ಅಂಕಣ ಬರಹ
ಕಬ್ಬಿಗರ ಅಬ್ಬಿ
ಕಲ್ಲು ಸಕ್ಕರೆಯೊಳಗೆ ಸಿಹಿ
ಬಂತೆಲ್ಲಿಂದ!
ಅಕ್ಕನ ಪುಟ್ಟ ಮಗಳು ಯಾಕೋ ಹಟ ಮಾಡುತ್ತಾ ಅಳುತ್ತಿದ್ದಳು.
ಪುಟ್ಟೀ! ಬಾ, ಕಲ್ಲು ಸಕ್ಕರೆ ತಗೋ ಅಂತ ಆಕೆಯ ಬಾಯೊಳಗೆ ಹಾಕಿದೆ. ಕಣ್ಣಾಲಿಗಳ ತುಂಬಾ ನೀರು! ಸಕ್ಕರೆಯ ಸಿಹಿಗೆ, ಅಳು ನಿಂತು ಒಂದು ಬಾಲಚಂದಿರ ನಗು!.
“ಅಂಕಲ್! ಈ ಸಕ್ಕರೆ ಸಿಹಿ ಯಾಕೆ?. ಇದರೊಳಗೆ ಸಿಹಿ ಬಂತೆಲ್ಲಿಂದ! “
ಮಗುವಿನ ನಗು ಹಿಂಬಾಲಿಸಿ ಬಂತಿದೋ ಪ್ರಶ್ನೆ.
ಯಾಕಪ್ಪಾ ಈಕೆಗೆ ಕಲ್ಲು ಸಕ್ಕರೆ ಕೊಟ್ಟೆ! ಅಂತ ಒಳಗೊಳಗೆ ಅನಿಸಿದರೂ, ಉತ್ತರಿಸಿದೆ.
” ಮಗೂ, ಸಕ್ಕರೆಯ ಅಣು, ನಮ್ಮ ನಾಲಿಗೆಯ ಮೇಲ್ಪದರದ ಜತೆಗೆ ಫ್ರೆಂಡ್ ಶಿಪ್ ಮಾಡ್ಕೊಂಡು ಮಿದುಳಿಗೆ ಒಂದು ಸಂದೇಶ ಕಳಿಸುತ್ತೆ!. ಆ ಸಂದೇಶವನ್ನು ಮಿದುಳು ” ಸಿಹಿ” ಎಂದು ಓದುತ್ತೆ! “
ಪುಟ್ಟಿ ಕಣ್ಣರಳಿಸಿ ನನ್ನ ನೋಡಿ ಯೋಚನೆಯಲ್ಲಿ ಮಗ್ನಳಾದಳು.
ಬದುಕಿದೆಯಾ ಬಡಜೀವ ಅಂದುಕೊಂಡಾಗ ಪುಟ್ಟಿಯದ್ದು ಇನ್ನೊಂದು ಚಿಗುರುಬಾಣ.
” ಅಂಕಲ್! ಸಿಹಿ ಕೊಡುವ ಸಕ್ಕರೆಗೆ ಕಲ್ಲು ಅಂತ ಹೇಳುತ್ತಾರೆ ಯಾಕೆ! “
ನಾನಂದೆ.
” ಮಗೂ ಅದು ನಿರ್ಜೀವ ಕಲ್ಲಿನ ಹಾಗೆ ಗಟ್ಟಿಯಾಗಿರುವುದರಿಂದ ಮತ್ತು ಸಕ್ಕರೆಯ ಹಾಗೆ ಸಿಹಿಯಾಗಿರುವುದರಿಂದ ಅದನ್ನು ಕಲ್ಲು ಸಕ್ಕರೆ ಎಂದು ಕರೆಯುತ್ತೇವೆ”
ಅಷ್ಟು ಹೇಳಿ ನಾನು ಯೋಚನೆಯ ಅಂಗಳದಲ್ಲಿ ಬಂದಿಯಾದೆ. ಪುಟ್ಟಿ ಅಂಗಳಕ್ಕೆ ಓಡಿ ಆಡುತ್ತಿದ್ದಳು.
ಹೌದಲ್ಲ! ಕಲ್ಲು ನಿರ್ಜೀವವೇ?. ಕಲ್ಲಿನೊಳಗೆ ಅಸಂಖ್ಯಾತ ಅಣು,ಪರಮಾಣುಗಳು, ಸದಾ ಕಂಪಿಸುತ್ತಲೇ ಇರುತ್ತವೆ. ಈ ಸ್ಪಂದನಶೀಲ ಪರಮಾಣುಗಳಿಗೆ ಜೀವವಿಲ್ಲ ಎಂದರೆ!. ಉಷ್ಣತೆಯನ್ನು ತಣಿಸಿ ಶೂನ್ಯಕ್ಕೆ ತಲಪಿಸಿದರೂ, “ಜೀರೋ ಪಾಯಿಂಟ್ ಎನರ್ಜಿ” ಎಂದು ಕರೆಯಲ್ಪಡುವ ಚೈತನ್ಯದಿಂದ ಪರಮಾಣು ಕಂಪಿಸುತ್ತಲೇ ಇರುತ್ತದೆ ಅಂತ ಹೇಳುತ್ತೆ, ಆಧುನಿಕ ಭೌತಶಾಸ್ತ್ರ.
ಇನ್ನು ಪರಮಾಣುವಿನೊಳಗೆ ಕೇಂದ್ರದಲ್ಲಿ ಪಾಸಿಟಿವ್ ಚಾರ್ಜಿನ ಪ್ರೋಟಾನ್ ಎಂಬ ಕಣ, ಆ ಕೇಂದ್ರದ ಸುತ್ತ ಸುತ್ತುತ್ತಲೇ ಇರುತ್ತವೆ ಇಲೆಕ್ಟ್ರಾನ್ ಎಂಬ ನೆಗೆಟಿವ್ ಚಾರ್ಜಿನ ಕಣ. ಈ ಇಲೆಕ್ಟ್ರಾನ್ ಎಂಬ ಕಣ, ನಿರಂತರವಾಗಿ ಚಲಿಸುತ್ತಾ ಪರಮಾಣು ಕೇಂದ್ರದ ಸುತ್ತ ಸುತ್ತುತ್ತಲೇ ಇರುತ್ತದೆ. ಇಂತಹ ಚಲನಶೀಲ, ಚೈತನ್ಯ ಪರಮಾಣುವಿನೊಳಗೆ!. ಕಲ್ಲಿನೊಳಗಿನ ಪರಮಾಣು ನಿರ್ಜೀವವೇ?.
ಆಲ್ಬರ್ಟ್ ಐನ್ಸ್ಟೈನ್ ದ್ರವ್ಯವನ್ನು ಚೈತನ್ಯವಾಗಿ ಪರಿವರ್ತಿಸಬಹುದು ಎಂಬ ಊಹನಾತ್ಮಕ ಪ್ರತಿಪಾದನೆ ಮಾಡಿದ್ದು, ಮುಂದೆ ಅಣು ಬಾಂಬುಗಳಲ್ಲಿ, ಅಣು ವಿದ್ಯುತ್ ಸ್ಥಾವರಗಳಲ್ಲಿ ಪ್ರಾಯೋಗಿಕವಾಗಿ ಅರಿವಿಗೆ ಬಂತು. ಪುನಃ ಪ್ರಶ್ನೆ ಅದೇ.
ಕಲ್ಲು ನಿರ್ಜೀವವೇ?!!
ಕವಿತೆಗೆ ಬರುವ ಮೊದಲು ಒಮ್ಮೆ ಆಕಾಶದತ್ತ ಕಣ್ಣು ಹಾಯಿಸೋಣ!
ಸೂರ್ಯನ ಸುತ್ತ ಸುತ್ತುವ ಗ್ರಹಗಳು, ನಕ್ಷತ್ರ ಪುಂಜದೊಳಗೆ ಚಲನಶೀಲವಾದ ಸೂರ್ಯ, ಅಂತಹ ಮೂರರಿಂದ ನಾನ್ನೂರು ಬಿಲ್ಲಿಯನ್ ( ಹತ್ತು ಸಾವಿರ ಕೋಟಿಯಿಂದ ನಲವತ್ತು ಸಾವಿರ ಕೋಟಿ) ಸೂರ್ಯನಂತಹ ನಕ್ಷತ್ರಗಳ ಪುಂಜವಾದ ‘ಮಿಲ್ಕೀ ವೇ’ ಎಂಬ ಗ್ಯಾಲಕ್ಸೀ!, ಅಂತಹಾ ಇನ್ನೂರು ಬಿಲ್ಲಿಯನ್ ( ಇಪ್ಪತ್ತು ಸಾವಿರ ಕೋಟಿ) ಗ್ಯಾಲಕ್ಸಿಗಳು ಇವಿಷ್ಟನ್ನೂ ಒಡಲೊಳಗೆ, ಅಂತ ಅಂದಾಜು ಮಾಡಿರುವ ವಿಶ್ವ. ಇವುಗಳಲ್ಲಿ ಯಾವುದೂ ನಿಂತಿರಲ್ಲ, ಎಲ್ಲವೂ ಚಲಿಸುತ್ತಲೇ ಇರುತ್ತವೆ.
ಸೂರ್ಯನ ಒಳಗೂ ಅಷ್ಟೇ, ನ್ಯೂಕ್ಲಿಯರ್ ಸಂಯೋಗದಿಂದ ಉತ್ಪನ್ನವಾದ ಅಗಾಧ ಚೇತನ, ಬೆಳಕು, ಕಿಚ್ಚು, ವಿಕಿರಣಗಳು ಇತ್ಯಾದಿಗಳಿಂದ ಸದಾ ಉರಿಯುವ ಕ್ರಿಯಾ ಶಕ್ತಿಯ ಚೆಂಡಾಗಿ ಸೂರ್ಯ ಕಾಣಿಸುತ್ತಾನೆ.
ಇಂತಹ ಅಗಾಧತೆಯಲ್ಲಿ ಸೂಜಿ ಮೊನೆಯ ಮಿದುಳಿನ ಮನುಷ್ಯ ಮತ್ತು ಆತನ ಮನಸ್ಸು, ತಾನು ಮಾತ್ರ ಜೀವಿ, ಇನ್ನುಳಿದ ಕಲ್ಲು, ಭೂಮಿ, ನಕ್ಷತ್ರ, ಆಕಾಶಗಳು ನಿರ್ಜೀವಿ ಎಂದು ನಿರ್ಧರಿಸುವಾಗ, ಆ ಪ್ರಜ್ಞೆ ಎಷ್ಟು ಸ್ವಕೇಂದ್ರಿತವಲ್ಲವೇ?.
“ಬಾಗಿಲೊಳು ಕೈಮುಗಿದು
ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು
ಕಲೆಯ ಬಲೆಯು “
ಮನುಷ್ಯ ಪ್ರಜ್ಞೆಯೇ, ಅಗಾಧ ವಿಶ್ವ ಗುಡಿಯೊಳಗೆ ಬಂದ ಯಾತ್ರಿಕನೇ, ಈ ಗುಡಿ ಶಿಲೆಯಲ್ಲ! ಇದು ವಿಕಸನಕ್ಕೆ ಹಾತೊರೆಯುವ ಕಲೆಯ ಬಲೆ!
ಹೀಗೆ ಕಲ್ಲನ್ನು ನಿರ್ಜೀವವಾಗಿ ಕಾಣದೆ ಕಲೆಯ ಬಲೆಯಾಗಿ ಕಾಣುತ್ತಾನೆ ಕವಿ.
ಚಿರಂತನ ಚೇತನದ ಕವಿ ಸುಬ್ರಾಯ ಚೊಕ್ಕಾಡಿಯವರ ಕಲ್ಲು ಮಂಟಪ ಸಂಕಲನದ ಕವಿತೆ ” ಕಲ್ಲು ಮಂಟಪ” ದ ಸಾಲುಗಳು ಹೀಗೆ ತೆರೆಯುತ್ತವೆ.
“ಎತ್ತರದ ಬೋಳು ಗುಡ್ಡದ ತುದಿಯಲ್ಲಿ
ಕಲ್ಲು ಮಂಟಪ
ಒಂಟಿಯಾಗಿದೆ
ಗೊಮ್ಮಟನ ಹಾಗೆ
ಎಲ್ಲ ಕಳಚಿಕೊಂಡಿದೆ
ಜಗದ ಪರಿವೆಯೆ ಇರದೆ,ನಿರಾಳ
ಆಕಾಶಕ್ಕೆ ಮುಖ ಮಾಡಿದೆ ಧ್ಯಾನಸ್ಥವಾದಂತಿದೆ”
ಈ ಮಂಟಪ ಕಲ್ಲಿಂದ ಕೆತ್ತಿದ ಮಂಟಪ. ಒಂಟಿಯಾದರೂ ಸಾಧಾರಣವಾಗಿ ಮಂಟಪ ಹಲವು ಯಾತ್ರಿಕರಿಗೆ ತಂಪುದಾಣ.
ಗೊಮ್ಮಟನ ಹಾಗೆ ಈ ಮಂಟಪ. ಇದು ನಿರ್ಲಿಪ್ತ. ಸುಖ ದುಃಖ, ಗೆಳೆಯ,ವೈರಿ, ಬಿಸಿಲು ಮಳೆಯ ನಡುವೆ ಜೀವಂತವಾಗಿದ್ದರೂ ನಿರ್ಲಿಪ್ತತೆ, ಎಲ್ಲಾ ಬಂಧಗಳಿಂದ ಕಳಚಿಕೊಂಡ ಯೋಗ ಸಮಾಧಿ ಸ್ಥಿತಿ ಪಡೆದ ಗೊಮ್ಮಟನ ಹಾಗೆ ಈ ಮಂಟಪ.
ಮಂಟಪ ಆಗಸಕ್ಕೆ ಮುಖಮಾಡಿದೆ ಎನ್ನುವುದನ್ನು ಗಮನಿಸಲೇ ಬೇಕು.
” ಕೆಳಗೆ, ಮತ್ತೂ ಕೆಳಗೆ
ಮೂಲಾಧಾರದಲ್ಲಿ
ಮರಗಿಡಗಳು,ಹರಿಯುವ
ತೊರೆಗಳು,ಜೀವ ಜಂತುಗಳು
ಸದ್ದಿರದೆ, ನಿದ್ದೆ ಹೋದಂತಿದೆ “
ಕೆಳಗೆ ಮತ್ತೂ ಕೆಳಗೆ, ಇಳಿಯುತ್ತಾ, ಆಳಕ್ಕೆ ಮತ್ತು ತಳಕ್ಕೆ ತಲಪಿದಾಗ ಅಲ್ಲಿ ಸದಾ ಚಲನಶೀಲ, ಜೀವ ತತ್ವಗಳು ಸದ್ದಿರದೆ ನಿದ್ದೆ ಹೋದಂತಿದೆ. ಇದು ಸಾಧಾರಣ ನಿದ್ದೆಯಲ್ಲ. ಇದು ಓರ್ವ ಯೋಗಿಯ ನಿದ್ದೆ.
ತನ್ನ ಅಷ್ಟೂ ಇಂದ್ರಿಯಗಳನ್ನು ನಮಾಧಾನಿಸಿ, ಧ್ಯಾನಕ್ಕಿಳಿಸಿ ಚಲನಶೀಲತೆಯನ್ನೇ ಸ್ಥಿರೀಕರಿಸಿದ ಸಮಾಧಿ ಸ್ಥಿತಿ. “ನಿದ್ದೆ ಹೋದಂತಿರುವ” ಎಂಬ ಪ್ರಯೋಗವನ್ನು ಗಮನಿಸಿ.
” ಹಿಂದೆ ಇಲ್ಲೇ ಇದ್ದ
ಯೋಗಿಯ ಧ್ಯಾನದ ಪ್ರಭಾವಳಿ
ಕಂಭಗಳಿಗೆ, ಛಾವಣಿಗೆ
ಅಂಟಿಕೊಂಡಂತಿವೆ. ಆ ವಲಯದಲ್ಲೇ
ಎಲ್ಲ ತಟಸ್ಥವಾಗಿರುವಂತೆ
ಕಲ್ಲು ಮಂಟಪವೇ
ಯೋಗಿಯಾಗಿ ಬಿಟ್ಟಂತಿದೆ
ತಾನೇನು ಧ್ಯಾನಿಸುತ್ತಿದೆಯೋ
ಅದೇ ತಾನಾಗುವ ಹಾದಿಯಲ್ಲಿ ಇರುವಂತಿದೆ”
ಭೌತಿಕಕ್ಕೆ ಮೀರಿದ ಪ್ರಭಾವಳಿ, ಎತ್ತರದ ಬೋಳುಗುಡ್ಡದ ಕಲ್ಲು ಮಂಟಪದ ಕಂಭಗಳಿಗೆ ಛಾವಣಿಗೆ ಅಂಟಿಕೊಂಡಂತಿವೆ.
ಕಲ್ಲು ಮಂಟಪವೇ ಯೋಗಿಯಾಗಿ, ಏಕತ್ವದಿಂದ ಅನಂತತತ್ವದಲ್ಲಿ ಲೀನವಾಗುವ, ಆತ್ಮ, ಪರಮಾತ್ಮ ಒಂದೇ ಆಗುವ ಹಾದಿಯಲ್ಲಿ ಇರುವಂತಿದೆ.
ಈ ಕವಿತೆಯಲ್ಲಿ ಎರಡು ಅಂಶಗಳು ಎದ್ದು ಕಾಣುತ್ತವೆ
ಮೊದಲನೆಯದು ಕವಿ ಕಾನ್ಷಿಯಸ್ಲೀ ಉಪಯೋಗಿಸಿದ
ಧ್ಯಾನಸ್ಥವಾದಂತಿದೆ,
ನಿದ್ದೆ ಹೋದಂತಿದೆ ,
ಯೋಗಿಯಾಗಿ ಬಿಟ್ಟಂತಿದೆ, ಛಾವಣಿಗೆ ಅಂಟಿಕೊಂಡಂತಿವೆ, ಹಾದಿಯಲ್ಲಿ ಇರುವಂತಿದೆ
ಇತ್ಯಾದಿ ಪದ ಪುಂಜಗಳು, ಅನುಭವಾತ್ಮಕ ದರ್ಶನಗಳು ತನ್ನದೇ ಆಗಿದ್ದು ಇತರರಿಗೆ ವೈಜ್ಞಾನಿಕವಾಗಿ ತೋರಿಸಲಾಗದಿದ್ದಾಗ, ಅನುಭೂತಿಯ ಅವಸ್ಥೆಯನ್ನು ವಿವರಿಸಿದಂತಿದೆ.
ನೀವು ಯಾವಾಗಲೂ ಗಮನಿಸಬಹುದು, ವೈಜ್ಞಾನಿಕ ವಾದಗಳು, ಭೌತಿಕ ಉಪಕರಣಗಳಿಂದ ಇತ್ಯಾತ್ಮಕವಾಗಿ ನೇರವಾಗಿ ಹೇಳಲ್ಪಡುತ್ತೆ. ಆದರೆ, ಭಾವನಾತ್ಮಕ ಮತ್ತು ಅಧ್ಯಾತ್ಮಿಕ ಅನುಭೂತಿಗಳು, ಭೌತಿಕ ಮತ್ತು ಇಂದ್ರಿಯಗ್ರಾಹ್ಯ ಪರಿಮಿತಿಗೆ ಮೀರಿದ್ದಾದ್ದರಿಂದ , ಓದುಗನಿಗೆ, ನೀನೂ ಸಾಧನೆ ಮಾಡಿದರೆ, ಇಂತಹ ಅನುಭೂತಿಗೊಳಗಾಗುವ ಸಾಧ್ಯತೆ ಇದೆ ಎಂದು ಸೂಚಿಸಿ ಸುಮ್ಮನಾಗುತ್ತೆ.
ಕವಿತೆಯ ಎರಡನೆಯ ಅಂಶ ಯೋಗ ಸಾಧನೆಗೆ ಸಂಬಂಧಿಸಿದ್ದು. ಪತಂಜಲಿಯ ಯೋಗ ಶಾಸ್ತ್ರದಲ್ಲಿ, ಬೆನ್ನೆಲುಬನ್ನು ನೇರವಾಗಿಸಿ ಕುಳಿತಾಗ, ತಲೆಯಿಂದ ಶುರುವಾಗಿ ಬೆನ್ನೆಲುಬು ಕೊನೆಯಾಗುವ ತೊಡೆ ಸಂದಿಯ ತನಕ ಇಡಾ,ಪಿಂಗಳ ಮತ್ತು ಸುಶುಮ್ನ ಎಂಬ ಮೂರು ನಾಡಿಗಳು ಇವೆ ಎಂದು ವಿವರಿಸಲಾಗಿದೆ. ಈ ಮೂರೂ ನಾಡಿಗಳ ಆಕ್ಸಿಸ್ ನ ಬುಡದಲ್ಲಿರುವ ಚಕ್ರವೇ ಮೂಲಾಧಾರ ಚಕ್ರ
ಮತ್ತು ಇನ್ನೊಂದು ತುದಿಯಲ್ಲಿ ಶಿರಸ್ಸಿನಲ್ಲಿ, ಸಹಸ್ರಾರ ಚಕ್ರವಿದೆ. ಈ ಎರಡೂ ಕೊನೆಗಳ ನಡುವೆ, ಸ್ವಾದುಷ್ಠಾನ, ಮಣಿಪುರ, ಅನಾಹತ, ವಿಶುದ್ಧಿ, ಮತ್ತು ಆಜ್ಞಾ ಚಕ್ರಗಳಿವೆ. ಚಕ್ರಗಳು ಚೈತನ್ಯದ ವಲಯಗಳು.
ಕಲ್ಲು ಮಂಟಪ ಕವಿತೆಯಲ್ಲಿ, ಕವಿ ಈ ವಿಚಾರವನ್ನೂ ಟಚ್ ಮಾಡಿದ್ದು ಗಮನಿಸಬಹುದೇನೋ. ಮನುಷ್ಯನ ಚೈತನ್ಯದ ದೇಹದ ತುದಿಯಲ್ಲಿ ಕಲ್ಲು ಮಂಟಪ ಆಗಸಕ್ಕೆ ಮುಖಮಾಡಿದೆ ಅಲ್ಲವೇ. ಕೆಳಗೆ ಮತ್ತೂ ಕೆಳಗೆ ಮೂಲಾಧಾರವಿದೆ ಅಂತ ಕವಿತೆಯ ಸಾಲುಗಳು ಹೇಳುತ್ತವೆ.
” ಆಕಾಶದಲ್ಲಿನ ಸ್ನಿಗ್ಧ ಬೆಳಕು
ಸಮೀಪಿಸುತ್ತಿದೆ “
ಎಂದು ಈ ಕವಿತೆಯ ಕೊನೆಯ ಸಾಲುಗಳಲ್ಲಿ, ಅನಂತ ಚೇತನ, ನಮ್ಮೊಳಗಿನ ಚೇತನವನ್ನು ತನ್ನೊಳಗೆ ಸೇರಿಸಿಕೊಳ್ಳಲು ಸಮೀಪಿಸುವ ಬಗ್ಗೆ, ದೇಹ ತೊರೆದು ಆತ್ಮ ಪರಮಾತ್ಮ ನಲ್ಲಿ ಲೀನವಾಗುವ ಬಗ್ಗೆ ಕವಿ ಸೂಚಿಸುತ್ತಿದ್ದಾರೆಯೇ
*******************************************************************
ಮಹಾದೇವಕಾನತ್ತಿಲ
ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ
ನಿರ್ಜೀವ ಎಂದು ನಾವೆನ್ನುವ ಕಲ್ಲಿನಲ್ಲಿ ಯೋಗಿಕ ದೃಷ್ಟಿಯನ್ನು ಕವಿ ಕಂಡರು. ನೀವು ನಮಗೆ ಕಾಣಿಸಿದಿರಿ.
ತುಂಬಾ ಕಾವ್ಯಹೃದಯದ ಪ್ರತಿಕ್ರಿಯೆ ರಮೇಶ್ ಸರ್
ಧನ್ಯವಾದಗಳು
ಕವಿ ಭಾವವನ್ನು ಬಹಳ ಸಿಹಿಸಿಹಿಯಾಗಿ ಉಣಿಸಿದ ನವದರ್ಶನ ತೋರಿಸುವ ಬರಹ. ಬಹಳ ಇಷ್ಟವಾಯಿತು.
ಪೂರ್ಣಿಮಾ ಅವರೇ..
ಮಾವಿನ ಮರ ಬೆಳೆದಷ್ಟೂ, ಮಾವಿನ ಹಣ್ಣಿನ ಸಿಹಿ ಹೆಚ್ಚುತ್ತಾ ಹೋಗುತ್ತಂತೆ. ಚೊಕ್ಕಾಡಿ ಅವರ ಕವಿತೆಗಳೂ ಹಾಗೆಯೇ.
ಸಿಹಿ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು
ಒಂದು ಕವಿತೆಯ ಮೂಲಕ ಎಷ್ಟೆಲ್ಲ ಸತ್ಯ ದರ್ಶನ.ಒಳ್ಳೆಯ ಕವಿತೆ,ಅಷ್ಟೇ ಚೆಂದದ.ವಿಶ್ಲೇಷಣೆ.ಚೊಕ್ಕಾಡಿ ಸರ್, ಕಾನತ್ತಿಲ ಸರ್..ಇಬ್ಬರಿಗೂ ಅಭಿನಂದನೆಗಳು.
ಸ್ಮಿತಾ ಅವರೇ
ನೀವೂ ಕವಿತೆಗಳ ಮೂಲಕ ನೋಟಕ್ಕೆ ಹೊಸ ಮಗ್ಗುಲುಗಳನ್ನು ಕೊಡುತ್ತೀರಿ
ನಿಮ್ಮ ಪ್ರತಿಕ್ರಿಯೆ ಪ್ರೋತ್ಸಾಹ ದ ಮಾತುಗಳಿಗೆ ಧನ್ಯವಾದಗಳು
ಪುಟ್ಟಿಯ ಇಂಥ ಪ್ರಶ್ನೆಗಳೆ ಶೋಧನೆಗೆ,ಆವಿಷ್ಕಾರಕ್ಕೆ ಕಾರಣವಲ್ಲವೇ? ಪ್ರೋಟಾನ್,ಇಲೆಕ್ಚ್ರಾನ,ಪರಮಾಣುಗಳನ್ನು ವಿವರಿಸುತ್ತ ಕಲ್ಲು ನಿರ್ಜೀವವೇ ಎಂಬ ಜಿಜ್ಞಾಸೆ ಪ್ರಾರಂಭಿಸಲು ಪುಟ್ಟಿಯ ಬಾಯಿಂದ ಕಲ್ಲು ಸಕ್ಕರೆಯ ಬಗ್ಗೆ ಪ್ರಶ್ನೆ ಹೊರಡಿಸಿದ್ದು ಹೊಸ ಹಾಗೂ ಸೃಜನಶೀಲ ವಿಚಾರವೆನಿಸಿ ಲೇಖಕರ ದೃಷ್ಟಿಕೋನದ ಬಗ್ಗೆ ಕೌತುಕವೆನಿಸಿತು.
ಮುಂದಿನದು ಯೋಗಶಾಸ್ತ್ರ,ವಿಜ್ಞಾನ ಶಾಸ್ತ್ರ,ಆಧ್ಯತ್ಮಶಾಸ್ತ್ರಗಳ ತಳಹದಿಯ ಮೇಲೆ ಮಾಡಿದ ವಿಮರ್ಶೆಉತ್ತಮ ಕವಿತೆಗೆ ನ್ಯಾಯ ಒದಗಿಸಿದಂತಿದೆ
ಇಂಥ ವಿಮರ್ಶೆಯನ್ನು ಓದುವುದೇ ಸಂತಸ
ಧನ್ಯವಾದಗಳು
ಮೀರಾ ಜೋಶಿ ಅವರೇ
ಕವಿತೆ ಕಣಿಸುವ ಬಗೆ ನೋಡುವ ಕೋನದ ಮೇಲೂ ಅವಲಂಬಿಸಿದ್ದರಿಂದ, ಹಾಗೆ ಅನಿಸಿ ಬರೆದೆ
ನಿಮಗೆ ಇಷ್ಟವಾದದ್ದು ನನಗೆ ತುಂಬಾ ಖುಷಿ.
ಧನ್ಯವಾದಗಳು