ಅಂಕಣ ಬರಹ
ಅಗ್ಘವಣಿಯ ಹಂಪಯ್ಯನ ವಚನವೊಂದರ
ಐತಿಹಾಸಿಕ ವಿವೇಚನೆ
ಅಗ್ಘವಣಿಯ ಹಂಪಯ್ಯನ ವಚನವೊಂದರ ಐತಿಹಾಸಿಕ ವಿವೇಚನೆ
ಹಂಸಪತಿ ಗರುಡಪತಿ ವೃಷಭಪತಿ ರ‍್ವಜೀವಾಧಿಪತಿ
ದೇವರಾಯ ಮಹಾರಾಯನ ಅರಸುತನ ಹೊಸತು
ಓಲಗಕ್ಕೆ ಬಾರ; ಸಿಂಹಾಸನದಲ್ಲಿ ಕುಳ್ಳಿರ;
ಸ್ತ್ರೀಲಂಪಟನಾಗಿ ಅಂತಃಪುರ ಬಿಟ್ಟು ಹೊರವಡ;
ಕಪ್ಪಕಾಣಿಕೆಯನೊಪ್ಪಿಸಿಕೊಂಬವರಿಲ್ಲ.
ಗುರುವೆಂಬ ತಳವಾರನಾಜ್ಞೆ ಕೆಟ್ಟಿತ್ತು.
ತರೆದ ಬಾಗಿಲ ಮುಚ್ಚುವರಿಲ್ಲ;
ಮುಚ್ಚಿದ ಬಾಗಿಲ ತೆರೆವರಿಲ್ಲ;
ಹಂಪೆಯ ವಿರುಪಯ್ಯನ ಅರಸುತನ ಕೆಟ್ಟಿತ್ತು
ಭಕ್ತರೆಂಬುವವರಿನ್ನು ಬದುಕಲೆಬಾರದು ೧
ಅಗ್ಘವಣಿಯ ಹಂಪಯ್ಯ ವಚನ ಚಳುವಳಿಯ ಕೊನೆಯ ಹಂತದಲ್ಲಿ ಬಂದವನು. ವಿಜಯನಗರದ ದೇವರಾಯ (ಕ್ರಿ.ಶ. ೧೨೮೬-೧೩೨೮) ನೆಂಬ ಅರಸನ ಕಾಲದಲ್ಲಿ ಇದ್ದವನೆಂದು, ರಾಘವಾಂಕ ಕವಿಯು ತನ್ನ ಹರಿಶ್ಚಂದ್ರ ಚಾರಿತ್ರ‍್ಯವನ್ನು ಈ ರಾಜನ ಆಸ್ಥಾನದಲ್ಲಿ ಓದಿದ್ದೆಂದೂ ತಿಳಿದುಬರುತ್ತದೆ ಎಂದು ಡಿ. ಎಲ್. ನರಸಿಂಹಾಚರ‍್ಯರು ಹೇಳಿದ್ದಾರೆ.೨ ಪ್ರಕೃತ ವಚನಕ್ಕೆ ಪಾಠಾಂತರವೂ ಇದ್ದು ಡಿ ಎಲ್ ಎನ್ ಶಕಟರೇಫೆಯನ್ನು ಎರಡು ಕಡೆ ಬಳಸಿದ್ದರೆ, ಎಂ. ಎಂ. ಕಲಬರ‍್ಗಿಯವರು ಸಾಮಾನ್ಯರಿಗಾಗಿ ಸಂಪಾದನೆ ಮಾಡುತ್ತಿರುವ ಕಾರಣದಿಂದ ರೇಫೆಯನ್ನು ಉಳಿಸಿಕೊಂಡು, ಶಕಟರೇಫೆಯನ್ನು ತೆಗೆದು ಹಾಕಲಾಗಿದೆ ಎಂದು ಸಂಪಾದಕೀಯದಲ್ಲಿ ಹೇಳಿದ್ದಾರೆ. ಜನಪ್ರಿಯ ಪ್ರತಿಯದನ್ನೇ ಈ ಲೇಖನಕ್ಕೆ ಬಳಸಿಕೊಳ್ಳಲಾಗಿದೆ.
ಕುಂತಳದೇಶದಲ್ಲಿನ ಶಿವಭಕ್ತನಾದ ಹಂಪಯ್ಯನು, ಹದಿನಾರು ದಿಕ್ಕಿಗೂ ಹೋಗಿ ಪತ್ರಪುಷ್ಪಗಳನ್ನು ತಂದು ಶಿವನಿರ‍್ಪಿಸುವ ನಿಯಮವನ್ನು ಪಾಲಿಸುತ್ತಿದ್ದ. ಅದಲ್ಲದೆ ಶೀಲವಂತರಿಗೆ ಚಿಲುಮೆಯ ಅಗ್ಘವಣಿಯನ್ನು ತಂದುಕೊಡುವ ಕಾಯಕವನ್ನು ನಡೆಸುತ್ತಿದ್ದನೆಂದು ಇವನ ಶಿವಭಕ್ತಿಯ ಬಗೆಗೆ ಶಾಂತಲಿಂಗ ದೇಶಿಕನು ತನ್ನ ಭೈರವೇಶ್ವರ ಕಥಾಸೂತ್ರ ರತ್ನಾಕರ ಕೃತಿಯಲ್ಲಿ ತಿಳಿಸಿದ್ದಾನೆ.೩ ಅಗ್ಘವಣಿ ಹಂಪಯ್ಯನ ವಚನಗಳ ಅಂಕಿತ ‘ಹಂಪೆಯ ವಿರುಪಯ್ಯ’ ನೆಂದು ಎಲ್ಲ ವಿದ್ವಾಂಸರೂ ಹೇಳಿದ್ದಾರೆ. ಅವನ ನಾಲ್ಕು ವಚನಗಳು ಇದುವರೆವಿಗೂ ದೊರೆತಿವೆ.೪ ಡಾ. ಆರ್. ಚಲಪತಿಯವರು ‘ಪಂಚಾಕ್ಷರಿ, ಗುರು ಪಂಚಾಕ್ಷರಿ’ ಎಂಬೆರಡು ಹೊಸ ಅಂಕಿತಗಳನ್ನೂ ತಮ್ಮ ಕೃತಿಯಲ್ಲಿ ಅಗ್ಘವಣಿಯ ಹಂಪಯ್ಯನದೆಂದು ಸೂಚಿಸಿದ್ದಾರೆ.೫
ಶಿವಶರಣರ ವಚನ ಚಳುವಳಿಯಿಂದ ಗಾಢವಾಗಿ ಪ್ರಭಾವಿತನಾಗಿದ್ದ ಅಗ್ಘವಣಿಯ ಹಂಪಯ್ಯ, ಕಲ್ಯಾಣಕ್ರಾಂತಿಯ ನಂತರ ಪಲ್ಲಟವಾದ ಒಟ್ಟೂ ಚಳುವಳಿಯ ಉದ್ದೇಶ, ಅಧೋಗತಿಗೆ ಇಳಿದ ಸಾಮಾಜದ ಸ್ಥಿತಿಗತಿ ಮತ್ತು ರಾಜಪ್ರಭುತ್ವದ ನಡೆ ನುಡಿಗಳನ್ನು ತನ್ನ ವಚನದಲ್ಲಿ ಖೇದ, ಸಿಟ್ಟು ಮತ್ತು ವ್ಯಂಗ್ಯದಲ್ಲಿ ಹೊರಹಾಕಿದ್ದಾನೆ. ಅಗ್ಘವಣಿಯ ಹಂಪಯ್ಯನ ವಚನದ ‘ದೇವರಾಯ ಮಹಾರಾಯನ ಅರಸುತನ ಹೊಸತು’ ಸಾಲಿನ ಓದಿನಿಂದ ಅವನ ಕಾಲದ ಬಗೆಗೆ ಕೆಲವು ಅನುಮಾನಗಳು ಮೂಡುತ್ತವೆ. ಡಿ. ಎಲ್. ನರಸಿಂಹಾಚರ‍್ಯರು ವಚನಕಾರರ ನಂತರದವನು ಎಂದೂ, ಅವನ ಕಾಲವನ್ನು ಕ್ರಿಶ ೧೩೦೦ ಎಂದು ಹೇಳಿದ್ದಾರೆ.೬ ಕವಿಚರಿತಾಕಾರರು ಮತ್ತು ಇತರರು ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ.೭
ಹಂಪಯ್ಯ ತನ್ನ ವಚನದಲ್ಲಿ ನೇರವಾಗಿ ಸಂಬೋಧಿಸುವ ‘ದೇವರಾಯ’ ಕರ್ನಾಟಕವನ್ನಾಳಿದ ಪ್ರಖ್ಯಾತ ರಾಜಮನೆತನವಾದ ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿ ಆಳಿದ ನಾಲಕ್ಕು ವಂಶಗಳಾದ ಸಂಗಮ, ಸಾಳುವ, ತುಳುವ ಮತ್ತು ಅರವೀಡು ವಂಶಗಳಲ್ಲಿನ ಮೊದಲನೆಯ ವಂಶವಾದ ಸಂಗಮ ವಂಶದ ದೊರೆ ೧ ನೇ ದೇವರಾಯ. ಸಂಗಮ ವಂಶದಲ್ಲಿಯೂ ಇಬ್ಬರು ದೇವರಾಯರ ಎಂಬ ಹೆಸರಿನ ರಾಜರು ಬೇರೆ ಬೇರೆ ಕಾಲಘಟ್ಟದಲ್ಲಿ ಆಳ್ವಿಕೆ ಮಾಡಿದ್ದಾರೆ. ೧ ನೇ ದೇವರಾಯ ಸಾ.ಶ ೧೪೦೬ – ೧೪೧೨-೧೩ ವರೆವಿಗೂ, ೨ ನೇ ದೇವರಾಯ ಸಾ.ಶ ೧೪೧೪ ರಿಂದ ೧೪೪೪ ರ ವರೆವಿಗೂ ವಿಜಯನಗರವನ್ನು ಆಳ್ವಿಕೆಯನ್ನು ಮಾಡಿದ್ದಾರೆ.೮ ದೇಸಾಯಿ ಪಾಂಡುರಂಗರಾಯರು ಇದೇ ಶತಮಾನದಲ್ಲಿಯೇ ದೇವರಾಯನ ಕಾಲವನ್ನು ತಿಳಿಸಿದರೂ ಸ್ವಲ್ಪ ಭಿನ್ನವಾದ ಕಾಲವನ್ನು ಕೊಟ್ಟಿದ್ದಾರೆ.೯ ೧ ನೇ ದೇವರಾಯನು ಸಿಂಹಾಸನಾರೂಢನಾದ ಕಾಲವನ್ನು ಸಾ.ಶ ೧೪೦೬ ಎಂದು ಕೊಟ್ಟಿದ್ದಾರೆ.೧೦
ಅಗ್ಘವಣಿಯ ಹಂಪಯ್ಯನ ವಚನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಮತ್ತು ವಿಜಯನಗರದ ಅರಸರ ಇತಿಹಾಸವನ್ನು ಅವಲೋಕಿಸಿದರೆ, ಹಂಪಯ್ಯನು ೧ ನೇ ದೇವರಾಯನ ಆಸ್ಥಾನವನ್ನು ನೋಡಿರುವ, ಅವನ ಆಡಳಿತದಿಂದ ಬೇಸರವಾಗಿರು ಸಾಧ್ಯತೆಯೇ ಹೆಚ್ಚೆನಿಸುತ್ತದೆ. ಕವಿಚರಿತಾಕಾರರರು ಮಿ. ರ‍್ಬೌ ರವರು ಹೇಳುವ ದೇವರಾಯ ಇವನೇ ಆಗಿದ್ದಲ್ಲಿ ಇವನ ಕಾಲ ಸಾ.ಶ ೧೨೮೬-೧೩೨೮ ಆಗುತ್ತದೆ ಎಂದು ಕಾಲವನ್ನು ಆವರಣ ಚಿಹ್ನೆಯಲ್ಲಿ ಸೂಚಿಸಿದ್ದಾರೆ ಮತ್ತು ಡಿ ಎಲ್ ನರಸಿಂಗಾಚರ‍್ಯರೂ ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ.೧೧
ಅದರಂತೆ ಮತ್ತಿನ್ನೊಂದು ದಾರಿಯಲ್ಲಿ ಅವಲೋಕಿಸುವುದಾದರೆ, ವಚನದಲ್ಲಿ ಬರುವ ‘ದೇವರಾಯ’ಎಂಬ ಪದವು ಸಾಂಕೇತಿಕವಾಗಿ ಪುರಾಣಪ್ರತೀಕವಾಗಿ ಬಳಕೆಯಾಗಿದ್ದು ಎಂದಿಟ್ಟುಕೊಂಡರೆ ದೇವತೆಗಳ ರಾಜನಾದ ‘ಇಂದ್ರ’ನ ಬಗೆಗಿನ ರ‍್ಥವನ್ನೂ ಧ್ವನಿಸುತ್ತದೆ. ಆದರೆ ಎರಡನೆಯದನ್ನ ಒಪ್ಪುವುದು ಕಷ್ಟ ಮತ್ತು ವಾಸ್ತವವಾಗಿ ಬದುಕಿದ ವಚನಕಾರರಿಗೆ ಮಾಡಿದ ದ್ರೋಹವಾಗುವ ಸಾಧ್ಯತೆ ಇರುವುದರಿಂದ ಮೊದಲನೆಯದನ್ನೇ ಒಪ್ಪಬಹುದು. ರಾಜರ ಎದುರಿಗೇ ಅವರ ಮತ್ತವರ ಪ್ರಭುತ್ವದ ಸಮಸ್ಯೆಗಳನ್ನು ಎತ್ತಿ ಮಾತನಾಡಿರುವುದಕ್ಕೆ ವಚನಕಾರರಲ್ಲಿ ಬಹಳಷ್ಟು ಸಾಕ್ಷಿಗಳು ದೊರೆಯುತ್ತವೆ. ಬಸವಾದಿ ಪ್ರಮಥರ ಪ್ರಭಾವದಿಂದ ಕೇವಲ ಪುರಾಣಪ್ರತೀಕವಾಗಿ ಮೇಲಿನ ‘ದೇವರಾಯ’ ಎಂಬುದನ್ನು ಅಗ್ಘವಣಿಯ ಹಂಪಯ್ಯ ಬಳಸಿರಲಾರನು. ಹಂಪಯ್ಯನ ಕಾಲದ ಬಗೆಗೆ ನಿಖರ ಮಾಹಿತಿ ನೀಡದಿದ್ದರೂ ಕವಿಚರಿತಾಕಾರರು ಮತ್ತು ಡಿ ಎಲ್ ನರಸಿಂಹಾಚರ‍್ಯರು ಊಹಿಸಿರುವ ‘ದೇವರಾಯನ ಕಾಲದವನು’ ಎನ್ನುವ ಮಾತನ್ನು ಹಾಗೂ ಸದ್ಯ ವಚನವೇ ಸ್ಪುರಿಸುವ ‘ದೇವರಾಯ ಮಹಾರಾಯನ ಆಸ್ಥಾನ ಹೊಸತು’ ಎನ್ನುವ ಸಾಲಿನ ‘ಆಸ್ಥಾನ ಹೊಸತು’ ಎನ್ನುವ ಪದದ ಮೂಲಕ ೧ ನೇ ದೇವರಾಯನ ಆರಂಭಿಕ ಕಾಲವನ್ನು ಸ್ಪಷ್ಟವಾಗಿ ಈ ವಚನ ಸೂಚಿಸುತ್ತಿದೆ. ಈ ಎಲ್ಲಾ ಕಾರಣಗಳಿಂದ ಮತ್ತು ಪಠ್ಯದ ಬಹುಮುಖ್ಯ ಪದಗಳ ಆಧಾರದ ಮೇಲೆ ಅಗ್ಘವಣಿಯ ಹಂಪಯ್ಯನು ವಿಜಯನಗರ ಸಾಮ್ರಾಜ್ಯವನ್ನು ಆಳಿದ ಸಂಗಮ ವಂಶದ ದೊರೆ ೧ ನೇ ದೇವರಾಯನ ಕಾಲದಲ್ಲಿ ಅಂದರೆ ಸಾ.ಶ ೧೪೦೬ – ೧೪೧೨-೧೩ ರಲ್ಲಿ ಇದ್ದನೆಂದು ಹೇಳಬಹುದು.
ಇವನು ೧ ನೇ ದೇವರಾಯನ ನೈತ್ತಿಕ ಅಧಃಪತನವನ್ನು ಗಮನಿಸಿದ್ದನೆಂದು ವಚನದಲ್ಲಿನ ‘ಸ್ತ್ರೀಲಂಪಟನಾಗಿ ಅಂತಃಪುರ ಬಿಟ್ಟು ಹೊರವಡ’
‘ತರೆದ ಬಾಗಿಲ ಮುಚ್ಚುವರಿಲ್ಲ; ಮುಚ್ಚಿದ ಬಾಗಿಲ ತೆರೆವರಿಲ್ಲ’ ಸಾಲುಗಳಿಂದ ತಿಳಿದು ಬರುತ್ತದೆ. ಇದೇ ವಿಷಯವನ್ನೂ ಇತಿಹಾಸಕಾರ ರಾಬರ್ಟ್ ಸಿವಿಲ್ಲರು ಫರಿಸ್ತಾ ಹೇಳಿದನೆಂದು ತಮ್ಮ ಕೃತಿಯಲ್ಲಿ ರಾಯನು ಹೆಣ್ಣಿಗಾಗಿ ಇಳಿದ ಅಧಃಪತನವನ್ನು ಕುರಿತು ಪ್ರಸ್ತಾಪಮಾಡಿದ್ದಾರೆ.೧೨ ಮೇಲಿನ ಅಭಿಪ್ರಾಯವನ್ನು ಭಾರತೀಯ ಇತಿಹಾಸಕಾರರಾದ ನೀಲಕಂಠ ಶಾಸ್ತ್ರಿಗಳೂ ದಾಖಲಿಸಿದ್ದಾರೆ.೧೩ ರಾಬರ್ಟ್ ಸಿವಿಲ್ಲರು ಫೆರಿಸ್ತಾ ಬರೆದಿರುವುದನ್ನು ತಮ್ಮ ಪುಸ್ತಕದಲ್ಲಿ ದಾಖಲಿಸಿರುವಂತೆ ರಾಯನು ಹುಡುಗಿಯನ್ನು ಪಡೆಯಲೋಸುಗ ನಡೆಸಿದ ಹುಚ್ಚುತನದ ಯಾತ್ರೆಯಲ್ಲಿ ಸಿಕ್ಕಿಹಾಕೊಕೊಂಡ ‘ರೈತ’ ಮನೆತದ ಹುಡುಗಿಯೆಂದು ಹೇಳಿದ್ದರೆ, ನೀಲಕಂಠ ಶಾಸ್ತ್ರಿಗಳು ‘ಚಿನ್ನಗೆಲಸ ಮಾಡುವ ಅಕ್ಕಸಾಲಿಗ’ ನ ಮಗಳೆಂದು ಹೇಳಿದ್ದಾರೆ. ಉಳಿದ ಅಭಿಪ್ರಾಯಗಳಲ್ಲಿ ಸಮಾನತೆಯಿದೆ.
ನೈತ್ತಿಕತೆಯನ್ನೇ ಬುನಾದಿಯಾಗಿಟ್ಟು ಸಮಾಜವನ್ನ ಕಟ್ಟುವ ಕರ‍್ಯ ನರ‍್ವಹಿಸಿದ ವಚನಕಾರರ ಮರ‍್ಗವನ್ನು ಅಗ್ಘವಣಿಯ ಹಂಪಯ್ಯ ಮೆಚ್ಚಿದ್ದದ್ದನೆಂದು ಅವನ ವಚನದ ಗುರುವೆಂಬ ತಳವಾರನಾಜ್ಞೆ ಕೆಟ್ಟಿತ್ತು ಸಾಲಿನಿಂದಲೂ, ವಚನಕಾರರ ನಡೆ ನುಡಿಗೆ ವಿರುದ್ಧವಾದದ್ದನ್ನೂ ತನ್ನ ಕಣ್ಣಾರೆ ಕಂಡುದರ ಬಗೆಗೆ ಬೇಸರ, ಹಿಂಸೆಯಲ್ಲಿ ವಚನದ ‘ಹಂಪೆಯ ವಿರುಪಯ್ಯನ ಅರಸುತನ ಕೆಟ್ಟಿತ್ತು, ಭಕ್ತರೆಂಬುವವರಿನ್ನು ಬದುಕಲೆಬಾರದು’ ಎಂಬ ಮಾತುಗಳು ಬಂದಿವೆ. ಪ್ರಭುತ್ವದ ಮೇಲಿನ ಬೇಸರ, ಸಿಟ್ಟು, ವ್ಯಂಗ್ಯ ಅಭಿವ್ಯಕ್ತಿಯೇ ಪ್ರಸ್ತುತ ವಚನದ ಭಾವಕೇಂದ್ರವಾಗಿದೆ. ವಚನಕಾರರ ನಂತರ ವೈಶ್ಣವಪಂಥ ಬಂದ ನಂತರವು ವಚನಗಳು ರಚನೆಯಾಗುತ್ತಿದ್ದುದಕ್ಕೆ ಪ್ರಸ್ತುತ ವಚನವು ಸಾಕ್ಷಿಯಾಗಿದೆ.
ಬದಲಾದ ಪ್ರಭುತ್ವ ಅದರ ನಾಯಕನಾದವನ ವೈಯುಕ್ತಿಕ ತರ‍್ತಿಗೆ ಅನುಗುಣವಾಗಿ ಪಲ್ಲಟವಾಗುವ ಸಾಮಾಜಿಕ ಉದ್ದೇಶ, ಮೌಲ್ಯಗಳ ಪಲ್ಲಟತೆಯ ಬಹುದೊಡ್ಡ ಸ್ಥಿತಿಯನ್ನ ವಾಚ್ಯವಾಗಿಯೇ ವಚನದಲ್ಲಿ ತಿಳಿಸುತ್ತಿದ್ದಾನೆ. ‘ಹಂಸಪತಿ’, ‘ಗರುಡಪತಿ’, ‘ವೃಷಭಪತಿ’ ಎಂದು ವಾಹನದ ಮೇಲೆ ಆರೂಢರಾಗುವ ಬ್ರಹ್ಮ, ವಿಷ್ಣು ಮತ್ತು ಶಿವನನ್ನ ಹೇಳುತ್ತಲೇ-ಪ್ರಭುತ್ವದಲ್ಲಿನ ಸೃಷ್ಟಿ, ಸ್ಥಿತಿ ಮತ್ತು ಲಯವನ್ನ ಹೇಳುತ್ತಿದೆ. ವಚನದ ನಂತರದ ಸಾಲಾದ ‘ರ‍್ವಜೀವಾಧಿಪತಿ’ ಪದವು ಬಹುದೊಡ್ಡ ವ್ಯಂಗ್ಯವಾಗಿ ರ‍್ವಹಿಸುತ್ತಿದೆ. ಮಾನವ ಜಾತಿಯನ್ನು ಒಂದೆಂದು ಬಗೆದ ವಚನಕಾರರ ಅನಂತರ ಪ್ರಭುತ್ವವು ತನ್ನ ಇರುವಿಕೆಯನ್ನು ರ‍್ಪಡಿಸುತ್ತಿರುವಾಗ ಹಂಪಯ್ಯ ವ್ಯಂಗ್ಯವಾಡುತ್ತಲೇ ಪ್ರಭುತ್ವಕ್ಕೆ ವಿರುದ್ಧವಾಗಿ ತನ್ನ ಅಭಿಪ್ರಾಯವನ್ನು ತಿಳಿಸುತ್ತಿದ್ದಾನೆ. ‘ದೇವರಾಯನ ಆಸ್ಥಾನ ಹೊಸತು’ ಎನ್ನುವಾಗ ಆಗತಾನೆ ಪ್ರಾರಂಭದ ಹಂತದಲ್ಲಿದ್ದ ಸಾಮ್ರಾಜ್ಯವನ್ನ ಅಥವಾ ಸಿಂಹಾಸನಾರೂಢನಾದ ೧ ನೇ ದೇವರಾಯನ ಬಗೆಗೆ ನೇರವಾಗಿಯೆ ಮಾತನಾಡುತ್ತಿದ್ದಾನೆ. ‘ಬಾರ’ ‘ಕುಳ್ಳಿರ’ ಅನ್ನುವ ನಿಧಿಷ್ಟ ಕ್ರಿಯಾಪದಗಳು ಮುಂದಿನ ಸಾಲು ಅತೀವ್ಯಂಗ್ಯವಾಗಿ ಕೆಲಸ ಮಾಡುತ್ತ, ರಾಜನಲ್ಲಿದ್ದ ‘ಸ್ತ್ರೀಲಂಪಟತೆ’ ಯ ಬಗೆಗೆ ನೇರವಾಗಿ ಹೇಳಿ ‘ಅಂತಃಪುರಬಿಟ್ಟು ಹೊರವಡ’ ಎನ್ನುವ ಪದವನ್ನ ಬಳಸಿ ಸ್ಪಷ್ಟವಾಗಿ ಆ ಕಾಲಘಟ್ಟದ ೧ ನೇ ದೇವರಾಯನ ರಾಜನ ಬಗೆಗೆ ಹೇಳುತ್ತಿದ್ದಾನೆ. ರಾಜ್ಯದ ಪ್ರಮುಖ ಆದಾಯದ ಹೊಣೆಯನ್ನೂ ನಿಭಾಯಿಸಲಾರದ ರಾಯನ ಹೀನಸ್ಥಿತಿಯನ್ನ ‘ಕಪ್ಪ ಕಾಣಿಕಯನ್ನೊಪ್ಪಿಸಿಕೊಂಬವರಿಲ್ಲ’ ಎನ್ನುವುದನ್ನ ಹೇಳಿದಾಗಲೇ, ರಾಜ್ಯ ಮತ್ತದರಲ್ಲಿನ ಪ್ರಭುತ್ವ ನೈತ್ತಿಕವಾಗಿ ಮತ್ತು ರ‍್ಥಿಕವಾಗಿ ದಿವಾಳಿತನಕ್ಕೆ ಮುಖಮಾಡಿರುವುದನ್ನ ಕಾಣಿಸುತ್ತಿದ್ದಾನೆ. ನಂತರದ ‘ಗುರುವೆಂಬ ತಳವಾರನ ಆಜ್ಞೆ ಕೆಟ್ಟಿತ್ತು’ ಸಾಲಿನ ಮೂಲಕ ಬಹುಮುಖ್ಯವಾದ ಒಂದು ಅಂಶದ ಬಗೆಗೆ ಗಮನ ಸೆಳೆಯುತ್ತಾನೆ. ತನ್ನ ಹಿಂದಿನ ವಚನ ಚಳುವಳಿಯಲ್ಲಿನ ಗುರುವಿನ ಮಹತ್ವದ ಬಗೆಗೆ, ‘ಅರಿವೇ ಗುರು’ ವಾದ ಸ್ಥಿತಿಯಿಂದ ಕೆಳಗಿಳಿದಿರುವುದರಿಂದಲೇ ಆದ ಬಹುದೊಡ್ಡ ಸಂಚಲನದ ಬಗೆಗೆ ಗಮನವಿದ್ದೇ ‘ಕೆಟ್ಟಿತ್ತು’ ಎನ್ನುವಾಗ ನಿದಿಷ್ಟ ರ‍್ತಮಾನ ಕ್ರಿಯಾಪದಗಳನ್ನ ಬಳಸಿದ್ದಾನೆ. ‘ತೆರೆದ ಬಾಗಿಲ’ ಅನ್ನುವ ಪದ ದೇಹದ ಅರಿಷಡ್ರ‍್ಗಗಳನ್ನ ತಿಳಿಸುತ್ತಿದೆ (ಗಮನಿಸಿ- ದೇಹವೇ ದೇಗುಲ ಅನ್ನುವುದರ ಪ್ರಭಾವವಿದೆ.) ‘ಮುಚ್ಚುವರಿಲ್ಲ’ ಅನ್ನುವ ಪದವೂ ಸಹಾ ನಿದಿಷ್ಟ ಕ್ರಿಯಾ ಪದವಾಗಿದ್ದು ಇದರಲ್ಲಿ ಒಂದು ವ್ಯಥೆಯ ಧ್ವನಿ ಹೊಮ್ಮುತ್ತಿದೆ. ‘ಮುಚ್ಚಿದ ಬಾಗಿಲ’ ಅನ್ನುವುದು ಜ್ಞಾನವನ್ನ, ನೈತ್ತಿಕತೆಯ ಪ್ರಜ್ಞೆಯನ್ನ ಸಂಕೇತಿಸುತ್ತಲೇ ಇಲ್ಲೂ ರ‍್ಧಿಷ್ಟ ಕ್ರಿಯಾಪದವನ್ನ ತಿಳಿಸುತ್ತಲೇ ‘ತೆರೆವರಿಲ್ಲ’ ಅನ್ನುವಾಗ ತನ್ನ ಅಸಹಾಯಕತೆಯನ್ನ ಜೊತೆಗೆ ಪ್ರಭುತ್ವದ ಅಧೋಗತಿಯನ್ನ ತಿಳಿಸುತ್ತಲೇ ಮುಂದಿನ ಕೆಟ್ಟಿರುವ ‘ಅರಸುತನ’ ವನ್ನ ಹೇಳುತ್ತಿದ್ದಾನೆ. ಅದರಲ್ಲಿಯೂ ಆ ಸಾಲಿನ ಬಹುಮುಖ್ಯ ಪದವೂ ‘ಕೆಟ್ಟಿತ್ತು’ ಇಂದಿಗೆ ಓದಿದರೆ ಭೂತಕಾಲ ಕ್ರಿಯಾಪದ ಮತ್ತೆ ರ‍್ತಮಾನಕಾಲದಲ್ಲಿಯೂ ಸ್ಪಷ್ಟವಾದ ಕೆಲಸ ಮಾಡುತ್ತ ‘ಕೆಟ್ಟ ಅರಸುತನ’ ವನ್ನ ಧ್ವನಿಸಿ, ಕೊನೆಗೆ ಈ ಹೀನಾವಸ್ಥೆಯನ್ನ ಕಂಡು ತನ್ನ ಒಟ್ಟೂ ಉದ್ದೇಶವಾದ ಬದುಕಿಯೂ ಪ್ರಯೋಜನವಿಲ್ಲವೆಂಬುದನ್ನ ಹೇಳುತ್ತಿದ್ದಾನೆ. ಕೊನೆಯ ಸಾಲಿನಲ್ಲಿನ ‘ಬದುಕಲೆ’ ಅನ್ನುವಾಗ ಅವನಲ್ಲಿನ ಒಳಗುದಿಯ ಕಾವನ್ನ ಹೇಳುವಲ್ಲಿ ಸಾಮಾನ್ಯವಾದ ಇಂದಿನ ದುಖಃದ ಸ್ಥಿತಿಯನ್ನೂ ಧ್ವನಿಸುವ ಹಾಗೆ ಮಾಡುತ್ತಿದೆ.
ಆಶ್ಚರ್ಯದ ಸಂಗತಿ ಎಂದರೆ ರಾಜನ ಅಥವಾ ಪ್ರಭುತ್ವದ ವಿರುದ್ಧ ಆ ಕಾಲದಲ್ಲಿಯೇ ಬಹಳ ನೇರವಾಗಿ ಖಂಡಿಸುವ ಗುಣ ಮೆಚ್ಚಲೇಬೇಕಾದುದು. ಅದೇ ರಾಜ್ಯದಲ್ಲಿದ್ದು. ಈ ಗುಂಡಿಗೆಗೆ ಪ್ರಭಾವ ಬಸವಣ್ಣನ ನಡೆ ಇದ್ದರೂ ಇರಬಹುದು (ಊರಮುಂದೆ ಹಾಲಹಳ್ಳ ಹರಿಯುತಿರಲು ಬಿಜ್ಜಳನ ಭಂಡಾರವೆನಗೇಕಯ್ಯಾ, ನೆಲನಾಳ್ದನ ಹೆಣನೆಂದೊಡೆ ಒಂದಡಿಕೆಗೆ ಕೊಂಬರಿಲ್ಲ … ಇತ್ಯಾದಿ ಬಸವಣ್ಣನ ವಚನ ಮತ್ತು ನಡೆಯ ಪ್ರಭಾವ ಇದ್ದರೂ ಇರಬಹುದು) ಎಲ್ಲಕಾಲದಲ್ಲಿಯೂ ಬಂಡಾಯವನ್ನ ನಡೆಸುವವನ ಒಳ ಹೊರ ಸ್ಥಿತಿಯ ಶುಚಿತ್ವದ ದ್ಯೋತಕವಾಗಿ ಈ ವಚನ ನಿಂತಿದೆ. ಅಧಿಕಾರದಲ್ಲಿರುವವನ ನೈತ್ತಿಕ ಅಧಃಪತನ ಮತ್ತು ಅವನನ್ನಾಶ್ರಯಿಸಿರುವ ಎಲ್ಲರ ಪತನಕ್ಕೂ ನಾಂದಿ. ಕೊನೆಗೆ ಅದರ ಪರಿಣಾಮ ಸಮಾಜದಲ್ಲಿ ಕ್ಷುದ್ರತೆಯ ಅನಾವರಣಕ್ಕೆ ನಾಂದಿ.
ವಚನಕಾರರಿಗೆ ಇದ್ದ ಭಾಷೆಯ ಬಳಕೆಯಲ್ಲಿನ ಬಹುಸೂಕ್ಷ್ಮತೆ ಬೆರಗಾಗಿಸುತ್ತದೆ. ಒಂದು ಕ್ರಿಯಾಪದವನ್ನ ಬಳಸುವಾಗಲಂತೂ ಅವರಲ್ಲಿನ ಸದ್ಯ-ಶಾಶ್ವತವನ್ನ ಹಿಡಿದಿಡುವಲ್ಲಿ ಅನುಭವ-ಅನುಭಾವ ಅಥವಾ ಭವಿಷ್ಯವನ್ನು ನುಡಿಯುವ ಮುಂಗಾಣ್ಕೆ, ಎಲ್ಲ ಕಾಲದಲ್ಲಿಯೂ ಅವರನ್ನು ಸಲ್ಲುವಂತೆ ಮಾಡಿದೆ.
ಅಡಿಟಿಪ್ಪಣಿ
೦೧. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ ಎಂ ಕಲಬುರಗಿ. ಪು ೯೭೩ ಮತ್ತು ೯೭೪ (೨೦೧೬)
೦೨. ಪೀಠಿಕೆಗಳು ಲೇಖನಗಳು. ಡಿ ಎಲ್ ನರಸಿಂಹಾಚಾರ್. ಪುಟ ೪೬೯. (೧೯೭೧)
೦೩. ಶಿವಶರಣ ಕಥಾರತ್ನಕೋಶ. ತ ಸು ಶಾಮರಾಯ. ಪುಟ ೦೪. (೧೯೬೭)
೦೪. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ ಎಂ ಕಲರ‍್ಗಿ. ಪು ೯೩೫. (೨೦೧೬)
೦೫. ಪ್ರಾಚೀನ ಕನ್ನಡ ಸಾಹಿತ್ಯದ ಸಮಗ್ರ ಸೂಚಿ-೧. ಡಾ. ಆರ್. ಚಲಪತಿ. ಪು ೧೧೮. (೨೦೧೮)
೦೬. ಪೀಠಿಕೆಗಳು ಲೇಖನಗಳು. ಡಿ ಎಲ್ ನರಸಿಂಹಾಚಾರ್. ಪುಟ ೪೬೨. (೧೯೭೧)
೦೭. ನೋಡಿ
ಕರ್ಣಾಟಕ ಕವಿಚರಿತೆ. ಆರ್. ನರಸಿಂಹಾಚರ‍್ಯ. ಪು ೯೮. (೧೯೨೪)
ಪೀಠಿಕೆಗಳು ಲೇಖನಗಳು. ಡಿ ಎಲ್ ನರಸಿಂಹಾಚಾರ್. ಪು ೪೬೯ (೧೯೭೧)
೦೮. ಮರೆತುಹೋದ ಮಹಾ ಸಾಮ್ರಾಜ್ಯ. ಕನ್ನಡಕ್ಕೆ ಸದಾನಂದ ಕನವಳ್ಳಿ. ಪು ೪೩೨. (೧೯೯೨)
೦೯. ವಿಜಯನಗರ ಸಾಮ್ರಾಜ್ಯ. ಶ್ರೀ ದೇಸಾಯಿ ಪಾಂಡುರಂಗರಾಯರು. ವಿಜಯನಗರ ಸ್ಮಾರಕೋತ್ಸವ ಮಂಡಲ. ಧಾರವಾಡ. ಪು ೫೩. (೧೯೩೬)
೧೦. ಪರ‍್ವೋಕ್ತ
೧೧. ನೋಡಿ
ಕರ್ಣಾಟಕ ಕವಿಚರಿತೆ. ಆರ್. ನರಸಿಂಹಾರ‍್ಯ. ಪು ೯೮. (೧೯೨೪)
ಪೀಠಿಕೆಗಳು ಲೇಖನಗಳು. ಡಿ ಎಲ್ ನರಸಿಂಹಾಚಾರ್. ಪು ೪೬೯(೧೯೭೧)
೧೨. ಮುದುಗಲ್ ರೈತನೊಬ್ಬನ ಸುಂದರಿಯಾದ ಮಗಳನ್ನು ತಾನು ಪಡೆಯಲೋಸುಗ ರಾಯನು ಕೈಗೊಂಡ ಹುಚ್ಚು ಸಾಹಸಕ್ಕೆ ಈ ಕಥೆ ಸಂಬಂಧಿಸಿದೆ. ಅವಳನ್ನು ಪಡೆಯುವ ಅವನ ಇಚ್ಛೆ ಯಾವ ಮಟ್ಟ ತಲುಪಿತೆಂದರೆ ಆ ಹುಡುಗಿಯನ್ನು ವಶಪಡಿಸಿಕೊಂಡು ತನ್ನ ಅಂತಃಪುರಕ್ಕೆ ಸೇಸಿಕೊಳ್ಳುವ ಏಕಮಾತ್ರ ಉದ್ದೇಶದಿಂದ ತುಂಗಭದ್ರಾದ ಉತ್ತರಕ್ಕಿರುವ ಪ್ರದೇಶದಲ್ಲಿ ದಂಡಯಾತ್ರ ಕೈಗೊಂಡ. (ಪು ೬೧)
ಬೀಜನಗರಕ್ಕೆ ಬಂದು ಬ್ರಾಹ್ಮಣ ತನ್ನ ಯೋಜನೆ ವಿಫಲವಾದುದನ್ನು ವಿವರಿಸಿದಾಗ ರಾಜನ ಪ್ರೇಮ ಹುಚ್ಚಿಗೆ ತಿರುಗಿತು, ಮತ್ತು ತನ್ನ ಪ್ರೇಮದ ವಸ್ತು ಫಿರೋಜ್ ಶಾಹನ ರಾಜ್ಯದ೧ ಕೇಂದ್ರದಲ್ಲಿ ವಾಸಿಸುತ್ತಿದ್ದರೂ ಅವನು ಬಲಪ್ರಯೋಗದಿಂದ ತನ್ನ ಆಸೆ ಈಡೇರಿಸಿಕೊಳ್ಳಲು ರ‍್ಧರಿಸಿದ. ಈ ಉದ್ದೇಶಕ್ಕಾಗಿ ತನ್ನ ಪ್ರಾಂತಗಳ ಪ್ರವಾಸ ಕೈಗೊಳ್ಳುವ ನೆಪದಲ್ಲಿ ದೊಡ್ಡ ಸೈನ್ಯದೊಂದಿಗೆ ಬೀಜನಗರದಿಂದ ಹೊರಟ; ತಮೆದ್ರಾ ನದಿಯ ದಡಗಳನ್ನು ತಲುಪಿದಾಗ ಐದು ಸಾವಿರ ಶ್ರೇಷ್ಠ ಅಶ್ವಾರೋಹಿಗಳನ್ನು ಆಯ್ದು ತನ್ನ ನಡತೆಯ ಲಗಾಮನ್ನು ಪ್ರೇಮಕ್ಕೆ ಒಪ್ಪಿಸಿ, ಗೆಳೆಯರ ವಿನಂತಿಗಳನ್ನೂ ಲೆಕ್ಕಿಸದೆ, ಹಗಲು ರಾತ್ರಿ ಅತ್ಯಂತ ವೇಗವಾಗಿ ಮುದುಗಲ್ ಗೆ೨ ಸಾಗಿ ರ‍್ತಾಲ್೩ ಇದ್ದ ಗ್ರಾಮವನ್ನು ಸುತ್ತುಗಟ್ಟಿ, ಅವಳನ್ನು ಅವಳ ಇಡೀ ಕುಟುಂಬದೊಂದಿಗೆ ಗಾಯ ಮಾಡದೆ ಸೆರೆಹಿಡಿದು ತನ್ನಲ್ಲಿಗೆ ತರಬೇಕೆಂದು ಆಜ್ಞಾಪಿಸಿದ. (ಪು ೬೩)
ಟಿಪ್ಪಣಿ
೧. ಕಥೆ ಹೇಳುವವನು ನಿಷ್ಠಾವಂತ ಮಹಮ್ಮದೀಯನೆಂಬುದನ್ನು ನೆನಪಿಡಬೇಕು. ಮುದುಗಲ್ ಎರಡೂ ರಾಜ್ಯಗಳ ಮಧ್ಯೆ ಯಾವಾಲಗೂ ವಾದಗ್ರಸ್ತವಾಗಿದ್ದ ಪ್ರದೇಶದಲ್ಲಿತ್ತು.
೨. ಸುಮಾರು ನಲವತ್ತು ಮೈಲು
೩. ಬ್ರಿಗ್ಜ್ ಅವಳನ್ನು ‘ನೆಹಾಲ್’ ಎಂದು ಹೆಸರಿಸುತ್ತಾನೆ.
ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ. ಮೂಲ: ರಾವರ್ಟ್ ಸಿವೆಲ್ ಕನ್ನಡಕ್ಕೆ: ಸದಾನಂದ ಕನವಳ್ಳಿ. ಪುಟ ೬೧ ಮತ್ತು ೬೨. (೧೯೯೨)
೧೩. Harihara died in 1404, and two years later his son Devaraya 1 started a war, according to Ferista, on account of prettygirl, the daughter of a goldsmith of mudagal. Who had caught his fancy….
A History of SOUTH INDIA (from Prehistorc time to the Fall of Vijayanagara). K. A. Nilakanata Sastri. Third edition. Oxford university press. P 246 to 247 (1966)
***************************************************
ಆರ್.ದಿಲೀಪ್ ಕುಮಾರ್
ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.
ಪಾಂಡಿತ್ಯಕ್ಕೊಂದು ಸಲಾಂ ದಿಲೀಪ್ ಜೀ..