ಎರಡು ಕಿರು ಕಥೆಗಳು
ಶ್ವೇತಾ ಮಂಡ್ಯ.


ಒಂದು
ಅದೊಂದು ಪ್ರತಿಷ್ಠಿತ ಖಾಸಗಿ ಶಾಲೆ. ಅಲ್ಲಿ “ಪರಿಸರ ದಿನಾಚರಣೆಯ”ಸಂಭ್ರಮ.
ವೇದಿಕೆಯಂತೂ ವರ್ಣರಂಜಿತ. ಅತಿಥಿಗಳ ಅಮೋಘ ಭಾಷಣ. ಪೋಷಕರಿಗಂತೂ ಇಂತಹ ಶಾಲೆಯಲ್ಲಿ ದುಬಾರಿ ಶುಲ್ಕ ಕಟ್ಟಿ ಮಕ್ಕಳಿಗೆ ಸೀಟ್ ಗಿಟ್ಟಿಸಿದ್ದಕ್ಕೆ ಹಿಗ್ಗೋ ಹಿಗ್ಗು.
ಸಂಸ್ಥೆಯ ಅಧ್ಯಕ್ಷರಿಂದ ಕಡ್ಡಾಯವಾಗಿ ಎಲ್ಲ ವಿದ್ಯಾರ್ಥಿಗಳು ಒಂದೊಂದು ಸಸಿ ನೆಟ್ಟು ಪೋಷಿಸಲೇಬೇಕೆಂಬ ಫರ್ಮಾನು.
ಕಾರ್ಯಕ್ರಮ ಮುಗಿಸಿ ಹೊರಟ ಅಧ್ಯಕ್ಷರ ವಿದೇಶಿ ಕಾರ್ ಉಗುಳಿದ ಹೊಗೆಗೆ ಗಂಟಲುಬ್ಬಿ ಕೆಮ್ಮಿದ ಶಾಲೆಯ ಕೈತೋಟದ ಮಾಲಿಯ ಕಣ್ಣು ಮಂಜಾದವು.
‘ಪರಿಸರಮಾಲಿನ್ಯ ನಿಯಂತ್ರಣ ಮಂಡಳಿ’ ಆ ಅಧ್ಯಕ್ಷ, “ನಿಯಂತ್ರಣ” ಮರೆತು ದಾಹಕ್ಕೆ ಬಿದ್ದು ಗಳಿಸಿದ ಹಣಕ್ಕೆ, ತನ್ನ ಬೆವರಿನ ಫಲವಾದ ಈ ಜಮೀನನ್ನು ಮಾರಿದ್ದು ನೆನಪಾಗಿ, ಪರಿತಪಿಸಿದ.
ಸೊಂಪಾಗಿ ಬೆಳೆದಿದ್ದ ತೋಟ, ಸುತ್ತಮುತ್ತಲ ಕಾಡನ್ನು ಸವರಿ ಸಫಾಟು ಮಾಡಿ ಕಟ್ಟಿಸಿದ ಬಹುಮಹಡಿ ಶಾಲೆಯಲ್ಲಿ ಕೊನೆಗೆ ತಾನೇ ಮಾಲಿಯಾದ ತನ್ನ ದುರಾದೃಷ್ಟಕ್ಕೆ ಮರುಗಿ ಕಣ್ಣೀರಾದ.
ಧೂಳೆಬ್ಬಿಸಿ ಹೋದ ಕಾರಿನ ಚಕ್ರದಡಿ ಸಿಕ್ಕಿ ನೆಲಕ್ಕಂಟಿದ ಗರುಕೆಗೆ ಅವನ ಕಣ್ಣ ಹನಿಯೇ ಜೀವದಾಯಿನಿ ಮಳೆಯಾಯ್ತು

ಎರಡು
ಅವರಿಬ್ಬರೂ ಕಷ್ಟ-ಸುಖಗಳಿಗೆ ಪರಸ್ಪರ ಆಶ್ರಯಿಸಿದ ನೆರೆಹೊರೆಯ ಗೆಳತಿಯರು. ಆದರೆ, ಅವರ ನಡುವೆ ಒಬ್ಬ ಸುಂದರ, ಶ್ರೀಮಂತ ಗೆಳತಿಯೊಬ್ಬಳ ಪ್ರವೇಶವಾಯ್ತು.
ದಿನೇದಿನೇ ಹೊಸ ಗೆಳತಿಯ ಫ್ಯಾಷನ್, ತಿರುಗಾಟಕ್ಕೆ ಮಾರುಹೋದ ಗೆಳತಿ, ಅವಳನ್ನು ಮೆಚ್ಚಿಸಿ, ಅವಳ ಸಖ್ಯ ಗಳಿಸುವ ಆಸೆಯಿಂದ ಅವಳ ಮನೆಗೆಲಸ, ಹೇರ್ ಡೈ, ಮಸಾಜ್ … ಹೀಗೆ ಏನೆಲ್ಲಾ ಸಾಧ್ಯವೋ ಎಲ್ಲಾ ಮಾಡಿ, ಅವಳಿಗೆ ಆಪ್ತವಾದಳು.
ಅವಳೊಂದಿಗೆ ಬ್ಯೂಟಿ ಪಾರ್ಲರ್, ಶಾಪಿಂಗ್, ಸಿನಿಮಾ ಸುತ್ತಾಟದಲ್ಲಿ ಹಳೆಯ ಗೆಳತಿಯ ಸ್ನೇಹ ‘ಔಟ್ ಡೇಟೆಡ್’ ಎಂದು ಅವಳಿಂದ ದೂರವಾದಳು.
ಹೊಸ ಗೆಳತಿಯ ನಾಯಿ ಮರಿಯನ್ನು ಪರಿಪರಿಯಾಗಿ ಬಣ್ಣಿಸಿ, ಸೆಲ್ಫಿ ತೆಗೆದು ಫೇಸ್ಬುಕ್, ಇನ್ಸ್ಟಾಟ್ರಾಗ್ರಾಮ್ಗೆ ಅಪ್ಲೋಡ್ ಮಾಡಿ,
“ವಾವ್ “,”ಕ್ಯೂಟ್” “ಕರುಣಾಮಯಿ” “ನಾಯಿಯನ್ನು ಇಷ್ಟು ಪ್ರೀತಿಸುವ ನಿಮ್ಮದು ಎಷ್ಟು ಒಳ್ಳೆಯ ಮನಸ್ಸು” ಎಂದೆಲ್ಲಾ ಕಾಮೆಂಟ್ಸ್ ಪಡೆದು ಬೀಗಿದಳು.
ಆಸ್ಪತ್ರೆ ಪಾಲಾಗಿದ್ದ ಅಮ್ಮನ ನೆನೆದು, ಕಾಳಜಿ ವಹಿಸುವರಿಲ್ಲದೇ ಕಂಗೆಟ್ಟಿದ್ದ ಹಳೆಯ ಗೆಳತಿಗೆ ಮಗು, ಹಿಂದೆ ತನ್ನಮ್ಮನಂತೆಯೇ ಮುದ್ದಿಸುತ್ತಿದ್ದ ಇವಳ ನೋಡಿ, ಪ್ರೀತಿಗಾಗಿ ಹಂಬಲಿಸಿ ಕೈ ಚಾಚುತ್ತಿತ್ತು.
ಪಕ್ಕದ ಮನೆಯ ಬಾಗಿಲಲ್ಲೇ ಮಗುವ ಆರ್ತನಾದ ಕೇಳಿಯೂ ಕೇಳದಂತೆ, ಆಕೆ
‘ಸಿಂಪಥಿ ತೋರಿಸೋದೆಲ್ಲಾ ತನ್ನ ಪರ್ಸನಲ್ ಫ್ರೀಡಂಗೆ ಅಡ್ಡಿ’ ಎಂದು ತನ್ನ ಮನೆ ಬಾಗಿಲನ್ನು ದಢಾರನೇ ಹಾಕಿ ಒಳ ನಡೆದಳು.
ಬಾಗಿಲ ಸದ್ದಿಗೆ ಮುಗ್ಧ ಮಗು ಬೆಚ್ಚಿ ಬಿದ್ದಿ ಕಿಟಾರನೇ ಕೂಗಿತು.
**********************