ಅಂಕಣ ಬರಹ
ಒಂದು ಹಾವಿನ ಕಥೆ ಮತ್ತು ನಾವು
ಕೆಲವು ಒತ್ತಡಗಳು ಹುಟ್ಟಿಕೊಳ್ಳುತ್ತವೆ. ಎಂಥದೋ ಅನಿವಾರ್ಯತೆ ಕಾಡುತ್ತದೆ. ಮಾಡಬೇಕೆಂದುಕೊಂಡದ್ದನ್ನು ಮಾಡಲಾಗುತ್ತಿಲ್ಲ ಎನ್ನುವ ಚಡಪಡಿಕೆ, ನೋವು, ಹತಾಶೆ… ಬೇಕಾದವರನ್ನು ಮನಸಿಗೆ ಹತ್ತಿರವಾದವರನ್ನು ನಾವಾಗೇ ಹಚ್ಚಿಕೊಂಡವರನ್ನು ಎದೆಗೆ ತಬ್ಬುವ ಮನಸಿದ್ದಾಗಲೂ ದೂರ ನಿಲ್ಲಬೇಕಾದ ಸಂಯಮದ ಪ೫ರೀಕ್ಷೆಗೆ ತಯಾರಾಗಬೇಕಾಗಿ ಬರುವ ಪರಿಸ್ಥಿತಿಯನ್ನು ಧ್ವನಿ ತೆಗೆಯದೇ ಬಯ್ದುಕೊಳ್ಳುತ್ತಾ ಒಳಗೊಳಗೇ ಹಟಕ್ಕೆ ಬೀಳುತ್ತೇವೆ. ಅದು ನಮ್ಮ ಮೇಲಿನ ನಮ್ಮ ಹಟ. ಚೌಕಟ್ಟನ್ನು ದಾಟಿದರೆ ನಮಗೆ ನಾವು ದಕ್ಕಿಬಿಡುತ್ತೇವೆಂದು ನಮಗೆ ಗೊತ್ತು. ಆದರೆ ನಮಗೆ ಅದಕ್ಕೆ ಬೇಕಾಗುವ ಒಂದು ಸಣ್ಣ ಸಾಹಸ ಮಾಡುವುದು ಬೇಕಿಲ್ಲ. ಯಾಕಿದ್ದಾತು ಸುಖಾಸುಮ್ಮನೆ ಉಸಾಬರಿ! ಇಂಥ ಮನೋಭಾವವೇ ನಮ್ಮನ್ನು ಆಳಿಬಿಡುತ್ತದೆ. ಅದರಲ್ಲೂ ನಮ್ಮನ್ನು ಹೆದರಿಸಿ ನಿಲ್ಲುವವರು ನಮ್ಮವರೇ ಆದಾಗ ಅವರನ್ನು ಎದುರಿಸುವುದು ಮತ್ತೊಂದೇ ಬಗೆಯ ಸಂಕಟ, ಸಂಕಷ್ಟ. ನನಗೊಂದು ಕತೆ ನೆನಪಾಗುತ್ತದೆ.
ಒಮ್ಮೆ ಒಬ್ಬ ಸಾಧು ದಾರಿಯಲ್ಲಿ ಹೋಗುತ್ತಿರುತ್ತಾನೆ. ಅವನನ್ನು ಕಂಡ ಸಮೀಪದ ಊರಿನ ವ್ಯಕ್ತಿಯೊಬ್ಬ ಒಂದು ಕತೆ ಹೇಳಲು ಶುರು ಮಾಡುತ್ತಾನೆ. ಇಲ್ಲೊಂದು ಹಾವಿದೆ, ಆ ಹಾವು ಈ ದಾರಿಯಲ್ಲಿ ಓಡಾಡೋ ಜನರನ್ನ ಕಚ್ಚಿ ಸಾಯಿಸ್ತಿದೆ. ಸಾಧುಗಳೇ ನೀವೇ ಏನಾದ್ರು ಮಾಡಿ ಆ ಹಾವಿಗೆ ಬುದ್ಧಿ ಕಲಿಸ್ಬೇಕು ಅಂತ ಕೇಳ್ಕೊತಾನೆ ಕೊನೆಗೆ. ನಂತ್ರ ಅಲ್ಲಿಂದ ಹೊರಟು ಹೋಗ್ತಾನೆ. ಆಮೇಲೆ ಆ ಸಾಧು ಹಾವಿನ ಬಳಿ ಹೋಗ್ತಾನೆ. ಹಾವು ಸಾಧುವನ್ನೂ ನೋಡಿ ಬುಸುಗುಡುತ್ತದೆ. ಆಗ ಸಾಧು ಅಲ್ಲಾ ನಿನಗೇನಾದ್ರು ಬುದ್ಧಿಗಿದ್ದಿ ಇದೆಯಾ ಇಲ್ವಾ… ಯಾಕ್ ನೀನು ಜನರಿಗೆ ತೊಂದ್ರೆ ಕೊಡ್ತಿದೀಯಾ? ಅದೆಲ್ಲ ತಪ್ಪು ತಾನೇ… ಪಾಪ ಕಣೋ ಬಿಟ್ಬಿಡೋ ಅದನ್ನೆಲ್ಲಾ ಅಂತ ಉಪದೇಶ ಮಾಡ್ತಾನೆ. ಇದರಿಂದ ಮನಃಪರಿವರ್ತನೆಗೆ ಒಳಗಾದ ಹಾವು ತಾನೂ ಸಾಧುವಾಗಿಬಿಡ್ತದೆ. ಸಾಧು ತನ್ನ ದಾರಿ ಹಿಡಿದು ಹೊರಟು ಹೋಗ್ತಾನೆ. ಅಂದಿನಿಂದ ಶುರು ಜನರ ಉಪಟಳ! ತನ್ನ ಪಾಡಿಗೆ ತಾನಿರೋ ಪಾಪದ ಸಾಧು ಹಾವನ್ನ ಮನ ಬಂದ ಹಾಗೆ ಹೊಡೀತಾರೆ, ಬಡೀತಾರೆ, ಕಲ್ಲು ಎಸೀತಾರೆ, ಕೋಲಿನಿಂದ ತಿವೀತಾರೆ… ಒಟ್ನಲ್ಲಿ ಹಣ್ಗಾಯಿ ನೀರ್ಗಾಯಿ ಮಾಡ್ತಾರೆ. ಆದ್ರೆ ಸಾಧುವಾಗಿಬಿಟ್ಟಿದ್ದ ಹಾವು ಮಾತ್ರ ಸುಮ್ಮನೇ ಒದೆ ತಿನ್ನುತ್ತಾ ಸಾಯುವ ಹಾಗಾಗಿಬಿಡ್ತದೆ. ಅದೇ ಮಾರ್ಗವಾಗಿ ಮತ್ತೆ ಅದೇ ಸಾಧು ಬರ್ತಾನೆ. ಹಾವಿನ ಸ್ಥಿತಿ ಕಂಡು ಅವನಿಗೆ ಮರುಕ ಹುಟ್ತದೆ. ಅದನ್ನ ಕರುಣೆಯಿಂದ ಎತ್ತಿಕೊಂಡು ಔಷಧೋಪಚಾರ ಮಾಡ್ತಾನೆ. ಆಮೇಲೆ ಕೇಳ್ತಾನೆ ಯಾಕೋ ಈ ಸ್ಥಿತಿ ನಿಂಗೆ ಅಂತ. ಆಗ ಹಾವು ಹೇಳ್ತದೆ ನೀವೇ ತಾನೆ ಹೇಳಿದ್ದು ನಾನು ಯಾರನ್ನೂ ಕಚ್ಬಾರ್ದು ಅಂತ, ಅದಕ್ಕೆ ನಾನು ಕಚ್ಚೋದನ್ನೇ ಬಿಟ್ಬಿಟ್ಟೆ. ಆದರ ಪ್ರತಿಫಲವೇ ಇದು. ನಾನು ಸುಮ್ನಿರೋದನ್ನ ಕಂಡು ಜನ ಹತ್ತಿರ ಬಂದ್ರು. ನನ್ನನ್ನ ವಿನಾಕಾರಣ ಹೊಡೆದುವಹಿಂಸೆ ಮಾಡಿದ್ರು. ಆದ್ರೂ ನಾನವರಿಗೆ ಏನೂ ಮಾಡ್ಲಿಲ್ಲ ಅನ್ನುತ್ತೆ. ಇದನ್ನು ಕೇಳಿದ ಸಾಧುವಿಗೆ ಅಯ್ಯೋ ಪಾಪ ಅನ್ಸತ್ತೆ. ಮತ್ತೆ “ಅಲ್ಲೋ ಹಾವೇ ನಾನು ನಿನಗೆ ಕಚ್ಬೇಡ, ಜನ್ರನ್ನ ಕೊಲ್ಬೇಡ ಅಂತ ಹೇಳಿದ್ನೇ ಹೊರತು, ಬುಸುಗುಟ್ಟಿ ಹೆದರಿಸ್ಬೇಡ ಅಂತ ಹೇಳಿರಲಿಲ್ಲ ತಾನೇ. ನೀನು ನಿನ್ನನ್ನ ರಕ್ಷಿಸಿಕೊಳ್ಳಲಿಕ್ಕೆ ಬುಸುಗುಟ್ಟಿ ಹೆದರಿಸಿದ್ದರೆ ಸಾಕಿತ್ತು ಅಲ್ವ… ಯಾರೂ ಹತ್ರ ಬರ್ತಿರಲಿಲ್ಲ ತಾನೇ…” ಎನ್ನುತ್ತಾರೆ. ಆಗ ಹಾವಿಗೆ ತನ್ನ ತಪ್ಪಿನ ಅರಿವಾಗ್ತದೆ. ತಾನು ಬುಸುಗುಟ್ಟಿ ಜನರಿಂದ ಪಾರಾಗಬೇಕಿತ್ತು ಮತ್ತು ಯಾರನ್ನೂ ಕಚ್ಚದೆ ಒಳ್ಳೆಯವನೂ ಆಗಬೇಕಿತ್ತು ಅಂತ.
ಈ ಕತೆ ನನಗೆ ಬಹಳ ಸಾರಿ ನೆನಪಾಗ್ತಿರ್ತದೆ. ಮತ್ತೆ ಬಹಳಷ್ಟು ಪರಿಸ್ಥಿತಿಯಲ್ಲಿ ನನಗೆ ಹೇಗೆ ನಡೆದುಕೊಳ್ಳಬೇಕು ಎನ್ನುವುದಕ್ಕೆ ದಾರಿ ತೋರಿಸುತ್ತದೆ. ನಾವು ಯಾರನ್ನೇ ಆಗಲಿ, ಯಾವ ಪರಿಸ್ಥಿತಿಯಲ್ಲೇ ಆಗಲಿ ಎದುರಿಸಲು ಅಂಜಿ ಅವರು ನಮ್ಮ ವಿಷಯದಲ್ಲಿ ಅಡ್ವಾಂಟೇಜ್ ತೆಗೆದುಕೊಳ್ಳಲು ಯಾಕಾದ್ರು ಬಿಡಬೇಕು… ನಂತರ ಅವರು ಶೋಶಿಸುವಾಗ ಸುಮ್ಮನೇ ಯಾಕೆ ನಲುಗಬೇಕು… ಅದಕ್ಕೆ ಬದಲಾಗಿ ನಮ್ಮ ಅಭಿಮಾನ ಅಸ್ಮಿತೆಗೆ ಪೆಟ್ಟಾಗದಂತೆ ಒಂದು ನಿರುಪದ್ರವಿ ಗಟ್ಟಿ ದನಿಯೊಂದನ್ನು ಹೊರಹಾಕುವುದರಿಂದ ಎದುರಿನವರಿಗೆ ಕನಿಷ್ಟ ನಾವು ನಮ್ಮ ಆತ್ಮಾಭಿಮಾನಕ್ಕೆ ಪೆಟ್ಟು ಬೀಳುವಂತಾದರೆ ಸುಮ್ಮನಿರಲಾರೆವು ಎನ್ನುವ ಮೆಸೇಜನ್ನು ಅವರಿಗೆ ತಲುಪಿಸುವ ಕೆಲಸವನ್ನಾದರೂ ಮಾಡಲೇ ಬೇಕು. ಆದರೆ ಅದು ಅಷ್ಟು ಸುಲಭವಲ್ಲ. ಎದುರಿಗಿರುವವರು ಬೇರೆಯವರಾದರೆ ಕತ್ತಿ ಹಿಡಿಯುವುದು ಸುಲಭ. ಆದರೆ ನಿಂತಿರುವವರು ನಮ್ಮವರೇ ಆದಾಗ?! ಇದು ಕಷ್ಟಾತಿಕಷ್ಟ. ಆದರೆ ಖಂಡಿತಾ ಸಾಧ್ಯ. ಅಸಾಧ್ಯವಂತೂ ಅಲ್ಲ. ನಿರಾಶರಾಗದೆ ಪ್ರಯತ್ನಿಸಿದರೆ ನಮ್ಮನ್ನು ನಾವು ದೃಢಗೊಳಿಸಿಕೊಳ್ಳುವುದೂ ಸಾಧ್ಯವಾಗ್ತದೆ.
ಆದರೆ ಸುಮ್ಮನೆ ಇರುವುದನ್ನು ಅದೆಷ್ಟು ವ್ಯವಸ್ಥಿತವಾಗಿ ಹೇಳಿಕೊಟ್ಟುಬಿಡುತ್ತೇವೆ ನಾವು! ನನ್ನ ಗೆಳತಿಯೊಬ್ಬರು ಇದ್ದಾರೆ. ಯಾರು ಏನೇ ಅನ್ನಲಿ ತಿರುಗಿ ಮಾತನಾಡುವುದು ಅವರಿಗೆ ಬಹಳಾ ಕಷ್ಟ. ಅವರೇ ಹೇಳುವ ಹಾಗೆ, ನಾಲ್ಕು ಜನ ಗಂಡುಮಕ್ಕಳಿದ್ದ ದೊಡ್ಡ ಮನೆಗೆ ಸೊಸೆಯಾಗಿ ಬಂದ ಅವರು, ಎಲ್ಲಿ ಒಂದು ಮಾತಾಡಿದರೆ ಬೇರೆಯವರಿಗೆ ನೋವಾಗುತ್ತದೋ ಎಂದು ಯೋಚಿಸುತ್ತಲೇ ಹಲ್ಲುಕಚ್ಚಿ ಸಹಿಸುತ್ತಾ ಬದುಕಿದ್ದು ಎನ್ನುತ್ತಾರೆ. ಎಷ್ಟೆಲ್ಲಾ ಮಾಡಿ ಬಡಿಸಿ ಉಣಿಸಿ ಕೊನೆಗೆ ಒಂದು ಕೆಟ್ಟ ಮಾತಾಡಿಬಿಟ್ಟರೆ ಮಾಡಿದ ಕೆಲಸವೆಲ್ಲಾ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದಲ್ಲ ಎಂದು ಸಹಿಸುವುದನ್ನು ಕಲಿತೆ ಎನ್ನುತ್ತಾರೆ. ಇಂಥ ಪಾಠಗಳು ನಮಗೆ ತವರಿನಿಂದಲೇ ಸಿಗುತ್ತಿತ್ತು ಎಂತಲೂ ಹೇಳುವುದನ್ನು ಮರೆಯುವುದಿಲ್ಲ. ಇಂತಹ ಅದೆಷ್ಟು ಸಂಪ್ರದಾಯದ ಹೆಸರಿನ ಪಾಠಗಳು! ಈ ಪಾಠಗಳೆಲ್ಲ ಹೆಣ್ಮಕ್ಕಳಿಗೆ ಮಾತ್ರ ಏಕೆ… ಆ ನನ್ನ ಗೆಳತಿ ಇಂತಹ ಪಾಠಗಳಿಂದಾಗಿ ಅದೆಷ್ಟು ಮೃದು ಎಂದರೆ ಯಾರಾದರೂ ಗಟ್ಟಿಯಾಗಿ ಮಾತನಾಡಿದರೂ ಸಾಕು ಇವರಿಗೆ ಗಂಟಲು ಕಟ್ಟಿ ಅಳುವೇ ಬಂದುಬಿಡುತ್ತದೆ. ಇವರು ಒಂದು ಉದಾಹರಣೆ ಮಾತ್ರ. ಆದರೆ ಇಂತಹ ಅದೆಷ್ಟೋ ಜನ ಹೆಣ್ಮಕ್ಕಳು ನಮಗೆ ಸಿಗುತ್ತಾರೆ. ಮೀಸಲಾತಿ ಇದ್ದರೂ ಹೊರಬರದ, ಸ್ಪರ್ಧಿಸದ, ಸ್ಪರ್ಧಿಸಿ ಗೆದ್ದರೂ ಗಂಡನೇ ಅಧಿಕಾರ ನಡೆಸುವ ಅದೆಷ್ಟೋ ವಾಸ್ತವಗಳು ನಮ್ಮ ಕಣ್ಮುಂದೆಯೇ ಇರುತ್ತವೆ. ಇದೆಲ್ಲ ನೋಡುವಾಗ ನಾವು ನಮ್ಮೊಳಗೇ ಗಟ್ಟಿಯಾಗಿ ಹೊರಬರಬೇಕಾದ ಅಗತ್ಯ ಮತ್ತು ಅನಿವಾರ್ಯತೆಯನ್ನು ಅರಿಯಬೇಕಿದೆ ಅನಿಸುತ್ತದೆ. ಇದಕ್ಕೆ ಯಾವ ಭೇದವಿಲ್ಲ. ಹೆಣ್ಣುಮಕ್ಕಳಿಗೆ ಅದರ ಅಗತ್ಯ ಕೊಂಚ ಹೆಚ್ಚಿರಬಹುದು ಅಷ್ಟೇ. ಹೆಂಗರುಳು, ಹೆಣ್ಣಪ್ಪಿ ಅಂತೆಲ್ಲ ಮೂದಲಿಕೆಗೆ ಒಳಗಾಗುವ ಅದೆಷ್ಟೋ ಗಂಡ್ಮಕ್ಕಳ ಪಾಡೂ ಇದಕ್ಕೆ ಭಿನ್ನವಾಗಿಲ್ಲ ಎನ್ನುವುದೂ ನಿಜವೇ.
ಇದಕ್ಕೆಲ್ಲ ಮದ್ದೆಂದರೆ ಮಿತಿಗಳನ್ನು ಮೀರುವುದು. ಯಾವುದು ಗೊಡ್ಡು ಎನಿಸುತ್ತದೋ ಅದನ್ನು ದಿಟ್ಟತನದಿಂದ ನಿರಾಕರಿಸುವುದು. ಕಟ್ಟಳೆಗಳು ಒಳಗಿನದ್ದಾದರೂ ಸರಿ ಹೊರಗಿನದ್ದಾದರೂ ಸರಿ, ಸರಿಸಿ ಹೊರ ಬರುವುದು… ಈ ಮದ್ದು ನಮ್ಮ ಮತಿಗೆ ದಕ್ಕಲಿ…
****************************************
–ಆಶಾ ಜಗದೀಶ್
ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸ
ಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.