ದಾರಾವಾಹಿ

ಅದ್ಯಾಯ-08

ಆವತ್ತು ಬೆಳಿಗ್ಗೆ ರಾಧಾಳಿಂದ ಮುನ್ನೂರು ರೂಪಾಯಿ ಪಡೆದುಕೊಂಡು ಮನೆಯಿಂದ ಹೊರಟ ಗೋಪಾಲ ಪುತ್ತೂರಿನ ಶಂಕರನಾರಾಯಣ ದೇವಸ್ಥಾನದ ಎದುರುಗಡೆ, ರಸ್ತೆಬದಿಯ ಮೈಲುಗಲ್ಲೊಂದರ ಮೇಲೆ ಕಾಲೂರಿ ಸೈಕಲ್ ನಿಲ್ಲಿಸಿ ಬೀಡಿಯೊಂದನ್ನು ಹೊತ್ತಿಸಿ ನಿಧಾನವಾಗಿ ಸೇದಿದ. ನಂತರ ದೇವಸ್ಥಾನದ ಎದುರು ಹೋಗಿ ನಿಂತುಕೊಂಡು ಭಕ್ತಿಯಿಂದ ದೇವರಿಗೆ ಕೈಮುಗಿದು ಸೈಕಲು ಹತ್ತಿದವನು ನೆರ್ಗಿಹಿತ್ತಲು ಗ್ರಾಮದ ಶಂಕರನ ಸೈಟಿಗೆ ಬಂದು ತಲುಪಿದ. ಆ ಹೊತ್ತಿಗೆ ಶಂಕರ ತನ್ನ ಕೆಲಸಗಾರರಿಗೆ ಅಂದಿನ ಕೆಲಸಕಾರ್ಯದ ಮಾಹಿತಿ ನೀಡುತ್ತಿದ್ದ. ಅದನ್ನು ಗಮನಿಸಿದ ಗೋಪಾಲ ಸ್ವಲ್ಪ ದೂರದಲ್ಲಿ ನಿಂತು ಕಾಯತೊಡಗಿದ. ಆಳುಗಳನ್ನು ಕೆಲಸಕ್ಕೆ ಕಳುಹಿಸಿದ ಶಂಕರ ಗೋಪಾಲನನ್ನು ಕಂಡು ಕೈಬೀಸಿ ಕರೆಯುತ್ತ, ‘ಓಹೋ ಗೋಪಾಲನಾ ಮಾರಾಯಾ ಬಾ ಬಾ… ಏನು ವಿಶೇಷ?’ ಎಂದ ಗತ್ತಿನಿಂದ.

 ‘ವಿಶೇಷ ನಮ್ಮದೆಂಥದು ಶಂಕರಣ್ಣ ಎಲ್ಲಾ ನಿಮ್ಮದೇ!’ ಎಂದ ಗೋಪಾಲ ಸಂಕೋಚದಿಂದ. ಆದರೆ ಶಂಕರ ತನ್ನ ಕಟ್ಟಡ ದಿಟ್ಟಿಸುತ್ತಲೇ ಅವನೊಡನೆ ಮಾತಾಡುತ್ತಿದ್ದವನು, ‘ಹೌದಾ, ಹಾಗಂತೀಯಾ… ಹಾಗಾದರೆ ಸರಿ ಬಿಡು. ಈಗ ಬಂದ ವಿಷಯ ಹೇಳು?’ ಎಂದು ಉದಾಸೀನದಿಂದ.

‘ನೀವು ಮೊನ್ನೆ ಸಂಜೆ ಅಂಬಾಗಿಲಿನಲ್ಲಿ ಸಿಕ್ಕಿದಾಗ ಈ ಸೈಟಿನಲ್ಲಿ ಸ್ವಲ್ಪ ಕಬ್ಬಿಣ ಉಂಟೂಂತ ಹೇಳಿದ್ದಿರಿ. ಅದಕ್ಕೇ ಬಂದೆ ಶಂಕರಣ್ಣ…’

‘ಓಹೋ, ಹೌದಲ್ಲವಾ… ನೀನು ಆಗಬಹುದು ಮಾರಾಯ. ಎರಡು ದಿನದ ಹಿಂದಷ್ಟೇ ಮಾತಾಡಿದವನು ಇವತ್ತು ಬಂದೇಬಿಟ್ಟಿದ್ದಿ ನೋಡು. ವ್ಯಾಪಾರದ ಮೇಲೆ ಭಾರೀ ಆಸ್ಥೆ ಉಂಟು ನಿಂಗೆ! ಇವತ್ತೇ ಬಂದದ್ದು ಒಳ್ಳೆಯದಾಯ್ತು. ನಾಳೆ ನಾಡಿದ್ದರಲ್ಲಿ ಬಂದಿದ್ದರೆ ಮಾಲು ಯಾರದ್ದೋ ಪಾಲಾಗುತ್ತಿತ್ತು. ನಿನ್ನೆಯಿಂದ ಇಬ್ಬರು ಗುಜರಿ ವ್ಯಾಪಾರಿಗಳು ಬಂದು ಹೋದರು. ಆದರೆ ನಾನು ಕೊಡಲಿಲ್ಲ!’ ಎಂದ ಗೋಪಾಲನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಧಾಟಿಯಿಂದ.

‘ಹೌದಾ ಶಂಕರಣ್ಣ ಬಹಳ ಒಳ್ಳೆಯದಾಯ್ತು! ನನಗೂ ಕೆಲಸವಿಲ್ಲದೆ, ವ್ಯಾಪಾರವೂ ಸರಿಯಾಗಿಲ್ಲದೆ ಕೆಲವು ದಿನಗಳಾದವು. ಸಂಸಾರವುಂಟಲ್ಲವಾ. ನಿಮ್ಮಂಥವರಿಂದಾಗಿಯೇ ನನ್ನಂಥ ಒಂದಷ್ಟು ಬಡವರ ಹೊಟ್ಟೆ ತುಂಬುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ ಶಂಕರಣ್ಣಾ!’ ಎಂದ ಗೋಪಾಲ ನಮ್ರನಾಗಿ.

ಗೋಪಾಲನ ಹೊಗಳಿಕೆಯಿಂದ ಶಂಕರ ಉಬ್ಬಿ ಹೋದ. ಏಕೆಂದರೆ ಈಶ್ವರಪುರದಲ್ಲಿ ಅವನನ್ನು ಪ್ರಾಮಾಣಿಕ ಧನ್ಯತೆಯಿಂದ ಹೊಗಳುವವರು ಯಾರೂ ಇರಲಿಲ್ಲ. ಇರಲು, ಅವನು ಯಾರಿಗೂ ಯಾವ ಒಳ್ಳೆಯದನ್ನೂ ಮಾಡಿದವನಲ್ಲ. ಕೆಲಸಗಾರರನ್ನೂ ತನ್ನ ಕೆಂಗಣ್ಣಿನ ಅಂಕೆಯಲ್ಲಿಟ್ಟುಕೊಂಡು ದುಡಿಸುವವನು. ಸಂಬಂಧಿಕರೂ ಅವನ ಸಿರಿವಂತಿಕೆಯ ಅಟ್ಟಹಾಸಕ್ಕೆ ಹೆದರಿ ಹೆಚ್ಚಿಗೆ ಮಾತಾಡಲು ಹಿಂಜರಿಯುತ್ತ ದೂರವೇ ಉಳಿದಿದ್ದರು. ಅವನೊಂದಿಗೆ ಪುಕ್ಕಟೆ ಸಾರಾಯಿ ಕುಡಿಯುವ ಕೆಲವು ಸ್ನೇಹಿತರು ಮಾತ್ರ ತಮಗೆ ಅಮಲೇರಿದ ಮೇಲೆಯೇ ಅವನಿಂದ ಕುಡಿದ ಋಣಕ್ಕಾಗಿ ಇಲ್ಲಸಲ್ಲದ್ದಕ್ಕೆ ಒಂದಿಷ್ಟು ಒಗ್ಗರಣೆ ಹಾಕಿ ಹೊಗಳಿ ಅಟ್ಟಕ್ಕೇರಿಸುತ್ತಿದ್ದರು. ಆದರೆ ಆಗ ಶಂಕರನೂ ಮತ್ತಿನಲ್ಲಿರುತ್ತಿದ್ದ. ಆದ್ದರಿಂದ ಅದರ ಸ್ವಾದ ಅವನಿಗೆ ಅಷ್ಟಾಗಿ ಹತ್ತುತ್ತಿರಲಿಲ್ಲ.

ಆದರೂ ಈಗ ಶಂಕರ ಗೋಪಾಲನ ಮಾತಿಗೆ ಬೆಲೆ ಕೊಡದವನಂತೆ, ‘ಅದೂ ಹೌದನ್ನು. ಆದರೆ ಸಂಸಾರ ಯಾರಿಗಿಲ್ಲ ಮಾರಾಯಾ? ನನಗೂ ಇದೆಯಲ್ಲ! ಅದಿರಲಿ, ನಿನ್ನೆ ಬಂದವರಿಗೆ ನಾನು ಮಾಲು ಯಾಕೆ ಕೊಡಲಿಲ್ಲ ಗೊತ್ತುಂಟಾ? ಯಾಕೆಂದರೆ ನನ್ನ ಜಾತಿಯವರು ನನಗೆ ಮೊದಲು. ಉಳಿದವರೆಲ್ಲ ಆಮೇಲೆ. ನಿನಗೆ ಕೊಟ್ಟ ಮಾತು ತಪ್ಪುತ್ತೇನಾ ಹೇಳು?’ ಎಂದ ನಗುತ್ತ. ಆಗ ಗೋಪಾಲನಿಗೆ ಅವನ ಮೇಲೆ ಅಭಿಮಾನ ಉಕ್ಕಿ ಬಂತು.

‘ನಿಮ್ಮದು ದೊಡ್ಡ ಗುಣ ಶಂಕರಣ್ಣಾ. ಈಗಿನ ಕಾಲದಲ್ಲಿ ನಿಮ್ಮಂಥವರು ಸಿಗುವುದು ಬಹಳ ಕಡಿಮೆ!’ ಎಂದು ಇನ್ನಷ್ಟು ಮೇಲಕ್ಕಿಟ್ಟ. ಅದರಿಂದ ಶಂಕರ ಮತ್ತಷ್ಟು ಹಿಗ್ಗಿದನಾದರೂ ವ್ಯಾಪಾರ ಚತುರತೆ ಅವನನ್ನು ಎಚ್ಚರಿಸಿತು. ಹಾಗಾಗಿ, ‘ಆದರೂ ಒಂದು ಮಾತು ಗೋಪಾಲ, ನನ್ನ ಮಾಲಿಗೆ ನೀನು ರೇಟ್ ಮಾತ್ರ ಸರಿಯಾಗಿ ಕೊಡಬೇಕು ನೋಡು!’ ಎನ್ನುತ್ತ ಗೋಪಾಲನ ಉತ್ತರಕ್ಕೂ ಕಾಯದೆ ಸ್ವಲ್ಪ ದೂರದಲ್ಲಿದ್ದ ಬಿಲ್ಡಿಂಗ್ ರಾಡಿನ ರಾಶಿಯೊಂದರ ಪಕ್ಕ ಹೋಗಿ ನಿಂತುಕೊಂಡ.

‘ಆಯ್ತು ಶಂಕರಣ್ಣಾ…’ ಎಂದ ಗೋಪಾಲನೂ ಅತ್ತ ಹೋಗಿ ಕಬ್ಬಿಣವನ್ನು ಗಮನಿಸಿದ. ಸಾಕಷ್ಟಿತ್ತು. ಆದರೆ ಶಂಕರ ಅದಕ್ಕೆ ಹೇಳಿದ ಬೆಲೆಯನ್ನು ಕೇಳಿದವನು ದಂಗಾಗಿಬಿಟ್ಟ! ಕಿಲೋಗೆ ಇನ್ನೊಂದೆರಡು ರೂಪಾಯಿ ಜಾಸ್ತಿ ಕೊಟ್ಟರೆ ಹೊಸ ಕಬ್ಬಿಣವನ್ನೇ ಕೊಳ್ಳಬಹುದಲ್ಲವಾ ಎಂದೆನ್ನಿಸಿತವನಿಗೆ. ಆದರೆ ಶಂಕರನ ಜಿಪುಣತನ ಅವನಿಗೂ ಗೊತ್ತಿತ್ತು. ಹಾಗಾಗಿ ಪಟ್ಟುಬಿಡದೆ ಚೌಕಾಶಿ ಮಾಡಿದ. ಕೊನೆಗೆ, ಹಿಂದೆ ಬಂದು ಹೋಗಿದ್ದ ಇಬ್ಬರು ವ್ಯಾಪಾರಿಗಳಿಗಿಂತ ಒಂದಿಷ್ಟು ಹೆಚ್ಚಿಗೆ ಬೆಲೆ ಕೊಟ್ಟು ವ್ಯಾಪಾರ ಕುದುರಿಸುವ ಹೊತ್ತಿಗೆ ಗೋಪಾಲ ಅರೆಜೀವವಾಗಿದ್ದ. ಆದರೆ ಆ ದೊಡ್ಡ ರಾಶಿಯನ್ನು ಕೊಳ್ಳುವಷ್ಟು ಹಣ ಆಗ ಅವನಲ್ಲಿರಲಿಲ್ಲ. ಆದ್ದರಿಂದ, ‘ಶಂಕರಣ್ಣ, ಈಗ ನನ್ನ ಹತ್ರ ಅಷ್ಟೊಂದು ದುಡ್ಡಿಲ್ಲ. ಹಾಗಂತ ಬೇರೆ ಯಾರಿಗೂ ಕೊಡಬಾರದು ನೀವು. ನಾಳೆ ಬೆಳಿಗ್ಗೆ ಬ್ಯಾಂಕಿಗೆ ಹೋಗಿ ಹಣ ತೆಗೆದುಕೊಂಡು ಸೀದಾ ಇಲ್ಲಿಗೆ ಬಂದು ಲೆಕ್ಕ ಚುಕ್ತ ಮಾಡಿ ಮಾಲು ಕೊಂಡೊಯ್ಯುತ್ತೇನೆ. ಅಲ್ಲಿವರೆಗೆ ಟೈಮ್ ಕೊಡಬೇಕು!’ ಎಂದು ದೈನ್ಯದಿಂದ ಕೇಳಿಕೊಂಡ. ಶಂಕರನಿಗೆ ನಿರಾಶೆಯಾಯಿತು. ಆದರೂ ವಿಧಿಯಿಲ್ಲದೆ ಒಪ್ಪಿದ.

ಅಷ್ಟಾಗುತ್ತಲೇ ಗೋಪಾಲನಿಗೆ ತನ್ನ ಸ್ವಂತ ಜಾಗದ ವಿಷಯ ನೆನಪಾಯಿತು. ಈತ ಹೇಗೂ ಜಾಗದ ವ್ಯಾಪಾರಿ. ಇವನ ಹತ್ತಿರ ಹೇಳಿಟ್ಟರೆ ಒಂದು ತುಂಡು ಭೂಮಿ ಎಲ್ಲಾದರೂ ಸಿಗಬಹುದೇನೋ ಎಂದುಕೊಂಡವನು, ‘ಶಂಕರಣ್ಣ ನಿಮ್ಮಿಂದ ಒಂದು ಉಪಕಾರ ಆಗಬೇಕಲ್ಲವಾ?’ ಎಂದ ಮೃದುವಾಗಿ. ಆಗ ಶಂಕರನಿಗೆ, ಇವನೆಲ್ಲಾದರೂ ಸಾಲ ಗೀಲ ಕೇಳಿ ಬಿಡುತ್ತಾನೇನೋ ಎಂದೆನಿಸಿ ಎದೆಯೊಮ್ಮೆ ಧಸಕ್ ಎಂದಿತು. ‘ಅದೇನು ಮಾರಾಯಾ ಹೇಳು? ಆದರೆ ಈಗ ವ್ಯಾಪಾರ ವೈವಾಟೆಲ್ಲ ನೆಲಕಚ್ಚಿಬಿಟ್ಟಿದೆ ಹಾಳಾದ್ದು. ಹಾಗಾಗಿ ದುಡ್ಡಿನ ವಿಷಯವೊಂದನ್ನು ಬಿಟ್ಟು ಬೇರೆ ಏನಾದರೂ ಕೇಳು. ಸಾಧ್ಯವಿದ್ದರೆ ಮಾಡುವ’ ಎಂದು ಅರ್ಧ ಕಟ್ಟಿದ್ದ ಕಟ್ಟಡದ ತುದಿಯನ್ನೇ ದಿಟ್ಟಿಸುತ್ತ ಹೇಳಿದ.

‘ಛೇ, ಛೇ! ಹಣದ ವಿಷಯ ಅಲ್ಲ ಶಂಕರಣ್ಣಾ. ನೀವು ಇಷ್ಟೆಲ್ಲ ಕಡೆ ಜಾಗದ ವ್ಯಾಪಾರ ಮಾಡುತ್ತೀರಿ. ಎಲ್ಲಾದರೂ ನನಗೊಂದು ನಾಲ್ಕೈದು ಸೆಂಟ್ಸ್ ಜಾಗ ಸಿಗುತ್ತದಾ ಅಂತ ನೋಡಬಹುದಾ? ಈ ದರಿದ್ರದ ಬಾಡಿಗೆ ಮನೆಗಳಲ್ಲಿ ಕೂತು ಸಾಕಾಗಿಬಿಟ್ಟಿದೆ ಶಂಕರಣ್ಣ. ಜೊತೆಗೆ ಇವಳದ್ದೂ ಒಂದೇ ಸಮನೆ ಕಿರಿಕಿರಿ ಶುರುವಾಗಿದೆ!’ ಎಂದು ನೋವು ತೋಡಿಕೊಂಡ.

‘ಅಷ್ಟೇನಾ ಮಾರಾಯಾ…!’ ಎಂದ ಶಂಕರ ನಿರಾಳನಾದ. ಅಷ್ಟರಲ್ಲಿ ಅವನಿಗೇನೋ ಹೊಳೆಯಿತು. ‘ಓಹೋ, ಹೌದಲ್ಲವಾ. ನೀನೀಗ ಆ ಮುತ್ತಯ್ಯನ ತೋಟದ ಮನೆಯಲ್ಲಿ ಇರುವುದಲ್ಲವಾ?’

‘ಹೌದು ಶಂಕರಣ್ಣ…!’

 ‘ಅವನು ಹೆಂಗಸರ ವಿಷ್ಯದಲ್ಲಿ ದೊಡ್ಡ ಫಟಿಂಗನಂತೆ ಮಾರಾಯಾ. ನನ್ನ ಸೈಟಿಗೆ ಕೂಲಿಗೆ ಬರುತ್ತಿದ್ದ ಬಿಜಾಪುರದ ಕೆಲವು ಹೆಂಗಸರು ಅವನ ಕಥೆ ಹೇಳಿಕೊಂಡು ಕಂಡಾಬಟ್ಟೆ ಉಗಿಯುತ್ತಿದ್ದರು!’ ಎಂದು ಜೋರಾಗಿ ನಕ್ಕ. ಆಗ ಗೋಪಾಲನಿಗೆ ರಾಧಾಳ ಕಥೆ ನೆನಪಾಗಿ ತಟ್ಟನೆ ಅಶಾಂತನಾದ. ಆದರೂ ಸಂಭಾಳಿಸಿಕೊಂಡು, ‘ಹೌದಂತೆ ಶಂಕರಣ್ಣಾ. ಆದರೆ ನನ್ನ ಹೆಂಡತಿಯ ತಂಟೆಗೆ ಮಾತ್ರ ಅವನು ಈವರೆಗೆ ಬಂದಿಲ್ಲ ನೋಡಿ. ಆದರೂ ಈ ಬಾಡಿಗೆ ಬದುಕಿನಿಂದ ಒಮ್ಮೆ ಬಿಡುಗಡೆ ಸಿಕ್ಕಿದರೆ ಸಾಕಪ್ಪಾ ಅಂತಾಗಿಬಿಟ್ಟಿದೆ ನನಗೆ!’ ಎಂದ ಗೋಪಾಲ ಬೇಸರದಿಂದ.

‘ಆಯ್ತು ಮಾರಾಯ. ನೀನು ನಮ್ಮವನೇ ಅಲ್ಲವಾ. ನಿನಗೊಂದು ಜಾಗ ಮಾಡಿ ಕೊಡಲಾರೆನಾ? ಇತ್ತೀಚೆಗೆ ನಾನೊಂದು ಕಡೆ ಐದು ಎಕರೆ ಭೂಮಿ ಕೊಂಡು ಅದನ್ನು ಹತ್ಹತ್ತು ಸೆಂಟ್ಸ್‍ನ ಲೇಔಟ್ ಮಾಡಿದ್ದೆ. ಆ ಸೈಟುಗಳ ಒಂದು ಮೂಲೆಯಲ್ಲಿ ಚಿಕ್ಕದೊಂದು ಜಾಗ ಉಳಿದಿದೆ ನೋಡು. ಅದರಲ್ಲಿ ಎಷ್ಟು ಸೆಂಟ್ಸ್ ಉಂಟೂಂತ ಅಳತೆ ಮಾಡಿ ಹೇಳಬೇಕು. ನಾಳೆ, ನಾಡಿದ್ದರಲ್ಲಿ ಬಾ ಮಾತಾಡುವ’ ಎಂದು ಶಂಕರ ನಿರ್ಲಿಪ್ತನಂತೆ ನುಡಿದ. ಅಷ್ಟಕ್ಕೆ ಗೋಪಾಲ ಆನಂದದಿಂದ ತೇಲಾಡಿದ.

‘ಹೌದಾ ಶಂಕರಣ್ಣ. ಹಾಗಾದರೆ ಬದುಕಿದೆ ನಾನು! ಯಾವ ರಗಳೆಯೂ ಇಲ್ಲದ ಸಣ್ಣ ಜಾಗವೊಂದನ್ನು ನೀವು ಮಾಡಿ ಕೊಟ್ಟರೆ, ನನ್ನ ಉಸಿರಿರುವ ತನಕ ನಿಮ್ಮ ಉಪಕಾರವನ್ನು ಮರೆಯಲಿಕ್ಕಿಲ್ಲ ಶಂಕರಣ್ಣಾ. ಈ ವಿಷಯದಲ್ಲಿ ನಿಮ್ಮ ಮೇಲೆ ಪೂರ್ಣ ವಿಶ್ವಾಸ ಉಂಟು ನಂಗೆ. ಸಾಲ ಸೋಲ ಮಾಡಿಯಾದರೂ ಆ ಜಾಗವನ್ನು ಕೊಳ್ಳುತ್ತೇನೆ!’ ಎಂದು ದೈನ್ಯದಿಂದ ಹೇಳಿದ.

‘ಆಯ್ತಾಯ್ತು ಮಾರಾಯ ಈಗ ಹೊರಡು. ನಾಳೆ ಬಾ, ಜಾಗ ತೋರಿಸುತ್ತೇನೆ. ಒಪ್ಪಿಗೆಯಾದರೆ ನಂತರ ದುಡ್ಡಿನ ಮಾತುಕಥೆಯಾಡುವ’ ಎಂದ ಶಂಕರ ಅಲಕ್ಷ್ಯದಿಂದ. ಗೋಪಾಲ ನಮ್ರವಾಗಿ ಕೈಮುಗಿದು ಹೊರಟು ಹೋದ. ಆದರೆ ಅವನು ಅಲ್ಲಿಂದ ನಿರ್ಗಮಿಸುತ್ತಲೇ ಶಂಕರ ಆ ಜಾಗದ ಕುರಿತು ಯೋಚಿಸತೊಡಗಿದ. ಐದು ಎಕರೆ ಜಮೀನಿನ ಒಂದು ಕೊನೆಯಲ್ಲಿ ಉಳಿದ ಜಾಗವದು. ಆದರೇನು ಮಾಡುವುದು? ಅದರ ಸಮೀಪವೊಂದು ನಾಗಬನ ಇರುವುದೇ ದೊಡ್ಡ ತೊಡಕಾಗಿಬಿಟ್ಟಿದೆ! ಎಷ್ಟು ಗಿರಾಕಿಗಳು ಬಂದರು. ಆ ಕಾಡನ್ನು ನೋಡಿ ಅದರೊಳಗೆ ನಾಗಬನವಿದೆ ಎಂದು ತಿಳಿದ ಕೂಡಲೇ ಓಡಿ ಹೋಗುತ್ತಾರೆ. ಈ ಕೆಲವು ಜೋಯಿಸರೂ ವಾಸ್ತುವಿನವರೂ ಕೂಡಿ ಜನರಲ್ಲಿ ನಾಗನ ಬಗ್ಗೆ ಇಲ್ಲಸಲ್ಲದ ಹೆದರಿಕೆಯನ್ನು ಹುಟ್ಟಿಸಿ ಬಿಟ್ಟಿದ್ದಾರೆ ಹಾಳಾದವರು! ಆ ಜಾಗವನ್ನು ಬ್ರಾಹ್ಮಣರಾದರೂ ಕೊಂಡುಕೊಳ್ಳಬಹುದೆಂದು ಭಾವಿಸಿದ್ದೆ. ಆದರೆ ಮೂರೂವರೆ ಸೆಂಟ್ಸ್ ಎಂದ ಕೂಡಲೇ ಅವರೂ ಕಡಿಮೆಯಾಯ್ತು ಎಂದು ಹೋಗುತ್ತಿದ್ದಾರೆ. ಅದಕ್ಕೆ ಇವನೇ ತಕ್ಕ ಪಾರ್ಟಿ. ದೊಡ್ಡ ಜಾಗವನ್ನು ಕೊಂಡುಕೊಳ್ಳುವ ಶಕ್ತಿ ಇವನಲ್ಲಂತೂ ಇಲ್ಲ. ಆದ್ದರಿಂದ ಇವನ ಕೊರಳಿಗೇ ಕಟ್ಟಿಬಿಡಬೇಕು!’ ಎಂದು ನಿರ್ಧರಿಸಿದ.

ಶಂಕರನ ದಯೆಯಿಂದ ನಾಳೆಯೇ ತನಗೊಂದು ಸ್ವಂತ ಜಾಗ ಸಿಗಲಿಕ್ಕಿದೆ ಎಂದು ಖುಷಿಪಟ್ಟ ಗೋಪಾಲ, ವೇಗವಾಗಿ ಮನೆಯತ್ತ ಸೈಕಲ್ ತುಳಿದ. ಅರ್ಧ ಗಂಟೆಯಲ್ಲಿ ಮನೆಯಂಗಳಕ್ಕೆ ಬಂದು ಸೈಕಲ್ ನಿಲ್ಲಿಸಿ, ‘ಹೇ ರಾಧಾ, ಎಲ್ಲಿದ್ದಿ ಮಾರಾಯ್ತೀ…?’ ಎಂದು ಉದ್ವೇಗದಿಂದ ಕೂಗುತ್ತ ಒಳಗೆ ಹೋದ. ಅವಳು ಮುತ್ತಯ್ಯನ ಹಿಂಸೆಯಿಂದ ತಪ್ಪಿಸಿಕೊಳ್ಳಲು ಮನೆಯ ಹಿಂಬದಿಯ ಬಾಗಿಲಲ್ಲಿ ಕುಳಿತು ಬೀಡಿ ಕಟ್ಟುತ್ತಿದ್ದಳು. ಗಂಡನ ಧ್ವನಿಯಲ್ಲಿದ್ದ ಉದ್ವೇಗವನ್ನು ಕಂಡವಳು ಏನೋ ವಿಶೇಷವಿರಬೇಕು ಎಂದುಕೊಂಡು ಬೀಡಿಯ ಮೊರವನ್ನು ಬದಿಗಿಟ್ಟು ಎದ್ದು ಬಂದಳು.

‘ಸದ್ಯ ದೇವರು ಕಣ್ಣುಬಿಟ್ಟ ಮಾರಾಯ್ತೀ. ಜಾಗವೊಂದು ಆದ ಹಾಗಾಯ್ತು!’ ಎಂದ ಗೋಪಾಲ ಹೆಮ್ಮೆಯಿಂದ. ಅಷ್ಟು ಕೇಳಿದ ರಾಧಾಳ ಮುಖ ಹೂವಿನಂತೆ ಅರಳಿತು. ‘ಎಲ್ಲಿ, ಯಾವಾಗ ಆಯ್ತು ಮಾರಾಯ್ರೇ…? ನೀವು ನೋಡಿ ಬಂದ್ರಾ? ನಾನೂ ನೋಡಬೇಕಲ್ವಾ…?’ ಎಂದಳು ಆತುರದಿಂದ. 

‘ಅರೆರೇ, ಸ್ವಲ್ಪ ತಡ್ಕೊ ಮಾರಾಯ್ತಿ… ಹೇಳುತ್ತೇನೆ. ನೀನು ನೋಡಿದ ಮೇಲೆಯೇ ಓಕೆ ಮಾಡುವುದು!’ ಎಂದು ನಗುತ್ತ ಅಂದಾಗ ರಾಧಾ ಮುಗುಳ್ನಕ್ಕಳು. ಮರುಕ್ಷಣ ಗೋಪಾಲ, ತನ್ನ ಕಬ್ಬಿಣದ ವ್ಯಾಪಾರದಲ್ಲಿ ಶಂಕರ ಮಂಡೆ ಹಾಳಾಗುವಂತೆ ಚೌಕಾಶಿ ಮಾಡಿದ್ದೊಂದನ್ನು ಬಿಟ್ಟು ಉಳಿದ ಮಾತುಕತೆಯನ್ನು ಹಾಲು ತುಪ್ಪ ಸುರಿದಷ್ಟು ಮುದದಿಂದ ಅವಳಿಗೆ ವಿವರಿಸಿದವನು ಶಂಕರ ತಮ್ಮ ಪಾಲಿಗೆ ದೇವರೇ ಎಂಬಂತೆ ಹೊಗಳಿದ. ರಾಧಾಳಿಗೆ ಬಹಳ ಸಂತೋಷವಾಯಿತು. ಮುತ್ತಯ್ಯನಂಥ ಲಂಪಟರ ಕಪಿಮುಷ್ಟಿಯಿಂದ ಆ ಕ್ಷಣವೇ ಶಾಶ್ವತ ಬಿಡುಗಡೆ ದೊರೆತಂಥ ನಿರಾಳತೆ ಅವಳಲ್ಲಿ ಮೂಡಿ ಕಣ್ಣುಗಳು ತೇವಗೊಂಡವು. ಅದನ್ನು ಗಮನಿಸಿದ ಗೋಪಾಲ, ‘ಅರೆರೇ, ಈಗಲೇ ಯಾಕೆ ಅಳುತ್ತಿ ಮಾರಾಯ್ತೀ? ಈ ಹಂಗಿನ ಬದುಕಿನಿಂದ ಸ್ವತಂತ್ರ ಸಿಗುತ್ತದೆಯಲ್ಲ, ಆವಾಗ ಎಷ್ಟು ಬೇಕಾದರೂ ಖುಷಿಯಿಂದ ಅಳುವಿಯಂತೆ!’ ಎಂದು ನಗುತ್ತ ಅವಳನ್ನು ತಬ್ಬಿಕೊಂಡ.

ಅಂದು ರಾತ್ರಿ ಗೋಪಾಲ ನೆಮ್ಮದಿಯಿಂದ ಚಾಪೆಗೊರಗಿದ. ಆದರೆ ಮರುದಿನ ಶಂಕರನ ಗುಜರಿ ಕೊಂಡುಕೊಳ್ಳಲು ದೊಡ್ಡ ಮೊತ್ತದ ಚಿಂತೆ ಅವನನ್ನು ಕಾಡಿತು. ಹಣವನ್ನು ಹೊಂದಿಸುವುದು ಹೇಗೆ? ಎಂದು ಯೋಚಿಸಿದ. ಅದಕ್ಕೊಂದು ದಾರಿಯೂ ಹೊಳೆಯಿತು. ಹೆಂಡತಿಯ ಚಿನ್ನಾಭರಣವನ್ನು ಅಡವಿಡಲು ನಿರ್ಧರಿಸಿದ. ಬಳಿಕ ನಿದ್ರೆ ಹತ್ತಿತ್ತು. ಮುಂಜಾನೆ ಬೇಗನೆದ್ದು ನಿತ್ಯಕರ್ಮ ಮುಗಿಸಿದ. ರಾಧಾ ತಂದಿರಿಸಿದ ಉಪ್ಪಿಟ್ಟು ಮತ್ತು ಚಹಾ ಸೇವಿಸಿ, ಅವಳು ಕೊಟ್ಟ ಆಭರಣವನ್ನು ಹಳೆಯ ಪೇಪರಿನ ತುಂಡೊಂದರಲ್ಲಿ ಕಟ್ಟಿ, ಪ್ಯಾಂಟಿನ ಜೇಬಿಗಿಳಿಸಿ ಹೊರಗಡಿಯಿಟ್ಟವನು ಮತ್ತೆ ಒಂದೆರಡು ಬಾರಿ ಜೇಬನ್ನು ಒತ್ತಿ ಸವರಿ ಭದ್ರಪಡಿಸಿಕೊಂಡ. ಬಳಿಕ ಮಡದಿ, ಮಕ್ಕಳಿಗೆ ಕೈಯಾಡಿಸುತ್ತ ಈಶ್ವರಪುರ ಪೇಟೆಯ ಸಿಟಿ ಕೋ-ಆಪರೇಟಿವ್ ಬ್ಯಾಂಕ್‍ನತ್ತ ಸೈಕಲ್ ತುಳಿದ.

ಬ್ಯಾಂಕ್‍ನ ಬಾಗಿಲು ತೆರೆಯಲಿನ್ನೂ ಅರ್ಧ ಗಂಟೆ ಮುಂಚೆಯೇ ತಲುಪಿ, ಮೊದಲ ಮಹಡಿಯಲ್ಲಿದ್ದ ಬಾಗಿಲ ಬಳಿ ಹೋಗಿ ನಿಂತ. ಬೀಗ ಹಾಕಿದ್ದುದನ್ನು ಕಂಡು ಅಶಾಂತಿಯಿಂದ ಶತಪಥ ಹಾಕಿದ. ಬಳಿಕ ಗೋಡೆಗೊರಗಿ ಕುಳಿತುಕೊಂಡ. ಕೆಲವು ಹೊತ್ತಿನ ನಂತರ ಅಟೆಂಡರ್ ರಾಜೇಶ ಬಂದು ಬೀಗ ತೆಗೆಯುತ್ತಿದ್ದಂತೆಯೇ ಒಳಗೆ ನುಗ್ಗಿದ. ಗೋಪಾಲನ ಆತುರವನ್ನು ಕಂಡ ರಾಜೇಶನಿಗೆ ನಗು ಬಂತು. ‘ಇನ್ನು ಕಾಲು ಗಂಟೆಯಲ್ಲಿ ವ್ಯವಹಾರ ಶುರವಾಗುತ್ತದೆ. ಬನ್ನಿ ಕುಳಿತುಕೊಳ್ಳಿ…’ ಎಂದ ಅವನು ಒಳಗೆ ಹೋದ. ಸ್ವಲ್ಪ ಸಮಯದಲ್ಲಿ ಸಿಬ್ಬಂದಿಗಳು ಒಬ್ಬೊಬ್ಬರಾಗಿ ಬರುತ್ತ ಆಸನಗಳು ಭರ್ತಿಯಾಗತೊಡಗಿದವು. ಗ್ರಾಹಕರೂ ಬರತೊಡಗಿದರು. ಅಷ್ಟರವರೆಗೆ ನಿಶ್ಶಬ್ದವಾಗಿದ್ದ ಬ್ಯಾಂಕು ಜನರ ಗಿಜಿಗಿಜಿ, ಗುಸುಗುಸು ಮಾತುಕಥೆಗಳಿಂದ ತುಂಬಿಹೋಯಿತು. ಆದರೆ ಗೋಪಾಲನನ್ನು ಸತಾಯಿಸಲೇನೋ ಎಂಬಂತೆ ಚಿನ್ನ ತೂಗುವ ಅಕ್ಕಸಾಲಿಗನಿನ್ನೂ ಬಂದಿರಲಿಲ್ಲ. ಅದನ್ನು ತಿಳಿದವನಲ್ಲಿ ತೀವ್ರ ಒದ್ದಾಟವೆದ್ದು ಬ್ಯಾಂಕಿನ ನೌಕರರ ಮೇಲೆ ಸಿಟ್ಟು ಬಂತು. ಈ ಬ್ಯಾಂಕಿನವರಿಗೆ ಚೂರೂ ಸಮಯಪ್ರಜ್ಞೆ ಇಲ್ಲ! ದಿನಾ ಸೂರ್ಯ ನೆತ್ತಿಗೇರುವ ಹೊತ್ತಿಗೆ ರಾಜಮರ್ಜಿಯಿಂದ ಬರುತ್ತಾರೆ. ಸಂಜೆ ಆಯಿತೋ ಇಲ್ಲವೋ ಎದ್ದು ಹೊರಟು ಬಿಡುತ್ತಾರೆ. ಎಂಥ ಆರಾಮದ ಜೀವನ ಇವರದ್ದು. ಇವರು ಕೆಲಸ ಮಾಡಲಿ, ಬಿಡಲಿ. ತಿಂಗಳು, ತಿಂಗಳು ಅವರವರ ಹುಂಡಿಗೆ ಬಂದು ಬೀಳುವುದು ಬಿದ್ದೇ ಬೀಳುತ್ತದಲ್ಲ. ಮತ್ತೆ ನಮ್ಮಂಥವರ ಕಷ್ಟ ಹೇಗೆ ತಿಳಿಯಬೇಕು ಇವರಿಗೆ? ಎಂದು ಒಳಗೊಳಗೇ ಗೊಣಗಿದನೋ ಅಥವಾ ಬಾಯಿಬಿಟ್ಟೇ ಅಂದನೋ ಅವನಿಗೇ ತಿಳಿಯಲಿಲ್ಲ. ಅತ್ತ ಕ್ಯಾಷಿಯರ್ ರಾಜಾರಾಮ ಐತಾಳರು ತಮ್ಮ ಎದುರುಗಡೆ ಕುಳಿತಿದ್ದ ಮಾಮೂಲಿ ಗಿರಾಕಿ ಗೋಪಾಲನನ್ನು ಗಮನಿಸಿದರು.

‘ಓಹೋ, ಗೋಪಾಲರು. ಏನೀವತ್ತು ಬೇಗ ಬಂದು ಬಿಟ್ಟಿದ್ದೀರಿ? ಬ್ಯಾಂಕ್ ತೆರೆಯುವ ಸಮಯ ಮರೆತು ಬಿಟ್ರಾ ಹೇಗೆ?’ ಎಂದರು ವಿನೋದವಾಗಿ. ಅಷ್ಟು ಕೇಳಿದ ಗೋಪಾಲ, ಅಯ್ಯಯ್ಯೋ, ದೇವರೇ! ತಾನು ಬೈದುಕೊಂಡದ್ದು ಇವರಿಗೆ ಕೇಳಿಸಿಬಿಟ್ಟಿತಾ ಹೇಗೇ…? ಎಂದುಕೊಂಡು ಭಯಪಟ್ಟವನು, ‘ಹಾಂ! ಅದೂ…ಹೌದಲ್ವಾ ಸಾರ್. ಗಡಿಬಿಡಿಯಲ್ಲಿ ಮರೆತುಬಿಟ್ಟೆ. ಅದರ ಮೇಲೆ ನಿಮಗೊಂದಷ್ಟು ಬೈದೂ ಬಿಟ್ಟೆ. ಕೇಳಿಸಿಕೊಂಡ್ರಾ… ತಪ್ಪಾಯ್ತು ಸಾರ್!’ ಎಂದು ಪೆಚ್ಚು ನಕ್ಕ.

‘ಹ್ಞಾಂ! ಬೈದ್ರಾ…ಯಾಕ್ರೀ? ನಾವೇನ್ ಮಾಡಿದೆವು ನಿಮ್ಗೆ? ನಂಗೇನೂ ಕೇಳಿಸಲಿಲ್ವಲ್ಲಾ!’ ಎಂದರವರು ಅಚ್ಚರಿಯಿಂದ.

‘ಓಹೋ, ಕೇಳಿಸಲಿಲ್ಲವಾ. ಬಚಾವಾಯ್ತು ಬಿಡಿ. ಏನಿಲ್ಲ ಸಾರ್. ಏನೋ ದುಡ್ಡಿನ ಗಡಿಬಿಡಿಯಲ್ಲಿದ್ದೆ…!’ ಎಂದು ಗೋಪಾಲನೆಂದಾಗ ಐತಾಳರು ಇನ್ನೂ ಗಲಿಬಿಲಿಯಾಗಿ ಅವನನ್ನು ಮಿಕಮಿಕಾ ನೋಡಿದರು. ಏನೂ ಅರ್ಥವಾಗಲಿಲ್ಲ. ಆದ್ದರಿಂದ, ‘ಸರಿ ಸರಿ. ಕುಳಿತುಕೊಳ್ಳಿ. ಚಿನ್ನ ತೂಗುವವರು ಇನ್ನೇನು ಹತ್ತು ನಿಮಿಷದಲ್ಲಿ ಬಂದುಬಿಡ್ತಾರೆ’ ಎಂದವರು ನೋಟಿನ ಕಂತೆ ಜೋಡಿಸುವುದರಲ್ಲಿ ಮಗ್ನರಾದರು. ತುಸುಹೊತ್ತಲ್ಲಿ ಅಕ್ಕಸಾಲಿಗನೂ, ಅವನ ಹಿಂದೆ ಗಿರವಿದಾರರೂ, ಹಣದ ವ್ಯವಹಾರಿಗರೂ ಸಾಲುಸಾಲಾಗಿ ಒಳಗಡಿಯಿಟ್ಟರು. ಗೋಪಾಲ ಎಲ್ಲರಿಗಿಂತ ಮುಂದೆ ನುಗ್ಗಿ ತನ್ನ ಚಿನ್ನವನ್ನು ಅಕ್ಕಸಾಲಿಗನ ಕೈಗಿತ್ತು ತೂಗಿಸಿದವನು ಬೇಕಾದಷ್ಟು ಮೊತ್ತಕ್ಕೆ ಗಿರವಿಯಿಟ್ಟು ಹಣವನ್ನು ಪಡೆದು ಶಂಕರನ ಸೈಟಿನತ್ತ ವಾಯುವೇಗದಿಂದ ಸೈಕಲ್ ತುಳಿದ.

********************************

(ಮುಂದುವರೆಯುವುದು)

ಗುರುರಾಜ್ ಸನಿಲ್

ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.

One thought on “

  1. ಶಂಕರ ಮತ್ತು ಗೋಪಾಲರ ವ್ಯವಹಾರಿಕ ಸಂಭಾಷಣೆಯನ್ನು ಕಾದಂಬರಿಕಾರರು ತುಂಬಾ ಚೆನ್ನಾಗಿ ಕಟ್ಟಿ ಕೊಟ್ಟಿದ್ದಾರೆ. ಬಹುದಿನಗಳ ಕನಸು ಸಾಕಾರಗೊಳ್ಳುತ್ತಿರುವ ರಾಧಾ ಗೋಪಾಲರ ಸಂಭ್ರಮವೂ ಇಲ್ಲಿ ಮಾರ್ಮಿಕವಾಗಿ ಮೂಡಿ ಬಂದಿದೆ. ಅಭಿನಂದನೆಗಳು

Leave a Reply

Back To Top