ಯುಗಾದಿ ವಿಶೇಷ ಲೇಖನ

ನವಚೈತನ್ಯಕ್ಕೆ ಮುನ್ನುಡಿ ಯುಗಾದಿ

ಸಂಗಾತಿ ಸಾಹಿತ್ಯ ಪತ್ರಿಕೆ: ಯುಗಾದಿ ಬಂತೆಂದರೆ ಸಾಕು ಪ್ರಕೃತಿಯಲ್ಲೊಂದು ಸಂಚಲನ ಮೂಡುತ್ತದೆ ಎಲ್ಲಾ ಕಡೆಗೂ ಹಸಿರುತೋರಣ ಹೂವಿನ ಶೃಂಗಾರ ಮಾಡಿದಂತೆ ಗಿಡದ ತುಂಬಾ ಹೂಗಳು ಅರಳಿ ಚಿಗುರು ಮೂಡಿ ಸಂಭ್ರಮದ ವಾತಾವರಣ ಏರ್ಪಡಿಸುತ್ತವೆ.ಇದು ನಾವು ಹೊಸವರ್ಷದ ಎಂದು ಸಂಭ್ರಮಪಡುವ ಯುಗದ ಆದಿ ಯುಗಾದಿಯ ವಿಶೇಷತೆ.

       ಹೊಸವರ್ಷವೆಂದರೆ ಇದುವೇ ಎಂದು ಸಾಧಿಸುವಂತೆ ಎಲ್ಲಾ ಕಡೆಗೂ ಹಸಿರು ಉಸಿರಾಡುವುದು. ಬಣ್ಣ ಬಣ್ಣದ ಹೂವುಗಳು ಗಿಡದ ತುಂಬೆಲ್ಲಾ ಅರಳಿ ಪರಿಸರವೆಲ್ಲಾ ಶೃಂಗಾರ. ವರ್ಷದ ಆರಂಭದ ಸಂಕೇತವನ್ನು, ಹೊಸತನದ ಕಳೆಯನ್ನು ಪ್ರಕೃತಿ ಎಲ್ಲೆಡೆ ಪಸರಿಸುತ್ತದೆ.

      ಅದೇ ಇಡೀ ಜಗತ್ತು ಹೊಸ ವರ್ಷವೆಂದು ಆಚರಿಸುವ ಜನವರಿ ಒಂದು, ಮಧ್ಯರಾತ್ರಿಯಲ್ಲಿ ನಿಶಾಚರಗಳು ಹೋರಾಡುವ ಸಮಯದಲ್ಲಿ ಪ್ರಾರಂಭವಾಗುವುದು . ಆರೋಗ್ಯ ಹಾಳು ಮಾಡಿಕೊಳ್ಳುವಂತಹ ಬೇಕರಿ ತಿನಿಸುಗಳು , ಕೇಕ್ ,ಡ್ರಿಂಕ್ಸ್ ಕೂಲಡ್ರಿಂಕ್ಸ್, ಮೋಜು-ಮಸ್ತಿ ಮಾಡುತ್ತಾರಾತ್ರಿಯೆಲ್ಲಾ ನಿದ್ದೆಗೆಟ್ಟು ಅನಾಹುತಕ್ಕೆ ಕಾರಣ ಮಾಡಿಕೊಳ್ಳುವ ಇದು ಹೊಸವರ್ಷವೇ? ಅದೇ ಭಾರತೀಯ ಪದ್ದತಿಯಂತೆ ಯುಗಾದಿಯಂದು  ನಾವು ಆಚರಿಸುವ ಹೊಸ ವರ್ಷವು ಮುಂಜಾವಿನ ಬ್ರಾಹ್ಮಿ   ಮುಹೂರ್ತದಲ್ಲಿ ಪ್ರಾರಂಭವಾಗುವುದು.ಅಂದು ಮೊದಲೇ ಶುಚಿಗೊಳಿಸಿದ ಮನೆಯಲ್ಲಿ  ಬಾಗಿಲಿಗೆ ಮಾವಿನ ತೋರಣ ಕಟ್ಟಿ , ಹೂವಿನ ಅಲಂಕಾರ ಮಾಡಿ , ಅಂಗಳದಲ್ಲಿ ಸುಂದರ ರಂಗೋಲಿಗೆ ಬಣ್ಣದ ಮೆರಗು . ಎಲ್ಲರೂ ಬೇವು ಬೆರೆಸಿದ ಬಿಸಿ ನೀರಿನಲ್ಲಿ ಅಭ್ಯಂಗ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮನೆಯಲ್ಲೇ ಮಾಡಿದ ಹೋಳಿಗೆ,ಕಡುಬು, ಅನ್ನ ಸಾರು ಸಂಡಿಗೆ, ಹಪ್ಪಳ ,ಉಪ್ಪಿನಕಾಯಿ, ಮೊಸರು ಮುಂತಾದ ಬಗೆಬಗೆಯ ಅಮೃತದಂತಹ ಸವಿಭೋಜನ ಜೊತೆಗೆ ಜೀವನದ ಮರ್ಮ ಸಾರುವ ಬೇವು-ಬೆಲ್ಲವನ್ನು ಮನೆಮಂದಿಯಲ್ಲಾ ಸೇರಿ ಸವಿದು ಸಂಭ್ರಮಿಸುವ ನಮ್ಮ ಹಬ್ಬ ತನುಮನಕ್ಕೆ ಹಿತಕರ. ಪ್ರಕೃತಿಗೆ ಹತ್ತಿರ.

ಇಡೀ ವರ್ಷ ಉತ್ಸಾಹ ಸಂಭ್ರಮದಿಂದ ಕಳೆಯುವಂತೆ ಚೈತನ್ಯ, ಬರವಸೆ ಮೂಡಿಸುವ ಈ ನಮ್ಮ ಯುಗಾದಿ ನಿಜವಾದ ಹೊಸ ವರ್ಷ.

     ನಮ್ಮ ಮನೆಯಲ್ಲಂತೂ ಯುಗಾದಿ ಬಂದರೆ ಸಾಕು ವಾರದ ಮೊದಲೇ ಸ್ವಚ್ಛತಾ ಕಾರ್ಯ ನಡೆಯುವುದು. ಮನೆಯಲ್ಲಾ ಶುಚಿಗೊಳಿಸಿ , ಹಾಸಿಗೆ ಬಟ್ಟೆ, ಪಾತ್ರೆಗಳನ್ನು ಶುಭ್ರಗೊಳಿಸುತ್ತೇವೆ. ಅಮಾವಾಸ್ಯೆ ದಿನದಂದೇ ನಮ್ಮ ಮನೆಯಲ್ಲಿ ಹಬ್ಬ ಪ್ರಾರಂಭವಾಗುವುದು. ಮನೆಗೆ ತಳಿರು ತೋರಣ ಹೂಗಳಿಂದ ಸಿಂಗರಿಸಿ, ಆ ದಿನದಂದೇ ಘಟಸ್ಥಾಪನೆ ಮಾಡಿ ಐದು ದಿನಗಳ ಕಾಲ ನಂದಾದೀಪವನ್ನು ಹಗಲು-ಇರುಳು ಕಾಯುತ್ತೇವೆ. ಅಂದು ಹೋಸ ಗೋಧಿ,ನೆನೆಸಿದ ಕಡಲೆಕಾಳು,ಉಡಕ್ಕಿ ಸಾಮಾನು ಇಟ್ಟು ಕಾಳಿಕಾ ದೇವಿಯನ್ನು ಪೂಜಿಸುತ್ತೇವೆ.  ಹೋಳಿಗೆ ಅನ್ನ ,ಸಾರು ,ಕೋಸಂಬರಿ, ಪಲ್ಯ ಮುಂತಾದವುಗಳನ್ನು ನೈವೇದ್ಯ ಮಾಡುತ್ತೇವೆ .ಅಮವಾಸ್ಯೆ ಮರುದಿನ ಪಾಡ್ಯದಂದು ಬೇವು ಹಾಕಿದ ನೀರಿನಿಂದ ಅಭ್ಯಂಗ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಸಂಭ್ರಮಿಸುತ್ತೇವೆ.ಅಂದು ಗೋಧಿ ಹುಗ್ಗಿ, ಬೇವು ಬೆಲ್ಲ ವನ್ನು ನೈವೇದ್ಯಕ್ಕೆ ವಿಶೇಷವಾಗಿ ಮಾಡಿರುತ್ತೇವೆ.ಕಾಳಿಕಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಉಡಿ ತುಂಬಿ ದೇವಿ ಕೃಪೆಗೆ ಪಾತ್ರರಾಗುತ್ತೇವೆ.

        ಹೀಗೆ ಯುಗಾದಿ ಮನೆ ಒಳಗೂ ಹೊರಗೂ ಸಂಭ್ರಮ ಸಡಗರದ ವಾತಾವರಣವನ್ನು ಏರ್ಪಡಿಸುತ್ತದೆ.ಮಾನವರ ದೇಹ ಮನಸ್ಸುಗಳಿಗೆ,ಸಸ್ಯ ಜೀವ ಸಂಕೂಲಕ್ಕೆನವಚೈತನ್ಯ, ನವೋಲ್ಲಾಸ ಹೊತ್ತು ತರುತ್ತದೆ.

******

ಲಕ್ಷ್ಮೀದೇವಿ ಪತ್ತಾರ

Leave a Reply

Back To Top