ಯುಗಾದಿ ವಿಶೇಷ ಬರಹ
ಚಿಗುರಿದಚೈತ್ರ
ನಾಳೆ ಚೈತ್ರಮಾಸದ ಮೊದಲನೆ ದಿನ, ನಮಗೆ ಹೊಸ ವರುಷ. ತೊರಣ ಕಟ್ಟಬೇಕು, ಮಾವಿನ ಎಲೆ, ಬೇವಿನ ಸೊಪ್ಪು ತರಬೇಕಾಗಿದೆ, ಮಗನಿಗೆ ಹೇಳಲೇ! ಪ್ರತಿವರ್ಷವೂ ಇದೇ ಗೊಳು, ಮಗನು ಪ್ರಾಯಕ್ಕೆ ಬಂದಾಗಿಂದಾ ಹಬ್ಬದ ದಿನಗಳಲ್ಲಿ ಮಗನಾಗಲಿ, ಗಂಡನಾಗಲೀ ಸ್ವಲ್ಪವೂ ಆಸಕ್ತಿಯನ್ನು ತೋರುವುದೇ ಇಲ್ಲ. ನಾನೊಬ್ಬಳೇ ಎಲ್ಲಾ ಹಬ್ಬದ ಕೆಲಸಗಳನ್ನು ಮಾಡಬೇಕು. ಎಲ್ಲರೂ ಆಸಕ್ತಿಯಿಂದ ಜೊತೆಗೂಡಿ ಹಬ್ಬಗಳನ್ನು ಆಚರಿಸಿದರೆ ಬಲು ಚೆಂದ. ಏನು ಮಾಡುವುದಕೂ ಬೆಸರ, ಮನಸಿಗೆ ಉಲ್ಲಾಸವೇ ಇಲ್ಲವಾಗುತ್ತಿದೆಯಲ್ಲ! ಜೀವನದಲ್ಲಿ ಸಾರವೇ ಇಲ್ಲ.
ಮೌನವಾಯಿತು ಮನ. “ಏ ವೀಣಾ ಎಣ್ಣೆ ಸ್ನಾನ ಮುಗಿಸಿ, ಹೂಗಳ ಹಾರವನ್ನು ಕಟ್ಟಿ ಕೊಡು” ಅಮ್ಮನ ಕೂಗಿಗೆ ಎದ್ದು, ಬೇಗ ಬೇಗನೆ ಸಿದ್ಧಳಾದೆ. ಅಕ್ಕನ ಜೊತೆ ಸೇರಿ ಮನೆಯ ಅಂಗಳದಲ್ಲಿ, ಪ್ರೀತಿಯಿಂದ ಆರೈಕೆಮಾಡಿ ಬೆಳೆದ, ಬಣ್ಣ ಬಣ್ಣದ ಸ್ಪಟಿಕ ಹೂ, ಮಲ್ಲಿಗೆ, ಗುಲಾಬಿ, ಸಂಪಿಗೆ, ಕಾಕಡ, ಮಾಚಿ ಪತ್ರೆ, ಗರಿಕೆ, ದಾಳಿಂಬ್ರೆ ಪತ್ರೆ, ಸೀಬೆಗಿಡದ ಒಂದೆರಡು ಕುಡಿಗಳನ್ನು ಕಿತ್ತು, ಅಕ್ಕನ ಜೊತೆ ಕೂಡಿ ಹೂವಿನ ಹಾರವನ್ನು ಕಟ್ಟಿ, ಪೂಜೆಯ ಸಿದ್ಧತೆಗಳನ್ನು ಮಾಡಿಮುಗಿಸಿದೆ. ಅಣ್ಣ ಮಾವಿನ ಸೊಪ್ಪು, ಹೂಗಳಿದ್ದ ಬೇವಿನ ಚಿಗುರುಗಳನ್ನು ತಂದು, ಮಾವಿನ ತೊರಣವನ್ನು ಕಟ್ಟಿ, ಬೇವಿನ ಕುಡಿ, ಹೂವ, ಬೆಲ್ಲ, ಸ್ವಲ್ಪ ತುಪ್ಪ ಹಾಕಿ ಕುಟ್ಟಿ ದೇವರ ನೈವೇದ್ಯಕೆಂದು ಒಂದು ಬಟ್ಟಲಲ್ಲಿ ಹಾಕಿ ದೇವರ ಕೋಣೆಯಲ್ಲಿ ಪೂಜೆ ಮಾಡುತ್ತಿದ್ದ ಅಪ್ಪನಿಗೆ ಕೊಟ್ಟನು, ತಾನೂ ಪೂಜೆಗೆ ಕುಳಿತನು. ಅಮ್ಮ ಬೇಗ ಬೇಗನೆ ಒಂದೆರಡು ಬೇಳೆ ಹೋಳಿಗೆಯನ್ನು ಮಾಡಿ, ತುಪ್ಪ ಹಾಕಿ ನೈವೇದ್ಯದ ಸಮಯಕ್ಕೆ ತಂದು ಕೊಟ್ಟು, ತಾನೂ ಮಹಾಮಂಗಳಾರತಿಯನ್ನು ತೆಗೆದುಕೊಂಡು, ಮತ್ತೆ ಹೊಳಿಗೆಯನ್ನು ಮಾಡಲು ಅಡುಗೆ ಮನೆಯತ್ತ ಹೋದಳು. ಅಪ್ಪ ಎಲ್ಲರಿಗೂ ಬೇವುಬೆಲ್ಲದ ಮಿಶ್ರಣವನ್ನು ಕೊಟ್ಟರು. ಕಹಿ ಇದ್ದರೂ ಸಹ ನಾವೆಲ್ಲ ಶ್ರದ್ಧೆಇಂದ ತಿಂದು, ಹೊಳಿಗೆಗಾಗಿ ಕಾತರದಿಂದ ಕೈ ಚಾಚಿದೆವು. ಅಣ್ಣ ಆ ಎರಡು ಹೊಳಿಗೆಯನ್ನು ತುಂಡುಗಳನ್ನಾಗಿ ಮಾಡಿ ಎಲ್ಲರಿಗೂ ಕೊಟ್ಟು ತಾನೂ ತಿಂದನು.
ಅಕ್ಕ ಮಾವಿನಕಾಯಿಯನ್ನು ಸಣ್ಣಗೆ ಹಚ್ಚುತ್ತಿದ್ದಳು, ನಾನೂ ಸಹ ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯನ್ನು ತೊಳೆದು, ಹೆಸರಬೇಳೆ ಕೋಸಂಬ್ರಿ, ಮಾವಿನಕಾಯಿ ಚಿತ್ರಾನ್ನ ಮಾಡುವುದಕ್ಕೆ, ಅಮ್ಮನಿಗೆ ಸಹಾಯಮಾಡಿದೆವು. ಮನೆಯೆಲ್ಲಾ ಮಲ್ಲಿಗೆ ಹೂವಿನ ಪರಿಮಳದಿಂದ ಕೂಡಿತ್ತು. ಹೋಳಿಗೆ, ಬೊಂಡದ ವಾಸನೆಯು ನಮ್ಮ ಹಸಿವನ್ನು ಹೆಚ್ಚಿಸಿತ್ತು. ಅಣ್ಣ ಎಲ್ಲರಿಗೂ ಬಾಳೆ ಎಲೆ ಹಾಕಿ, ನೀರಿಟ್ಟು ಊಟಕ್ಕೆ ಎಲ್ಲರನ್ನೂ ಕರೆದು, ತಾನು ನಮ್ಮಜೊತೆ ಸೇರಿ
ಪಾಯಸ, ಪಲ್ಯ, ಕೊಸಂಬರಿಯನ್ನು ಬಡಿಸಿದನು. ಅಪ್ಪ, ಅಮ್ಮರ ಜೊತೆ ಕುಳಿತು ನಾವೆಲ್ಲರೂ ನಗುನಗುತ್ತ ಹಬ್ಬದ ಊಟವನ್ನು ಮುಗಿಸಿದೆವು.
“ಅಣ್ಣ ಯಾರೋ ಗೇಟ್ ತೆಗೆದಹಾಗಾಯಿತು”, “ನೊಡು, ಯಾರೋ ಬಂದಿರಬೇಕು” ನನ್ನಕ್ಕ ಹೇಳಿದಂತೆ, ಅಣ್ಣ ಬಾಗಿಲನ್ನು ತೆಗೆದನು. ನಾನು ಓಡಿಹೋಗಿ, ಯಾರಿರಬೇಕೆಂದು ತೊಂಗಿ ನೋಡಿದೆ, ಅರೆ ಮೊಹನ, ಜ್ಯೊತಿ ಎಲ್ಲರೂ ಬಂದಿದ್ದಾರೆ, “ಅಮ್ಮ ಅಮ್ಮ ಮಾಮನ ಮಕ್ಕಳು ಬಂದಿದ್ದಾರೆ”, “ಹೌದೆನೆ!, ಅಮ್ಮ ಕೊಣೆಯಿಂದ ಹೊರಗೆ ಬಂದು, ತನ್ನ ಆಣ್ಣನ ಮಕ್ಕಳನ್ನು ಸ್ವಾಗತಿಸಿದಳು. ನಮ್ಮೆಲ್ಲರಿಗೂ ಖುಷಿಯೋ ಖುಷಿ. ನಾವೆಲ್ಲರೂ ಹರಟೆಹೊಡೆಯುತ್ತ, ಕೇರಂ ಆಟವನ್ನು ಆಡಿ, ಅಂತಾಕ್ಷರಿಯಲ್ಲಿ ಕನ್ನಡ, ಹಿಂದಿ ಹಾಡುಗಳನ್ನು ಹಾಡುತ್ತ, ಹಾಡುತ್ತಾ, ಅಮ್ಮ ತಂದುಕೊಟ್ಟ ನಿಂಬೆಹಣ್ಣಿನ ಪಾನಕವನ್ನು ಕುಡಿಯುತ್ತ ಅಂತಾಕ್ಷರಿಯನ್ನು ಮುಗಿಸಿದೆವು. ಸಮಯ ಕಳೆದದ್ದೇ ತಿಳಿಯಲಿಲ್ಲ. ಮನೆಯ ಗಿಡದಲ್ಲಿ ಬಿಟ್ಟ ಸೀಬೆಹಣ್ಣನ್ನು ಕಿತ್ತು ಅವರಿಗೆ ಕೊಟ್ಟು, ನಾವೆಲ್ಲರೂ, ಮೊಹನ, ಜ್ಯೊತಿಯನ್ನು ಅವರ ಮನೆಯ ಅರ್ಧ ದಾರಿಯವರೆಗೆ ಬೀಳ್ಕೊಟ್ಟು ಮನೆಗೆ ಬಂದೆವು. ಎಲ್ಲರ ಮನದಲ್ಲೂ ಎನೋ ಒಂದು ತೃಪ್ತಿ ತುಂಬಿ ಕುಣಿಯುತಿತ್ತು.
ಹೆಜ್ಜೆಯ ಸದ್ದಿಗೆ, ನೆನಪುಗಳಿಂದ ಹೊರಬಂದು, ತಲೆ ಎತ್ತಿ ನೋಡಿದೆ. ಮಗ ಸೊಸೆಯ ಕೈಹಿಡಿದು ನನ್ನ ಸಮೀಪ ಬಂದು ಕುಳಿತನು. “ಅಮ್ಮ ಒಂದು ಚೀಟಿಯಲ್ಲಿ ನಾಳೆ ಹಬ್ಬಕ್ಕೆ ಏನೇನು ತರಬೇಕೆಂದು ಬರೆದು ಕೊಡು, ನಾನು, ಇವಳು ಇಬ್ಬರೂ ಹೋಗಿ ತರುತ್ತೇವೆ. ನಾಳೆ ಬೇಳೆ ಹೋಳಿಗೆ ಮಾಡು, ಕೋಸಂಬ್ರಿಗೆ ಮಾವಿನಕಾಯಿ ಹಾಕು. ಮಸಾಲವಡೆ ಮಾಡು, ನಾವು ನಿನಗೆ ಸಹಾಯ ಮಾಡ್ತಿವಿ”. ಮಗನ ಮಾತನ್ನು ನಂಬಲಾಗಲಿಲ್ಲ, ಆದರೂ ಸಂತೊಷದಿಂದ ಎದ್ದು, ಚೀಟಿಯನ್ನು ಬರೆದು ಕೊಟ್ಟೆ. ಇಬ್ಬರೂ ಹೊರಟರು.
ಏನಿದು ಆಶ್ಚರ್ಯ!! ಮಗ ಮೊದುವೆ ಆದಮೇಲೆ ಬದಲಾದನೇ!, ಪೂಜೆ, ಹಬ್ಬಗಳೆಂದರೆ ಆಸಕ್ತಿಯನ್ನು ತೋರದ ಮಗ, ಇಂದು ಹೀಗೆಲ್ಲಾ ಹೇಳಿದನೇ! ಇದೆಲ್ಲಾ ಸೊಸೆಯ ಪ್ರಭಾವವಿರಬೇಕು! ಸದ್ಯ ನಮ್ಮ ಆಚರಣೆಗಳಲ್ಲಿ ಆಸಕ್ತಿಯನ್ನು ತೋರಿದನಲ್ಲ, ಅಷ್ಟೇ ಸಾಕು. ಸೊಸೆಯ ಮೇಲೆ ಪ್ರೀತಿ ಹೆಚ್ಚಿತು. ಬೇಗ ಬೇಗನೆ ಮನೆಯನ್ನು ಸ್ವಚಗೊಳಿಸಿ, ಮಗ, ಸೊಸೆ ಬರುವದರೊಳಗೆ ಹಬ್ಬದ ತಯಾರಿಯನ್ನು ಮಾಡಿದೆನು. ಪೂಜೆಯ ಸಾಮಗ್ರಿಗಳನ್ನು ಒರೆಸುತ್ತಾ ಕುಳಿತ ನನಗೆ, ಮತ್ತೆ ತವರುಮನೆಯ ನೆನಪಾಯಿತು. ಎಲ್ಲರೂ ಬೆಳೆದು ದೊಡ್ಡವರಾದೆವು, ಆದರೆ ಬುದ್ಧಿ ಬೆಳೆಯಲಿಲ್ಲ. ಸಂಸಾರದಲ್ಲಿ ಮನಸ್ತಾಪಗಳು ಹುಟ್ಟಿ, ಅಣ್ಣ ತಂಗಿಯರೆಲ್ಲಾ ದೂರ ಸರಿದೆವು. ಅಪ್ಪ ಅಮ್ಮರ ಸಾವಿನನಂತರ ತವರುಮನೆ ಇಲ್ಲದೇ ಹೋಯಿತಲ್ಲಾ.
ನಾನೇ ಪೂಜೆಯನ್ನು ಮಾಡಿ ಎಲ್ಲರಿಗೂ ಬೇವು,ಬೆಲ್ಲದ ಚೂರ್ಣವನ್ನು ಕೊಟ್ಟು, ಹೋಳಿಗೆ ಮಾಡಲು ಅಡುಗೆ ಮನೆಗೆ ಹೋದೆನು. ಗಂಡ ದಿನಪತ್ರಿಕೆಯನ್ನು ಓದುವುದರಲ್ಲಿ ಮುಳುಗಿಹೋಗಿದ್ದರು. ಅವರಿಗೇ ದಿನನಿತ್ಯ ಅದೇ ಪ್ರಪಂಚವಾಗಿತ್ತು. ಬದಲಾಗದ ಜೀವಿ. “ಹಹ….ಬನ್ನಿ..ಬನ್ನಿ…” ಪಕ್ಕದ ಮನೆಯವರ ದ್ವನಿ ಕೇಳಿಸಿತು, ಮನಸ್ಸು ಒಲ್ಲದಿದ್ದರೂ, ಕುತೂಹಲದಿಂದ ಕಿಟಕಿಇಂದ ಇಣುಕಿ ನೋಡಿದೆ. ಪ್ರಕಾಶ್ ರವರ ತಮ್ಮ, ಅಕ್ಕ ಬಂದಿದ್ದರು ಹಬ್ಬಕ್ಕಾಗಿ. ಪ್ರಕಾಶ್ ರವರ ಪತ್ನಿ ಶೊಭಾಳೊ ರೇಶಿಮೆ ಸೀರೆ ಉಟ್ಟಿದ್ದರು, ಎಲ್ಲರೂ ಹೊಸ ಬಟ್ಟೆಗಳನ್ನು ತೊಟ್ಟು, ಹಬ್ಬದ ಸವಿಯಲ್ಲಿ ಮುಳುಗಿದ್ದರು. ಅವರ ಸಂಭ್ರಮವನ್ನು ನೋಡಿ ಒಂದು ಷಣ ಅಲ್ಲೇ ಸುಮ್ಮನೆ ನಿಂತುಬಿಟ್ಟೆ. ಸಂಸಾರವೆಂದರೆ ಹಾಗಿರಬೇಕೆಂದೆನಿಸಿತು. ಬಂಧುಗಳ ಒಡನಾಟದ ಮಹತ್ವದ ಅರಿವಾಯಿತು. ಯೊವ್ವನದಲ್ಲಿ ಯಾರೂ ಬೇಕಾಗುವುದಿಲ್ಲ, ಅದೇ ವಯಸ್ಸಾಗುತ್ತಾ.. ಆಗುತ್ತಾ..ಒಂಟಿತನವು ಕಾಡುವುದು, ಮಕ್ಕಳು ಅವರ ಪಾಡಿಗೆ, ಅವರ ಇಷ್ಟದಂತೆ ಜೊತೆಯಲಿ ಇದ್ದರೂ ಇಲ್ಲದವರಂತಿರುತ್ತಾರೆ, ಇಲ್ಲವೇ ಹೊರ ರಾಜ್ಯಗಳಲ್ಲೋ, ದೇಶಗಳಲ್ಲೋ ಕೆಲಸದ ಕಾರಣಕ್ಕೆ ಇದ್ದುಬಿಡುತ್ತಾರೆ. ಆಗ ನಮಗೆ ನಮ್ಮ ನೆಂಟರ, ಸ್ನೇಹಿತರ ಒಡನಾಟ ಬೇಕೆಂದೆನಿಸುವುದು.
ಅಣ್ಣ ಮೊದುವೆಯಾದ ನಂತರ ಬದಲಾಗಿಬಿಟ್ಟ, ನಾವು ಅಮ್ಮನ ಮನೆಗೆ ಉಗಾದಿ ಹಬ್ಬಕೆಂದು ಹೋದಾಗೆಲ್ಲಾ, ಅಣ್ಣ ಅತ್ತಿಗೆಯ ನಡವಳಿಕೆ ಬದಲಾದಂತೆನಿಸುತಿತ್ತು. ವ್ಯಂಗವಾದ ಮಾತುಗಳು ಕಿವಿಗೆ ಬೀಳುತಿದ್ದವು. ಕ್ರಮೇಣ ಅಪ್ಪ, ಅಮ್ಮರ ಸಾವಿನ ನಂತರ ತವರುಮನೆಇಂದ ದೂರವಾಗಿಯೇಬಿಟ್ಟೆವು. ಅತ್ತೆ ಮನೆಯಲ್ಲಂತೂ ನನ್ನದೆಂಬುದು ಏನೂ, ಯಾರೂ ಇಲ್ಲವೆಂದೆನಿಸಿತು. ಹಬ್ಬ ಹರಿದಿನಗಳಲ್ಲಿ ಮನೆಗೆ ನೆಂಟರು ಬಂದು ಹೋಗಿ ಮಾಡಿದರೆ, ನಮ್ಮ ಹಾಗೂ ಅವರ ನಡುವಿನ ಬಾಂಧವ್ಯವು ಮತ್ತಷ್ಟು ಗಟ್ಟಿಯಾಗುವುದು. ಗಂಡನಾದರೋ ಒಂಟಿಯಾಗಿರುವುದನ್ನೇ ಇಷ್ಟ ಪಡುತ್ತಿದ್ದರು. ಆದರೆ ನನಗೆ ಎಲ್ಲರ ಸಂಬಂಧವು ಬೇಕೆನಿಸುತ್ತಿತ್ತು. ಮನೆ, ಮನಸ್ಸು ಖಾಲಿ ಖಾಲಿ ಎಂದೆನಿಸಿತು. ಅಮ್ಮ, ಅಪ್ಪ ನೆನಪಾಗಿ ಹೃದಯ ಭಾರವೆನಿಸಿತು. “ಮಗ, ಸೊಸೆ ಹೊರಗೆ ಹೋಗದೆ, ಹಬ್ಬಕ್ಕೆ ಮನೆಯಲ್ಲಿ ನಮ್ಮಜೊತೆ ಇದ್ದಾರೆ, ಇದು ಸಂತೋಷದ ಷಣ, ಸುಮ್ಮನೆ ಹಳೆಯ ನೆನಪುಗಳೋಂದಿಗೆ ಈ ದಿನವೇಕೆ ಬೇಸರಗೊಳ್ಳಬೇಕು”.
ಮುಖವನ್ನು ತೊಳೆದು ಅಡುಗೆ ಮನೆಯತ್ತ ಹೆಜ್ಜೆ ಇಟ್ಟೆ, ಅಲ್ಲಿ ಮಗ ಮಾವಿನ ಕಾಯಿಯನ್ನು ಹಚ್ಚುತಿದ್ದ, ಸೊಸೆಯೋ ತನ್ನ ಪುಟ್ಟ ಪುಟ್ಟ ಕೈಯಲ್ಲಿ ನಾನು ಮಾಡಿಟ್ಟ ಹೂರ್ಣದ ಉಂಡೆಗಳನ್ನು ಮಾಡಿ ಒಂದು ತಟ್ಟೆಯಲ್ಲಿ ಇಡುತ್ತಿದ್ದಳು. ಅವರಿಬ್ಬರೂ ಎನೋ ಮಾತನಾಡುತ್ತ ನಗು ನಗುತ್ತ ನನಗೆ ಸಹಾಯವನ್ನು ಮಾಡುತಿದ್ದರು. ತಕ್ಷಣ ಅವರಿಬ್ಬರನ್ನು ಪ್ರೀತಿಇಂದಪ್ಪಿಕೊಂಡು, ಇಬ್ಬರಿಗೂ ಹಬ್ಬದ ಶುಭಾಶಯಗಳನ್ನು ಹೇಳಿ ಹೋಳಿಗೆಯನ್ನು ಮಾಡಿ ಮುಗಿಸಿದೆ. ನಗುನಗುತ ಎಲ್ಲರಿಗೂ ಬಾಳೆ ಎಲೆಯ ಊಟ ಬಡಿಸಿ, ಅಡುಗೆಮನೆಗೆ ಬಂದು ಒಂದೆರಡು ಡಬ್ಬಗಳಲ್ಲಿ, ಹೋಳಿಗೆ, ಮಾವಿನಕಾಯಿ ಚಿತ್ರಾನ್ನ, ಒಂದೆರಡು ಮಸಾಲವಡೆಯನ್ನು ತುಂಬಿಸಿಕೊಂಡು, ರೌಕೆಕಣ, ತಾಂಬೂಲವನ್ನು ಚೀಲದಲ್ಲಿ ಇಟ್ಟು, ಮೂಲೆ ಮನೆಯಲ್ಲಿದ್ದ ಪಾರ್ವತಮ್ಮ-ನಾಗರಾಜ ವೃದ್ಧದಂಪತಿಗಳ ಮನೆಗೆ ಬಂದು, ಅವರಿಗೆ ಹಬ್ಬದ ತಿಂಡಿಯನ್ನು ಕೊಟ್ಟು, ಅವರ ಆಶೀರ್ವಾದವನ್ನು ಪಡೆದು, ಮನೆಗೆ ಬಂದು, ತಾನೂ ಊಟ ಮಾಡಿ, ಮಗ, ಸೊಸೆಯೊಂದಿಗೆ ಆ ದಿನ ಬೆರೆತು ಮನತುಂಬುವ ತನಕ ಮಾತನಾಡಿ, ಮಿಕ್ಕ ಕೆಲಸವನ್ನೆಲ್ಲ ಮಾಡಿ ಮುಗಿಸಿದೆನು. ಮನಸು ತೃಪ್ತಿ ಇಂದ ತುಂಬಿತ್ತು.
ಅಂದು ಅರಿವಾಯಿತು ನನಗೆ. ಬಿರುಕು ಬಿಟ್ಟ ಸಂಬಂಧಗಳನ್ನು ಮತ್ತೆ ಮತ್ತೆ ನೆನೆಯುತ್ತ, ವಿನಾಕಾರಣ ಕೊರಗುವುದಕಿಂತ, ನಮ್ಮ ಅಕ್ಕ ಪಕ್ಕದವರೋಂದಿಗೆ ಪ್ರೀತಿಯನ್ನು ಹಂಚಿಕೊಳ್ಳುವುದೇ ಸರಿ ಎನಿಸಿತು. ಪಾರ್ವತಮ್ಮನ ಮಕ್ಕಳು ಅವರಜೊತೆ ಇಲ್ಲ. ಬೇರೆ ಊರಿನಲ್ಲಿದ್ದಾರೆ, ಅವರಿಬ್ಬರೇ ಜೀವನವನ್ನು ನಡೆಸುತಿಲ್ಲವೇ? ಪಾರ್ವತಮ್ಮ-ನಾಗರಾಜ ದಂಪತಿಗಳು ನನ್ನ ತಂದೆ-ತಾಯಿ ಅಥವ ಅಣ್ಣ ಅತ್ತಿಗೆಯಾಗಬಹುದಲ್ಲವೇ? ಈ ದಿನ ಅವರಿಬ್ಬರೇ ಹಬ್ಬವನ್ನು ಆಚರಿಸುತಿಲ್ಲವೇ?
ಸಾಯಂಕಾಲ ಮಗ, ಸೊಸೆಯನ್ನು ತನ್ನ ಸ್ನೇಹಿತನ ಮನೆಗೆಂದು ಬಸವನಗುಡಿಯತ್ತ ಹೊರಟನು. ಸೊಸೆ ಸುಂದರವಾಗಿ ಅಲಂಕರಿಸಿಕೊಂಡು, ನಗುನಗುತ್ತ ಮಗನ ಕೈ ಹಿಡಿದು ಹೊರಟಳು.
ಅಂದು ನನ್ನ ಮನಸು “ಮಾವಿನ ಚಿಗುರಿನಂತೆ ಚಿಗುರಿ, ಬೇವಿನ ಹೂವಿನಂತೆ ಅರಳಿ, ಬೆಲ್ಲದ ಸಿಹಿಯು ಚೈತ್ರ ಮಾಸದ ಮಳೆಹನಿಯೊಂದಿಗೆ ಸೇರಿ, ಅ ಸಿಹಿಯ ಹನಿಯು ನನ್ನ ಹೃದಯವನ್ನು ಪ್ರೀತಿಯಿಂದ ಪಸರಿಸಿತು. ಎಲ್ಲೆಲ್ಲಿಯೂ ಹೊಸ ತನ, ಹೊಸ ಭರವಸೆಯೊಂದಿಗೆ ಹೊಸ ಹೊಸ ಸ್ನೇಹಗಳ ಬಂಧನದಲ್ಲಿ ಬೆಸೆಯಬೇಕೆನಿಸಿತು”.
“ಉಗಾದಿ ಮರಳಿ ಮರಳಿ ಬರಲೆಂದು ಮನಸು ಹಾಡಿತು”.
****************************************************************
ಮೀನಾಕ್ಷಿಹರೀಶ್.
ಸುಂದರ ಬರಹ ನನ್ನದೂ ನೀವು ಬರೆದಂತಹುದೇ ಬದುಕು ವ್ಯತ್ಯಸವೆಂದರೆ ನನ್ನ ಪತಿ ಎಲ್ಲರನ್ನೂ ತುಂಬಾ ಹಚ್ಚಿಕೊಳ್ಳುತ್ತಾರೆ, ಮತ್ತು ಮಗನದು ಇನ್ನೂ ಮದುವೆಯಾಗಿಲ್ಲ.ತವರು ಪಕ್ಕದಲ್ಲಿದ್ದರೂ ಹೋಗಲಾರದಷ್ಟು ದೂರವಾಗಿದೆ. ನಿದಕ್ಕೂ ನೀವೆಂದಂತೆ ಬಿರುಕು ಬಿಟ್ಟ ಸಂಬಂದವನ್ನುನನೆದು ಕೊರಗುವುದಕ್ಕಿಂತ ಅಕ್ಕಪಕ್ಕದವರೂಂದಿಗೆ ಪ್ರೀತಿ ಹಂಚಿಕೊಳ್ಳಬೇಕು.ಆಗಲೇ ಬದುಕು ಸುಂದರ.
ಧನ್ಯವಾದಗಳು