ದುಃಖವ ನೇವರಿಸುವೆನೊಮ್ಮೆ
ನಾಗರಾಜ್ ಹರಪನಹಳ್ಳಿ
ನಿನ್ನ ಬೆರಳ ಹಿಡಿದು ಮಾತಾಡಿಸುವೆ
ಅವುಗಳಿಗೆ ಅಂಟಿದ ದುಃಖವ
ಸಂತೈಸಿ ನೇವರಿಸುವೆನೊಮ್ಮ
ಉಸಿರೇ ನೀ ನನ್ನವಳು
ನಿನ್ನ ಮುಂಗುರುಳ ಮೂಗಿನ ಮೇಲಿಂದ ಹಿಂದೆ ಸರಿಸಿ, ಕಿವಿಯ ಸಂದಿಯಲಿ ಸಿಕ್ಕಿಸಿ, ತಂಟೆ ತಕರಾರು ಮಾಡಬೇಡಿ ಎಂದು ವಿನಂತಿಸುವೆ
ನಾವಿಬ್ಬರೂ ಮಾತಾಡುವಾಗ
ಬೆಳಕೇ ನೀ ನನ್ನವಳು
ನಿನ್ನ ಕಿವಿಯೋಲೆಯ ವೈಯ್ಯಾರವ
-ನೊಮ್ಮೆ ಹಿಡಿದು ಮಾತಾಡಿಸುವೆ
ನಮ್ಮಿಬ್ಬರ ಮಾತಿನ ಮಧ್ಯೆ
ನೀವೇಕೆ ಇಣುಕುವುದೆಂದು
ಜೋರು ಮಾಡುವೆ ..
ನಾವಿಬ್ಬರೂ ಪಿಸುಮಾತುನಾಡುವ ಮಧ್ಯೆ
ಅವುಗಳ ಪ್ರಶ್ನಿಸುವೆ
ಒಲವೇ ನೀ ನನ್ನವಳು
ನಿನ್ನ ಕೈ ಬಳೆ ಸದ್ದಿಗೆ ಪ್ರೀತಿಯಿಂದ ಎಚ್ಚರಿಸುವೆ
ಅಪ್ತ ಮಾತಿನ ಮಧ್ಯೆ
ಎಂಥ ಸದ್ದು ನಿಮ್ಮದು ??
ಸುಮ್ಮನಿರೆಂದು ವಿನಂತಿಸುವೆ
ಮೌನವೇ ನೀ ನನ್ನವಳು
ಕಾಲಗೆಜ್ಜೆಗೆ ಬೆರಳಿಟ್ಟು
ನಮಿಸುವೆ , ನಾವು ಗಾಢ ಚುಂಬನದಲ್ಲಿರುವಾಗ
ಸದ್ದು ಮಾಡಿ, ಜಗಕೆ ಗುಲ್ಲು ಎಬ್ಬಿಸಬೇಡಿರೆಂದು …
ಕಾರಣ ಪ್ರೀತಿಯೆಂಬುದು ಗುಟ್ಟು
ಜೀವದ್ರವ್ಯವೇ ನೀ ನನ್ನವಳೆಂದು
*********************************************
ಗಾಢ ಪ್ರೀತಿಯ ಚಂದ ಪದ್ಯ..