ಅಂಕಣ ಬರಹ

ಸ್ತ್ರೀ ಅಂದರೆ ಅಷ್ಟೇ ಸಾಕೆ


“ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೇ ಸಾಕೆ “

ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರ ಈ ಸಾಲುಗಳನ್ನು ಕೇಳುವಾಗ ಕಿವಿಗಳಿಗೆ ಇಂಪಾಗುವುದಷ್ಟೇ ಅಲ್ಲ ಪ್ರತಿಯೊಬ್ಬ ಭಾವನಾಜೀವಿಗಳಲ್ಲೂ ಕಂಬನಿ ಜಾರಿ ಹೃದಯವೂ ಒಮ್ಮೆ ಆರ್ದ್ರವಾಗದೆ ಇರಲಾರದು. ಇಲ್ಲಿ ಹೆಣ್ಣಿನ ಅಂತರಂಗದ ಸೂಕ್ಷ್ಮತೆಗಳು ಪದರು ಪದರುಗಳಾಗಿ ಅನಾವರಣಗೊಂಡಿವೆ. ಜಗತ್ತಿನ ಸೃಷ್ಟಿಯಲ್ಲಿ ಸ್ತ್ರೀ ಎನ್ನುವ ಪದದ ಮಹತ್ವವೇ ಅಂತದ್ದು. ಅವಳ ನಿಸ್ವಾರ್ಥ ಕೊಡುಗೆಯೂ ಅಷ್ಟೇ  ಇದೆ. ಅವಳಿಗೆ ಅವಳೇ ಸರಿಸಾಟಿ. ಮೂಲತಃ ನಮ್ಮ ನಾಡಿನಲ್ಲಿ ಸ್ತ್ರೀಯರಿಗೆ ದೈವಿಕ ನೆಲೆಗಟ್ಟಿನ ಸ್ಥಾನವಿದೆ. ಹೆಣ್ಣನ್ನು ಪೂಜಿಸುವ, ಗೌರವಿಸುವ ಸಂಸ್ಕೃತಿ, ಸಂಪ್ರದಾಯಗಳು ನಮ್ಮಲ್ಲಿ ರಕ್ತಗತವಾಗಿ ಪರಂಪರಾನುಗತವಾಗಿ ನರನಾಡಿಗಳಲ್ಲಿ ಪ್ರವಹಿಸುತ್ತಾ ಬಂದಿವೆ.

“ಎಲ್ಲಿ ಸ್ತ್ರೀಯರಿರುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ” ಎನ್ನುವಂತಹ ಧಾರ್ಮಿಕ ಹಿನ್ನೆಲೆಯ ಘನ ಸಂಸ್ಕೃತಿ ನಮ್ಮದು. ಸ್ವಾತಂತ್ರ್ಯ ಪೂರ್ವದಲ್ಲಿ ಅನೇಕ ಮೂಢ  ನಂಬಿಕೆಗಳ ತಳಹದಿಯಲ್ಲಿ ಶಿಕ್ಷಣದಿಂದ ವಂಚಿತರಾಗಿ ಹಲವು ರೀತಿ ರಿವಾಜುಗಳಿಗೆ ಗುರಿಯಾಗಿ ನಾಲ್ಕು ಗೋಡೆಗಳ ನಡುವೆಯೇ ಬದುಕು ಸವೆಸಿದ ಮಹಿಳೆಯರು ಇಂದು ಅವರು ಅಡಿಯಿಡದ ಗಡಿಗಳಿಲ್ಲ. ಆದರೆ ಹೊಸ್ತಿಲು ದಾಟಿ ಬಾನಂಗಳದವರೆಗೂ ಅಸ್ತಿತ್ವ ವಿಸ್ತರಿಸಿ ಮೂಡಿಸಿದ ಹೆಜ್ಜೆಗುರುತುಗಳ ಈ ಸುದೀರ್ಘ ಪ್ರಯಾಣ ಸುಲಭವಾಗಿರಲಿಲ್ಲ. ಪ್ರತಿಯೊಂದನ್ನು ದಕ್ಕಿಸಿಕೊಳ್ಳುವಾಗಲೂ ಅವಳ ಸ್ಥಿತಪ್ರಜ್ಞೆ ಜಾಗೃತಗೊಂಡು ಅಂತರ್ಗತವಾಗಿದ್ದ ಛಲ, ಹೋರಾಟಗಳು ಪುಟಿದೆದ್ದು ವಿಜಯದ ಪತಾಕೆ ಹಾರಿಸಿಯೇ ತೀರಿದ್ದಾಳೆ.

ಇಲ್ಲಿ ಹಲವಾರು ಮಹಿಳಾಪರ ಹೋರಾಟಗಾರರನ್ನೂ ನೆನೆಯಬಹುದು. ಆಳುವವರು ತುಳಿಯುವವರ ನಡುವೆ ಉಳಿಸುವ ಕೆಲಸದಲ್ಲಿ ನಿರತರಾದ ಅದೆಷ್ಟೋ ಧೀಮಂತ ನಾಯಕರು ನಮಗಿಂದು ಸ್ಫೂರ್ತಿ. ಅಂಥವರ ಸಾಲಿನಲ್ಲಿ ಅರಿವಿನ ಕ್ರಾಂತಿಗೆ ಒಳಗಾಗಿ ಕೈಹಿಡಿದ ಮಡದಿಗೆ ತಾನೇ ಗುರುವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೊಸ ಭಾಷ್ಯ ಬರೆದ ಜ್ಯೋತಿಬಾ ಕೂಡ ಒಬ್ಬರು. ಗುರಿ ತೋರಿದ ದಾರಿಯಲ್ಲಿ ನಡೆದು ಶಿಕ್ಷಣ ಮಹಿಳೆಯರಿಗೆ ಕನಸಿನಲ್ಲಿಯೂ ಮೂಡದ ಅಸ್ಪಷ್ಟ ಕಲ್ಪನೆಯಾಗಿದ್ದ ಆ ಕಾಲದಲ್ಲಿ  ಶಿಕ್ಷಕ ತರಬೇತಿ ಪಡೆದು ದೇಶದ ಮೊದಲ ಶಿಕ್ಷಕಿ ಎಂಬ ಬಿರುದಿಗೆ ಪಾತ್ರವಾಗಿ ಹೆಣ್ಣುಮಕ್ಕಳಿಗಾಗಿ ಹಿಂದುಳಿದವರಿಗಾಗಿ ಹಲವಾರು ಶಾಲೆಗಳನ್ನು ತೆರೆದ ಸಾವಿತ್ರಿಬಾಯಿ ಫುಲೆಯವರದ್ದು ಅಚ್ಚಳಿಯದೆ ಉಳಿಯುವ ಒಂದು ವ್ಯಕ್ತಿತ್ವ. ಜೊತೆಗೆ ಅವರೊಂದಿಗೆ ಕೈಜೋಡಿಸಿದ ಫಾತಿಮಾ ಶೇಕ್ ಅವರು ಕೂಡ. ಅದಾಗಲೇ ಹೆಣ್ಣುಮಕ್ಕಳಲ್ಲಿ ವೈಚಾರಿಕ ಪ್ರಗತಿ ಚಾಲ್ತಿಯಲ್ಲಿತ್ತು ಎಂಬುದಕ್ಕೆ ಸಾಕ್ಷಿಯಾಗಿ ನಿಲ್ಲುವುದು ಸಾವಿತ್ರಿ ಫುಲೆಯವರ ಶಿಷ್ಯೆ ದೇಶದ ಮೊತ್ತ ಮೊದಲ ಸ್ತ್ರೀವಾದಿ ಲೇಖಕಿ ತಾರಾಬಾಯಿ ಶಿಂಧೆಯವರು ಬರೆದ ‘ಸ್ತ್ರೀ ಪುರುಷ ತುಲನ’.

ವೇದಗಳ ಕಾಲದಲ್ಲಿ ಗಾರ್ಗಿ ಮೈತ್ರೆಯಿಯಂತಹ ಆತ್ಮಜ್ಞಾನಿಗಳ ವಿಚಾರಧಾರೆಗಳು ಮಹಿಳೆಯರ ಬಾಯಿಗಳಿಗೆ ಬೀಗ ಜಡಿದಿದ್ದ ಕಾಲದಲ್ಲಿ ಅವರಿಗೆ ಕೀಲಿಯಾಗಿದ್ದು ಅವರ ಒಳಗಿದ್ದ ಸಂವೇದನೆಗಳು ಎಂಬುದನ್ನು ತೋರಿಸಿಕೊಟ್ಟವು.

“ಪೆಣ್ಣಲ್ಲವೇ ತಮ್ಮನ್ನೆಲ್ಲ ಪಡೆದ ತಾಯಿ

ಪೆಣ್ಣಲ್ಲವೆ ಪೊರೆದವಳು

ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು

ಕಣ್ಣು ಕಾಣದ ಗಾವಿಲರು” ಸಂಚಿಯ ಹೊನ್ನಮ್ಮಳ ‘ಹದಿಬದೆಯ ಧರ್ಮ’ ದಲ್ಲಿ ಬರುವ ಈ ಸಾಲುಗಳು ಹೆಣ್ಣಿನ ಸಾಮಾಜಿಕ ಸ್ಥಿತಿಗತಿಗಳನ್ನು ತೋರಿಸುವಲ್ಲಿ ಸಹಾಯಕವಾಗಬಲ್ಲವು. ಇನ್ನು ಅಕ್ಕನಂತಹವರು ಅನುಭಾವ ಹಾಗೂ ಅಧ್ಯಾತ್ಮದ ಮಧ್ಯಬಿಂದುವಾಗಿ ಬಯಲೊಳಗೆ ಬೆತ್ತಲಾಗಿ ಅಂದಿನ ಕಾಲದಲ್ಲೇ ಸಂಪ್ರದಾಯಗಳ ವಿರುದ್ಧ ಸಿಡಿದೆದ್ದು ತನ್ನಿಚ್ಛೆಯಂತೆ ಬದುಕುವ ಮುಕ್ತ ಮಾರ್ಗವನ್ನು ಆಯ್ದುಕೊಂಡ ದಿಟ್ಟ ಪ್ರತಿಮೆಯಾಗಿ ಎದುರುಗೊಳ್ಳುತ್ತಾರೆ.

ವೀರತೆಗೆ ಹೆಸರಾಗಿ ಚೆನ್ನಮ್ಮ, ಅಬ್ಬಕ್ಕ, ಓಬವ್ವ,ಅಹಲ್ಯಬಾಯಿ, ಲಕ್ಷ್ಮಿಬಾಯಿಯಂತವರು ಚರಿತೆಯ ಪುಟಗಳಲ್ಲಿ ಭದ್ರವಾಗಿದ್ದಾರೆ. ಹೆಸರಿಸುತ್ತಾ ಹೋದರೆ ಕಲ್ಪನಾ ಚಾವ್ಲಾ, ನೀರಜಾ ಬಾನೊಟ್, ಇಂದಿರಾಗಾಂಧಿಯಂತಹ ಉಕ್ಕಿನ ಮಹಿಳೆಯರು ನಮ್ಮ ನಾಡಿನ ಹೆಮ್ಮೆಯಾಗಿ ಕಾಣಸಿಗುತ್ತಾರೆ.

ಇಂತೆಲ್ಲ ಸಾಧನೆಗಳ ಗರಿ ಮುಡಿದ ಸ್ತ್ರೀಯರು  ಇದೆಲ್ಲದರುಗಳ ಆಚೆಗೂ ಇಂದು ಸಂಪೂರ್ಣ ಶೋಷಣೆರಹಿತ ಜೀವನವನ್ನು ಅನುಭವಿಸುತ್ತಿದ್ದಾರೆಯೇ? ಪ್ರಶ್ನಿಸಿಕೊಂಡರೆ ಹೌದು ಎನ್ನುವುದು ಕಷ್ಟವೇ ಸರಿ. ಪುರುಷಪ್ರಧಾನ ವ್ಯವಸ್ಥೆಯಲ್ಲಿ ಕೌಟುಂಬಿಕವಾಗಿಯೋ, ಸಾಮಾಜಿಕವಾಗಿಯೋ, ಔದ್ಯೋಗಿಕವಾಗಿಯೋ, ಆರ್ಥಿಕವಾಗಿಯೋ, ರಾಜಕೀಯವಾಗಿಯೋ ಮತ್ತೆಲ್ಲೋ.. ಇಂದಿಗೂ ಮಹಿಳೆಯರು ನುಂಗಲಾರದ ತುತ್ತನ್ನು ಸಹಿಸಿಕೊಳ್ಳುತ್ತಿರುವುದು ಮಾತ್ರ ಹುಸಿಯಲ್ಲ. ಜಗತ್ತು ಎಷ್ಟೇ ವೈಜ್ಞಾನಿಕವಾಗಿ ಮುಂದುವರೆದರೂ ಆಲೋಚನೆಗಳು ಮಾತ್ರ ಸಂಪ್ರದಾಯದ ಬೇರಿನಲ್ಲೇ ಮುಂದುವರೆಯುತ್ತಿರುವುದು ವಿಪರ್ಯಾಸ.

ಅಂದು “ಮಹಿಳೆಯರು ಅರ್ಧರಾತ್ರಿಯಲ್ಲೂ ನಿರ್ಭೀತಿಯಿಂದ ಓಡಾಡುವಂತಾಗಬೇಕು” ಎಂದು ರಾಮರಾಜ್ಯದ ಕನಸು ಕಂಡಿದ್ದರು ಗಾಂಧೀಜಿ. ಆದರೆ ವಾಸ್ತವದಲ್ಲಿ ಇನ್ನೂ ಈ ಸ್ಥಿತಿ ತಲುಪಲು ಸಾಧ್ಯವಾಗಿಲ್ಲ. ತಮ್ಮ ದೈನಂದಿನ ವಿರಾಮರಹಿತ ಜೀವನದಲ್ಲಿ ಸದಾ ಜಂಜಡಗಳಿಂದಲೇ ಕಾಲಕಳೆಯುವ ಮಹಿಳೆಯರು ಎಷ್ಟೇ ಸಬಲೆಯರಾದರೂ ಪರಾಧೀನರಾಗಿಯೇ ಬದುಕಬೇಕಾಗಿದೆ. ಸಾಮಾಜಿಕ ಸ್ಥಿತಿಗತಿಗಳು ಸುಧಾರಣೆಯ ಹಂತದಲ್ಲಿದ್ದರೂ ಹಗಲು ಇರುಳಿನ ವ್ಯತ್ಯಾಸವಿಲ್ಲದೆ ಕಾಮದಾಹಿಗಳ ದೌರ್ಜನ್ಯಕ್ಕೆ ಬಲಿಯಾದ ದೆಹಲಿಯ ನಿರ್ಭಯಾ, ಕೊಪ್ಪಳದ ಪಶುವೈದ್ಯೆಯಂತಹವರನ್ನು ನೆನೆದಾಗ ಯಾರ ಗುಂಡಿಗೆಯಾದರೂ ಒಮ್ಮೆ ಝಲ್ ಎನ್ನದೆ ಇರಲಾರದು. ಹೆಣ್ಣು ಎಷ್ಟೇ ಸಮಾನಳಾಗಿ ಮುಂದುವರೆದರೂ ಇಂತಹ ಪರಿಸ್ಥಿತಿಯ ಕೈಗೊಂಬೆಗಳಾಗಿ ಹೇಳಹೆಸರಿಲ್ಲದೆ ಮಾಯವಾಗುವ ಘೋರ ದುರಂತಗಳು ಅವರ ಅಸಹಾಯಕತೆಗೆ ಪುರಾವೆಗಳು. ಗಂಡು ಹೆಣ್ಣು ಕೇವಲ ದೈಹಿಕ ವ್ಯತ್ಯಾಸವೇ ಹೊರೆತು ಜೈವಿಕ ವ್ಯತ್ಯಾಸವಲ್ಲ.  ಎಳೆಯಷ್ಟು ಸ್ಫೂರ್ತಿ ಸಿಕ್ಕರೆ ಸಾಕು ಇಳೆಯಷ್ಟು ಸಾಧನೆಮಾಡಿ ತೋರಬಲ್ಲವಳು ಸ್ತ್ರೀ.. ಭೂಮಿಯನ್ನು ತಾಯಿಗೆ ಹೋಲಿಸುವ ನಾವು ಅವಳನ್ನು ನೋಡುವ ದೃಷ್ಟಿ ಸಹನೆ, ತಾಳ್ಮೆ, ಒಲುಮೆಯೇ ಆಗಿರಬೇಕು. ಅವಳ ಎಲ್ಲಾ ಒತ್ತಡಗಳ ನಡುವೆಯೂ ತನ್ನ ಪರಿವಾರಕ್ಕಾಗಿ ತಮ್ಮ ಜೀವನವನ್ನೇ ಮೀಸಲಿಟ್ಟು ಮಾತೆಯಾಗಿ, ಮಡದಿಯಾಗಿ, ಮಗಳಾಗಿ, ಸೋದರಿಯಾಗಿ ಸಲಹುವ ಪ್ರತಿ ಹೆಣ್ಣನ್ನು ಗೌರವದಿಂದ ಕಾಣುವಂತಾಗಬೇಕು.

ಜ್ಯೋತಿಬಾ ರಂತಹ ವೈಚಾರಿಕತೆ, ಸ್ವಾಮಿ  ವಿವೇಕಾನಂದರಂತಹ ಭ್ರಾತೃತ್ವ ಪ್ರೇಮ, ಅಂಬೇಡ್ಕರರಂತಹ ಸಾಮಾಜಿಕ ಕಾಳಜಿಯ ನೆರಳಿನಲ್ಲಿ ಅರಳಿದ ಪ್ರತಿಯೊಂದು ಪಾರಿಜಾತವು ಘಮವ ಬೀರುತ್ತಲೇ ಸಾಗಬೇಕು…

******************************

ತೇಜಾವತಿ ಎಚ್ ಡಿ

ಶಿಕ್ಷಕಿ,ಲೇಖಕಿ. ಪ್ರಕಟಿತ ಕವನ ಸಂಕಲನಗಳು:

1 ಕಾಲಚಕ್ರ 2 ಮಿನುಗುವ ತಾರೆ 2 ಬಾ ಭವಿಷ್ಯದ ನಕ್ಷತ್ರಗಳಾಗೋಣ

Leave a Reply

Back To Top