ಆನೆ ಸಾಕಲು ಹೊರಟವಳು

ಪುಸ್ತತಕ ಸಂಗಾತಿ

ಆನೆ ಸಾಕಲು ಹೊರಟವಳು

   ಶಿವಮೊಗ್ಗ ಕರ್ನಾಟಕ ಸಂಘದ ಡಾ. ಹಾ. ಮ. ನಾಯಕ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ  ಸ್ವೀಕರಿಸಿರುವ ಆನೆ ಸಾಕಲು ಹೊರಟವಳು “ ಎಂಬ ಒಂದು ಕ್ಷಣ ಹುಬ್ಬೇರುವಂತಹ ಶೀರ್ಷಿಕೆಯನ್ನು ನೀಡಿರುವ ಕೃತಿ , ಶ್ರೀಮತಿ ಸಹನಾ ಕಾಂತಬೈಲುರವರ ಅಂಕಣ ಬರಹಗಳ ಗುಚ್ಛ.   “ ಭೂಮಿಗೀತ “ ಎಂಬ ಹೆಸರಿನಲ್ಲಿ  ಚಂದನೆಯ, ಸಹಜವಾದ, ಸ್ವತ; ಅನುಭವದ ನೈಜ್ಯ ಕೃಷಿ ಲೇಖನಗಳ ಅಂಕಣ ಬರೆಯುತ್ತಿದ್ದದು ನಮ್ಮ ನಾಡಿನಲ್ಲು ಅಲ್ಲದೆ ಹೊರನಾಡಿನ ಕನ್ನಡಿಗರಲ್ಲು ಮನೆಮಾತಾಗಿತ್ತು. ಕೃಷಿ ಮಹಿಳೆಯು , ಸದ್ಗೃಹಿಣಿಯು ಆದ ಸಹನಾ ಕಾಂತಬೈಲುರವರ ಜೀವನದ ಅನುಭವಗಳನ್ನು ಓದಲು ಎಲ್ಲರು ಬಹಳ ಕಾತರದಿಂದ ಕಾಯುತ್ತಿದ್ದರು ಎಂಬುದು ಅತಿಶಯೋಕ್ತಿ ಅಲ್ಲ . ಆನೆ ಸಾಕಲು ಹೊರಟವಳು ಎಂಬುದು ನೇರಾರ್ಥದಲ್ಲಿ ಎಲ್ಲರಿಗು ತಿಳಿದಿರುವಂತೆ  ಲೇಖಕಿ ಯಾವೊದೋ ಸಂದರ್ಭದಲ್ಲಿ ಆನೆಯನ್ನು ಸಾಕಲು ಹೊರಟಿದ್ದಳು . ಅದು ಹೇಗೆ, ಎಲ್ಲಿ ಮತ್ತು ಯಾವ ರೂಪದಲ್ಲಿ ಎಂಬುದು ಕೃತಿಯನ್ನು ಓದಿಯೇ ಅರ್ಥೈಸಿಕೊಂಡರೆ ಹೆಚ್ಚು ಪರಿಣಾಮಕಾರಿ ! ನಾನು ಮೊದಲು, ಇದೇನು ಈ ರೀತಿಯ ಶೀರ್ಷಿಕೆ ಎಂದು ಅಚ್ಚರಿಯಿಂದ ಕೇಳಿದಾಗ  “ ಆ “ ಎಂದರೆ ಆರೋಗ್ಯ  “ ನೆ” ಎಂದರೆ ನೆಮ್ಮದಿ ಎಂಬುದಾಗಿ ಹೇಳಿ ಆಶ್ಚರ್ಯಚಕಿತಗೊಳಿಸಿದರು. ಈ ಅರ್ಥದಲ್ಲು ಕೃತಿಯ ಹೆಸರು ಕೃಷಿ ಮಹಿಳೆಯಾಗಿ ಸಾರ್ಥಕತೆ ಕಾಣುತ್ತದೆ ಎಂಬುದು ನನ್ನ ಅನಿಸಿಕೆ.

     ಒಂದೇ ಗುಟುಕಿಗೆ ಓದಿ ಮುಗಿಸುವ ಉಮೇದು ಹುಟ್ಟಿಸುವ  ಈ ಕೃತಿ ಅಪರೂಪದ ಪುಸ್ತಕ . ಇವರ ಜೋಳಿಗೆಯಲ್ಲಿ ಕೃಷಿಕರು ಎಲ್ಲಿ ಹೋದರು ? , ರೈತನಿಗೆ ಯಾರು ಹೆಣ್ಣು ಕೊಡುತ್ತಾರೆ, ಕಲ್ಲುಬಾಳೆ ಬೆಳೆಸಿ ಆನೆ ಉಳಿಸಿ,  ಶಾಲೆಗಳಲ್ಲಿ ಕೃಷಿ ಶಿಕ್ಷಣ , ಯುನಿವರ್ಸಿಟಿಯಲ್ಲಿ ಹಳ್ಳಿಯ ಕೃಷಿಕ ಮಹಿಳೆಯ ಭಾಷಣ , ಹೋರಿ ಕರುವಿನ ವಿದಾಯ ಪ್ರಸಂಗ  , ಬೇರು ಬಿಡುವ ಸಮಯ  ಹೀಗೆ ಬಲು ಆಸಕ್ತಿ ಹುಟ್ಟಿಸುವ ಇಂತಹ ವಿಷಯಗಳ ಖಜಾನೆಯೆ ಇದೆ. ಹಲಸಿನ ಹಣ್ಣಿನ ಅಂಟಿನ ನಂಟು ಪ್ರಬಂಧ ಎಳೆಎಳೆಯಾಗಿ ಬಿಡಿಸಿಕೊಂಡು ಹೋದ ಪರಿ ಅಭೂತಪೂರ್ವವಾಗಿದೆ . ನಂಟು ಬೆಸೆಯುವ ಆಪ್ತತೆಯನ್ನು ನವಿರಾಗಿ ಹಲಸಿನ ಅಂಟಿನೊಂದಿಗೆ ತಿಳಿಸಿದ ಪರಿ ಬಲು ಅರ್ಥಪೂರ್ಣವಾಗಿದೆ . ಹಲಸು ಎಲ್ಲ ಹಣ್ಣಿನಂತಲ್ಲ , ಹಳ್ಳಿಗಳಲ್ಲಿ ಮಾತ್ರವೇ ಜನರು ಇದನ್ನು ವಿಶೇಷ ಆಸಕ್ತಿಯಿಂದ ತಿನ್ನುವುದು ಮತ್ತು ಅದೆಷ್ಟೋ ಮುನ್ನೂರಕ್ಕಿಂತಲೂ ಹೆಚ್ಚಿನ ಸವಿರುಚಿಗಳನ್ನು ಇದರಿಂದ ತಯಾರಿಸುತ್ತಾರೆ ಎನ್ನುವ ವಿಶೇಷತೆಯನ್ನು ಸವಿವರವಾಗಿ ಹೇಳಿ ಗ್ರಾಮೀಣ ಜನಜೀವನದಲ್ಲಿ ಹಲಸು ಎಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ ಎಂಬುದು ಇಲ್ಲಿ ತಿಳಿಯುತ್ತದೆ. ಹಲಸಿನ ನಂಟಿನ ಅಂಟು ಜನಜೀವನದಲ್ಲು ಹಾಸುಹೊಕ್ಕಾದ ಪರಿಯನ್ನು ತಿಳಿಹೇಳಿದ್ದು ಭಾವನಾತ್ಮಕವಾಗಿ ಮೂಡಿ ಬಂದಿದೆ.

           ಕೃಷಿ ಮಹಿಳೆಯಾಗಿ ತನ್ನ ಬದುಕನ್ನೇ ಅತಿಯಾಗಿ ಪ್ರೀತಿಸುವ ಲೇಖಕಿ  ಸದ್ಗೃಹಿಣಿಯಾಗಿ ತನ್ನೆಲ್ಲಾ ಅನುಭವದ ಪಾಲಿನಲ್ಲಿ ತಮ್ಮ ಮಿತಿಯೊಳಗೆ ಬರವಣಿಗೆಯನ್ನು ಮುಗಿಸದೆ ತಮ್ಮ ಲೇಖನದಿಂದ ಓದುಗರಿಗೆ ಅತಿಯಾದ ಸ್ಫೂರ್ತಿಯನ್ನು ಉಣಬಡಿಸಿದ್ದಾರೆ. ತನ್ನ ಬರಹದ ‘ ವಸ್ತು’ವನ್ನು ವಸ್ತುವನ್ನಾಗಿಸದೆ ಬರಹದ ಪ್ರೀತಿಯನ್ನು ನಿಚ್ಛಳವಾಗಿ ಹೇಳುವಂತಹ ಅಪರೂಪದ ಪ್ರಬಂಧಗಳು ಇಲ್ಲಿವೆ. ಕೃಷಿಯ ಮೇಲಿರುವ ಅಪ್ಪಟ ಅಕ್ಕರೆಯ ವ್ಯಾಮೋಹದಷ್ಟೆ  ವಾಂಛೆಯನ್ನು ಬರವಣಿಗೆಯ ಮೇಲು ಅಷ್ಟೇ ಜತನದಿಂದ ಇರಿಸಿಕೊಂಡಿದ್ದಾರೆ. ಎರಡನ್ನು ಒಂದಕ್ಕೊಂದು ಮೇಳೈಸಿ ವ್ಯವಸಾಯ ಮಾಡುವ  ಇವರ ವಿಶ್ವಾಸ ಅನೀರ್ವಚನೀಯ. ಬರವಣಿಗೆಯ ವ್ಯವಸಾಯದಲ್ಲೇ ಒಂದು ಹೆಜ್ಜೆ ಮೇಲೆಂಬುದನ್ನು ನಮಗೆಲ್ಲಾ ಮನಗಾಣಿಸಿದ್ದಾರೆ . ಇವರ ಸೂಕ್ಷ್ಮತೆಯೆ ಇವರ ಬರಹದ ಶಕ್ತಿ . ನಾವೆಲ್ಲ ತೇಲಿಸಿ ನೋಡುವಂತಹ ಸಾವಿರಾರು ಚಿಕ್ಕ ಚಿಕ್ಕ ಸಂಗತಿಗಳು ಇಲ್ಲಿನ ಬರಹಗಳಲ್ಲಿ ಅಚ್ಚರಿ ಮೂಡುವಂತಹ ವಿಚಾರಗಳಾಗಿ ನಮ್ಮನ್ನು ಆಶ್ಚರ್ಯಗೊಳಿಸುತ್ತದೆ. ಯಾವುದೇ ವಿಷಯವನ್ನಾದರು ತಾರ್ಕಿಕವಾಗಿ ನೋಡಿ ಅಂದಾಜಿಸುವ ಲೇಖಕಿಯ ಗುಣ ಬರಹದ  ಇನ್ನೊಂದು ಪ್ರಬಲ ಶಕ್ತಿ . ಉದಾಹರಣೆಗೆ  “ ಬಹುರೂಪಿ ಹಾಳೆ “ ಲೇಖನದಲ್ಲಿ “ ನಾನು ಮದುವೆಯಾಗಿ ಬಂದಾಗ ನಮ್ಮದು ಮಣ್ಣಿನ ನೆಲದ ಮನೆಯಾಗಿತ್ತು.  ಬಹಳ ದೊಡ್ಡದು.  ನಾನು ಸೀರೆಯನ್ನು ಮೇಲಕ್ಕೆತ್ತಿ ಕಟ್ಟಿ  ಸೆರಗನ್ನು ಸೊಂಟದಲ್ಲಿ ಸಿಕ್ಕಿಸಿ ಬಗ್ಗಿ ಇಡೀ ಮನೆಯನ್ನು ಹಾಳೆಯಿಂದ ಸಗಣಿ ಸಾರಿಸುತ್ತಿದ್ದೆ  . ಹೊಸ ಕಾಲದ ಹುಡುಗಿಯರಿಗೆ ಇದನ್ನು ಹೇಳಿದರೆ ಅರ್ಥವಾಗುತ್ತದೋ ಇಲ್ಲವೋ!”

                 ಇವರೇ ಹೇಳುವಂತೆ ನಾನು ಹೇಗೆ ಬದುಕಿದೆನೋ ಅದನ್ನೆ ಬರೆದೆ ಎಂಬ ಸಾಲುಗಳನ್ನು ಓದಿದಾಗ ಇಬರ ಧೈರ್ಯ ನಮಗೆಲ್ಲಾ ಸ್ಫೂರ್ತಿಯ ಸೆಲೆ. ಕುಗ್ರಾಮದಲ್ಲಿ ವಾಸಿಸುತ್ತಿದ್ದರು ತನ್ನ ತಂಗಿ ಇರುವಂತಹ  ಅಮೆರಿಕದೂರಿಗೆ ಪ್ರವಾಸ ಹೋಗಿ ಬಂದು ಅದರ ಅನುಭವಗಳನ್ನು ಹಳ್ಳಿಗಾಡಿನ ಜನಜೀವನಕ್ಕೆ ಹೊಂದಿಸಿಕೊಂಡು , ಅಲ್ಲಲ್ಲಿ ಹೇಳಿದ ವಿಚಾರಗಳು ಸೊಗಸಾಗಿ ಮೂಡಿ ಬಂದಿದೆ. ಇವರು ಬದುಕಿನ ವಿವಿಧ ಮಜಲುಗಳಲ್ಲಿ ಕಂಡನುಭವಿಸಿದ ತಲ್ಲಣಗಳು ತುಂಬಾ ಹೊಸ ರೂಪದಲ್ಲಿ ಓದುಗರನ್ನು ತಟ್ಟುತ್ತವೆ. ಸದ್ಗೃಹಿಣಿಯಾಗಿ , ಕೃಷಿ ಕೆಲಸದ ನಡುವೆಯು ಉಳಿದ ಸಂಗತಿಗಳಾದ ಸಾಮಾಜಿಕ , ಶೈಕ್ಷಣಿಕ , ಪ್ರವಾಸ , ಸಾಹಿತ್ಯ ಸಮ್ಮೇಳನಗಳು ಹೀಗೆ ಎಲ್ಲದರಲ್ಲು ದಕ್ಕಿದ ಭಾವಾಭಿವ್ಯಕ್ತಿ ಇಲ್ಲಿದೆ. ಯಾವುದೇ ಪ್ರಬಂಧದ ಕೊನೆಯಲ್ಲಿ ಹೇಳುವ ಇವರ ಧೋರಣೆಯಲ್ಲಿ , ಪ್ರಸ್ತುತ ದಿನಮಾನಸಕ್ಕೆ ಸಂಬಂಧಪಟ್ಟಂತಹ ತಾಜಾತನದೊಂದಿಗೆ ವಾಸ್ತವತೆಯಿದೆ. ಆಂದರೆ ಲೇಖಕಿಯೆ ಹೇಳುವಂತೆ “ ಬೀಜ ಸಂಸ್ಕೃತಿ ಲೇಖನದಲ್ಲಿ “ ಒಟ್ಟಾರೆ ಹೇಳುವುದಾದರೆ ಬೀಜ ಸಂರಕ್ಷಣೆಯಲ್ಲಿ ಮತ್ತು ಮನೆಯಂಗಳದಲ್ಲಿ ತರಕಾರಿ ಬೆಳೆಸುವುದರಲ್ಲಿ ಹೆಣ್ಣಿನ ಪಾಲೇ ದೊಡ್ಡದು . ಹೆಣ್ಣಿಗು ಬೀಜ ಸಂಗ್ರಹಣಕ್ಕು ಅವಿನಾಭಾವ ಸಂಬಂಧ. ಇಡೀ ಬೀಜ ಬಿತ್ತಿ ಬೆಳೆಸುವ ಸಂಸ್ಕೃತಿಯ ಹಿಂದೆ ಹೆಣ್ಣಿನ ಕೊಡುಗೆ ಬಹಳ ದೊಡ್ಡದು  . ಹೀಗೆ ಜಗತ್ತು ಎಷ್ಟೇ ಮುಂದುವರೆದರು ಅಡುಗೆ ಮನೆ ಜವಬ್ದಾರಿ ಹೆಣ್ಣಿನ ಸೊತ್ತು . ಆದರಿಂದ ಅಲ್ಲಿಗೆ ಬೇಕಾದ ತರಕಾರಿಯ ಜವಬ್ದಾರಿಯು ಅವರಿಗೆ.

ರಾಷ್ಟ್ರಕವಿ ಕುವೆಂಪುರವರ ಕುಪ್ಪಳ್ಳಿ ಮನೆಯನ್ನೆ ಹೋಲುವ ಸಹನಾರವರ ಹಳ್ಳಿ ಮನೆ ತುಂಬಾ ಸುಂದರವಾಗಿದೆ. ಲೇಖಕಿ ಛಾಯ ಭಗವತಿಯವರು ಇವರ ಮನೆಯ ಕುರಿತು ಬರೆದ ಬರಹ ರಾಜ್ಯ ಪತ್ರಿಕೆಯಲ್ಲಿ ಪ್ರಕಟವಾಗಿರುವುದನ್ನು ನಾವಿಲ್ಲಿ ಸ್ಮರಿಸಬಹುದು .  ‘ +ಮನೆ  ಮನೆ ನನ್ನ ಮನೆ ‘ ಲೇಖನದಲ್ಲಿ ತನ್ನ ಮನೆಯನ್ನು ಪ್ರೀತಿಸುವ ಪರಿಯನ್ನು ಬರೆದ ಬಗೆ ಮನಸ್ಸನ್ನು ತೇವಗೊಳಿಸುತ್ತದೆ. ಹಳ್ಳಿ ಮನೆಗಳ ಸಹಜ ಸುಂದರತೆಯನ್ನು ಇದು ಮನಗಾಣಿಸುತ್ತದೆ. ಸಾಹಿತ್ಯ ಪ್ರೇಮಿಗಳು ಇವರ ಮನೆಗೆ ಭೇಟಿ ಕೊಡದಿದ್ದರೆ ಏನೋ ಕಳಕೊಂಡಂತೆ ಎಂಬುದಂತು ನಿಜ!

         ಯುನಿವರ್ಸಿಟಿಯಲ್ಲಿ ಹಳ್ಳಿಯ ಕೃಷಿಕ ಮಹಿಳೆಯ ಭಾಷಣ, ಒಲೆ ಬದಲಾದರು ಉರಿ ಬದಲಾಗದು ಎಂಬ ಮನಸ್ಸಿಗೆ ಬಹಳ ತಟ್ಟುವಂತಹ ಅನೇಕ ಪ್ರಬಂಧಗಳಿವೆ. ಮಹಿಳೆಯರಿಗೆ ಅಂತರ್ಗತವಾಗಿ ಇರುವಂತಹ ಸದಭಿಪ್ರಾಯಗಳು ತನ್ನ ಸುತ್ತಮುತ್ತಲಿನವರ ಅನುಕೂಲಕ್ಕೆ ತಕ್ಕಂತೆ  ಹೇಗೆ ಬದಲಾಗಿ ಬಿಡುತ್ತದೆ ಎಂಬುದರ ಚಿತ್ರಣವಿದೆ. ಯಾವುದೇ ವಿಚಾರವನ್ನಾದರು  ನವಿರಾಗಿ ,ನೇರವಾಗಿ  ಸ್ಪಷ್ಟವಾಗಿ , ಸರಳವಾಗಿ , ಮತ್ತು ಮುಖ್ಯವಾಗಿ ಪ್ರಬುದ್ಧರಾಗಿ  ಹೇಳುತ್ತಾರೆಂದರೆ ‘ ಉಡಿಯಲ್ಲಿ ಮಲ್ಲಿಗೆ , ಹಿಡಿಯಲ್ಲಿ ಮೌಸ್ , ಮೋಸ ಹೋಗಬೇಡಿ ಇದು ಮುನ್ನುಡಿ ಅಷ್ಟೆ “  ಎಂಬ ಸಾಲುಗಳೇ ಇವರ ಬರವಣಿಗೆಯ ಬಲ ತಿಳಿಯಲು ಸಾಕು .  ಸಮೃದ್ಧ ಬರವಣಿಗೆಯ ಈ ಕೃತಿಯನ್ನು ಓದದಿದ್ದರೆ ತಮಗೆ ನಷ್ಟ ಎಂಬುದನ್ನು ಈ ಕೆಳಗಿನ ಸಾಲುಗಳು ಮತ್ತೊಮ್ಮೆ ಸಾಬೀತು ಪಡಿಸುತ್ತವೆ.  “ ಕಲ್ಲು ಹೃದಯ ಮಾಡಿ ಜೀಪಿಗೆ ಕಟ್ಟಿದ್ದ ಹಗ್ಗ ಬಿಚ್ಚಿದೆ. ಕರು ನನ್ನ ಮುಖ ನೋಡಿತು , ‘ ಹೋಗಿ ಬರುತ್ತೇನೆ ‘ ಎನ್ನುವಂತೆ . ಅಷ್ಟೆ. ಮರುಕ್ಷಣ ಜೀಪಿನಿಂದ ಹಾರಿತು. ಕಣ್ಣಿಗೆ ಕಾಣದಂತೆ ದಟ್ಟ ಕಾಡಿನೊಳಗೆ ಮರೆಯಾಯಿತು. ‘ ಮೇದು ಹೊಟ್ಟೆ ತುಂಬಿಸು . ಕ್ಷಮಿಸು ‘ ಮನದಲ್ಲಿ ಹೇಳಿಕೊಂಡೆ.

**********************************************************

                                                   ಸಂಗೀತ ರವಿರಾಜ್

                                                                                   

3 thoughts on “ಆನೆ ಸಾಕಲು ಹೊರಟವಳು

Leave a Reply

Back To Top