ ಶ್ರೀನಿವಾಸನ ಜಮೀನಿಗೆ ಮೌಲ್ಯ ತಂತಾನೇ ಬರುತ್ತದೆ. ಗಣೇಶನ ಮನಸ್ಸು ಆಮೇಲೆ ತಿರುಗಿದರೂ ತಿರುಗೀತು. ಸುಮ್ಮನೆ ಕಿರಿಕಿರಿ.” ಸ್ಥಳೀಯ ಸಮಸ್ಯೆಗಳು ಹಾಗೂ ಪರಿಹಾರದ ಮಾರ್ಗಗಳ ಅರಿವಿದ್ದ ರಾಮ ಭಟ್ಟರ ತರ್ಕ ಇದು.

“ನೋಡು ಶ್ರೀನಿವಾಸ ನನಗೆ ನೀನು ಬೇರೆಯಲ್ಲ ನನ್ನ ಮಗ ವಿನಾಯಕ ಬೇರೆಯಲ್ಲ. ನೀನು ಈ ಮಟ್ಟಿಗೆ ಬೆಳೆದಿದ್ದು ನನಗೆ ತುಂಬಾ ಖುಷಿಯಾಗಿದೆ. ನೀನು ಇನ್ನೂ ಬೆಳೆಯ ಬೇಕು. ನಿನ್ನಪ್ಪ, ನಿನಗೆ ಹುಡುಗಿಯನ್ನು ಹುಡುಕಿಕೊಡು ಅಂತ ದುಂಬಾಲು ಬಿದ್ದಿದ್ದಾನೆ. ಬಂಗಣೆ ಊರಿನ ಹೆಸರನ್ನು ಕೇಳಿಯೇ ಜನ ದೂರ ಸರಿಯುತ್ತಾರೆ. ಆದರೂ ನನ್ನ ಅಕ್ಕನ ಮಗಳು ದೊಡ್ಮನೆಯ ಮಂಗಳಾಳನ್ನು ನೀನು ನೋಡಿರಬಹುದು. ಒಳ್ಳೆಯ ಹುಡುಗಿ. ನಿನಗಾಗಿ ಅವಳನ್ನು ಒಪ್ಪಿಸುವ ಜವಾಬ್ದಾರಿ ನನ್ನದು. ನಿನ್ನ ಒಪ್ಪಿಗೆಯೇ ಮಹತ್ವದ್ದು.” ಇವನಲ್ಲೇ ಒಪ್ಪಿಗೆ ಪಡೆಯುವದು ಸುಲಭ ಅಂತ ರಾಮ ಭಟ್ಟರಿಗೆ ಗೊತ್ತು.

“ನೀವೇನು ನಮಗೆ ಆಗದವರೇ? ನಾನು ಈ ಮಟ್ಟಿಗೆ ನಿಲ್ಲಲು ನೀವೇ ಕಾರಣ.”

ಈ ಮಾತೇ ಸಾಕಾಯಿತು ರಾಮ ಭಟ್ಟರಿಗೆ. ರಾಘವ ಹೆಗಡೆಯವರಲ್ಲಿ “ನಿಮ್ಮ ಮಗನಿಗೆ ನನ್ನ ಅಕ್ಕನ ಮಗಳು ಇಷ್ಟವಾಗಿದ್ದಾಳೆ ಅನಿಸುತ್ತದೆ. ನಮ್ಮ ಮನೆಗೆ ಅವಳು ಬಂದಾಗ ಎರಡು ಸಲ ಹೀಗೇ ನೋಡಲು ಬಂದು ಹೋಗಿದ್ದಾನೆ.  ಅವಳದು ಮೂಲಾ ನಕ್ಷತ್ರವಾದುದರಿಂದ ನಾನಾಗಿ ನಿಮ್ಮಲ್ಲಿ ಪ್ರಸ್ತಾಪಿಸಿರಲಿಲ್ಲ. ಆದರೆ ಪ್ರತಿಯೊಂದು ನಕ್ಷತ್ರ ದೋಷಕ್ಕೂ ಪರಿಹಾರವಿದ್ದೇ ಇದೆ. ಜ್ಯೋತಿಷ್ಯದಲ್ಲಿ ಪ್ರಾಯಶ್ಚಿತ್ತ-ಪರಿಹಾರ ಎನ್ನುವ ಕರ್ಮಾಂಗ ಇದ್ದಿದ್ದೇ ಪಾಪ-ದೋಷ ಎನ್ನುವದರ ಪರಿಹಾರಕ್ಕಾಗಿ. ಬಾವ ಈಗಾಗಲೇ ದೋಷ ನಿವಾರಣೆ ಸಲುವಾಗಿ ಹೋಮ ಮಾಡಿಸಿದ್ದಾನೆ. ನೀವಂತೂ ಘಾಟಿ ಹೆಣ್ಣನ್ನು ಸೊಸೆ ಮಾಡಿಸಿ ಕೊಳ್ಳಲೂ ತಯಾರಿದ್ದೀರಿ. ಇದು ಹಾಗೇನೂ ಅಲ್ಲ. ಮಂಗಳಾ ಮನೆಕೆಲಸದಲ್ಲಿ ಎತ್ತಿದ ಕೈ. ನನ್ನ ಕೇಳಿದರೆ ಈ ಸಂಬಂಧಕ್ಕೆ ಮುಂದಾಗಬಹುದು ಅಂತ ಕಾಣಿಸುತ್ತದೆ” ಅಂದರು ರಾಮ ಭಟ್ಟರು. ರಾಘವ ಹೆಗಡೆಯವರು ವಿರೋಧಿಸಲಿಲ್ಲ.

ರಾಮ ಭಟ್ಟರು ಎರಡೂ ಕಡೆಯ ಮುಂದಾಳ್ತನ ವಹಿಸಿದರು. ಮಂಗಳಾ, ಶ್ರೀನಿವಾಸನ ಮನೆ ಹಾಗೂ ಮನ ಎರಡನ್ನೂ ತುಂಬಿದಳು. ಗಣೇಶ ಹಾಗೂ ನಾಗವೇಣಿ ಸಹ ಉತ್ಸಾಹದಿಂದಲೇ ಮದುವೆಯಲ್ಲಿ ಭಾಗವಹಿಸಿದರು.  ವಿಶಾಲಾಕ್ಷಿ ಸುಮಾರು ಒಂದೂವರೆ ವರ್ಷದಿಂದ ಬಂಗಣೆಯಲ್ಲಿಯೇ ಇರುತ್ತಿದ್ದುದರಿಂದ ಮನೆಯನ್ನು ‘ಸೆಟ್’ ಮಾಡಲು ಮಂಗಳೆಗೆ ತೊಂದರೆಯಾಗಲಿಲ್ಲ.

“ನಾಗವೇಣಿ ಗರ್ಭಿಣಿಯಾದುದರಿಂದ ಅಮ್ಮ ಕೂಜಳ್ಳಿಗೆ ಬರಲಿ. ಈಗ ಹೇಗೂ ಮಂಗಳೆ ಬಂದಿದ್ದಾಳೆ ಅಲ್ಲಿ. ತೊಂದರೆ ಆಗಲಿಕ್ಕಿಲ್ಲ”  ಅಂತ ಗಣೇಶ ಅಪ್ಪನಲ್ಲಿ ತಿಳಿಸಿದ. ರಾಘವ ಹೆಗಡೆಯವರಿಗೂ ಹೌದೆನಿಸಿತು. ಬಂಗಣೆಗೆ ಹೋಗಿ ಹೆಂಡತಿಯಲ್ಲಿ ವಿಷಯ ತಿಳಿಸಿದರು. “ಈಗಷ್ಟೇ ಮನೆಗೆ ಬಂದಿದ್ದಾಳೆ ಮಂಗಳೆ. ನಾನು ಈಗಲೇ ಬಿಟ್ಟು ಹೋದರೆ ದೊಡ್ಮನೆಯವರು ಹಾಗೂ ರಾಮ ಭಟ್ಟರು ಏನು ತಿಳಿದುಕೊಳ್ಳಲಿಕ್ಕಿಲ್ಲ?. ಬಸುರಿಗೆ ಕೆಲಸ ಮಾಡಿದರೇ ಒಳ್ಳೆಯದಲ್ಲವೇ? ಹೊರಕೆಲಸಕ್ಕೆ ಗಂಗೆ ಬರುತ್ತಾಳಲ್ಲ? ನಾನು ಸ್ವಲ್ಪ ದಿನ ತಡೆದು ಬರುತ್ತೇನೆ” ಅಂತ ತಿರುಗಿ ಹೇಳಿದಳು ವಿಶಾಲಾಕ್ಷಮ್ಮ. ಬಹಳ ದಿನ ಬಂಗಣೆಯಲ್ಲಿಯೇ  ಇದ್ದುದರಿಂದ ಕೂಜಳ್ಳಿಗೆ ಹೋಗಿ ಕೆಲಸ ಮಾಡುವದು ಮುಜುಗರವಾಗಿಯೂ ಕಂಡಿತು ವಿಶಾಲಾಕ್ಷಮ್ಮನಿಗೆ.

‘ಅಮ್ಮ ನಾಲ್ಕು ದಿನ ತಡೆದು ಬರುತ್ತಾಳೆ’ ಅಂತ ಮಗ ಗಣೇಶನಲ್ಲಿ ಹೇಳಿದರು ಹೆಗಡೆಯವರು. ಇದನ್ನು ಕೇಳಿದ ನಾಗವೇಣಿಯಿಂದ ತವರು ಮನೆಗೆ ಸುದ್ದಿ ತಿಳಿಯಿತು, ರೆಕ್ಕೆ ಪುಕ್ಕ ಸೇರಿಸಿಕೊಂಡು. ನಾಗವೇಣಿಯ ಅಮ್ಮ ಬಂದು ಬಸುರಿ ಮಗಳನ್ನು ತನ್ನ ಮನೆಗೆ ಕರೆದೊಯ್ದಳು. ವಿಶಾಲಾಕ್ಷಮ್ಮನಿಗೆ ಕೂಜಳ್ಳಿಗೆ ಬರಲೇ ಬೇಕಾಯಿತು.

ತಾನು ಬಂದ ಹದಿನೈದು ದಿನಕ್ಕೇ ಅತ್ತೆ ಹೊರಟಿದ್ದು ಮಂಗಳೆಗೆ ಸರಿಬರಲಿಲ್ಲ. ‘ಹೊಸ ಜಾಗ. ಅಕ್ಕಪಕ್ಕದಲ್ಲಿ ನಮ್ಮವರ ಮನೆ ಇಲ್ಲ. ನನಗೆ ಇಲ್ಲಿಯ ಕೆಲಸದ ಅನುಭವವಿಲ್ಲ. ಗಂಡನಿಗೆ ಓಡಾಟವೇ ಹೆಚ್ಚು. ಒಮ್ಮೆ ರಾತ್ರಿಯಾದಲ್ಲಿ ಬಡಾಳದ ವೆಂಕಟೇಶನ ಮನೆಯಲ್ಲಿ ಉಳಿದು ಬೆಳಿಗ್ಗೆ ಬರುವದೂ ಉಂಟು. ಪುತ್ತು ಮರಾಠೆ ಅಥವಾ ಅವನ ಮಗ ಸಹಾಯಕ್ಕೆ  ಇದ್ದರೂ ನಾನೊಬ್ಬನೇ ಇದ್ದಾಗ ಅದು ಸರಿಯೇ?.’ ಗಂಡನಲ್ಲಿಯೇ ಹೇಳಿ ತನ್ನ ಮನಸ್ಸಿನ ಅಳಲನ್ನು ತೋಡಿಕೊಂಡಳು.

ಮನೆ ಸುಡಲು ಬೆಂಕಿಯಕಿಡಿ ಸಾಕು. ಅತ್ತೆ ಇಬ್ಬರೂ ಸೊಸೆಯಂದಿರಿಗೂ ದೂರವಾದಳು. ಆದರೂ ಮುಂದೆ ಚನ್ನಾಗಿಯೇ ಇದ್ದರು.

ನಾಗವೇಣಿ ಬಾಣಂತನ ಮುಗಿಸಿಯೇ ಕೂಜಳ್ಳಿಗೆ ಬಂದಳು.

ಅದೂ ಮಗಳು ರಶ್ಮಿಗೆ ಮೂರು ತಿಂಗಳು ಆದ ಮೇಲೆ.

“ಮಾವ ಅತ್ತೆ ನಮ್ಮಲ್ಲಿ ಮಾತ್ರ ಯಾಕೆ ಇರಬೇಕು? ಶ್ರೀನಿವಾಸನೂ ಮಗನೇ ಅಲ್ಲವೇ? ಅಲ್ಲಿಯೂ ಇರಬಹುದಲ್ಲವೇ? ಪಾಲಾಗುವಾಗ ಎರಡೂ ಕಡೆ ಇರಬೇಕೆಂದು ಹೇಳಿದ್ದಲ್ಲವೇ?” ಅಂತ ಪಾಲಾಗುವಾಗಿನ ಮಾತನ್ನು ಸಣ್ಣದಾಗಿ ಹೇಳಿದ ಹಾಗೆ ಮಾಡಿ ಅತ್ತೆಗೆ ಕೇಳಿಸಿದಳು.

ಜಗಳವಾಗದಿದ್ದರೂ ಸಹ ವಿಶಾಲಾಕ್ಷಮ್ಮನಿಗೆ ತಾನು ಈ ಮನೆಯಲ್ಲಿ ಉಳಿಯುವದು ಸಾಧ್ಯವಾಗಲಿಕ್ಕಿಲ್ಲ ಅನಿಸಿತು. ಗಂಡನಲ್ಲಿ ತಾನು ಬಂಗಣೆಗೇ ಹೋಗುವದಾಗಿಯೂ, ಅಲ್ಲಿ ತೊಂದರೆ ಆಗಲಿಕ್ಕಿಲ್ಲವೆಂದೂ ಖಂಡಿತವಾಗಿ ಹೇಳಿದಳು. ರಾಘವ ಹೆಗಡೆಯವರಿಗೆ ಇದೆಲ್ಲಾ ಗೊತ್ತಿರದೇ ಇರುವದಲ್ಲ. ತಮಗಾದರೆ ಸರಿ. ಹೆಂಡತಿಯ ಸಲುವಾಗಿಯಾದರೂ ತಾನೂ ಬಂಗಣೆಗೆ ಹೋಗುವದೇ ಸರಿ ಎಂದು ತೀರ್ಮಾನಿಸಿದರು. ಇಲ್ಲಿಯತನಕ ಮನೆ ಹಾಗೂ ಜಮೀನು ಗಣೇಶನ ಹೆಸರಿಗೇ ಇದ್ದಲೂ  “ನಾನೇ ಮುಂದೆ ನಿಂತು ಜಮೀನು ಮಾಡಿಸಿದ್ದು ಶ್ರೀನಿವಾಸನಿಗೆ. ಆದ್ದರಿಂದ ಅವರು ನಮ್ಮನ್ನು ಹೊಂದಿಸಿಕೊಂಡು ಹೋಗಬಹುದು” ಅಂತ ಹೆಂಡತಿಯಲ್ಲಿ ಹೇಳಿದರು. ಅವಳೂ ಒಪ್ಪಿದಳು.

ಕೆಲವು ದಿವಸಗಳ ಮಟ್ಟಿಗೆ ಬಂಗಣೆಗೆ ಹೋಗಿ ಬರುತ್ತೇವೆ ಎಂದು ಗಣೇಶನಲ್ಲಿ ಹೇಳಿದರು ಹೆಗಡೆಯವರು. “ಆಗಲಿ ಅದರಲ್ಲೇನು? ಅವನೂ ನಿನ್ನ ಮಗನೇ ಅಲ್ಲವೇ. ಅವನಿಗೂ ಅಪ್ಪ ಅಮ್ಮ ತಮ್ಮಲ್ಲಿರಲಿ ಅಂತ ಅನಿಸುವದು ಸಹಜ. ಇಲ್ಲಿ ನಾನು ನೋಡಿಕೊಳ್ಳುತ್ತೇನೆ. ನೀವು ಹೋಗಿರಿ” ಅಂದನು. ಹೋಗಿ ಬನ್ನಿ ಎನ್ನುವದು ರೂಢಿಯ ಮಾತು. ಬಹುಶಃ ಬಾಯಿ ತಪ್ಪಿ ಹೋಗಿರಿ ಅಂದಿರಬೇಕು. ಆದರೆ ತಾಯಿ ವಿಶಾಲಾಕ್ಷಮ್ಮ ವಿಪರೀತವನ್ನೇ ಅರ್ಥಮಾಡಿಕೊಂಡಳು. ಅಳುತ್ತಲೇ ಮನೆ ಬಿಟ್ಟು ಹೊರಟರು.

ಶ್ರೀನಿವಾಸನಿಗೆ ಇದೆಲ್ಲಾ ಗೊತ್ತಿಲ್ಲ. ತಮ್ಮ ಜೊತೆಯಲ್ಲಿ ಉಳಿಯಲು ಬಂದಿರಬೇಕೆಂದು ತಿಳಿದ. ಕಾಲ ಕಳೆದ ಹಾಗೆ ಮಂಗಳೆಗೆ ವಿಷಯ ಗುತ್ತಾಯಿತು. “ಕೂಜಳ್ಳಿ ಬಿಟ್ಟು ಇಲ್ಲಿಯೇ ಖಾಯಂ ಝಾಂಡಾ ಹೊಡೆಯಲು ಬಂದಿರಬೇಕು” ಎಂದು ಗಂಡನ ಕಿವಿ ಊದಿದಳು. ಶ್ರೀನಿವಾಸ ‘ತಾನೊಬ್ಬನೇ ಮಗನಾದರೆ ನೋಡಿಕೊಳ್ಳಬೇಡವೇ? ನೀನು ಸುಧಾರಿಸಿಕೊಂಡು ಹೋಗಬೇಕು ಎಂದು’ ಸೂಚಿಸಿದ.

ಹೊಂದಾಣಿಕೆ ಅಂತರಂಗದಿಂದ ಬರಬೇಕು. ತಾನು ಮದುವೆಯಾಗಿ ಬಂದ ಹೊಸತರಲ್ಲಿ ಇಲ್ಲಿಂದ ಹೊರಟ ಅತ್ತೆ ಈಗ ಅನಿವಾರ್ಯದಲ್ಲಿ ಬಂದಿದ್ದಾಳೆ ಅಂತ ಅನಿಸಿತು ಮಂಗಳೆಗೆ. ಆದರೆ ಗಂಡನ ಕಾರಣಕ್ಕಾಗಿ ಹೊಂದಿಕೊಳ್ಳಲೇ ಬೇಕಾಯಿತು. ಆದರೂ ಆಗಾಗ ಬುಸು ಬುಸು ನಡೆಯತ್ತಲೇ ಇತ್ತು.

ಈ ಮಧ್ಯದಲ್ಲಿ ಅತಿಕ್ರಮಣದಾರರ “ಅಕ್ರಮ ಸಕ್ರಮ” ಕ್ಕೆ ಸರಕಾರ ಅಂತಿಮ ರೂಪಕೊಡುತ್ತಿದೆ ಅಂತ ಗುತ್ತಾಯಿತು. ಹತ್ತು ವರ್ಷ ಅತಿಕ್ರಮಣ ಮಾಡಿದ ಜಾಗೆಯನ್ನು ಅತಿಕ್ರಮಣದಾರರಿಗೇ  ಕೊಡುವದೆಂದು ಸರಕಾರದ ‘ಆರ್ಡರ್’ ಆಗಿದೆಯೆಂದು ರಾಘವ ಹೆಗಡೆಯವರಿಗೆ ಶಾನಭಾಗ ವಕೀಲರು ಹೇಳಿದರು. ಪುತ್ತು ಮರಾಠೆಯ ಜಾಗದ ಪಕ್ಕದ ಜಾಗ ರಾಘವ ಹೆಗಡೆಯವರೇ ಅತಿಕ್ರಮಣ ಮಾಡಿದ್ದಾರೆ ಅಂತ ಆಗಲೇ ರಾಮಭಟ್ಟರು ತಿದ್ದಿಸಿದ್ದರು. ಮಕ್ಕಳಲ್ಲಿ ಪಾಲು ಮಾಡುವಾಗ ಈ ಒಂದು ಎಕರೆ ಸೇರಿರಲಿಲ್ಲ.  ಈಗ ಅದು ರಾಘವ ಹೆಗಡೆಯವರ ಹೆಸರಿಗೆ ಆಯಿತು. ಆ ಜಾಗದ ಮುಕ್ಕಾಲು ಎಕರೆಯಲ್ಲಿ ತೋಟ ಎಬ್ಬಿಸಿದ್ದ ಶ್ರೀನಿವಾಸ.

ಆ ಜಾಗದಲ್ಲಿ ಸಣ್ಣ ಮನೆಯನ್ನು ಕಟ್ಟಿಕೊಂಡರು  ಹೆಗಡೆಯವರು. ಸಂತೆಗುಳಿ ಸೊಸೈಟಿಯಲ್ಲಿ ಸಾಲದ ವ್ಯವಸ್ಥೆಯನ್ನೂ ಮಾಡಿದ್ದರು ರಾಮ ಭಟ್ಟರು. ಈಗ ತಾವು ಹಾಗೂ ಹೆಂಡತಿ ವಿಶಾಲಾಕ್ಷಿ ಸ್ವತಂತ್ರ ಜೀವನವನ್ನು ಯಾರ ಹಂಗಿಲ್ಲದೇ ಕಳೆಯಬಹುದೆಂಬ ಸಮಾಧಾನ ಹೆಗಡೆಯವರಿಗೆ. ಹೇಗೂ ಮುಕ್ಕಾಲು ಎಕರೆ ತೋಟದಲ್ಲಿ ಫಲ ಬರುತ್ತಿದೆಯಲ್ಲ?

ಈಗ ಗಣೇಶ-ನಾಗವೇಣಿ ಹಾಗೂ ಶ್ರೀನಿವಾಸ-ಮಂಗಳ ವಯಸ್ಸಾದ ಅಪ್ಪ ಅಮ್ಮನನ್ನು ನೋಡಲು ಬರುತ್ತಿರುತ್ತಾರೆ. ಅಮ್ಮ, ಸೊಸೆಯಂದಿರು ಆಸೆಗಾಗಿ ತಮ್ಮನ್ನು ಹಚ್ಚಿಕೊಳ್ಳುತ್ತಿದ್ದಾರೆ ಎಂದಳು ಹೆಗಡೆಯವರೊಡನೆ. ಹೆಗಡೆಯವರು ಸಣ್ಣದಾಗಿ ನಕ್ಕರು ಅಷ್ಟೇ.

|********************************

One thought on “ಪಾಲು

  1. ಕತೆ ಸಧ್ಯದಲ್ಲಿ ಸಮಾಜದಲ್ಲಿ ನಡೆಯುತ್ತಿರುವ ವಿಷಯಗಳಿಗೆ ಕನ್ನಡಿ ತೋರಿಸಿದಂತಿದೆ. ನನ್ನ ಅಣ್ಣನ ಮಗಳ ಹತ್ತಿರ ಈ ಕತೆಯನ್ನು ಓದಿಸಿ ನಾವೆಲ್ಲಾ ಕೇಳಿಸಿಕೊಂಡೆವು. ಓದುವಾಗ ಒಂದು ಪದ ತಪ್ಪಾಗಿ ಓದಿದರು ಆ ಪ್ಯಾರಾಗ್ರಾಫ್‌ ಮತ್ತೆ ಮೊದಲಿಂದ ಓದಬೇಕೆಂಬು ಶರತ್ತು ಹಾಕಲಾಗಿತ್ತು. ನಿಮ್ಮ ಕತೆಯಿಂದ ಪ್ರಾರಂಭವಾದ ಈ ಕಥಾ ವಾಚನ ದಿನಾ ಸಂಗಾತಿಯಲ್ಲಿ ಬರುವ ಮತ್ತಿತರ ಕತೆಗಳ ವಾಚನದೊಂದಿಗೆ ಮುಂದುವರೆಯುತ್ತದೆ. ಧನ್ಯವಾದಗಳು . ಗುರುರಾಜ ಶಾಸ್ತ್ರಿ.

Leave a Reply

Back To Top