ಪಾತ್ರೆ ಪಂಡಿತೆ

ಕಥೆ

ಪಾತ್ರೆ ಪಂಡಿತೆ

ಶಾಂತಿವಾಸು

Image result for photos of housemaid in arts

ಅವಳು ನಮ್ಮ ಮನೆಗೆ ಬಂದು ಮೂರು ವರ್ಷವಾಯಿತು. ನಮ್ಮ ಮನೆಯವಳಂತೂ ಆಗಲಿಲ್ಲ. ಆದರೆ ಅನವಶ್ಯಕವಾಗಿ ರಜೆ ತೆಗೆದುಕೊಳ್ಳದ ಅವಳಿಲ್ಲದೆ ನಮ್ಮ ದಿನ ಕಳೆಯುವುದಿಲ್ಲ. ಹಾಗೂ ರಜೆ ತೆಗೆದುಕೊಳ್ಳಬೇಕಾದರೆ ಹೆಚ್ಚೆಂದರೆ ನಾಲ್ಕು ದಿನ ಅಷ್ಟೇ. ನಂತರ ಹೇಳಿದ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರ್. “ಆಂಟಿ ನಾನು ಸೋಮವಾರ ಮಂಗಳವಾರ ಎರಡು ದಿನ ಬರಲ್ಲ. ಬುಧವಾರ ಬೆಳಗ್ಗೆನೇ ಬಂದುಬಿಡ್ತೀನಿ” ಎನ್ನುವವಳಿಗೆ ನನ್ನ ಎಂದಿನ ಮಾಮೂಲಿ ಪ್ರತಿಕ್ರಿಯೆ “ಹಾಂ, ಎರಡು ದಿನಾನಾ? ಗಂಗಾ ಎಲ್ಲಿ ಅಂತ ಪಾತ್ರೆಗಳು ಕೇಳಿದರೆ ಏನು ಹೇಳೋದು”? ಎಂದೊಡನೆ, ಪೂರ್ವಯೋಜನೆಯಿಲ್ಲದೆ ಒಂದು ನಿಮಿಷವೂ ಯೋಚಿಸದೆ “ಊರ ಹಬ್ಬಕ್ಕೆ ಮುದ್ದೆ ತಿರುಗೋಕೆ ಹೋಗ್ತೀನಿ ಅಂತ ನಿಮ್ಮ ಪಾತ್ರೆಗಳಿಗೆ ನಾನೇ ಹೇಳ್ತೀನಿ ಬಿಡಿ” ಎಂದು ರಜೆಯ ಕಾರಣವನ್ನು ಪರೋಕ್ಷವಾಗಿ ನನಗೂ ಹೇಳಿ ಹಾಸ್ಯಪ್ರಜ್ಞೆಯನ್ನು ಜೀವಂತವಾಗಿಟ್ಟು ರಜೆಯನ್ನು ಮಾತ್ರ ಪಡೆದೇ ತೀರುವ ಜೀವನ್ಮುಖಿ ಮಹಿಳೆ ಗಂಗಾ, ಯಾವಾಗಲೂ ತಾನು ರಜೆ ಪಡೆಯುವ ಎರಡು ದಿನ ಮೊದಲೇ ತಿಳಿಸುವ ಕರ್ತವ್ಯಪ್ರಜ್ಞೆ ಉಳ್ಳವಳು. ಒಮ್ಮೊಮ್ಮೆ ಎಲ್ಲಿಯೋ ಹೋಗಬೇಕೆಂದು ಕೆಲಸಕ್ಕೆ ರಜೆ ಪಡೆದು, ಆಕಸ್ಮಿಕವಾಗಿ ಪ್ರಯಾಣ ರದ್ದಾದರೆ ಕೆಲಸ ತಪ್ಪಿಸಿಕೊಳ್ಳದೆ ಹಾಜರಾಗುವುದೂ ಇದೆ.

   ಕರೋನಾ ಬಂದು ಎಲ್ಲರನ್ನೂ ಬೆಚ್ಚಿ ಬೀಳಿಸಿದ ಸಂದರ್ಭ ನಾನೇನೂ ವ್ಯತಿರಿಕ್ತವಾಗಿರಲಿಲ್ಲ. “ಗಂಗಾ ಎಲ್ಲರೂ ಹೇಳೋದು ಕೇಳಿದ್ರೆ ಭಯ ಆಗುತ್ತೆ. ನೀನು ಬೇರೆಯವರ ಮನೆಯಲ್ಲೂ ಕೆಲಸ ಮಾಡ್ತೀಯಲ್ಲ? ಆ ಮನೆಯವರಿಂದ ನಿನಗೆ ಕೊರೊನಾ ಬಂದು, ನಿನ್ನಿಂದ ನಮಗೆ ಬಂದುಬಿಟ್ಟರೆ ಅಂತ ಭಯ ಆಗುತ್ತೆ. ಅದಕ್ಕೆ ಒಂದೆರಡು ತಿಂಗಳು ಕೆಲಸಕ್ಕೆ ಬರಬೇಡ ಕಣೆ” ಎಂದೊಡನೆ “ಅವರು ಯಾರೂ ಬರಬೇಡ ಅಂತ ಹೇಳಲಿಲ್ಲ ಆಂಟಿ. ಆಯ್ತು ಬಿಡಿ. ನಿಮಗೆ ಅಷ್ಟು ಭಯ ಇದ್ದರೆ ನಾನು ಬರಲ್ಲ” ಎಂದು ಎರಡು ತಿಂಗಳ ಸಂಬಳದ ಜೊತೆಗೆ ರೇಷನ್ ಪಡೆದು ಹೋದವಳು, ಒಂದು ತಿಂಗಳ ನಂತರ ಮನೆಯ ಅಕ್ಕ-ಪಕ್ಕ ಓಡಾಡುತ್ತಾ ನನ್ನ ಗಮನ ಸೆಳೆಯಲು ಯತ್ನಿಸಿದ್ದಳು. ಕುಡುಕರ ಎದುರು ಮರಕ್ಕೆ ನೇತು ಹಾಕಿದ ಹೆಂಡದ ಬಾಟಲಿಯಂತೆ ಗಂಗಾ ನನಗೆ ಕಾಣಲಾರಂಭಿಸಿದಳು.

ದಿನದಿನ ಕೈಕಾಲು ನೋವು, ಸೊಂಟ ನೋವು ಎಲ್ಲವೂ ಆರಂಭವಾಯಿತು ನನಗೆ. ಅವಳು ಕೆಲಸಕ್ಕೆ ಬಂದರೆ ಮಾತ್ರ ನನಗೆ ಎಲ್ಲ ನೋವುಗಳಿಂದ  ಮುಕ್ತಿ ಎನ್ನುವಷ್ಟು ನನ್ನ ಮನಸ್ಸನ್ನು ಮೃದುವಾಗಿಸಿದ ಗಂಗಾ, ಎರಡು ತಿಂಗಳ ಸಂಬಳ ಪಡೆದು ಒಂದೇ ತಿಂಗಳಿಗೆ ಹಾಜರಾದಳು. ಮಾರನೇ ತಿಂಗಳು ಅವಳು ಸಂಬಳ ಕೇಳಲಿಲ್ಲ. ನಾನೂ ಕೊಡಲಿಲ್ಲ. ಅವಳ ಸ್ಥಾನದಲ್ಲಿ ನಾನು ಬೇರೆಯವರನ್ನು ಕೆಲಸಕ್ಕೆ ಸೇರಿಸಿಕೊಳ್ಳಬಾರದು ಎಂಬ ವ್ಯವಹಾರ ಪ್ರಜ್ಞೆ ಅವಳಲ್ಲಿ ಜಾಗೃತವಾಗಿರಬೇಕು.

ಹತ್ತು ವರ್ಷದ ಹಿಂದೆ ಮಂಡ್ಯದ ಒಂದು ಚಿಕ್ಕ ಹಳ್ಳಿಯಿಂದ ಬೆಂಗಳೂರಿಗೆ ಬಂದು ಎಂಟು ಮನೆ ಕೆಲಸ ಮಾಡುವ ಗಂಗಾಳಿಗೆ ಒಂಭತ್ತನೇ ತರಗತಿ ಓದುವ ಮಗ ದೊಡ್ಡವನು. ಮಗಳು ಏಳನೇ ತರಗತಿ. ಅವಳಿಗಿಂತ ಹದಿನೆಂಟು ವರ್ಷ ದೊಡ್ಡವನಾದ ಅವಳ ಗಂಡ ಅವಳ ಪಕ್ಕದೂರಿನವನು. ಇವಳಿಗೇನು ಹೊಸದೋ ಅವೆಲ್ಲ ಅವನಿಗೆ ಪುರಾತನ ಎನ್ನುವಷ್ಟು ಹಳೆಯ ವಿಚಾರ. ಬೆಂಗಳೂರಿಗೆ ಬಂದು ಕಬ್ಬಿಣದ ಅಂಗಡಿಯಲ್ಲಿ ಕೆಲಸಕ್ಕೆ ಸೇರಿ ಕಬ್ಬಿಣವನ್ನು ಎತ್ತಿ ಗಾಡಿಗಳಿಗೆ ತುಂಬಿ ತುಂಬಿ ಕಬ್ಬಿಣದಷ್ಟೇ ಕಠಿಣವಾಗಿದ್ದ. ಜೊತೆಗೆ ಕುಡಿತದ ಚಟ ಬೇರೆ. ಭಾರಹೊತ್ತು ದಿನವೆಲ್ಲಾ ಕೆಲಸ ಮಾಡಿ ದಣಿದವನು ಮೈ ಮರೆಯುವಷ್ಟು ಕುಡಿಯಲೇಬೇಕು, ಹೊಟ್ಟೆ ತುಂಬಾ ತಿಂದು ಮನಸಾರೆ ಅರಚಿ, ತೃಪ್ತಿಯಾಗುವಷ್ಟು ಇವಳಿಗೆ ಜೊತೆಗೆ ಅಡ್ಡಬಂದ ಮಕ್ಕಳಿಗೆ ಹೊಡೆಯಲೇಬೇಕು. ಆಗಲೇ ತನ್ನ ದಿನಚರಿ ಪೂರೈಸುತ್ತದೆ ಎನ್ನುವಷ್ಟು ದಿನಚರಿಗೂ ದಾಸನಾಗಿದ್ದವನು.

ಗಂಗಾ ಕಪ್ಪು ಮೈಬಣ್ಣದ ಗಟ್ಟಿಮುಟ್ಟು ಹೆಣ್ಣೇ ಸರಿ. ಇವಳು ಅವನಿಗಿಂತಲೂ ಹೆಚ್ಚಿಗೆ ದುಡಿದು ಮಕ್ಕಳನ್ನು ಸಾಕುವ ಭಾರವನ್ನು ಹೊತ್ತವಳು ಕೂಡ. ನಾಲ್ಕು ಸಾವಿರ ರೂಪಾಯಿ ಬಾಡಿಗೆ ಕಟ್ಟಿ ಮೂರು ಸಾವಿರ ಸಂಸಾರಕ್ಕೆ ಕೊಟ್ಟು ಮಿಕ್ಕಿದ್ದನ್ನು ಪತ್ತೆ ಇಲ್ಲದಂತೆ ಕರಗಿಸುತ್ತಿದ್ದವನ ಹೆಜ್ಜೆ ಗುರುತನ್ನು ಮಾತ್ರ ಕಂಡು ಹಿಡಿಯಲಾರದವಳಾಗಿದ್ದಳು. ಇಲ್ಲಿಗೆ ಸುಮಾರು ಆರು ತಿಂಗಳ ಮುಂಚೆ ಸಶಬ್ದದಿಂದ ಪಾತ್ರೆ ತೊಳೆಯುತ್ತಿದ್ದವಳನ್ನು “ಏನೇ ಗಂಗಾ, ಗಂಡನ ಜೊತೆ ಜಗಳ ಆಡಿರೋ ಹಾಗಿದೆ”? ಕೇಳಿದ್ದೆ. ಕೂಡಲೇ ಅವಳು “ಎಷ್ಟು ವರ್ಷ ಅಂತ ಬಾಯಿ ಮುಚ್ಚಿಕೊಂಡಿರೋದು ಆಂಟಿ? ಇನ್ನು ಮುಂದಾದರೂ ಬಡಿದು ಬಡಿದು ಅಡಗಿಸಿದರೆ ಸರಿ. ನಾನು ಎಷ್ಟು ವರ್ಷ ಅಂತ ಸಹಿಸಿಕೊಂಡಿರಲಿ”? ಎಂದು ಪಾತ್ರೆಗಳನ್ನು ತನ್ನ ಗಂಡ ಎಂಬಂತೆಯೂ, ಅವನನ್ನು ಬಡಿಯುವ ತರಬೇತಿ ನಮ್ಮ ಮನೆಯಿಂದಲೇ ನಡೆದಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದಳು. “ನಿನ್ನ ಪ್ರತಾಪ ನಿನ್ನ ಗಂಡನ ಮೇಲೆ ತೋರಿಸು ತಾಯಿ. ನಮ್ಮ ಪಾತ್ರೆ ಮೇಲೆ ಅಲ್ಲ” ಎಂದು ಸೂಕ್ಷ್ಮವಾಗಿ ಹೇಳಿ ಕಳಿಸಿದ್ದೆ. ಆಗಿನಿಂದ ಪಾತ್ರೆಗಳು ನರಳುವ ಶಬ್ದ ಕಡಿಮೆಯಾಗಿತ್ತು.

ಅದರ ಒಂದು ವಾರದ ನಂತರ ಫೋನ್ ಮಾಡಿ “ಆಂಟಿ ನಾನು ಒಂದು ತಿಂಗಳು ಕೆಲಸಕ್ಕೆ ಬರಲ್ಲ. ನಿಮಗೆ ತೊಂದರೆ ಆಗಬಾರದು ಅಂತ ನಿಮ್ಮ ಎದುರು ಮನೆ ಕೆಲಸಕ್ಕೆ ಬರ್ತಾಳಲ್ಲ ಸುಶೀಲ? ಅವಳಿಗೆ ಹೇಳಿದ್ದೇನೆ ಅವಳ ಕೈಯಲ್ಲಿ ಕೆಲಸ ಮಾಡಿಸಿಕೊಳ್ಳಿ” ಎಂದಳು. ಯಾರಾದರೆ ನನಗೇನು? ನನಗೆ ತೊಂದರೆಯಾಗದಂತೆ ಕೆಲಸ ಆಗಬೇಕು ಅಷ್ಟೇ. “ಸರಿ” ಎಂದೆ. ಒಂದು ತಿಂಗಳು ಎಂದು ರಜೆ ಪಡೆದ ಗಂಗಾ ಎರಡು ತಿಂಗಳು ಬಿಟ್ಟು ಕೆಲಸಕ್ಕೆ ಸೇರಿಕೊಂಡಳು. ಸುಶೀಲಾ ತಾನಾಗಿಯೇ ನಿಂತು ಹೋದಳು. ಯಾವುದನ್ನೂ ಕೇಳಿ ಅಭ್ಯಾಸವಿರದ ನಾನು ಎಂದಿನಂತೆ ಸುಮ್ಮನಿದ್ದೆ. ವಾಪಸ್ಸು ಬಂದ ದಿನವೇ ಕೆಲಸ ಮುಗಿಸಿ ಹೊರಡುವಾಗ “ಆಂಟಿ ನಮ್ಮೆಜಮಾನ್ರು ಸತ್ತೋದ್ರು. ಕಬ್ಬಿಣ ಕಾಲು ಮೇಲೆ ಬಿದ್ದು ಗಾಯ ಆಗಿತ್ತು. ಶುಗರ್ ಬೇರೆ ಇತ್ತಲ್ಲ? ಗಾಯ ಮಾಗಲೇ ಇಲ್ಲ. ಕಾಲು ತೆಗೀಬೇಕು ಅಂದ್ರು. ನಾವು ಯೋಚನೆ ಮಾಡಿ ಸರಿ ಅಂತ ಹೇಳೊಷ್ಟ್ರಲ್ಲಿ ಮೈಯಲ್ಲಿರೋ ರಕ್ತ ಕೀವಾಗಿ ಸತ್ತೋದ್ರು” ಎಂದವಳನ್ನು ಹೇಗೆ ಸಂತೈಸಬೇಕು ತಿಳಿಯಲಿಲ್ಲ ನನಗೆ. ಮೌನಿಯಾಗಿ ಬಿಟ್ಟೆ. ಇವಳ ಜೀವನ ಹೇಗೆ ಎನ್ನುವುದಕ್ಕಿಂತ ಇವಳು ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದು? ಎಂಬುದರ ಬಗ್ಗೆಯೇ ನನ್ನ ಯೋಚನೆ ಹರಿಯುತ್ತಿತ್ತು.

ಮೌನ ಮುರಿದು ನಾನೇ “ಮಕ್ಕಳು” ಎಂದೆ. “ಇಲ್ಲಿ ನನಗೆ ನೋಡಿಕೊಳ್ಳೊಕ್ಕಾಗಲ್ಲ ಅಂತ ಮಗನ್ನ ನನ್ನ ತಮ್ಮನ ಹತ್ರ ಬಿಟ್ಟಿದ್ದೀನಿ. ಗಂಡು ಮಕ್ಕಳಿಗೆ ಒಬ್ಬರಾದರೂ ಗಂಡಸರ ಭಯ ಇರಬೇಕು” ಎಂದವಳ ಮಾತಿಗೆ ಹೌದೆಂಬಂತೆ ಗೋಣಾಡಿಸಿದೆ. ನಂತರ ಅವಳೇ “ಇನ್ನೂ ಕೊರೋನಾ ಟೈಂ ಮುಗಿದಿಲ್ಲ ಅಲ್ವಾ? ಅದಕ್ಕೇ ಮಗಳನ್ನೂ ಕರ್ಕೊಂಡು ಬಂದಿಲ್ಲ. ಹೇಗೂ ಸ್ಕೂಲು ಬೇರೆ ಇಲ್ಲ. ಹೇಗಿದ್ರೂ ಆನ್ಲೈನ್ ಕ್ಲಾಸು. ಅಲ್ಲಿಂದ್ಲೇ ಫೋನ್ನಲ್ಲಿ ಅಟೆಂಡ್ ಮಾಡ್ತಾಳೆ. ಪಾತ್ರೆಗಳಂದ್ರೆ ಮನೆ ಬಿಟ್ಟು ಎಲ್ಲೂ ಹೊರಗೆ ಹೋಗಲ್ಲ. ಆದ್ರೆ ಮಕ್ಕಳು ಇರ್ಬೇಕಲ್ಲಾ? ಅಲ್ಲಿ ಇಲ್ಲಿ ಆಡೋಕ್ಕೋಗಿ ಕೊರೊನಾ ಬಂದ್ರೆ, ಸೀಲ್ ಡೌನ್, ಕ್ವಾರೆಂಟೈನ್ ಅಂತ ಅದು ಬೇರೆ ತಲೆನೋವು” ಅಂದಳು. ನಾನು ಆಶ್ಚರ್ಯಭರಿತ ಧ್ವನಿಯಲ್ಲಿ “ಕೊರೊನಾ ನಿನಗೆ ಎಷ್ಟೊಂದು ಇಂಗ್ಲಿಷ್ ಪದಗಳನ್ನು ಕಲಿಸಿದೆಯಲ್ಲ ಗಂಗಾ”? ಎಂದೆ. ಅದಕ್ಕವಳು “ನಾನಿಲ್ದೇ ಇದ್ರೂ ನಿಮ್ಮನೆ ಪಾತ್ರೆಗಳು ಸುಶೀಲಾಗೆ ಹೊಂದಿಕೊಂಡಿಲ್ವಾ ಹಾಗೆ ಇದು” ಎಂದಾಗ, ನನಗೆ ಅವಳ ಮಾತಿನ ಅರ್ಥವಾಗದೆ “ನಿನ್ನ ಇಂಗ್ಲೀಷಿಗೂ ಸುಶೀಲಾಗೂ ಏನು ಸಂಬಂಧ”? ಎಂದೆ. “ಅಲ್ಲಾ ಆಂಟಿ, ನಿಮ್ಮ ಪಾತ್ರೆಗಳು ಯಾರು ತೊಳೆದರೂ ಬೇರೆ ಮಾತಾಡದೆ ತೊಳೆಸಿಕೊಳ್ಳಲ್ವ ಹಂಗೆ, ಟಿವಿನಲ್ಲಿ ಯಾವ್ಯಾವ ಇಂಗ್ಲಿಷ್ ಪದ ಬಂದರೂ ನಾವು ಕಲೀಲೇಬೇಕಲ್ಲ? ಬೇರೆ ವಿಧಿನೇ ಇಲ್ಲ. ಅದಕ್ಕೆಲ್ಲ ಕನ್ನಡದಲ್ಲಿ ಏನ್ ಹೇಳ್ತಾರೆ ಅಂತ ನಮಗೆ ಗೊತ್ತೂ ಆಗಲ್ಲ ಬಿಡಿ” ಎಂದು ನಕ್ಕಳು.

‘ಗಂಡ ಸತ್ತದ್ದನ್ನು ಮರೆತು ಸ್ವಲ್ಪ ನಿರಾಳವಾದಳಲ್ಲ ಸದ್ಯ’ ಎಂದುಕೊಂಡು ಮಾತು ಬೆಳೆಸದೇ, “ಬರ್ತೀನಿ ಆಂಟಿ” ಎಂದವಳನ್ನು “ಹೂಂ”ಗುಟ್ಟಿ ಬೀಳ್ಕೊಟ್ಟೆ. ಎರಡು ವಾರ ಬಿಟ್ಟು ಮನಸ್ಸು ತಡೆಯದೆ ಅವಳನ್ನು “ಮನೇಲಿ ಒಬ್ಬಳೇ ಇರ್ತೀಯ”? ಎಂದು ಕೇಳಿದೆ. ಗಂಗಾ “ಇಲ್ಲ ಆಂಟಿ, ನಮ್ಮತ್ತೆ ಬಂದಿದ್ದಾರೆ. ನಮ್ಮೆಜಮಾನರ ಅಮ್ಮ. ಅವರಿಗೂ ಚಿಕ್ಕ ಸೊಸೆಗೂ ಆಗಿ ಬರಲ್ಲ. ಯಾವಾಗಲೂ ಜಗಳ. ನನ್ನ ಜೊತೆನೂ ಜಗಳ ಆಡ್ತಿದ್ರು. ಈಗ ಮಗನೇ ಇಲ್ವಲ್ಲ. ಕಾಂಪಿಟೇಶನ್ ಮಾಡೋಕಾಗಲ್ಲ ನೋಡಿ. ನಾನು ಒಂಟಿಯಾಗಿದ್ದೀನಿ ಅಂತ ನೆಪ ಹೇಳಿಕೊಂಡು ಬಂದು, ಅವರ ಸೇಫ್ಟಿ ನೋಡಿಕೊಳ್ಳುತ್ತಿದ್ದಾರೆ” ಎಂದವಳು ಮುಂದುವರೆಸಿ, “ನೀವೇ ಹೇಳಿ ಆಂಟಿ, ಇಷ್ಟು ವರ್ಷ ನಮ್ಮತ್ತೆ, ನಮ್ಮ ತಾಯಿ ಕಡೆ ಯಾರನ್ನೂ ಸೇರಿಸುತ್ತಿರಲಿಲ್ಲ. ಈಗ ಅವರ ಮಗನೂ ಇಲ್ಲ ತಾನೆ? ನನ್ನ ಗಂಡ ನನಗಂತ ಏನೂ ಮಾಡಿಲ್ಲ ಬಿಡಿ. ಅಂತದ್ರಲ್ಲಿ ಅವನಿಲ್ಲದಿದ್ದರೂ ಅವನ ಅಮ್ಮನನ್ನು ನಾನ್ಯಾಕೆ ನೋಡಿಕೊಳ್ಳಲಿ? ನೀವೇ ಹೇಳಿ” ಎಂದವಳ ಮಾತುಗಳನ್ನು ‘ಇದ್ಯಾವ ಲೆಕ್ಕಾಚಾರಕ್ಕೆ ಬರುತ್ತದೆ’? ಎಂದು ಮೌನವಾಗಿ ತಾಳೆ ಹಾಕುತ್ತಿದ್ದರೆ,  ಕೆಲಸ ಮುಗಿಸಿ ಬಂದವಳು ಬಾಗಿಲಿನ ಚಿಲಕ ತೆಗೆಯುತ್ತಾ “ನಮ್ಮತ್ತೆ ಅವರ ಪಾತ್ರೇನೆಲ್ಲಾ ನನಗೂ ನನ್ನ ವಾರಗಿತ್ತೀಗೂ ಮೊದಲೇ ಹಂಚಿಬಿಟ್ಟರು. ನಾನಂತೂ ವಾಪಸ್ ಕೊಡಲ್ಲ ಬಿಡಿ. ಅವರ ಮಗ ನನ್ನ ನೋಡಿಕೊಂಡಿದ್ದು ಅಷ್ಟರಲ್ಲೇ ಇದೆ” ಎಂದು ಕೆಲಸ ಮಾಡಿದ ಅಷ್ಟೂ ಹೊತ್ತಿನ ಮನಸ್ಸಿನ ಹೊಯ್ದಾಟವನ್ನು ಹೇಳಿಕೊಳ್ಳುತ್ತಲೇ ಬಾಗಿಲೆಳೆದುಕೊಂಡು ಹೋಗಿಬಿಟ್ಟಳು. ‘ಅಯ್ಯೋ ರಾಮ, ಪಾತ್ರೆಗಳೇ ಇವಳ ಇಹಪರಗಳಲ್ಲಿ ಸೇರಿಕೊಂಡುಬಿಟ್ಟಿದೆಯಲ್ಲಾ’ ಎಂದುಕೊಂಡೇ ದಿನ ಕಳೆದೆ.

ಮಾರನೆ ದಿನ ಬಂದ ಗಂಗಾ ಪಾತ್ರೆಗಳನ್ನು ಸ್ವಲ್ಪ ಜೋರಾಗಿಯೇ ಎತ್ತಿಡುತ್ತಿದ್ದವಳಿಗೆ ಅತ್ತೆಯೊಂದಿಗೆ ಜಗಳವಾಗಿದೆ ಎಂದು ತಿಳಿಯಲು ನನಗೆ  ಹೆಚ್ಚು ಹೊತ್ತು ಬೇಕಾಗಲಿಲ್ಲ. ಮನೆಯಲ್ಲಿದ್ದ ಯಜಮಾನರು ಪೇಪರ್ ಓದಲಾರದವರಂತೆ ಮುಖ ಗಂಟ್ಟಿಕ್ಕಿದರು. ತಿಂಡಿ ತಿಂದು, ಕಾಫಿ ಕುಡಿಯುತ್ತಿದ್ದ ನಾನು ಲೋಟ ಕೈಲಿ ಹಿಡಿದು ಹಿತ್ತಲಿಗೆ ಬಂದು ಗಂಗಾ ಪಾತ್ರೆ ತೊಳೆಯುವ ಕಡೆ ನಿಂತು “ಹೋಗ್ಲಿ ಬಿಡು ಗಂಗಾ ಏನೋ ಆಗಿದ್ದು ಆಗಿಹೋಯಿತು. ಪಾತ್ರೆಗಳನ್ನು ಕ್ಷಮಿಸಿಬಿಡು” ಎಂದೆ.

ಅವಳು ಹಲ್ಲು ಕಿಸಿಯುತ್ತ “ನಿಮ್ಮ ಪಾತ್ರೆಗಳು ಇಷ್ಟು ಬಜಾರಿಗಳು ಅಂತ ನನಗೆ ಗೊತ್ತೇ ಇರಲಿಲ್ಲ ಆಂಟಿ. ನಾನು ಒಂದು ಅಂದ್ರೆ ಅದು ಹತ್ತರಷ್ಟು ಅರಚುತ್ತೆ” ಎಂದಳು. ಉತ್ತರ ಬಂತಲ್ಲ! ಸದ್ದಿಲ್ಲದೆ ಒಳಗೆ ಬಂದ ನಾನು ಟೀಪಾಯಿ ಮೇಲೆ ಬಿದ್ದಿದ್ದ ಅಡಿಷನಲ್ ಪೇಪರ್ ಹಿಡಿದೆ. ಓದಲು ಮಾತ್ರ ಮನಸ್ಸು ಬರದಾಯಿತು. ‘ಹಾಸ್ಯ ಮಾಡುವ ನೆಪದಲ್ಲಿ ಗಂಗಾ, ಪ್ರಪಂಚದಲ್ಲಿರುವ ಎಲ್ಲ ಅತ್ತೆಯಂದಿರನ್ನೂ ಪಾತ್ರೆಗಳಿಗೆ ಹೋಲಿಸಿ ಹಂಗಿಸುತ್ತಿದ್ದಾಳೆ’ ಎಂಬ ಭಾವನೆ ನನ್ನ ಮನಸ್ಸಿನಲ್ಲಿ ಚಿಗುರೊಡೆಯಲಾರಂಭಿಸಿತು.

‘ಅವಳು ನಾಳೆ ಬರಲಿ, ಶಬ್ದ ಮಾಡದೆ ಪಾತ್ರೆ ತೊಳೆದು ಹೋಗುವಂತೆ ಎಚ್ಚರಿಕೆ ನೀಡಿ ಅವಳೊಂದಿಗೆ ಮಾತು ಕಡಿಮೆ ಮಾಡಿಬಿಡುತ್ತೇನೆ’ ಎಂದುಕೊಂಡು ಅವಳು ಹೋದ ಮೇಲೆ ಯಜಮಾನರಿಗೆ “ಈ ಗಂಗಾ ನೋಡ್ರಿ, ಪಾತ್ರೆಗಳನ್ನು ಅವಳ ಅತ್ತೆಗೆ ಹೋಲಿಸಿ, ಅವಳ ಕೋಪ ತೋರಿಸೋಕ್ಕೆ ನಮ್ಮನೆ ಪಾತ್ರೆಗಳ್ನ ಬಡೀತಾಳೆ. ಇಲ್ಲಿ ಪಾತ್ರೆ ಕುಟ್ಟುದ್ರೆ ಅಲ್ಲಿ ಅವಳತ್ತೆಗೇನು ನೋವಾಗುತ್ತಾ? ನಮ್ಮ ಪಾತ್ರೆಗಳೇ ಸೊಟ್ಟ ಆಗೋದು” ಎನ್ನುತ್ತಾ ಮಾತು ಮುಂದುವರೆಸಿ “ಅವಳನ್ನ ಏನು ಕೇಳಿದ್ರೂ ಅಥವಾ ಅವಳೇ ಏನು ಹೇಳಿದ್ರೂ ಪಾತ್ರೆಗಳ ಉದಾಹರಣೆ ಬೇರೆ ಕೊಡ್ತಾಳೆ” ಎಂದೆ ಸಿಟ್ಟಿನಿಂದ.

ಇದೇ ಸಂಧರ್ಭವನ್ನು ಕಾದಿದ್ದವರಂತೆ ಯಜಮಾನರು, “ಅದನ್ನ ನನಗೆ ಯಾಕೇಳ್ತೀಯಾ? ಅವಳಿಗೇ ಹೇಳು. ನಾನೊಬ್ಬ ಬಿಟ್ಟೀಗೆ ಬಿದ್ದಿದ್ದೀನಿ ನೋಡು ನಿನಗೆ. ಕೊನೆ ಪಕ್ಷ ನಾನು ಬಾಗಿಲು ಹಾಕುವಾಗ ಸ್ವಲ್ಪ ಸೌಂಡ್ ಮಾಡಿದ್ರೆ ಸಾಕು, ಅಯ್ಯೋ ಅಂತ ತಲೆ ಚಚ್ಚಿಕೊಳ್ತೀಯಾ. ಆದ್ರೆ ಅವಳು ಅಷ್ಟು ಶಬ್ದ ಮಾಡ್ತಾ ಇದ್ರೂ, ಅವಳಿಗೆ ಹೇಳೋಕೆ ಮಾತ್ರ ಇವತ್ತು ನಾಳೆ ಅಂತ ಮೀನಾ-ಮೇಷ ಎಣಿಸ್ತಿದ್ದೀಯ. ನೀನು ಅವಳಿಗೆ ಸಲಿಗೆ ಕೊಟ್ಟಿದ್ದರಿಂದ ಇವತ್ತು ಹೀಗಾಗಿರೋದು. ಇಷ್ಟರ ಮೇಲೆ ಅವಳತ್ತೇನ ಬಡೀಲಿಲ್ಲ ಅನ್ನೋ ಬೇಜಾರು ಬೇರೆ ನಿಂಗೆ” ಎಂದರು. ಇದೆಂಥಾ ಆರೋಪ ಎಂದು ಬೆರಗಾದೆ. ಸುಧಾರಿಸಿಕೊಂಡು  ಖಾರವಾದ ದನಿಯಲ್ಲಿ “ಅಲ್ಲರೀ, ಅವಳು ಹೀಗೆ ಮಾಡ್ತಾಳೆ ಅಂತ ನಿಮ್ಮತ್ರ ಹೇಳಿಕೊಂಡ್ರೆ, ನೀವು ಒಳ್ಳೆ ಸ್ಟೀಲ್ ಚೊಂಬಲ್ಲಿ ಜೆಲ್ಲಿ ಕಲ್ಲು ಹಾಕಿ ಅಲ್ಲಾಡ್ಸೋ ಹಂಗೆ, ಗಲಗಲ ಗಲಗಲ ಅಂತ ಮಾತಾಡ್ತಾನೆ ಇದ್ದೀರಾ. ನಿಮ್ಮತ್ರ ಹೇಳೋಕ್ಕೆ ಬಂದ್ನಲ್ಲ ನಾನು. ಅಯ್ಯೋ ಹೋಗ್ರಿ” ಎಂದು ಎದ್ದು ಟಬ್ಬಿನಲ್ಲಿ ತುಂಬಿದ್ದ ಪಾತ್ರೆಗಳನ್ನು ಅದರದರ ಸ್ಥಾನದಲ್ಲಿ ಕುಕ್ಕಲಾರಂಭಿಸಿದೆ. ಒಟ್ಟಿನಲ್ಲಿ ಗಂಗಾ ತನ್ನ ಜೀವನವನ್ನು ಪಾತ್ರೆಗಳೊಂದಿಗೆ ಬೆಸೆದುಕೊಂಡಿದ್ದಲ್ಲದೆ, ನನ್ನರಿವಿಗೆ ಬಾರದಂತೆ ನಾನೂ ಸಹಾ ನನ್ನ ಮಾತುಗಳಲ್ಲಿ ಪಾತ್ರೆಗಳ ಮಹತ್ವವನ್ನು ಬಳಸಿಕೊಳ್ಳುವಂತೆ ಮಾಡಿದ್ದಾಳೆ. ಅವಳು ಕೆಲಸ ಮಾಡುವ ಇನ್ನೆಷ್ಟು ಮನೆಗಳಲ್ಲಿ ಪಾತ್ರೆಗಳ ಪಾಂಡಿತ್ಯ ಮೆರೆಯುತ್ತಿದೆಯೋ?? 

*****************************************

Leave a Reply

Back To Top