ಅಂಕಣ ಬರಹ
ರಾಮಕೃಷ್ಣ ಗುಂದಿ ಅವರ ಆತ್ಮಕಥೆ-14
ಆತ್ಮಾನುಸಂಧಾನ
ಯಕ್ಷಗಾನದ ಹುಚ್ಚು ಹಿಡಿಸಿದ
‘ಪರಸಂಗಗಳು’
.
ಯಕ್ಷಗಾನ ಬಯಲಾಟಗಳನ್ನು ಆಡುವ, ನೋಡುವ ಹುಚ್ಚು ನಮ್ಮ ಜಾತಿ ಜನರ ರಕ್ತದಲ್ಲಿಯೇ ತುಂಬಿಕೊಂಡಿದೆ. ಹತ್ತಾರು ಮೈಲುಗಳ ದೂರವನ್ನಾದರೂ ಕಾಲು ನಡಿಗೆಯಲ್ಲೇ ಕ್ರಮಿಸಿ ಹೆಂಗಸರು, ಮಕ್ಕಳು, ಮುದುಕರೆನ್ನದೇ ರಾತ್ರಿಯಿಡೀ ಕುಳಿತು ಆಟ ನೋಡುವ ಖಯಾಲಿ ನಮ್ಮವರಲ್ಲಿ ಇಂದಿಗೂ ಕಡಿಮೆಯಾಗಿಲ್ಲ. ಆಗೇರರು ನೆಲೆಸಿದ ಎಲ್ಲ ಊರುಗಳಲ್ಲಿ ಇಂದಿಗೂ ಕುಲದೇರ ಭಜನೆ ಉತ್ಸವ ಮತ್ತು ಅದರ ನಿಮಿತ್ತವಾಗಿ ನಡೆಯುವ ಯಕ್ಷಗಾನ ಪ್ರದರ್ಶನಗಳು ಯಕ್ಷಗಾನ ಕಲೆ ನಮ್ಮ ಆಗೇರ ಜನಾಂಗದ ಸಾಂಸ್ಕೃತಿಕ ಬದುಕಿನಲ್ಲಿ ಹಾಸುಹೊಕ್ಕಾಗಿರುವುದಕ್ಕೆ ಸಾಕ್ಷಿಯಾಗಿದೆ.
‘ಯಕ್ಷಗಾನ ತಾಳಮದ್ದಲೆ’ ವೇಷಭೂಷಣ ನೃತ್ಯ ವೇದಿಕೆಗಳಿಲ್ಲದೆ ಕುಳಿತಲ್ಲಿಯೇ ಪ್ರಸ್ತುತ ಪಡಿಸುವ ಯಕ್ಷ ಪ್ರಸಂಗ. ಇದನ್ನು ನಮ್ಮವರು ‘ಪರಸಂಗ’ ಎಂದೇ ಕರೆಯುತ್ತಿದ್ದರು. ನಾವು ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿರುವ ಕಾಲದಿಂದಲೂ ನಮ್ಮ ಕೇರಿಯಲ್ಲಿ ಇಂಥ ಪರಸಂಗಗಳು ಮೇಲಿಂದ ಮೇಲೆ ನಡೆಯುತ್ತಿದ್ದವು. ನಮ್ಮ ಕೇರಿಯ ತಾಳಮದ್ದಲೆ ಕೂಟದಲ್ಲಿ ನಮ್ಮ ತಂದೆಯವರು ಭಾಗವತಿಕೆ ಮಾಡುತ್ತಿದ್ದರೆ ನಮ್ಮ ದಾಯಾದಿ ಚಿಕ್ಕಪ್ಪ ಗುಂದಿಹಿತ್ತಲಿನ ಮಹಾದೇವ ಎಂಬುವನು ಮದ್ದಳೆ ಬಾರಿಸುತ್ತಿದ್ದ. ಕೇರಿಯ ಬಹಳಷ್ಟು ಜನ ನಿರಕ್ಷರಿಗಳಾಗಿದ್ದರೂ ಯಕ್ಷಗಾನವನ್ನು ನೋಡಿ ಕಲಿತ ಅನುಭವದಿಂದ ಪರಸಂಗ ನಡೆದಾಗ ಅರ್ಥ ಹೇಳುವ ಸಾಮಥ್ರ್ಯ ಹೊಂದಿದ್ದರು. ಮುಖ್ಯವಾಗಿ ನಮ್ಮ ತಾಯಿಯ ಚಿಕ್ಕಪ್ಪ ರಾಕು ಅಜ್ಜ, ನಮ್ಮ ದಾಯಾದಿ ಚಿಕ್ಕಪ್ಪಂದಿರಾದ ಪೊಕ್ಕ, ನಾರಾಯಣ, ಮೂಡನೂರು ಜಟ್ಟಿ ಆಗೇರ, ಹೆಗ್ರೆಯ ಹೊನ್ನ ಜೋಗಿ ಮಂಕಾಳಿ ಆಗೇರ ಹಾರು ಮಾಸ್ಕೇರಿಯ ತಿಮ್ಮಜ್ಜ ಮುಂತಾದವರು ನಮ್ಮ ಕೇರಿಯ ತಾಳಮದ್ದಲೆ ಕೂಟದ ಅರ್ಥಧಾರಿಗಳಾಗಿದ್ದರು.
ಬಹುಕಾಲದ ಹಿಂದೆ ನಮ್ಮ ತಾಯಿಯ ತಂದೆ ಕೃಷ್ಣ ಅಜ್ಜನ ಕಾಲದಲ್ಲಿ ನಾಡುಮಾಸ್ಕೇರಿಯ ದಲಿತ ಸಮುದಾಯದ ಹಲವರು ಯಕ್ಷಗಾನ ತಂಡ ಕಟ್ಟಿಕೊಂಡು ಆಟವಾಡುವ ಸಂಪ್ರದಾಯವಿತ್ತೆಂದು ಹಿರಿಯರು ಅಭಿಪ್ರಾಯ ಪಡುತ್ತಾರೆ. ಇಲ್ಲಿಯ ನಾಡವ ಸಮಾಜದ ಹಿರಿಯರಾದ ತಿಮ್ಮಣ್ಣ ಗಾಂವಕರ ಎಂಬುವರು ಯಕ್ಷರಂಗದ ಸಮರ್ಥ ಕಲಾವಿದರಾಗಿದ್ದರೆಂದೂ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಹಿರಿಯ ಕಲಾವಿದರೊಂದಿಗೆ ಸಮಜೋಡಿಯಾಗಿ ಪಾತ್ರ ನಿರ್ವಹಿಸಿದ ಅನುಭವಿಗಳೂ ಆಗಿದ್ದಾರೆಂದೂ ಹಿರಿಯರು ಹೇಳುತ್ತಾರೆ. ಇದೇ ತಿಮ್ಮಣ್ಣ ಗಾಂವಕರರು ಬಹಳ ಹಿಂದೆಯೇ ದಲಿತ ಆಗೇರ ಯುವಕರನ್ನು ಒಂದೆಡೆ ಸೇರಿಸಿ ತರಬೇತಿ ನೀಡಿ ಯಕ್ಷಗಾನ ತಂಡ ರಚಿಸಿದ್ದರು ಎಂದೂ ಹೇಳುತ್ತಾರೆ. ಮತ್ತು ದಲಿತರಿಗೆ ಯಕ್ಷಗಾನ ಕಲಿಸಿದರು ಎಂಬ ಕಾರಣದಿಂದ ಅವರಿಗೆ ತಮ್ಮ ಜಾತಿಯಿಂದ ಬಹಿಷ್ಕಾರದ ಶಿಕ್ಷೆಯನ್ನು ಅನುಭವಿಸಬೇಕಾಯಿತೆಂದೂ ಹೇಳುತ್ತಾರೆ. ಆದರೆ ನಾನು ತಿಮ್ಮಣ್ಣ ಗಾಂವಕರರನ್ನು ಕಾಣುವ ಹೊತ್ತಿಗೆ ಅವರೇನೂ ಜಾತಿ ಬಹಿಷ್ಕ್ರತರಂತೆ ಕಾಣಲಿಲ್ಲ. ಹೊರತಾಗಿ ಸಮಾಜದ ನಡುವೆ ಗಣ್ಯವ್ಯಕ್ತಿಗಳಾಗಿ ಹಿರಿಯ ಯಕ್ಷ ಕಲಾವಿದೆಂಬ ಗೌರವಾದರಗಳೊಂದಿಗೆ ಬಾಳುವೆ ನಡೆಸಿರುವುದನ್ನು ಗಮನಿಸಿದ್ದೇನೆ.
ನಾವು ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದುವ ಹೊತ್ತಿಗೆ ನಮ್ಮ ಕೇರಿಯಲ್ಲಿ ಬಹಳಷ್ಟು ಯಕ್ಷಗಾನ ಪರಸಂಗಗಳು ನಡೆಯುತ್ತಿದ್ದವು. ಯಾವುದೇ ಹಬ್ಬ ಹುಣ್ಣಿಮೆಯ ದಿನ ಕೇರಿಯ ಜನ ‘ಹುತುತು’ (ಕಬ್ಬಡ್ಡಿ) ಆಟ ಆಡುತ್ತಿದ್ದರು. ಅದಕ್ಕೆ ನಮ್ಮ ನೆರೆಯ ಹೆಗ್ರೆ, ಅಗ್ಗರಗೋಣ, ಹನೇಹಳ್ಳಿ ಮುಂತಾದ ಗ್ರಾಮಗಳಿಂದಲೂ ಆಗೇರರ ಹೊಂತಕಾರಿಗಳು ಬಂದು ಆಟದಲ್ಲಿ ಭಾಗವಹಿಸುತ್ತಿದ್ದರು. ಹಬ್ಬದೂಟದ ಮಧ್ಯಾಹ್ನದ ಬಳಿಕ ಆರಂಭವಾಗುವ ‘ಹುತುತು’ ಕತ್ತಲಾಗುವವರೆಗೆ ಮುಂದುವರಿದು ಆಟ ನಿಂತ ಬಳಿಕ ರಾತ್ರಿ ಪರಸಂಗ ನಡೆಸುವ ತೀರ್ಮಾನವಾಗುತ್ತಿತ್ತು. ಕಾಸು ಇದ್ದವರು ನಾಲ್ಕಾಣಿ ಎಂಟಾಣಿಗಳನ್ನು ದೇಣಿಗೆ ನೀಡಿ ರಾತ್ರಿ ತಾಳಮದ್ದಲೆಯಲ್ಲಿ ಅವಲಕ್ಕಿ ಚಹಾದ ವ್ಯವಸ್ಥೆಗೆ ನೆರವಾಗುತ್ತಿದ್ದರು.
ನಮ್ಮ ಗೆಳೆಯರ ಗುಂಪು ಈ ಚಹಾ ಅವಲಕ್ಕಿಯ ಭಾಗ್ಯಕ್ಕಾಗಿ ಪರಸಂಗದುದ್ದಕ್ಕೂ ಎಚ್ಚರಿದ್ದು ಅನಿವಾರ್ಯವಾಗಿ ಕಥಾನಕವನ್ನು ಆಲಿಸುತ್ತ ನಮಗೆ ಅರಿವಿಲ್ಲದಂತೆ ಈ ಕಲೆಯ ಕುರಿತು ಆಸಕ್ತಿ ಅನುಭವ ಗಳಿಸಿಕೊಂಡದ್ದು ಮಾತ್ರ ತುಂಬ ವಿಚಿತ್ರವೇ ಅನ್ನಿಸುತ್ತದೆ.
ಬಹುತೇಕ ನಮ್ಮದೇ ಮನೆಯ ಅಂಗಳದಲ್ಲಿ ನಡೆಯುವ ತಾಳಮದ್ದಲೆ ಅಥವಾ ಪರಸಂಗದ ಪ್ರಖ್ಯಾತಿ ನಮ್ಮ ನೆರೆಹೊರೆಯ ಆಗೇರರ ವಾಸ್ತವ್ಯದ ಹಳ್ಳಿಗಳಿಗೂ ವಿಸ್ತರಿಸಿತ್ತು. ಯಾರದಾದರೂ ಮನೆಯಲ್ಲಿ ಮದುವೆ, ಸತ್ಯನಾರಾಯಣ ಪೂಜೆ ಇತ್ಯಾದಿ ಸಮಾರಂಭಗಳು ಇದ್ದಾಗ ಸೇರಿದ ಎಲ್ಲಾ ನೆಂಟರಿಷ್ಟರಿಗೆ ಹಾಸಿಗೆ ಹೊದಿಕೆ ಪೂರೈಸುವುದು ಮನೆಯ ಯಜಮಾನನಿಗೆ ಕಷ್ಟವೆನಿಸುತ್ತಿತ್ತು. ಇಂಥಲ್ಲಿ ‘ಪರಸಂಗ’ದ ವ್ಯವಸ್ಥೆ ಮಾಡಿದರೆ ಎಲ್ಲರೂ ಕುಳಿತು ಕೇಳುತ್ತ ರಾತ್ರಿ ಕಳೆಯುತ್ತಿದ್ದರು. ಹೀಗಾಗಿ ನಮ್ಮ ಕೇರಿಯ ತಾಳಮದ್ದಲೆ ತಂಡವು ಸುತ್ತಲಿನ ಹೆಗ್ರೆ, ಅಗ್ಗರಗೋಣ, ಹನೇಹಳ್ಳಿ, ಸಾಣಿಕಟ್ಟಾ ಮಾತ್ರವಲ್ಲದೇ ದೂರದ ಗುಂಡಬಾಳಾ, ಹಿಲ್ಲೂರು ಮುಂತಾದ ನಮ್ಮ ಜನರ ವಾಸ್ತವ್ಯವಿದ್ದ ಕಡೆಯೆಲ್ಲಾ ಆಹ್ವಾನದ ಮೇರೆಗೆ ಹೋಗಿ ಪ್ರದರ್ಶನ ನೀಡಿ ಬರುತ್ತಿತ್ತು. ನಮ್ಮ ಗೆಳೆಯರ ಬಳಗ ಅರ್ಥಧಾರಿಗಳಲ್ಲದೆಯೂ ತಪ್ಪದೇ ಕಲಾತಂಡವನ್ನು ಹಿಂಬಾಲಿಸಿ ಆತಿಥ್ಯವನ್ನಂತೂ ಪಡೆಯುತ್ತಿದ್ದೆವು.
ತಂಡಕ್ಕೆ ವಿಶೇಷ ಸಂಭಾವನೆಯೇನೂ ಇರಲಿಲ್ಲ. ರಾತ್ರಿ ಊಟದ ವ್ಯವಸ್ಥೆ ಇರುತ್ತಿತ್ತು. ಮಧ್ಯರಾತ್ರಿಯ ಬಳಿಕ ಎಲ್ಲರಿಗೂ (ಪ್ರೇಕ್ಷರಿಗೂ ಸೇರಿದಂತೆ) ಅವಲಕ್ಕಿ ಚಹಾದ ಪೂರೈಕೆ ಇದ್ದೇ ಇರುತ್ತಿತ್ತು. ಮುಂಜಾನೆ ಮಂಗಳ ಹಾಡಿದ ಬಳಿಕ ಮನೆಯ ಯಜಮಾನ ವೀಳ್ಯದ ಮೇಲೆ ಎಂಟತ್ತು ರೂಪಾಯಿಗಳನ್ನಿಟ್ಟು ಭಾಗವತನಿಗೆ ನೀಡಿ ಕೈ ಮುಗಿದು ಬೀಳ್ಕೊಡುತ್ತಿದ್ದ ಅದರಲ್ಲಿಯೇ ಭಾಗವತನು ಮದ್ದಳೆಗಾರನಿಗೆ ಪಾಲು ನೀಡಬೇಕಿತ್ತು. ಅರ್ಥ ಹೇಳಿದ ಕಲಾವಿದರಿಗೆ ಯಾವ ಸಂಭಾವನೆಯೂ ಇರಲಿಲ್ಲ.
ಈ ತಾಳಮದ್ದಲೆ ಕೂಟಕ್ಕೆ ಯಕ್ಷಗಾನದ ಕುರಿತಾದ ಹುಚ್ಚು ಅಭಿಯಾನ ಮತ್ತು ಜೀವನೋತ್ಸಾಹಗಳೇ ಪ್ರೇರಣೆಯಾಗಿದ್ದವು ಎಂಬುದನ್ನು ನೆನೆದಾಗ ಅಚ್ಚರಿಯಾಗುತ್ತದೆ. ತಂಡಕ್ಕೆ ಮಳೆಗಾಲ ಬೇಸಿಗೆಗಾಲ ಎಂಬ ತಾರತಮ್ಯವೂ ಇರಲಿಲ್ಲ. ಜೀ ಗುಡುವ ಮಳೆಯಲ್ಲೂ ತಂಡವು ಆಹ್ವಾನ ಬಂದ ಊರಿಗೆ ಕಾಲ್ನಡಿಗೆಯಲ್ಲೇ ಪ್ರಯಾಣ ಹೊರಡುತ್ತಿತ್ತು. ಸಣ್ಣ ಪುಟ್ಟ ಅವಘಡಗಳೂ ಆಗುತ್ತಿದ್ದವು. ಅಗ್ಗರಗೋಣದ ಬೇಡು ಎಂಬುವರ ಮನೆಯ ಜಗುಲಿಯಲ್ಲಿ ಪರಸಂಗ ನಡೆಯುತ್ತಿದ್ದಾಗ ಒಂದು ಭಯಂಕರವಾದ ಸಿಡಿಲು ತೆಂಗಿನ ಮರಕ್ಕೆ ಬಡಿದು ನಮ್ಮ ಕಣ್ಣೆದುರೇ ತೆಂಗಿನ ಮರ ಹಿಲಾಲಿನಂತೆ ಹೊತ್ತಿ ಉರಿಯ ತೊಡಗಿತ್ತು. ಅದೇ ಸಿಡಿಲಿನ ಕಿಡಿಯೊಂದು ಕಂಚಿನ ತಾಳ ಹಿಡಿದು ಪದ್ಯ ಹೇಳುತ್ತಿದ್ದ ನಮ್ಮ ತಂದೆಯವರ ಕಿರು ಬೆರಳಿಗೂ ಬಡಿದು ಸುಟ್ಟು ಗಾಯ ಮಾಡಿತ್ತು!
ಹೆಗ್ರೆ ಗ್ರಾಮದ ಮಂಕಾಳಿ ಎಂಬುವವರ ಮನೆಯ ಜಗುಲಿಯ ಮೇಲೆ ತಾಳಮದ್ದಲೆ ಜೋರಾಗಿ ನಡೆಯುತ್ತಿರುವಾಗಲೂ ಭಯಂಕರ ಮಳೆ ಸುರಿಯುತ್ತಿತ್ತು. ಬಹುದಿನಗಳಿಂದ ಸುರಿಯುತ್ತಿದ್ದ ಮಳೆಯಿಂದಾಗಿ ಹಳೆಯ ಮನೆಯ ಮಣ್ಣಿನ ಗೋಡೆ ಒದ್ದೆಯಾಗಿರುವುದನ್ನು ಯಾರೂ ಗಮನಿಸಿರಲಿಲ್ಲ. ನಡುರಾತ್ರಿ ಕಳೆಯುವಾಗ ಪ್ರಸಂಗವೂ ಜೋರಾಗಿ ಸಾಗಿತ್ತು. ಮದ್ದಳೆಯ ಸದ್ದಿಗೆ ಸಣ್ಣಗೆ ಕಂಪಿಸುತ್ತಿದ್ದ ಗೋಡೆಯ ಒಂದು ಭಾಗ ಪೂರ್ತಿಯಾಗಿ ಕುಸಿದು ಬಿತ್ತು. ಸುದೈವದಿಂದ ಎಲ್ಲರೂ ಎದ್ದು ಹೊರಗೆ ಓಡಿ ಅವಘಡದಿಂದ ಪಾರಾಗಿದ್ದೆವು. ನನ್ನ ತಮ್ಮ ನಾಗೇಶ ಮತ್ತು ಕೇರಿಯ ಜೋಗಿ ಎಂಬ ಯುವಕ ಈ ಇಬ್ಬರೂ ಮಾತ್ರ ನಿದ್ದೆಗೆ ಜಾರಿದ್ದರಿಂದ ಎದ್ದು ಹೊರ ಬರಲು ಸಾಧ್ಯವಾಗಿರಲಿಲ್ಲ. ಅವರಿಬ್ಬರ ಕಾಲುಗಳ ಮೇಲೆ ಗೋಡೆಯ ಒಂದು ಭಾಗ ಕುಸಿದು ಬಿದ್ದುದರಿಂದ ಸಣ್ಣ ಪೆಟ್ಟುಗಳಾಗಿದ್ದವು. ಆದರೂ ಅವರು ಎದ್ದು ಸರಿಯಾಗಿ ನಡೆದಾಡಲು ಒಂದು ವಾರದ ಔಷಧೋಪಚಾರವೇ ಬೇಕಾಯಿತು. ಇಂಥ ಕಹಿ ಘಟನೆಗಳು ಕೂಡಾ ತಾಳಮದ್ದಲೆ ಕೂಟದ ಉತ್ಸಾಹವನ್ನು ಎಂದೂ ಕಡಿಮೆ ಮಾಡಲಿಲ್ಲ.
ಇಂಥ ತಾಳಮದ್ದಲೆ ಕೂಟಗಳಲ್ಲಿ ನಮ್ಮ ಸಕ್ರಿಯ ಭಾಗವಹಿಸುವಿಕೆಯೇನೂ ಇರಲಿಲ್ಲ. ಆದರೂ ತಪ್ಪದೇ ನಾವು ತಂಡದೊಡನೆ ಇರುತ್ತಿದ್ದೆವು. ಹೆಚ್ಚೆಂದರೆ ಅವಲಕ್ಕಿ ಚಹಾ ನಮ್ಮ ಕೈಗೆ ಬರುವವರೆಗೆ ಎಚ್ಚರಿದ್ದು ಆ ಬಳಿಕ ನಿದ್ದೆ ಹೋಗುತ್ತಿದ್ದೆವಾದರೂ ನಮ್ಮ ಕಿವಿಗಳ ಮೇಲೆ ಮತ್ತೆ ಮತ್ತೆ ಕೇಳಿ ಬರುವ ತಾಳ ಮದ್ದಳೆಯ ಪೆಟ್ಟಿನ ಸಂವೇದನೆ ರಾಮಾಯಣ ಮಹಾಭಾರತದ ಕಥೆಯ ಅರಿವು ಮೂಡಿದ್ದು ಈ ತಾಳಮದ್ದಲೆ ಕೂಟದ ತಿರುಗಾಟದಲ್ಲಿಯೇ ಎಂಬುದು ಮಹತ್ವದ ಸಂಗತಿಯೇ ಆಗಿದೆ. ಇದೇ ಅಲೆದಾಟದ ಅನುಭವ ವಿಕಾಸಗೊಳ್ಳುತ್ತಲೆ ನನ್ನ ಸಹಪಾಠಿ ಕೃಷ್ಣ ಮಾಸ್ಕೇರಿ ಈ ಭಾಗದ ಉತ್ತಮ ಭಾಗವತನಾಗಿ ರೂಪುಗೊಂಡ. ನಾನು ನನ್ನ ತಮ್ಮ ನಾಗೇಶ ಗುಂದಿ ನಮ್ಮ ಭಾವ ಹೊನ್ನಪ್ಪ ಮಾಸ್ತರ ಹೆಗ್ರೆ, ಯಕ್ಷಗಾನ ರಂಗದಲ್ಲಿ ದೊಡ್ಡವರಾದ ಮೇಲೆಯೂ ಕಲಾವಿದರಾಗಿ ಗುರುತಿಸಿಕೊಳ್ಳುವುದು ಸಾಧ್ಯವಾಯಿತು.
****************************************
ರಾಮಕೃಷ್ಣ ಗುಂದಿ
ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.
ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ
ತಾಳಮದ್ದಳೆ ಸೇವೆ ಬಗ್ಗೆ ಚೆನ್ನಾಗಿ ಬಂದಿದೆ ಗುಂದಿ ಸರ್
ಸರ್, ಓದಿದೆ ಮತ್ತೆ ಮತ್ತೆ ಓದಿದೆ ನಿಮ್ಮ ಬರವಣಿಗೆ ನಿಮ್ಮ ನೆನಪಿನ ಶಕ್ತಿಗೆ ಒಂದು ದೊಡ್ಡ ನಮಸ್ಕಾರ. ನಿಮ್ಮ ಜೀವನದ ಚರಿತೆ ಓದುವಾಗ ನಾನಗೆ ನನ್ನ ಬಾಲ್ಯದ ನೆನಪು ನೆನೆಸಿಕೊಳ್ಳುತ್ತಾ ಮತ್ತೆ ಮತ್ತೆ ಓದಿದೆ. ನಿಮ್ಮ ಬಾಲ್ಯದ ಅನುಭವ ಎಂದೂ ಮರೆಯದ ಬರವಣಿಗೆ. ನನಗೆ ಬರೆಯಲು ಪದಗಳೆ ಸಾಲದಂತಾಗಿದೆ.
ಧನ್ಯವಾದಗಳು,
ಗುರುಗಳೆ……..
ಮುಂದುವರಿದಿದೆ?
ಧನ್ಯವಾದಗಳುತಮ್ಮೆಲ್ಲರ ಪ್ರೀತಿಗೆ
ಸರ,
ನಿಮ್ಮ ಜೀವನದ ಪಾಠ ಅವಿಸಂರ್ಣಿಯ ಸ್ವಂತ ಅನುಭವಿಸಿದ ಭಾವ ಮೂಡು ತ್ತಿದೆ. ನಿಮ್ಮ ನೆನಪಿನ ಶಕ್ತಿಯನ್ನು ಸ್ಲಾಗಿಸಬೇಕು.ಹಾರ್ಥಿಕ. ಅಭಿನಂದನೆಗಳು ಸರ.
– ಬೋರಕರ ಕಮಲಾಕರ