ಸಿರಿಗರ ಹೊಡೆದವರ. . . . .

ಲೇಖನ

ಸಿರಿಗರ ಹೊಡೆದವರ. . . . .

ಜಯಶ್ರೀ ಜೆ. ಅಬ್ಬಿಗೇರಿ

Gold Coin

ಒಂದೂರಿನಲ್ಲಿ ಒಬ್ಬ ನೇಕಾರನಿದ್ದ. ಆತ ನಿಗರ್ವಿ ಮತ್ತು ಪ್ರಾಮಾಣಿಕ ವ್ಯಕ್ತಿಯಾಗಿದ್ದ. ಅದೂ ಅಲ್ಲದೇ ಆತ ತನ್ನ ಶಾಂತ ಸ್ವಭಾವಕ್ಕೆ ಹೆಸರಾಗಿದ್ದ.ನೇಕಾರ ಸಿಟ್ಟಿಗೆದ್ದಿದ್ದನ್ನು ಯಾರೂ ನೋಡಿರಲೇ ಇಲ್ಲ. ಆತನನ್ನು ಸಿಟ್ಟಿಗೆಬ್ಬಿಸಲೇಬೇಕೆಂದು ಆ ಊರಿನ ಕೆಲ ಯುವಕರ ತಂಡ ಒಂದು ಕುತಂತ್ರವನ್ನು ಹೆಣೆದುಕೊಂಡು ಆತನಲ್ಲಿಗೆ ಬಂದರು. ಆ ತಂಡದ ನಾಯಕ ಶ್ರೀಮಂತ ವ್ಯಾಪಾರಿಯೊಬ್ಬನ ಮಗನಾಗಿದ್ದ.ಆತ ನೇಕಾರನ ಅಂಗಡಿಯಲ್ಲಿ ಬೆಲೆ ಬಾಳುವ ಸೀರೆಯೊಂದನ್ನು ಆರಿಸಿ ಅದರ ಬೆಲೆ ವಿಚಾರಿಸಿದ. ನೇಕಾರ ಆ ಸೀರೆಯ ಬೆಲೆ ೧೦ ನಾಣ್ಯಗಳು ಎಂದ. ನೇಕಾರನನ್ನು ಛೇಡಿಸುವ ಉದ್ದೇಶದಿಂದ  ಶ್ರೀಮಂತ ಯುವಕ ಆ ಸೀರೆಯನ್ನು ಹರಿದು ಎರಡು ಭಾಗ ಮಾಡಿ, ನನಗೆ ಪೂರ್ಣ ಸೀರೆ ಬೇಕಿಲ್ಲ. ಅರ್ಧ ಸಾಕು ಇದರ ಬೆಲೆ ಹೇಳು ಎನ್ನುತ್ತ ನೇಕಾರನನ್ನು ಕೆಣಕಿದ. ನೇಕಾರ ಶಾಚಿತ ಚಿತ್ತದಿಂದ ೫ ನಾಣ್ಯಗಳು ಎಂದು ಉತ್ತರಿಸಿದ. ಯುವಕ ಮತ್ತೆ ಆ ಸೀರೆಯನ್ನು ಎರಡು ಭಾಗ ಮಾಡಿ ಒಂದು ಭಾಗ ಸಾಕು ಈಗ ಬೆಲೆ ಹೇಳು ಎಂದ. ಆಗಲೂ ಸಮಾಧಾನದಿಂದಲೇ ೨ ನಾಣ್ಯಗಳು ಎಂದ. ತನ್ನ ಷಡ್ಯಂತ್ರ ಫಲಿಸದಿರುವುದನ್ನು ಕಂಡು ಕುದಿಯುತ್ತ ಸೀರೆಯನ್ನು ತುಂಡು ತುಂಡು ಮಾಡುತ್ತಲೇ ಹೋದ. ಕೊನೆಗೆ ‘ಈ ಸೀರೆ ನನಗೀಗ ಯಾವ ಉಪಯೋಗಕ್ಕೆ ಬಾರದು ಎಂದು ಕೈಚೆಲ್ಲಿದ. ಆಗ ನೇಕಾರ ಈ ಸೀರೆ ನಿನಗಷ್ಟೇ ಅಲ್ಲ ಯಾರ ಉಪಯೋಗಕ್ಕೂ ಬಾರದೆಂದು ಶಾಂತಚಿತ್ತದಿಂದ ನುಡಿದ.ಇಷ್ಟೆಲ್ಲ ನಡೆದರೂ ನೇಕಾರ ಸಿಟ್ಟಿಗೇಳದಿರುವುದನ್ನು ಕಂಡ ಯುವಕನಿಗೆ ನಾಚಿಕೆಯಾಯಿತು. ‘ಕ್ಷಮಿಸಿ, ನನ್ನಿಂದ ನಿಮಗೆ ನಷ್ಟವಾಯಿತು.ದಯವಿಟ್ಟು ಸೀರೆಯ ಪೂರ್ಣ ಬೆಲೆಯನ್ನು ಸ್ವೀಕರಿಸಿ.’ ಎಂದು ಮನವಿ ಮಾಡಿಕೊಂಡ. ನೀನು ನನ್ನಿಂದ ಸೀರೆಯನ್ನು ಖರೀದಿಸಿಯೇ ಇಲ್ಲ. ಆದ್ದರಿಂದ ನಿನ್ನಿಂದ ಹಣವನ್ನು ಪಡೆಯಲಾರೆ ಎಂದ.

   ನೇಕಾರನ ಈ ಮಾತು ಕೇಳಿ ಯುವಕನ ಅಹಂಗೆ ಪೆಟ್ಟು ಬಿದ್ದಂತೆನಿಸಿತು.’ನಾನು ಶ್ರೀಮಂತನ ಮಗ ನಾನು ಹಣ ಕೊಟ್ಟರೆ ನನಗೇನು ನಷ್ಟವಾಗುವುದಿಲ್ಲ. ಆದರೆ ನೀನು ಬಡವ ಈ ನಷ್ಟವನ್ನು ಹೇಗೆ ಭರಿಸುತ್ತಿಯಾ? ನಿನ್ನ ನಷ್ಟಕ್ಕೆ ನಾನು ಕಾರಣವಾಗಿದ್ದೇನೆ ಆದ್ದರಿಂದ ಅದನ್ನು ನಾನೇ ಭರಿಸುತ್ತೇನೆ ಎಂದ. ‘ಹಣ ನೀಡಿದರೂ ನೀನು ನಷ್ಟವನ್ನು ಭರಿಸಲಾರೆ.ಒಮ್ಮೆ ಯೋಚಿಸು ಹತ್ತಿ ಬೆಳೆಯಲು ರೈತ ಎಷ್ಟು ಶ್ರಮಪಟ್ಟಿದ್ದಾನೆ. ಆ ಹತ್ತಿಯಿಂದ ನೂಲು ತೆಗೆಯುವಲ್ಲಿ,ಸೀರೆ ನೇಯುವಲ್ಲಿ, ಬಣ್ಣ ಹಾಕುವಲ್ಲಿ ನನ್ನ ಮತ್ತು ನನ್ನ ಹೆಂಡತಿಯ ಬೆವರು ಹರಿದಿದೆ. ಇಷ್ಟೆಲ್ಲ ಶ್ರಮ ಸಾರ್ಥಕವಾಗುವುದು ಈ ಸೀರೆಯನ್ನು ಯಾರಾದರೂ ಉಟ್ಟು ಸಂತೋಷಪಟ್ಟಾಗ ಮಾತ್ರ ಆದರೆ ನೀನು ಸೀರೆಯನ್ನು ತುಂಡು ತುಂಡು ಮಾಡಿಬಿಟ್ಟೆ. ಕೇವಲ ದುಡ್ಡು ಕೊಟ್ಟು ನೀನು ನಷ್ಟವನ್ನು ಭರಿಸಲಾರೆ.’ ಹೀಗೆ ಹೇಳುವಾಗ ನೇಕಾರನ ಧ್ವನಿಯಲ್ಲಿ ಆಕ್ರೋಶವಿರಲಿಲ್ಲ ಬದಲಾಗಿ ಸೌಮ್ಯತೆ  ಎದ್ದು ಕಾಣುತ್ತಿತ್ತು. ನೇಕಾರನ ಅಂತಃಕರಣದ ನುಡಿಗಳಿಂದ ಯುವಕನ ಕಣ್ಣಲ್ಲಿ ನೀರು ಜಿನುಗಿತು. ನೇಕಾರನ ಕಾಲು ಹಿಡಿದು ಬಿಕ್ಕತೊಡಗಿದ. ನೇಕಾರ ಯುವಕನನ್ನು ಎಬ್ಬಿಸಿ ಪ್ರೀತಿಯಿಂದ ಅಪ್ಪಿಕೊಂಡು ಹೇಳಿದ. ‘ಮಗು, ನಾನು ನಿನ್ನಿಂದ ಹಣ ಪಡೆದಿದ್ದರೆ ನನಗೇನೋ ಉಪಯೋಗವಾಗುತ್ತಿತ್ತು ಆದರೆ ನಿನ್ನ ಜೀವನದಲ್ಲಿ ಯಾವುದೇ ಬದಲಾವಣೆ ಆಗುತ್ತಿರಲಿಲ್ಲ. ಸೀರೆ ಒಂದು ಹೋದರೆ ಇನ್ನೊಂದು ತಯಾರಿಸಬಹದು ಆದರೆ ಬದುಕು ಅಹಂಕಾರದಿಂದ ನಷ್ಟವಾದರೆ ಇನ್ನೊಂದು ಬದುಕನ್ನು ತರುವುದು ಎಲ್ಲಿಂದ? ಎಂದ ನೇಕಾರನ ಮಾತು ಕೇಳಿ ಯುವಕ ಕಣ್ಣೀರಿಟ್ಟ. ನೇಕಾರ ಆತನನ್ನು ಸಮಾಧಾನ ಪಡಿಸಿ ನಿನ್ನ ಪಶ್ವಾತ್ತಾಪವೇ ಈ ಸೀರೆಯ ಬೆಲೆ ಎಂದ. ಹೀಗೆ ಅಂತಃಕರಣದ ಮಾತುಗಳಿಂದ ದುರಹಂಕಾರಿ ಯುವಕನ ಕಣ್ಣು ತೆರೆಸಿದ ನೇಕಾರ ಬೇರಾರೂ ಅಲ್ಲ.ಸಂತ ಕಬೀರ.

    ಸಾರ್ವಜನಿಕವಾಗಿ ನಮ್ಮ ನಡೆ ನುಡಿ ಅಂದರೆ ನಾವು ಕಾಣಿಸಿಕೊಳ್ಳುವ ರೀತಿ ನಡೆಯುವಾಗಿನ ಗತ್ತು  ನಿಲ್ಲುವ ಭಂಗಿ ಕೂರುವ ಬಗೆ ಮಾತನಾಡುವ ಪರಿ ಇದರ ಮೇಲೆ ವ್ಯಕ್ತಿಯ ವ್ಯಕ್ತಿತ್ವದ ಕುರಿತಾಗಿ ಒಂದು ಚಿತ್ರಣ ರೂಪುಗೊಳ್ಳುತ್ತದೆ. ಆದರೆ ಕೇವಲ ಆಂಗಿಕ ಭಾಷೆಯಿಂದಲೇ ವ್ಯಕ್ತಿ ಅಹಂಕಾರಿ ಇಲ್ಲವೇ ವಿನಯವಂತ ಎಂದು ನಿರ್ಣಯಿಸಿ ಬಿಡುವುದು ಹಲವು ಸಲ ತಪ್ಪು ಎಂದೆನಿಸುವುದು. ಹೊರಗಿನಿಂದ ಅಹಂಕಾರದ ನಡೆ ತೋರುತ್ತಿದ್ದರೂ ಸನಿಹದ ಒಡನಾಟದಲ್ಲಿ  ವಿನಯದ ಸಾಕಾರ ಮೂರ್ತಿಗಳಾಗಿರುವುದು ಕಂಡು ಬರುವುದು. ನಾನೇ ಎಲ್ಲ, ಎಲ್ಲವೂ ನನ್ನಿಂದಲೇ(ನನ್ನ ಬಳಿ ಹಣವಿದೆ) ಎಂಬ ಮಾತಿನ ವರ್ತನೆ. ನಾನೇ ಸರಿ ಎಂದು ವಾದಿಸುವ ಪರಿ ದುರಹಂಕಾರವನ್ನು ತೋರಿಸುತ್ತದೆ. ದುರಹಂಕಾರವೆಂಬ ದುರಾಲೋಚನೆ ತಲೆಯಲ್ಲಿಟ್ಟುಕೊಂಡು ತಿರುಗುವುದು ಮನದ ಶಾಂತಿಯನ್ನು ಕಳೆಯುತ್ತದೆಂಬುದು ಗೊತ್ತಿದ್ದರೂ ಅದೇ ದುರಾಲೋಚನೆಯನ್ನು ಸದಾ ಧ್ಯಾನಿಸುತ್ತ ಅದರ ಹಿಂದೆ ಬಿದ್ದಿರುತ್ತೇವೆ. ಅಹಂಕಾರ ಬಹು ಬೇಗ ಚಟ್ಟವನ್ನೇರಿಸುವುದು. ಘೋರಿಯಲ್ಲಿ ಮಣ್ಣಾಗುವವರೆಗೆ ಅದನ್ನು ಹೊತ್ತು ತಿರುಗುವುದು. ಘೋರಿಯಲ್ಲಿ ಮಣ್ಣಾದಾಗ ಎದೆಯ ಮೇಲಿನ ಕಲ್ಲು ಅಹಂಕಾರದಿ ಮೆರೆದುದನ್ನು ನೋಡಿ ನಗುವಂತಹ ಪರಿಸ್ಥಿತಿ ಬರದೇ ಇರದು.ಹೀಗಿದ್ದಾಗ್ಯೂ ಅಹಂಕಾರವೆಂಬ ಕೆಟ್ಟ ಗೆಳೆಯನ ಕೈ ಹಿಡಿದು ನಡೆಯುವುದು ಎಷ್ಟು ಸರಿ? ಎಂಬ ಪ್ರಶ್ನೆ ನಮಗೆ ಹಾಕಿಕೊಳ್ಳಲೇಬೇಕು. ಅಹಂಕಾರ ಅಂತ್ಯಕ್ಕೆ ನಾಂದಿ ಹಾಡುತ್ತದೆ. ನಮ್ಮನ್ನು ನಾವೇ ನಾಶಪಡಿಸಿಕೊಳ್ಳುವ ಮಾರ್ಗ. ಉಪ್ಪು ತಿಂದವರೆಲ್ಲ ನೀರು ಕುಡಿಯಲೇಬೇಕು. ಹಾಗೆಯೇ ಅಹಂಕಾರದಿಂದ ಮೆರೆದವರೆಲ್ಲ ಶಾಂತ ಜೀವನಕ್ಕೆ ಪರದಾಡಲೇಬೇಕು.

ಹಾವು ತಿಂದವರ ನುಡಿಸಬಹುದು

ಗರ ಹೊಡೆದವರ ನುಡಿಸಬಹುದು

ಸಿರಿಗರ ಹೊಡೆದವರ ನುಡಿಸಲಾಗದು ನೋಡಯ್ಯ

ಬಡತನವೆಂಬ ಮಂತ್ರವಾದಿ ಬರಲು ಒಡನೆ ನುಡಿವರಯ್ಯ

ಕೂಡಲಸಂಗಮದೇವ

   ಎಂಬ.ಬಸವಣ್ಣನವರ ವಚನದ ನುಡಿಯಂತೆ ಸಿರಿವಂತಿಕೆಯ ಮದ ಸಂಬಂಧದ ಬೇರುಗಳನ್ನೇ ಅಲ್ಲಾಡಿಸುವ ಬಿರುಗಾಳಿಯಾಗಬಲ್ಲದು.ಅಹಂಕಾರವನ್ನು ಹೆಮ್ಮರವಾಗುವುದಕ್ಕೆ ಮುಂಚೆಯೇ ಚಿವುಟಿಬಿಡಬೇಕು ವಚನಗಳು ಪ್ರಸ್ತುತ ಸಮಾಜಕ್ಕೂ ದಾರಿದೀಪದಂತಿವೆ. ದಿನನಿತ್ಯ ಅನೇಕರೊಂದಿಗೆ ಬೇರೆ ಬೇರೆ ವ್ಯವಹಾರ ನಡೆಸುತ್ತೇವೆ.ಆಣೆಕಟ್ಟಿನ ಬಾಗಿಲು ಮುಚ್ಚಿದಾಗ ಇದ್ದಕ್ಕಿದ್ದಂತೆ ಪ್ರವಾಹ ಬಂದರೆ ಆಗ ನೀರು ಹೋಗಲು ಒಂದೇ ದಾರಿ ಇರುತ್ತದೆ. ಅದು ಆಣೆಕಟ್ಟನ್ನು ಒಡೆದುಕೊಂಡು ಹೋಗುವುದು. ಅಂತೆಯೇ ಅತಿಯಾದ ಅಹಂಕಾರದಿAದ ಚಿತ್ತವು ಶಾಂತತೆಯನ್ನು ಕಳೆದುಕೊಳ್ಳುವುದು. ಕದಡಿದ ಮನಃಶಾಂತಿಯು ಅಂದಿನ ಎಲ್ಲ ಕೆಲಸಗಳನ್ನು ಹಾಳುಗೆಡುವುದು.ಅಹಂಕಾರದ ಗೈರು ಹಾಜರಿ ವಿನಮ್ರತೆಯಿಂದ ಒಡಗೂಡಿದ ಸಾರ್ಥಕ ಜೀವನವನ್ನು ನೀಡುವುದು. ಸಂತೃಪ್ತಿಯ ನೆಮ್ಮದಿಯ ಬಾಗಿಲುಗಳನ್ನು ತೆರೆದು ಸಂಭ್ರಮದಲ್ಲಿ ತೇಲಿಸಬಲ್ಲದು.

 ಆಯ್ಕೆ ನಮ್ಮದೇ.

**********************************************************

One thought on “ಸಿರಿಗರ ಹೊಡೆದವರ. . . . .

Leave a Reply

Back To Top