ಪುಸ್ತಕ ಸಂಗಾತಿ
‘ ಗಾಲಿಬ್ ಸ್ಮೃತಿ’
ಗಜಲ್ ಪ್ರೇಮಿಗಳ ಸ್ಮೃತಿಯಲ್ಲಿ ಉಳಿಯುವ ಭಾವಸುಮಗಳ ಗುಚ್ಛ ‘ ಗಾಲಿಬ್ ಸ್ಮೃತಿ’
ಈಗಾಗಲೇ ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಡಾ.ಮಲ್ಲಿನಾಥ ತಳವಾರ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪಚಿತರಾಗಿದ್ದಾರೆ. ಕಲಬುರ್ಗಿಯ ನೂತನ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ನೂರೊಂದು ಗಜಲ್ ಗಳನ್ನು ‘ ಗಾಲಿಬ್ ಸ್ಮೃತಿ ‘ ಎಂಬ ಶೀರ್ಷಿಕೆಯಡಿಯಲ್ಲಿ ತಮ್ಮ ಸರಳ ಪದಪುಂಜಗಳ ಮೂಲಕ ಸಂಕಲನವನ್ನಾಗಿಸಿದ್ದಾರೆ. ಇದು ಡಾ.ತಳವಾರ ಅವರ ಮೊದಲ ಗಜಲ್ ಸಂಕಲನ . ಪ್ರೀತಿ, ಪ್ರೇಮ, ಆಂತರ್ಯದ ನೋವುಗಳ ನಿವೇದನೆ, ಶೃಂಗಾರ ರಸದ ಭಾವಗಳು, ಸಾಮಾಜಿಕ ಜೀವನದ ಆಗು ಹೋಗುಗಳು……ಹೀಗೆ ಎಲ್ಲವನ್ನೂ ಗಜಲ್ ಗಳಲ್ಲಿ ದಾಖಲಿಸಿರುವ ಡಾ.ತಳವಾರ ಅವರು ಗಜಲ್ ರಚನೆಯ ಬಗ್ಗೆ ಪರಿಪೂರ್ಣ ಸ್ಪಷ್ಟತೆಯನ್ನು ಹೊಂದಿರುವುದು ಮೇಲ್ನೋಟಕ್ಕೇ ತಿಳಿದುಬರುತ್ತದೆ.
ಕನ್ನಡ ಗಜಲ್ ಕ್ಷೇತ್ರದ ಪಿತಾಮಹರಾದ ಶ್ರೀ. ಶಾಂತರಸರಿಂದ ಪ್ರೇರಿತರಾಗಿ ರಚನೆಯ ಹಾದಿಯಲ್ಲಿ ಮುನ್ನಡೆದವರು ಅದೆಷ್ಟೋ ಮಂದಿ. ಈಚಿನ ವರ್ಷಗಳಲ್ಲಿ ನಿಯಮಬದ್ಧವಾಗಿ ಗಜಲ್ ಗಳನ್ನು ರಚಿಸುವ ಪ್ರಯತ್ನದಲ್ಲಿ ಹಲವರು ಯಶಸ್ವಿಯಾಗಿರುವುದೂ ಒಳ್ಳೆಯ ಬೆಳವಣಿಗೆಯೇ ! ಅವರಲ್ಲಿ ಒಬ್ಬರಾದ ‘ ರತ್ನರಾಯಮಲ್ಲ’ ( ಮಲ್ಲಿ ) ಎಂಬ ಗಜಲ್ ನಾಮದಿಂದ ರಚಿಸುತ್ತಿರುವ ಡಾ.ತಳವಾರ ಅವರು ತಮ್ಮ ಸತ್ವಪೂರ್ಣ ಗಜಲ್ ಗಳಿಂದ ಖ್ಯಾತಿ ಪಡೆದಿದ್ದಾರೆ. ಅಲ್ಲದೇ, ಅಂತರ್ಜಾಲದ ಮೂಲಕ ಕಲಿಕೆಯಲ್ಲಿ ಉತ್ಸಾಹ ತೋರುತ್ತಿರುವ ಕವಿ , ಕವಯಿತ್ರಿಯರಿಗೆ ಮಾರ್ಗದರ್ಶಕರೂ ಆಗಿದ್ದಾರೆ.
‘ಗಾಲಿಬ್ ಸ್ಮೃತಿ ‘ ಯ ಆರಂಭದ ಸುಮಾರು ಮೂವತ್ತು ಪುಟಗಳಲ್ಲಿ ಗಜಲ್ ನ ಮೂಲ, ರಚನೆಯ ಶೈಲಿ, ಮುಖ್ಯ ಅಂಗಗಳಾದ ಮತ್ಲಾ, ಷೇರ್, ಕಾಫಿಯಾ, ರದೀಫ್ , ಮಕ್ತಾ ಹಾಗೂ ವಿವಿಧ ಬಗೆಗಳ ಬಗ್ಗೆ ವಿಸ್ತೃತವಾದ ಮಾಹಿತಿಯನ್ನು ನೀಡಿರುವ ಡಾ.ತಳವಾರ ಅವರು ನಿಜಕ್ಕೂ ಅಭಿನಂದನಾರ್ಹರು. ತಮ್ಮ ಆಳವಾದ ಅಧ್ಯಯನದಿಂದ ಗಜಲ್ ಲೋಕದಲ್ಲಿ ಓದುಗರನ್ನು ವಿಹರಿಸುವಂತೆ ಮಾಡಿ , ಜ್ಞಾನದ ಪರಿಧಿಯನ್ನು ವಿಸ್ತರಿಸಿದ ಅವರ ಪ್ರಯತ್ನ ಶ್ಲಾಘನೀಯ. ಈ ಕಾರಣಕ್ಕೇ ಗಜಲ್ ರಚನೆಯ ಗುಂಪೊಂದರಲ್ಲಿ ಕಲಿಕಾರ್ಥಿಯಾದ ನನಗೆ ಪರಿಚಯವಾದ ಡಾ.ತಳವಾರ ಅವರನ್ನು ನಾನು ಗುರು ಸಮಾನರಾಗಿ ಪರಿಗಣಿಸಿರುವುದು.
ಕೇವಲ ಮುರದ್ಧಫ್ , ಗೈರ್ ಮುರದ್ಧಫ್ ಮತ್ತು ತರಹೀ ಗಜಲ್ ಗಳ ಬಗ್ಗೆ ಮಾತ್ರ ತಿಳಿದಿರುವ ರಚನಕಾರರಿಗೆ ಅಶ್ಲೀಲ ಪದಬಳಕೆ ಇಲ್ಲದ, ಹೆಣ್ಣಿನ ಸೌಂದರ್ಯವನ್ನು ಬಣ್ಣಿಸುವ ಜಿನ್ ಸಿ ಗಜಲ್ , ಆಧ್ಯಾತ್ಮದ ಮಹತ್ವವನ್ನು ಸಾರುವ ಸೂಫಿ ಗಜಲ್ , ಬೌದ್ಧ ಧರ್ಮದ ಸಿದ್ಧಾಂತಗಳನ್ನು ಬಿಂಬಿಸುವ ಝೆನ್ ಗಜಲ್ , ಎಲ್ಲಾ ಷೇರ್ ಗಳಲ್ಲಿ ಒಂದೇ ವಿಷಯವನ್ನು ಆಧರಿಸಿ ರಚಿತಗೊಂಡ ಮುಸಲ್ ಸಲ್ ಗಜಲ್ , ಬೇರೆ ಬೇರೆ ವಿಷಯಗಳು ಪ್ರಸ್ತಾಪಗೊಳ್ಳುವ ಗೈರ್ ಮುಸಲ್ ಸಲ್ ಗಜಲ್, ಲಾವಣಿ ರೂಪದ ಆಂಟಿ ಗಜಲ್ ( ಮೂರು ಕಾಫಿಯಾಗಳ ಪ್ರಯೋಗವೂ ಇದೆ ) , ರಾಜಕೀಯ ವಿಚಾರಧಾರೆಗಳನ್ನು ಹೊಂದಿರುವ ಸಿಯಾಸಿ ಗಜಲ್…….ಹೀಗೆ ವಿವಿಧ ಪ್ರಕಾರಗಳ ಬಗ್ಗೆ ಅರಿವನ್ನು ಮೂಡಿಸುವ ಈ ಅಮೂಲ್ಯ ಕೃತಿ ಕಲಿಕೆಯ ಹಾದಿಗೆ ದಿಶೆ ತೋರುವ ಕೈಮರವಾಗಿ ನಿಲ್ಲುತ್ತದೆ.
ಗಾಲಿಬ್ ಸ್ಮೃತಿ ಯ ಕೆಲವು ಗಜಲ್ ಗಳ ಸಾಲುಗಳನ್ನು ನಾನಿಲ್ಲಿ ಉಲ್ಲೇಖಿಸುತ್ತಿದ್ದೇನೆ.
ವಿಶ್ವ ಮಾನವನು ಕುಬ್ಜನಾಗುತ್ತಿದ್ದಾನೆ ಇಂದು
ಗುಂಪುಗಾರಿಕೆಯೇ ನಾಯಕತ್ವವಾಗಿದೆ ಇಂದು ( ಗಜಲ್ ೧ )
ಮಲ್ಲಿ ಯ ಹೃದಯ ಕಂಪಿಸುತಿದೆ ಕಂಬನಿಯ ಮಡುವಿನಲ್ಲಿ
ಕಂಗಳ ಉಪ್ಪು ನೀರು ಬತ್ತಿ ಹೋಗುವ ತನಕ ಜೊತೆಯಲ್ಲಿರು ( ಗಜಲ್ ೫ )
ಮನದ ಸಿರಿಯು ದೇಹದ ಐಸಿರಿಯನ್ನು ಇಮ್ಮಡಿಸಿದೆ
ಆತ್ಮಗಳ ಸಾಂಗತ್ಯದಲ್ಲಿ ಒಂದಾಗೋಣ ಬಾ ಗೆಳತಿ ( ಗಜಲ್ ೧೬ )
ಊಸರವಳ್ಳಿಯ ಸಾಮಾಜಿಕ ವ್ಯವಸ್ಥೆಯನ್ನು ಧಿಕ್ಕರಿಸಬೇಕಾಗಿದೆ ದೋಸ್ತ
ಸಂಬಂಧಗಳಲ್ಲಿಯ ಹುಳುಕುಗಳನ್ನು ಕಿತ್ತೆಸೆಯಬೇಕಾಗಿದೆ ದೋಸ್ತ ( ಗಜಲ್ ೨೪ )
ನಿನ್ನ ಕಂಗಳು ಮಾದಕತೆಯ ಪ್ರೇಮಲೋಕವನ್ನೇ ಸೃಷ್ಟಿಸಿವೆ ನನ್ನ ಎದೆಯಲ್ಲಿ
ಪಿಳುಕಿಸುವ ನಿನ್ನ ಕಣ್ರೆಪ್ಪೆಗಳೇ ಮಧುಬಟ್ಟಲಾಗಿರಲು ಬೇರೆ ಮಧುವೇಕೆ ನನಗೆ ? (ತರಹೀ ಗಜಲ್ ೨೮ )
ಕಾಯುವ ಕಾಲವೇ ಕೊಲ್ಲಲು ಹವಣಿಸುತಿದೆ
ಒಡಲನ್ನು ಮರೆತು ಜೀವಿಸಬೇಕಾಗಿದೆ ಗುರು ( ಗಜಲ್ ೩೩ )
ನನ್ನ ಪ್ರೇಮ ಕಾವ್ಯವು ಗಜಲಿನಲ್ಲಿ ಮೂರ್ತ ರೂಪವ ಪಡೆಯುತಿದೆ
ಪ್ರತಿ ಮಿಸ್ರಾದಲ್ಲಿಯೂ ನಿನ್ನಯ ಪ್ರತಿಬಿಂಬವೆ ನುಲಿಯುವುದು ರಾಧೆ ( ಗಜಲ್ ೪೧ )
ಕಳೆದುಹೋದ ನಿನ್ನೆಗಿಂತಲೂ ಇಂದು ಬಲು ಮುಖ್ಯ
ಇಂದಿನ ಪ್ರತಿಕ್ರಿಯೆಯೆ ನಾಳೆಯನ್ನು ನಿರ್ಧರಿಸುತ್ತದೆ ( ಗಜಲ್ ೪೮ )
ನೇಗಿಲಯೋಗಿಯ ‘ ಬೆವರು ‘ ಹವಾನಿಯಂತ್ರಣಕ್ಕೂ ತಲುಪಬೇಕಾಗಿದೆ
ಜಾಗತೀಕರಣದ ಚದುರಂಗದಲ್ಲಿ ‘ ಒಕ್ಕಲಿಗ ‘ನಿಗೆ ಪ್ರೀತಿ ನೀಡಬೇಕಾಗಿದೆ ( ಗಜಲ್ ೫೭ )
ಜೊತೆಜೊತೆಯಾಗಿ ಹೆಜ್ಜೆ ಹಾಕಲು ಅವಳಿಗೆ ಆಗಲಿಲ್ಲ
ಡೋಲಿಗೆ ಹೆಗಲು ಕೊಡುತ್ತೇನೆಂದಾಗ ತಡೆಯಲು ಆಗಲಿಲ್ಲ ( ಗಜಲ್ ೭೯ )
ಹೋರಾಡುತಿರುವೆನು ನಾನು ರಣರಂಗದಲ್ಲಲ್ಲ , ಮನದೊಳಗೆ ಗಾಲಿಬ್
ಮಡಿಯುತಿರುವೆನು ನಾನು ಸ್ಮಶಾನದಲ್ಲಲ್ಲ , ಸಮಾಜದೊಳಗೆ ಗಾಲಿಬ್ ( ಗಜಲ್ ೮೮ )
ಕಾಫಿಯಾದ ರವಿ ಮೀರಿ ಆವರಿಸಿರುವೆ ಅಂತರಂಗದಲಿ
ನಿನ್ನ ಮಾದಕ ನೋಟ ರೌಫ್ ನಂತೆ ಸೆಳೆಯುತಿದೆ ಸಾಕಿ ( ಗಜಲ್ ೯೧ )
ಸುಮಾರು ಇಪ್ಪತ್ತು ಷೇರ್ ಗಳನ್ನು ಹೊಂದಿರುವ ೯೦ ನೇ ಗಜಲ್ ತನ್ನ ಮಗನ ಸಾರ್ಥಕ ಬಾಳಿಗಾಗಿ ಜೀವ ಸವೆಸಿ ಕೊನೆಗೆ ಒಂಟಿತನದಲ್ಲಿ ನರಳುತ್ತಾ ತಾನು ತೊರೆದಿದ್ದ ಮದಿರೆಗೇ ದಾಸನಾಗುವ ತಂದೆಯ ಕರುಣಾಜನಕ ಕಥೆಯನ್ನು ಕಟ್ಟಿಕೊಡುತ್ತದೆ.
ಕಾವ್ಯದ ರಸಗಡಲಲ್ಲಿ ಕೈ ಬೀಸಿ ಈಜಾಡುತಿದ್ದೆ ಗಾಲಿಬ್
ಪ್ರತಿ ಗಜಲ್ ನಲ್ಲೂ ನಿನ್ನನ್ನೇ ಹುಡುಕುತಿದ್ದೆ ಗಾಲಿಬ್
ಎಂಬ ಸಾಲುಗಳ ಮೂಲಕ ಗಾಲಿಬ್ ಅವರಿಗೇ ಅರ್ಪಿಸಿರುವ ಗಾಲಿಬ್ ಸ್ಮೃತಿ ನಿಸ್ಸಂದೇಹವಾಗಿ ಸಂಗ್ರಹಯೋಗ್ಯ ಕೃತಿಯಾಗಿದೆ. ಹಿಂದಿ ಭಾಷಾ ಜ್ಞಾನ ಅಷ್ಟಾಗಿ ಇಲ್ಲದ ನನ್ನನ್ನು ಕಾಡಿದ ಒಂದೇ ಒಂದು ಕೊರತೆಯೆಂದರೆ ಕೆಲವು ಗಜಲ್ ಗಳಲ್ಲಿ ಹಿಂದಿ ಪದಗಳನ್ನು ಬಳಸಿರುವ ಡಾ.ತಳವಾರ ಅವರು ಅವುಗಳ ಅರ್ಥವನ್ನು ಕನ್ನಡದಲ್ಲಿ ನೀಡದೇ ಇರುವುದು. ಹಾಗೊಮ್ಮೆ ನೀಡಿದ್ದರೆ ಓದುಗರಿಗೆ ಸುಲಭವಾಗಿ ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತಿತ್ತೆಂಬುದು ನನ್ನ ಪ್ರಾಮಾಣಿಕ ಅನಿಸಿಕೆ.
ಡಾ.ತಳವಾರ ಅವರಿಗೆ ಶುಭವಾಗಲಿ. ಭವಿಷ್ಯದಲ್ಲಿ ಅವರ ಲೇಖನಿಯಿಂದ ಓದುಗರ ಸ್ಮೃತಿಯಲ್ಲಿ ಉಳಿಯುವ ಮತ್ತಷ್ಟು ಗಜಲ್ ಸಂಕಲನಗಳು ಮೂಡಿ ಬರಲೆಂದು ಪ್ರೀತಿಪೂರ್ವಕವಾಗಿ ಹಾರೈಸುತ್ತೇನೆ.
********************************
ಎ . ಹೇಮಗಂಗಾ