ಅಂಕಣ ಬರಹ

ತೊರೆಯ ಹರಿವು….

‘ವೈಚಾರಿಕ ಪ್ರಜ್ಞೆಯ ಜಾಗೃತಿಗೆ ಕರೆ’

Meditation, Reflection, Universe, Person

        ವಿಜ್ಞಾನ ಎನ್ನುವುದು ಜಗತ್ತಿನ ಆಗುಹೋಗುವಿನ ಮೇಲೆ ಅತ್ಯಂತ ಪರಿಣಾಮಕಾರಿಯಾಗಿ ಪ್ರಭಾವ ಬೀರುವ ಒಂದು ವಿಶ್ವಾಸಾರ್ಹ, ತಾರ್ಕಿಕ ಅನ್ವಯತೆ ಹೊಂದಿರುವ ವಿಶೇಷ ಅರಿವು ಎಂದು ಹೇಳಿಕೆಯನ್ನು ನೀಡಬಹುದೇ? ಗೊತ್ತಿಲ್ಲ. ಏಕೆಂದರೆ, ವಿಜ್ಞಾನವು ನಮಗರಿವಿರದಂತೆ ನಮ್ಮ ಪ್ರತೀ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುತ್ತದೆ. ಹಾಗಾಗಿ ವಿಜ್ಞಾನವನ್ನು ವಿಶದೀಕರಿಸಲು ಸ್ಟೇಟ್ಮೆಂಟ್ ಮಾದರಿಯ ಹೇಳಿಕೆಗಳನ್ನು ನೀಡಬಹುದೇ ಹೊರತು, ಜೀವನದಿಂದ ವಿಜ್ಞಾನವನ್ನು ವಿಭಜಿಸಲಾಗದು. ವಿಜ್ಞಾನದ ಕಾರಣದಿಂದಲೇ ವಿಚಾರವು ಹುಟ್ಟುತ್ತದೆ. ಹಾಗಾಗಿ, ವೈಚಾರಿಕತೆಗೆ ವೈಜ್ಞಾನಿಕತೆಯ ತಳಪಾಯ ಬಹಳ ಮುಖ್ಯ. 

     ವೈಚಾರಿಕತೆ ಎನ್ನುವುದು ತರ್ಕಬದ್ಧವಾದ ಯೋಚನಾಲಹರಿ. ಒಂದು ಬಗೆಯ ಮೈಂಡ್ ಅಪ್ಲಿಕೇಷನ್. ಅಂದರೆ, ಯಾವುದೇ ವಿಷಯವನ್ನು ಹೆಚ್ಚು ಹೆಚ್ಚು ಪ್ರಾಯೋಗಿಕವಾಗಿ, ತಾರ್ಕಿಕವಾಗಿ ಆಲೋಚಿಸುವುದು. ವೈಚಾರಿಕತೆಯು ವಿಷಯವೊಂದನ್ನು ವಿಮರ್ಶೆ ಮಾಡುತ್ತದೆ. ಅದೊಂದು ಬಗೆಯ ಚಿಂತನಾಕ್ರಮ. ಮಾನವರು ವೈಚಾರಿಕ ಚಿಂತನೆಗಳಿಂದಾಗಿಯೇ ಜಗತ್ತಿನ ಮೇಲೆ  ತಮ್ಮದೇ ಮಾದರಿಯಲ್ಲಿ ಪ್ರಭುತ್ವವನ್ನು ಸಾಧಿಸಿರುವುದು. ಅಥವಾ ಇತರೆ ಜೀವಿಗಳಿಗಿಂತ ಗಮನಾರ್ಹವಾಗಿ ವಿಭಿನ್ನವಾಗಿರುವುದು. ಆದಿಮಾನವರು ಆಧುನಿಕ ಮಾನವರಾಗಿ ಬೆಳೆದಿರುವುದರಲ್ಲಿ ವೈಚಾರಿಕತೆಯ ಪಾತ್ರ ಮಹತ್ವವಾದುದು. ಬುದ್ಧಿ, ಪ್ರಜ್ಞೆ, ಅರಿವು, ತರ್ಕ, ಚಿಂತನೆ, ತಿಳುವಳಿಕೆ, ಜ್ಞಾನ ಇವೆಲ್ಲಾ ವೈಚಾರಿಕತೆಯ ವಿವಿಧ ವಿಸ್ತಾರದ ನೆಲೆಗಳು. 

    ಯಾವುದಾದರೂ ವಿಷಯ ಕುರಿತ ನಮ್ಮ ಗ್ರಹಿಕೆಯು ಹೆಚ್ಚು ಪ್ರಾಯೋಗಿಕವಾಗಿ, ತಾರ್ಕಿಕವಾಗಿದ್ದರೆ, ಆ ಮೂಲಕ ಹೊಸ ಅರ್ಥ- ಹೊಳಹು ಲಭ್ಯವಾಗುವಂತಿದ್ದರೆ ಅದೇ ವೈಚಾರಿಕತೆ. ವೈಚಾರಿಕತೆಯು ಒಂದು ಭದ್ರ ತಳಹದಿಯ ಮೇಲೆ ಕಟ್ಟಲಾದ ವಾಸ್ತುಶಿಲ್ಪ. ಅದು  ಹುಸಿತನ, ಭ್ರಮೆ ಹಾಗೂ ಮೌಢ್ಯಗಳಿಂದ ಅಂತರ ಕಾಯ್ದುಕೊಂಡಿರುತ್ತದೆ. ಜೊತೆಗೆ ಹೊಸ ಚಿಂತನೆಗಳಿಗೆ ಪ್ರೇರೇಪಣೆ ನೀಡುತ್ತಿರುತ್ತದೆ.  ಹಾಗಾಗಿ, ವಿಶೇಷ ತಿಳುವಳಿಕೆಯನ್ನು ವೈಚಾರಿಕತೆ ಎನ್ನಬಹುದು. ವಿಚಾರವಂತರಾದ ಮನುಷ್ಯರು ಹೆಚ್ಚು ಚಿಂತನಾ ಶೀಲರಾಗಿರುತ್ತಾರೆ. ಅವರು ನಿರಂತರ ಸಮಾಜಮುಖಿಯಾಗಿದ್ದು, ಯಾವುದೇ ವಿಚಾರವನ್ನು ಸರಿಯಾಗಿ ಗ್ರಹಿಸುವುದರಿಂದ ಸಮಾಜಕ್ಕೆ ಸ್ಪಷ್ಟ ಸಂದೇಶವನ್ನು ನೀಡುತ್ತಾರೆ.  ಆ ಮೂಲಕ ತಮ್ಮ ಕೊಡುಗೆಯನ್ನು ಸಹ ಪ್ರಾಮಾಣಿಕವಾಗಿ ನೀಡುತ್ತಾರೆ. ಇದರಿಂದ ಸಮಾಜದ ಪ್ರಗತಿಗೆ ಹೆಚ್ಚು ಅನುಕೂಲವಾಗುತ್ತದೆ. ಅದು ಹೊಸ ಹೊಸ ಆವಿಷ್ಕಾರಗಳಿಗೆ ನಾಂದಿ ಹಾಡುವ ಮೂಲಕ ಶೋಷಣೆ, ದಬ್ಬಾಳಿಕೆಗಳ  ಅನಾರೋಗ್ಯಕರ ವಾತಾವರಣವನ್ನು ನಿರಾಕರಿಸಲು ಶ್ರಮಿಸುತ್ತದೆ. 

  ವೈಚಾರಿಕ ಪ್ರಜ್ಞೆಯುಳ್ಳವರು ವಿಷಯಗಳನ್ನು ಅವು ಇರುವಂತೆಯೇ ಸ್ವೀಕರಿಸುವುದಿಲ್ಲ. ನಾನಾ ಆಯಾಮಗಳಿಂದ ವಿಷಯ ಗ್ರಹಿಸಿ, ನಿಜಾಂಶದ ಒರೆಗೆ ಹಚ್ಚಿ ಅನಂತರ ಅದನ್ನು ಸ್ವೀಕರಿಸುವ ಅಥವಾ ನಿರಾಕರಿಸುವ ಕುರಿತು ನಿರ್ಧರಿಸುತ್ತಾರೆ. ಜಗತ್ತು ಮೌಢ್ಯವನ್ನು ಅನುಕರಿಸಿದರೂ ತಾವು ಮಾತ್ರ ತಮ್ಮ ವಿಚಾರ ಬುದ್ಧಿಯಿಂದ ಅದನ್ನು ವಿಮರ್ಶಿಸುತ್ತಾರೆ. ಲೋಕಜ್ಞಾನವನ್ನೂ ತಾರ್ಕಿಕತೆಯ ಒರೆಗೆ ಹಚ್ಚುವ ವೈಚಾರಿಕ ಜೀವಿಗಳವರು. ಇಂಥ ವೈಚಾರಿಕ ನಿಲುವಿಗೆ ಬದ್ಧರಾಗಿದ್ದರಿಂದಲೇ ಹಲವಾರು ಚಿಂತಕರು, ವಿಜ್ಞಾನಿಗಳು, ವಿಚಾರವಂತರು, ತತ್ವಜ್ಞಾನಿಗಳು ಬಹಳ ಅಪಮಾನಗಳನ್ನು ಅನಾಹುತಗಳನ್ನು ಎದುರಿಸಬೇಕಾಯ್ತು. ಗೆಲಿಲಿಯೋವನ್ನು ಗೇಲಿ ಮಾಡಿದವರು, ಅರಿಸ್ಟಾಟಲನನ್ನು ಅಲ್ಲಗಳೆದವರು, ಸಾಕ್ರೆಟೀಸನನ್ನು ಸಾವಿಗೆ ದೂಡಿದವರು…. ಲೌಕಿಕದವರೇ. ಆದರೂ ಜಗತ್ತಿನ ಇದುವರೆಗಿನ ಬೆಳವಣಿಗೆಯಲ್ಲಿ ಅಳಿಯದೇ ಉಳಿದು ಬಂದಿರುವುದು ಅದೇ ಗೆಲಿಲಿಯೋ, ಸಾಕ್ರೆಟೀಸ್, ಅರಿಸ್ಟಾಟಲ್, ನ್ಯೂಟನ್, ಐನ್ಸ್ಟೀನ್, ಮೇಡಂ ಕ್ಯೂರಿ, ಕುವೆಂಪು, ಕಾರಂತ, ಕಲಾಂ ಮೊದಲಾದ ವಿಜ್ಞಾನಿಗಳು ಹಾಗೂ ವಿಚಾರವಂತರು ಹಾಗೂ ಅವರ ತರ್ಕಬದ್ಧ ವಿಚಾರ ಸರಣಿಗಳು ಮಾತ್ರ. 

       ವೈಜ್ಞಾನಿಕವಾಗಿ ಹಾಗೂ ವೈಚಾರಿಕವಾಗಿ ಆಲೋಚಿಸುವವರು ಹೆಚ್ಚು ಜೀವಪರತೆ ಹೊಂದಿರಬೇಕು. ಇಲ್ಲದಿದ್ದರೆ ಅವು ಕೇವಲ ಒಣೋಪದೇಶಗಳಾಗಿ ಪ್ರಯೋಜನಕ್ಕೆ ಬಾರದ ಸಿದ್ಧಾಂತಗಳಾಗುತ್ತವೆ. ಜೀವಪರ ನಿಲುವು ಎಂದರೆ, ಆದರ್ಶ- ಮೌಲ್ಯಗಳನ್ನು ಹೊಂದಿರುವುದೇ ಆಗಿದೆ. ಮೌಲ್ಯಗಳೆಂದರೆ, ಪ್ರೇಮ, ಸತ್ಯ, ದಯೆ, ಕ್ಷಮೆ, ಅಹಿಂಸೆ, ಸೋದರತ್ವ, ತಾಳ್ಮೆ, ಪ್ರಾಮಾಣಿಕತೆ ಮೊದಲಾದ ಮಾನವೀಯತೆ ಅಂಶಗಳು. ಇವುಗಳನ್ನು ಮೈಗೂಡಿಸಿಕೊಂಡಿರುವ ವೈಚಾರಿಕ ನಿಲುವುಗಳು ಜಗತ್ತನ್ನು ಹಲವಾರು ಅನಾಹುತಗಳಿಂದ ರಕ್ಷಿಸಿರುವುದನ್ನು ನೋಡಬಹುದು. ಬುದ್ಧ, ಯೇಸು, ಪೈಗಂಬರ, ಗಾಂಧಿ, ಬಸವಣ್ಣ ಮೊದಲಾದವರು ಜಾಗತಿಕ ಗುರುಗಳಾಗಿ ಇರುವುದು ತಮ್ಮ ತರ್ಕಬದ್ಧವಾದ ವೈಚಾರಿಕ ಚಿಂತನೆಗಳಿಂದಾಗಿಯೇ. ಇವರ ನಡೆ- ನುಡಿಗಳಲ್ಲಿ ಜೀವಪರ ಕಾಳಜಿ ಎನ್ನುವುದು ಎದ್ದುಕಾಣುವ ವಿಶೇಷ ಅಂಶ. 

   ವಿಜ್ಞಾನ ಹಾಗೂ ವೈಚಾರಿಕತೆಗಳು ಸಮಾಜ ಕೇಂದ್ರಿತವಾದ ವಿಚಾರಗಳು. ಇವುಗಳ ಪರಮೋದ್ದೇಶ ಸಮಾಜದ ಸಮಗ್ರ ಪ್ರಗತಿಯೇ ಆಗಿರುತ್ತದೆ. ಆದ್ದರಿಂದಲೇ ಅದು ಹಿಂದಿನಿಂದ ರೂಢಿಯಲ್ಲಿರುವ ಎಲ್ಲವನ್ನೂ ಸಾರಾಸಗಟಾಗಿ ನಿರಾಕರಿಸುವುದಿಲ್ಲ. ಬದಲಾಗಿ ಅವುಗಳನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿ, ವಿಮರ್ಶೆ ಮಾಡಿ ಅವುಗಳ ಅನುಸರಣೆಯ ಅಥವಾ ಅನುಕರಣೆಯ ಬಗ್ಗೆ ವಸ್ತುನಿಷ್ಠವಾಗಿ ನಿರ್ಧರಿಸುವ ತೀರ್ಮಾನವನ್ನು ನೀಡುತ್ತವೆ. ಕುವೆಂಪು ಅವರು ತಮ್ಮ ವಿಚಾರ ಕ್ರಾಂತಿಗೆ ಆಹ್ವಾನ’ ಕೃತಿಯಲ್ಲಿ “ಶತಮಾನಗಳ ಬೋಧನೆ ಮತ್ತು ನಂಬಿಕೆಗಳ ಫಲವಾಗಿ ನಮ್ಮ ವಿಚಾರ ಶಕ್ತಿಯೇ ಕುಂಠಿತವಾಗಿ ಹೋಗಿದೆ. ವಿಜ್ಞಾನ ಸಂಪ್ನವಾದ ಪಾಶ್ಚಾತ್ಯ ನಾಗರಿಕತೆ ನಮ್ಮನ್ನು ಇನ್ನೂರು ವರ್ಷ ಆಳಿದರೂ ಅದರ ವಿಜ್ಞಾನ ಸೃಷ್ಟಿಸಿದ ಯಂತ್ರ ನಾಗರಿಕತೆಯನ್ನು ಅನುಕರಿಸಿದವೆ ಹೊರತು ಅದರ ವೈಜ್ಞಾನಿಕ ದೃಷ್ಟಿ ನಮ್ಮದಾಗಲಿಲ್ಲ; ಮತ್ತು ಆ ವೈಜ್ಞಾನಿಕ ದೃಷ್ಟಿಗೂ ತಾಯಿಬೇರಾದ ವೈಚಾರಿಕತೆಯನ್ನೂ ನಾವು ಮೈಗೂಡಿಸಿಕೊಳ್ಳಲಿಲ್ಲ.

          ಕುವೆಂಪು ಅವರು ತಮ್ಮ ‘ವಿಚಾರ ಕ್ರಾಂತಿಗೆ ಆಹ್ವಾನ’ ಕೃತಿಯಲ್ಲಿ ‘‘ಶತಮಾನಗಳ ಬೋಧನೆ ಮತ್ತು ನಂಬಿಕೆಗಳ ಫಲವಾಗಿ ನಮ್ಮ ವಿಚಾರ ಶಕ್ತಿಯೇ ಕುಂಠಿತವಾಗಿ ಹೋಗಿದೆ. ವಿಜ್ಞಾನ ಸಂಪನ್ನವಾದ ಪಾಶ್ಚಾತ್ಯ ನಾಗರಿಕತೆ ನಮ್ಮನ್ನು ಇನ್ನೂರು ವರ್ಷ ಆಳಿದರೂ ಅದರ ವಿಜ್ಞಾನ ಸೃಷ್ಟಿಸಿದ ಯಂತ್ರನಾಗರಿಕತೆಯನ್ನು ಅನುಕರಿಸಿದೆವೆ ಹೊರತು ಅದರ ವೈಜ್ಞಾನಿಕ ದೃಷ್ಟಿ ನಮ್ಮದಾಗಲಿಲ್ಲ; ಮತ್ತು ಆ ವೈಜ್ಞಾನಿಕ ದೃಷ್ಟಿಗೂ ತಾಯಿಬೇರಾದ ವೈಚಾರಿಕತೆಯನ್ನೂ ನಾವು ಮೈಗೂಡಿಸಿಕೊಳ್ಳಲಿಲ್ಲ. ಇನ್ನು ಮುಂದಾದರೂ ನಾವು ವೈಜ್ಞಾನಿಕ ದೃಷ್ಟಿಯ ಮತ್ತು ವೈಚಾರಿಕ ಬುದ್ಧಿಯ ನೆರವಿನಿಂದ ನಮ್ಮ ನಾಡಿನ ರಾಜಕೀಯ, ಸಾಮಾಜಿಕ ಮತ್ತು ಮತಧಾರ್ಮಿಕ ರಂಗಗಳನ್ನು ಪರಿಶೋಧಿಸದಿದ್ದರೆ ನಮಗೆ ಕೇಡು ತಪ್ಪದು’’ ಎಂದು ಆತಂಕಪಟ್ಟಿದ್ದಾರೆ. 

Kuvempu | Kuvempu's Books and Awards | Kannada Poet

   

ಭಾರತಕ್ಕೂ ಇತರೆ ದೇಶಗಳಿಗೂ ಬಹಳಷ್ಟು ಅಂಶಗಳಲ್ಲಿ ಸಾಕಷ್ಟು ವೈವಿಧ್ಯವಿದೆ. ಇಲ್ಲಿ ಸಂಕೀರ್ಣ ಸಾಮಾಜಿಕ ವ್ಯವಸ್ಥೆ, ಧಾರ್ಮಿಕ ಮನೋಭಾವ, ಆರ್ಥಿಕ ಪರಿಸ್ಥಿತಿ, ಶೈಕ್ಷಣಿಕ ವ್ಯವಸ್ಥೆ, ಸಂಪ್ರದಾಯ-ರೂಢಿ-ಪರಂಪರೆಯ ಪ್ರಜ್ಞೆಗಳು ಬಹಳ ಪ್ರಭಾವಶಾಲಿಯಾಗಿವೆ. ಆದರೂ ಹತ್ತು- ಹನ್ನೊಂದನೆ ಶತಮಾನದಿಂದ ಈ ನೆಲದಲ್ಲಿ ಪ್ರಗತಿಪರ ಆಲೋಚನೆಗಳು ಹೆಚ್ಚು ಮುನ್ನೆಲೆಗೆ ಬರುತ್ತಿವೆ. ವೈಜ್ಞಾನಿಕ ತಳಹದಿಯನ್ನು ಹೊಂದಿಲ್ಲದ ಹಲವಾರು ವಿಚಾರ- ರೂಢಿಗಳನ್ನು ಕುರಿತಂತೆ ಜನರು ಕಾಲಕಾಲಕ್ಕೆ ಪ್ರಶ್ನಿಸುತ್ತಾ ಬಂದಿರುತ್ತಾರೆ. ಸಂಪ್ರದಾಯವೆಂದು ಕುರುಡಾಗಿ ಯಾವುದನ್ನೂ ಅನುಕರಿಸಬಾರದು ಎನ್ನುವ ಪ್ರಜ್ಞೆ ಇತ್ತೀಚೆಗೆ ಹೆಚ್ಚು ಜಾಗೃತವಾಗುತ್ತಿದೆ. ಪ್ರಶ್ನಿಸುವ ಮೂಲಕ ತಮ್ಮ ಒಳದನಿಗೆ ಯುವಜನತೆ ಹೆಚ್ಚು ಕಿವಿಗೊಡುತ್ತಿದ್ದಾರೆ. 

    ಸಮೂಹ ಪ್ರಜ್ಞೆ ಜಾಗೃತವಾಗಬೇಕಾದರೆ, ಸಾಮಾಜಿಕರ ವೈಯಕ್ತಿಕವಾದ ನಿಲವುಗಳು ಸ್ಪಷ್ಟವಾಗಿರಬೇಕು. ತರ್ಕಬದ್ಧವಾಗಿರಬೇಕು. ದೈನಂದಿನ ವಿವರಗಳಲ್ಲಿ ವಿಜ್ಞಾನವನ್ನು ಕೇವಲ ಉಪಯೋಗಿತ ಉಪಕರಣಗಳಿಗೆ ಸೀಮಿತಗೊಳಿಸಿಕೊಳ್ಳದೇ, ವಿವೇಚನೆಗೆ ಮೂಲ ಇಂಧನವಾಗಿಸಿ ಕೊಳ್ಳಬೇಕು. ವೈಜ್ಞಾನಿಕ ಬುನಾದಿಯಿಲ್ಲದ ಆಚರಣೆಗಳನ್ನು ತರ್ಕಬದ್ಧವಾಗಿ ವಿಶ್ಲೇಷಿಸಿ ಖಂಡಿಸುವ ಪ್ರಾಮಾಣಿಕ ಕಠೋರತೆಯನ್ನು ಬೆಳೆಸಿಕೊಳ್ಳಬೇಕು. ಹಾಗೆಯೇ ವಿಚಾರ ಎನ್ನುವುದು ಕಿಡಿಗೇಡಿ ಚಟುವಟಿಕೆಗಳಿಗೆ ನಾಂದಿ ಹಾಡದೆ, ಸಾಮೂಹಿಕ ಒಳಿತಿಗೆ ದಾರಿದೀಪ ಆಗುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ವಿದ್ಯಾವಂತರ ಆದ್ಯತಾ ಜವಾಬ್ದಾರಿಯಾಗಬೇಕು. 

*************************************

ವಸುಂಧರಾ ಕದಲೂರು. 

೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ  ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ.

7 thoughts on “

  1. ಅಭಿನಂದನೆ ವಸುಂಧರಾ…ಒಳ್ಳೆಯ ಬರಹ.ತೊರೆಯ ಹರಿವು ಕಡಲ ಸೇರಲಿ.

  2. ಅರ್ಥಪೂರ್ಣ ಬರಹ ವೈಚಾರಿಕ ಪ್ರಜ್ಞೆ ಅದರ ಹುಟ್ಟು ಮತ್ತು ಬೆಳವಣಿಗೆ ಬಗ್ಗೆ ಬಹಳ ವಿಸ್ತಾರವಾಗಿ ತಿಳಿಸಿದ್ದೀರಿ ಆಭಿನಂದನೆಗಳು ಮೇಡಮ್

    1. ಧನ್ಯವಾದಗಳು ನಿಮ್ಮ ಪ್ರೋತ್ಸಾಹಕ ನುಡಿಗಳಿಗೆ

  3. ಯಾವುದೇ ವೈಚಾರಿಕ ಚಿಂತನೆ ಹೀಗಿರಬೇಕು ಹೀಗೆಯೇ ಇರಬೇಕು ಎಂಬ ನಿರ್ಧಿಷ್ಟ ನಿಲುವುಗಳಿರದೆ ಯೋಚಿಸುವ ಯೋಚಕರಿಗೆ ಯೋಚಿಸುವ ತಮ್ಮದೇ ಶೋಧನಾ ದಾರಿಯಲ್ಲಿ ನಡೆಯುವ ಸ್ವಾತಂತ್ಯ ಯೋಚನೆಗೆ ಅರವಿನ ತೊರೆ ಹರಿಯಲು ಸಹಕಾರಿಯಾದ ಚಿಂತನೆ.ಈ ಎಳೆ ಹರಿವ ತೊರೆಯಲ್ಲಿ ಗೋಚರಿಸುತ್ತಿಲ್ಲ.

  4. ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮೇಡಂ, ಇನ್ನು ಹೆಚ್ಚೆಚ್ಚು ಚಿಂತನೆಗಳನ್ನು ಬರೆಯಲು ನಿಮಗೆ ಇನ್ನಷ್ಟು ಶಕ್ತಿಯನ್ನು ದೇವರು ಕೋಡಲೆಂದು ಪ್ರಾರ್ಥಿಸುವೆ. ದನ್ಯವಾಧಗಳು ಮೇಡಂ.

Leave a Reply

Back To Top