ಯುಗಾದಿ ವಿಶೇಷ ಬರಹ

ಹೊಸ ವರುಷವು ಬರಲಿ, ಸುಖ ಸಾವಿರ ತರಲಿ…

ಅದೇನೋ ಬೇರೆ ಎಲ್ಲಾ ಹಬ್ಬಗಳಿಗಿರುವ ಒಂದು ಆಕರ್ಷಣೆ, ಆಚರಣೆ ಯುಗಾದಿ ಹಬ್ಬಕ್ಕಿಲ್ಲ. ಹಿಂದೂ ಚಾಂದ್ರಮಾನ ಪಂಚಾಗದ ಪ್ರಕಾರ ಚೈತ್ರ ಶುದ್ಧ ಪಾಡ್ಯಮಿಯನ್ನು ಯುಗಾದಿ ಹಬ್ಬವೆಂದು, ವರ್ಷದ ಮೊದಲ ದಿನವೆಂದು ಆಚರಿಸುತ್ತೇವೆ. ಸೌರಮಾನದವರು ಪ್ರತಿವರ್ಷ ಏಪ್ರಿಲ್‌ 14ರಂದು ಯುಗಾದಿಯನ್ನು ಆಚರಿಸುತ್ತಾರೆ. ಒಟ್ಟಿನಲ್ಲಿ ಮಾರ್ಚ್‌ ತಿಂಗಳ ಕೊನೆಯಿಂದ ಏಪ್ರಿಲ್‌ ನಡುವಿನೊಳಗೆ ಹೊಸವರ್ಷದ ಆರಂಭವಾಗುವುದು ಆಚರಣೆಯಲ್ಲಿದೆ. ಚಿಕ್ಕಂದಿನಿಂದಲೂ ಈ ಹಬ್ಬದ ಬಗ್ಗೆ ವಿಶೇಷವಾದ ಆಸಕ್ತಿಯೇನೂ ಇರಲಿಲ್ಲ. ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಬೇವಿನ ಟೊಂಗೆಯನ್ನು ಸಿಕ್ಕಿಸಿ ಸಿಂಗರಿಸುತ್ತಿದ್ದೆವು. ಎಂದಿನಂತೆ ಅಂದೂ ನಮ್ಮಪ್ಪ ದೇವರಪೂಜೆ ಮಾಡುತ್ತಿದ್ದರು. ಆ ವರ್ಷದ ಪಂಚಾಂಗವನ್ನು ತಂದು ದೇವರ ಮುಂದಿಟ್ಟು ಅದಕ್ಕೂ ಪೂಜೆ ಸಲ್ಲಿಸುತ್ತಿದ್ದರು. ನಂತರ ಬೇವಿನ ಹೂವು ಮತ್ತು ಬೆಲ್ಲದ ಮಿಶ್ರಣವನ್ನು ಪ್ರಸಾದವಾಗಿ ಕೊಡುತ್ತಿದ್ದರು. ಇದನ್ನು ಬೇಡವೆನ್ನುವಂತೆಯೇ ಇಲ್ಲ. ಜೀವನದಲ್ಲಿ ಎದುರಿಸುವ ಸಿಹಿ ಕಹಿಗಳ ಸಂಕೇತವಂತೆ ಇದು. ಎರಡನ್ನೂ ಸಮಭಾವದಿಂದ ಸಮಚಿತ್ತದಿಂದ ಸ್ವೀಕರಿಸಬೇಕೆಂಬ ಆಶಯವಿದೆ ಈ ಆಚರಣೆಯ ಹಿಂದೆ. ಒಟ್ಟಿನಲ್ಲಿ ಹೇಗೋ ನುಂಗಿಬಿಡುತ್ತಿದ್ದೆವು. ಆಮೇಲೆ ನಮ್ಮ ತಂದೆ ಪಂಚಾಗ ಶ್ರವಣ ಮಾಡುತ್ತಿದ್ದರು. ನಾವೇನು ಎಂದೂ ಕೇಳಿಸಿಕೊಂಡಿರಲಿಲ್ಲ ಬಿಡಿ.

ಸ್ಕೂಲಿಗೆ ಹೋಗುವ ಯಾವ ಮಕ್ಕಳಿಗೂ ಯುಗಾದಿಯ ಬಗ್ಗೆ ವಿಶೇಷವಾದ ಅಸ್ಥೆಯಿರುವುದಿಲ್ಲ. ಯಾಕೆನ್ನಿ, ಎಲ್ಲರಿಗೂ ಪರೀಕ್ಷೆಯ ಸಮಯ. ವರ್ಷವಿಡೀ ಆರಾಮಾಗಿ ಕಾಲಕಳೆದು ʻಯುದ್ಧಕಾಲೇ ಶಸ್ತ್ರಾಭ್ಯಾಸʼದ ತರಹ ಆಗ ಪುಸ್ತಕ ಹಿಡಿದು ಕೂರುವವರದು ಒಂದು ರೀತಿಯ ಸಂಕಟವಾದರೆ, ವರ್ಷಾರಂಭದಿಂದಲೂ ಓದಿ ಓದಿ ಗುಡ್ಡೆಹಾಕಿ ಪರೀಕ್ಷೆಯಲ್ಲಿ ಏನು ಕೇಳಿಬಿಡುವರೋ ಎಂಬ ಆತಂಕದಿಂದಲೇ ಇರುವ ಬುದ್ಧಿವಂತ ವಿದ್ಯಾರ್ಥಿಗಳ ಸಂಕಟವೇ ಬೇರೆ. ಒಬ್ಬರಿಗೆ ಹೇಗೋ ಪಾಸಾಗುವಷ್ಟು ಅಂಕಗಳನ್ನು ಗಳಿಸಿಕೊಂಡು ಈ ವರ್ಷ ದಾಟಿಕೊಂಡರೆ ಸಾಕು, ಮುಂದಿನ ವರ್ಷ ನೋಡಿಕೊಂಡರಾಯಿತು ಎನ್ನುವ ಮನೋಭಾವವಿದ್ದರೆ, ಇನ್ನೊಬ್ಬರಿಗೆ ಯಾವ ಗೊಂದಲದಲ್ಲಿ ಎಷ್ಟು ಅಂಕ ಕಳೆದುಹೋಗುವುದೋ, ಭವಿಷ್ಯದ ಗತಿಯೇನು ಎನ್ನುವ ಚಿಂತೆ. ಹೇಗಿದೆ ನೋಡಿ, ದಡ್ಡರಿಗೆ ಗಳಿಸಿಕೊಳ್ಳುವ ಉಮೇದು; ಜಾಣರಿಗೆ ಕಳೆದುಕೊಳ್ಳುವ ಭಯ. ನಾನಂತೂ ಪ್ರತಿವರ್ಷವೂ ʻಮುಂದಿನ ವರ್ಷ ಹೀಗೆ ಕಡೆಯ ಘಳಿಗೆಯಲ್ಲಿ ಒದ್ದಾಡದೆ, ಅಂದಂದಿನ ಪಾಠಗಳನ್ನು ಅಂದಂದೇ ಓದುತ್ತೇನೆಂದುʼ ಒಂದು ಘೋರ ಪ್ರತಿಜ್ಞೆ ಮಾಡುತ್ತಿದ್ದೆ. ಆದರೆ ಅದನ್ನು ಪೂರೈಸಿಬಿಟ್ಟರೆ ಮುಂದಿನ ವರ್ಷ ಮಾಡಲು ಪ್ರತಿಜ್ಞೆಗಳೇ ಇರುವುದಿಲ್ಲವಲ್ಲ; ಹಾಗಾಗಿ ಅದನ್ನೆಂದೂ ಪೂರೈಸುತ್ತಿರಲಿಲ್ಲ. ಹೀಗೆ ಅವರವರದೇ ತಲ್ಲಣಗಳಲ್ಲಿ ಮುಳುಗಿರುವ ಕಾಲದಲ್ಲಿ ಹಬ್ಬ ಬಂದರೆ ಮಕ್ಕಳಿಗೆ ಅದಿನ್ಯಾವ ಖುಷಿಯಿದ್ದೀತು ಹೇಳಿ. ಆಗ ನಮಗಿದ್ದ ಒಂದೇ ಖುಷಿಯೆಂದರೆ ವರ್ಷದಲ್ಲಿ ಎರಡೇ ಹಬ್ಬಕ್ಕೆ ಹೊಸಬಟ್ಟೆ ಸಿಗುತ್ತಿದ್ದುದು, ಅದು ಯುಗಾದಿ ಮತ್ತು ದೀಪಾವಳಿಯಲ್ಲಿ ಮಾತ್ರಾ. ಮದುವೆಯ ಜವಳಿ ಕೊಳ್ಳುವಂತಹ ಉಮೇದಿನಿಂದ ಊರೆಲ್ಲಾ ಪರ್ಯಟನೆ ಮಾಡಿ, ಜೊತೆಯವರು ಕೊಂಡ ಬಟ್ಟೆಗಳ ಎಲ್ಲಾ ವಿವರಗಳನ್ನೂ ತಿಳಿದುಕೊಂಡು, ಅಂಥದೇ ಬೇಕೆಂದು ಅಪ್ಪ, ಅಮ್ಮರಲ್ಲಿ ಬೇಡಿಕೆಯಿಟ್ಟರೂ, ಅವಾವುದೂ ಹಬ್ಬದ ಬಜೆಟ್‌ನಲ್ಲಿ ಪಾಸಾಗದೆ ಕಡೆಗೆ ಅಮ್ಮ ತಂದ ಯಾವುದೋ ಒಂದು ಬಟ್ಟೆಗೆ ಸಮಾಧಾನ ಮಾಡಿಕೊಳ್ಳಬೇಕಿತ್ತು, ಮಾಡಿಕೊಳ್ಳುತ್ತಿದ್ದೆವು. ಹಬ್ಬದಡುಗೆಯಲ್ಲಿ ಹೆಚ್ಚಾಗಿ ಮಾವಿನಕಾಯಿ ಚಿತ್ರಾನ್ನ, ಹೋಳಿಗೆ ಇರುತ್ತಿತ್ತು. ಹೋಳಿಗೆಗಿಂತಾ ವರ್ಷದ ಹೊಸಫಸಲು ಮಾವಿನಕಾಯಿ ಚಿತ್ರಾನ್ನದ ಬಗ್ಗೆಯೇ ಹೆಚ್ಚಿಗೆ ಒಲವು.

ವರ್ಷಾರಂಭವಾಗಿ ಮೂರು ತಿಂಗಳ ನಂತರ ಬರುವ ಯುಗಾದಿಗೆ ವರ್ಷದ ಮೊದಲು ಎಂದೇಕೆ ಹೇಳುತ್ತಾರೆಂದು ಆಗೆಲ್ಲಾ ಅನ್ನಿಸುತ್ತಿತ್ತು. ಸಂಕ್ರಾಂತಿ ಸುಗ್ಗಿಯ ಹಬ್ಬವಾದರೂ, ಅದು ಮರಗಳೆಲ್ಲಾ ಎಲೆಯುದುರಿಸಿ ಬೋಳಾಗಿರುವ ಕಾಲ. ಚಳಿ ಕಳೆದು ಬಿಸಿಲು ಹುಟ್ಟಿದಾಗಲೇ ಸುತ್ತಲಿನ ಪ್ರಕೃತಿಯಲ್ಲೂ ಎಂತಹ ಸುಂದರ ಬದಲಾವಣೆ. ಬೋಳುಮರಗಳ ಗೆಲ್ಲು ಗೆಲ್ಲುಗಳೂ ಜೀವರಸ ತಳೆದು ಮೆಲ್ಲಗೆ ಕುಡಿಯೊಡೆದು, ಎಲೆಗಳೆಲ್ಲಾ ನಸುಗೆಂಪಾಗಿ ಚಿಗುರೊಡೆದು, ಎಳೆಹಸಿರು, ಎಲೆಹಸಿರು, ಕಡುಹಸಿರು ಬಣ್ಣಕ್ಕೆ ತಿರುಗಿ, ಮೈತುಂಬಾ ಬಣ್ಣಬಣ್ಣದ ಹೂತಳೆದು ರಸ್ತೆಯುದ್ದಕ್ಕೂ ಹಾಸಿ ವಸಂತರಾಜನ ಆಗಮನಕ್ಕೆಂದು ಸಿದ್ಧವಾಗಿ ಸಿಂಗರಿಸಿಕೊಂಡು ನಿಂತಿರುವಾಗ ಅದೆಂಥ ಸೊಬಗು! ʻಚಿಗುರನು ತಂದ ಹೆಣ್ಗಳ ಕುಣಿಸುತ ನಿಂದ; ಚಳಿಯನು ಕೊಂದ ಹಕ್ಕಿಗಲುಳಿಗಳೆ ಚಂದʼ ಎಂದು ಬಿ.ಎಂ.ಶ್ರೀಯವರು ಹಾಡಿದಂತೆ ಎಲ್ಲ ಜಡತ್ವವನ್ನೂ ಹೊಡೆದೋಡಿಸಿ ಹೊಸ ಚಿಗುರು, ಹೊಸ ಹೂವು, ಹಣ್ಣುಗಳನ್ನು ತರುವ ಯುಗಾದಿ ಚಂದವೇ ಅಲ್ಲವೇ. ʻಮಾಮರವೆಲ್ಲೋ ಕೋಗಿಲೆಯೆಲ್ಲೋ ಏನೀ ಸ್ನೇಹ ಸಂಬಂಧ; ಎಲ್ಲಿಯದೀ ಅನುಬಂಧ!ʼ ಜೊತೆಗೇ ಹಿಮ್ಮೇಳದವರಂತೆ ಅದೆಷ್ಟೊಂದು ಹಾಡುವ ಹಕ್ಕಿಗಳು ಈ ಕಾಲದಲ್ಲಿ! ನೆತ್ತಿ ಸುಡುವಷ್ಟು ಬಿಸಿಲಿರುವಾಗ ತಂಪಾಗುವಂತೆ ಬೇವನ್ನು, ಹೊಂಗೆಯನ್ನೂ ಅರಳಿಸುವ ಪ್ರಕೃತಿಯ ಮಾಯೆ ಅದೆಂಥದು! ಸೃಷ್ಟಿಯ ಸಮತೋಲನವೆಂದರೆ ಇದೇ ಅಲ್ಲವೇ. ಹಣ್ಣುಗಳ ರಾಜ ಎನ್ನಿಸಿಕೊಂಡಿರುವ ಮಾವಾಗಲೀ, ಹೂವಿನ ರಾಣಿ ಎನಿಸಿಕೊಂಡಿರುವ ಮಲ್ಲಿಗೆಯಾಗಲೀ ಮೊಗತೋರುವುದು ಈ ಕಾಲದಲ್ಲೇ. ನಮ್ಮಮ್ಮ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು – “ಮಾವಿನ ಸವಿಯನ್ನು, ಮಲ್ಲಿಗೆಯ ಕಂಪನ್ನು ಇಷ್ಟ ಪಡದಿರುವವರೇ ಇಲ್ಲ. ಹಾಗೂ ಇದ್ದಾರೆಂದರೆ ಅದವರ ರುಚಿಯ ದೋಷ; ಮಾವು ಮಲ್ಲಿಗೆಯದಲ್ಲ” ಎಂದು. ನಿಜವಲ್ಲವೇ?

ಮಾವು ಎಂದಾಕ್ಷಣ ನನ್ನ ನೆನಪು ನಮ್ಮ ಶಾಲೆಯ ದಿನಗಳಿಗೆ ಓಡಿಹೋಗುತ್ತದೆ. ಆಗೆಲ್ಲಾ ಹಲವು ಮುದುಕ, ಮುದುಕಿಯರು ಸ್ಕೂಲಿನ ಮುಂದೆ ಕಿತ್ತಳೆ, ಪರಗಿ, ನೇರಳೆ, ಬೋರೆಯಂತಹ ಹಣ್ಣುಗಳನ್ನು, ನೆಲ್ಲಿಕಾಯಿ, ಮಾವಿನಕಾಯಿ ಇಂತಹ ಹುಳಿಯಾದ ಕಾಯಿಗಳನ್ನು ಬುಟ್ಟಿಯಲ್ಲಿಟ್ಟುಕೊಂಡು, ಮುಂದೆ ಸುರಿದುಕೊಂಡು ಮಾರುತ್ತಿದ್ದರು. ಹಣ್ಣು ತೊಳೆದು ತಿನ್ನುವುದೆಲ್ಲಾ ಈ ಕಾಲಕ್ಕೆ, ಅಂದು ಅಂತಹ ರಿವಾಜುಗಳಾಗಲೀ, ಸ್ನಾನ ಸಂಸ್ಕಾರಗಳಾಗಲೀ ಇರಲಿಲ್ಲ. ಬೀದಿಯಲ್ಲಿಟ್ಟುಕೊಂಡಿದ್ದು ಸೀದಾ ಹೊಟ್ಟೆಯಲ್ಲಿರುತ್ತಿತ್ತು. ಎರಡು ಪೈಸೆಗೂ ನಾಲ್ಕಾರು ಪುಟ್ಟ ಹಣ್ಣುಗಳನ್ನು, ಕಾಯಿಗಳನ್ನು ಕೈಗಿಡುತ್ತಿದ್ದರು. ನಾವು ಕೊಂಡ ಹಣ್ಣುಗಳನ್ನು ಒಂದು ಪುಟ್ಟ ಅಲ್ಯುಮಿನಿಯಮ್ ಪಾತ್ರೆಗೆ ಸುರಿದುಕೊಂಡು ಅದಕ್ಕಷ್ಟು ಉಪ್ಪು ಖಾರ ಬೆರಸಿ, ಎಗರಿಸಿ ಎಗರಿಸಿ ಚೆನ್ನಾಗಿ ಹೊಂದಿಸಿ ಒಂದು ಕಾಗದದ ಪೊಟ್ಟಣಕ್ಕೆ ಹಾಕಿಕೊಟ್ಟರೆ… ಅಬ್ಭಾ! ಯಾವ ಅಮೃತದ ರುಚಿಯೂ ಅದರ ಮುಂದಿಲ್ಲ. ಪುಟ್ಟ ಕಿತ್ತಳೇ ಹಣ್ಣನ್ನು ಅರ್ಧಕ್ಕೆ ಹೆಚ್ಚಿ ಅದಕ್ಕೆ ಉಪ್ಪುಖಾರದ ಪುಡಿಯನ್ನು ಬೆರೆಸಿ ನಾಲಿಗೆಗೆ ಸವರಿಕೊಳ್ಳುತ್ತಿದ್ದರೆ, ಎಂತಹ ಬಾಯಿಕೆಟ್ಟು ರುಚಿ ಕೆಟ್ಟಿದ್ದರೂ ಓಡಿಹೋಗಬೇಕು! ಈ ಸರಕಲ್ಲೆಲ್ಲಾ ಹೆಚ್ಚಿನ ಬೆಲೆ ಎಂದರೆ ಗಿಣಿಮೂತಿ ಮಾವಿನಕಾಯಿಗೆ. ಪುಟ್ಟವಕ್ಕೆ ಐದು ಪೈಸೆಯಿಂದ ಹಿಡಿದು ದೊಡ್ಡ ಕಾಯಿಗಳು ಗರಿಷ್ಟವೆಂದರೆ ಇಪ್ಪತ್ತೈದು ಪೈಸೆ. ನಮ್ಮ ರೇಂಜ್‌ ಯಾವಾಗಲೂ ಐದರಿಂದ ಹತ್ತು ಪೈಸೆ ಮಾತ್ರಾ. ಅದೂ ಪರೀಕ್ಷೆ ಮುಗಿಯುವ ತನಕ ಏನೇ ಆದರೂ ಮಾವಿನಕಾಯನ್ನು ತಿನ್ನಲೇಬಾರದು ಎಂದು ಮನೆಯಲ್ಲಿ ಕಟ್ಟಪ್ಪಣೆ. ತಿಂದು ಜ್ವರ ಕೆಮ್ಮು ಬಂದು ಪರೀಕ್ಷೆಗೇ ಚಕ್ಕರ್‌ ಕೊಡುವಂತಾದರೆ ಎನ್ನುವ ಕಾಳಜಿ. ಅಪ್ಪಣೆಗಳನ್ನು ಮೀರುವುದರಲ್ಲಿರುವ ಖುಷಿ, ಪಾಲಿಸುವುದರಲ್ಲಿದೆಯೇ! ಹೇಗೋ ಅತ್ತೂ, ಕರೆದೂ ಎಂದೋ ಒಂದೊಂದು ದಿನವಾದರೂ ಕಾಸು ಗಿಟ್ಟಿಸಿಕೊಳ್ಳುತ್ತಿದ್ದೆವು. ಈ ತ್ಯಾಗಕ್ಕೆ ಪ್ರತಿಫಲವಾಗಿ ಕಡೆಯ ಪರೀಕ್ಷೆಯ ದಿನ ಹಟಮಾಡಿ ಒಂದಿಡೀ ಹತ್ತುಪೈಸೆಯ ಮಾವಿನಕಾಯನ್ನು ಕೊಂಡು ತಿಂದರೆ ಭೂತಬಲಿ ಹಾಕಿದಂತೆ! ಆಮೇಲೆ ಶಾಲೆಯ ಕಡೆ ಹೋಗುವಂತೆಯೂ ಇಲ್ಲ; ಹಣ್ಣುಕಾಯಿನ ಅಜ್ಜಿಯರೂ ಇಲ್ಲ.

ನಾನು ಹೈಸ್ಕೂಲಿಗೆ ಹೋಗುತ್ತಿದ್ದ ಕಾನ್ವೆಂಟಿನಲ್ಲಿ ದೊಡ್ಡ ಮಾವಿನ ಮರದ ತೋಪು ಇತ್ತು. ಮಧ್ಯಾಹ್ನ ಊಟದ ಸಮಯದಲ್ಲಿ ಎಲ್ಲರೂ ತಂತಮ್ಮ ಗುಂಪಿನೊಡನೆ ಹೋಗಿ ನಿಗದಿ ಮಾಡಿಕೊಂಡಿದ್ದ ಮಾವಿನ ಮರದ ಕೆಳಗೆ ಕುಳಿತು ಊಟ ಮಾಡುತ್ತಿದ್ದೆವು. ಅಲ್ಲಿನ ಸಿಸ್ಟರ್‌ಗಳು ಅದೆಷ್ಟು ಶಿಸ್ತನ್ನು ಪಾಲಿಸುತ್ತಿದ್ದರೆಂದರೆ ಆ ಸಮಯಕ್ಕೆ ಮುಂಚೆಯೇ ಆಳುಗಳನ್ನು ಬಿಟ್ಟು ಉದುರಿದ ಕಾಯಿಗಳೆಲ್ಲವನ್ನೂ ಹುಡುಕಿ ಹುಡುಕಿ ಆರಿಸಿಕೊಂಡು ಹೋಗಿರುತ್ತಿದ್ದರು. ಮತ್ತು ಊಟದ ಸಮಯದ ಉದ್ದಕ್ಕೂ ತೋಪಿನ ಬಾಗಿಲಲ್ಲೇ ನಿಂತು ಯಾರಾದರೂ ಕಲ್ಲೆಸೆಯುತ್ತಿದ್ದಾರೆಯೇ, ಹತ್ತಿ ಕಿತ್ತುತ್ತಿದ್ದಾರೆಯೇ ಎನ್ನುವ ಕಣ್ಗಾವಲನ್ನು ಇರಿಸಿಕೊಂಡು ನಿಂತಿರುತ್ತಿದ್ದರು. ಟೊಂಗೆಟೊಂಗೆಯಲ್ಲೂ ಜಿಗಿಯುತ್ತಿರುವ ಎಳೆಯ ಮಾವಿನಕಾಯಿಗಳು… ಕಣ್ಣೋಟಕ್ಕಷ್ಟೇ, ಕೈಗಿಲ್ಲ! ನಾವು ಕುಳಿತಿರುವಾಗಲೇ, ನಮ್ಮ ಅದೃಷ್ಟ ಖುಲಾಯಿಸಿ ಯಾವುದಾದರೂ ಕಾಯಿ ಬಿದ್ದರೆ ಅದು ನಮ್ಮ ಪುಣ್ಯ. ಅದು ಹೇಗೋ ಟಿಫಿನ್‌ ಬಾಕ್ಸಿನ ಮುಚ್ಚಳದಿಂದಲೇ ಕತ್ತರಿಸಿ ಹಂಚಿಕೊಂಡು ತಿಂದಾಗ ಅದೆಂಥ ಆನಂದ. ಕದ್ದ ಮಾಲಿಗಿರುವ ರುಚಿ ಕೊಂಡದ್ದಕ್ಕಿದೆಯೇ? ನೆತ್ತಿಗೇರಿ ಜುಟ್ಟು ನಿಮಿರಿಸುತ್ತಿದ್ದ ಹುಳಿ ಅದೆಷ್ಟು ರುಚಿ! ಅಂತೂ ಅಂತಹ ಅದೃಷ್ಟವೂ ಎಂದಾದರೊಮ್ಮೆ ಒದಗಿ ಬರುತ್ತಿತ್ತು.

ಈಗ ಮತ್ತೆ ಯುಗಾದಿ ಹಬ್ಬಕ್ಕೆ ಬರೋಣ. ಹಬ್ಬದ ದಿನ ಸಂಜೆ ನಾವೆಲ್ಲರೂ ಹೊಸ ಬಟ್ಟೆ ತೊಡುತ್ತಿದ್ದೆವು. ಹೊಸ ಸೀರೆಯುಟ್ಟ ಅಮ್ಮ ಪಂಚಾಂಗದಲ್ಲಿ ಈ ವರ್ಷದ ಭವಿಷ್ಯ ಹೇಗಿದೆಯೆಂದು ಓದುತ್ತಿದ್ದರು. ಮಳೆ, ಬೆಳೆ, ರಾಜಕೀಯ ಪಲ್ಲಟಗಳು ಎಲ್ಲವೂ ಮುಗಿದ ನಂತರ ಪ್ರತಿಯೊಬ್ಬರ ರಾಶಿಯ ಕಂದಾಯ ಫಲವನ್ನು ನೋಡುತ್ತಿದ್ದರು. ಕಂದಾಯ ಫಲವೆಂದರೆ ಆಯ-ವ್ಯಯ, ಆರೋಗ್ಯ-ಅನಾರೋಗ್ಯ, ರಾಜಪೂಜ-ರಾಜಕೋಪ ಹೀಗೆ ವರ್ಷದ ಮೂರೂ ಭಾಗಗಳಲ್ಲಿ ಒಬ್ಬೊಬ್ಬರ ಫಲವೂ ಹೇಗಿದೆ ಎಂದು ನೋಡುವುದು. ʻಮನೆಗಿರುವ ಆದಾಯ ಅಪ್ಪ ಒಬ್ಬರದೇ ಆಗಿರುವಾಗ ಬೇರೆ ಬೇರೆಯವರಿಗೆ ಬೇರೆ ಬೇರೆ ಆದಾಯ ಹೇಗಿರುತ್ತದೆ?ʼ ಎನ್ನುವ ಸಂಶಯ ನನಗೆ ಯಾವಾಗಲೂ. ಇದಾದ ಮೇಲೆ ಪ್ರತಿಯೊಬ್ಬರ ರಾಶಿಫಲವನ್ನೂ ಓದುತ್ತಿದ್ದರು. ಏನೋ ಚೆನ್ನಾಗಿರುವುದು ಬಂದರೆ ಓದು ಮುಂದುವರೆಯುತ್ತಿತ್ತು; ಇಲ್ಲವಾದರೆ “ಅಯ್ಯೋ ಇದ್ರಲ್ಲಿ ಬರ‍್ದಿರೋದೆಲ್ಲಾ ಆಗೋ ಹಂಗಿದ್ರೆ ಇನ್ಯಾಕೆ? ಬಂದಾಗ ಅನುಭವಿಸೋದು ಇದ್ದೇ ಇದೆ. ಸಾಕಿಷ್ಟು ತಿಳ್ಕೊಂಡಿದ್ದು” ಎನ್ನುತ್ತಾ ಪುಸ್ತಕ ಮುಚ್ಚುತ್ತಿದ್ದರು. ಎಷ್ಟೊಂದು ಆರೋಗ್ಯಕರ ಮನೋಭಾವವಲ್ಲವೇ?!

ಈಗಂತೂ ಬಿಡಿ, ಪ್ರತಿ ವಾಹಿನಿಯಲ್ಲೂ ನೂರಾರು ಜ್ಯೋತಿಷ್ಯ ಹೇಳುವವರು ಉದ್ಭವಿಸಿ ದೊಡ್ಡ ಕಾರ್ಯಕ್ರಮವನ್ನೇ ನಡೆಸಿಬಿಡುತ್ತಾರೆ. ಕೆಲವು ಸಲವಂತೂ ಇಬ್ಬರು, ಮೂವರು ಒಟ್ಟಿಗೇ ಕುಳಿತು ಅದರ ಬಗ್ಗೆ ಚರ್ಚೆ, ವಾದ-ವಿವಾದಗಳು ಬೇರೆ. ಹಲವು ಕಂಟಕಗಳಿಗೆ ಅವರು ಹೇಳುವ ಪರಿಹಾರಗಳನ್ನು ಮಾಡಹೊರಟರೆ ಗಂಟು ಮುಳುಗಿ ಜನಸಾಮಾನ್ಯರು ಮಖಾಡೆ ಮಲಗುವುದೇ ಸರಿ. ಹೋಗಲಿ ಬಿಡಿ, ಅದು ಅವರವರ ವೃತ್ತಿ ಧರ್ಮ, ಕೇಳುವವರ ಕರ್ಮ. ಯುಗಾದಿಯಂದು ಎಲ್ಲರಿಗೂ ಒಳ್ಳೆಯದನ್ನು ಹಾರೈಸೋಣ. ಮುಂದೆ ಬರುವ ದಿನಗಳು ಚೆನ್ನಾಗಿರುತ್ತವೆ ಎಂದು ಭಾವಿಸೋಣ. ನಮ್ಮಮ್ಮ ಹೇಳಿದಂತೆ ʻಬಂದರೆ ಅನುಭವಿಸುವುದು ಇದ್ದೇ ಇದೆʼ. ಈಗಿಂದಲೇ ಏಕೆ ಚಿಂತೆ? ಮನೆಯಲ್ಲಿ ಮಾಡಲು ಬರದಿದ್ದರೆ ಹೋಳಿಗೆ ಮನೆಯಿಂದಾದರೂ ತಂದು ಮಧುಮೇಹವಿಲ್ಲದಿದ್ದರೆ ಹಾಲು, ತುಪ್ಪದೊಂದಿಗೆ ಸಂಭ್ರಮಿಸುತ್ತಾ ತಿನ್ನೋಣ. ಎಲ್ಲೆಲ್ಲೂ ಮಾವಿನಕಾಯಿ ಸುರಿಯುತ್ತಿದೆ. ಚಿತ್ರಾನ್ನಕ್ಕಂತೂ ಮೋಸವಿಲ್ಲ. ನೆನಪಿಸಿಕೊಂಡರೇ ಬಾಯಲ್ಲಿ ನೀರೂರುತ್ತಿದೆ. ಕೊರೋನಾ ಕಾವಳದಲ್ಲೂ ಇಂತಹ ಸಣ್ಣ ಪುಟ್ಟ ಸಂಭ್ರಮಗಳನ್ನು ಮನಸಾರೆ ಅನುಭವಿಸೋಣ.

*********************************************

ಟಿ. ಎಸ್. ಶ್ರವಣ ಕುಮಾರಿ.

5 thoughts on “

  1. ಧನ್ಯವಾದಗಳು ಸಂಗಾತಿ ಬಳಗಕ್ಕೆ
    ಯುಗಾದಿಯ ಶುಭಾಶಯಗಳು ಕೂಡಾ

  2. ಎಷ್ಟೊಳ್ಳೆ ನೆನಪಿನ ಬುತ್ತಿಯನ್ನು ಕೊಡುತ್ತೀರಿ ನಿಮಗೂ ಉಗಾದಿ ಹಬ್ಬದ ಶುಭಾಶಯಗಳು

  3. ತುಂಬ ಚೆಂದದ ಲೇಖನ. ಪ್ಲವ ನಾಮ ಸಂಸತ್ ಸಂವತ್ಸರದ ಹಾರ್ದಿಕ ಶುಭಾಶಯಗಳು.

Leave a Reply

Back To Top