ಕಥೆ
ಗೋಡೆಯ ಮೂಲೆ
ಶ್ರಮ ಕುಮಾರ್
ಒಂದು ಒಡಕು ಯೋಚನೆ ನನ್ನೊಳಗೆ ಮೂಡಿ ಬಂದಾಗ ಕತ್ತಲು ನನ್ನೊಳಗೆ ಮಾತ್ರವಲ್ಲದೆ ಹಿಡಿ ಮನೆಯ ತುಂಬ ತುಂಬಿತ್ತು.ಗೊಡೆಯ ಮೂಲೆಯೊಂದರಲ್ಲಿ ನಿದ್ರೆಯಲ್ಲಿದ್ದ ಚಿಟ್ಟೆಇರುವೆಯ ಬೇಟೆಯಾಡಿದ ಪಲ್ಲಿ ಲೊಚಗುಟ್ಟುತ್ತ ಮತ್ತೊಂದು ಮೂಲೆಗೆ ಹೊರಳುವುದಿತ್ತೇನೊ ಆದರೆ ಮುಕ್ತವಾದ ರಾತ್ರಿಯಲ್ಲಿ ಬೀಸಿಬಂದ ಗಾಳಿಯ ಉಸಿರಾಡಲಾಗುತ್ತಿರಲಿಲ್ಲ ನನಗೊಬ್ಬನಿಗೆ. ರಟ್ಟೆಯಲ್ಲಿ ಬಿಗಿಹಿಡಿದು ಕಿವಿಗಳ ಮುಚ್ಚಿಡಿದರು ಹಲ್ಲಿಯ ಲೊಚಗುಡುವ ಸದ್ದು ಕೇಳುತ್ತಲೇ ಇತ್ತು ಈ ರಾತ್ರಿಯಲ್ಲಿ ನಾ ಮಾಡಿದ ತಪ್ಪಾದರು ಏನು ಒಂದೊಂದಾಗೇ ಎಣಿಕೆಗೆ ಬಂದವು ಯಾವೊಂದು ತಪ್ಪೆಂದು ಸೂಚಿಸಲಿಲ್ಲ ಸ್ವಲ್ಪ ಹೊತ್ತು ಒದ್ದಾಡಿದ ಮೇಲೆ ಅಯ್ಯೋ ಎನಿಸಿ ಏನೋ ಹತ್ತಿದ್ದ ನಿದ್ದೆ ಅವಳ ಎದೆಯಮೇಲೆ ಕಣ್ಣುಗಳು ಮೂಡಿ ದುರ ದುರರನೆ ನೋಡುತ್ತಲೂ ಅತ್ತಿತ್ತ ಆಡಿಸುತ್ತಲೂ ಒಮ್ಮೆಲೆ ಆ ಸಣ್ಣ ಕಣ್ಣುಗಳು ಮುಚ್ಚಿ ತೆರೆಯುವಂತ ಕನಸಿಗೆ ತಟ್ಟನೆ ನನ್ನ ಕಣ್ಣು ತೆರೆದವು. ಬೇರೆಲ್ಲೊ ಮಲಗಿದ್ದೆನೆ ಎಂದೆನಿಸಿ ದಿಂಬಿನ ಮೇಲೆ ಕತ್ತ ಒರಳಾಡಿ ಸುತ್ತಲು ನೋಡಿದೆ. ಮನೆಯ ತುಂಬ ನೀರವ ಆವರಿಸಿ ಪಲ್ಲಿಯ ಸದ್ದಿರಲಿಲ್ಲ. ಬೆಕ್ಕಿನ ಮರಿ ಹೊಟ್ಟೆಯ ಮೇಲೆ ಕುಳಿತು ಆಟವಾಡುತ್ತಲಿದೆ. ಸ್ವಲ್ಪ ಕತ್ತಲು ಕರಗಿತ್ತಾದರು ಬೆಳಕನ್ನಿನ್ನು ಬಿಟ್ಟಿರಲಿಲ್ಲ. ಗಂಟಲು ಒಣಗಿ ದಾಹವಾದಂತಾದರು ಎದ್ದೊಗಲು ಮನಸಾಗದೆ ಅಂಗಾತವೇ ಬಿದ್ದುಕೊಂಡಿದ್ದೆ. ಎದೆಯ ಮೇಲಿನ ಕಣ್ಣುಗಳು ಈಗ ನಿದ್ರೆಯಲ್ಲಿರಬಹುದು ಅಥವ ತೆರೆದೇ ಕಾಯುತ್ತಿರಬಹುದು ಅಲ್ಲಿನ ಕಣ್ಣುಗಳಿಗೆ ಮುಪ್ಪಿಲ್ಲವೆನಿಸಿ ಬೆವರಿ ನೀರಾದೆ.
ಏನನ್ನೋ ಕಳೆದುಕೊಂಡಂತೆ ಹಿಂಸೆಯಾಗುತ್ತಿದೆ ನನಗೀಗ ಆ ಎದೆ ಆ ಕಣ್ಣು ಹಿಂದೆಂದೂ ಕಂಡಿದ್ದಿಲ್ಲ ಇದ್ದಕ್ಕಿದ್ದ ಹಾಗೆ ಆ ಕನಸು ಯಾಕೆ ಬಿತ್ತೆಂದು ಬೆಕ್ಕಿಗೆ ಕೇಳಬೇಕೆನ್ನುವಷ್ಟರಲ್ಲಿ ಹೊಟ್ಟೆಯಿಂದ ಕೆಳಕ್ಕೆ ನೆಗೆದು ಓಡಿತು.
ಎಷ್ಟೋ ಹುಡುಗಿಯರು ರಸ್ತೆಯಲ್ಲಿ ನಡೆಯುವಾಗ ಮೂಡುವ ಸೂರ್ಯನಿಗೆ ಎದರಿ ನಡೆಯುತ್ತಾರೆ ಅವಳು ಹಾಗೆ ನಡೆದವಳಿರಲಿಕ್ಕಿಲ್ಲ ಧೈರ್ಯವಾಗಿ ನಗ್ನಳಾಗಿದ್ದವಳು. ಯಾವೊಂದು ಕಲೆಗಳು ಅವಳ ಚರ್ಮಕ್ಕಂಟಿರಲಿಲ್ಲ. ಏನನ್ನೊ ಹೇಳ ಬೇಕೆಂದಿದ್ದಳೇನೊ ಅವಳ ಎದೆಯನ್ನೆಕೆ ನೋಡಿದೆ ಅಲ್ಲೇಕೆ ಕಣ್ಣುಗಳು ಮೂಡಿದವು ಎಲ್ಲಾ ಪ್ರಶ್ನೆಗಳು ಈಗೆಕೆ ಬಂದವು ಬಂದು ಒಡಕು ಯೋಚನೆಯ ಇಲ್ಲವಾಗಿಸಿದವು ಎಂದೆಲ್ಲ ಗೊಂದಲದಲ್ಲಿ ಮುಷ್ಟಿಯಿಡಿದು ಮಂಚಕ್ಕೊಮ್ಮೆ ಗುದ್ದಿದೆ. ಪಲ್ಲಿ ಮತ್ತೆ ಲೊಚಗುಟ್ಟಿತು ಮತ್ತೊಂದು ಚಿಟ್ಟೆಇರುವೆ ಬೇಟೆಯಾಗಿರ ಬಹುದು. ಅವು ಗೂಡಿನ ಒಳಹೊಕ್ಕಾಗ ಇರುವೆಯಾಗಿದ್ದವು ಹೊರಬರುತ್ತ ಚಿಟ್ಟೆಯಾಗುತ್ತಿದ್ದವು ಮನೆಯ ಹೊಳಬಂದು ಬೆಳಕಿನಲ್ಲಿ ಆಟಕ್ಕಿಳಿಯುತ್ತ ಕತ್ತಲಾದರೆ ಬೇಟೆಯಾಗುತ್ತಿದ್ದವು ಇವುಗಳ ಬಗ್ಗೆ ನಾನೇಕೆ ಚಿಂತಿಸಬೇಕು. ಇರುವೆ,ಗೂಡು,ಚಿಟ್ಟೆ ಮತ್ತೆ ಬೇಟೆ. ನಾನೂ ಅದರಂತಾದೆನ ಈ ರಾತ್ರಿಯಲ್ಲಿ ನನ್ನನ್ನು ನಗ್ನ ದೇಹ ಬೇಟೆಯಾಡುವುದಿತ್ತ ಇಲ್ಲ ಬೇಟೆಯಾಡುವವನಿಂದ ಉಳಿಸುವುದಿತ್ತ ಏನೊಂದು ಗೊತ್ತಾಗದೆ ಭಯದಲ್ಲಿ ನಡುಗಿದೆ.
ಮಲಗುವ ಮುಂಚೆ ಅರ್ದಕ್ಕೆ ಸೇದು ಎಸೆದ ಸಿಗರೇಟಿಗಾಗಿ ಕೈಯಾಡಿಸಿದೆ ಬೆಕ್ಕಿನ ಮರಿ ಅದರೊಂದಿಗೆ ಆಟಕ್ಕಿಳಿದಿರಬೇಕು ಇರಲಿಲ್ಲ . ಸೂರ್ಯ ನಾಳೆ ಬರುವುದೇ ಇಲ್ಲವೇನೋ ಬೆಳಕು ಆಗುವುದೇ ಇಲ್ಲವೇನೋ ಎಂಬೊಂದೇ ಯೋಚನೆ ಈಗ. ಕಣ್ಣು ಮಚ್ಚಿದರೆ ಅವಳು ನಗ್ನಳಾಗುತ್ತಾಳೆ ನನ್ನ ಹೊಡಕು ಯೋಚನೆಯ ಮೇಲೆ ವೊದೆಯುತ್ತಾಳೆ ಇವತ್ತಿನ ಬದುಕಿಗೆ ಬೆರೆಯದೇ ಅರ್ಥಮೂಡಿ ಗೋಡೆಯ ಮೇಲೇರುವ ಇರುವೆಯ ಬೆನ್ನೇರಿ ನಿಂತಂತೆ ಎದ್ದು ಕೂತೆ. ದೂರದಿಂದಲೇ ಮಬ್ಬುಗತ್ತಲೆಯಲ್ಲಿ ಬೆಕ್ಕು ಆಟ ನಿಲ್ಲಿಸಿ ತಿರುಗಿ ನೋಡಿತು. ಮಾಂಸದಂಗಡಿಯಿಂದ ಕೊಂಡು ತಂದಿದ್ದ ತುಂಡು ಮಾಂಸದ ಚೂರುಗಳು ಪ್ರಿಜ್ಜಿನಲ್ಲಿರುವುದು ನೆನಪಿಗೆ ಬಂದು ಅವನ್ನು ಪಲ್ಲಿಗೆ ಎಸೆದು ನೆಮ್ಮದಿಯಿಂದ ನಿದ್ದೆಮಾಡುವ ತೀರ್ಮಾನಕ್ಕೆ ಬಂದೆ ಜೋರಾಗಿ ಬಡಿಯುತ್ತಿದ್ದ ಹೃದಯ ಅಲ್ಲಿಂದ ಅಡುಗೆ ಕೋಣೆಗೆ ಕರೆದುಕೊಂಡೋಯಿತು.
ಅರ್ದ ಎಣ್ಣೆಯಿದ್ದ ಬಾಂಡಲಿಯು ಸ್ಟೌವಿನ ಮೇಲೆ ಕೂತು ಆರಡಿ ದೇಹವನ್ನು ಅಣುಕಿಸುತ್ತಿದೆ ಎಷ್ಟು ದೈರ್ಯ ಅದಕೆ ಪ್ರಿಯಾಳ ಕಾರಣಕ್ಕೆ ಸುಮ್ಮನಾದೆ.
ಪ್ರಿಯ ನೆನ್ನೆ ತಾನೆ ಬಂದು ಕಜ್ಜಾಯ ಬೇಯಿಸಿ ಅಜ್ಜಿಯನ್ನು ನೆನಪಿಗೆ ತಂದಿದ್ದಳು.ಅವಳು ತೆಳ್ಳನೆಯ ಹುಡುಗಿ ಮುಖದಲ್ಲಿದ್ದ ಒಂದು ಮೊಡವೆ ಅವಳಂದವನ್ನೇ ಹೆಚ್ಚುಮಾಡಿ ಅರಳಿತ್ತು,ನನಗವಳ ಪರಿಚಯವಾದದ್ದು ಒಂದೇ ದಿನ ಇಬ್ಬರು ಒಟ್ಟಿಗೆ ಶಾಲೆ ಸೇರಿದ್ದಾಗಿನಿಂದ ಹೆಚ್ಚು ಅಚ್ಚಿಕೊಂಡಿದ್ದೆವು. ಅವಳು ಗೆಳತಿಮಾತ್ರವೇ ಆಗದೆ ಮಾರ್ಗದರ್ಶಿಯೂ ಆಗಿ ಪ್ರೇಯಸಿಯೊಂದಿಗೆ ಜಗಳ ನಡೆದಾಗ ‘ನೀ ಅವಳ ಮನಸ್ಸ ನೋಯಿಸಬೇಡ ಅವಳಿಗೆ ನಿನ್ನ ಬಿಟ್ಟರೆ ಬೇರ್ಯಾರು ಜಗಳವಾಡಲು’ ಎಂದು ಮುದ್ದಾಗೆ ಬೈಯುತಿದ್ದಳು. ನಾಲ್ಕಡಿಯ ಹುಡುಗಿ ಪಕ್ವವಾಗಿ ಕಾಣುತ್ತಿದ್ದದ್ದೇ ಆವಾಗ,ಅವಳ ಮುಗ್ಧತೆ ಯಾವಾಗಲೂ ನನ್ನನ್ನ ತಿದ್ದುವುದರಲ್ಲೇ ಇತ್ತು ಪ್ರತಿಯೊಂದು ನಿರ್ಧಾರಗಳಲ್ಲು ಅವಳ ಉಪದೇಶವಿರದೆ ಆಗುತ್ತಿರಲಿಲ್ಲ ಪ್ರೇಯಸಿಯ ಆಯ್ಕೆಯಲ್ಲು ಕೂಡ ಮತ್ತೆ ಅವಳೊಂದಿಗೆ ಬಿಡುಗಡೆಯ ಬಯಸ್ಸಿದ್ದಾಗಲೂ ಕೂಡ ಪ್ರಿಯಾಳ ಮಾತು ನನಗೆ ಮುಖ್ಯವಾಗಿತ್ತು .
ನನ್ನ ಸ್ಥಿತಿಗೆ ಪ್ರತೀ ಪಾತ್ರೆಗಳು ಗಹಗಹಿಸುತ್ತಿವೆ ಈಗ ಅವಳಿದ್ದಿದ್ದರೆ ಈಗಿರುತ್ತಿರಲಿಲ್ಲ ಎಲ್ಲವೂ ಮೌನವಾಗುತ್ತಿದ್ದವು,’ಗಂಡಿಗೆ ಅಡಿಗೆ ಮನೆಯೇ ಮೊದಲ ಶತ್ರು’ ಎಂದು ಅಪ್ಪ ಹೇಳುತ್ತಿದ್ದದ್ದು ನಿಜವಾ ಪ್ರೀಯಾಳನ್ನ ಕೇಳಬೇಕೀಗ ‘ನಿನಗೆ ಯಾವಾಗಾದರು ನನ್ನಂತೆ ಆಗಿದ್ದಿದೆಯ’ ಇಲ್ಲ ಅವಳು ಮೂರೊತ್ತು ಅಡುಗೆ ಮನೆಯಲ್ಲೇ ಗಿರಕಿ ಹೊಡೆಯುವವಳು ಅವಳಿಗೆ ಈಗಾಗಿರಲಿಕ್ಕಿಲ್ಲ ಸುಮ್ಮನೆ ಇಂತ ಪೊಳ್ಳು ಪ್ರೆಶ್ನೆ ಕೇಳಿ ಸಣ್ಣತನ ತೋರಲು ಇಷ್ಟವಾಗುತ್ತಿಲ್ಲ ಆದರೂ ಒಮ್ಮೆ ಪೋನ್ ಮಾಡಿ ಕೇಳಬೇಕೆನಿಸಿತು, ಅವಳು ನನ್ನಂತಲ್ಲ ಇಷ್ಟೊತ್ತಿಗೆಲ್ಲ ಅವಳೊಳಗೆ ನಿದ್ದೆ ಐಕ್ಯಗೊಂಡು ಕರಗಿರುತ್ತಾಳೆ ‘ಸುಮ್ಮನೆ ಅವಳಿಗ್ಯಾಕೆ ತೊಂದರೆ ಕೊಡಲಿ’ ಸುಮ್ಮನಾದೆ.
ಈ ಕ್ರೂರಿ ಮನೆ ನನ್ನನ್ನ ಸುಮ್ಮನೆ ಬಿಡುವಂತಿರಲಿಲ್ಲ ಇಲ್ಲಿಗೆ ಕೊನೆಗೊಳಿಸಬೇಕೆಂದು ಅಣಿಗೊಂಡಿದೆ. ಸಂವೇದನೆ ಇರದ ಮೂಳೆಗಳು ಹೊರಬರಲು ಒದ್ದಾಡುತ್ತಿವೆಹೇನೋ ನಿಲ್ಲಲಾಗುತ್ತಿಲ್ಲ ದೇಹವೆಲ್ಲ ಹಿಂಡಿದಂತೆ. ಒಮ್ಮೆ ಬೆರಳುಗಳಲ್ಲಿ ದೇಹದ ಪ್ರತಿ ಭಾಗವನ್ನು ಮುಟ್ಟಿ ಕಾತರಿ ಪಡಿಸಿಕೊಂಡೆ ಮೂಳೆಗಳೆಲ್ಲ ಇದ್ದ ಜಾಗದಲ್ಲೇ ಇದ್ದವು ಚರ್ಮಕ್ಕು ಮಾಂಸಕಂಡಕ್ಕೂ ಎಂತದೂ ಇರುಸುಮುರುಸಿಲ್ಲವೆಂದು ಗೊತ್ತಾದಾಗ ಸಮಾದಾನವಾಯಿತಾದರು ತಳಮಳ ನಿಲ್ಲುತಿಲ್ಲ. ಹೃದಯದ ಬಡಿತ ಇನ್ನಾ ವೇಗವಾಗುತ್ತಿದೆ. ಮರಗಟ್ಟಿರುವ ದನಿಯ ಕಿತ್ತು ಅವಳ ಹೆಸರ ಜೋರಾಗಿ ಕೂಗಬೇಕನಿಸುತ್ತಿದೆ. ಈ ರಾತ್ರಿ ನನ್ನ ಆತ್ಮಕ್ಕಾಗಿ ಕಾದು ಕುಳಿತು ಹಿಂಸೆಗಿಳಿದ ಕ್ಷಣ ಬರಲು ಕಾರಣವಾದರು ಏನು ಅವಳಾದರು ನನ್ನನ್ನು ತಿದ್ದವವಳು ಈ ರಾತ್ರಿಯನ್ನು ತಿದ್ದದೆ ಬಿಡಳು. ‘ಪ್ರಿಯಾ ನನಗೂ ಅಡುಗೆ ಹೇಳಿಕೊಡು’ ತಲೆ ಬಾಗಿ ಕೇಳುತ್ತೇನೆ ಏನೆನ್ನುವಳು ನಿನಗೇಕೆ ಅದರ ಗೊಡವೆ ಎಂದೇಳಿ ನಗುವಳ ಇಲ್ಲ ಕೈ ಯಿಡಿದು ಪಾತ್ರೆಗಳೊಟ್ಟಿಗೆ ಭಾಷೆ ಕಲಿಸುವಳ. ಕಾಯುತ್ತಲೇ ನನ್ನತನ ಸಂಪೂರ್ಣ ಕುಸಿದುಬಿದ್ದು ಅವಳೆತ್ತಲು ಒದ್ದಾಡುತ್ತಿದೆ ‘ಬಾ ಪ್ರಿಯಾ ನನಗೇನು ತಿಳಿಯುತ್ತಿಲ್ಲ ಎರಡು ಬಗೆಯ ಯೋಚನೆ ತಿನ್ನುವ ಮೊದಲು ಬಂದು ಬಿಡಿಸು’.
ಕತ್ತಲು,ಪಲ್ಲಿ,ಚಿಟ್ಟೆಇರುವೆ,ಬೆಕ್ಕಿನಮರಿ,ಕಣ್ಣುಗಳಿರುವ ಎದೆ,ಪ್ರೇಯಸಿ ಮತ್ತು ಪ್ರಿಯ ಎಲ್ಲರು ಒಟ್ಟೊಟ್ಟಿಗೆ ಉಸಿರು ಕಟ್ಟಿಸಿದರು ಎಲ್ಲವೂ ಇಲ್ಲಿಯೇ ಇರುವವ ಇಲ್ಲ ಇವೆಲ್ಲವೂ ಅವೇ ಬಂದು ಕುಂತವ ಯಾವುದೂ ತಿಳಿಯದೆ ಸುತ್ತ ಸುತ್ತುತ್ತಲೇ ತಲೆ ತಿರುಗಿ ಅಡುಗೆ ಕೋಣೆಯ ಮಧ್ಯದಲ್ಲಿ ಕೈ ಕಾಲುಗಳ ಕಳಚಿ ಬಿದ್ದೆ.
‘ನೇರವಾಗಿ ಒಂದು ಮಾತೇಳ್ತೀನಿ ಬೇಜಾರ್ ಮಾಡ್ಕೊಬೇಡ ಕಣೋ ನೀ ವಿಚಿತ್ರ ಮನುಷ್ಯ ನಿನ್ನೊಳಗೆ ಏನಿದೆಯೋ ನನಗೆ ಗೊತ್ತಿಲ್ಲ ಆದ್ರೆ ನಗುವಾಗ ಕೆಟ್ಟದಾಗಿ ಕಾಣುತಿ ನಗುವುದ ನಿಲ್ಲಿಸು ನಿನ್ನೊಳಗೆ ವಿಚಿತ್ರತೆ ಇಲ್ಲದ ದಿನ ನಗು’ ಪ್ರಿಯಾಳ ಈ ಮಾತನ್ನು ತಮಾಷೆಗೆ ತೆಗೆದುಕೊಂಡಿದ್ದೆ ತಮಾಷೆಯಲ್ಲ ಅವಳಾಡಿದ ಮಾತು ಈಗಿನ ನನ್ನೊಳಗಿನ ವಿಚಿತ್ರತೆ ನನಗೆ ಗೊತ್ತಾಗುತ್ತಿದೆ. ಬಯಮಾತ್ರ ಉಳಿದು ಎಲ್ಲವೂ ಮರೆತು ಹೋಗಿದೆ. ಪ್ರೇಯಸಿಯ ಮುಖ ಕೂಡ ಮರೆತೆ. ಬಿಸಿ ಉಸಿರು ದೇಹದೊಳಗೆಲ್ಲ ಬಳಸಿ ಹೊರಗೆ ಬರುವ ಮುಂಚೆ ಶೂನ್ಯತೆ ಮತ್ತೆ ಕೂಡುವಾಗ ಅಡುಗೆ ಕೊಣೆಯ ಮಧ್ಯದಲ್ಲಿ ಪ್ರಿಯಮಾತ್ರವೇ ನಿಂತಿದ್ದಾಳೆ ಪ್ರತೀ ಖಾದ್ಯವನ್ನು ಖುದ್ದು ಅವಳೇ ಆದೇಶಿಸಿ ಮಾಡಿಸುತ್ತಿದ್ದಾಳೆ ಜೊತೆಜೊತೆಗೆ ಕಣ್ಣ ಮೂಡಿಸುವ ಎದೆಗಳು ಪಲ್ಲಿಯನ್ನೇ ನೊಡುತ್ತಿವೆ ಚಿಟ್ಟೆಇರುವೆ ಅದರೊಂದಿಗೆ ಆಟಕ್ಕಿಳಿದಿರುವುದ ಗುರುತಿಸಿ ಬೆಕ್ಕು ಶಾಂತವಾಗಿ ಮಲಗಿದೆ.
ಬೆಳಿಗೆ ಹತ್ತೋ ಹನ್ನೊಂದೋ ಹಾಗಿರಬೇಕು ಪ್ರಿಯ ನನ್ನನ್ನು ಎಬ್ಬಿಸಿ ತಲೆಮೇಲೊಡೆದು ‘ರಾತ್ರಿ ಏನನ್ನೋ ಕನವರ್ಸ್ತಿದ್ದಲ್ಲ ಯಾಕೋ’ ಎಂದಳು ನಗುತ್ತ, ‘ಏನ್ ಕನ್ವರ್ಸ್ದೆ’ಮುಗ್ಧತೆಯಿಂದ ಕೇಳಿದೆ ‘ನಿನ್ನ್ ತಲೆ ಎದ್ದೊಗಿ ಬಾಯ್ ತೊಳಿ ಮೊದ್ಲು ಚಿಕ್ಕ್ ಮಕ್ಳಾಗೆ ಜೊಲ್ ಸುರಿಸ್ತೀಯ ಈಗ್ಲೂ ಕೋರೆ ನೋಡು,ಗೂಬೆ ತೊಳಿ ಬಾ ಮೊದ್ಲು,ಟೀ ಬಿಸಿಮಾಡ್ಕೊಡ್ತೀನಿ’ಮಗುವಿಗೆ ಹೇಳುವ ಹಾಗೆ ಹೇಳುತ್ತ ‘ಕಲ್ಲು ಕರಗುವ ಸಮಯ’ ಪುಸ್ತಕವು ಮೊಗ್ಗುಲಲ್ಲೇ ಬಿದ್ದಿರುವುದ ಗಮನಿಸಿದಳು ಅದನ್ನು ಎತ್ತಿಕೊಂಡು ‘ಸೋಂಬೇರಿ ಕಣೊ ನೀನು’ ಬೈಯುತ್ತ ನಡುಮನೆಗೆ ಹೋದಳು.
ಬೆಕ್ಕಿನ ಮರಿ ಬಂದು ಎದೆಯ ಮೇಲೆ ಕುಳಿತು ನನ್ನನ್ನೇ ನೋಡಿತು.ಅದು ಕೂಡ ಕೊಪದಲ್ಲಿ ನನಗೆ ಬೈಯುತ್ತಿರಬೇಕು,ತಲೆ ಸವರಿದೆ ಭಾರವಾದಂತೆ ತಲೆಬಾಗಿಸಿತು.’ಥೂ ಈ ಕನ್ಸಿಗೆಷ್ಟು ಬಣ್ಣ’ ಪ್ರೀಯಾಗೀಮಾತ ಹೇಳೋದೇ ಮರೆತೆ. ‘ಬೇಕಂತಲೇ ಅವಳು ಕಾಡುವುದಿಲ್ಲ,ಕಂಡದ್ದು ಕಂಡ ಹಾಗೆ ಹೇಳಲು ಅವಳಿಗೆ ಬಣ್ಣಗಳೂ ಬೇಕಿಲ್ಲ’ಅವಳೂ ಈ ಮಾತನ್ನು ಮರೆಯದೆ ಹೇಳುತ್ತಿದ್ದಳೇನೋ ಗೊತ್ತಿಲ್ಲ ಆದರೆ ಎದೆಯ ಮೇಲಿನ ಕಣ್ಣುಗಳ ನಿದ್ದೆಯಲ್ಲಿರಿಸಿ ಕತ್ತಲು ತೂರಿ ಬೆಳಕು ಮುಗುಳ್ನಗುವಂತೆ ಮಾಡಿದೆ. ಕತ್ತಲಾಟದ ಕನಸೆಲ್ಲವು ನೆನಪಿಗೆ ತಂದು ನನ್ನ ಹೆದರಿಕೆ ನನಗೆ ಮುಜುಗರ ತರಿಸಿ ಬೆಕ್ಕಿನ ತಲೆಮೇಲೆ ಮೆಲ್ಲನೆ ಹೊಡೆದೆ ಪಾಪ ನೋವಾಗಿರಬೇಕು ಮಿಯೋ ಎಂದು ಕೂಗಿತು. ‘ಎದ್ಬಾರೋ’ ಹೊರಗಿನಿಂದ ಪ್ರಿಯಾಳ ದ್ವನಿ ಕೇಳಿಬಂದಾಗ ಗೋಡೆಯ ಮೂಲೆಯನ್ನೊಮ್ಮೆ ನೋಡಿದೆ.ಹೊಸದಾಗಿ ಜೇಡಗಳೆರಡು ಬಲೆಹೆಣೆಯಲು ಸಿದ್ಧತೆ ನಡೆಸುತ್ತಿದ್ದವು
*******************************************
ಕತೆ ಉತ್ತಮವಾಗಿದೆ..ಗೆಳೆಯ
ಧನ್ಯವಾದಗಳು ಗೆಳೆಯ
ಕಥೆ ಅಧ್ಬುತವಾಗಿದೆ ನಿಮ್ಮ ಬರವಣಿಗೆ ಹೀಗೆ ಮುಂದುವರಿಯಲಿ ಎಂದು ನನ್ನದೊಂದು ಶುಭಹಾರೈಕೆ
ಧನ್ಯವಾದಗಳು Sowbhagya M
Wowಆಗಿದೆ , ಮುಂದಿನ ಕಥೆಗೆ waiting ಅನ್ನೋ ಅಭಿಪ್ರಾಯ ತಲೆಯಲ್ಲಿ ಮೂಡುತ್ತಿದೆ
Tq Gagan ಖಂಡಿತ ಮುಂದಿನ ಕಥೆಯನ್ನ ನಿಮ್ಮ ಓದಿಗೆ ಕಳಿಸುವೆ
Super