ಅಂಕಣ ಬರಹ
“ಆಕಾಶವಾಣಿಯ ಅವಕಾಶದಾಕಾಶ”
“ಬರೆದ ಕಥೆ ಹಾಗೇ ಬಿಡುವಂತಿಲ್ಲ. ವಿಳಾಸ ಕೊಡುತ್ತೇನೆ. ಆಕಾಶವಾಣಿಗೆ ಕಳುಹಿಸು. ನೋಡೋಣ! ನೀನು ಎಂತಹ ಕಥೆಗಾರ್ತಿ”.ನಾನು ಬರೆದ ಕಥೆಯೊಂದು ಸರ್ ಗೆ ಸಿಕ್ಕಿ ಗಂಡ- ಹೆಂಡತಿ ಅದನ್ನು ಓದಿ ಮುಂದಿನ ಬಾರಿ ಅವರ ಮನೆಗೆ ಹೋದಾಗ ಇಬ್ಬರೂ ಸೇರಿ ವಿಚಾರಣೆಗೆ ಕಟಕಟೆಯಲ್ಲಿ ನಿಲ್ಲಿಸಿದ್ದರು. ತಲೆತಗ್ಗಿಸಿದವಳ ಪರ ಲಾಯರ್ ಆಗಿ ಅವರ ಶ್ರೀಮತಿ ನಿಂತಿದ್ದರು. ಕೊನೆಗೂ ತೀರ್ಪು ಹೊರಬಿದ್ದಿತ್ತು.
ಚಿಕ್ಕನಡುಕ,ಸಂಭ್ರಮ ಜೊತೆಯಾಗಿತ್ತು. ಆದರೆ ಸರ್ ಗೆ ಆಕಾಶವಾಣಿಯಲ್ಲಿ ಪರಿಚಯವಿದೆ. ಅವರು ಒಂದು ಮಾತು ಸಂಬಂಧಪಟ್ಟವರಿಗೆ ಹೇಳಬಾರದೇ ಎಂಬ ತಳಮಳಕ್ಕೆ ಉತ್ತರ ಎಂಬಂತೆ ನುಡಿದಿದ್ದರು. ” ನಾನು ವಿಳಾಸವಷ್ಟೆ ಕೊಡುವುದು. ನಿನ್ನ ಅರ್ಹತೆಯ ಆಧಾರದಲ್ಲೇ ನಿನ್ನ ದಾರಿ ಸ್ಪಷ್ಟವಾಗಬೇಕು.”
ಕಥೆ ಆಯ್ಕೆಯಾಗಿತ್ತು. ಅದುವರೆಗೂ ಉಡುಪಿಯ ನಾನು ಮಂಗಳೂರನ್ನು ನೋಡಿಯೇ ಇರಲಿಲ್ಲ. ಅಕಾಶವಾಣಿ ಹೊಸ ಊರು ಹೊಸ ಪುಳಕ,ಸಂಭ್ರಮಗಳನ್ನು ಹೊಸ ಹೆದರಿಕೆಯೊಂದಿಗೆ ಪರಿಚಯಿಸಿತ್ತು. ಮಣಿಯಕ್ಕ ಆಕಾಶವಾಣಿಗೆ ಹೋಗುವ ಹಿಂದಿನ ದಿನ ಬಾಯಿಗೆ ಸಕ್ಕರೆ ಹಾಕಿ ” ಇನ್ನೂ ಹೆಚ್ಚು ಬರೆಯಬೇಕು. ಹೆಸರು ಬರಬೇಕು” ಎಂದು ಆಶೀರ್ವದಿಸಿ,ಹಾರೈಸಿ ಕಳುಹಿಸಿದ್ದರು.
ಯಾರು, ಈ ಸರ್ ಮತ್ತು ಮಣಿಯಕ್ಕ! ಕೇಳಿ.
ಉಡುಪಿಯ ಎಂ.ಜಿ.ಎಂ.ಕಾಲೇಜಿನ ಎತ್ತರದ ಕಾಂಪೌಂಡ್ ಗೋಡೆಯ ಕೊನೆ ನೊನೆಯಲ್ಲಿ ನಿಂತ ಗೇಟು ದಾಟಿ ಹೊರಗೆ ಬಂದರೆ ರಸ್ತೆಯುದ್ದಕ್ಕೆ ಎರಡೂ ಬದಿ ಬೇರುಬಿಟ್ಟು ಕೂತ ಒಂದೇ ಬಗೆಯ ಸಾಲು ಮನೆಗಳು.
ಪದವಿ ತರಗತಿಯಲ್ಲಿರುವಾಗ ಗೆಳತಿಯರ ಜೊತೆ ಹರಟೆ ಹೊಡೆಯುತ್ತ ಅಲ್ಲಿ ಕಳ್ಳರಂತೆ ಅಲೆದು” ಇದು ಯಾರದ್ದು? ಅದು? ಈ ಕಡೇದು?. ಇಲ್ಲಿ ನೋಡು!. ಓ ಆಚೆ ಕೂಡ ಮನೆಗಳು!” ಎಂದು ಪರಸ್ಪರ ಪ್ರಶ್ನೆ ಉತ್ತರ ತಡಕಾಡಿ ಯಾವ ಸರ್ ಗೆ ಯಾವ ಮನೆ ಎಂದು ಗುರುತಿಸಿ ಖುಷಿ ಪಟ್ಟದ್ದೆವು. ಸಾಹಿತ್ಯದ ವಿದ್ಯಾರ್ಥಿಗಳಿಗೆ, ಉಳಿದ ವಿದ್ಯಾರ್ಥಿಗಳಿಗಿಂತ ಉಪನ್ಯಾಸಕರ ಬಳಿ ತುಸು ಹೆಚ್ಚೇ ಸಲುಗೆ. ಮಾತಿಗೆ ಸಾವಿರ ವಿಷಯ.
ಕವಿತೆ, ಕಥೆ, ಕಾದಂಬರಿ, ಹರಟೆ, ಪಾಠ ಎಲ್ಲವೂ ಬೇವು ಬೆಲ್ಲ ಪಾನಕ. ಪಾಠ ಎಂದೂ ಬರಡೆನಿಸದು. ಬೇರೆ ವಿಷಯಗಳ ತರಗತಿಯಾಗುವಾಗಲೂ ಕನ್ನಡ ಉಪನ್ಯಾಸಕರು ನಡೆದು ಹೋದರೆ ಸಣ್ಣನೆಯ ಖುಷಿಯೇ ಸರಿದುಹೋದಂತೆ. ಆಗಲೇ ಆ ಏಳು ನಂಬರ್ ನ ಕ್ವಾರ್ಟರ್ಸ್ ಕಂಡದ್ದು. ಅದರ ಬಾಗಿಲಲ್ಲಿ
‘ ಹೊಸ್ಕೆರೆ ಎಸ್. ಶಿವಸ್ವಾಮಿ’ ಎಂಬ ನಾಮ ಫಲಕ.
ಕಂಚಿನ ಕಂಠದ ಪಾಠ. ಚಂದ್ರಮತಿಯ ವಿಲಾಪ, ಹರಿಶ್ಚಂದ್ರ ಕಾವ್ಯವನ್ನು ಮನಸ್ಸಿನಲ್ಲಿ ನೆಟ್ಟವರು. ಪರೀಕ್ಷೆ ಗೆಂದೇ ಓದುವ ಅಗತ್ಯವೇ ಕಂಡಿರಲಿಲ್ಲ. ಕ್ಲಾಸಿನಲ್ಲಿ ಪಾಠ ಕೇಳಿದರಾಯಿತು. ಪರೀಕ್ಷೆ ಹಾಲ್ ನಲ್ಲಿ ಅದನ್ನೇ ನೆನಪಿಸಿದರೆ ಮನಸ್ಸಿನಲ್ಲಿ ಅಚ್ಚಾದ ಅವರ ಧ್ವನಿ ಚಿತ್ರಕಗಳು ಪೇಪರಿನ ಮಡಿಲಿನಲ್ಲಿ ಒಂದೊಂದೇ ಪಾತ್ರಗಳಾಗಿ ಮಾತು, ಭಾವ, ಜೀವ ಪಡೆಯುತ್ತಿದ್ದವು. ರಂಗವು ಮನದ ಭಿತ್ತಿಯೊಳಗೆ ಹುಟ್ಟಿ ಪರೀಕ್ಷೆಯಲ್ಲಿಯೂ ನಾಟಕ ನಡೆಯುತ್ತಲೇ ಇತ್ತು. ನಾನು ಅದರ ವಿವರ ಬಿಳಿ ಪೇಪರಿನಲ್ಲಿ ದಾಖಲಿಸುತ್ತಿದ್ದೆ. ಪರೀಕ್ಷಾ ಕೊಠಡಿಯಿಂದ ಹೊರಬಂದರೂ ಅದೇ ನಶೆ, ಗುಂಗು. ಆ ಪಾತ್ರಗಳು ನನ್ನ ಹಿಂಬಾಲಿಸುತ್ತಿದ್ದವು. ಅಂತಹ ಮನೋಹರ ಶೈಲಿಯ ಪಾಠ ಅವರದ್ದು.
ಕನ್ನಡದಲ್ಲಿ ಸ್ನಾತಕೋತ್ತರ ಓದು ಬೇಕೆನ್ನುವ ಆಸೆಗೆ ಮತ್ತಷ್ಟು ಬಲ ತುಂಬಿದ್ದು ಆಗಲೇ. ಪದವಿ ಮುಗಿದು ಎಂ.ಎ ಓದಿಗೆ ಹೆಸರು ನೋಂದಾಯಿಸಿ ಆಗಿತ್ತು. ಮನೆಯಲ್ಲಿ ಕೂತು ಓದು. ಜೊತಗೆ ಉದ್ಯೋಗ.
ಹಳೆಗನ್ನಡ, ಕೆಲವು ಪಠ್ಯ ಅರ್ಥವಾಗದೇ ಹೋದಾಗ ಸರ್ ಮನೆಗೆ ಹೋಗಿ ಬಹು ಅಂಜಿಕೆಯಲ್ಲಿ ಬಾಗಿಲು ತಟ್ಟಿದ್ದೆ. ಕೆಂಪು ಸೀರೆ ಉಟ್ಟ,ಅಚ್ಚ ಬಿಳಿಬಣ್ಣದ, ಉದ್ದಮೂಗಿನ, ಹೊಳಪು ಕಣ್ಣಿನ ವಯಸ್ಸಾದವರು ಕಂಡಿದ್ದರು. ಏನು? ಎಂದಾಗ ಏನೂ ಹೇಳಲು ತೋಚದೆ ಖಾಲಿಯಾಗಿ ಬೆಪ್ಪಳಂತೆ ನಿಂತಿದ್ದೆ. ಅವರ ಹಿಂದೆ ತೆಳ್ಳಗಿನ ಉದ್ದ ದೇಹದ ಮಹಿಳೆ. ಬೈತಲೆ ತೆಗೆದು ಕಟ್ಟಿದ ಸೂಡಿ. ಹಣೆಯಲ್ಲಿ ಹದಗಾತ್ರದ ಹೊಳೆಯುವ ಕೆಂಪು ಚಂದಿರ. ಸೌಮ್ಯ ಮುಖ. ಹಿರಿಯಕ್ಕನಂತೆ ” ಬನ್ನಿ ಒಳಗೆ” ಎಂದು ಕೂರಿಸಿ”ಮೇಷ್ಟ್ರನ್ನು ಮಾತನಾಡಿಸಬೇಕಿತ್ತೇ”ಎಂದು ಮೃದು ವಾಗಿ ಕೇಳಿದ್ದರು. ತಲೆಯಲುಗಿಸಿದ್ದೆ. ಹೊಸದೊಂದು ನವಿರು ಬಾಂಧವ್ಯ ಮನಸ್ಸಿಗೆ ಕಟ್ಟಿ ಅವರು ಒಳನಡೆದರು. ಅದು ಗುರುಗಳ ಅಮ್ಮ ಹಾಗೂ ಹೆಂಡತಿ.
ನನಗೆ ಅರ್ಥವಾಗದ ಪಾಠಗಳನ್ನು ಸರ್ ಹೇಳಿ ಕೊಟ್ಟರು. ಗುರುಪತ್ನಿ ನಾಗಮಣಿ ಅಮ್ಮ ಅವರು ತಿಂಡಿ, ಕಾಫಿ, ಊಟ, ಪ್ರೀತಿ, ಭಾವ, ಕಾಳಜಿ, ಹಾರೈಕೆ ತುತ್ತು ಉಣಿಸುತ್ತಾ ಹೋದರು. ನಾನು ಆ ಮನೆಯಲ್ಲಿ ಬದುಕಿನಲ್ಲಿ ಎಂದೂ ಸಿಗಲಿಲ್ಲವೆಂದುಕೊಂಡ ವಾತ್ಸಲ್ಯ ಉಂಡು ಚಿಗುರುತ್ತ ಚಿಗುರುತ್ತ ನಡೆದೆ.
ನಾನು ಹೋಗುವಾಗೆಲ್ಲ ಸರ್ ತಮ್ಮ ಕುರ್ಚಿಗೆ ಅಂಟಿ ಮೇಜಿನ ಮೇಲೆ ಪೇಪರ್ ಹರವಿ ಬರೆಯುತ್ತಿದ್ದರು. ಕವನ, ಕಥೆ..ಇನ್ನೂ ಏನೋ..ತಮ್ಮ ಇಷ್ಟದ ಭಾವ ತಮಗಿಷ್ಟ ಆಗುವ ಪರಿಯಲ್ಲಿ ಅಕ್ಷರವಾಗಿಸುತ್ತಿದ್ದರು ನಾನು ಸದ್ದಾಗದಂತೆ ಒಳ ನಡೆದು ಅಡುಗೆ ಮನೆಯ ಒಡತಿಯ ಅಕ್ಕರೆಗೆ ಮಗುವಾಗುತ್ತಿದ್ದೆ. ಅಕ್ಷರ ಮತ್ತು ಅಕ್ಕರೆ ಆ ಮನೆಯ ಅವಳಿ ಮಕ್ಕಳು!.
ಅವರ ಮನದ ಭಾವತರಂಗಗಳ ನಾದಕ್ಕೆ ನಾನು ಕಿವಿ. ಆಗ ಸರ್ ಆಕಾಶವಾಣಿಗೆ ಚಿಂತನ ಬರೆದು ಕಳುಹಿಸುತ್ತಿದ್ದರು. ” ಕೇಳು” ಎನ್ನುತ್ತಿದ್ದರು. ನಿಧಾನವಾಗಿ ಗುರುಪತ್ನಿಯ ಚಿಂತನಗಳು ಬರತೊಡಗಿದವು. ಅವರ ಮನದ ಚಿಂತನಗಳು ಶ್ರವಣಕೇಂದ್ರವಾಗಿ ಅಚ್ಚರಿ, ಸೋಜಿಗವಾಗುತ್ತಿತ್ತು. ಹೊಸದೊಂದು ಸೆಳೆತ. ರೇಡಿಯೋ ಕಥೆ,ಕವನ,ನಾಟಕ. ಎಲ್ಲಿಯೋ ಆಡಿದ ಮಾತು. ಧ್ವನಿತರಂಗಗಳು ಮನೆಯ ಒಳ ಬಂದು ಪಟ್ಟಾಂಗವಾಡುವುದು.
ಆಗಲೇ ನಾನು ಬರೆದ ಕಥೆಯನ್ನು ಅವರಿಬ್ಬರೂ ಓದಿ, ಆಕಾಶವಾಣಿಗೆ ಕಳುಹಿಸಿದ್ದು. ಕಥೆ ಓದುವುದು ಹೊಸ ಅನುಭವ.” ಆರಾಮವಾಗಿ ಓದು. ಭಾವ ತುಂಬಿ ಓದು. ಅವಸರಿಸಬೇಡ” ನಾಗಮಣಿ ಅಮ್ಮನ ಸಕ್ಕರೆ ಜೊತೆಗಿನ ಅಕ್ಕರೆ ವಾಣಿ ಒಳಗೊಳಗೇ ಮತ್ತೆ ಮತ್ತೆ ಧ್ವನಿಸುತ್ತಿತ್ತು.
ಮೊದಲ ಓದು ತಿಳಿಸಿಕೊಟ್ಟವರು ಆಗ ಆಕಾಶವಾಣಿಯಲ್ಲಿ ಯುವವಾಣಿಯ ಜವಾಬ್ದಾರಿ ನಿರ್ವಹಿಸುತ್ತಿದ್ದ ಶರಭೇಂದ್ರಸ್ವಾಮಿಯವರು. ಕಣ್ಣ ಮುಂದೆ ಮನಸ್ಸಿನಲ್ಲಿ ಗೆಜ್ಜೆಕಟ್ಟಿ ಕೂತಿದ್ದ ಪಾತ್ರಗಳು ಅಕ್ಷರಗಳಾಗಿ, ಮಾತಾಗಿ, ಧ್ವನಿಯಾಗಿ ಹೊರಟಿದ್ದವು.
ಮುಂದೆ ಬದುಕಿನಲ್ಲಿ ಕಂಡ ಕಥೆ ಕಥೆಗಳು ಅಕ್ಷರಗಳಾದವು. ಗುರುಪತ್ನಿಯ ಶಿಫಾರಸ್ಸು.” ಎಷ್ಟು ಚೆಂದ ಬರ್ದಿದೀಯೇ ಹುಡುಗೀ..”” ನಿನ್ನ ಕಥೆ ನನಗಿಷ್ಟ” ಎನ್ನುತ್ತಾ ನಾಗಮಣಿ ಅಮ್ಮ, ತನ್ನ ಮಡಿಲಲ್ಲಿ ಕೂರಿಸಿ, ಒಪ್ಪ ಮಾಡಿ ಒಬ್ಬ ಕಥೆಗಾರ್ತಿಯನ್ನು ಕಟ್ಟುತ್ತಲೇ ನಡೆದರು.
” ಏನು,ಯಾವ ಕಥೆ? ಬರೆದಿರುವೆಯಾ, ತಾ ಇಲ್ಲಿ. ಕೊಡು.”
” ವ್ಹಾ, ಮಣಿ ಕಂಡೆಯಾ, ಎಂತಹ ಹೋಲಿಕೆ, ಏನು ಚೆಂದ”
ಎನ್ನುತ್ತಾ ಸರ್ ಅವರು, ನನ್ನೊಳಗೆ ಇದ್ದ, ಇದ್ದೂ ಇಲ್ಲದಂತಿದ್ದ ಕಥೆಗಾರ್ತಿಯನ್ನು ಬೆಳೆಸಿದರು.
ಆಕಾಶವಾಣಿಯೆಂಬ ಅದ್ಬುತ ನನಗೆ ಹೊಸ ಲೋಕದ ದೊರೆತನವನ್ನೇ ಕಾಣಿಕೆ ನೀಡಿದಂತೆ ಶ್ರೀಮಂತಗೊಳಿಸಿತು. ಜೊತೆಜೊತೆಗೆ ಗುರುದಂಪತಿಗಳ ವಾತ್ಸಲ್ಯ. ಮೊಗೆಮೊಗೆದು ಕೊಟ್ಟ ಪ್ರೀತಿಗೆ ಎಣೆಯುಂಟೇ? ಯಾವ ಹಬ್ಬವಾಗಲಿ ಕರೆ ಬರುತ್ತಿತ್ತು. ಹೋಗಲು ಸಾಧ್ಯವಾಗದ ಸಂದರ್ಭದಲ್ಲಿ ಮಾಡಿದ ಸಿಹಿತಿಂಡಿ ಮುಚ್ಚಟೆಯಾಗಿ ತೆಗೆದಿರಿಸಿ ಅವರ ಮನೆಗೆ ನಾನು ಹೋದಾಗ ಕೊಡುತ್ತಿದ್ದರು. ತಾನು ಹೆತ್ತ ಕಂದ ಇವಳು ಎಂಬಂತೆ. ಮನಸ್ಸಿನ ಮಾತು ಹಂಚಿಕೊಳ್ಳುತ್ತಿದ್ದರು.
” ನಿನಗಿಂತ ಆತ್ಮೀಯಳು ಯಾರು ಹೇಳು?”
“ಹೇ ಹುಡುಗಿ ,ನನ್ನ ಮಾತು ಸರ್ ಬಳಿ ಹೇಳಬೇಡ.”
“ಎಲ್ಲಿದ್ದಿಯೇ,ಮನೆಗೆ ಬಾ.
ಅದೆಷ್ಟು ಮಾತಿದೆ.”
“ನನ್ನ ಬಗ್ಗೆ ಒಂದು ಕಥೆ ಬರಿ ನೋಡುವಾ”
“ಸಂಕ್ರಾಂತಿಯ ಎಳ್ಳು ಬೆಲ್ಲ ಬೇಡ್ವಾ”
” ನಿನ್ನ ಕಥೆ ನೋಡು ತುಷಾರದಲ್ಲಿ ಬಂದಿದೆ. ಬೇಗ ಬಾ. ಸ್ವೀಟ್ ಹಿಡಕೊಂಡು ಬಾ.”
” ಹೇ,ನಾನೇ ಮಾಡಿದ್ದೇನೆ. ಬಾ ಈಗ”.
ಹೀಗೆ ಸದಾ ತೊಟ್ಟಿಕ್ಕುತ್ತಿದ್ದ ಎಂದೂ ಬತ್ತದ ಮಮತೆಯ ಮಾತುಗಳು.ತಾನೇ ನಾನಾದಂತೆ ನಾನೇ ಆಗಿ ಉಳಿದ ತಾಯಿ. ಈ ಬಂಧ ಹಾಗೇ ಉಳಿದಿದೆ. ಊರು ಬದಲಾದರೇನು? ಮನದ ಭಾವ ಬದಲಾದೀತೇ?”ನಿನ್ನಿಂದ ಸಾಧ್ಯ, ಮಾಡು!. ಮಾಡು!!” ಅನ್ನುತ್ತ ಅಂಜುಬುರುಕಿ ಹೆಣ್ಣನ್ನು ಕಲೆಯ ಮಹಲೊಳಗೆ ಕಿರುಬೆರಳು ಹಿಡಿದು ನಡೆಸಿದವರು.ರಂಗದ ಮೆಟ್ಟಲು ಹತ್ತಲು ಇಂತಹ ದೇವತೆಗಳೂ ಬೇಕಾಗುತ್ತಾರೆ ಎನ್ನುವ ತಿಳಿವು ಮೂಡಿಸಿದವರು.ತಾನು ಕಥೆ ಬರೆದಾಗ ಓದಿ ನೋಡು. ನೀನು ಹೇಳಿದರೆ ನನಗೊಂದು ನೆಮ್ಮದಿ ಎನ್ನುತ್ತ ಆತ್ಮವಿಶ್ವಾಸ ಗಂಟು ನನ್ನಲ್ಲಿ ಜೋಪಾನವಾಗಿಸಿದರು.
ಆಕಾಶವಾಣಿಯಲ್ಲಿ ಕಥೆಗಳ ಓದು,ಕಥೆಯ ರಚನೆಗೆ ಮೂಲ ಶಕ್ತಿಯಾದಂತೆ ಮುಂದೆ ರೇಡಿಯೋ ನಾಟಕದ ಹುಚ್ಚು ಆಸೆ ತುಂಬಿತು. ಮುದ್ದು ಮೂಡುವೆಳ್ಳೆಯಂತವರ ನಿರ್ದೇಶನದಲ್ಲಿ ಆಕಾಶವಾಣಿ ಕಲಾವಿದಳಾದೆ. ರೇಡಿಯೋ ನಾಟಕಗಳಲ್ಲಿ ಅವಕಾಶ ದೊರಕಿದಾಗ ಹೊಸಹೊಸ ನಾಟಕಗಳ ಓದು, ಕಲ್ಪನೆ. ಜೊತೆಗೆ ಶರಭೇಂದ್ರ ಸ್ವಾಮಿಯಂತ ನುರಿತ ನಿರ್ದೇಶಕರು, ಸ್ವರಭಾರ, ಧ್ವನಿಪೆಟ್ಟಿಗೆ, ಭಾವದ ಏರಿಳಿತ ಹೇಳಿ ಕಲೆಯ ವ್ಯಾಮೋಹ ಅಮಲು ನನ್ನೊಳಗೆ ಹರಿದುಬರಲು ಪ್ರೇರಕ ಶಕ್ತಿಯಾದರು.
ಅದು ಪೂರ್ತಿ ಹೊಸ ನಶೆ. ರಂಗದ ಪ್ರವೇಶಕ್ಕೆ ನಿಜವಾದ ಪ್ರವೇಶಿಕೆ. ಆಕಾಶವಾಣಿಯ ಅವಕಾಶದಾಕಾಶ ತೆರೆದ ಗುರುಗಳು ಈ ವರ್ಷ, ಸೂಚನೆ ನೀಡದೆ ನಡೆದಿದ್ದಾರೆ.
ನನ್ನ ಬದುಕಿನ ಗುಡಿಯಲ್ಲಿ ಮಾತ್ರ ಇವರು ಸದಾ ಪ್ರತಿಷ್ಠೆಗೊಂಡು, ಬೆಳಗ್ಗಿನ ಮೊದಲ ಪೂಜೆ ಇವರಿಗೇ ಅನ್ನುವಷ್ಟು ಪ್ರಾತಃಸ್ಮರಣೀಯರು.
****************************
ಪೂರ್ಣಿಮಾ ಸುರೇಶ್
ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 30 ಯಶಸ್ವೀ ಪ್ರದರ್ಶನ ಕಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.
ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ