ಬದುಕು ಬಂದಂತೆ

ಕಥೆ

ಬದುಕು ಬಂದಂತೆ

Indian woman art | Etsy

ಅನಸೂಯ ಎಂ.ಆರ್.

ಲತ ಮನೆಗೆ ಬಂದಾಗ ಎಂದಿನಂತೆ  ಸುಶೀಲಮ್ಮನು

ಬಾಗಿಲು ತೆರೆಯದೆ  ಮನು ಬಂದಾಗ “ಅಜ್ಜಿ ಎಲ್ಲೊ”

ಎಂದಳು. ” ಅಜ್ಜಿ ಮಲಗಿದಾರಮ್ಮ” ಎಂದ ಕೂಡಲೇ

ವ್ಯಾನಿಟಿ ಬ್ಯಾಗ್ ಮತ್ತು ಲಂಚ್ ಬಾಕ್ಸ್ ನ್ನು ಟೇಬಲ್ ಮೇಲಿಟ್ಟು “ಅತ್ತೆ” ಎನ್ನುತ್ತಾ ರೂಂ ನೊಳಗೆ ಹೋದಳು

ಮುಸುಕು ಹಾಕಿ ಮಲಗಿದ್ದ ಸುಶೀಲಮ್ಮ ಮುಸುಕನ್ನು

ತೆಗೆಯುತ್ತಾ “ಯಾಕೋ, ಜ್ವರ ಬಂದಂತಾಗಿದೆ ಕಣಮ್ಮ”

ಎಂದರು. ಅವರ ಹಣೆಯ ಮೇಲೆ ಕೈಯಿಟ್ಟು ನೋಡಿದ

ಲತಾ ” ಬಹಳ ಜ್ವರ ಇದೆ. ನಡೀರಿ ಡಾಕ್ಟರ್ ಹತ್ರ ಹೋಗಿ

ಬರೋಣ ಮೊದ್ಲು ಬಿಸಿ ಬಿಸಿ ಕಾಫಿ ಕುಡೀರಿ ಮಾಡ್ಕಂಡು

ಬರ್ತಿನಿ ” ಎನ್ನತ್ತಾ ಅಡುಗೆ ಮನೆಗೆ ಹೋದಳು. ಮಗನಿಗೆ

ಹಾರ್ಲಿಕ್ಸ್ ಕೊಟ್ಟು ತಮಗಿಬ್ಬರಿಗೂ ಕಾಫಿ ಮಾಡಿಕೊಂಡು

ಬಂದು ಅತ್ತೆಗೂ ಕೊಟ್ಟು ತಾನು ಅಲ್ಲೆ ಕುಳಿತು ಕುಡಿದಳು 

ನಂತರ ಮುಖ ತೊಳೆದು ಫ್ರೆಶ್ ಆದ ನಂತರ  ಮಗನಿಗೆ ಮನೆಯಲ್ಲಿರಲು ಹೇಳಿ ಆಟೋದಲ್ಲಿ ಅತ್ತೆಯನ್ನು ಕರೆದು

ಕೊಂಡು ಕ್ಲಿನಿಕ್ ಗೆ ಹೊರಟಳು.ಪರಿಚಯದ ಡಾಕ್ಟರ್ ಗೆ ತೋರಿಸಿ ಮಾತ್ರೆ, ಹಣ್ಣುಗಳನ್ನು ತೆಗೆದುಕೊಂಡು ಮನೆಗೆ ಬಂದಳು.ಅವರನ್ನು ಮಲಗಿಕೊಳ್ಳಲು ಹೇಳಿ ಅಡುಗೆಯ ಕೆಲ್ಸವನ್ನು ಮುಗಿಸಿ ಅತ್ತೆಗೆ ರವೆಗಂಜಿ ಮಾಡಿ ಕುಡಿಯಲು  ಕೊಟ್ಟು ಮಾತ್ರೆಗಳನ್ನು ನುಂಗಿಸಿ ಆರಾಮಾಗಿ ಮಲಗಲು ಹೇಳಿ ಮಗನ ಓದಿಸಿ ನಂತರ ಇಬ್ಬರೂ ಊಟ ಮುಗಿಸಿ ಮಲಗಿದರು.ಬೆಳಿಗ್ಗೆ ಅತ್ತೆಯ ಜ್ವರ ಕಡಿಮೆಯಾಗಿದ್ದರೂ ಸಹ ಶಾಲೆಗೆ ರಜೆ ಹಾಕಿದಳು.ಮನುವನ್ನು ಶಾಲೆಗೆ ಕಳಿಸಿ ಅತ್ತೆ ತಿಂಡಿ ತಿಂದ ನಂತರ ಮಾತ್ರೆ ಕೊಟ್ಟು ಮಲಗಿಸಿದಳು  ಕೆಲಸವೆಲ್ಲ ಮುಗಿದ ಮೇಲೆ ಬೆಂಗಳೂರಿನಲ್ಲಿದ್ದ ವಿನುತಳ ಜೊತೆ ಮಾತಾಡಿ ಅತ್ತೆಗೆ ಜ್ವರ ಬಂದಿರುವ ವಿಷಯವನ್ನು ತಿಳಿಸಿದಳು ಅತ್ತೆ ಇನ್ನೂ ನಿದ್ರೆ ಮಾಡುವುದನ್ನು  ನೋಡಿ ಪಡಸಾಲೆಗೆ ಬಂದು ಕುಳಿತಳು. ಸುಶೀಲಮ್ಮ ಲತಾಳಿಗೆ ತನ್ನ ಗಂಡನ ತಾಯಿ ಮಾತ್ರವಲ್ಲ ಸೋದರತ್ತೆಯೂ ಸಹ ಆಗಿದ್ದರು.ಲತಾಳ ತಂದೆ ವೆಂಕಟೇಶ್ ಮೂರ್ತಿಯವರ ಅಕ್ಕನೇ ಸುಶೀಲಮ್ಮ.ಸುಶೀಲಮ್ಮತಮ್ಮ ಮೊದಲನೆಯ ಮಗ ರಾಜೇಶನಿಗೆ ತಮ್ಮನ ಮಗಳಾದ ಲತಳನ್ನು ತಂದು ಕೊಂಡಿದ್ದರು ಸುಶೀಲಮ್ಮಲತಳಿಗೆ ತಾಯಿಯೇ ಆಗಿದ್ದರು ಲತ B.SC.ಪದವೀಧರೆಯಾಗಿ ಸರ್ಕಾರಿ ಪ್ರಥಮ ದರ್ಜೆ  ಕಾಲೇಜಿನ ಉಪನ್ಯಾಸಕನಾಗಿದ್ದ ರಾಜೇಶನಿಗೆ ಲತಾ ತಕ್ಕ ಜೋಡಿಯಾಗಿದ್ದಳು. ರಾಜೇಶನ ತಮ್ಮ ಸುರೇಶ ಖಾಸಗಿ ಕಂಪೆನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನೀಯರ್ ಆಗಿ ಬೆಂಗಳೂರಿನಲ್ಲಿದ್ದನು. ಸುರೇಶ ತನ್ನ ಸಹೋದ್ಯೋಗಿಯೆ

ಆದ ವಿನುತಳನ್ನು ಪ್ರೀತಿಸಿ ಮದುವೆಯಾಗಿದ್ದ. ಪತಿಯ ನಿಧನದ ನಂತರ ಪ್ರೀತಿಯಿಂದ ನೋಡಿಕೊಳ್ಳುವ ಇಬ್ಬರು

ಮಕ್ಕಳ ಮನೆಯಲ್ಲಿ ಮೊಮ್ಮಕ್ಕಳೊಡನೆ ಕಾಲ ಕಳೆಯತ್ತ  ನೆಮ್ಮದಿಯಿಂದಿದ್ದರು.ಎಲ್ಲವು ಸರಿಯಾಗಿದ್ದ ಕಾಲದಲ್ಲೇ

ಹಿರಿ ಮಗ ರಾಜೇಶನ ಸಾವು ಬರಸಿಡಿಲಿನಂತೆ ಎರಗಿತ್ತು.

ಕಾಲೇಜ್ ಮುಗಿಸಿಕೊಂಡು ಬೈಕ್ ನಲ್ಲಿ ಬರುತ್ತಿರುವಾಗ

ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮರಣವನ್ನಪ್ಪಿದ್ದನು.ಆಗ

ಮನು ನಾಲ್ಕನೆ ತರಗತಿಯಲ್ಲಿ ಓದುತ್ತಿದ್ದ. ಕಂಗಾಲಾಗಿದ್ದ

ಲತ ಮಾನಸಿಕವಾಗಿ ಧೈರ್ಯವನ್ನು ಕಳೆದುಕೊಂಡಿದ್ದಳು. 

ಇಂಥ ಸಮಯದಲ್ಲಿ ಅವಳಿಗೆ ಒತ್ತಾಸೆಯಾಗಿ ನಿಂತವರು ಅವಳ ತಮ್ಮ ವಿಜಯ್ ಹಾಗು ಮೈದುನ ಸುರೇಶ.ಲತಳ

ತಂದೆ ತಾಯಿಯರಂತೂ ಮಗಳ ಪರಿಸ್ಥಿತಿಯನ್ನು ಕಂಡು 

ಜರ್ಜರಿತವಾಗಿ ಬಿಟ್ಟಿದ್ದರು. ವರ್ಷ ಕಳೆಯುವಷ್ಟರಲ್ಲಿಯೆ

ಅವಳಿಗೆ ಅನುಕಂಪ ಆಧಾರದ ಮೇಲೆ  ಅದೇ ಊರಿನ

ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲಾ ವಿಭಾಗಕ್ಕೆ ಪ್ರಥಮ ದರ್ಜೆ ಸಹಾಯಕಿಯ ಕೆಲಸ ಸಿಕ್ಕಿತು.ಹೊಸ ಪರಿಸರಕ್ಕೆ ಹೊಂದಿಕೊಂಡು ಗಮನವನ್ನು ಕೊಡುವ ಅನಿವಾರ್ಯತೆಯಲ್ಲೇ ರಾಜೇಶನ ಮರಣದ ದು:ಖವನ್ನು ಮರೆಯಲೆತ್ನಿಸಿದಳು. ಸುಶೀಲಮ್ಮ ಎಲ್ಲೂ

ಹೋಗದೆ ಸೊಸೆ ಹಾಗೂ ಮೊಮ್ಮಗನ ಜೊತೆಯಲ್ಲಿರಲು

ನಿರ್ಧಾರ ಮಾಡಿ ಅವರಿಗೆ ಆಸರೆಯಾಗಿದ್ದರು. ಎರಡನೆ

ಮಗ ಸೊಸೆ ಅವರೇ ಇಲ್ಲಿಗೆ ಬಂದು ಹೋಗುವ ರೂಢಿ

ಮಾಡಿಕೊಂಡರು.

ಮಾರನೆ ದಿನ ಶಾಲೆಗೆ ಹೊರಡುವ ತಯಾರಿಯಲ್ಲಿದ್ದಾಗ

ಅವಳ ಮೊಬೈಲ್ ಗೆ ರಂಜಿತಾಳ ಕರೆ.”ಇವತ್ತು ಬರ್ತಿರಾ

ಸ್ಕೂಲ್ ಗೆ” “ಬರ್ತೀನಿ ರಂಜಿತ, ಅತ್ತೆ ಹುಷಾರಾಗಿದಾರೆ”

ಎಂದು ಹೇಳಿ ಫೋನಿಟ್ಟಳು. ಶಾಲೆಗೆ ಹೊರಟು ನಿಂತು

“ಅತ್ತೆ,ಬರಲಾ”. ಬಾಗಿಲು ಹಾಕಿಕೊಳ್ಳಲು ಬಂದ ಅತ್ತೆಗೆ

“ಚೆನ್ನಾಗಿ ರೆಸ್ಟ್ ಮಾಡಿ”ಎಂದು ಹೊರಟಳು. ದಾರಿಯಲ್ಲಿ

ಸಿಕ್ಕ ರಂಜಿತಳೊಡನೆ ಮಾತನಾಡುತ್ತ ಶಾಲೆ ತಲುಪಿದರು

ಗಣಿತ ಶಿಕ್ಷಕಿ ರಂಜಿತಾಳ ಮನೆ ತಾನು ಶಾಲೆಗೆ ಹೋಗುವ ದಾರಿಯಲ್ಲೆ ಇದ್ದ ಕಾರಣ ಇಬ್ಬರಲ್ಲೂ ಆತ್ಮೀಯತೆಯಿತ್ತು

ರಂಜಿತಾಳಿಗೆ ಇನ್ನು ಮದುವೆಯಾಗಿರಲಿಲ್ಲ. ಸಾದಾಸೀದ

ಹುಡುಗಿಯಾಗಿದ್ದ ರಂಜಿತಾ ಲತಾಳೊಂದಿಗೆ ಮುಕ್ತವಾಗಿ ಎಲ್ಲವನ್ನು ಹೇಳಿಕೊಳ್ಳುತ್ತಿದ್ದಳು. ಅವಳಿಗೆ  ಒಬ್ಬ ತಂಗಿ

ಹಾಗೂ ಒಬ್ಬ ತಮ್ಮ ಇದ್ದಾರೆ. ಅವರ ತಂದೆಯು ಶಿಕ್ಷಣ

ಇಲಾಖೆಯಲ್ಲೆ ಕೆಲಸ ಮಾಡುತ್ತಿದ್ದರು. ಬೇಜವಾಬ್ಧಾರಿ

ಮನುಷ್ಯನೆಂದು ಇಸ್ಪೀಟಾಡುವ ಚಟವಿದ್ದು ಬಹುಪಾಲು

ಹಣವನ್ನೆಲ್ಲಾ ಕಳೆಯುತ್ತಾರೆಂದು ಅವಳಿಗೆ ಅವರಪ್ಪನ

ಮೇಲೆ ಬೇಸರವಿತ್ತು.” ಸಾಯಂಕಾಲ ನೀವು ನಮ್ಮನೆಗೆ

ಬರಬೇಕು. ನಮ್ಮಮ್ಮನಿಗೆ ಹೇಳಿ ಬಂದಿದ್ದೇನೆ. ನಿಮ್ಮನ್ನು ಕರ್ಕೊಂಡು ಬರ್ತೀನಿ ಅಂತ”ಎಂದುರಂಜಿತಾ ಹೇಳಿದಳು

“ಏನಿವತ್ತುಮನೆಯಲ್ಲಿ ಸ್ಪೆಷಲ್ ರಂಜಿತ” “ಇವತ್ತು ನನ್ನ ತಮ್ಮನ ಹುಟ್ಟಿದ ಹಬ್ಬ.ಅಮ್ಮ ಸ್ಟೀಟ್ ಮಾಡಿರ್ತಾಳೆ. ನೀವು ಬರ್ತಿದೀರಾ ಅಷ್ಟೆ” PUC ಓದುತ್ತಿದ್ದ ತಮ್ಮನನ್ನು ಕಂಡರೆ ಅವಳಿಗೆ ಬಲು ಪ್ರೀತಿ.ಇಲ್ಲವೆನ್ನಲು ಮನಸ್ಸಾಗದೆ ಸರಿ ಎಂದಳು. ಮಧ್ಯಾಹ್ನ ಲಂಚ್ ಬ್ರೇಕ್ ನಲ್ಲಿ ಶಾಲೆಯ ಬಳಿಯಲ್ಲಿದ್ದ ಬುಕ್ ಸ್ಟಾಲ್ಗೆ ಹೋಗಿ ಇಂಗ್ಲೀಷ್ ಡಿಕ್ಸ್ ಷ್ಣರಿ

ಕೊಂಡು ಕೊಂಡಳು. ಅವರ ಮನೆಗೆ ಹೋಗುತ್ತಿರುವುದು

ಎರಡನೆ ಬಾರಿ. ಸಂಜೆ ರಂಜಿತಾಳೊಡನೆ ಅವರ ಮನೆಗೆ

ಹೋದಾಗ ಅವರ ತಾಯಿ ಊಟ ಮಾಡಲು ಬಲವಂತ

ಮಾಡಿದರು.ಊಟ ಬೇಡವೆಂದಾಗ ಆಗ ತಾನೆ ಮಾಡಿದ ಬಿಸಿ ಬಿಸಿ ಹೋಳಿಗೆ,ವಾಂಗೀಬಾತ್ ಮತ್ತು ಕೋಸಂಬರಿ

ತಟ್ಟೆಯಲ್ಲಿ ಹಾಕಿಕೊಂಡು ಲತ ಹಾಗೂ ರಂಜಿತ ಇಬ್ಬರಿಗು   ಕೊಟ್ಟರು. ಮಾತಾಡುತ್ತಾ ತಿಂದಾದ ಮೇಲೆ ರಂಜಿತ ತಟ್ಟೆ

ಒಳಗಿಡಲು ಹೋದಳು.ಡಿಕ್ಸ್ ಷ್ಣರಿ ಬುಕ್ ನ್ನು ತೆಗೆಯಲು ಎಡಭಾಗದಲ್ಲಿದ್ದ ಬ್ಯಾಗ್ ಕಡೆ ತಿರುಗಲು ರಂಜಿತಳ ತಂದೆ

ಎಡಭಾಗದ ರೂಂ ನಲ್ಲಿ ನಿಂತುಕೊಂಡು ತನ್ನತ್ತಲೇ ವಿಕೃತ

ದೃಷ್ಟಿಯಿಂದ ನೋಡುತ್ತಿರುವುದನ್ನು ಕಂಡು ಬೆಚ್ಚಿಬಿದ್ದಳು ಮೈಯೆಲ್ಲ ಭಯದಿಂದ ನಡುಗಿತು.ತಕ್ಷಣ ಎದ್ದು ರಂಜಿತಾ ಎಂದು ಕೂಗುತ್ತ ಅಡುಗೆ ಮನೆ ಕಡೆ ನೆಡೆದಳು ಹೊರಗಡೆ ಬಂದ ರಂಜಿತಾಳ ಕೈಗೆ ಬುಕ್ ಕೊಡುತ್ತ “ನಿನ್ನ ತಮ್ಮನಿಗೆ ಕೊಡು ಲೇಟಾಗುತ್ತೆ ಹೋಗ್ತೀನಿ”ಎನ್ನುತ್ತ ಹೊರಟು ರೂಂ  ಕಡೆ ನೋಡಿದರೆ ಇನ್ನೂ ಅಲ್ಲೇ ನಿಂತಿದ್ದಾನೆ.”ಯಾಕಿಷ್ಟೂ  ಬೇಗ ಹೊರಟ್ರಿ” ರಂಜಿತಾಳ ತಾಯಿ ಹೇಳಿದಾಗ”ನಮ್ಮತ್ತೆ

ಯವರಿಗೆ ಜ್ವರ ಬಂದಿತ್ತಲ್ವ ಬೇಗ ಹೋಗ್ಬೇಕು” ಎನ್ನುತ್ತಲೆ  ಮನೆಯಿಂದ ಹೊರ ಬಂದು ಅಲ್ಲೇ ಹೋಗುತ್ತಿದ್ದ ಆಟೋ ನಿಲ್ಲಿಸಿ ಕುಳಿತು ಬೆವರಿದ ಮುಖವನ್ನು ಒರೆಸಿಕೊಂಡಳು.  ಬಾಗಿಲು ತೆಗೆದ ಅತ್ತೆ ಇವಳ ಮುಖವನ್ನು ನೋಡುತ್ತಾ “ಯಾಕಮ್ಮ ಒಂಥರಾ ಇದೀಯಾ”ಎಂದರು.”ತುಂಬಾನೆ ತಲೆ ನೋಯ್ತಿದೆ ಅತ್ತೆ” ಮುಖ ತೊಳೆದು ಬರಲು “ನಿಂಗು ಜ್ವರ ಬಂತ ಕಾಫಿ ಕುಡಿದು ಮಲಗಿಬಿಡು ನನಗೂ ಎರಡು ದಿನದಿಂದ ಒಂದೆ ಸಮನಾಗಿ ಮಲಗಿ ಸಾಕಾಗಿದೆ ನಾನೇ ಅಡುಗೆ ಮಾಡ್ತೀನಿ”ಎಂದರು.ಆಗ ಲತ ತಾನು ರಂಜಿತಳ ಮನೆಯಲ್ಲಿ ತಿಂದಿದ್ದನ್ನು ಹೇಳಿ ತನಗೆ ರಾತ್ರಿಯ ಊಟ ಬೇಡ ಎಂದು ರೂಂ ಗೆ ಹೋಗಿ ಮಲಗಿ ಬಿಟ್ಟಳು. ಆಟ ಆಡಿಕೊಂಡು ಬಂದ ಮಗನಿಗೆ “ತಲೆ ನೋಯ್ತಿದೆ ಕಣೋ ಇವತ್ತು ನೀನೇ ಓದ್ಕೊ”ಎಂದು ಮುಸುಕು ಹಾಕಿ ಮಲಗಿ ಬಿಟ್ಟಳು. ಆ ವಿಕೃತ ನೋಟ ಕಣ್ಣೆದುರು ಬಂದು ನಿಂತಾಗ ಮುಳ್ಳಿಂದ ಚುಚ್ಚಿದ ಅನುಭವ ಅವನೇಕೆ ನನ್ನನ್ನು ಹಾಗೇ ನೋಡಿದ ? ಎಷ್ಟು ಹೊತ್ನಿಂದ ನೋಡುತ್ತಿದ್ದನೊ? ನಾನು ರಂಜಿತ ಇಬ್ಬರು ಹೋಳಿಗೆ ತಿನ್ನುತ್ತಿರುವಾಗ ಎಡಭಾಗದ ರೂಂ ರಂಜಿತಳ ಬೆನ್ನಿನ ಕಡೆಯಿತ್ತೆಂಬುದು ನೆನಪಾಯ್ತು. ಹಾಗಾದ್ರೆ ಅಲ್ಲೆ ನಿಂತು ತುಂಬ ಹೊತ್ನಿಂದ ನೋಡುತ್ತಿದ್ದನೆ

ನನಗೇಕೆ ಅದರ ಅರಿವಾಗಲಿಲ್ಲ? ಅಥವಾ ಬಾಗಿಲ ಹಿಂದೆ

ನಿಂತು ನೋಡುತ್ತಿದ್ದು ರಂಜಿತ ತಟ್ಟೆ ಒಳಗಿಡಲು ಹೋದ

ಕ್ಷಣದಲ್ಲಿ ನನಗೆ ಕಾಣುವಂತೆ ನಿಂತು ಕೊಂಡನೆ? ಆ ರೀತಿ  ಕೆಟ್ಟದಾಗಿ ನೋಡಲು ಕಾರಣವೇನು?ವಿಧವೆಯಾದವಳು

ಗಂಡನಿಲ್ಲದ ಬದುಕೆಂದೇ?ಅಷ್ಟೊಂದು ತಾತ್ಸಾರವಾಯ್ತೆ

ನನ್ನ ಬಾಳು? ಎಂಬ ಭಾವನೆಯಿಂದ ದು:ಖ ಒತ್ತರಿಸಿತು

ರಾಜೇಶನ ನೆನಪಿನಿಂದ ಅಳುವೇ ಬಂದಂತಾಗಿ ಪಕ್ಕದಲ್ಲೆ

ಓದಿಕೊಳ್ಳುತ್ತಿದ್ದ ಮಗನಿಗೆ ತಾನು ಅಳುತ್ತಿರುವುದು ಕೇಳ

ಬಾರದೆಂದು ಮೌನವಾಗಿ ತುಟಿ ಕಚ್ಚಿಕೊಂಡೆ ಸಹಿಸಿದಳು ಬಿಗಿಮಾಡಿಕೊಂಡ ಮುಸುಕಿನೊಳಗಿನ ಕತ್ತಲಲ್ಲಿ ಅವಳ

ಕಣ್ಣೀರು ಕರಗುತ್ತಿತ್ತು. ಬೆಳಕು ಬೇಡವೆನಿಸಿ”ಮನು,ಲೈಟ್

ಆರಿಸಿ ಅಜ್ಜಿ ರೂಂಗೆ ಹೋಗಿ ಓದಿಕೋ”ಎಂದಳು.ಕತ್ತಲು ಆಪ್ತವೆನಿಸಿತು.ತನ್ನನ್ನು ಬೆಚ್ಚಿ ಬೀಳಿಸಿದ ಅವನ ನೋಟ ಇರಿದಂತಾಗುತ್ತಿತ್ತು.ಯಾವತ್ತೂ ಯಾರೂ ಅಂತಹ ಕೆಟ್ಟ ಭಾವನೆಯಿಂದ ತನ್ನನ್ನು ನೋಡಿಲ್ಲ.ಇಂದೇಕೆ ಹೀಗಾಯ್ತು 

ನನ್ನ ನಡೆನುಡಿಗಳಲ್ಲೆ ಏನಾದರು ದೋಷವಿದೆಯೆ ಎಂಬ ಭಾವನೆ ಬಂದರೂ ಅದಕ್ಕೆಡೆ ಮಾಡಿಕೊಡದಂತೆ ಅವಳು

ತಾನಾಯ್ತು ತನ್ನ ಕೆಲಸವಾಯ್ತು ಎಂಬಂತಿರುವಾಗ ಅದು

ಸಾಧ್ಯವೇ ಇಲ್ಲ ಎಂದವಳ ಮನಸ್ಸಿಗನಿಸಿದಾಗ ಕೊಂಚವೆ

ನಿರಾಳವಾಯಿತು. ಈ ಯೋಚನೆಯಲ್ಲೆ ಯಾವಾಗ ನಿದ್ರೆ

ಬಂತೆಂಬುದೆ ಗೊತ್ತಾಗಿಲ್ಲ.ಬೆಳಿಗ್ಗೆ ಎಚ್ಚರವಾಗಿ ನೋಡಲು

ಮನು ಆಗಲೇ ಶಾಲೆಗೆ ಹೊರಡುತ್ತಿದ್ದ. ಅವನು ಶಾಲೆಗೆ ಹೋದ ಮೇಲೆ ಪ್ರಭಾರೆ ಮುಖ್ಯೋಪಧ್ಯಾಯಿನಿಯಾದ ಸುನಂದ ಮೇಡಂವರಿಗೆ ತಾನು ಈ ದಿನ ರಜೆ ಹಾಕುತ್ತೇನೆ ಎಂದು ತಿಳಿಸಿ, ಸ್ನಾನವಾದ ಮೇಲೆ ದೇವರ ಪೂಜೆಯನ್ನು ಮಾಡಿ ಅತ್ತೆಯ ಜೊತೆ ತಿಂಡಿಯನ್ನು ತಿಂದಳು. ಅತ್ತೆಯು

ಟಿ.ವಿ ನೋಡುತ್ತಾ ಕೂತಾಗ ತಾನೆ ಆಡುಗೆ ಮಾಡಿದಳು. ಆಡುಗೆ ಮಾಡುತ್ತ ನೆನ್ನೆ ನಡೆದುದೆಲ್ಲವನ್ನೂ ಅತ್ತೆಗೆ ಹೇಳಿ ನಿರಾಳವಾಗುವ ಯೋಚನೆ ಬಂದ ಬೆನ್ನಲ್ಲೇ ಅತ್ತೆ ತಪ್ಪಾಗಿ ತಿಳಿದರೆ ಎಂಬ ಭಾವನೆಯೂ ಬಂದರೂ ಅತ್ತೆ ಹಾಗೆಲ್ಲಾ ತಿಳಿಯಲಾರರೆಂಬ ನಂಬಿಕೆ ಮಾತ್ರ ಬಲವಾಗಿತ್ತು ಕೆಲಸ ಮುಗಿಸಿ ಬಂದು ಅತ್ತೆ ಪಕ್ಕದಲ್ಲಿ ಕುಳಿತಳು.ಲತ ಅತ್ತೆಯ ತೊಡೆ ಮೇಲೆ ತಲೆಯಿಟ್ಟು ಅಳ ತೊಡಗಿದಳು “ಏನಾಯ್ತೆ ಲತಾ”ಅವಳ ತಲೆ ಸವರುತ್ತ ಕಣ್ಣೀರು ಹಾಕಿದರು.ಗಂಡನ  ನೆನಸಿಕೊಂಡು ದು:ಖ ಪಡುತ್ತಿರಬಹುದೆಂದು ಭಾವಿಸುತ್ತ “ಲತ ಸಮಾಧಾನ ಮಾಡ್ಕೊಳೆ ನಮ್ಮ ಪಾಲಿಗೆ ಬಂದಿದ್ದು ಅನುಭವಿಸ್ಲೆ ಬೇಕು. ಮಗನ ಮುಖ ನೋಡ್ಕಂಡು ನಮ್ಮ ಕಷ್ಟಗಳನ್ನು ಮರೀಬೇಕು.”ಎನ್ನುತ್ತಲೆ ಅವಳ ತೋಳನ್ನೆತ್ತಿ

ಸೋಫಾದ ಮೇಲೆ ಪಕ್ಕಕ್ಕೆ ಕೂಡ್ರಿಸಿಕೊಂಡರು. ಪಕ್ಕದಲ್ಲಿ ಕೂತ ಲತ ಕಣ್ಣೊರೆಸಿಕೊಂಡು”ಅತ್ತೆ”ಎನ್ನುತ್ತ ಅವರ ಕೈ

ಹಿಡಿದಳು.”ಯಾಕೆ, ಏನಾಯ್ತು ಹೇಳಮ್ಮ ಲತ” ಎಂದರು

ಆಗ ಲತ ಹಿಂದಿನ ದಿನದ ಘಟನೆಯನ್ನು ಹೇಳಿಕೊಂಡು

ನಿರಾಳವಾದಳು. “ಮದ್ವೆ ವಯಸ್ಸಿನ ಮಗಳಿದಾಳೆ ಅಂತ

ಹೇಳ್ತಿಯ ಅವನಿಗೇನು ಬಂತೇ ಕೇಡುಗಾಲ. ಅದಕ್ಯಾಕೆ ಕೊರಗ್ತೀಯಾ ಇದ್ರಲ್ಲಿ ನಿನ್ನ ತಪ್ಪೇನೂ  ಇಲ್ವಲ್ಲ ಇನ್ಮೇಲೆ ಅವರ ಮನೆಗೆ ಹೋಗಲೇ ಬೇಡ ಇದನ್ನೆಲ್ಲ ಯಾರತ್ರನೂ ಹೇಳ್ಬೇಡ .ಇಂಥದಕ್ಕೆಲ್ಲ ಹೆದರಿಕೊಂಡ್ರೆ ಮುಗಿತು ನಮ್ಮ ಕಥೆ. ನಮ್ಮಹುಷಾರಿನಲ್ಲಿ ನಾವಿದ್ರೆ ಆಯ್ತು ಏಳು ಊಟ ಮಾಡಿ ಆರಾಮಾಗಿ ನಿದ್ದೆ ಮಾಡು. ಮನು ಬರೋ ಟೈಂಗೆ

ಏನಾದ್ರು ತಿಂಡಿ ಮಾಡು” ಎಂದಾಗ ಲತಾ ಗೆಲುವಾದಳು 

ಮಾರನೆ ದಿನ ಶಾಲೆಗೆ ಬಂದಾಗ ರಂಜಿತಳೊಡನೆ ಏನನ್ನು

ತೋರಿಸಿಕೊಳ್ಳದೆ ಮಾಮೂಲಿನಂತಿದ್ದಳು. ರಂಜಿತಳದು

ಇದ್ರಲ್ಲಿ ಏನೂ ತಪ್ಪಿಲ್ಲ ಎನಿಸಿತು.ಆ ಮಧ್ಯಾಹ್ನದ ವೇಳೆಗೆ

ವೇಳೆಗೆ ಅನಿರೀಕ್ಷಿತವಾಗಿ ಯಾರೂ ನಿರೀಕ್ಷಿಸದೇ ಇದ್ದಂತೆ ಹೊಸ ಮುಖ್ಯೋಪಧ್ಯಾಯರ ಆಗಮನವಾದಾಗ ಸ್ವಲ್ಪ

ಗಲಿಬಿಲಿ ಸೃಷ್ಟಿಯಾಯಿತು. ಕರ್ತವ್ಯಕ್ಕೆ ಹಾಜರಾದ ಬಗ್ಗೆ

ಪ್ರಕ್ರಿಯೆಗಳು ಮುಗಿದ ನಂತರ ಸುನಂದ ಮೇಡಂರವರು  ಶಾಲಾ ಸಿಬ್ಬಂದಿ ವರ್ಗದವರನ್ನೆಲ್ಲಾ ಕರೆಸಿ ಹೊಸ ಉಪ ಪ್ರಾಂಶುಪಾಲರಾದ ರವಿಯವರನ್ನು ಪರಿಚಯಿಸಿದರು ಅಷ್ಟರಲ್ಲಿ ಶಾಲೆಯ ಅವಧಿ ಮುಗಿಯುತ್ತ ಬಂದಿದ್ದರಿಂದ ಎಲ್ಲರು ಮನೆಗೆ ಹೊರಟರು ಹೊಸ ಉಪ ಪ್ರಾಂಶುಪಾಲ  ರವಿ KES ಶ್ರೇಣಿಯ ಆಫೀಸರ್ ಎಂದು ತಿಳಿದು ಕಾರಣ

ದಾರಿಯಲ್ಲಿ ರಂಜಿತ “ಇವರು ತುಂಬ ಸ್ತ್ರಿಕ್ಟ್ ಆಗಿರುತ್ತಾರೆ ಅನ್ಸುತ್ತೆ”ಎಂದು ಅಂದಾಜು ಮಾಡಿದ ಹಿಂದೆಯೆ “ನಮ್ಮ ಕೆಲಸ ನಾವು ಸರಿಯಾಗಿ ಮಾಡಿದ್ರೆ ನಾವ್ಯಾರಿಗೂ ಹೆದರ ಬೇಕಾಗಿಲ್ಲ ನಾನು ಕೇಳೋದೆ ಮರ್ತುಬಿಟ್ಟಿದ್ದೆ ನೀವ್ಯಾಕೆ ನೆನ್ನೆ ರಜ ಹಾಕಿದ್ರಿ”ಎಂದಾಗ”ನಮ್ಮತ್ತೆಗೆ ಸ್ವಲ್ಪ ಸುಸ್ತಿತ್ತು

ಅದಕ್ಕೆ ರಜಾ ಹಾಕ್ದೆ” “ಹೌದಾ, ನೀವು ನಿಮ್ಮತ್ತೆನ ಎಷ್ಟು

ಚೆನ್ನಾಗಿ ನೋಡ್ಕಂತೀರ. ನಿಮ್ಮತ್ತೆ ಅದೃಷ್ಟ ಮಾಡಿದ್ದರು “

” ನಾನೂ ಅಪ್ಟೇ ಅದೃಷ್ಟ ಮಾಡಿದೀನಿ” ಎನ್ನುವಷ್ಟರಲ್ಲಿ

ಇಬ್ಬರು ಬೇರೆ ಬೇರೆ ದಾರಿ ಹಿಡಿದರು. ಮಾರನೆ ದಿನವೇ ಸುನಂದ ಮೇಡಂ ಲತಾಳನ್ನು ಜೊತೆಯಲ್ಲಿಟ್ಟುಕೊಂಡು ಹೊಸ ಪ್ರಾಂಶುಪಾಲರು ಕೇಳುತ್ತಿದ್ದ ಎಲ್ಲ ದಾಖಲೆಗಳನ್ನು ತೆಗೆಸಿಕೊಂಡು ತೋರಿಸುತ್ತಿದ್ದರು. ಎಲ್ಲವನ್ನು ಪರಿಶೀಲಿಸಿ

ನೋಡಿದ ಹೊಸಬರು ಚಾರ್ಜ್ ತೆಗೆದುಕೊಳ್ಳುವಷ್ಟರಲ್ಲಿ

ಎರಡು ದಿನಗಳಾದವು. ಮಿತ ಭಾಷಿ ಹಾಗೂ ಗಂಭೀರ ಸ್ವಭಾವದ ಅವರ ಮಾತುಗಳನ್ನು ಕೇಳುತ್ತಿದ್ದರೆ ತುಂಬಾ

ಓದಿಕೊಂಡಿದ್ದಾರೆನಿಸುತ್ತಿತ್ತು. ಶಾಲೆಯೊಳಗಿನ ಕೆಲ್ಸವನ್ನು 

ಲತಾ ಮತ್ತು ದ್ವಿತೀಯ ದರ್ಜೆ ಸಹಾಯಕರಾದ ಪ್ರಸನ್ನ

ಸರಿದೂಗಿಸಿಕೊಂಡು ಹೊರಗಡೆಯ ಬ್ಯಾಂಕ್, ಕಛೇರಿ

ವ್ಯವಹಾರಗಳನ್ನು ಹಿಂದಿನ ಅಲಿಖಿತ ಒಪ್ಪಂದದಂತೆಯೆ

ಪ್ರಸನ್ನ ನೋಡಿಕೊಳ್ಳುವುದನ್ನು ಮುಂದುವರೆಸಲಾಯ್ತು

ಸಂಜೆ ಮನೆಗೆ ಹೋಗುವಾಗ ಎಂದಿನಂತೆ ರಂಜಿತ ಹೊಸ

ಪ್ರಾಂಶುಪಾಲರ ಬಗ್ಗೆ ಸ್ಟಾಫ್ ರೂಂ ನಲ್ಲಿ ಕೇಳಿಬರುತ್ತಿದ್ದ

ಪರ ಹಾಗು ವಿರೋಧದ ಮಾತುಗಳನ್ನು ಎಂದಿನಂತೆಯೆ 

ಪಟಪಟ ಹೇಳುತ್ತಿದ್ದಳು.ಅವರ ವೈಯುಕ್ತಿಕವಾದ ಕೆಲವು ವಿಷಯಗಳನ್ನು ತಿಳಿಸುತ್ತಿದ್ದಳು. ಪ್ರಾಂಶುಪಾಲರ ಹೆಂಡ್ತಿ

ತೀರಿಕೊಂಡಿದ್ದಾರೆಂದು ಒಬ್ಬ ಮಗಳಿದ್ದಾಳೆ ಎಂದು ತಿಳಿಸಿ ಅಯ್ಯೋ ಪಾಪ ಎಂದು ಲೊಚಗುಟ್ಟಿದ್ದಳು.ಆ ಮಗಳನ್ನು

ನೋಡಿಕೊಳ್ಳಲು ಪ್ರಾಂಶುಪಾಲರ ಅಮ್ಮ ಇದ್ದಾರೆ ಎಂಬ

ವಿಷಯವನ್ನು ಸಂಗ್ರಹಿಸಿದ್ದಳು.”ರಂಜಿತ ಇಷ್ಟೆಲ್ಲಾ ಹೇಗೆ

ಗೊತ್ತಾಯ್ತು” “ಇದೆಲ್ಲ ಷ್ಟಾಫ್ ರೂಂ ನ್ಯೂಸ್. ಅವರಮ್ಮ

ಮರು ಮದುವೆಗೆ ಒತ್ತಾಯಿಸುತ್ತಿದ್ದಾರೆ ಅಂತ ಮಲ್ಲಪ್ಪ ಮೇಸ್ಟ್ರ ಹತ್ರ ಹೇಳಿದರಂತೆ. ನಲ್ವತೈದು ವರ್ಷ ಆಗಿದ್ರೂ ಅಷ್ಟು ವಯಸ್ಸಾದಂಗೆ ಕಾಣಲ್ಲ” ಎಂದಾಗ ಲತಾ”ಆದ್ರೂ

ಇವರಿಗೆಲ್ಲ ಚಿಕ್ಕ ವಯಸ್ಸಿನ ಹುಡುಗಿಯರೇ ಬೇಕೇನೋ” ಎಂದಳು”ಹೂಂ.ಕರೆಕ್ಟಾಗಿ ಹೇಳಿದ್ರಿ”ಎಂದು ನಕ್ಕಳು ಲೇಡಿ   ಟೀಚರ್ಸನೆಲ್ಲ ಗೌರವದಿಂದ ಕಾಣ್ತಾರೆ. ಡೀಸೆಂಟಾಗಿಯೇ ಬಿಹೇವ್ ಮಾಡ್ತಾರೆ”ಎಂದು ಹೇಳಿದಾಗ ಲತಾಳು ಸಹಾ “ಹೌದು ರಂಜಿತ ನನಗು ಹಾಗೆ ಅನ್ಸುತ್ತೆ ಎಂದಳು.”ಎಲ್ಲಾ ಟೀಚರ್ಸ ಹಾಗೆ ಹೇಳುತ್ತಾರೆ”ಎಂದು ರಂಜಿತ ತೀರ್ಮಾನ ಕೊಟ್ಟಳು. ವರ್ಷ ಕಳೆಯುವಷ್ಟರಲ್ಲಿಯೇ  ಶೈಕ್ಷಣಿಕವಾಗಿ ಮಾಡಿದ ಕೆಲವು ಗುಣಾತ್ಮಕ ಬದಲಾವಣೆಗಳಿಂದ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದರು.

ಈ  ಶುಕ್ರವಾರ ರಾತ್ರಿ ಸುರೇಶ್ ಹಾಗೂ ವಿನುತ ಇಬ್ಬರು

ಮಗ ಚಂದನ್ ಜೊತೆಗೆ ಬೆಂಗಳೂರಿನಿಂದ  ಯುಗಾದಿ ಹಬ್ಬಕ್ಕೆ ಬರುವವರಿದ್ದರು. ಹಾಗಾಗಿ  ಅತ್ತೆಯೊಬ್ಬರಿಗೇ

ಕೆಲಸ ಹೆಚ್ಚಾಗುತ್ತದೆಂದು ಮಧ್ಯಾಹ್ನ ರಜೆಯನ್ನು ಹಾಕಿ ಬರುವಾಗ ಹಣ್ಣು, ತರಕಾರಿ ಎಲ್ಲವನ್ನು ತೆಗೆದುಕೊಂಡು

ಅಟೋದಲ್ಲೇ ಬಂದಳು. ಮನುವಿಗಂತು ಚಿಕ್ಕಪ್ಪ ಎಂದರೆ

ಬಹಳ ಇಷ್ಟ. ಬೆಂಗಳೂರಿಗೆ ಹೊರಡುವ ಹಿಂದಿನ ದಿನವೆ

ಸುರೇಶ ಹೇಳಿದ “ಅತ್ತಿಗೆ,ಮನು 7 ನೆ ತರಗತಿ ಮುಗಿಸಿದ

ಮೇಲೆ ಹೈಸ್ಕೂಲಿಗೆ ಬೆಂಗಳೂರಲ್ಲೇ ಒಳ್ಳೆಯ ಸ್ಕೂಲಿಗೆ

ಸೇರಿಸೋಣ. ನೀವು ಬೆಂಗಳೂರಿಗೆ  ವರ್ಗಾವಣೆ ಮಾಡ್ಸಿ

ಕೊಳ್ಳಿರಿ ಎಲ್ಲರೂ ಒಂದೇ ಕಡೆ ಇರೋಣ” ಎಂದಾಗ ಅತ್ತೆ

ಹಾಗೂ ವಿನುತಾ ದನಿಗೂಡಿಸಿದರು. ಮಕ್ಕಳಿಗೂ ಜೊತೆ

ಆಗುತ್ತೆ” ಎಂದನು ಲತಾಳಿಗು ಅದು ಸರಿಯೆನ್ನಿಸಿ”ಹಾಗೇ

ಮಾಡೋಣ”ಎಂದಳು. ಮನು ಸಹಾ ಚಿಕ್ಕಪ್ಪನ ಜೊತೆಗೆ ಹೊರಟು ನಿಂತಾಗ ಲತ” ಅತ್ತೆ, ನೀವು ಹೋಗ್ಬನ್ನಿ. ನಾನು

ಅಪ್ಪ ಅಮ್ಮನಿಗೆ ಫೋನ್ ಮಾಡ್ತಿನಿ ಬರ್ತಾರೆ” ಎಂದಾಗ

ಮೊಮ್ಮಗನನ್ನು ಬಿಟ್ಟಿರಲಾರದ ಅಜ್ಜಿಗೆ ಅಷ್ಟೆ ಸಾಕಾಗಿತ್ತು

ತಕ್ಷಣವೇ ಒಪ್ಪಿದರು. ಆಗ ಸುರೇಶ “ನೀವು  ನಾಲ್ಕು  ದಿನ ರಜೆ ಹಾಕಿ ಹೊರಡ್ರಿ ಅತ್ತಿಗೆ” ಎಂದಾಗ “ಇಲ್ಲ ಈಗ 10ನೇ

ತರಗತಿಯ ವಾರ್ಷಿಕ ಪರೀಕ್ಷೆಗಳ ಕೆಲಸದ ಒತ್ತಡವಿರುವ

ಕಾರಣ ಎಲ್ಲವನ್ನು ಮುಗ್ಸಿಕೊಂಡು ಬರುವೆನೆಂದು ಹೇಳಿ ಅಪ್ಪ ಅಮ್ಮನಿಗೆ ಮಾರನೆ ದಿನವೇ ಬರುವಂತೆ ಫೋನ್

ಮಾಡಿ ತಿಳಿಸಿದಳು. ಲತಳ ಅಪ್ಪ ಅಮ್ಮನು ಸಹ ಸುರೇಶ ಹೇಳಿದಂತೆ ಮನು ಹೈಸ್ಕೂಲ್ ವ್ಯಾಸಂಗಕ್ಕೆ ಬೆಂಗಳೂರು

ಸೇರಲಿ ಎಂದರು. ಪರೀಕ್ಷಾ ಕೆಲಸವೆಲ್ಲ ಮುಗಿದ ಮೇಲೆ  ಶಾಲೆಗೆ ಬೇಸಿಗೆ ರಜೆಯಿರುವುದರಿಂದ ಒಂದೆರಡು ದಿನ ಹೆಚ್ಚು ಕಡಿಮೆಯಾದರೂ ನಡೆಯುತ್ತದೆಂದು ಹೇಳುತ್ತಾ ಪ್ರಾಂಶುಪಾಲರು ಒಂದು ವಾರ ರಜ ಕೊಟ್ಟ ಮೇಲೆ ಅಪ್ಪ ಅಮ್ಮನ ಜೊತೆಗೆ ತವರಿಗೆ ಹೋದ ಲತಾ ಬೆಂಗಳೂರಿಗೆ ಅಲ್ಲಿಂದಲೇ ಹೋದಳು. ವಾರದ ನಂತರ ಮನುವನ್ನು ಬೆಂಗಳೂರಲ್ಲೇ ಬಿಟ್ಟು ಅತ್ತೆ ಸೊಸೆಯರಿಬ್ಬರು ಊರಿಗೆ ವಾಪಸಾದರು ಉದ್ಯೋಗದ ಯಾವುದೇ ಒತ್ತಡವಿಲ್ಲದೆ ಒಂದು ವಾರ ಮುಕ್ತವಾಗಿದ್ದ ಕಾರಣ ಲತಳ ಮನಸ್ಸು ಹಗುರವಾಗಿತ್ತು.ಮಾರನೆ ದಿನ ಲತಾ ಶಾಲೆಗೆ ಹೋದಾಗ ಪ್ರಸನ್ನ ಇನ್ನು ಬಂದಿರಲಿಲ್ಲ ಅಟೆಂಡರ್ ಪುಟ್ಟಮ್ಮನ ಜತೆ ಮಾತನಾಡುತ್ತ ಕೆಲಸ ಮಾಡುವಾಗ ಪ್ರಸನ್ನ ಬಂದರು. ಉಳಿದ ಕೆಲಸ ಮುಗಿಸಿ ಮಧ್ಯಾಹ್ನ ಮನೆಗೆ ಹೊರಟಾಗ ಪ್ರಸನ್ನ” ನಾನು ನಾಳೆ ರಜ ನೀವು ಸ್ವಲ್ಪ ಬೇಗನೆ ಬಂದು

ಬಿಡಿ ಮೇಡಂ. ಪ್ರಿನ್ಸಿಪಾಲ್ ಗೆ ಫೋನ್ ಮಾಡಿ ಹೇಳ್ತಿನಿ” ಎಂದರು. ಮರುದಿನ ಶಾಲಾ ಗೇಟ್ ಬಳಿ ಕಾಫಿ  ತರಲು ಹೋಗುತ್ತಿದ್ದ ಪುಟ್ಟಮ್ಮ”ಪ್ರಿನ್ಸಿಪಾಲ್ ಬಂದವ್ರೆ”ಎಂದಳು

ಶಾಲೆಗೆ ರಜೆಯಿದ್ದರೆ ಅವರೇನು ಪ್ರತಿದಿನ ಬರುತ್ತಿರಲಿಲ್ಲ

ಪ್ರಿನ್ಸಿಪಾಲ್ ಗೆ ವಿಶ್ ಮಾಡಿ ಸ್ಟಾಫ್ ಅಟೆಂಡೆನ್ಸ್ ಗೆ ಸೈನ್

ಮಾಡಿ ತನ್ನ ಸೀಟಲ್ಲಿ ಕೂತಳು. ಅಟೆಂಡರ್ ರಂಗಪ್ಪನಿಗೆ

ಶಾಲಾವರಣದಲ್ಲಿರುವ ಗಿಡಗಳು ಒಣಗದಂತೆ ನೀರನ್ನು  

ಬಿಡಲು ಹೇಳಿದರು ಪುಟ್ಟಮ್ಮ ಕಾಫಿ ತಂದ ಮೇಲೆ ಕ್ಯಾಶ್

ರಿಜಿಸ್ಟರ್ ತರಿಸಿಕೊಂಡರು. ತಮ್ಮ ಕೆಲಸ ಮುಗಿದ ಮೇಲೆ

“ಲತ ಮೇಡಂ ಎರಡು ಗಂಟೆಯವರೆಗೆ ಇದ್ದು ನೀವು ಸಹ

ಮನೆಗೇ ಹೋಗಿ”ಎಂದು ಹೇಳಿ ಹೊರಟರು.

ಶಾಲೆಗಳು ಪ್ರಾರಂಭವಾಗಿ ಶಾಲಾ ಕೆಲಸಗಳ ಒತ್ತಡದಲ್ಲಿ

ಜೂನ್, ಜುಲೈ ತಿಂಗಳುಗಳು ಮುಗಿದು ಆಗಸ್ಟ್ ಬಂದಿದ್ದೆ ಗೊತ್ತಾಗಲಿಲ್ಲ. ಶಾಲೆಗೆ ಬಂದಾಗ ಪ್ರಸನ್ನ ಅವರು ತಮ್ಮ ತಾಯಿಗೆ ಆರೋಗ್ಯ ಸರಿಯಿಲ್ಲವೆಂದು ಒಂದು ವಾರ ರಜೆ

ಹಾಕಿದ್ದರು.ಆಗ ಪ್ರಾಂಶುಪಾಲರು”ನಿಧಾನವಾಗಿಯೆ ಎಲ್ಲ ಕೆಲಸಗಳನ್ನು ಮಾಡಿ. ಅಂತಹ ತುರ್ತಾದ ಕೆಲಸಗಳ್ಯಾವು ಇಲ್ಲ”ಎಂದು ಹೇಳಿದ್ದರು.ಕೆಲಸವೊಂದು ವಿಷಯಗಳನ್ನು ಹೊಸದಾಗಿ ತಿಳಿಸುತ್ತಿದ್ದರು. ಶಾಲಾ ಶುಲ್ಕಗಳ ವಸೂಲಿ

ಮೊತ್ತದ ಲೆಕ್ಕಾಚಾರ ಹಾಗೂ ಇನ್ನಿತರ ವಿಷಯಗಳ ಬಗ್ಗೆ

ಕೇಳುತ್ತಿರುವಾಗ ಮಾದಪ್ಪನಿಗೆ ಕಾಫಿ ತರಲು ಕಳಿಸಿದರು

ಕಾಫಿ ಕುಡಿಯುತ್ತ “ನಿಮ್ಮ ಮಗ ಎಷ್ಟನೇ ತರಗತಿಯಲ್ಲಿ

ಯಾವ ಶಾಲೆಯಲ್ಲಿ ಓದುತ್ತಿದ್ದಾನೆ”ಎಂದು ಕೇಳಿದರು

ಜ್ಞಾನ ಗಂಗೋತ್ರಿ ಶಾಲೆಯಲ್ಲಿ ಏಳನೇ ತರಗತಿ ಸರ್”

“ಹೌದಾ ಅದೇ ಶಾಲೆಯಲ್ಲೇ ನನ್ನ ಮಗಳು ಸ್ಮಿತ ಐದನೇ

ತರಗತಿ ಓದುತ್ತಿದ್ದಾಳೆ ಅವಳ ತಾಯಿ ಇಲ್ಲ”ಎಂದಾಗ ಲತ

ಅವರ ಮುಖವನ್ನು ನೋಡಿದರೆ ಅವರು ಸಹ ಅವಳನ್ನೆ

ಗಮನಿಸುತ್ತಿದ್ದರು ಎಂದೆನಿಸಿತು ಲತಾಳಿಗೆ. ಆಗ ಅವಳು

“ಮಾದಪ್ಪ ಇದನ್ನೆಲ್ಲಾ ನನ್ನ ಟೇಬಲ್ ಮೇಲಿಡು”ಎಂದು

ಹೇಳಿದಾಗ “ನಾಳೆ ದಾಖಲಾತಿ ಹಾಗೂ ಕ್ಯಾಶ್ ಬುಕ್ ನ

ನೋಡಬೇಕು” “ಆಯ್ತು ಸರ್”ಎನ್ನುತ್ತಾ ತನ್ನ ಟೇಬಲ್

ಕಡೆ ಹೋದಳು. ಮರುದಿನ ಬಂದವಳೇ ಕ್ಯಾಶ್ ಬುಕ್

ಹಿಡಿದು ಕೂತಳು. ನಂತರ ದಾಖಲಾತಿಯನ್ನು ನೋಡಿದ

ಮೇಲೆ ಕ್ಯಾಶ್ ರಿಜಿಸ್ಟರ್ ತಂದು ಪ್ರಿನ್ಸಿಪಾಲರ ಟೇಬಲ್

ಮೇಲಿಟ್ಟಾಗ ಅವರು”ದಾಖಲಾತಿಯನ್ನು ನೋಡೋಣ”

ಎಂದರು.ಅದನ್ನು ತಂದಿಟ್ಟುಕೊಂಡು ಕೂತಾಗ ಮಾದಪ್ಪ

ಹೊರಗಡೆ ಮರದ ನೆರಳಲ್ಲಿ ಕೂತು ಬೀಡಿ ಸೇರುತ್ತಿದ್ದನು

ಪುಟ್ಟಮ್ಮಯಾವುದೋ ಮೆಮೋವನ್ನು ತೆಗೆದುಕೊಂಡು  

ತರಗತಿಗಳಿಗೆ ಹೋಗಿದ್ದಳು.ದಾಖಲಾತಿ ನಂತರ ಕೊನೆಗೆ ಕ್ಯಾಶ್ ಬುಕ್ ಪರಿಶೀಲಿಸಿದ ಮೇಲೆ ಅದನ್ನು ಕೊಡುವಾಗ  ಜೊತೆಯಲ್ಲಿ ಒಂದು ಪುಟ್ಟ ಕವರ್ ಇತ್ತು.”ಇದೇನು ಸರ್” 

ಲತಾ ಕೇಳಿದಳು”ಲತ ಮೇಡಂ ನಿಧಾನವಾಗಿ ಮನೆಯಲ್ಲಿ

ಓದಿರಿ” ಅವಳನ್ನೆ ನೋಡುತ್ತ ಹೇಳಿದರು. ತಕ್ಷಣ ಅವಳು

ಬುಕ್ ಗಳೊಂದಿಗೆ ತನ್ನ ಸೀಟಿಗೆ ಬಂದು ಕವರನ್ನು ತನ್ನ

ವ್ಯಾನಿಟಿ ಬ್ಯಾಗ್ ನಲ್ಲಿ ಇಟ್ಟು ಕೂತಳು. ರವಿ ಸಹ ಎದ್ದು

ಹೊರಗಡೆ ಹೋಗಿದ್ದು ನೋಡಿ ಸುಮ್ಮನೆ ಕೂತುಬಿಟ್ಟಳು

ಟೇಬಲ್ ಮೇಲಿದ್ದ ವ್ಯಾನಿಟಿ ಬ್ಯಾಗ್ ತೆಗೆದು ತನ್ನ ಪಕ್ಕಕ್ಕೆ

ಇಟ್ಟುಕೊಂಡಳು. ಏನೊ ಒಂದು ರೀತಿಯ ಭಯ ಮತ್ತು

ತಳಮಳ ಶುರುವಾಯಿತು. ಏನಿರಬಹುದೆಂಬ ಯೋಚನೆ

ತೆಗೆದು ನೋಡುವಾಗ ಯಾರಾದ್ರೂ ಬಂದುಬಿಟ್ರೆ ಏನು

ಮಾಡೋದು? ಇಲ್ಲಿ ಬೇಡ ಮನೆಯಲ್ಲೇ ನೋಡಬೇಕು

ಅವ್ಯಕ್ತ ಭಯ ಆವರಿಸಿತು. ಪದೇ ಪದೇ ಟೈಂ ನೋಡಿ

ಕೊಳ್ಳುತ್ತ ನೆಪ ಮಾತ್ರಕ್ಕೆ ದಾಖಲಾತಿ ಪುಸ್ತಕ ಹಿಡಿದಳು

ಸಧ್ಯ ಇವತ್ತು ರಂಜಿತ ರಜಾ ಹಾಕಿದ್ದು ಒಳ್ಳೆದಾಯ್ತಪ್ಪ ಎನ್ನುತ್ತಾ ಲಾಂಗ್ ಬೆಲ್ ಆದೊಡನೆ ಎದ್ದು ಹೊರಟಳು

ಸ್ನೇಹಿತರೊಡನೆ ಆಡುತ್ತಿದ್ದ ಮನು ಅವಳಿಗೆ ಬೀಗದ ಕೈ

ಕೊಟ್ಟು”ಅಜ್ಜಿ ಪಕ್ಕದ ಮನೆ ಆಂಟಿ ಜೊತೆ ದೇವಸ್ಥಾನಕ್ಕೆ

ಹೋದರು”ಎನ್ನುತ್ತಾ ಆಡಲು ಹೋದ. ಓಳ್ಳೆಯದಾಯ್ತು

ಎಂದುಕೊಂಡು ಬೀಗ ತೆಗೆದು ಚಿಲಕ ಹಾಕಿಕೊಂಡು ತನ್ನ

ರೂಂ ಗೆ ಹೋಗಿ ಮಂಚದ ಮೇಲೆ ಕೂತು ಕವರ್ ತೆಗೆದು ಭಯದಿಂದಲೇ ಓದತೊಡಗಿದಳು.

“ಲತ ಮೇಡಂ ತುಂಬಾ ಯೋಚಿಸಿ ಹೇಗೆ ಹೇಳಬೇಕೆಂದು ತಿಳಿಯದೆ ಪತ್ರವನ್ನು ಬರೆಯುತ್ತಿದ್ದೇನೆ ನನ್ನ ಜೀವನದ ವಿಷಯವೆಲ್ಲ ಗೊತ್ತಿದೆಯೆಂದು ಭಾವಿಸಿರುತ್ತೇನೆ.ನಿಮ್ಮ ನೆಡೆ ನುಡಿಗಳು ನನಗೆ ಇಷ್ಟವಾಗಿವೆ ನೀವೂ ಇಷ್ಟ ಪಟ್ಟರೆ ನಾನು ನಿಮ್ಮನ್ನು ಮದುವೆಯಾಗ ಬೇಕೆಂದಿದ್ದೇನೆ ನೀವು ಒಪ್ಪಿದರೆ ಸಂತೋಷ ಇಲ್ಲವಾದರೆ ಹಿಂದಿನಂತೆಯೆ ನಾನು ನಿಮ್ಮ ಪ್ರಿನ್ಸಿ ಪಾಲ್, ನೀವು ನನ್ನ ಸಹೋದ್ಯೋಗಿ ಅಷ್ಟೆ ಹೀಗೆ ಮುಂದುವರಿಯುತ್ತದೆ ಅನವಶ್ಯಕ ಆತಂಕವಾಗಲಿ

ಭಯವಾಗಲಿ ಬೇಕಿಲ್ಲ ನಾನೂ ನನ್ನ ಅಭಿಪ್ರಾಯವನ್ನು ತಿಳಿಸಿದ ಹಾಗೆಯೆ ನೀವೂ ಸಹ ನಿಮ್ಮಅಭಿಪ್ರಾಯವನ್ನು ತಿಳಿಸಲು ಸ್ವತಂತ್ರರಿರುವಿರಿ ನಿಧಾನವಾಗಿ ಯೋಚಿಸಿಯೆ  ನಿಮ್ಮ ತೀರ್ಮಾನವನ್ನು ತಿಂಗಳೊಳಗೆ ಹೇಳಿರಿ ನಿಮ್ಮಿಂದ ಯಾವುದೆ ರೀತಿಯ ಅಭಿಪ್ರಾಯ ಬಂದರು ಸಹ ಅದನ್ನು ಗೌರವಿಸುತ್ತಾ ಈ ವಿಷಯವನ್ನು ಮುಕ್ತಾಯ ಮಾಡಲು  

ಬಯಸುತ್ತೇನೆ. ನನ್ನ ಈ ವರ್ತನೆಯಿಂದ ನಿಮಗೆ ಬೇಸರ ಉಂಟಾಗಿದ್ದರೆ ಕ್ಷಮೆಯಿರಲಿ ಎಂದಷ್ಟೆ ಕೇಳಬಲ್ಲೆ. 

                                              ರವಿ , ಪತ್ರದ ಧಾಟಿಯನ್ನು ನೋಡಿ ಆತಂಕ ಕಡಿಮೆಯಾದರೂ ಸಹ ತಕ್ಷಣ ಅದನ್ನು ಹರಿದು ಕಸದ ಬುಟ್ಟಿಗೆ ಹಾಕಿದಳು ಮುಖ ತೊಳೆದು ಕಾಫಿ ಕುಡಿದು ಮಗನನ್ನು ಓದಿಸುತ್ತಾ ಕೂತಳು “ಅಮ್ಮಾ ನಾವು ಬೆಂಗಳೂರಿಗೆ ಹೋದ ಮೇಲೆ ಚಂದನ್ ಓದ್ತಿರೊ ಸ್ಕೂಲಿಗೆ ನನ್ನನ್ನು ಸೇರಿಸ್ತೀಯ ಅಲ್ವ”

ಹೌದು ಇಬ್ಬರೂ ಒಂದೇ ಸ್ಕೂಲಲ್ಲೇ ಓದಬೇಕು ಎಂದಳು.

**********************************************

One thought on “ಬದುಕು ಬಂದಂತೆ

  1. ನಿರೀಕ್ಷಿತ ತಿರುವು, ಅನಿರೀಕ್ಷಿತ ಅಂತ್ಯ, ಚೆನ್ನಾಗಿಥೆ

Leave a Reply

Back To Top