ಆಡುಭಾಷೆಯ ಸವಿ ಗೋದಾನ.

ಪುಸ್ತಕ ಸಂಗಾತಿ

ಆಡುಭಾಷೆಯ ಸವಿ     ಗೋದಾನ.

ಕನ್ನಡ ನುಡಿ’  ಯನ್ನು   ಮೂರು ರೀತಿಯಿಂದ ಅಭಿವ್ಯಕ್ತ    ಗೊಳಿಸಬಹುದೆಂದು ಗೊತ್ತಿರುವ ಸಂಗತಿ. ಅದು ಶಿಷ್ಟ, ಜಾನಪದ ಮತ್ತು ಆಡು ಭಾಷೆ.ನಾನು,ನೀವೂ ಸೇರಿದಂತೆ ಬರಹಗಾರ,ಬರಹಗಾರ್ತಿಯರು, ಅರಿತೋ ಅರಿಯದೆಯೋ,ಗ್ರಾಂಥಿಕ ಭಾಷೆಗೆ ಮರುಳಾಗಿಬಿಟ್ಟಿದ್ದೇವೆ.ಜನಪದ ಭಾಷೆಗೆ ಹತ್ತಿರ ವಾಗಿದ್ದ,ಅಡುಕನ್ನಡವನ್ನು ಜೀವಂತವಾಗಿಟ್ಟವರು ನಮ್ಮ ಗ್ರಾಮೀಣ ಜನಾಂಗ.ಅವರಿಗೆ ಶಿಷ್ಟ ಜನಗಳು ಮಾಡುತ್ತಿರುವ ಅನ್ಯಾಯ ಇದು ಎಂದೇ ಹೇಳಬಹುದು ಎಂದು ನಾನು ಇದೇ ಅಂಕಣದಲ್ಲಿ ಈ ‌ಮೊದಲೇ ಹೇಳಿದಂತೆ ನೆನಪು.

ನಮ್ಮ ಓದು ,ಕತೆ,ವಸ್ತು,ಪಾತ್ರ,ವಾಕ್ಯ ರಚನೆ ಗಳ ಜೊತೆಗೆ ಭಾಷಾ ಸಂಪತ್ತಿನ ಕಡೆಗೂ ಜ್ಞಾನ ಹಾಯಿಸಿದಾಗ ಬಳಕೆಯಾದ ಭಾಷೆಯ ಪ್ರಭೇದ  ಗಮನಕ್ಕೆ ಬರುವಂತಾಗುತ್ತದೆ.

ಆಗ ಮಾತ್ರ,ನಮ್ಮ ರಾಚನಿಕ ಕ್ರಿಯೆಯಲ್ಲಿ ಅದು ಪದ್ಯವೇಆಗಿರಲಿ,ಗದ್ಯವೇ ಆಗಿರಲಿ, ನಮ್ಮ ಆಯ್ಕೆಯ ಭಾಷೆ ಎಂತಹದು,  ಅದು ಎಷ್ಟು,ಹಿತ ಮತ್ತು  ಸಹ್ಯ  ಎನ್ನು ವುದರ ಕಡೆಗೆ ನಮ್ಮ ಒಲವು ಸಹಜವಾಗಿ ಬೆಳೆಯುತ್ತದೆ.

ಈ ಹಿನ್ನೆಲೆಯಲ್ಲಿ ಶೀಕಾಂತ  ಕಕ್ಕೇರಿಯವರು ರಚಿಸಿದ, ಮುನ್ಷಿ ಪ್ರೇಮಚಂದ ಅವರ ಕಾದಂಬರಿ,’ಗೋದಾನ ‘ ಆಧಾರಿತ ಅದೇ ಶೀರ್ಷಿಕೆಯ ನಾಟಕವನ್ನು ನೋಡಬೇಕಾಗುತ್ತದೆ.ಅಚ್ಚ ಹೈದರಾಬಾದ್ ಕರ್ನಾಟಕದ ಭಾಷೆಯಲ್ಲಿ ರಚಿತವಾಗಿರುವ ಇದು ೩೯೦ ಪುಟಗಳ,೪೩ ಪಾತ್ರಗಳ,೩೪ ದೃಶ್ಯಗಳ ( ಅಂಕಗಳು ಎಂದು ವಿಭಜನೆಯಿಲ್ಲ) ಸುದೀರ್ಘಾವಧಿಯ ನಾಟಕ.

ಇದು ನನಗೆ ಖುಷಿ ನೀಡಲು ಕಾರಣವಾದ ಎರಡು ಸಂಗತಿಗಳನ್ನು ಹೇಳಿ ವಿಷಯ ಪ್ರವೇಶಿಸಲು ಇಷ್ಟಪಡುತ್ತೇನೆ ೧. ಗೋದಾನ ನಾಟಕದ ಭಾಷೆ, (ಮೇಲೆ ಹೇಳಿದ ಆಡು ಭಾಷೆ) .೨. ಶ್ರೀಕಾಂತ ಕಕ್ಕೇರಿಯವರ ಹೈದರಾಬಾದ್ ನಲ್ಲಿ ಹುಟ್ಟಿ ಬೆಳೆದವರು. ಪ್ರತಿಷ್ಟಿತ ನೃಪತುಂಗ ಶಾಲೆಯ ವಿದ್ಯಾರ್ಥಿ ಮತ್ತು ಉಸ್ಮಾನಿಯ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಪದವೀಧರರು. ರಾಯಚೂರು ಕಲಬುರ್ಗಿಗಳ ಇಂಜನಿಯರಿಂಗ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರು.ಸಮುದಾಯ ಸಂಘಟನೆಯೊಂದಿಗೆ ಗುರುತಿಸಿ ಕೊಂಡವರು.ಉತ್ತಮ ನಾಟಕಕಾರರು,ನಟರೂ,ರಂಗತಜ್ಞರೂ ಹೌದು.

ಇಷ್ಟೆಲ್ಲ ಹೇಳಿಯಾದ ಮೇಲೆ ಗೋದಾನ ನಾಟಕದ ವೈಶಿಷ್ಟ್ಯ ಕುರಿತು ಹೇಳಬೆಕಾಗಿಲ್ಲಎಂದು ಕೊಳ್ಳಲೇ ? ಆದರೂ ಪರಿಚಯಾತ್ಮಕ ವಾಗಿ ಒಂದೆರಡು ಮಾತು ಅಗತ್ಯ ಎನಿಸುತ್ತಿದೆ.

ಹಾಗೆ ನೋಡಿದರೆ,  ನಮ್ಮಲ್ಲಿ   ದಲಿತ ಸಾಹಿತ್ಯ ತನ್ನದೇ ಆದ ನೆಲೆ ಕಂಡುಕೊಂಡಿದ್ದು ೧೯೭೦ ಸುಮಾರಿಗೆ ಎಂದು ಹೇಳಬಹುದು.ದಲಿತ ಜನಾಂಗದ ವಿರುದ್ದ ಆಗುತ್ತ ಬಂದಿರುವ, ಅನ್ಯಾಯ, ಅತ್ಯಾಚಾರದ ವಿರುದ್ಧ ಸಿಡಿದೆದ್ದು ನಡೆದ ಹೋರಾಟವನ್ನೇ ಕನ್ನಡ ಸಾಹಿತ್ಯ ಬಂಡಾಯ ಚಳುವಳಿ ಎಂದು ಗುರುತಿಸಲಾಯಿತು.

ಮತ್ತು ಜನಾಂಗದ ವಿರುದ್ಧ ಉಂಟಾದ ದಬ್ಬಾಳಿಕೆಗಳು ಅಕ್ಷರರೂಪ ಪಡೆದುಬಂದ ಸಾಹಿತ್ಯವೇ ದಲಿತ ಸಾಹಿತ್ಯ ಎನಿಸಿಕೊಂಡಿತು.ಇನ್ನೂ ಹೇಳುವದಾದರೆ,ದಲಿತ ಸಾಹಿತ್ಯದ ಕುರುಹು ನಮಗೆ ೧೧ ನೆಯ ಶತಮಾನದಲ್ಲಿ ಸಿಗುತ್ತವೆ.ಕಲ್ಯಾಣ ಕ್ರಾಂತಿಯ ತಳಹದಿ,ದಲಿತ ಬಂಡಾಯ ಸಾಹಿತ್ಯದ ನಾಂದಿ ಎಂದೇ ಹೇಳಬಹುದು.ತೆಲುಗಿನ ವಿಪ್ಲವ ಸಂಘಟನಕಾರರಾದ,ಶ್ರೀ ವರವರರಾವ ಹೇಳಿದ ಮಾತೊಂದು ನೆನಪಿಗೆ ಬಂತು.” ವಿಪ್ಲವ ಸಂಘಟನೆಯ ಮೂಲ ಬೇರುಗಳನ್ನು ನಾವು  ಬಸವಣ್ಣನವರ ವಿಚಾರಧಾರೆ ಯಲ್ಲಿ ಕಾಣುತ್ತೇವೆ ” ಅಂದಿನ ದಿನಗಳಲ್ಲಿಯ ‘ಸಾಯುಧ ಪೋರಾಟ’ ವಿರಸಂ ಸ್ಥಾಪನೆ,ಜನನಾಟ್ಯಮಂಡಲಿ,ದಿಗಂಬರ ಕವಿಗಳು, ಹೀಗೆ ಎಲ್ಲವೂ ಆಂಧ್ರ-ತೆಲಂಗಾಣಗಳಲ್ಲಿ ನಡೆದ ಹೋರಾಟಗಳು ನೆನಪಿಗೆ ಬರುತ್ತವೆ..ಕನ್ನಡ ಸಾಹಿತ್ಯ ಸಂದರ್ಭಕ್ಕೆ ಬಂದಾಗ, ಕುವೆಂಪು,ಕಾರಂತ ಮುಂತಾದವರು ತಮ್ಮಕೃತಿಗಳಲ್ಲಿ ಈ ಶೋಷಣೆಯ ವಿರುದ್ದ ದನಿ ಎತ್ತಿ ದಲಿತ ಸಾಹಿತ್ಯಕ್ಕೆ ನಾಂದಿ ಹಾಡಿದರು. ನಂತರದ ದಿನಗಳಲ್ಲಿ ಬರಗೂರು ರಾಮಚಂದ್ರಪ್ಪ,ದೇವನೂರು ಮಹದೇವ,ಚೆನ್ನಣ್ಣ ವಾಲಿಕಾರನಂತವರು ಇದಕ್ಕೆ ಒಳ್ಳೆಯ ತಿರುವು ನೀಡಿದರು.   ಬಂಡಾಯ ಸಾಹಿತ್ಯ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿ ಇರುವಾಗ,ದಲಿತರು ಬರೆದದ್ದೇ ದಲಿತ ಸಾಹಿತ್ಯ ಎನ್ನುವ ವಾದವೂ ಕೇಳಿ ಬಂದಿತು. ಅದಿಲ್ಲಿ ಬೇಡ. ಮುನ್ಷಿ ಪ್ರೇಮಚಂದರ ‘ಗೋದಾನ’ವೂ  ಇದೇ ವಿಷಯವನ್ನು ಪ್ರತಿಪಾದಿಸಿರುವುದು ನೋಡಿದಾಗ ಇಂತಹ ಬದುಕು ಮತ್ತದರ ವಿರುದ್ಧದ ದನಿ ದೇಶಾದ್ಯಂತ ಒಕ್ಕೊರಲಿನಿಂದ  ಸಾಗಿ ಬಂದಿದೆ ಇಂದಿಗೂ ಅದು ಕೇಳಿ ಬರುತ್ತಲೇ ಇದೆ. ಎಂದೇ ಹೇಳಬಹುದು

ಕ್ರಿ.ಶ.೧೯೩೬ ರಲ್ಲಿದ್ದ ದೇಶದ ಪರಿಸ್ಥಿತಿಗಳಾದ,ಜಮೀನುದಾರಿ, ವಸಾಹತು ಶಾಹಿ,ಹೊಸದನ್ನು ಒಪ್ಪಿ ಕೊಳ್ಳದ, ಹಳೆಯದನ್ನೂ ಬಿಡಲಿಚ್ಛಿಸದ,ಹಮ್ಮಿನ ವಿಲಾಸೀ ಜೀವನಕ್ಕೆ ಒಗ್ಗಿಹೋದ,ಊರ ಜಹಗೀರದಾರರುಗಳಾದ, ರಾಜಾಸಾಬ್, ಬಾಪುಸಾಬ್, ಅವರಿಗೆ ಸಾಲಕೊಟ್ಟು ಆ ಹಣದಲ್ಲಿಯೇ,ಜಹಗೀರದಾರಗಳೊಂದಿಗೆ, ವಿಲಾಸಿ ಜೀವನ ನಡೆಸುವ ಪಟ್ಟಣವಾಸಿಗಳು.

ಜಹಗೀರದಾರರರ  ಬಾಲ ಬಡುಕರಾಗಿ,ಅವರ ಹೆಸರಿನಲ್ಲ ರೈತಾಪಿ ಜನಗಳ ಶೋಷಣೆ ಮಾಡುತ್ತ ಸಿರಿವಂತ ರಾಗಿ ಬೆಂದ ಮನೆಯ ಗಳ ಹಿರಿದು ಕೊಳ್ಳಲು ಸದಾ ಅತೀ ದುಷ್ಟ ಮತ್ತು ಅಮಾನವೀಯ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ,  ತಿಪ್ಪಣ್ಣಾಚಾರ,ವೆಂಕಪ್ಪ ಕುಲಕರ್ಣಿ,ಸೀನಪ್ಪ ಸೆಟ್ಟಿ ಹೀಗೆ  ಸ್ವಾತಂತ್ರ ಪೂರ್ವ ಬದುಕಿನ ಭರ್ಝರಿ  ವಸ್ತು ಮತ್ತು ಹಿನ್ನೆಲೆ ಗೋದಾನಕ್ಕಿದೆ.

ನಾಟಕದ ಮುಖ್ಯ ಪಾತ್ರಧಾರಿ ನಿಂಗಪ್ಪನ ಸುತ್ತ ತಿರುಗುವ ಗೋದಾನ ನಾಟಕದ ಈ ನಾಯಕ ನನ್ನು ಶೋಷಿಸದವರೇ ಇಲ್ಲ ಎನ್ನುವುದು ಸರಿ .ಆದರೂ ಅವನು ತಾನು ನಂಬಿದ ಒಳ್ಳೆಯ ಗುಣಗಳನ್ನು ಎಂತಹ ಪರಿಸ್ಥಿತಿಯಲ್ಲೂ ರಾಜಿ ಮಾಡಿಕೊಳ್ಳದ ಉಸಿರಿರುವತನಕ ಮರ್ಯಾದೆಗೆ ಮಹತ್ವಕೊಟ್ಟ ವ್ಯಕ್ತಿ ನಿಂಗಪ್ಪ.

ಅಂಕದ ಪರದೆ ಮೇಲೇರುತ್ತಿದ್ದಂತೆ ,ನಿಂಗಪ್ಪನ ಸಂಭಾಷಣೆಯೊಂದಿಗೇನೆ ನಾಟಕ ಆರಂಭವಾಗುತ್ತದೆ.

‘ನಿಂಗ ತಿಳಿಲಾರದ್ರಾಗ ತಲೀ ಹಾಕಾಕ ಬರಬ್ಯಾಡ,ಸುಮ್ಕ ನನ ಕೋಲು ಕೊಡು,ನಿನ್ನ ಕೆಲಸಾ ಏನೈತಿ ಆಟು ಮಾಡು,ನಾನು ನಾಕ ಮಂದ್ಯಾಗ ಓಡ್ಯಾಡತೀನಿ ಅಂತ ಜೀವಂತ ಅದೀನಿ.ಇಲ್ಲಾಂದ್ರ ನಮ್ಮ ಗತಿ ಏನಾಕ್ಕಿತ್ತೋ ಅಂತ ಆ ಶಿವಗss ಗೊತ್ತು.ಊರಾಗ ಇಷ್ಟು ಜನ ಅದಾರು,ಒಬ್ಬರ ಮ್ಯಾಗ ಜೋರು ಜಬರ ದಸ್ತಿ ಇಲ್ಲ. ಒಬ್ಬರ ಮ್ಯಾಗ ಯಾವ ಖಟ್ಲೇನೂ ಇಲ್ಲ.ಒಬ್ಬರ ಕೈ ಕೆಳಗ ದುಡಿತೀವಿ ಅಂದಮ್ಯಾಕ ಅವ್ರ ಕಾಲ ಹಿಡ್ಕೊಂಡು ಬದಕೊದೆ ಪಾಡss”

ಇದು ಕಕ್ಕೇರಿಯವರಿಗೆ ಭಾಷೆಯ ಮೇಲಿರುವ ಬಿಸುಪು.ಇಡೀ 390 ಪುಟಗಳುದ್ದಕ್ಕೂ ಒಂದೇ ಹದ ಒಂದೇ ಸಂಯಮ. ಆಕಳ ಹೊಟ್ಟೆಯಲ್ಲಿ ಅಚ್ಛೇರು ಬಂಗಾರ ಎನ್ನುವ ಮಾತಿನಂತೆ, ಆಕಳ ಮಹತ್ವವನ್ನು ಪ್ರಾರಂಭದ ದೃಶ್ಯವೇ ನಮಗೆ ಮನನ ಮಾಡಿಕೊಡುತ್ತದೆ.ಹೆಚ್ಚು ಹಣ ಬರುವದೆಂದು ತಿಳಿದರೂ ಸವ್ಕಾರನಿಗೆ ಅದನ್ನು ಮಾರಲು,ನಿರಾಕರಿಸುವ ಲಕ್ಷ್ಮಣ ನಲ್ಲಿ ಗೋಸಂಪತ್ತಿನ ಮಹತ್ವತೆಯ  ಅರಿವಿದೆ. ‘ ಅಂವಗೆಲ್ಲಿ ಆಕಳಾ ಬೇಕಾಗೇತಿ,ಅದನ್ನ ಒಯ್ದು,ಯಾರೆರೆ ಆಫಿಸರರ್ಗೊಳಿಗೆ ಕಾಣಿಕಿ ಕೊಡತಾನ.ಅವ್ರಿಗೆ ಗೋ ಸೇವಾ ಮಾಡೋದೆಲ್ಲಿ ಬೇಕಾಗೇತಿ ? ಅವ್ರಿಗೆ ರಕ್ತ ಹೀರೊದೊಂದು ಗೊತ್ತೈತಿ.’………..ನಮಗೂ ಧರ್ಮ ಕರ್ಮ ಅನ್ನೋದು ಐತಿ……..ಅದರ ಸೇವಾ ಮಾಡತಿss,ಅದಕ್ಕ ಪ್ರೀತಿ ತೊರುಸ್ತಿss ಆಗ ಗೋಮಾತ ನಮಗ ಆಸೀರ್ವಾದ ಮಾಡ್ಯಾಳು’.ಗೋದಾನ ಶೀರ್ಷಿಕೆಗೆ ಶಿಖರ ಪ್ರಾಯದಂತಿರುವ ಈ ಮಾತಿನ ಸುತ್ತಮುತ್ತ ನಾಟಕ ದ ವಸ್ತು ತಿರುಗುತ್ತದೆ. ನಿಂಗಪ್ಪ, ಒಕ್ಜಲುತನ,ಗೇಣಿ,ಕಂದಾಯ,ಸಾಲ,ಜಮೀನು ಒತ್ತೆ,ಊರ ಜಹಗೀರದಾರ,ಮುಂತಾದವುಗಳ ಸುಳಿಯಲ್ಲಿ ಸಿಲುಕಿ ಗಿರಕಿ ಹೊಡೆಯುತ್ತ ತನ್ನ ಬಡತನದಲ್ಲಿ ಬೆಂದು ಬಸವಳಿದರೂ,ಮರ್ಯಾದೆಯನ್ನು,ರಕ್ಷಸಿಕೊಳ್ಲುತ್ತ,ಬೇರೆಯವರ ಕಷ್ಟ ಕೋಟಲೆಗಳನ್ನು,ತನ್ನದೆಂದೇ ತಿಳಿದು ಅವರಿಗೆ ಸಹಾಯ ಹಸ್ತ ಚಾಚುತ್ತ, ಸುಖವನ್ನು ಕಾಣದೆ ಕೊನೆಯುಸಿರೆಳೆಯುತ್ತಾನೆ

ಅವನ ಕ್ಷಮೆ ಗುಣಕ್ಕೆ ಅನೇಕ ದೃಷ್ಟಾಂತಗಳು ನಾಟಕದ ಉದ್ದಕ್ಕೂ ಸಿಗುತ್ತವೆ . ತನ್ನ ಆಕಳಿಗೆ ಒಡಹುಟ್ಟಿದ ತಮ್ಮನೇ ವಿಷಹಾಕಿ ಕೊಂದರೂ ಅವನನ್ನು  ಕ್ಷಮಿಸುವ ದೊಡ್ಡ ಗುಣ,ಅಪರಾಧಿ ಭಾವನೆಯಿಂದ ಊರಿನಿಂದ ಪರಾರಿಯಾದ ತಮ್ಮನ ಹೆಂಡತಿ ದಯನೀಯ ಸ್ಥಿತಿ ಹೊಂದಿದಾಗ ಅವಳನ್ನು ರಕ್ಷಿಸುವುದು, ಸ್ವಂತ ಮಗನೇ ಪರರ ಹೆಣ್ಣನ್ನು.  ಮದುವೆಯಾಗಿ ತಂದು ಮನೆಯಲ್ಲಿ ಬಿಟ್ಟು ಓಡಿ ಹೋದಾಗ ಅರ್ಧ ಊರಿನ ಜನವೇ ಎದುರು ನಿಂತರೂ ಅವಳಿಗೆ ಆಶ್ರಯ ನೀಡಿ ರಕ್ಷಿಸುವುದು,  ಸಂಗತಿಗಳು ಬಹಳ ಪರಿಣಾಮಕಾರಿಯಾಗಿವೆ. ಇಡೀ ಊರು ಒಂದಾಗಿ ನಿಂಗಪ್ಪ ನನ್ನು ಶೊಷಿಸಿ ಅವನನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದರೂ ,ಎದೆ ಕೊಟ್ಟು ನಿಲ್ಲುವ ದೃಶ್ಯ ಮನ ಮಿಡಿಯುವಂತಿದೆ.ಹಾಗೆಯೇ ದಾನವ್ವನ ಪಾತ್ರ ಸಹ,ಇಡೀನಾಟಕದ ಜೀವಾಳವೆನ್ನುವಂತಿದೆ.ನಿಂಗಪ್ಪನನ್ನು ಪ್ರತಿ ಕಷ್ಟದ ಸಂದರ್ಭದಲ್ಲಿ ಅವನಿಗೆ ಹೆಗಲುಕೊಟ್ಟು ನಿಲ್ಲುವ ಮತ್ತು ಅವನಿಗೆ ಮೋಸ ಮಾಡಿದವರ ಜೊತೆ ಅವರು ಯಾರೇ ಇರಲಿ ಅವರೊಂದಿಗೆ ಜಗಳ ಕಾಯುವ ದಾನವ್ವನ ಪಾತ್ರವೂ ನಮ್ಮ ಮನ ಗೆಲ್ಕುವಂತೆ ಚಿತ್ರಿತವಾಗಿದೆ. ಅವಳ ಹೇಳುವ ಸಂಭಾಷಣೆಯನ್ನು ನಾಟಕಕಾರರು ಅಷ್ಟೇ ಹರಿತವಾಗಿ ರಚಿಸಿದ್ದಾರೆ.ಒಂದು ತುಣುಕು:

” ನಾ ಒಂದು ಕಾಳೂ ಕೊಡಾಂಗಿಲ್ಲ.ಒಂದು ಪೈ ದಂಡಾ ಕೊಡಾಂಗಿಲ್ಲ.ದಮ್ಮಿದ್ದವರು ಬಂದು ನನ್ನ ಕಡಿಂದ ವಸೂಲ ಮಾಡಲಿ.ಛಲೋ ಆಟಾ ಹೂಡ್ಯಾರss ದಂಡದ ನೆವಾ ಮಾಡಿss ನಮ್ಮ ಆಸ್ತಿನೆಲ್ಲಾ ಕಸಗೊಂಡು ಬ್ಯಾರೋರಿಗೆ ಕೊಟ್ಟ ಬಿಡಬೌದು ಅಂತ ವಿಚಾರ ಮಾಡಿರೇನೋ ? ನಮ್ಮ ಹೊಲಾ ತ್ವಾಟಾ ಎಲ್ಲ ಮಾರಿ ಮಸ್ತಿ ಮಾಡಬೌದ ಅನಕೊಂಡೀರೆನೋ ? ಆದ್ರ ಈ ದಾನವ್ವ ಜೀವಂತ ಇರೋತನ ಅದ್ಯಾವ್ದೂ ನಡಗುಡಾಂಗಿಲ್ಲ……” ಎನ್ಉವ ದಾನವ್ವ ನಮಗೆ ಹೋರಾಟದ ಬದುಕಿನ ಮಹಾನ ಮಹಿಳೆ ಎನಿಸುತ್ತಾಳೆ.

 ಉಳಿದೆಲ್ಲ ಪಾತ್ರಗಳು ಪೂರಕ ಪಾತ್ರಗಳಾಗಿ ಶಹರಿನ ವಿಲಾಸೀ ಜೀವನವನ್ನು  ಆದಷ್ಟೂ ಬೇರೆಯವರ ಹಣದಲ್ಲಿ ಚೈನಿ ಮಾಡುವ ಪಾತ್ರಗಳಾಗಿ ,ಒಂದು ರೀತಿಯ ಒಣಹಮ್ಮಿನಲ್ಲಿ ಬದುಕುವಂತೆ ಕಾಣುತ್ತವೆ.

ಕಕ್ಕೇರಿವರ ಒಂದು ವಿಶೇಷತೆ ಎಂದರೆ ಇಡೀ ನಾಟಕ,ಮತ್ತು ಮೂಲ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳನ್ನು ಒಂದು ಚೂರೂ ಮೂಲಕ್ಕೇ ಚ್ಯತಿ ಬಾರದಂತೆ ಮತ್ತು ನಮ್ಮ ಗ್ರಾಮೀಣ ಸಂಸ್ಕೃತಿಗೆ ಸರಿದೂಗುವಂತೆ ಮಾರ್ಪಾಟು ಮಾಡಿಕೊಂಡಿದ್ದು.ನಾಟಕದ ಎಲ್ಲಾ ವ್ಯವಹಾರಗಳು,  ಮತ್ತು ಘಟನೆಗಳು  ನಮ್ಮ ಊರಿನ ನಮ್ಮ ಕಣ್ಣೆದುರೇ ನಡೆಯತ್ತವೆ ಎಂಬಂತೆ ಹೆಣೆಯಲ್ಲಟ್ಟಿವೆ. ಅದಕ್ಕಾಗಿ ಅವರು ಪಟ್ಟ ಶ್ರಮ,ಭಾಷೆಯ ಬಳಕೆಯಲ್ಲಿ ಕಾಪಡಿಕೊಂಡು ಬಂದಿರುವ ಸಂಯಮ ಅಚ್ಚರಿ ಪಡುವಂತದ್ದು.ಅಚ್ಚುಕಟ್ಟಾದ ಮತ್ತು ದೀರ್ಘವಾಗಿದ್ದರೂ ಓದಿಸಿಕೊಂಡು ಹೋಗುವ ಶಕ್ತಿ ತುಂಬಿರುವ ನಾಟಕಕಾರರು ,ಓದುಗರ ಮನಸ್ಸಿನ ಮೇಲೆ  ದಟ್ಟ ಪರಿಣಾಮ ಬೀರುವ ಸಂವೇದನಾ ಶೀಲ ನಾಟಕವಾಗಿದೆ.ಇದರಿಂದಾಗಿ  ಸರ್ವ ರೀತಿಯಿಂದ  ಅಭಿನಂದನಾರ್ಹರಾಗುತ್ತಾರೆ.

ಕೃತಿಗೆ ಬಹುಮೌಲಿಕ ಮುನ್ನುಡಿ ಬರೆದ ಸಿ.ಬಸವಲಿಂಗಯ್ಯ ನವರು ಒಂದು‌ಮಾತು ಹೇಳುತ್ತಾರೆ.’ ಮೂರು ನೆಲೆಯಲ್ಲಿ ಪಾತ್ರಗಳು,ಸಾಮಾಜಿಕ,ಆರ್ಥಿಕ, ಸಾಂಸ್ಕೃತಿಕ ನಡಾವಳಿಗಳಲ್ಲಿ ವಿಭಜನೆಗೊಂಡಿರುವುದು,……ಉತ್ತರ ಕರ್ನಾಟಕದಲ್ಲಿಯೇ ಹುಟ್ಟಿದೆ’ ಎಂಬ ಮಾತಿಗೆ ನಾನೂ ದನಿಗೂಡಿಸುತ್ತೇನೆ..

ಅವರೇ ಹೇಳುವಂತೆ ” ರಂಗ ಪ್ರಯೋಗಕ್ಕೆ ಅಳವಡಿಸುವಾಗ,ಕೆಲವು ದೀರ್ಘ ದೃಶ್ಯಗಳನ್ನು ಸಂಕ್ಷಿಪ್ತ ಗೊಳಿಸಿಕೊಳ್ಳುವುದು ಪ್ರೇಕ್ಷಕರ ಸಹನೆಯ ದೃಷ್ಟಿಯಿಂದ ಅವಶ್ಯಕವಾಗಿದೆ. ” ಎನ್ನುವ ವಿಚಾರಕ್ಕೆ ಎರಡು ಮಾತಿಲ್ಲ ಅದರ ರಂಗಪ್ರಯೋಗ ನೋಡುವ ಕುತೂಹಲ ನನಗೂ ಇದೆ.

**************************************************************

                        ಗೋನವಾರ ಕಿಶನ್ ರಾವ್

One thought on “ಆಡುಭಾಷೆಯ ಸವಿ ಗೋದಾನ.

  1. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಕಿಶನ್ ರಾವ್.

Leave a Reply

Back To Top