ಒಂದು ತಪ್ಪು ಗಂಟು

ಒಂದು ತಪ್ಪು ಗಂಟು

ಎಸ್.ನಾಗಶ್ರೀ

Color threads. Different color threads on rows in the store stock image

ಅದು ಕಾರ್ತೀಕ ಮಾಸದ ಪ್ರಾರಂಭದ ದಿನಗಳು. ಸಂಜೆ ಬೇಗ ಕಳೆದು ರಾತ್ರಿಯ ಚಾದರ ಹೊದ್ದು ಸುತ್ತಲೂ ಕತ್ತಲು. ಪ್ರತಿಮನೆಯ ಮುಂದೂ ಬೆಳಗುವ ಹಣತೆಗಳು. ಪ್ರಕಾಶ್ ರೆಡ್ಡಿ ಅಂದೂ ಸಂಜೆ ಏಳರ ಸಿಗರೇಟ್ ಹಚ್ಚಿ ಮನೆಯ ಮುಂದೆ ಕುರ್ಚಿ ಹಾಕಿ ಕುಳಿತಿದ್ದ. ಚಳಿ ಏಕೋ ಮೂಳೆಗಿಳಿಯುವಷ್ಟು ಏರಿದೆ ಎನಿಸಿ ಬಿಸಿ ಕಾಫಿಗೆ ಸೈಲೂ ಎಂದು ಕೂಗಿ, ಅರೆಘಳಿಗೆ ಹಿಂದಕ್ಕೆ ಒರಗಿದ. ಬೇಡಬೇಡವೆಂದರೂ ಪ್ರತಿ ಕಾರ್ತೀಕದಲ್ಲಿ ನೆನಪಾಗಿ ಹೃದಯ ಭಾರವಾಗುವ ಆ ಘಟನೆಯ ಕಿಡಿ ಇವತ್ತೂ ಫಳಾರನೆ ಸೋಕಿತ್ತು.

ವಾವೆಯಲ್ಲಿ ಚಿಕ್ಕಮ್ಮನ ಮಗಳು ಪಾರ್ವತಿ ತಂಗಿಯಾಗಬೇಕು. ಇಡೀ ನಮ್ಮ ಮನೆತನಕ್ಕೆ ತಿಳಿಗೋಧಿ ಬಣ್ಣಕ್ಕಿದ್ದದ್ದು ಅವಳೊಬ್ಬಳೇ. ಬಟ್ಟಲುಗಣ್ಣು, ಅರ್ಧಚಂದ್ರಾಕಾರದ ಹಣೆ, ಕಡುಗಪ್ಪು ಅಲೆಅಲೆ ಕೂದಲು. ಅವಳು ಸೀರೆಯುಟ್ಟು ನಿಂತರೆ ದೇವಿ ಕಳೆ. ಗಂಡಿನ ಕಡೆಯವರೇ ಮನೆಗೆ ಬಂದು ಕೇಳಿ, ಮದುವೆ ಮಾಡಿಕೊಂಡು ಹೋಗ್ತಾರೆ ನೋಡಿ ಅಂತ ಆಡಿಕೊಳ್ಳೋರು ಸುತ್ತಮುತ್ತಲ ಜನ. ಚಿಕ್ಕಪ್ಪ ಚಿಕ್ಕಮ್ಮನೂ ಇದ್ದೊಬ್ಬ ಮಗಳಿಗೆ ಸಾಕಷ್ಟು ನಗ ಕೂಡಿಸಿಯೇ ಇದ್ದರು. ಎಲ್ಲರಿಗೂ ಬೇಕಾದವರಾಗಿ ಎಲ್ಲರ ಕಷ್ಟಕ್ಕೂ ಆಗುತ್ತಿದ್ದ ಅವರ ಒಳ್ಳೆಯತನಕ್ಕೆ ಮೆಚ್ಚಿಯೇ ಸಾಕ್ಷಾತ್ ಪಾರ್ವತಿ ಹುಟ್ಟಿಬಂದಿರಬಹುದು ಎಂದಿದ್ದರು ಊರ ಅರ್ಚಕರು. ಅವಳಿಗಿಂತ ಮೂರು ವರ್ಷ ದೊಡ್ಡವನಾದ ನನಗೂ ಹೆಚ್ಚು ತರ್ಕಕ್ಕೆ ಸಿಲುಕದೆ ಅದನ್ನು ನಂಬುವುದೇ ಹಿತವಾಗಿತ್ತು. ಬಾಲ್ಯದ ಪ್ರತಿ ಬೇಸಿಗೆರಜೆಯಲ್ಲೂ ತಮ್ಮ ಸುಧೀರನನ್ನು ಕರೆದುಕೊಂಡು ಅವರ ಊರಿಗೆ ಹೋಗುವುದು ಪ್ರಿಯವಾದ ಸಂಗತಿಯಾಗಿತ್ತು. ಮೊದಮೊದಲು ಅಪ್ಪನೇ ಕರೆದುಕೊಂಡು ಹೋಗಿ ಬಿಡುತ್ತಿದ್ದುದು ಆಮೇಲೆ ಬಸ್ಸು ಹತ್ತಿಸಿ ಕಳಿಸುವ ಸಲೀಸಿಗೆ ಸಿಕ್ಕಿತ್ತು. ದಾರಿಯುದ್ದಕ್ಕೂ ಸಿನಿಮಾಗೀತೆಗಳ ಗುನುಗುತ್ತಾ ಅಮ್ಮ ಕಟ್ಟಿಕೊಟ್ಟ ಚಕ್ಕುಲಿ, ಬಿಸ್ಕತ್ ಬಾಯಾಡಿಸುತ್ತಾ ಊರು ತಲುಪುವ ಮಜಾ. ಅಲ್ಲಿಂದಾಚೆಗೆ ಚಿಕ್ಕಮ್ಮನ ಮುದ್ದು. ಚಿಕ್ಕಪ್ಪನೊಂದಿಗೆ ಕೆರೆಯಲ್ಲಿ ಈಜು ಹೊಡೆಯುವ ಆಟ. ಪಾರ್ವತಿಯನ್ನೂ ಜೊತೆ ಮಾಡಿಕೊಂಡು ಊರಹಬ್ಬ, ಸಂತೆಗೆ ಸುತ್ತುವುದು… ಸಂತೋಷದಲ್ಲಿ ದಿನಗಳೆಯುವುದು ಕಷ್ಟವಲ್ಲ. ದುಃಖದಲ್ಲಿ ನಿಮಿಷ ನಿಮಿಷವೂ ದೂರ..ಭಾರ.

ಸೈಲೂ ಕೈಯಲ್ಲಿ ಕಾಫಿ ಹಿಡಿದೇ ಬಂದಿದ್ದಳು. ಇವಳಾದರೂ  ಕಷ್ಟಕಾಲದಲ್ಲಿ ಇರದಿದ್ದರೆ ಎಂದೋ ಕುಡಿತಕ್ಕೆ ಬಲಿಯಾಗಿ ಸಾಯುತ್ತಿದ್ದೆ. ಮಕ್ಕಳು ಮರಿ ಸಂಸಾರ ಅನ್ನೋದು ಹೆಣ್ಣೊಬ್ಬಳಿಂದಲೇ ಗಟ್ಟಿಯಾಗುವುದು ಎಂಥಾ ಸೋಜಿಗ.

” ಇವತ್ತು ರಾತ್ರಿಗೆ ಏನು ಮಾಡಲಿ? ಸೋಮವಾರ ಬೇರೆ… ಏನು “

” ಎಂತಾದ್ರೂ ಮಾಡು.. ಅವರೆಕಾಯಿ ಬಿಟ್ಟು”

 ” ಬೇಕಂದ್ರೂ ಆಗಲ್ಲ. ನಿನ್ನೆಗೇ ಅವರೆ ಮುಗಿದಾಯ್ತು. ಟೊಮೇಟೋ ಬಾತ್ ಮಾಡ್ತೀನಿ . ಅನಿಗೂ ಇಷ್ಟ”

ಆಯ್ತು ಎನ್ನಲೂ ಬಾಯಿ ಬರದೆ ಮತ್ತೊಂದು ಸಿಗರೇಟು ಹಚ್ಚಿ ಆಕಾಶಕ್ಕೆ ಮುಖಮಾಡಿ ಕೂತ.

ಅವರೆಕಾಯಿ ಅಂದ್ರೆ ಪಾರ್ವತಿಗೆ ಎಷ್ಟು ಆಸೆ. ಅವಳು ಮದುವೆಯಾಗಿ ಹೋದಕಡೆ ಅವರೆ ಸಿಗುವುದೇ ಕಷ್ಟ ಅಂತ ಅಮ್ಮನೇ ಕೆಜಿಗಟ್ಟಲೆ ತಂದು ಬಿಡಿಸಿ ಗಂಟುಕಟ್ಟಿ ತೆಗೆದುಕೊಂಡು ಹೋಗಿ ಕೊಡುತ್ತಿದ್ದಳು.ಅಮ್ಮನ ಕೈ ಧಾರಾಳ. ಚಿಕ್ಕಮ್ಮನದು ಕಮ್ಮಿಯಲ್ಲ. ಪಾರ್ವತಿಯ ಕೈ ಎಂತದ್ದು ತಿಳಿಯಲು ಒಮ್ಮೆಯೂ ಅವರ ಮನೆಗೆ ಹೋಗುವ ಭಾಗ್ಯವೇ ಬರೆಯಲಿಲ್ಲ ದೇವರು.

ಅಷ್ಟಕ್ಕೂ ಪ್ರಕಾಶ್ ರೆಡ್ಡಿಗೆ ಆ ಘಟನೆ ವಿವರವಾಗಿ ಕಾಡಲು ಕಾರಣ ಇಂದು ಮಧ್ಯಾಹ್ನ ಅವನ ಮೊಬೈಲ್ಗೆ ಬಂದ ಮೆಸೇಜ್.

” ನಮಸ್ತೇ ಮಾವ.

ನಾನು ವೈಶಾಲಿ. ಇಲ್ಲಿ ಎಲ್ಲರೂ ಕ್ಷೇಮ. ಅಲ್ಲಿ ಎಲ್ಲರೂ ಕ್ಷೇಮವೆಂದು ಭಾವಿಸುವೆ.

ನನ್ನ ತಂಗಿ ಸುರಭಿಗೆ ಮದುವೆ ಗೊತ್ತಾಗಿದೆ. ಅಂಗೀರಸ ಗೋತ್ರದವರು.ಹುಡುಗ ಇಂಜಿನಿಯರ್.ಬೆಂಗಳೂರಿನಲ್ಲಿ ಕೆಲಸದಲ್ಲಿದ್ದಾನೆ. ತುಂಬಾ ಒಳ್ಳೆಯ ಜನ. ಬಹುಶಃ ಮುಂದಿನ ಏಪ್ರಿಲ್ ನಲ್ಲಿ ಮದುವೆ. ಹುಡುಗನ ಫೋಟೋ ಕಳಿಸಿರುವೆ ನೋಡಿ.

ಹೆಚ್ಚಿನ ವಿವರಗಳನ್ನು ನಂತರ ಮೆಸೇಜ್ ಮಾಡುವೆ. ನಿಮ್ಮ ಸಪ್ರೇಮ ಆಶೀರ್ವಾದವನ್ನು ಕೋರುವ,

ವೈಶಾಲಿ.

ಮನೆಗೆ ಹೋಗುವ ಮುನ್ನ ಮೆಸೇಜ್ ಡಿಲಿಟ್ ಮಾಡಿ. ಅತ್ತೆಗೆ ತಿಳಿದು ನಿಮಗೆ ಕಷ್ಟವಾಗುವುದು ಬೇಡ.”

ಆ ಮೆಸೇಜ್ ಅನ್ನು ಓದಿದಾಗಿಲಿಂದಲೂ ಪ್ರಕಾಶ್ ರೆಡ್ಡಿಗೆ ತಾನು ಹೋಗಲಾಗದ ತಂಗಿಯ ಮನೆ, ಅವಳ ಮಕ್ಕಳ ನೆನಪಾಗಿ ಕಡೇಪಕ್ಷ ಈ ಮದುವೆಗಾದರೂ ಹೋಗಿಬಿಡಲೇ ಎನ್ನಿಸಿತ್ತು. ಪಾರ್ವತಿಯ ಗಂಡ ನರಸಾರೆಡ್ಡಿ ಅಣ್ಣ-ತಂಗಿಯ ಸಂಬಂಧಕ್ಕೇ ಅಪಾರ್ಥ ಹಚ್ಚಿ ಹಂಗಿಸುವುದು, ತವರಿಗೂ ಕಳುಹಿಸದೆ ಹಿಂಸಿಸುವುದು, ತನಗಿಂತ ಸಾವಿರಪಟ್ಟು ಅಂದವಾಗಿರುವುದು ಹೆಂಡತಿಯ ತಪ್ಪು ಎಂದೇ ಭಾವಿಸಿ ವಿಕೃತಿ ಮೆರೆಯುವುದನ್ನು ಚಿಕ್ಕಮ್ಮನೇ ಕಣ್ಣೀರು ಸುರಿಸುತ್ತಾ ಗೊಗ್ಗರು ಗಂಟಲಿನಲ್ಲಿ ಹೇಳಿ ರೋದಿಸಿದ್ದಳು. ವರ್ಷಕ್ಕೋ ಎರಡು ವರ್ಷಕ್ಕೋ ಒಮ್ಮೆ ಅಳಿಯನ ಪರವಾನಗಿ ತೆಗೆದುಕೊಂಡು ಒಂದೆರಡು ದಿನದ ಮಟ್ಟಿಗೆ ಹೋಗಿ ನೋಡಿ ಬರುತ್ತಿದ್ದ ಚಿಕ್ಕಮ್ಮ ಚಿಕ್ಕಪ್ಪ ನಮ್ಮ ಸಂಬಂಧವನ್ನು ಕಳೆದುಕೊಳ್ಳಲಿಲ್ಲ. ಆದರೂ ಮಾತಿಗೆ ಕೂತರೆ ಪಾರ್ವತಿಯ ವಿಷಯವೇ ಮುಂದಾಗಿ ಎಲ್ಲರೂ ನೋವಿನಲ್ಲಿ ವಿಲಗುಟ್ಟುವುದು ಏಕೆಂದು ಮಾತು ಕಡಿಮೆಯಾಯ್ತು. ಉಣ್ಣಲು ಉಡಲು ಯಾವ ತಾಪತ್ರಯವೂ ಇರದ ಅವರು ಮೌನವಾಗಿ ಕೂತು ಉಂಡೆದ್ದು ಬರಲು ಯಾಕಷ್ಟು ದೂರ ಹೋಗಬೇಕೆನ್ನುವ ಉತ್ತರ ಹೊಳೆಸಿಕೊಂಡು ನೆಪಮಾತ್ರದ ನೆಂಟರಾಗಿಬಿಟ್ಟರು. ಅಮ್ಮ ಮಾತ್ರ ತಾನು ಬದುಕಿರುವಷ್ಟು ದಿನ ಯಾರಿಗೂ ಹೆದರಿ ಮಗಳ ಸಂಬಂಧ ಕಡಿದುಕೊಳ್ಳಲಾರೆನೆಂದು ಅವರೆಕಾಯಿ ಕಾಲದಲ್ಲಿ ಕೆಜಿಗಟ್ಟಲೆ ಅವರೆ ಬಿಡಿಸಿ ಗಂಟುಕಟ್ಟಿಕೊಂಡು ಪಾರ್ವತಿಯ ಮನೆಗೆ ಹೋಗಿ ಕೊಟ್ಟು ಒಪ್ಪೊತ್ತು ಊಟ ಮುಗಿಸಿಯೇ ಬರುತ್ತಿದ್ದಳು. ಆ ದಾಷ್ಟಿಕ, ಮಗಳ ಮನೆ ನನಗೂ ಹಕ್ಕಿದೆ ಎನ್ನುವ ಧೈರ್ಯ ಚಿಕ್ಕಮ್ಮನಿಗೆ ಒಲಿಯಲೇ ಇಲ್ಲ.

ಸೈಲೂ ಊಟಕ್ಕೆ ತಟ್ಟೆಯಿಟ್ಟು ರೆಡ್ಡಿಯನ್ನು ಕರೆಯಲು ಬಂದವಳೇ ಬೀದಿಕಂಬದ ಬೆಳಕಿನಲ್ಲೂ ಗುರುತಿಸಬಹುದಾಗಿದ್ದ ಅವನ ಒದ್ದೆ ಕೆನ್ನೆಯನ್ನು ಕಂಡು ಅಚ್ಚರಿಪಟ್ಟಳು.

” ಇದೇನಿದು…ಮುಖವೆಲ್ಲಾ ಒದ್ದೆ. ಕಣ್ಣು ಕೆಂಪುಗಟ್ಟಿದೆ.ಆರಾಮಿಲ್ವಾ?” ಎನ್ನುತ್ತಾ ಸೆರಗಿನ ಅಂಚು ತೆಗೆದು ಮುಖವೊರೆಸಿ ಅವನ ಜೊಂಪೆಕೂದಲ ಮೇಲೆ ಕೈಯಾಡಿಸಿದಳು.

ಅವನು ಅವಳನ್ನು ನೋಡಲು ಬಂದಾಗಲೇ ಒಂದು ಸಣ್ಣ ರಿಕ್ವೆಸ್ಟು ಎನ್ನುತ್ತಾ, ” ಮನೆಯಿಂದಾಚೆಗೆ ಚೂಡಿದಾರ್, ಇನ್ನೊಂದು ಮತ್ತೊಂದು ಹಾಕಿದ್ರೂ ಪರವಾಗಿಲ್ಲ.ಆದರೆ ಮನೆಯಲ್ಲಿ ಸೀರೆ ಉಟ್ಟರೆ ನನಗೆ ಬಹಳ ಖುಷಿ ” ಅಂದಿದ್ದ.

ಸರ್ಕಾರಿ ಕೆಲಸ. ಆರಡಿ ಆಳು. ಒಳ್ಳೆ ಮನೆತನ.‌ಭೂಮಿಯೂ ಇದ್ದವರು. ಮನೇಲಿ ಸೀರೆ ಉಡಬೇಕು ಅಂದ ಮಾತ್ರಕ್ಕೆ ಬೇಡ ಅನ್ನಲಾದೀತೆ? ಹು ಅನ್ನು ಅಂತ ಸೈಲೂ ಅಮ್ಮನ ಒತ್ತಾಯ. ಸೈಲೂ ಹೂ ಅಂದ ತಿಂಗಳಿಗೇ ಮದುವೆ. ಮೂರು ವರ್ಷದೊಳಗೆ ಇಬ್ಬರು ಮಕ್ಕಳು. ಕಷ್ಟ ಅಂತನಿಸದ ಸಹಜ ಸಂಸಾರ.

“ಸೈಲೂ ಒಂದು ಚೇರ್ ತಂದು ಇಲ್ಲೇ ಕೂರು. ಒಂದು ಚಿಕ್ಕ ತೊಂದರೆ…ನೀನಾದ್ರೆ ಏನಾದ್ರು ಪರಿಹಾರ ಹೇಳಬಹುದು” ಅಂದ.

ಅವಳು ಮಕ್ಕಳಿಗೆ ಬಡಿಸಿಕೊಟ್ಟು, ತಿನ್ತಾ ಇರಿ. ಹತ್ತು ನಿಮಿಷ ಬಂದೆ ಅಂತ ಬಾಗಿಲು ಮುಂದೆ ಸರಿಸಿ ಬಂದಳು.

ರಾತ್ರಿ ಹೊತ್ತು ಎಲ್ಲರೂ ಬಾಗಿಲು ಜಡಿದು, ಮನೆಯೊಳಗೆ ಟಿವಿ ನೋಡುತ್ತಾ ಊಟ ಮಾಡುವ ಸಮಯ. ನಾವಿಲ್ಲಿ ಮಾತಾಡಿಕೊಂಡರೂ ಕೇಳಿಸಿಕೊಂಡರೆ ಎನ್ನುವ ಅನುಮಾನಕ್ಕೆ ಆಸ್ಪದವೇ ಇಲ್ಲ. ಈಗೀಗ ಜನಕ್ಕೆ ಯಾರ ಮಾತಿನ ಮೇಲೂ ಅಂತಹ ಕುತೂಹಲ, ಆಸಕ್ತಿ ಉಳಿದಿಲ್ಲ. ಎಲ್ಲರೂ ಎಲ್ಲವನ್ನೂ ಟಾಂ ಟಾಂ ಮಾಡುವುದರಲ್ಲೇ ಇದ್ದಾರೆ ಹೊರತು, ಪಿಸುಮಾತಿಗೆ ಕಿವಿಗೊಡಲು ಯಾರಿಗೂ ಪುರುಸೊತ್ತಿಲ್ಲ ಎನಿಸಿತು ಅವಳಿಗೆ.

” ಈಗ… ನಮ್ಮ ಪಾರ್ವತಿ ತರಹಾನೇ ಒಬ್ಬಳು ಹೆಣ್ಣುಮಗಳನ್ಕೋ. ಅವಳ ಮಗಳಿಗೆ ಮದುವೆ ನಿಶ್ಚಯವಾಗಿದೆ. ಅಣ್ಣನಿಗೆ ವಿಷಯ ತಿಳಿಸಲು ಕೂಡ ಯಾವುದೋ ಸಮಸ್ಯೆ ಅಡ್ಡವಾಗಿ, ಮಗಳ ಕೈಲಿ ವಾಟ್ಸಪ್ ಮೆಸೇಜ್ ಮಾಡ್ಸಿದ್ದಾಳೆ. ಅತ್ತಿಗೆಗೆ ವಿಷಯ ತಿಳಿದ್ರೆ ಏನೋ ಎಡವಟ್ಟು ಕಾದಿದೆ ಬೇರೆ. ಈಗ ಅಣ್ಣನಾದೋನು ಏನು ಮಾಡ್ತಾನೆ? “

” ನಿಮ್ಮಂತೋನಾದ್ರೆ ಕೈಲಾದ ಸಹಾಯ ಮಾಡ್ತಾನೆ. ಗುಟ್ಟಾಗಿ ಮದುವೆಗೆ ಹೋಗಿ ಬರ್ತಾನೆ. ಇಲ್ಲಾಂದ್ರೆ ತನ್ನ ಸ್ಥಿತಿ ಹೀಗ್ಹೀಗೆ ಅಂತ ತಂಗಿಗೆ ಫೋನ್ ಮಾಡಿಯಾದ್ರೂ ಸಮಾಧಾನ ಹೇಳ್ತಾನೆ”

” ಆ ಮೆಸೇಜ್ ಈಗ ನಂಗೇ ಬಂದಿದೆ. ಈಗ ನಾನು ಫೋನ್ ಮಾಡಿ ನನ್ನ ಕೈಲಾದ ಸಹಾಯ ಮಾಡ್ತೀನಿ ಅಂತೀನಿ. ಆಗ?”

” ಮಾಡಿ. ಆದರೆ ಈಗ ಮೆಸೇಜ್ ಕಳ್ಸಿರೋದು ಯಾರು?”

” ಯಾರೋ ಬ್ರಾಮಿನ್ಸ್… ಗೋತ್ರ ಅಂತೆಲ್ಲಾ ಇತ್ತು. ನಮ್ ಫ್ರೆಂಡ್ ವಿಶ್ವನಾಥನ್ನ ಕೇಳಿದ್ದಕ್ಕೆ ಬ್ರಾಮಿನ್ಸ್ ಗೋತ್ರ. ನಮ್ಕಡೆನೂ ಅದೇ ಗೋತ್ರದವರಿದ್ದಾರೆ ಅಂದ”

” ಮಿಸ್ಸಾಗಿ ಮೆಸೇಜು ನಿಮಗೆ ಬಂದಿರಬೋದು. ಅದಕ್ಯಾಕೆ ಇಷ್ಟು ಒದ್ದಾಟ?ಒಂದ್ಸಲ ಫೋನ್ ಮಾಡಿ. ಆಗಿದ್ದಾಗ್ಲಿ. ಈಗ ಊಟಕ್ಕೆ ಬನ್ನಿ” ಅಂದು ಹೊರಟಳು.

ಊಟಕ್ಕೆ ಮೊದಲು ಇದನ್ನ ನೇರ ಮಾಡ್ತೀನಿ ಅಂದುಕೊಳ್ತಾ, ಪ್ರಕಾಶ್ ರೆಡ್ಡಿ ವೈಶಾಲಿ ನಂಬರ್ಗೆ ಕಾಲ್ ಮಾಡಿದ. ಅತ್ತಲಿಂದ ಗಂಡಸಿನ ದನಿ.

” ಇಲ್ಲ ಸರ್. ಅದು ರಾಂಗ್ ನಂಬರ್ ಇರಬೇಕು. ನಮಗೆ ಪ್ರಕಾಶ್ ರೆಡ್ಡಿ ಅಂತ ಯಾರೂ ಪರಿಚಯ ಇಲ್ಲ. ನಮಗೆ ಯಾವ ಸಹಾಯನೂ ಬೇಡ. ಪ್ಲೀಸ್… ಮೆಸೇಜ್ ಮತ್ತೆ ನಂಬರ್ ಡಿಲಿಟ್ ಮಾಡಿ. ಅವರು ಯಾರೋ ಅಂದ್ಕೊಂಡು ನಿಮಗೆ ಮೆಸೇಜ್ ಮಾಡಿದಾರೆ. ಸಾರಿ ಸರ್… ಮತ್ತೆ ಕಾಲ್ ಮಾಡೋಕೆ ಹೋಗ್ಬೇಡಿ. ಗುಡ್ ನೈಟ್ ಸರ್. ಥ್ಯಾಂಕ್ಯೂ”

ಅನ್ನುತ್ತಾ ಕಾಲ್ ಕಟ್ ಮಾಡಿದ.

*************************************************

Leave a Reply

Back To Top