ಅಂಕಣ ಬರಹ

ಸಾಕುತಾಯಿ `ಪಾಲತಾ’

five black rocks

ಆಕೆಯ ಹೆಸರು ಪಾರ್ವತಕ್ಕ.  ನಾನು ಹುಟ್ಟಿದ ಸಮತಳದ ನೆರೆಯ ಹಳ್ಳಿಯಾದ ಬೆಟ್ಟ ತಾವರೆಕೆರೆಯವಳು. ತರೀಕೆರೆ ಸಂತೆಗೆ ಕಪ್ಪನೆಯ ಬಲೂನುಗಳಂತಹ ಮಡಕೆಗಳನ್ನು ಗಾಡಿಯ ಮೇಲೆ ಹೇರಿಕೊಂಡು, ಹುಶಾರಾಗಿ ತರುತ್ತಿದ್ದ ಕುಂಬಾರರ ಹಳ್ಳಿಯವಳು. ಮಕ್ಕಳಿಗೆ ಅರಬ್ಬಿಭಾಷೆ ಮತ್ತು ಕುರಾನು ಓದಿಸುವ ಶಿಕ್ಷಕಿಯಾಗಿದ್ದ ನನ್ನಮ್ಮನ ಖಾಸಾ ಗೆಳತಿ. ಇವಬ್ಬರೂ ಸೇರಿ ಕನ್ನಡ -ತಮಿಳು ಸಿನಿಮಾ ನೋಡುತ್ತಿದ್ದರು.  ತರೀಕೆರೆ ಪಟ್ಟಣಕ್ಕೆ ಗಾಡಿ ಕಟ್ಟಿಕೊಂಡು ಎರಡೂ ಕುಟುಂಬಗಳು ಸಂತೆಗೆ ಮತ್ತು ಸಿನಿಮಾಕ್ಕೆ ಹೋಗುತ್ತಿದ್ದವು. ಪಾರ್ವತಕ್ಕನ ಗಂಡ  ದೇವೀರಣ್ಣ, ಅಪ್ಪನ ಜೀವದ ಗೆಳೆಯ. ಇಂತಹ ಗೆಳೆಯ ಗೆಳತಿಯರನ್ನು ನಾನು ಜೀವಮಾನದಲ್ಲಿ ಕಂಡೇ ಇಲ್ಲ. ದೇವೀರಣ್ಣ ಮತ್ತು ಪಾರ್ವತಕ್ಕ ಲಿಂಗಾಯತರು. ನಮ್ಮ ಎರಡು ಕುಟುಂಬಗಳು ಯಾಕಷ್ಟು ಹತ್ತಿರವಾಗಿದ್ದವೊ ಹೇಗೆ ಮಿಲನವಾಗಿದ್ದವೊ, ಯಾಕೆ ಕೂಡಿ ಬದುಕಿದವೊ, ಸ್ಪಷ್ಟವಿಲ್ಲ. ನನಗೆ ನೆನಪಿರುವ ಮಟ್ಟಿಗೆ, ಅಪ್ಪನೂ ದೇವೀರಣ್ಣನೂ ಸೇರಿದಾಗ ಕೊಟ್ಟಿಗೆ ಮನೆಯಲ್ಲಿ ಕುಳಿತು ಚಿಕ್ಕವರಾದ ನಮಗೆ ಗೊತ್ತಾಗದಂತೆ ಏನನ್ನೊ ಕುಡಿಯುತ್ತಿದ್ದರು. ನಮ್ಮ ಕಬ್ಬಿನ ಆಲೆಮನೆ ಕೆಲಸಕ್ಕೆ, ಕಣಸುಗ್ಗಿಗೆ ದೇವೀರಣ್ಣನ  ಮಗ ತಿಪ್ಪೇಶಿ ನಮ್ಮ ಮನೆಯಲ್ಲಿ ಮನೆಯ ಮಗನಂತೆ ಒಂದು ವಾರಕಾಲ ಇರುತ್ತಿದ್ದನು. ನಮ್ಮ ಹಬ್ಬಗಳಿಗೆ ಊರಿಂದ ದೇವೀರಣ್ಣ-ಪಾರ್ವತಕ್ಕ ತಾವು ಬೆಳೆದ ಮೆಣಸಿನಕಾಯಿ ತರಕಾರಿ ಕಾಳುಕಡಿ ಕಳಿಸಿಕೊಡುತ್ತಿದ್ದರು.‌

ನನ್ನನ್ನು ಮೊಲೆ ಬಿಡಿಸಿದಾಗ ಅಮ್ಮ ಕೆಲವು ದಿನ ಪಾರ್ವತಕ್ಕನ ಮನೆಯಲ್ಲಿ  ಬಿಟ್ಟಿದ್ದಳು. ನಾನು ಅವಳಿಗೆ ‘ಪಾಲತಾ’ ಎಂದು ಕರೆಯುತ್ತಿದ್ದೆನಂತೆ. ಅಮ್ಮನನ್ನ ನೆನೆಸಿಕೊಂಡು ಅಳುತ್ತಿದ್ದೆನಂತೆ. ಒಂದು ಸಲ ರಾತ್ರಿ ಎದ್ದು ಎರಡಕ್ಕೆ ಹೋಗಬೇಕೆನಿಸಿ `ಪಾಲತಾ ಪಾಖನಾ..’ ಎಂದು ಅಳಲಾರಂಭಿಸಿದೆನಂತೆ. ಉರ್ದು ತಿಳಿಯದ ಪಾರ್ವತಕ್ಕ `ಪಾಯಸ ಬೇಕೇ, ಬೆಲ್ಲ ಬೇಕೆ, ಹಪ್ಪಳ ಸುಟ್ಟುಕೊಡನೇ’ ಎಂದು ಕನ್ನಡದಲ್ಲಿ ಕೇಳುತ್ತಿದ್ದಳಂತೆ. ನಾನು `ನೈನೈ’ ಎಂದು ಅಳುತ್ತಿದ್ದೆನಂತೆ.  ನಾನು ದೊಡ್ಡವನಾದ ಮೇಲೆ ಅವಳು ಇದನ್ನು ಎಲ್ಲರೆದುರು ಹೇಳಿ ನನ್ನ ಗೋಳು ಹುಯಿದುಕೊಳ್ಳುತ್ತಿದ್ದಳು. ನನ್ನನ್ನು ಅವಳು ತನ್ನ ನಂಟರ ಮನೆಯ ಮದುವೆ ಹಬ್ಬ ದೇವರ ಕಾರ್ಯಗಳಿಗೆ ಕರೆದುಕೊಂಡು ಹೋಗುತ್ತಿದ್ದಳು. ಪಾಯಿಜಾಮ ಧರಿಸಿದ ಸಾಬರ ಹುಡುಗನನ್ನು ಬಾಲಂಗೋಸಿಯಂತೆ ಕರೆದುಕೊಂಡು ಹೋದಾಗ ಆಕೆಯ ಬಂಧುಗಳು  ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದರೊ ನನಗೆ ತಿಳಿಯುತ್ತಿರಲಿಲ್ಲ. ಪಾರ್ವತಕ್ಕನ ನಗುವಿನ ಮುಖ ಈಗಲೂ ನನಗೆ ನೆನಪಿದೆ. ಆಕೆ ಕೆಂಪಗಿದ್ದಳು. ಸುಂದರವಾಗಿದ್ದಳು. ನಕ್ಕಾಗ ಕಣ್ಣಸುತ್ತ ನಿರಿಗೆಗಳಾಗುತ್ತಿದ್ದವು. ಜೀವ ಚೈತನ್ಯವನ್ನೇ ನಗುವಿನಲ್ಲಿ ಅಡಗಿಸಿದಂತಿದ್ದಳು.

ಹೀಗೆ ನನ್ನನ್ನು ಸಾಕಿದ ಪಾರ್ವತಕ್ಕ ಸಾಯುವ ಮುಂಚೆ ನನ್ನನ್ನು ನೋಡಬೇಕು ಎಂದು ಆಸೆಪಟ್ಟಳು. ಯಾರಯಾರದೊ ಕೈಯಲ್ಲಿ ಹೇಳಿಕಳಿಸಿದಳು. ನಾನು ದೂರದ ಹಂಪಿ ಸೇರಿ, ದೊಡ್ಡ ಮನುಷ್ಯನಾಗಿ ಊರಿಗೆ ದೂರದವನಾಗಿ, ಭಾಷಣ ಮಾಡಿಕೊಂಡು ದೇಶ ತಿರುಗುತ್ತಿದ್ದೆ. ಒಂದು ದಿನ ಬಿಡುವು ಮಾಡಿಕೊಂಡು ಅವಳಲ್ಲಿಗೆ ಹೋದೆ. ನನ್ನ ಪ್ರೀತಿಯ ಪಾಲತಾ ಸುಟ್ಟಬತ್ತಿಯಂತೆ ಅಂಗಳದಲ್ಲಿ ಮಲಗಿದ್ದಳು. ಮುಪ್ಪು ಮತ್ತು ಕಾಯಿಲೆಗಳು ಆಕ್ರಮಣಮಾಡಿ ಅವಳನ್ನು ಜರ್ಜರಿತ ಮಾಡಿದ್ದವು. ಹೇನು ಹೆಚ್ಚಾಗಿ  ತಲೆಯನ್ನು ಬೋಳಿಸಿದ್ದರು. ಮಲಮಲಗಿ ಚರ್ಮ ಸುಲಿದು ಅವಳ ಮೈಯಿಂದ ವಾಸನೆ ಬರುತ್ತಿತ್ತು. ಕಣ್ಣಸುತ್ತ ನಿರಿಗೆಯಾಗುವಂತೆ ನಗು ಮುಕ್ಕಳಿಸುತ್ತ ಪ್ರೀತಿಯನ್ನು ಪ್ರಕಟಿಸುತ್ತಿದ್ದ  ಸುಂದರ ಪಾಲತಳ ಚಿತ್ರವೇ ಭಗ್ನವಾಗಿ ಹೋಗಿತ್ತು. ಈ ರೂಪಾಂತರವನ್ನು ನಂಬಲು ನನ್ನ ಮನಸ್ಸಿಗೆ ಸಾಧ್ಯವಾಗಲಿಲ್ಲ. ತಾಯಪ್ರೀತಿ ಕೊಟ್ಟ ಪಾಲತ ಹೀಗಾದಳೆ ಎಂದು ವಿಸ್ಮಯ ಪಡುತ್ತ, ಮುಪ್ಪಿನ ಆಕ್ರಮಣವನ್ನು ಪರಿಭಾವಿಸುತ್ತ, ಅಲ್ಲೇ ಹೊಂಚುಹಾಕಿ ಸುಳಿದಾಡುತ್ತಿರುವ ಸಾವನ್ನು ಕಾಣುತ್ತ, ಕಟುವಾಗಿ ಹೊಮ್ಮುತ್ತಿದ್ದ ವಾಸನೆಯನ್ನು ಕಷ್ಟದಿಂದ ಸಹಿಸುತ್ತ, ಅವಳ ಕೈಯನ್ನು ಹಿಡಿದುಕೊಂಡು ಏನೂ ತೋಚದೆ ಸುಮ್ಮನೆ ಕೂತುಕೊಂಡೆ. ಕೈಗಳು ಒಣಗಿ ಚಕ್ಕಳವಾಗಿದ್ದವು. ಇವೇ ಕೈಗಳೇನು ನನಗೆ ಉಣಿಸಿದ್ದು, ನನ್ನ ಕುಂಡೆ ತೊಳೆದಿದ್ದು? ಅವಳು ಸತ್ತ ತನ್ನ ಗೆಳತಿಯನ್ನು ಅರ್ಥಾತ್ ನನ್ನಮ್ಮನನ್ನು ನೆನೆದು ಅತ್ತಳು. ನಾನು ಮಗುವಾಗಿದ್ದಾಗ ಅವಳಿಗೆ ಗೋಳು ಹಾಕಿಕೊಂಡದ್ದನ್ನು ಸಹ ನೆನಪಿಸಿಕೊಂಡಳು. ಸುಕ್ಕುತುಟಿಗಳಲ್ಲಿ ನಗು ಸುಳಿಯಿತೇ? ಸಂಜೆ ಮಸುಕಿನಲ್ಲಿ ಗೊತ್ತಾಗಲಿಲ್ಲ. ನನ್ನ ಕೈಯಮೇಲೆ ಮಾತ್ರ ಅವಳ ಬಿಸಿಯಾದ ಕಣ್ಣೀರ ಹನಿಗಳು ಬಿದ್ದವು. ತಾನು ಸಾಯುತ್ತಿರುವುದಕ್ಕೆ ದುಃಖಿಸಿದಳೊ ನಾನು ಬೆಳೆದು ದೊಡ್ಡ ಹುದ್ದೆಯಲ್ಲಿ ಇರುವುದಕ್ಕೆ ಆನಂದದಿಂದ ಅತ್ತಳೋ? ತುಂಬ ತಡವಾಗಿ ಬಂದ ನಾನು ಪಾಪಪ್ರಜ್ಞೆ ಮತ್ತು ಪರಿತಾಪದಿಂದ ಕಾಲಿಗೆ ನಮಸ್ಕಾರ ಮಾಡಿದೆ. ನನ್ನ ಒತ್ತಾಯಕ್ಕೆ ಬಂದು ತಾನು ಒಳಗೊಳ್ಳಲಾಗದ ಈ ಭಾವುಕ ನಾಟಕೀಯತೆಯನ್ನು ನೋಡುತ್ತ ಬಳಲಿದಂತಿದ್ದ ಮಡದಿಯನ್ನು ಮತ್ತಷ್ಟು ಬಳಲಿಸಬಾರದು ಎಂದು, ಕೊನೆಯ ಬಸ್ಸನ್ನು ತಪ್ಪಿಸಿಕೊಳ್ಳಬಾರದು ಎಂದು, ಮರಳಿ ಬಂದೆ. ಮಾರನೆಯ ದಿನ ಅವಳು ಪ್ರಾಣಬಿಟ್ಟಳು. ನಾನು ಬರಲೆಂದೇ ಜೀವ ಹಿಡಿದಿದ್ದಳೇ?

ಈಗಲೂ ನನಗೆ ತಾಯಪ್ರೀತಿ ಅಂದಾಗ ಮಹಾ ನಿಷ್ಠುರಿಯಾಗಿದ್ದ, ಸಂಸಾರ ಸಂಭಾಳಿಸುತ್ತ  ಸಿಡುಕಿಯಾಗಿದ್ದ ನನ್ನಮ್ಮ ನೆನಪಾಗುವುದಿಲ್ಲ. ಮಕ್ಕಳಿಲ್ಲದೆ ನನ್ನಂತಹವರನ್ನು ಸಾಕಿದ ಪಾರ್ವತಕ್ಕ ನೆನಪಾಗುತ್ತಾಳೆ. ಕೆಂಪನೆಯ ನಕ್ಕಾಗ ನಿರಿಗೆಗಟ್ಟುವ ಅವಳ ಮುಖ ನೆನಪಾಗುತ್ತದೆ.

 ಮುಸಲ್ಮಾನರಲ್ಲದವರು ಸ್ವರ್ಗಕ್ಕೆ ಹೋಗುವುದಿಲ್ಲ ಎಂದು ಪ್ರವಚನ ಕೇಳುವಾಗ ನನಗೆ ಅಳು ಬರುತ್ತಿತ್ತು. ಪಾರ್ವತಕ್ಕ ನರಕಕ್ಕೆ ಹೋಗುವುದನ್ನು ಕಲ್ಪಿಸಿ ಕೊಳ್ಳುವುದಕ್ಕೆ ವೇದನೆಯಾಗುತ್ತಿತ್ತು. ಹಳ್ಳಿಯಲ್ಲಿ ಅರೆರೈತನೂ, ಪಟ್ಟಣದಲ್ಲಿ ಕುಲುಮೆ ಕೆಲಸ ಮಾಡುತ್ತ ಇಡೀ ತಾಲೂಕಿನ ರೈತರಲ್ಲಿ ಜನಪ್ರಿಯನೂ ಆಗಿದ್ದ ನನ್ನಪ್ಪನ ಜೀವದ ಗೆಳೆಯರು ಯಾರಾಗಿದ್ದರು ಎಂದು ಈಗ ಪಟ್ಟಿಮಾಡುವಾಗ, ಬೆಟ್ಟತಾವರೆಕೆರೆಯ ದೇವೀರಣ್ಣ, ಉಪ್ಪಾರಬಸವನಹಳ್ಳಿಯ ರಾಮಣ್ಣ, ಗಾಳಿಹಳ್ಳಿಯ ಮೈಲಾರಣ್ಣ, ಅಮೃತಾಪುರದ ಸಿದ್ದನಾಯ್ಕ, ಗೇರಮರಡಿಯ ದಾಸಣ್ಣ ಹೀಗೆ. ನನ್ನ ಇಡೀ ಕುಟುಂಬಕ್ಕೆ ಜಾತಿಮತಗಳಾಚೆ ಸ್ನೇಹ ಪ್ರೀತಿ ಮಾಡುವ ಅಭ್ಯಾಸ ಸಹಜವಾಗಿ ಅನಾಯಾಸವಾಗಿ ಸಿಕ್ಕಿತ್ತು. ಆದ್ದರಿಂದಲೇ ಧರ್ಮದ ಹೆಸರಲ್ಲಿ ಹುಟ್ಟುವ ಎಲ್ಲ ಬಗೆಯ ವಿಕಾರಗಳು ನನ್ನಲ್ಲಿ ಅಸಹ್ಯ ಹುಟ್ಟಿಸುತ್ತವೆ. ಅವು ಪ್ರೀತಿ ಸ್ನೇಹ ಮನುಷ್ಯತ್ವದ ಶತ್ರುಗಳು.

ಸೂಫಿಗಳ ನಾಥರ ಶಾಕ್ತರ ಆರೂಢರ ಅಧ್ಯಯನಕ್ಕೆಂದು,  ಅದಕ್ಕೆ ಇದಕ್ಕೆ ಎಂದು, ನಾನು ಕರ್ನಾಟಕ-ಭಾರತವನ್ನೆಲ್ಲ ಅಂಡಲೆದಿದ್ದೇನೆ. ಮತ್ತೆಂದೂ ಜೀವನದಲ್ಲಿ ಭೇಟಿಯಾಗುವುದಿಲ್ಲ ಎಂದು ಗೊತ್ತಿದ್ದೂ ಜನ ತೋರಿಸುವ ಪ್ರೀತಿಯನ್ನು ಭರಪೂರ ಉಂಡಿದ್ದೇನೆ.  `ಅಮೃತ ವಾಹಿನಿಯೊಂದು ಹರಿಯುತಿದೆ ಮಾನವನೆದೆಯಿಂದಲೆದೆಗೆ ಸತತ’ ಎಂಬುದು ನನಗೆ ಕವಿವಾಣಿಯಾಗಿ ಅಲ್ಲ, ಅನುಭವವಾಗಿಯೇ ದಕ್ಕಿದೆ.

*********************************************************************

ರಹಮತ್ ತರೀಕೆರೆ

ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Leave a Reply

Back To Top