ಅಂಕಣ ಬರಹ

ಗಾನ್ ವಿತ್ ದ ವಿಂಡ್

ಗಾನ್ ವಿತ್ ದ ವಿಂಡ್
ಮೂಲ ಇಂಗ್ಲಿಷ್ : ಮಾರ್ಗರೆಟ್ ಮಿಶೆಲ್ ಕನ್ನಡಕ್ಕೆ : ಶ್ಯಾಮಲಾ ಮಾಧವ
ಪ್ರ : ಅಂಕಿತ ಪುಸ್ತಕ
ಪ್ರಕಟನೆಯ ವರ್ಷ : ೨೦೦೪

:

ಎಂದಿನಂತೆ ಶ್ಯಾಮಲಾ ಮಾಧವ ತಮ್ಮ ಅನುವಾದಕ್ಕಾಗಿ ಒಂದು ಕ್ಲಾಸಿಕ್  ಕಾದಂಬರಿಯನ್ನು ಎತ್ತಿಕೊಂಡಿದ್ದಾರೆ. ೧೮೬೧ರಲ್ಲಿ ಅಮೆರಿಕಾದಲ್ಲಿ ನಡೆದ ಅಂತರ್ಯುದ್ಧದ ಸಂದರ್ಭದ ಒಂದು ಕಥೆ ಇಲ್ಲಿದೆ. ಆದ್ದರಿಂದ ಕಥೆಯ ಜತೆಜತೆಗೇ ಯುದ್ಧದ ವರ್ಣನೆಯೂ, ಅದರಿಂದಾಗುವ ಅನಾಹುತಗಳ ವರ್ಣನೆಯೂ ಸಾಗುತ್ತದೆ. ದಕ್ಷಿಣ ಅಮೇರಿಕಾದ ಜಾರ್ಜಿಯಾದ ಟಾರಾ ಎಂಬಲ್ಲಿನ ಒಂದು ಪ್ಲಾಂಟೇಷನ್ ಮಾಲೀಕರ ಮುದ್ದಿನ ಮಗಳು ಸ್ಕಾರ್ಲೆಟ್ ಓಹರಾ.  ಅವಳು ತನ್ನನ್ನು ಮದುವೆಯಾಗಲು ಬಂದ ಅನೇಕ ಯುವಕರನ್ನು ನಿರಾಕರಿಸಿ ಆಶ್ಲೆ ವಿಲ್ಕಿಸ್ ಎಂಬವನನ್ನು ಇಷ್ಟಪಟ್ಟು ಮದುವೆಯಾಗ ಬಯಸುತ್ತಾಳೆ. ಆದರೆ ಆಶ್ಲೆ ಆಗಲೇ ಸಾಮಾನ್ಯ ರೂಪಿನ ಕೃಶಕಾಯದ ಹುಡುಗಿ ಮೆಲಾನಿ ಹ್ಯಾಮಿಲ್ಟನ್ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆAದು ತಿಳಿದಾಗ ಅವಳು ನಿರಾಶಳಾಗುತ್ತಾಳೆ. ಆದರೂ ಆಶ್ಲೆ ಮೇಲಿನ ಅವಳ ಪ್ರೀತಿ ಕಡಿಮೆಯಾಗುವುದಿಲ್ಲ. ಆ್ಲಶ್ಲೆ ಅವಳನ್ನು ತಿರಸ್ಕರಿಸುವುದನ್ನು ಸಾಹಸಪ್ರಿಯ ಮತ್ತು ಒರಟು ಸ್ವಭಾವದ ರ‍್ಹೆಟ್ ಬಟ್ಲರ್ ಎಂಬವನು ನೋಡುತ್ತಾನೆ. ಅವನಿಗೆ ಸ್ಕಾರ್ಲೆಟ್ ಮೇಲೆ ಮನಸ್ಸಿರುತ್ತದೆ. ಆಶ್ಲೆಯ ಮೇಲೆ ಸೇಡು ತೀರಿಸುವುದಕ್ಕೋಸ್ಕರವೋ ಎಂಬAತೆ ಸ್ಕಾರ್ಲೆಟ್ ಭೋಳೆ ಸ್ವಭಾವದ ಮೆಲಾನಿಯ ಅಣ್ಣ ಚಾರ್ಲ್ಸ್ ಹ್ಯಾಮಿಲ್ಟನ್‌ನನ್ನು ವಿವಾಹವಾಗುತ್ತಾಳೆ. ಆದರೆ ಚಾರ್ಲ್ಸ್ ಯುದ್ಧಕ್ಕೆ ಹೋದವನು ಅಲ್ಲೇ ಸಾಯುತ್ತಾನೆ. ಸ್ಕಾರ್ಲೆಟ್‌ಗೆ ತಾನು ಗರ್ಭಿಣಿಯೆಂದು ಗೊತ್ತಾಗುತ್ತದೆ. ಟಾರಾದಲ್ಲಿ ವೈರಿಗಳ ದಾಳಿಯ ಕಾರಣದಿಂದ ಅನ್ನಾಹಾರಕ್ಕೆ ಕಷ್ಟವಾಗಿ ಸ್ಕಾರ್ಲೆಟ್ ಮೆಲಾನಿಯ ಜತೆಗೂಡಿ ಅಟ್ಲಾಂಟಾಕ್ಕೆ ಹೋಗಿ ವಾಸಿಸುತ್ತಾಳೆ. ಅಲ್ಲಿ ಅವಳು ಪುನಃ ರ‍್ಹೆಟ್ ನನ್ನು ಭೇಟಿಯಾಗುತ್ತಾಳೆ. ಅವನು ಅವಳನ್ನು ತನ್ನ ಒರಟು ಮಾತುಗಳಿಂದ ನೋಯಿಸುತ್ತಾನಾದರೂ ಟಾರಾದ ಸಾಮಾಜಿಕ ಅಗತ್ಯಗಳಿಗೆ ಅವಳು ಸ್ಪಂದಿಸಬೇಕೆಂದು ಪ್ರೋತ್ಸಾಹಿಸುತ್ತಾನೆ. ಮೆಲಾನಿ ಹೆರಿಗೆಯ ನೋವಿನಲ್ಲಿದ್ದಾಗ ವೈರಿಗಳಾದ ಯಾಂಕಿಗಳು ಅಟ್ಲಾಂಟಕ್ಕೂ ಮುತ್ತಿಗೆ ಹಾಕುತ್ತಾರೆ. ಆಗ ಸ್ಕಾರ್ಲೆಟ್ ಮೆಲಾನಿಯನ್ನೂ ಅವಳ ಮಗುವನ್ನೂ ತನ್ನ ಮಗುವನ್ನೂ ಕರೆದುಕೊಂಡು ಟಾರಾಕ್ಕೆ ಬರುತ್ತಾಳೆ.

ಟಾರಾದಲ್ಲೂ  ಯಾಂಕಿಗಳ ಆಕ್ರಮಣದ ಪರಿಣಾಮವಾಗಿ ಸಾಕಷ್ಟು ಅನಾಹುತಗಳಾಗಿವೆ.  ಸ್ಕಾರ್ಲೆಟ್‌ಳ ತಾಯಿ ತೀರಿಹೋಗಿ ತಂದೆಗೆ ಬುದ್ಧಿಭ್ರಮಣೆಯಾಗಿದೆ. ಪ್ಲಾಂಟೇಷನ್ ಪೂರ್ತಿಯಾಗಿ ಆಕ್ರಮಣಕಾರರಿಂದ ಹಾಳಾಗಿ ಹೋಗಿದೆ. ಅಲ್ಲದೆ ಆಸ್ತಿಯ ಮೇಲಿನ ತೆರಿಗೆಯನ್ನು ಹೆಚ್ಚು ಮಾಡಿದ್ದಾರೆಂದೂ ಅವಳ ಆಸ್ತಿಯನ್ನು ಲಪಟಾಯಿಸುವುದು ಅವರ ಉದ್ದೇಶವೆಂದೂ ಸ್ಕಾರ್ಲೆಟ್ಳಿಗೆ ಸುದ್ದಿ ಸಿಗುತ್ತದೆ. ತನ್ನ ಆಸ್ತಿಯನ್ನು ತಾನು ಉಳಿಸಲೇ ಬೇಕೆಂದು ಅವಳು ತೆರಿಗೆಯ ಹಣವನ್ನು ಸಂಪಾದಿಸಲು ಅಟ್ಲಾಂಟಕ್ಕೆ ಬರುತ್ತಾಳೆ. ಟಾರಾದ ಪ್ಲಾಂಟೇಷನನ್ನು ಮೊದಲ ಸ್ಥಿತಿಗೆ ತಂದೇ ತೀರುವೆನೆಂದು ಹಠ ತೊಡುತ್ತಾಳೆ. ಆದರೆ ಹಣ ಸಂಪಾದಿಸುವ ವಿಚಾರದಲ್ಲಿ ಅವಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾಳೆ. ಒಂದು ಹಂತದಲ್ಲಿ ರ‍್ಹೆಟ್‌ನನ್ನು ಮದುವೆಯಾಗುತ್ತಾಳೆ. ಅವನಿಂದ ಒಂದು ಮಗುವನ್ನೂ ಪಡೆಯುತ್ತಾಳೆ. ಆದರೆ ಸ್ವಲ್ಪ ಕಾಲದ ನಂತರ ರ‍್ಹೆಟ್ ಅವಳನ್ನು ತಿರಸ್ಕರಿಸುತ್ತಾನೆ. ಆಗ ಸ್ಕಾರ್ಲೆಟ್‌ಗೆ ತಾನು ಅವನನ್ನು ಪ್ರೀತಿಸುತ್ತಿದ್ದೇನೆಂದು ಅರಿವಾಗುತ್ತದೆ, ಅವನ ಪ್ರೀತಿಯನ್ನು ಹೇಗಾದರೂ ಮಾಡಿ ಸಂಪಾದಿಸಲೇ ಬೇಕೆಂದು ಅವಳು ನಿರ್ಧರಿಸುವುದರೊಂದಿಗೆ ಕಾದಂಬರಿ ಮುಗಿಯುತ್ತದೆ.

 ಸ್ಕಾರ್ಲೆಟ್‌ಳ ದಿಟ್ಟತನದ ಚಿತ್ರಣವಷ್ಟೇ ಕಾದಂಬರಿಯ ಪ್ರಮುಖ ಅಂಶವಲ್ಲ. ಪುರುಷಾಹಂಕಾರ, ಹಠ, ಪ್ರತೀಕಾರ, ಅಧಿಕಾರ ದಾಹಗಳ ಕಾರಣದಿಂದ ನಡೆಯುವ ಯುದ್ಧವು ಸ್ತ್ರೀಯರ ಬದುಕನ್ನು ಯಾವ ರೀತಿ ಮೂರಾಬಟ್ಟೆ ಮಾಡುತ್ತದೆ ಅನ್ನುವುದನ್ನು ಚಿತ್ರಿಸುವುದು ಕಾದಂಬರಿಯ ಉದ್ದೇಶವಾಗಿದೆ. ಎಲ್ಲರ ಬದುಕೂ ಯುದ್ಧವು ಉಂಟು  ಮಾಡುವ ಅನಾಹುತಗಳಿಂದಾಗಿ ಗಾಳಿಯ ಹೊಡೆತಕ್ಕೆ ಸಿಕ್ಕಿ ಸೂತ್ರ ಕಿತ್ತ ಗಾಳಿಪಟದಂತಾಗುತ್ತದೆ ಅನ್ನುವುದು ಶೀರ್ಷಿಕೆಯ ಅರ್ಥ. ಶ್ಯಾಮಲಾ ಮಾಧವ ಅವರ ಅನುವಾದವು ಎಂದಿನಂತೆ ಹೃದ್ಯವಾಗಿದೆ

**********************************

ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Leave a Reply

Back To Top