
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಮಾನವೀಯ ಸಂಬಂಧಗಳ ಅವಶ್ಯಕತೆ

ಮೂಲತಃ ಮನುಷ್ಯ ಸಮಾಜ ಜೀವಿ. ಸಾಮಾಜಿಕ ಸಂಬಂಧಗಳು ಆತನ ಬದುಕಿನ ಅವಶ್ಯಕತೆ. ನಮ್ಮ ಮನೆಯ ಶುಭಾಶುಭ ಕಾರ್ಯಕ್ರಮಗಳಲ್ಲಿ ನಮ್ಮವರ ಪಾಲ್ಗೊಳ್ಳುವಿಕೆ ಅತ್ಯವಶ್ಯಕ. ಸುಖದ, ಸಂತೋಷದ ಕ್ಷಣಗಳಲ್ಲಿ ನಮ್ಮ ಖುಷಿಯನ್ನು ಹಂಚಿಕೊಳ್ಳಲು, ಸಂತಸವನ್ನು ಇಮ್ಮಡಿಗೊಳಿಸಲು ನಮಗೆ ಸಾಮಾಜಿಕ, ಕೌಟುಂಬಿಕ ಸಂಬಂಧಗಳು ಬೇಕು. ಅಂತೆಯೇ ದುಃಖದ, ನೋವಿನ ಘಳಿಗೆಗಳಲ್ಲಿ ನಮ್ಮ ನೋವನ್ನು ಶಮನಗೊಳಿಸುವ ಪರಿಹಾರವನ್ನು ಸೂಚಿಸುವ ನಾವು ಇರ್ತೀವಿ ಬಿಡು, ತಲೆ ಕೆಡಿಸಿಕೊಳ್ಳಬೇಡ ಎಂದು ಧೈರ್ಯ ಹೇಳುವ ಸಾಮಾಜಿಕ ಸಂಬಂಧಗಳು ನಮ್ಮ ಜೀವನಕ್ಕೆ ಮರುಭೂಮಿಯಲ್ಲಿರುವ ಓಯಸಿಸ್ ನಂತೆ ಅತ್ಯವಶ್ಯಕ.
ವಿವಾಹವೇ ಇರಲಿ ಮಸಣವೇ ಇರಲಿ ನಮ್ಮವರ ಹಾಜರಿಯ ಅಗತ್ಯ ನಮಗಿದೆ. ನಮ್ಮ ಹೆಣವನ್ನು ನಾವೇ ಹೊರುವುದಿಲ್ಲ, ಅದನ್ನು ಹೊರಲಾದರೂ ನಮಗೆ ನಮ್ಮ ಸಂಬಂಧಿಗಳು, ಸ್ನೇಹಿತರು, ಬಂಧು ಬಾಂಧವರು ಬೇಕೇ ಬೇಕು.
ನಮ್ಮ ಜೀವನದ ಅತ್ಯಂತ ನಿರಾಶಾದಾಯಕ ಸಮಯದಲ್ಲಿ ನಮಗೆ ಬೇರೊಬ್ಬರ ಸಲಹೆಯ ಅವಶ್ಯಕತೆ ಇರುವುದಿಲ್ಲ. ಯಾರ ಸಲಹೆಗಳೂ ನಮ್ಮ ಮನಸ್ಸಿಗೆ ಸಮಾಧಾನವನ್ನು ಕೊಡುವುದಿಲ್ಲ,ಅಂತಹ ಸಂದಿಗ್ಧದ ಸಮಯದಲ್ಲಿ ನಮಗೆ ಬೇಕಾಗಿರುವುದು ಮಾನವೀಯ ಸಂಬಂಧಗಳಾದ ಸಹಾನುಭೂತಿ, ಸಹನೆ, ಪ್ರೀತಿ, ನಂಬಿಕೆ ಮತ್ತು ವಿಶ್ವಾಸಗಳು. ನಿನ್ನ ಯಾವುದೇ ಕಷ್ಟದಲ್ಲೂ ನಾನು ನಿನ್ನ ಜೊತೆಗಿದ್ದೇನೆ ಎಂಬ ಸಾಂತ್ವನ ನಾನು ಒಬ್ಬಂಟಿಯಲ್ಲ ಎಂಬ ಭಾವವನ್ನು ನೀಡುತ್ತದೆ. ಈ ರೀತಿಯ ಅಗಾಧ ಭರವಸೆಯು ಬದುಕುವ ಹೊಸ ಹುಮ್ಮಸ್ಸನ್ನು ನೀಡುತ್ತದೆ.
ನೋವು ಎನ್ನುವುದು ಸಂಪೂರ್ಣ ವೈಯುಕ್ತಿಕವಾದ ಮಾನಸಿಕ ಸ್ಥಿತಿಯಾಗಿದ್ದು ಅದನ್ನು ನಾವು ಮಾತ್ರ ಎದುರಿಸಬೇಕು… ಆದರೆ ಆ ನೋವಿನ ಸಂದರ್ಭದಲ್ಲಿಯೂ ಯಾರಾದರೂ ನಮ್ಮ ಜೊತೆಗಿದ್ದಾರೆ ಎಂಬ ಸಹಾನುಭೂತಿ ನಮ್ಮನ್ನು ಕುಸಿಯದಂತೆ ತಡೆಯುತ್ತದೆ. ಅದೆಷ್ಟೇ ನಾನು ನನ್ನನ್ನು ಕಳೆದುಕೊಂಡಿದ್ದೇನೆ ಎಂದು ಮನಸ್ಸು ಖಿನ್ನವಾದರೂ ಇಂತಹ ಸಮಯದಲ್ಲಿ ನನ್ನವರು ನನ್ನ ಜೊತೆಗಿದ್ದಾರೆ ಎಂಬ ಭಾವವೇ ಆಸರೆಯನ್ನು ಕಲ್ಪಿಸುತ್ತದೆ.
ಇಂತಹ ಘಳಿಗೆಗಳಲ್ಲಿ ಮೌನ ಅತ್ಯುತ್ತಮ ಸಂವಾಹಕವಾಗಿದ್ದು ಮೌನ ಜೊತೆಯಾಗಿರುವಿಕೆಯು ಧೈರ್ಯ ನೀಡುತ್ತದೆ. ಈ ಮೌನ ಕೊಡುವಷ್ಟು ಪರಿಶುದ್ಧವಾದ ಆಪ್ತತೆಯನ್ನು ಮಾತುಗಳು ಕಟ್ಟಿಕೊಡಲು ಸಾಧ್ಯವಿಲ್ಲ. ಪ್ರೀತಿಯ ಪರಿಪೂರ್ಣ ಭಾವ ನಮ್ಮನ್ನು ನಾವು ಯಾರು ಎಂದು ಗುರುತಿಸಿಕೊಳ್ಳಲು ಸಹಾಯವೆಸಗುತ್ತದೆ.
ಆದ್ದರಿಂದಲೇ ನಮ್ಮ ಪ್ರಾಚೀನರು
ಓಂ ಸಂಘಚ್ಛದ್ವಂ ಸಂವಧದ್ವಂ
ಸಮ್ಮೋಮನಾಂಸಿ ಜಾನತಾಂ
ದೇವಾ ಭಾಗಮ್ ಯಥಾ ಪೂರ್ವೆ
ಸಂಜಾನಾನಾ ಉಪಾಸತೆ
ಎಂದು ಪ್ರಾರ್ಥನೆಗೈಯುತ್ತಿದ್ದರು. ಈ ಪ್ರಾರ್ಥನೆಯ ತಾತ್ಪರ್ಯ ಹೀಗಿದೆ
ನಾವೆಲ್ಲರೂ ಸಂಘಟಿತರಾಗಿ ಒಂದು ಉನ್ನತ ಧ್ಯೇಯದೆಡೆಗೆ ಸಾಗೋಣ. ಸಂಘಟನೆಯ ನಿಯಮಗಳನ್ನು ಪಾಲಿಸೋಣ. ವಿಶಾಲ ಹೃದಯ ಮತ್ತು ಮನಸ್ಸನ್ನು ಹೊಂದಿದವರಾಗಿ ಸಾಮರಸ್ಯದಿಂದ ಜೊತೆಯಾಗಿ ಕಾರ್ಯ ನಿರ್ವಹಿಸೋಣ…. ಎಂಬ ಅರ್ಥವನ್ನು ಹೊಂದಿರುವ ಈ ಪ್ರಾರ್ಥನಾ ಮಂತ್ರವನ್ನು ನಾವು ಯಾವುದೇ ಭಾರತೀಯ ಯೋಗ ಮತ್ತು ಆಧ್ಯಾತ್ಮದ ಕಾರ್ಯಕ್ರಮದ ಅಂತ್ಯದಲ್ಲಿ ಸಾಮೂಹಿಕವಾಗಿ ಉಚ್ಚರಿಸಲು ಕಾರಣವಾಗಿರುವುದು ಇದರಲ್ಲಿರುವ ಉನ್ನತ ಧ್ಯೇಯ. ಸಾಂಘಿಕ ಬದುಕಿನ ಮಹತ್ವವನ್ನು ಸಾರುವ ಈ ಮಂತ್ರೋಚ್ಚಾರಣೆ ನಮ್ಮ
ಮೈ ಮನಗಳಲ್ಲಿ ಭ್ರಾತೃತ್ವದ ಭಾವವನ್ನು ತುಂಬಿ ನಮ್ಮನ್ನು ಸಂಘ ಜೀವಿಯನ್ನಾಗಿಸುತ್ತದೆ.
ವೀಣಾ ಹೇಮಂತ್ ಗೌಡ ಪಾಟೀಲ್
