ಬಿಳಿಯ ಬಾವುಟ ಹಿಡಿದ ಕವಿತೆಗಳು

ಪುಸ್ತಕ ಸಂಗಾತಿ

           ಶಾಂತಿ- ಪ್ರೀತಿಯ ಬಿಳಿಯ ಬಾವುಟ ಹಿಡಿದ ಕವಿತೆಗಳು

ಕವಿತೆ ಅಂತರಂಗದ ಕನ್ನಡಿ ಆಗುವಷ್ಟರ ಮಟ್ಟಿಗೆ ಸಾಹಿತ್ಯದ ಇನ್ನ್ಯಾವ ಪ್ರಕಾರವೂ ಆಗುವುದಿಲ್ಲ ಎಂಬ ಮಾತು ಕವಿಯತ್ರಿ ಕವಿತಾ ಕುಸುಗಲ್ಲರ ’ಬೆಳಕಿನ ಬಿತ್ತನೆ’ ಕವನ ಸಂಕಲನ ಓದಿದಾಗ ತಟ್ಟಂತ ನೆನಪಾಯಿತು.

ಡಾ.ಕವಿತಾ ಕುಸುಗಲ್ಲ ಅವರ ಮೂರನೆಯ, ಒಂದು ರೀತಿಯ ವಿಭಿನ್ನವಾದ ಸಂಕಲನವಿದು. ಈ ಸಂಕಲನದಲ್ಲಿ ಅವರು ನಾನು, ನೀನು, ಆನು, ತಾನು ಎಂದು ನಾಲ್ಕು ಭಾಗಗಳಾಗಿ ಮಾಡಿಕೊಂಡು ಒಂದೊಂದು ಭಾಗದಲ್ಲಿ ಮಹಿಳೆಯಾಗಿ ಮಗ, ಮಗಳು, ಗಂಡನನ್ನು ಸಂಬೋಧಿಸಿ, ಜೀವನಕ್ಕೆ ಸಂಬಂಧಿಸಿದಂತೆ ಹಾಗೂ ಸಾಮಾಜಿಕ, ಪರಿಸರ, ನಾಡು ನುಡಿ, ಸಂಸ್ಕೃತಿ ಕುರಿತಂತೆ ವೈಯಕ್ತಿಕ, ಕೌಟುಂಬಿಕ, ಆಧ್ಯಾತ್ಮ-ತಾತ್ವಿಕ, ಮತ್ತು ಸಾಮಾಜಿಕ ನೆಲೆಗಳು ಈ ನಿಟ್ಟಿನಲ್ಲಿ ಒಂದಕ್ಕೊಂದು ತಳುಕು ಹಾಕಿಕೊಂಡಿರುವುದನ್ನು ಅವರು ತಮ್ಮ ಕವಿತೆಗಳಲ್ಲಿ ಕಟ್ಟಿಕೊಡುತ್ತಾ ಹೋಗುತ್ತಾರೆ.

ದೈನಂದಿನ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೆಣ್ಣಾಗಿ, ಹೆಂಡತಿಯಾಗಿ, ತಾಯಾಗಿ ನಾಗರೀಕಳಾಗಿ ತಮ್ಮ ಅನುಭವಗಳಿಗೆ ದಕ್ಕಿದ ಎಲ್ಲ ವಿಷಯ ವಸ್ತುಗಳನ್ನು ತಮಗೆ ಹೇಳಬೇಕೆನಿಸಿದ ಸರಳ ನೇರ ನುಡಿಗಳಿಂದ ಕವಿತೆಯಾಗಿಸಿದ್ದಾರೆ. ಸಾಕಷ್ಟು ಕವಿತೆಗಳು ತುಂಬಾ ಪುಟ್ಟದಾಗಿ ಹನಿಗವನಗಳಂತೆ ಅನಿಸಿದರೂ ಅರ್ಥವ್ಯಾಪ್ತಿಯಲ್ಲಿ ಅಗಾಧವಾದವುಗಳೂ ಆಗಿವೆ. ಆ ಕ್ಷಣಕ್ಕೆ ಅನಿಸಿದ್ದನ್ನುಯಾವ ಕವಿತಾ ಲಕ್ಷಣಗಳನ್ನೂ ಅಂಟಿಸದೆ, ಯಾವ ಕುಸುರಿ ಕೆಲಸ ಮಾಡದೆ ನಮ್ಮ ಮುಂದಿಡುತ್ತಾರೆ. ’ಇಸಂ’ ಗಳಿಗೆ ಒಳಗಾಗದೆ ಬರೆಯುವುದೂ ಅವರ ಐಡೆಂಟಿಟಿ ಆಗಿರಬಹುದು. ಅವರ ಅನಿಸಿಕೆಗಳು, ಭಾವನೆಗಳು ಪುಟ್ಟ ಪುಟ್ಟ ಕವಿತೆಗಳಾಗಿ ಮೈತಳೆದಿರುವಾಗ ನನಗನಿಸಿದ್ದಿಷ್ಟೇ…ಅಂದವಾದ ಹೂವಿಗೆ ರಂಗು ಬಳಿವುದೇತಕೆ  ಎಂದು…

ಸದಾ ಹೆಣ್ಣು ಅನುಭವಿಸುವ ಆಡಲಾರದ ಅನುಭವಿಸಲಾರದ ಸಾವಿರ ಒಳತೋಟಿಗಳು, ತಲ್ಲಣಗಳು ಕವಿತೆಯಾಗಿ ಬರೆಸಿಕೊಂಡಿವೆ. ಇಲ್ಲಿ ಎಲ್ಲಾ ಧಾರಣಶಕ್ತಿಯ ತಾಯಿ, ತಾಯ್ತನದ ಅಭಿವ್ಯಕ್ತಿ ಉಂಟು. ಅಸಹಾಯಕತೆ , ಕುತೂಹಲ, ಸಂಭ್ರಮ, ನಿವೇದನೆ, ವಿಷಣ್ಣತೆ ಎಲ್ಲವೂ ಅಭಿವ್ಯಕ್ತಿಗೊಂಡಿದೆ.  ಹೆಣ್ಣಾಗಿ, ತಾಯಾಗಿ, ಹೆಂಡತಿಯಾಗಿ ಹೇಗೇ ಆದರೂ ಹೆಣ್ಣಿನ ಭಾವ ಪ್ರಪಂಚವನ್ನು ಅನಾವರಣಗೊಳಿಸುವ ಕವನಗಳಾಗಿ ಹುಟ್ಟಿಕೊಂಡಿವೆ. ಮಗಳಾಗಿ ಬಾ, ಪುರುಷಾರ್ಥ  ಸಾಧನೆಗೆ, ಗಾಂಧಾರಿ, ಸೀತೆ, ಬೆಳಕು, ಬಿನ್ನಹ, ನಾನೀಗ ಬದಲಾಗಿದ್ದೇನೆ, ಕಳೆದುಕೊಂಡಿದ್ದೇನೆ ಮುಂತಾದ ಹಲವು ಕವಿತೆಗಳಲ್ಲಿ ಗಂಡಸಿನ ಅಹಂಗಳನ್ನು ನಯವಾಗಿ ದಾಖಲಿಸುತ್ತಾ ಅವನ ಅಹಂ ಕಳೆದು ಮನುಷ್ಯನನ್ನಾಗಿಸುವಲ್ಲಿ ಸಾರ್ಥಕತೆ ಕಾಣಬಯಸುವುದು ಗೋಚರಿಸುತ್ತದೆ. ಯಾವ ಸಾಲುಗಳಲ್ಲೂ ಕವಿಯತ್ರಿ ಆಕ್ರೋಶ ದಾಖಲಿಸುವುದಿಲ್ಲ. ಆದರೂ ಪುರುಷಾಕಾರವನ್ನು ನಯವಾಗಿ ಹೇಳುತ್ತಾರೆ. ಅದೇ ಈ ಕವಿತೆಗಳ ಸೊಬಗು ಹಾಗೂ ಆಶಯ ಕೂಡ…

ಇನ್ನು ತಾಯಿ ಮಕ್ಕಳ ವಾತ್ಸಲ್ಯ ಕುರಿತು ಕವಿತಾ ಅವರು ಸಂಪೂರ್ಣ ವಾತ್ಸಲ್ಯಮಯಿ ಅಮ್ಮನೇ ಆಗಿ ಗೆದ್ದಿದ್ದಾರೆ. ಕೆ ಎಸ್ ನರಸಿಂಹಸ್ವಾಮಿಯವರು ಬರೆದಿರುವ ಮಕ್ಕಳ ಕುರಿತು ಕೆಲವು ವಾತ್ಸಲ್ಯ ಗೀತೆಗಳ ಸಾಲುಗಳನ್ನು ಕವಿತಾ ಅವರ ರಚನೆಗಳು ಮತ್ತೆ ಮತ್ತೆ ನೆನಪಿಸುತ್ತವೆ. “ ಹಾಲಿನಂತೆ ಅವನ ಮನಸ್ಸು/ ದುಂಡು ಮುತ್ತಿನಂತೆ ನುಡಿ/ ಅವನ ಕೇಕೆ ನನ್ನ ಕನಸು/ದೇವರವನು ನಾನು ಗುಡಿ” ಎಂಬ ಕವಿಯ ಸಾಲುಗಳಲ್ಲಿ “ ಅಮ್ಮನ ಬಂಗಾರ/ ಅಪ್ಪನ ಮಂದಾರ/ ಮಾತಿನ ಮಲ್ಲಿಗೆ / ಕುಣಿವ ಕಾಮನ ಬಿಲ್ಲೇ ಬಾ  “ ಎಂಬ ಕವಯಿತ್ರಿಯ ಸಾಲುಗಳಿಗೆ ನೆನಪಾಗುತ್ತವೆ. ಮಕ್ಕಳ ಪ್ರೀತಿಯ ಒಡನಾಟವೇ ತಾಯ್ತಂದೆಯರ ಭಾಗ್ಯ, ಮಕ್ಕಳಿರುವ ಮನೆಯೇ ಸೌಭಾಗ್ಯದ ನಿಧಿ ಎಂಬ ಹಿರಿಯರ ಮಾತುಗಳನ್ನೂ ಸಾಬೀತು ಪಡಿಸುವಂತೆ ಕವಿಯತ್ರಿ ತಾಯಿ ಮಗಳು ವಾತ್ಸಲ್ಯಗೀತಗಳಲ್ಲಿ ಅಪ್ಪಟ ತಾಯ್ತನದ ಹೊಳೆಯನ್ನೇ ಹರಿಸಿದ್ದಾರೆ. ಎಷ್ಟು ಬರೆದರೂ ತೃಪ್ತಿ ಇಲ್ಲದಂತೆ ತಾಯಿಯಾಗಿ ದಕ್ಕಿದ ಅನುಭವಗಳ ಕಟ್ಟಿಕೊಡುತ್ತಾ ಅರಿವಿನ ದಾರಿ ಮಗುವಿನ ದಾರಿ ಎಂದು ಮನಗಾಣಿಸುತ್ತಾರೆ. ಪುಟ್ಟ ಕಂದಮ್ಮಗಳು ತೊಟ್ಟಿಲಲ್ಲಿ ಮೈಮುರಿದು ಬಟ್ಟಲುಗಣ್ಣು ತೆರೆದು ಬೆಳಗಾಯಿತು (ದೀಪದ ಮಲ್ಲಿ-ಕೆ.ಎಸ್.ನ.) ಎಂಬ ಕವಿಯ ಸಾಲಂತೆ ಬಾಳ ಬೆಳಕು ಯಾವುದು ಎಂಬುದನ್ನು  ಎಂಬುದನ್ನು ಎತ್ತಿ ಹಿಡಿದಿರುವುದು ಚಂದವೆನಿಸುತ್ತದೆ..

ಇನ್ನು “ಕತ್ತಲೆಯಲ್ಲಿ ಬೆಳಕಿನ ಬಿತ್ತನೆ” ಕವಿತೆಯಲ್ಲಿ ಮೊದಲ ಸಾಲುಗಳಲ್ಲೇ ಸಂಕಲನದ ಶೀರ್ಷಿಕೆಯ ಆಶಯಕ್ಕೆ ಸಂಪೂರ್ಣ ಒತ್ತು ಕೊಟ್ಟಂತೆ ತುಂಬಾ ಚಂದವಾಗಿ ರಚಿತವಾಗಿದೆ. “ ರಾತ್ರಿ ಮಲಗಿದ ಮೇಲೆ ನಮ್ಮ ಹಗಲುಗಳೇಳುತ್ತವೆ” ಎಂದು ಆರಂಭವಾಗುವ ಈ ಸಾಲುಗಳೇ ಅದ್ಭುತ… ರಮ್ಯ ಕಲ್ಪನೆ… ಎಲ್ಲ ಹೆಣ್ಣುಗಳ ಅಸಹಾಯಕತೆ ಅಥವಾ ಪರಿಸ್ಥಿತಿಯ ವಕಾಲತ್ತು ವಹಿಸಿದಂತ ಕವಿತೆ ಇದು ಎನ್ನಬಹುದು. ಆಧುನಿಕತೆಯ ಈ ಸಂಕ್ರಮಣ ಕಾಲದಲ್ಲಿ ಹೆಣ್ಣು ಸಾಂಸಾರಿಕ ಹಾಗು ಸಾರ್ವಜನಿಕವಾಗಿ ಅಥವಾ ಸಾಮಾಜಿಕವಾಗಿ ಅಥವಾ ವೃತ್ತಿಪರಳಾಗಿ ಹೊಣೆ ಹೊತ್ತು ಎಷ್ಟು ನಿಸ್ಸಹಾಯಕ ಪರಿಸ್ಥಿತಿಯಲ್ಲಿದ್ದಾಳೆ ಎಂದರೆ ಮನೆ ಮಕ್ಕಳು ಸಂಸಾರದ ಹೊಣೆಯನ್ನು ಅವಳಿಗೆ (ಹೊರಿಸಿದ್ದು) ಬಿಡಲಾಗುತ್ತಿಲ್ಲ, ತನ್ನ ಸ್ವಂತ ಬದುಕನ್ನೂ ರೂಪಿಸಿಕೊಳ್ಳಲು ಆಗುತ್ತಿಲ್ಲ. ಯಾವುದೋ ಕಾಣದ ಒಂದು ಅದೃಶ್ಯ ಮಂತ್ರದಂಡದಂತೆ ಅವಳನ್ನು ಕುಟುಂಬದ ಜವಾಬ್ದಾರಿಗಳು ನಿಯಂತ್ರಿಸುತ್ತಿರುವುದೆಂತಹ ದುರಂತ ಎನಿಸುತ್ತದೆ. ಪುರುಷನಿಗಿರುವ ಯಾವ ಸಹಕಾರ ಸೌಲಭ್ಯಗಳೂ ಅವಳಿಗೆ ಯಾವ ಅಡೆ ತಡೆಯಿಲ್ಲದೆ ಲಭ್ಯವಾಗುವುದಿಲ್ಲ..( ಬೇಕು ಎಂದರೆ ಎಲ್ಲವನ್ನೂ ಹೋರಾಡಿಯೇ ಪಡೆಯಬೇಕು) ಎಂಥಹುದೇ ಮನೆಯಲ್ಲಿರಲಿ ಅವಳು ತಾಯಿ, ಹೆಂಡತಿ, ಮಗಳು, ಜವಾಬ್ದಾರಿ ತೋರಿಸಬೇಕಾದ ಗೃಹಿಣಿಯಾಗಿ ಮೊದಲು ಕಾಣಬೇಕು. ಆನಂತರ ಅವಳು ಅವಳ ’ಹೆಸರಿ’ನವಳು. ಇದು ಸಾರ್ವಕಾಲಿಕ ಸತ್ಯವಾಗಿದೆ. ಹಾಗಾಗಿಯೇ ಅವಳಿಗೆ ರಾತ್ರಿ ಮಲಗಿದ ಮೇಲೆ ನಮ್ಮ ಹಗಲುಗಳೇಳುತ್ತವೆ ಎನ್ನುವಂತಾಗಿರುವುದು. ಆಗಲಾದರೂ ಅವಳ ಹಗಲಿನ ಯೋಚನೆ ಯೋಜನೆಗಳನ್ನುಇರುಳಲ್ಲಿ ಸಾಕಾರಗೊಳಿಸಿಕೊಳ್ಳಲು ಸಮಯ ಸಿಗುತ್ತದೆಯೇ? ಆಗಲೂ ಆಕೆ ತಾಯಾಗಿ ’ಪೊರೆವ’ ಕರ್ತವ್ಯ ಮುಗಿಸುವಷ್ಟರಲ್ಲಿ ಮತ್ತೆ ಬೆಳಕಾಗಿಬಿಡುವುದು ಎಂತಹ ಚೋದ್ಯ ನೋಡಿ…ಅವಳ ’ಸಮಯ’ ಅವಳಿಗೆ ಸಿಕ್ಕುವುದೇ ಇಲ್ಲ.

ಇಷ್ಟಾದರೂ ಇಲ್ಲಿನ ಕವಿತೆಗಳಲ್ಲಿ ಕತ್ತಲಿನ ದಾರಿಗೆ ಬೆಳಕ ನೀಡುವ ಕಂದೀಲಿನಂತ ಆಶಯವಿದೆ. ಸಾಮಾಜಿಕ, ಸಂಸ್ಕೃತಿ ಪರಿಸರ ನಾಡುನುಡಿಗಳ ಕುರಿತ ಕವಿತೆಗಳಲ್ಲೂ ಕವಿತಾ ಅವರು ಪ್ರೀತಿಯ, ಶಾಂತಿಯ, ಸತ್ಯದ ಬಿಳಿಯ ಬಾವುಟ ಹಿಡಿದು ಬೆಳಕಿನೆಡೆಗೆ ಸಾಗಲು ಬರುವುದಕ್ಕೆ ಗಮನ ಕೊಡುತ್ತಾರೆ.  ಹಾಗಾಗಿಯೇ ಜೀವನದ ಎಲ್ಲಾ ಮಜಲುಗಳಲ್ಲಿ ಪ್ರೀತಿಯ ಬೆಳಕು ಪಸರಿಸಬೇಕು… ಅದೇ ಸತ್ಯ ಎಂಬ ನಂಬಿಕೆಯೊಂದಿಗೆ ಬರೆಯುತ್ತಾರೆ. ’ಬೆಳಕಿನ ಬಿತ್ತನೆ’ ಯೇ ಸೊಗಸಾದ ಶೀರ್ಷಿಕೆ .ಅಜ್ನಾನದ ಕತ್ತಲಿಗೆ ಪ್ರೀತಿಯ ಬೆಳಕಿನ ಬಿತ್ತನೆ ಬಿತ್ತಿ ಸಹನೀಯ – ಸಮಬಾಳ್ವೆಯ ಆಶಯ ಹೊತ್ತ ಪುಟ್ಟ ಪುಟ್ಟ ಕವಿತೆಗಳು ಸಾಲುದೀಪದಂತೆ ಸಂಕಲನದುದ್ದಕ್ಕೂ ಚೆಂದದ ಬೆಳಕು ಬೀರುತ್ತಾ ಕುಳಿತಿವೆ. ಮಹಿಳಾ ಸಂವೇದನೆಯ ಸೂಕ್ಷ್ಮ ಒಳನೋಟಗಳನ್ನು ಸರಳವಾಗಿ ದಾಖಲಿಸುವ ಆಶಯದಲ್ಲಿ ಕವಿತೆಗಳು ಮನ ತಾಕುತ್ತವೆ.


**********************

ಮಮತಾಶಂಕರ್

6 thoughts on “ಬಿಳಿಯ ಬಾವುಟ ಹಿಡಿದ ಕವಿತೆಗಳು

  1. ಒಳ್ಳೆಯ ವಿಶ್ಲೇಷಣೆ ಮಮತಾ.ಚೆಂದಕ್ಕೆ ಹಿಡಿದಿಟ್ಟಿರುವಿರಿ

Leave a Reply

Back To Top