ಸಾವಿನ ಮೆರವಣಿಗೆ

ಕವಿತೆ

ಸಾವಿನ ಮೆರವಣಿಗೆ

ಸುವಿಧಾ ಹಡಿನಬಾಳ

ಹೋದ್ಯಾ ಪಿಶಾಚಿ ಅಂದ್ರೆ
ಬಂದೆ ಗವಾಕ್ಷಿ ಎನ್ನುವ ಹಾಗೆ
ಬಂದ್ಯಲ್ಲೆ ನೀನು ಮಾರಿ ಕೊರೊನಾ

ಸದಾ ಗಿಜಿಗುಡುವ ರಸ್ತೆಗಳಲ್ಲಿ
ಸಂತೆ ಜಾತ್ರೆ ಮಾರುಕಟ್ಟೆಗಳಲಿ
ದುಗುಡ ದುಃಖದ ಮೌನ
ಅಪರೂಪಕ್ಕೊಮ್ಮೆ ಚಿತೆ ಉರಿಯುವ
ಸ್ಮಶಾನದಲ್ಲಿ ಮುಗಿಯದಾ ದಹನ
ಮುಗಿಲು ಮುಟ್ಟುತ್ತಿರುವ ಆಕ್ರಂದನ

ಇಂದು ನೋಡಿದವರು ನಾಳೆ ಇಲ್ಲ
ಮುಂದೆ ಹೇಗೊ ಯಾರಿಗೂ ಗೊತ್ತಿಲ್ಲ
ನಮ್ಮ ನಡುವಿನ ನಗು ಮೊಗದ
ನಡು ಪ್ರಾಯದ ,ಏರು ಜವ್ವನದ
ಸರಣಿ ಸಾವಿನ ಕಪ್ಪು ಹೊಗೆ
ರಸ್ತೆಯುದ್ದಕೂ ನಿಂತಿರುವ ಸಾವಿನಾ ಮೆರವಣಿಗೆ

ಕಣ್ಣು ಮಂಜಾಗುತ್ತಿದೆ ಅಕ್ಷರ ಒದ್ದೆಯಾಗಿದೆ
ಹೃದಯ ಶೂನ್ಯವಾಗಿದೆ
ಬದುಕು ಅರ್ಥ ಕಳೆದುಕೊಳ್ಳುತ್ತಿದೆ

ಆದರೂ ಕಗ್ಗತ್ತಲ ಕರಾಳ ರಾತ್ರಿಯಲಿ
ಮನೆ ಬೆಳಗುವ ಹಣತೆಯಂತೆ
ಬತ್ತಿಲ್ಲ ಆಶಾವಾದ ಸತ್ತಿಲ್ಲ ಆತ್ಮವಿಶ್ವಾಸ
ಗೆದ್ದೇ ಗೆಲ್ಲುತ್ತೇವೆ ಮತ್ತೆ ಪುಟಿದು
ಕಟ್ಟುತ್ತೇವೆ ಹೊಸ ಚೈತ್ರ ಮಾಸ

************************

Leave a Reply

Back To Top