ಕವಿತೆ
ತಮಟೆ ಬೇಕಾಗಿದೆ
ಎನ್.ರವಿಕುಮಾರ್ ಟೆಲೆಕ್ಸ್
ನನ್ನ ತಮಟೆ ಹರಿದು ಹೋಗಿದೆ
ಎದೆಯಗಲ ಚರ್ಮ ಬೇಕಾಗಿದೆ
ಸತ್ತ ದನದ್ದು….
ತಮಟೆ ಸದ್ದಿನೊಳಗೆ
ದುಃಖ ದೂರುಗಳ ಜಗಕೆ
ಆಡಿ ಹಗುರಗೊಳ್ಳಬೇಕಿದೆ
ಜುಂಗು ಕಿತ್ತು ರಂಪಿಗೆ ಆಡಿಸಿ
ಅಡಗಲ್ಲಿನಲ್ಲಿ
ತಟ್ಟಿ ಹದ ಮಾಡಿ
ಹದಿನಾರು ಎಳೆ ಬಿಗಿದು
ಎಳೆ ಬಿಸಿಲಿಗಿಡಿದು
ಅಲುಗು ಅಲುಗಿಗೂ…ಕಂಟ ಕಾವು
ರಣಬಾಜಿ,ಹುಲಿ ಹೊಡೆತ
ಎರಡೇಟು…ಗಸ್ತಿ
ನೋವು ನೀಗಿಸಿಕೊಳ್ಳಬೇಕಿದೆ
ಶತಮಾನಗಳದ್ದು
ಈಗೀಗ ವರ್ತಮಾನದ್ದೂ….
ಸತ್ತದನವೊಂದಿದ್ದರೆ
ಕೊಟ್ಟು ಬಿಡಿ
ನನ್ನ ತಮಟೆ ಹರಿದು ಹೋಗಿದೆ.//
ಕಾಡುಕತ್ತಲೆ
ಬಿಳಿಯ ತೊಗಲ ದೊರೆ ದೇಶ ತೊಲಗಿದ
ಕರಿಯ ತೊಗಲ ಬಿಳಿಯ ಬಟ್ಟೆ
ದೇಶ ಜನರ ಬಗೆ ಬಗೆದು
ಸುಲಿತಿದೆ ಹಾಡಹಗಲೆ
ಸುಳ್ಳು ಮಾತು ಕಳ್ಳನಡೆ
ಪೊಳ್ಳು ಧರ್ಮದ ಇಷವಯ್ಯ
ಸತ್ತಂತಿಹರನು ಬಡಿದೆಚ್ಚರಿಸಲು
ತಮಟೆಯೊಂದು ಬೇಕಾಗಿದೆ//
ಹೊಲಗದ್ದೆ ಸುಗ್ಗಿಕಣ
ಊರ ಹುಣಸೆ ಮರವೂ
ಗಂಟುಕಳ್ಳರ ಪಾಲು
ಅನ್ನದಾತನ ಕೈಗಳಿಗೆ ಭಿಕ್ಷೆ ಚರಿಗೆ
ಕುಂಬಾರ, ಕಮ್ಮಾರ,ಚಮ್ಮಾರ,
ಮಡಿವಾಳ,ಬಡಗಿ,
ಕೂಲಿಯಾಳು, ಒಕ್ಕಲು ಕಾಡು ಪಾಲು
ದೇವ್ರು – ಧರ್ಮ ಕರ್ಮಗೆಡಿಸಿ
ನೆರೆಹೊರೆ ನಂಟು ಊರಾಳು
ಎದೆ ಎದೆಗೂ ಇದ ಸಾರಲು
ತಮಟೆಯೊಂದು ಬೇಕಾಗಿದೆ.
ಮುತ್ತಾತ ಮೆಚ್ಚಿ ಬಾರಿಸಿದ ತಮಟೆ
ತಾತಾ ತಲೆ ಎತ್ತಿ ಬಡಿದ ತಮಟೆ
ಅಪ್ಪ ಕುಣಿ ಕುಣಿದು ಅಬ್ಬರಿಸಿದ ತಮಟೆ
ಸಾವಿನ ಸೂತಕಕ್ಕೂ
ದೇವರ ಒಡ್ಡೋಲಗಕ್ಕೂ
ಒಪ್ಪುಳ್ಳ ತಮಟೆ
ಸತ್ತದನವೊಂದಿದ್ದರೆ ಕೊಡಿ
ತಮಟೆ ಬಿಗಿಯಬೇಕಿದೆ
ನಿಮ್ಮ ಮೆರವಣಿಗೆಗೆ!!!
ವಲಸೆ ಹೋದ ದಾರಿಯಲ್ಲಿ
ರಕ್ತ ಮಾಸಿಲ್ಲ
ಬಿಮ್ಮನಿಸಿ ಬಾಣಂತಿ ಹಸುಗೂಸುಗಳ
ನಿಟ್ಟುಸಿರು ನಿತ್ರಾಣವಿನ್ನೂ ತಣಿದಿಲ್ಲ
ಹಸಿವು,ಕಣ್ಣೀರ ಅನಾಥ ಮೆರವಣಿಗೆಗೆ
ನೀರಿಲ್ಲ , ನೆಳಲಿಲ್ಲ ದೇವರಿಗೊಂದು
ಮಹಲು ಕಟ್ಟುವ ಮೋಜು ಮುಗಿದಿಲ್ಲ
ದೊರೆಯನ್ನು ಧ್ಯಾನದಿಂದ ಎಬ್ಬಿಸಲು
ತಮಟೆಯೊಂದು ಬೇಕಾಗಿದೆ.
ದೇವರು
ನಡುರಸ್ತೆಯಲ್ಲೆ ನಿಂತಿದ್ದಾನೆ
ಹೆಣವೊಂದು ಚಟ್ಟ ಏರಲೊಲ್ಲುತ್ತಿಲ್ಲ
ಸಂಪ್ರದಾಯ ಮುಕ್ಕಾದೀತು
ತಮಟೆಯೊಂದು ಬೇಕಾಗಿದೆ
ಹೆಣದ ಮೋಕ್ಷಕ್ಕೆ
ದೇವರ ಸುಖ ನಿದ್ರೆಗೆ
ದೇಶದಲ್ಲೀಗ ಭಕ್ತರ ಕಾಲ
ಪ್ರಶ್ನಿಸುವವರು ಜೈಲಿಗೆ
ದುಡಿವವರು ಬೀದಿಗೆ
ಉಳಿದವರು ಜೀತಕ್ಕೆ
ತುಂಡು ಬಾಡು ತಿಂದಿದ್ದಕ್ಕೆ
ಕಾಡು ನ್ಯಾಯದ ಸಾವ ಶಿಕ್ಷೆ
ಮತದ ಮತ್ತೇರಿದವರನ್ನೆಲ್ಲ
ಮನುಜಮತದ ಮನುಷ್ಯರೂರಿಗೆ
ಮೆರವಣಿಗೆ ಕರೆದೊಯ್ಯಬೇಕಿದೆ
ಸತ್ತದನವೊಂದಿದ್ದರೆ ಕೊಡಿ
ಎದೆಯಗಲ ಚರ್ಮ ಬೇಕಿದೆ
ಎಂದೂ ಹರಿಯದ
ಬುದ್ಧ ಭಾರತ,ಭೀಮ ಭಾರತ
ಬಸವ ಪಥ ಕಟ್ಟಲು
ತಮಟೆಯೊಂದು ಬಿಗಿಯಬೇಕಿದೆ.
*************************************
ಅದ್ಭುತ ಅಭಿವ್ಯಕ್ತಿ. .ಸಕಾಲಿಕ ಕವಿತೆ.
ವರ್ತಮಾನದ ತಲ್ಲಣಕ್ಕೊಂದು ಎಚ್ಚರಿಕೆ ಗಂಟೆ ಕವಿತೆ.