ಅಂಕಣ ಬರಹ

ಜೀವ ಜಂತುಗಳನ್ನು


ಸೂಕ್ಷ್ಮವಾಗಿ ಗಮನಿಸಿದರೆ, ಕಥೆ ಹುಟ್ಟುತ್ತದೆ “

ಸುರೇಶ್ ಹೆಗಡೆ

ಪರಿಚಯ:

ಸುರೇಶ್ ಹೆಗಡೆ  ಹೊನ್ನಾವರದ ಕರ್ಕಿ ಗ್ರಾಮದವರು‌ .1952 ಜನನ. ಇವರ ತಂದೆ ಚಂದ್ರ ಮಾಸ್ತರ ಇವರ ಗುರು. ಹೊನ್ನಾವರ ಕಾಲೇಜಿನಿಂದ ವಿಜ್ಞಾನದ ವಿಷಯದಲ್ಲಿ ಪದವಿ ಪಡೆದರು. 1973 ರಲ್ಲಿ ಕರ್ನಾಟಕ ವಿದ್ಯುತ್  ನಿಗಮದಲ್ಲಿ 38 ವರ್ಷ ನೌಕರಿ ಮಾಡಿ ನಿವೃತ್ತರಾಗಿದ್ದಾರೆ. ಕತೆ ಬರೆಯುತ್ತಿದ್ದ ಇವರು ,ಅವುಗಳನ್ನು ಪ್ರಕಟಿಸಿದ್ದು, ನಿವೃತ್ತಿ ನಂತರ. 2020 ರಲ್ಲಿ ಇವರ ಮೊದಲ ಕಥಾ ಸಂಕಲನ ಇನಾಸ ಮಾಮನ ಟಪಾಲು ಚೀಲ  ಪ್ರಕಟವಾಯಿತು. ಇದೇ ಹೆಸರಿನ ಕತೆ ಸಹ ತುಂಬಾ ಸೂಕ್ಷ್ಮ, ಸರಳವಾಗಿದೆ. ಚಿಕ್ಕಂದಿನಿಂದ ಯೌವ್ವನ ಕಾಲದ ಓದು ಇವರನ್ನು ಮಾಗಿಸಿದೆ. ಸುಧಾ ಮಯೂರ ಗಳಲ್ಲಿ ಬರೆಯುತ್ತಿದ್ದ ಇವರು , ನಾಟಕ ಅಭಿನಯದ ಹವ್ಯಾಸ ಸಹ ಹೊಂದಿದ್ದಾರೆ. ಆಕಾಶವಾಣಿಯಲ್ಲಿ ಸಹ ಭಾಗವಹಿಸುವಿಕೆ ಇದೆ. ನೆನಪುಗಳನ್ನು ಹೆಕ್ಕಿ ಬರೆಯುವ ಜಾಣತನ ಇವರಿಗೆ ಸಿದ್ಧಿಸಿದೆ. ಮಾನವೀಯ ಗುಣದ ಸುರೇಶ್ ಹೆಗಡೆ ಅವರು ಜಾತಿಯನ್ನು ಮೀರಿದ ಮನುಷ್ಯತ್ವ  ಹೊಂದಿದವರು ಎಂಬುದು ಮುಖ್ಯ.

…………

೧) ಕತೆಗಳನ್ನು ಯಾಕೆ ಬರೆಯುತ್ತೀರಿ?

 ಮುಖ್ಯವಾಗಿ ನಾನು ಕತೆಗಳನ್ನು ಬರೆಯುವುದು ನನ್ನೊಳಗಣ ತುಡಿತಕ್ಕಾಗಿ (urges)

 ಯಾವುದಾದರೂ ಗಳಿಗೆಯಲ್ಲಿ ಹೊಸ ವಿಚಾರ ಹೊಳೆದಾಗ,  ನನ್ನೊಳಗಣ ಹುಕಿ ಎಬ್ಬಿಸಿ ಕಥಾ

 ಹಂದರಕ್ಕೆ ಸಜ್ಜುಗೊಳಿಸುತ್ತದೆ.

೨) ಕತೆ ಹುಟ್ಟುವ ಕ್ಷಣ ಯಾವುದು?

 ಯಾವುದಾರೂ ಪುಸ್ತಕ ಓದುವಾಗ, ಹಿರಿಯರ ಜೊತೆ ಮಾತನಾಡುವಾಗ, ಸಮಾನ

 ಮನಸ್ಕರೊಂದಿಗೆ ಹರಟೆಗೆ ಇಳಿದಾಗ, ಪ್ರಕೃತಿಯ ವಿಕೃತಿಯನ್ನು ಗಮನಿಸಿದ ಕ್ಷಣಗಳಲ್ಲಿ ನನ್ನ

 ಕತೆಗಳು ಹುಟ್ಟಿಕೊಳ್ಳುತ್ತವೆ. ಯಾವುದಾದರು ಘಟನೆಗಳು ನನ್ನ ಭಾವನೆಗಳನ್ನ ತಟ್ಟಿದಾಗಲೂ

 ಭಾವನಾತ್ಮಕ ಕಥೆಗಳು ಹುಟ್ಟುತ್ತವೆ. ನಮ್ಮ ಸುತ್ತಣ ಪರಿಸರದಲ್ಲಿ ಒಂದಿಷ್ಟು ಜೀವ ಜಂತುಗಳನ್ನು

 ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲೊಂದು ಸುಂದರ ಕಥೆ ಮೂರ್ತಗೊಳ್ಳುತ್ತದೆ.

೩) ನಿಮ್ಮ ಕತೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು?

 ನನ್ನ ಜೀವನಾನುಭವದಿಂದ ಮೊಗೆದ ಘಟನೆಗಳು ಮತ್ತು ಅನುಭವಿಸುತ್ತಿರುವ ಪರಿಸರಗಳೇ ನನ್ನ

 ಕತೆಗಳ ವ್ಯಾಪ್ತಿ. ಬಾಲ್ಯದಲ್ಲಿ ನಾನು ಕಂಡ ಬಡತನ, ಮನೆತನ, ಗಳೆತನಗಳ ಮೆಲಕು, ಕಥೆಗಳಿಗೆ

 ಪುಷ್ಠಿ ಕೊಡುತ್ತವೆ.

ಬರೆಯಬಹುದಾಗಿದ್ದರೂ, ನಾನು ಈ ಮೊದಲೇಕೆ ಸುಮ್ಮನೆ ಕುಳಿತುಬಿಟ್ಟೆ ಎಂಬುದು ನನ್ನನ್ನು ಪದೇ ಪದೇ ಕಾಡುತ್ತದೆ.

೪) ಕತೆಯಲ್ಲಿ ಬಾಲ್ಯ, ಹರೆಯ ಇಣುಕಿದೆಯಾ?

 ಹೌದು, ನನ್ನ ಕತೆಯ ಹರಿಹದಲ್ಲಿ ಎಲ್ಲಾ  ಅವಸ್ಥೆಗಳೂ ಇವೆ. ಅವೇ ಕಥಾ ಪ್ರಸಂಗದ ಮೂಲ ವಸ್ತು.

೫) ಪ್ರಸ್ತುತ ರಾಜಕೀಯ ಸನ್ನಿವೇಷದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

 ಇಂದಿನ ರಾಜಕೀಯ ಎನ್ನುವುದೊಂದು ಡೊಂಬರಾಟ. ಸಾಹಿತ್ಯ ಮತ್ತು ರಾಜಕೀಯ ಪರಸ್ಪರ

 ವಿರೋಧಾಭಾಸದ ಪದಗಳು. ಸಾಹಿತಿಯಾದವನು ರಾಜಕೀಯ ಪಲ್ಲಟಗಳಿಗೆ ತಲೆ ಹಾಕಬಾರದು.

 ಆದರೆ ರಾಜಕೀಯ ಸ್ಥಿತ್ಯಂತರಗಳು ಸಾಹಿತಿಯ ಬರಹಕ್ಕೆ ಗ್ರಾಸವಾಗಬಹುದು. ರಾಜಕೀಯ

 ವಿಡಂಬನೆಗಳಿಂದ ಸಾಹಿತಿಯೊಬ್ಬ ಪ್ರಜೆಗಳ ಕಣ್ಣು ತೆರೆಸಬಲ್ಲ.

೬) ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು?

 ಪ್ರತಿ ಮನುಷ್ಯನಿಗೂ ಒಂದು ಧರ್ಮಬೇಕು. ಅದು ಅವನ ಅಸ್ಮಿತೆಯ ಅಷ್ಟಬಂಧ. ಆ

 ಧರ್ಮವನ್ನು ಗೌರವಿಸಿ ಪಾಲಿಸಿದರೆ, ಅದೇ ಧರ್ಮ ಅವನನ್ನು ರಕ್ಷಿಸುತ್ತದೆ. ದೇವರು

 ಎನ್ನುವುದೊಂದು ನಿರಾಕಾರ, ಆಗೋಚರ ಶಕ್ತಿ. ಅದು ಇಡೀ ವಿಶ್ವವನ್ನ ನಿಯಂತ್ರಿಸುವ

 ಮಹಾಕಾಯ. ಅದನ್ನೇ ಮನುಷ್ಯ, ವಿವಿಧ ಬಣ್ಣ, ಆಕಾರ, ಹೆಸರು ಕೊಟ್ಟು ಭಾವನೆಯಿಂದ

 ಪೂಜಿಸುತ್ತಾನೆ. ದೇವರ ಮೇಲನ ಭಯ, ಭಕ್ತಿಯಿಂದಲೇ ಮನುಷ್ಯ ಇಂದು ಇನ್ನೂ ಪೂರ್ಣ ಹದ

 ತಪ್ಪಿಲ್ಲ.‌

೭) ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಬಗ್ಗೆ ನಿಮಗೆ ಏನೆನ್ನಿಸುತ್ತದೆ?

 ನನಗನ್ನಿಸಿದಂತೆ ಸಂಸ್ಕೃತಿ ಕಲುಷಿತಗೊಂಡಿದೆ. ವಿತಂಡವಾದ, ಅವಹೇಳನ, ‘ಇಸಂ’ಗಳಿಗೆ

 ಮನುಷ್ಯ ಕಟ್ಟು ಬಿದ್ದಿದ್ದಾನೆ. ಇವುಗಳಿಂದ ಹೊರಬಂದು, ನಮ್ಮ ಪರಂಪರೆಯನ್ನು

 ಅರ್ಥಮಾಡಿಕೊಂಡರೆ ನಮ್ಮ ಅದೇ ಸುಸಂಸ್ಕೃತಿ ಉಳಿದುಕೊಳ್ಳುತ್ತದೆ.

೮) ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಯಿಸುವಿರಿ?

 ಇದೊಂದು ದೊಡ್ಡ ‘ಲಾಬಿ’ ಎಂದೇ ಹೇಳಬೇಕು. ಎಡ, ಬಲ, ಜಾತಿ, ಕುಲ, ಪರಿವಾರ ಎನ್ನುತ್ತ,

 ಬಿರುದು ಬಾವಲಿ, ಪ್ರಶಸ್ತಿಗಳ ಬೆನ್ನುಹತ್ತಿ ರಾಜಕಾರಣ ಮಾಡಿ ಅಲ್ಲೊಂದು ಮೌಲಿಕ ಅದಃ

 ಪತನವಾಗುತ್ತಿದೆ. ಇದೊಂದು ದುರಂತ. ಈ ಸ್ಥಿತಿಯಲ್ಲಿ ಯಾವುದೇ ಬಲವಿಲ್ಲದ ಶಾಸ್ತ್ರೀಯ

 ಸಾಹಿತಿಗಳು ಎಲೆ ಮರೆಯ ಕಾಯಿಗಳಾಗೇ ಉಳಿದು ನೇಪಥ್ಯಕ್ಕೆ ಸರಿಯುತ್ತಾರೆ. ರಾಜಕಾರಣ ಸಾಹಿತ್ಯದಲ್ಲಿ ನುಸುಳದಿದ್ದರೆ, ಸಾಹಿತ್ಯಕ್ಕೆ ‘ಕಸು’ ಬರುತ್ತದೆ.

೯) ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತದೆ?

 ಈ ದೇಶವನ್ನು ಆಳಲು ಉದಾತ್ತ ಮನಸ್ಸಿನ ಒಂದೇ ಪಕ್ಷವಿರಬೇಕು. ನಾಯಕನ ನಿರ್ಣಯಕ್ಕೆ ಎಲ್ಲರ

 ಸಹಮತವಿರಬೇಕು. ದೇಶಕ್ಕೆ ಭವ್ಯ ಪರಂಪರೆ ಇದೆ. ಸುಭಿಕ್ಷವಾದ ರಾಮರಾಜ್ಯ ಕಂಡ ಖಂಡ ಇದು,

 ಬುದ್ದ, ಬಸವ, ಗಾಂಧಿ, ಅಶೋಕರ ನಾಡಿದು. ಇತಿಹಾಸ ಮರುಕಳಿಸಿ ನಮ್ಮ ದೇಶ ವೈಭವದಿಂದ ಮೆರೆಯುವದು ಮತ್ತೆ.

೧೦) ಸಾಹಿತ್ಯದ ಬಗ್ಗೆ ನಿಮ್ಮ ಕನಸೇನು?

 ಸಾಹಿತ್ಯದ ಕ್ಷೇತ್ರ ಸಾಗರದಂತೆ ವಿಶಾಲವಾಗಿದೆ. ಮೊಗೆದಷ್ಟೂ ಮತ್ತೆ ಸೊರೆಯುವ ಗಂಗೆ ಅದು.

 ಶತಮಾನಗಳಿಂದ ಅಭಿವೃದ್ಧಿಗೊಳಿಸಿಟ್ಟ ಸಾಹಿತ್ಯ ಪರಂಪರೆಯನ್ನು ಮುಕ್ಕಾಗದಂತೆ ಕಾಪಿಟ್ಟು,

 ಗಟ್ಟಿತನ ಕಳೆದು ಹೋಗದಂತೆ ಕಾಯಬೇಕು. ಸಾಹಿತ್ಯದಲ್ಲಿ ಮುಕ್ತ ಮನಸ್ಸು ಮತ್ತು ವಿಶಾಲ

 ಭಾವನೆ ಇರಬೇಕು. ಅದೇ ನನ್ನ ಕನಸು.

೧೧) ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು?

 ಕನ್ನಡದಲ್ಲಿ  ಇಷ್ಟವಾದ ಸಾಹಿತಿ ಯಶವಂತ ಚಿತ್ತಾಲರು. ಇಷ್ಟವಾದ ಕವಿ- ಕೆ.ಎಸ್. ನರಸಿಂಹಸ್ವಾಮಿ.

 ಕೆ.ಎಸ್.ನ.ರ. ಮೈಸೂರ ಮಲ್ಲಿಗೆಯ ಘಮ ನನ್ನನ್ನು ಪದೇ ಪದೇ ಆವರಿಸಿಕೊಂಡು ಕಾಡುತ್ತದೆ.

 ಆಂಗ್ಲ ಸಾಹಿತ್ಯದಲ್ಲಿ

ಇಷ್ಟವಾದ ಸಾಹಿತಿ – ಪೌಲೋ  ಕೋಹಿಲೋ ಇಷ್ಟವಾದ ಕವಿ- ಜಾನ್ ಮಿಲ್ಟನ್,

 ಹದಿನೇಳನೇ ಶತಮಾನದ ಇಂಗ್ಲಿಷ್ ಕವಿಯ ಕ್ಲಿಷ್ಟ ಮಹಾಕಾವ್ಯ ‘ಪ್ಯಾರಾಡೈಸ್ ಲಾಸ್ಟ’ ಓದಿದಷ್ಟು

 ಹೊಸ ತತ್ವಕ್ಕೆ ಒಯ್ದು ಕಾಡುತ್ತದೆ. ಅದೊಂದು ವಿಭಿನ್ನ ಓದು.

೧೨) ಈಚೆಗೆ ಓದಿದ ಕೃತಿಗಳಾವವು?

 ಕಶೀರಾ- ಸಹನಾ ವಿಜಯಕುಮಾರ

೧೩) ನಿಮಗೆ ಇಷ್ಟವಾದ ಕೆಲಸವಾವುದು?

 ಓದು, ಬರಹ, ಹರಟೆ, ರುಚಿ ರುಚಿ ಅಡಿಗೆ ಮಾಡಿ ತಿನ್ನುವುದು, ತಿನಿಸುವುದು. ಹೂದೋಟ ಪಾಲನೆ.

೧೪) ನಿಮಗೆ ಇಷ್ಟವಾದ ಸ್ಥಳ ಯಾವುದು?

 ಮುಂಬಯಿ- ಅದೊಂದು ಬದುಕಲು ಕಲಿಸುವ ಪ್ರಕೃತಿ ಶಾಲೆ.

೫) ನಿಮ್ಮ ಪ್ರೀತಿಯ ತುಂಬಾ ಇಷ್ಟದ ಸಿನಿಮಾ ಯಾವುದು?

 ನಾನು ಇಷ್ಟ ಪಟ್ಟಿದ್ದು ಹಳೆಯ ಹಿಂದಿ ಚಿತ್ರ ‘ಸದ್ಮಾ’ – ಶ್ರೀದೇವಿ, ಕಮಲಹಾಸನ

೧೬) ನೀವು ಮರೆಯಲಾರದ ಘಟನೆ ಯಾವುದು ?

 ವಯಸ್ಸಾದ ಅಪ್ಪ, ನಮ್ಮಿಬ್ಬರನ್ನು ಆಟೋದಲ್ಲಿ ಕೂಡ್ರಿಸಿ, ತಾನು ಮಳೆಯಲ್ಲಿ ನಮ್ಮ ಹಿಂದಿನಿಂದ ಸೈಕಲ್ಲಿನಲ್ಲಿ ಟಾಕೀಸಿಗೆ ಬಂದಿದ್ದು.

೧೭) ಏನಾದರೂ ಹೇಳುವುದಿದೆಯಾ?

 ಹೌದು ನಾನು ಕಂಡ ಸತ್ಯದ ಮಾತು- ಜೀವನೋತ್ಸಾಹಕ್ಕೆ ವಯದ ಹಂಗಿಲ್ಲ.

 ನಾನು ಒಂದಿಷ್ಟು ಓದು ಬರಹದ ಜೊತೆಗೆ ಬೆಳೆಸಿಕೊಂಡ ಹವ್ಯಾಸ ಹೂದೋಟ ಪಾಲನೆ. ನನ್ನ

ತಾರಸಿ ತೋಟ ಹಸಿರಿನಿಂದ ಕಂಗೊಳಿಸಿದೆ. ಹೂ ಸಸ್ಯಗಳ ಜೊತೆ ಫಲ ಬಿಡುವ ಗಿಡಗಳೂ ಇವೆ. ಲಿಂಬು,

ಮಾವು, ದಾಳಿಂಬೆ, ಅಂಜೂರ ಇತ್ಯಾದಿ. ನಿತ್ಯವೂ ಕೆಲಹೊತ್ತು ನೀರು ಗೊಬ್ಬರ ಉಣಿಸುವ ನಡುವೆ ಸಸ್ಯ

ಗಳ ಜೊತೆ ನನ್ನ ಮೌನ ಸಂವಾದ ನಡೆದಿರುತ್ತದೆ. ಸಸ್ಯಗಳು ಬಿಡುವ ಮೊಗ್ಗು, ಹೂ, ಹೀಚು, ಕಾಯಿ,

ಹಣ್ಣಿನ ಪ್ರತಿ ಅವಸ್ಥೆಯಲ್ಲೂ ನನ್ನ ಖುಷಿಯ ಸಂವೇದನೆಗೆ ಅವು ಸ್ಪಂದಿಸುತ್ತವೆ. ಈ ಮುದುಕ ಸೇವೆ

ಮಾಡುತ್ತಿದ್ದಾನೆಂಬ ಅನುಕಂಪಕ್ಕೆ ಇರಬೇಕು, ನನ್ನ ಮಾವಿನ ಗಿಡ ವರ್ಷಕ್ಕೆ ಎರಡು ಬಾರಿ ಕಾಯಿ ಬಿಡುತ್ತದೆ.

ಹುಬ್ಬಳ್ಳಿಯ ತಮಿಳು ನರ್ಸರಿಯವನೇನೋ “ಇದು ಒಳ್ಳೆಯ ಜಾತಿ ಮಾವು” ಎಂದೇ ಕಸಿ ಗಿಡ ಕೊಟ್ಟಿದ್ದ.

ಆದರೆ ನನ್ನ ದುರಾದೃಷ್ಟಕ್ಕೆ ಅದು ಬಿಡುತ್ತಿರುವುದು ಹುಳಿಮಾವು. ಹುಟ್ಟಿದ ಮಗ ಕಪ್ಪೆಂದು ಎಂದಾದರೂ

ಎಸೆದು ಬಿಡುತ್ತಾರೆಯೇ? ಜೀರಿಗೆ ವಾಸನೆ ಮಾವಿನಕಾಯಿಯ ಉಪ್ಪಿನಕಾಯಿ ತುಂಬಾ ಸ್ವಾಧಿಷ್ಟ.! ಹೀಗಾಗಿ

ಆ ಗಿಡ ನನಗಿಷ್ಟ.

***********************************************************

ನಾಗರಾಜ ಹರಪನಹಳ್ಳಿ

ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

3 thoughts on “

  1. ಸುರೇಶ್ ಹೆಗ್ಡೆ ಗಟನೆಗಳನ್ನು ಮನತಟ್ಟುವಂತೆ ನಿರೂಪಿಸುವಲ್ಲಿ ಸಿದ್ದಹಸ್ತರು.ಹರಟೆ ಯಂತೆ ಸಾಹಿತ್ಯದಲ್ಲೂ.ಸುರೇಶ ಹೆಗಡೆ ಯತಾವತ್ತ ನಂಮಮುಂದಿಟ್ಟಿದ್ದಾರೆ.
    ದಂಯವಾದ.

Leave a Reply

Back To Top