ಮಕ್ಕಳ ಕಥೆ
ಪ್ರತಿಫಲ
ಬಸವರಾಜ ಕಾಸೆ
ದಿನವೂ ಏನಾದರೂ ಒಂದು ಒಳ್ಳೆಯ ಕೆಲಸ ಮಾಡಿ ಅದನ್ನು ಬರೆದುಕೊಂಡು ಬರಬೇಕು ಎಂದು ಕ್ಲಾಸ್ ಟೀಚರ್ ಹೇಳುತ್ತಿದ್ದರು. ಆದರೆ ಅವಕಾಶ ಇದ್ದಾಗಲೂ ಅಂತಹ ಕೆಲಸವನ್ನು ಯಾವ ಮಕ್ಕಳು ಮಾಡುತ್ತಿರಲಿಲ್ಲ. ಅದರಲ್ಲಿ ವಿಶೇಷವಾಗಿ ಚೂಟಿ ಮಾಡುತ್ತಾನೆ ಇರಲಿಲ್ಲ. ಆದರೆ ದಿನವೂ “ಇಂದು ರಸ್ತೆಯಲ್ಲಿ ಬಿದ್ದ ಮುಳ್ಳು ತೆಗೆದು ಹಾಕಿದೆ”, “ಕಲ್ಲು ತೆಗೆದು ಹಾಕಿದೆ”, “ವೃದ್ಧರಿಗೆ ರಸ್ತೆ ದಾಟಲು ಸಹಾಯ ಮಾಡಿದೆ”, “ಮನೆ ಕಸ ಗುಡಿಸಿದೆ”, “ಅಮ್ಮನಿಗೆ ಅಡುಗೆಯಲ್ಲಿ ನೆರವಾದೆ” ಹೀಗೆ ಸುಮ್ಮಸುಮ್ಮನೆ ಏನಾದರೂ ಬರೆದುಕೊಂಡು ಹೋಗುತ್ತಿದ್ದಳು.
ಚೂಟಿಯ ಗೆಳತಿಯಾದ ಪುಟ್ಟಿಯು ನಿಜವಾಗಿಯೂ ಮಾಡುವ ಮನಸ್ಸು ಹೊಂದಿದ್ದಳು ಮತ್ತು ಗಮನಕ್ಕೆ ಬಂದರೆ ಮಾಡುತ್ತಿದ್ದಳು. ಆದರೆ ಇದನ್ನೆಲ್ಲಾ ಎಷ್ಟೋ ಸಲ ಚೂಟಿಯೇ ತಡೆದಿದ್ದಳು.
ಅವತ್ತು ಒಂದು ದಿನ ಚೂಟಿ ಮತ್ತು ಪುಟ್ಟಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಯಾರೋ ಮಾವಿನ ಹಣ್ಣು ತಿನ್ನುತಿರುವದನ್ನು ಕಂಡು ಇವರಿಬ್ಬರಿಗೂ ತಿನ್ನಬೇಕು ಎನಿಸಿತು. ಆದರೆ ಇಬ್ಬರ ಬಳಿಯೂ ದುಡ್ಡು ಇರಲಿಲ್ಲ. ಹಾಗೆ ಆಸೆಗಣ್ಣಿನಲ್ಲಿ ಮುಂದೆ ಮುಂದೆ ಬರುವಾಗ ಅಲ್ಲಿ ಒಬ್ಬಳು ಅಜ್ಜಿ ರಸ್ತೆ ದಾಟಲಾಗದೆ ತಲೆ ಮೇಲೆ ಬುಟ್ಟಿ ಹೊತ್ತು ನಿಂತಿದ್ದಳು. ಒಂದಾದ ಮೇಲೆ ಒಂದು ವಿಪರೀತ ವಾಹನಗಳ ಓಡಾಟ. “ಪಾಪ, ನೋಡೇ… ಆ ಅಜ್ಜಿಗೆ ಸಹಾಯ ಮಾಡೋಣ, ಬಾ ಆ ಕಡೆ ಹೋಗೋಣ” ಎಂದರೂ “ಹೋಗೇ, ಯಾರು ಬರತಾರೆ” ಎಂದಳು. ಆಗ ಪುಟ್ಟಿ ಒಬ್ಬಳೇ ಹೋಗಿ ಮೆಲ್ಲಗೆ ಅಜ್ಜಿಯ ಕೈ ಹಿಡಿದು ರಸ್ತೆ ದಾಟಿಸಿದಳು.
“ಸ್ವಲ್ಪ ಬುಟ್ಟಿ ಇಳಿಸು ಮರಿ ಹಾಗೆ” ಎಂದಾಗ ಅಜ್ಜಿ, ಪುಟ್ಟಿ ಇಳಿಸಿದಳು. ನೋಡಿದರೆ ಆ ಬುಟ್ಟಿ ತುಂಬಾ ಮಾವಿನ ಹಣ್ಣು “ತಗೋ, ತಿನ್ನು” ಅಂತ ಅಜ್ಜಿ ಕೊಟ್ಟರೂ “ಬೇಡ ಬೇಡ” ಎಂದು ಆಮೇಲೆ ತೆಗೆದುಕೊಂಡಳು. ದೂರದಲ್ಲಿಯೇ ನಿಂತು ನೋಡತಾ ಚೂಟಿ ಹೊಟ್ಟೆಕಿಚ್ಚು ಪಟ್ಟುಕೊಂಡು ಮುಖ ಉದಿಸಿಕೊಂಡಳು. “ಅಜ್ಜಿ ಅವಳು ನನ್ನ ಪ್ರೇಂಡ್” ಎಂದಾಗ ಅವಳನ್ನು “ಬಾ ಇಲ್ಲಿ, ಮಾವಿನ ಹಣ್ಣು ತಗೋ” ಎಂದಾಗ ಆಸೆಗಣ್ಣಿನಿಂದ ಓಡಿ ಬರಲು ಕಾಲಿಗೆ ಮುಳ್ಳು ಚುಚ್ಚಿತು. “ಯಾರಾದರೂ ಸೈಡಿಗೆ ಈ ಮುಳ್ಳು ಹಾಕಿದರೆ ನನ್ನ ಕಾಲಿಗೆ ಹೀಗೆ ಆಗ್ತಾ ಇರಲಿಲ್ಲ” ಎಂದು ಬೈಯಿಕೊಂಡಳು. ಹಾಗೆ ಕುಂಟುತ್ತಾ ಬಂದ ಅವಳಿಗೂ ಅಜ್ಜಿ ಮಾವಿನ ಹಣ್ಣು ನೀಡಿದಳು. ಅದರಿಂದ ಸಂತುಷ್ಟಳಾದ ಚೂಟಿ “ನಾವು ಇನ್ನೊಬ್ಬರಿಗೆ ಸಹಾಯ ಮಾಡಿದರೆ ನಮಗೂ ಮತ್ತೆ ಯಾರೋ ಸಹಾಯ ಮಾಡುತ್ತಾರೆ, ಒಳ್ಳೆಯ ಕೆಲಸಕ್ಕೆ ಒಳ್ಳೆಯ ಪ್ರತಿಫಲ” ಎಂದು ಖುಷಿಗೊಂಡು ತನ್ನ ನಡವಳಿಕೆಯನ್ನು ಬದಲಿಸಿಕೊಳ್ಳಬೇಕು ಎಂದು ನಿರ್ಧರಿಸಿ ಮಾವಿನ ಹಣ್ಣು ತಿಂದಳು
***********************************************