ಭಗತ್ ಸಿಂಗ್ ಮಾತೆ ಮೈಸೂರಿನಲ್ಲಿ

ನೆನಪು

ಭಗತ್ ಸಿಂಗ್ ಮಾತೆ ಮೈಸೂರಿನಲ್ಲಿ

ಡಾ. ಅರಕಲಗೂಡು ನೀಲಕಂಠ ಮೂರ್ತಿ

ಸರಿಸುಮಾರು ಐದು ದಶಕಗಳ ಹಿಂದಿನ ಸಮಾಚಾರ. ಸಾವಿರದ ಎಪ್ಪತ್ತು ಎಪ್ಪತ್ತೊಂದರ ಸಮಯ. ನನಗೆ ಕರಾರುವಾಕ್ಕಾಗಿ ದಿನಾಂಕ ಮತ್ತು ಮಾಹೆ ಸದ್ಯ ಜ್ಞಾಪಕ ಇಲ್ಲ. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ನಾನು ನಾಲ್ಕನೇ ವರ್ಷದಲ್ಲಿ ಓದುತ್ತಿದ್ದಾಗ. ಆ ಕಾಲಕ್ಕೆ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಹಾಗೂ, ಅದರಿಂದಾಗಿ ಸಾಂಸ್ಕೃತಿಕ ಚಟುವಟಿಕೆಗಳು ಉತ್ತುಂಗಕ್ಕೆ ಏರಿದ್ದ ಕಾಲ. ಈಗ ಹೇಗೋ ನಾ ಕಾಣೆ. ವಾಸ್ತವವಾಗಿ ವಾರ್ಷಿಕೋತ್ಸವದಲ್ಲಿ ನಾಟಕ ನಿರ್ದೇಶನಕ್ಕೆ ಸಿನಿಮಾ ಹಿರಿಯ ನಟರಾಗಿದ್ದ ಸಂಪತ್ ಅವರೇ ಸ್ವತಃ ಬರುತ್ತಿದ್ದುದು ವಿಶೇಷ; ನಾವು ದಿನಾಂಕ ಮಾತ್ರ ಮುಂಚಿತ ತಿಳಿಸಬೇಕಿತ್ತು. ಅವರ ಮನೆ ಮತ್ತು ಪ್ರಿಂಟಿಂಗ್ ಪ್ರೆಸ್ ನಮ್ಮ ಕಾಲೇಜಿಗೆ ಸನಿಹವೇ ಇವೆ. ಅದೇನೋ ಕಾಣೆ ಸಂಪತ್ ಅವರಿಗೆ ನಮ್ಮ ಕಾಲೇಜಿನ ಬಗ್ಗೆ ಬಹಳ ಅಭಿಮಾನ ಇತ್ತು. ಆ ಸಮಯದಲ್ಲಿ ನಾನು ಲಿಟರರಿ ಕಾರ್ಯದರ್ಶಿಯಾಗಿದ್ದೆ. ಎಲ್ಲ ಥರದ ಸಾಂಸ್ಕೃತಿಕ ಚಟುವಟಿಕೆಗಳೂ ಲಿಟರರಿ ಕಾರ್ಯದರ್ಶಿಯ ಜವಾಬ್ದಾರಿಯಾಗಿತ್ತು. ಜನರಲ್ ಸೆಕ್ರೆಟರಿಯಾಗಿ, ಅತ್ಯಂತ ಕ್ರಿಯಾಶೀಲರಾಗಿದ್ದ ಡಾ. ಉಮೇಶ್ ಕಾಮತ್ (ಸದ್ಯ ಅವರು ಮೈಸೂರಿನ ಸರಸ್ವತಿಪುರಂನ ಕಾಮಾಕ್ಷಿ ಆಸ್ಪತ್ರೆಯ ಮೇಲ್ವಿಚಾರಕರಾಗಿ ಸೇವೆಯಲ್ಲಿದ್ದಾರೆ) ಆವರು ಚುನಾಯಿತರಾಗಿದ್ದರು.

ಶಹೀದ್ ಭಗತ್ ಸಿಂಗ್ ಅವರ ಮಾತೆ, ವಿದ್ಯಾವತಿ ಅವರು, ಮೈಸೂರಿಗೆ ಬರುವ ವಿಷಯ ನಮಗೆ ತಿಳಿಯಿತು. ಪತ್ರಿಕೆಗಳಲ್ಲಿ ಸಹ ಅದರ ಸುದ್ದಿ ಪ್ರಾಮುಖ್ಯ ಪಡೆದಿತ್ತು. ಹಾಗಾಗಿ ಅವರಿಗಾಗಿ ನಮ್ಮ ಕಾಲೇಜಿನಲ್ಲೂ ಕಾರ್ಯಕ್ರಮ ಒಂದನ್ನು ಏರ್ಪಾಡು ಮಾಡಲು ತೀರ್ಮಾನಿಸಿ, ಡಾ.ಕಾಮತ್ ಮತ್ತು ನಾನು ಒಪ್ಪಿಗೆಗಾಗಿ ನಮ್ಮ ಡೀನ್ ಅವರ ಕಛೇರಿಗೆ ಹೋಗಿದ್ದಾಗ, “ರಾಜಕೀಯದವರನ್ನೆಲ್ಲ ಕಾಲೇಜಿಗೆ ಕರೆಯುವುದು ಬೇಡ” ಅಂದು ಆರಂಭಕ್ಕೇ ತಣ್ಣೀರು ಎರಚಿದ್ದರು. ಅವರಿಗೆ ಭಗತ್ ಸಿಂಗ್ ಅವರ ವಿವರ ಇತ್ತ ಮೇಲೆ, “ಇಂತಹ ಕಾರ್ಯಕ್ರಮಕ್ಕೆ ಯಾರು ಬರ್ತಾರೋ ನಾ ಕಾಣೆ” ಅಂತಲೇ ಮನಸ್ಸಿಲ್ಲದೆ ಒಪ್ಪಿದ್ದರು.

ನಮಗಷ್ಟೇ ಸಾಕಾಗಿತ್ತು. ಆಹ್ವಾನ ಒಂದನ್ನು ತಯಾರಿಸಿ, ಡೀನ್ ರವರ ಸಹಿ ಪಡೆದು ನಾನು ಮತ್ತು ಕಾಮತ್ ನೇರ ಭಗತ್ ಸಿಂಗ್ ಅವರ ತಾಯಿ ವಾಸ್ತವ್ಯದಲ್ಲಿದ್ದ ಮೈಸೂರಿನ ಸರಕಾರದ ಅಥಿತಿಗೃಹಕ್ಕೆ ಹೋಗಿದ್ದೆವು. ಎಂಭತ್ತು ವರ್ಷ ವಯಸ್ಸು ಮೀರಿದ ಆ ಮಾತೆ ತಮ್ಮ ಕೊಠಡಿಯಿಂದ ಹೊರಬಂದಾಗ ನಮಗೆ ರೋಮಾಂಚನ. ದೇವತೆಯೊಬ್ಬರ ದರ್ಶನ ಆದಂತಹ ಖುಷಿಯಲ್ಲಿ, ನಾನು ಕಾಮತ್ ಇಬ್ಬರೂ ಸಾಷ್ಟಾಂಗಪ್ರಣಾಮ ಮಾಡಿದ್ದೆವು. ಆ ವಿದ್ಯುತ್ ಕ್ಷಣ ನಮ್ಮ ಬದುಕಿನ ಅಮೋಘ ಘಳಿಗೆ! ಇಂದಿಗೂ ಅದನ್ನು ನೆನೆದಾಗ ಮೈನವಿರೇಳುವುದರ ಜೊತೆಗೆ ಕಣ್ಣುಗಳೂ ತೇವವಾಗುತ್ತವೆ!

ಮಾತೆ ವಿದ್ಯಾವತಿಯವರ ಸಂಗಡ ಅವರ ಪುತ್ರ ಕುಲ್ಬೀರ್ ಸಿಂಗ್ ಹಾಗೂ ಅವರ ಪತ್ನಿ ಬಂದಿದ್ದರು. ನಮ್ಮ ಆಹ್ವಾನವನ್ನು, ಅವರಿಗೆ ಇನ್ನೂ ಅನೇಕ ಕಾರ್ಯಕ್ರಮಗಳು ಇದ್ದರೂ, ಕಿಂಚಿತ್ತೂ ತಕರಾರಿಲ್ಲದೆ ಒಪ್ಪಿದ್ದರು. ಮಾರನೇ ದಿನವೇ ಅವರು ಬರುವವರಿದ್ದರು. ಹಾಗಾಗಿ ನಮಗೆ ತರಾತುರಿ.

ಭಗತ್ ಸಿಂಗ್ ಅವರ ಬಗ್ಗೆ ತಿಳಿಯದೆ ಇರುವವರು ವಿರಳ ಅನಿಸುತ್ತೆ. ಆದರೂ ಆ ವಿರಳರಿಗಾಗಿ ಸಂಕ್ಷಿಪ್ತ:

ಭಗತ್ ಸಿಂಗ್ ಜನನ ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ,   ಫೈಸಲಾಬಾದ್ ಜಿಲ್ಲೆಯ, ಬಂಗ (Banga) ಠಾಣೆಯ, ಐತಿಹಾಸಿಕ ಗ್ರಾಮ, ಖಾಟ್ಕರ್ ಕಲನ್ (Khatkar Kalan) ಎಂಬ ಗ್ರಾಮದಲ್ಲಿ, 1907ನೇ ಇಸವಿಯ ಸೆಪ್ಟೆಂಬರ್ ತಿಂಗಳಿನಲ್ಲಿ. ತಾಯಿ ವಿದ್ಯಾವತಿ, ತಂದೆ ಕಿಷನ್ ಸಿಂಗ್. ಒಡಹುಟ್ಟಿದವರು ಐವರು ಸಹೋದರರು ಮತ್ತು ಮೂವರು ಸಹೋದರಿಯರು. ತಮ್ಮ ಹದಿಮೂರನೇ ವಯಸ್ಸಿಗೇ ಓದಿಗೆ ತಿಲಾಂಜಲಿ ಹೇಳಿ, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುತ್ತಾರೆ. ಬಹಳ ಚಿಕ್ಕ ವಯಸ್ಸಿನಲ್ಲೇ, ಇನ್ನೂ ಯೌವನದ ಇಪ್ಪತ್ತಮೂರರ ವಯಸ್ಸಿಗೇ,  ಮಾರ್ಚ್ 23, 1931ರಂದು, ತಮ್ಮ ಸಹ ಹೋರಾಟಗಾರರಾಗಿದ್ದ ರಾಜಗುರು ಹಾಗೂ ಸುಖದೇವ್ ಅವರೊಡನೆ ಬ್ರಿಟಿಷರಿಂದ ನೇಣುಗಂಬಕ್ಕೆ ಶರಣಾಗುತ್ತಾರೆ, ಈಗಿನ ಪಾಕಿಸ್ತಾನದ ಲಾಹೋರ್ ಜೈಲಿನಲ್ಲಿ. (ಲಾಲ ಲಜಪತ್ ರಾಯ್ ಅವರ ಸಾವಿಗೆ ಕಾರಣನಾಗಿದ್ದ ಪೋಲೀಸ್ ಮುಖ್ಯಸ್ಥನನ್ನು ಕೊಲ್ಲಲು ಹೋಗಿ, ಬದಲಿಗೆ ಜೆ. ಪಿ. ಸಾಂಡರ್ಸ್ ಅವರ ಕೊಲೆಗೆ ಕಾರಣವಾಗಿದ್ದುದಕ್ಕಾಗಿ). ಹುಟ್ಟಿನಿಂದ ಸಿಖ್ ಧರ್ಮೀಯರೇ ಆಗಿಯೂ ಸಹ, ಭಗತ್ ಅವರು ತಲೆ ಕೂದಲ ಕ್ಷೌರವೇ ಅಲ್ಲದೆ, ಮುಖದ ಶೇವ್ ಸಹ ಮಾಡಿಸಿಕೊಳ್ಳುತ್ತಿದ್ದರು;    ತಮ್ಮ ಗುರುತು ಸಿಗಬಾರದೆಂದು. “ಇಂಕಿಲಾಬ್ ಜಿಂದಿಬಾದ್” ಎಂಬ ವೀರಘೋಷಣೆಯನ್ನು ಪ್ರಖ್ಯಾತ ಗೊಳಿಸಿದ್ದು ಅವರು. ಅವರು ಶಹೀದ್ ಭಗತ್ ಸಿಂಗ್ ಎಂದೇ ಪ್ರಸಿದ್ಧರಾದರು – ಇಂದಿಗೂ ಸಹ. ಅಂತಹ ಧೀರ ಪುತ್ರನನ್ನು ದೇಶಕ್ಕೆ ಕೊಡುಗೆ ಕೊಟ್ಟ ಮಹಾತಾಯಿಯ ದರ್ಶನ ಭಾಗ್ಯ ನಮ್ಮ ಹೆಮ್ಮಯಾಗಿತ್ತು. ಮತ್ತು ಅಂತಹ ತಾಯಿಯ ದರ್ಶನ ಭಾಗ್ಯ ನಮ್ಮ ಕಾಲೇಜಿನ ಎಲ್ಲರಿಗೂ ಅಂದು ದೊರಕುವಂತೆಯೂ ಆಗಿತ್ತು!

ನಾಳೆಯೇ ಕಾರ್ಯಕ್ರಮ. ನಮ್ಮ ಡೀನ್ ಬೇರೆ ಕಷ್ಟದಿಂದ ಒಪ್ಪಿದ್ದರು. ಅಂದಮೇಲೆ ಜಯಭೇರಿಯ ಜವಾಬ್ದಾರಿ ನಮ್ಮ ಹೆಗಲ ಮೇಲೆ.

ನಮ್ಮ ಕಾಲೇಜಿನವನೇ ಆದ, ನನಗೆ ಪರಿಚಯವಿದ್ದ, ಬ್ರಿಜ್ ಮೋಹನ್ ಕುಮಾರ್ ಎಂಬ ವಿದ್ಯಾರ್ಥಿಯೊಬ್ಬ, ಮೆಡಿಕಲ್ ಎಕ್ಸಿಬಿಷನ್ ನಡೆದಿದ್ದ ಸಮಯದಲ್ಲಿ ದೊಡ್ಡ ಕಟೌಟ್ ಮಾಡಿದ್ದು ನೋಡಿದ್ದೆ. ಆತನಿಗೇ ಮನವಿ ಮಾಡಿಕೊಂಡು ಒಪ್ಪಿಸಿ, ಅರ್ಧರಾತ್ರಿಯವರೆಗೂ ಎಚ್ಚರ ಆಗಿದ್ದು, ಕಲರ್ ಕಾಗದದಲ್ಲಿ ಇಡೀ ಗೋಡೆಯಷ್ಟು ಎತ್ತರವಿದ್ದ  ಭಗತ್ ಸಿಂಗ್ ಮುಖದ ಚಿತ್ರ ಮಾಡಿಸಿದ್ದೆ. ಅರ್ಧಂಬರ್ಧ ನಿದ್ದೆ ಆದರೂ ಆ ಹುಮ್ಮಸ್ಸು ಮತ್ತು ಮಾರನೆ ದಿನದ ಸಂಭ್ರಮ ಎಲ್ಲವನ್ನೂ ಮರೆಸಿತ್ತು.

ಮತ್ತು ಆ ಮಾರನೆಯ ದಿನ ದಿಢೀರ್ ಬಂದೇಬಿಟ್ಟಿತ್ತು…

ಮಾತೆ ವಿದ್ಯಾವತಿಯವರ ಆಗಮನ ಇನ್ನೂ ಆಗಿರಲಿಲ್ಲ. ಆಗಲೇ ಜನಜಂಗುಳಿ! ಬರೀ ವಿದ್ಯಾರ್ಥಿಗಳೇ ಅಲ್ಲ; ಹೊರಗಿನವರೂ ಬರತೊಡಗಿದ್ದಾಗ ಹೊರಗೆ ಸ್ಪೀಕರ್ ಗಳನ್ನು ಅಳವಡಿಸಬೇಕಾಗಿತ್ತು. ನಮ್ಮ ಡೀನ್ ಅವರಿಗೆ ಜಾತ್ರೆ ಆಗಿದ್ದ ಪ್ರೇಕ್ಷಕರನ್ನು ಕಂಡು ಅಚ್ಚರಿ! ಅಂತೂ ವಯೋವೃದ್ಧ ಮಾತೆ, ಜೊತೆಯಲ್ಲಿ ಭಗತ್ ರವರ ಸಹೋದರ ಕುಲ್ಬೀರ್ ಸಿಂಗ್ ಮತ್ತವರ ಪತ್ನಿ ಬಂದಿಳಿದಾಗ,  ಸಮಗ್ರ ವಾತಾವರಣದಲ್ಲಿ ಹಾಗೂ ಬೀಸುವ ಗಾಳಿಯಲ್ಲಿಯೂ ಸಹ ಹಿಂದೆ ಎಂದೂ ಕಂಡರಿಯದಂಥ ಪುಳಕ! ಇಡೀ ಸಮೂಹದಲ್ಲಿ ಸಾಕ್ಷಾತ್ ಭಗತ್ ಸಿಂಗ್ ಅವರ ದರ್ಶನ ಆದಷ್ಟೇ ಆನಂದ ಮತ್ತು  ಅಂಥ ಪುಣ್ಯ ದೊರಕಿದ್ದಷ್ಟು ಅನಂತ ಸಂತುಷ್ಟತೆ!                

ನಮ್ಮ ಕಾಲೇಜಿನಲ್ಲಿ ಸಾಮಾನ್ಯವಾಗಿ ವಾರ್ಷಿಕೋತ್ಸವ ಬಿಟ್ಟು, ಎಲ್ಲ ಸಮಾರಂಭಗಳು ಜರುಗುತ್ತಿದ್ದುದು ವಿಶಾಲವಾಗಿದ್ದ ಪೆಥಾಲಜಿ ಹಾಲ್ ನಲ್ಲಿ. ಅಂದು ಒಳಹೊರಗಲ್ಲ ಜನರೋ ಜನ! ನನಗಂತೂ ಅಂದು ಅತ್ಯಂತ ಆನಂದ ಕೊಟ್ಟ ಕ್ಷಣವೆಂದರೆ, ಆ ಮಹಾತಾಯಿಯ ಕೊರಳಿಗೆ ಹಾರ ಹಾಕುವ ಕಾಯಕ ನನ್ನದಾಗಿ ಒದಗಿ ಬಂದದ್ದು. (ಆ ಫೋಟೋ ಅಂದಿನ ಪತ್ರಿಕೆಗಳಲ್ಲೂ ಅಚ್ಚಾಗಿದ್ದು, ನನ್ನ ಪತ್ನಿ, ಕಮಲ, ಅದರ ಪ್ರತಿ ಒಂದನ್ನು ಬಹಳ ಜತನದಿಂದ ಇಟ್ಟಿದ್ದರು. ಅದೀಗ ಕಾಣದಾಗಿರುವುದು ವಿಶಾದ).

ಎಂಭತ್ತು ಮೀರಿದ ಮಾತೆ ಕೂತಲ್ಲೇ ತುಂಬುಸಭೆಯನ್ನು ಉದ್ದೇಶಿಸಿ, ತಮ್ಮ ಪುತ್ರ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದನ್ನು  ನೆನೆದಿದ್ದರು. ಅವರ ಇಡೀ ವಂಶವೇ ದೇಶಕ್ಕಾಗಿ ಹೋರಾಡಿದ್ದುದನ್ನು ಸಹ ಜ್ಞಾಪಕ ಮಾಡಿಕೊಂಡಿದ್ದರು. ಕುಲಬೀರ್ ಸಿಂಗ್ ಕೂಡ ಕೆಲ ಕ್ಷಣಗಳು ಮಾತನಾಡಿದ್ದರು. ಅಧ್ಯಕ್ಷ ಭಾಷಣವನ್ನೂ ನಮ್ಮ ಡೀನ್ ಸಾಹೇಬರು ಸಂಕ್ಷಿಪ್ತ ಮಾಡಿದ್ದರು. ಅಂದು ಮಾತಿಗಿಂತ  ಆ ಅಥಿತಿಗಳ ನೋಡಿ ಕಣ್ಣು ತುಂಬಿಸಿಕೊಳ್ಳುವುದೇ ಎಲ್ಲರ ಉದ್ದೇಶ ಆಗಿದ್ದ ಹಾಗೆ! ಒಟ್ಟಿನಲ್ಲಿ ಕಾಲೇಜಿನ ಸುತ್ತಮುತ್ತ ಆ ದಿನ ನೂತನ ಹಬ್ಬವೊಂದರ ವಾತಾವರಣ ಸೃಷ್ಟಿಯಾಗಿದ್ದುದು ಅತಿಶಯೋಕ್ತಿ ಅಲ್ಲ…

ಮಾರನೇ ದಿನ ನಮ್ಮ ಡೀನ್ ನಮ್ಮಕಾರ್ಯಕ್ರಮದ ಆಯೋಜನೆ ಬಗ್ಗೆ ಅತ್ಯಂತ ಖುಷಿಯಿಂದ ಮಾತನಾಡಿದ್ದಾಗ ನಮಗೆ ಸಾರ್ಥಕ ಎನಿಸಿತ್ತು! ಇಂದಿಗೂ, ಈ ಕ್ಷಣಕ್ಕೂ ನನ್ನ ಬದುಕಿನ ಒಂದು ಶ್ರೇಷ್ಠ ದಿನ…ಆ ದಿನ…! ಮತ್ತು ಆ ಮಹಾತಾಯಿಯ ಕಾಲಿಗೆ ದೀರ್ಘದಂಡ ನಮಸ್ಕಾರ ಮಾಡಿದ್ದ …ಆ ಘಳಿಗೆ…!

*****************************************

.

6 thoughts on “ಭಗತ್ ಸಿಂಗ್ ಮಾತೆ ಮೈಸೂರಿನಲ್ಲಿ

  1. ನೀವು ಬರೀ ವೈದ್ಯರಲ್ಲ. ಮಾನವೀಯ ಹೃದಯವುಳ್ಳ ದೇಶಾಭಿಮಾನಿಗಳು

  2. ಹೆಸರು ಬರೆಯದ ತಮಗೆ ಮತ್ತು ತಮ್ಮ ಅಭಿಮಾನದ ಮಾತುಗಳಿಗೆ ಧನ್ಯವಾದಗಳು.

  3. ನಿಮ್ಮ ನೆನಪಿನಾಳದಿಂದ ಮೂಡಿಬಂದಿರುವ ಈ ಲೇಖನ ಸೊಗಸಾಗಿದೆ. ಅಭಿನಂದನೆಗಳು ನೀಲಣ್ಣ.

    ಭಗತ್ ಸಿಂಗ್ ಅವರ ಮಾತೆಗೆ ನಮನಗಳು

  4. ಇಂತಹ ಲೇಖನಗಳು evergreen write-ups. ಪ್ರಸ್ತುತ ಈ ಲೇಖನ ಆಗಾಗ ಜನರಿಗೆ ತಲುಪುತ್ತಿರಬೇಕು. ಬಲು ಹಿಂದೆ ಇದರ ಬಗ್ಗೆ ನೀವೇ ಹೇಳಿದ್ದಿರಿ. ಆದರೂ ಈಗ ಓದಿದಾಗ ಆಗ ಆದಷ್ಟೇ ಪುಳಕ, ರೋಮಾಂಚನ ಈಗಲೂ ಆಗುತ್ತಿದೆ.

Leave a Reply

Back To Top