ಹೃದಯ ಭಾಷೆ

ಅನುವಾದಿತ ಕಥೆ

ಹೃದಯ ಭಾಷೆ

ತೆಲುಗು ಮೂಲ: ಕಳ್ಳೆ ವೆಂಕಟೇಶ್ವರ ಶಾಸ್ತ್ರಿ                              

ಕನ್ನಡಕ್ಕೆ: ಚಂದಕಚರ್ಲ ರಮೇಶ ಬಾಬು

mural concrete wall

ಬೆಳೆಗ್ಗೆ ಐದು ಗಂಟೆಗೆ ಆತ ತನ್ನ ಫ್ಲಾಟಿನಿಂದ ಹೊರಗಡೆ ಬಂದ.

ಆತನ ಫ್ಲಾಟ್ ತುಂಬಾ ಚಿಕ್ಕದು. ಗ್ರೌಂಡ್ ಫ್ಲೋರ್ ನಲ್ಲಿತ್ತು. ಒಂದು ಹಾಲು, ಒಂದು ಮಲಗುವ ಕೋಣೆ, ಅಡುಗೆಮನೆ, ಬಾತ್ರೂಮ್ ಕಮ್ ಟಾಯ್ಲೆಟ್ ಇವು ಅದರ ಭಾಗಗಳು.

ಬಾಗಿಲು ಮುಚ್ಚಿ, ಚಿಲಕವಿಟ್ಟು ಅದಕ್ಕೆ ಬೀಗ ಹಾಕಿದ. ಹೊರಗಡೆ ಇನ್ನೂ ಕತ್ತಲಿತ್ತು. ಬೆತ್ತದ ಆಸರೆಯಿಂದ ಸದ್ದಿಲ್ಲದೇ ಬೇಗಬೇಗ ನಡೆಯುತ್ತಿದ್ದ. ಆತನ ಹೆಗಲಿಗೆ ಕ್ಯಾನ್ವಾಸಿನ ಹೆಗಲು ಚೀಲ ನೇತಾಡುತ್ತಿತ್ತು.

ಆತನ ಹೆಸರೇನು ಅಂತ ಅಲ್ಲಿರುವವರಿಗೆ ಗೊತ್ತಿರಲಿಲ್ಲ. ಆ ಫ್ಲಾಟ್ ಆತನ ಸ್ವಂತದ್ದೇ. ಹಾಗಾದರೇ, ಆತನನ್ನು ಏನಂತ ಕರೆಯುತ್ತಾರೆ ? ಆತನನ್ನು ಯಾರೂ ಕರೆಯುವುದಿಲ್ಲ. ಇನ್ನೂ ಹೇಳಬೇಕಾದರೆ ಆತನ ಬಗ್ಗೆ ಯಾರೂ ಚರ್ಚಿಸುವುದಿಲ್ಲ. ಇನ್ನುವರೆಗೂ ಆತನನ್ನು ಕರೆಯುವ ಅಗತ್ಯವೇ ಬಿದ್ದಿರಲಿಲ್ಲ ಅಲ್ಲಿ ವಾಸಿಸುವವರಿಗೆ.

ಆತನ ವಯಸ್ಸು ಹೆಚ್ಚುಕಡಿಮೆ ಅರವತ್ತು ದಾಟಿ ಎಪ್ಪತ್ತರ ಒಳಗೆ ಇರಬಹುದು. ಆ ವಯಸ್ಸಿಗೆ ತಕ್ಕ ಹಾಗೆ, ಅತಿ ಸಾಧಾರಣವಾಗೇ ಇರುತ್ತಾನೆ ಆತ.

ಆದರೇ…. ಯಾವಾಗಲೂ ಒಂದೇ ತರ ಇರುವುದಿಲ್ಲ . ಸ್ವಲ್ಪ ದಿವಸ ಮೀಸೆ ಇಟ್ಟಿದ್ದರೆ, ಮತ್ತೆ ಕೆಲದಿನ ತೆಗೆದಿರುತ್ತಾನೆ. ಒಂದು ದಿನ ಬೋಳಉತಲೆಯೊಂದಿಗೆ ಪ್ರತ್ಯಕ್ಷವಾದರೆ, ಮತ್ತೆ ಕೆಲ ದಿನ ಉದ್ದ ಕೂದಲಿನ ಸಾಧುವಿನ ತರ ಕಾಣಿಸಿಕೊಳ್ಳುತ್ತಾನೆ.

ಆತನ ದಿರಿಸು ಬಹು ವಿಚಿತ್ರ. ಪೈಜಾಮಾ, ಜುಬ್ಬಾ ಧರಿಸಿದ್ದು, ತಲೆಗೆ ವಿದೇಶೀ ಟೋಪಿ ಇಡುತ್ತಾನೆ. ಒಮ್ಮೊಮ್ಮೆ ಪಂಚೆ ಉಟ್ಟು, ಮೇಲೆ ಶಲ್ಯ ಹಾಕಿ ತಿರುಗುತ್ತಾನೆ. ಮತ್ತೊಮ್ಮೆ ಯಾವುದೋ ನಾಮ ಹಣೆಯಮೇಲೆ ಧರಿಸಿರುತ್ತಾನೆ.

ಸರಿ….. ಈಗ ಆತ ಎತ್ತ ಹೋಗುತ್ತಿದ್ದಾನೆ ?

ನೇರ ಪಾರ್ಕಿನ ಕಡೆಗೆ ಹೋಗುತ್ತಿದ್ದಾನೆ. ಆ ದಾರಿಯಲ್ಲಿ ಆತನನ್ನು ನೋಡಿ ಬೊಗಳಲು ನಾಯಿಗಳಿಲ್ಲ. ಎಲ್ಲವನ್ನು ಮುನಿಸಿಪಾಲಿಟಿಯವರು ಎಲ್ಲೋ ಸಾಗಿಸಿದ್ದಾರೆ. ಆದರೆ ಅದು ಆತನ ದೂರುಗಳಿಂದಲೇ ಆದದ್ದು ಎಂದು ಅವರಿಗೆ ಗೊತ್ತಿಲ್ಲ.

ಇದೋ…. ದಿನಾ ಬೆಳಗ್ಗೆ ಪತ್ರಿಕೆ ಹಾಕುವ ಹುಡುಗರು ವೇಗವಾಗಿ ಸೈಕಲ್ ತುಳಿಯುತ್ತ ಬರುತ್ತಿದ್ದಾರೆ.

“ ಇವರುಗಳೆಲ್ಲ ಕನ್ನಡಿಗಳನ್ನು ತೊಗೊಂಡು ಹೋಗುತ್ತಿದ್ದಾರೆ. ಕನ್ನಡಿಯೊಳಗೆ ನೋಡಿಕೊಳ್ಳದಿದ್ದರೆ ಜನರಿಗೆ ಏನೂ ಅರ್ಥವಾಗುವುದಿಲ್ಲ, ಪಾಪ “ ಅಂದುಕೊಂಡ ಆತ.

ಆತ ಅಷ್ಟೇ….. ದಿನಪತ್ರಿಕೆಯನ್ನು ’ ಕನ್ನಡಿ’ ಅಂತ ಕರೆಯುತ್ತಾನೆ. ಜನಗಳ ಮನೋಭಾವಗಳಿಗೆ ಕನ್ನಡಿ ಹಿಡಿಯುವುದು ಮತ್ತು ಜಗತ್ತಿನಲ್ಲಿ ನಡೆಯುವ ವಿಚಿತ್ರ ಘಟನೆಗಳನ್ನು ಕನ್ನಡಿಯಂತೆ ತೋರಿಸುವುದು ದಿನಪತ್ರಿಕೆಗಳೇ ಆದ ಕಾರಣ ಆತ ಅವುಗಳಿಗೆ ಆ ಹೆಸರು ಇಟ್ಟುಕೊಂಡಿದ್ದಾನೆ.

ಆತನ ವ್ಯವಹಾರವೇ ಅಷ್ಟು ! ಎಲ್ಲಾ ಸಂಕೇತ ಭಾಷೆಯಲ್ಲಿರುತ್ತೆ. ಆತ ಬರೆದಿಟ್ಟುಕೊಳ್ಳುವ ದಿನಚರಿ ಸಹ ಅದೇ ಭಾಷೆಯಲ್ಲಿರುತ್ತದೆ. ಈ ಅಭ್ಯಾಸ ಆತನಿಗೆ ಹೇಗೆ ಬಂತೋ ಯಾರಿಗೂ ಗೊತ್ತಿಲ್ಲ.

ಆತ ಸಂದಿಗಳಲ್ಲಿ ನಡೆಯುವುದಿಲ್ಲ. ಮುಖ್ಯರಸ್ತೆಯ ಮೇಲೇನೇ. ಅದೂ ಸಹ ಮಾರ್ನಿಂಗ್ ವಾಕ್ ಮತ್ತು ಜಾಗಿಂಗ್ ಗಳ ಸಮ್ಮಿಶ್ರಣವಾಗಿರುತ್ತೆ. ಆತ ಹೀಗೆ ಎಷ್ಟು ದಿನಳಿಂದ ಅಥವಾ ಎಷ್ಟು ವರ್ಷಗಳಿಂದ ಮಾಡುತ್ತಿದ್ದಾನೋ ಯಾರಿಗೂ ಗೊತ್ತಿಲ್ಲ.

ಇದೀಗ ಆ ಮಸೀದಿ ಪಕ್ಕದ ಮುಖ್ಯರಸ್ತೆಯ ಮೇಲಿನ ಕಾಫೀ ಹೋಟಲ್ ತೆಗೀತಿದ್ದಾರೆ. ಅದೋ ತೆಗೆದರು…..!

“ ಹೌದು. ಕಷಾಯ ಕುಡಿದು ತುಂಬಾ ದಿನ ಆಯ್ತು. ನಡಿ. ಅಂತರಾತ್ಮಕ್ಕೆ ಹೋಗಿ ಸ್ವಲ್ಪ ಗಂಟಲಿಗೆ ಹಾಕೋಣ.” ಅಂತ ಹೇಳಿತು ಅವನ ಒಳ ಮನಸ್ಸು. ಅಂತರಾತ್ಮ… ಇದು ಆತ ಹೊಟೆಲಿಗೆ ಇಟ್ಟುಕೊಂಡ ಹೆಸರು….. ಅದರಲ್ಲಿ ಹೋಗಿ ಕೂತ.

ಮಾಣಿ ಬಂದ ತಕ್ಷಣ “ ಕಷಾಯ” ಅಂದ.

ಅವನಿಗೆ ಕನ್ನಡ ಬರುವುದಿಲ್ಲ. ಏನು ? ಎನ್ನುವ ಹಾಗೆ ಕೈಯಿಂದ ಸನ್ನೆ ಮಾಡ್ದ. ಆತ ಗೋಡೆಯ ಮೇಲಿದ್ದ ಪದಾರ್ಥಗಳ ಪಟ್ಟಿಯ ಬಳಿಗೆ ಹೋಗಿ ಕಾಫಿ ಅಂತ ಇದ್ದ ಕಡೆಗೆ ಬೆಟ್ಟು ಮಾಡಿ ತೋರಿಸಿದ.

“ ಓಹೋ ! ಕಾಫೀ ಕ್ಯಾ….” ಅಂತ ತನ್ನಲ್ಲೇ ನಗೆಯಾಡುತ್ತ ಹೋದ ಅವನು. ಕಾಫಿ ಕುಡಿದ ಮೇಲೆ “ ಕವಡೆ ” ಕೊಟ್ಟು ಹೊರಬಂದ.

ಕವಡೆ ಎಂದರೆ ದುಡ್ಡು… ಕಿಸೆಯಲ್ಲಿ ಕವಡೆ ಕಾಸಿಲ್ಲ ಅಂತಾರಲ್ಲ…. ಅದಕ್ಕೆ ದುಡ್ಡಿಗೆ ಕವಡೆ ಅಂತ ಹೆಸರಿಟ್ಟುಕೊಂಡಿದ್ದಾನೆ ಆತ.

ಮತ್ತೆ ನಡೆಯಲು ಮೊದಲಿಟ್ಟ .  ಕೆಲ ಯುವಕರು ಟೀ ಷರ್ಟ್ ಮತ್ತು ಷಾರ್ಟ್ ಧರಿಸಿ ಜಾಗಿಂಗ್ ಗೆ ಬರುತ್ತಿದ್ದರು. ತನ್ನಲ್ಲೇ ನಕ್ಕ ಆತ. ಯಾಕೆ ಅಂತ ಅವನಿಗೂ ಗೊತ್ತಿಲ್ಲ. ಬಹುಶಃ ಒಂದು ಕಾಲದಲ್ಲಿ ತಾನು ಸಹ ಇದೇ ರೀತಿ ಯೌವನದಲ್ಲಿ ತುಂಬಿ ತುಳುಕುತ್ತಾ ಹೋರಿಯ ತರ ಓಡುತ್ತಿದ್ದ, ಈಗ ’ ನೆರಳು ’ ಬಿದ್ದು ತನಗೆ ಸಾಧ್ಯವಾಗುತ್ತಿಲ್ಲ ಎನ್ನುವ ಭಾವ ವಿರಬಹುದು. ನೀವೆಲ್ಲರೂ ನಾಳೆ ಇದೇ ’ ನೆರಳು’ ನಿಮ್ಮಮೇಲೆ ಬೀಳುವಾಗ ನನ್ನ ಹಾಗೆ ಆಗುತ್ತೀರಿ ಎನ್ನುವ ಇನ್ನೊಂದು ಭಾವ ಸಹ ಇರಬಹುದು. ನೆರಳು ಎಂದರೆ ಮುಪ್ಪು ಅಂತ ಅವನರ್ಥ.

ಪಾರ್ಕಿನೊಳಗೆ ಕಾಲಿಟ್ಟ.

ಒಳಗೆ ಎಂಥಾ ಒಳ್ಳೆ ಸಂಗೀತ ! ಪಾರ್ಕಿನಲ್ಲಿ….. ಆ ಸಮಯದಲ್ಲಿ ಸಂಗೀತನಾ… ಅಂತ ನೀವು ಕೇಳಬಹುದು.

ಪ್ರಶಾಂತತೆಗೆ ಆತನ ನಿಘಂಟುವಿನಲ್ಲಿಯ ಹೆಸರು ಸಂಗೀತ……

ಪ್ರಶಾಂತತೆಗಿಂತ ಮಿಗಿಲಾದ ಇಂಪಾದ ಸಂಗೀತ ಬೇರೇ ಇರಲಾರದು ಅಂತ ಆತನ ಅಚಲ ನಂಬಿಕೆ.

ಹೂಗಿಡಗಳ ನಡುವೆ ಹಾಕಿದ ಬಂಡೆಗಳ ಮೇಲೆ ನಡೆಯುತ್ತಿದ್ದ.

ಪಕ್ಕಕ್ಕೆ ನೋಡುತ್ತಾ “ ಈ ಹುಡುಗೀರು ಇನ್ನೂ ಏಳ್ಳಿಲ್ಲ ಅಂತ ಕಾಣತ್ತೆ….. ಮಲ್ಕೊಳ್ಳಿ.  ನಿದ್ರೆಮಾಡಿ.  ಸೊಗಸಾದ ಕನಸು ಕಾಣಿರಿ ಹಾಯಾಗಿ…. ನನ್ನ ಮುದ್ದು ಹುಡುಗಿಯರೇ “ ಅಂದ.

ಹೌದು. ಮತ್ತೆ……ಆ ರಸಿಕನ ಹೃದಯದ ಭಾಷೆಯ ಪ್ರಕಾರ ಹೂಗಳು ಮತ್ತು ಹುಡುಗಿಯರೂ ಒಂದೇ…..

ಹಾಗಾದರೆ ಹುಡುಗಿಯರಿಗೆ ಏನು ಹೆಸರಿಟ್ಟಿದ್ದಾನೋ ಅಂತ ನಿಮಗೆ ಸಂದೇಹವಾಗಬಹುದು ಅಲ್ಲವೇ ! ಅದೋ ನೋಡಿ…. ಸ್ವಲ್ಪ ದೂರದಲ್ಲಿ ಇಬ್ಬರು ಹುಡುಗೀರು ಸ್ಕಿಪ್ಪಿಂಗ್ ಮಾಡ್ತಾ ಇದ್ದರು. “ ಹಾಯ್ ಚಾಕ್ಲೆಟ್ಸ್ “ ಅಂತ ಸಂಬೋಧಿಸಿದ. ಅವರು ಸಣ್ಣಗೆ ನಕ್ಕರು. ಹುಡುಗೀರಿಗೆ ಚಾಕ್ಲೆಟ್ ಗಳೆಂದರೆ ಇಷ್ಟ ಅಲ್ಲವಾ ! ಅದಕ್ಕೆ ಅವರಿಗೆ ಆ ಹೆಸರು. ಅಲ್ಲಿಗೆ ಆತನಿಗೆ ನಡೆದು ನಡೆದು ಸಾಕಾಯಿತು. ಕಾಲು ಹರಿಯುತ್ತಿದೆ ಎನಿಸಿತು. ಒಂದು ಮಂಚದ ಮೇಲೆ ಕುಳಿತುಕೊಂಡ…. ಪಾರ್ಕಿನಲ್ಲಿಯ ಕಲ್ಲಿನ ಸೋಫಾಗಳೆಲ್ಲಾ ಆತನಿಗೆ ಮಂಚಗಳೇ.

ಕಣ್ಣು ಮುಚ್ಚಿ ಸ್ವಲ್ಪ ಹೊತ್ತು ಧ್ಯಾನದಲ್ಲಿ ಮಗ್ನನಾದ. ಸಮಯ ಆರುಗಂಟೆಯಾಯಿತು. ಬೆಳಕಿನ ಕಿರಣಗಳು ಜಗತ್ತನ್ನು ಬೆಳಗಲು ಶುರುಮಾಡಿದ್ದವು.

ಹತ್ತು ನಿಮಿಷದ ನಂತರ ಕಣ್ಣು ಬಿಟ್ಟು ಅಲ್ಲಿಂದ ಎದ್ದ. ಮತ್ತೆ ನಡಿಗೆ.

ತೋಟದಲ್ಲಿ ಸುತ್ತಾಡುತ್ತಾ ಯಾವುದೋ ಹಾಡು ಹಾಡಿಕೊಳ್ಳುತ್ತಿದ್ದ. ಆತನ ಪಕ್ಕಕ್ಕೆ ನಡೆಯುತ್ತಿದ್ದ ಐವತ್ತರ ಪ್ರಾಯದ  ಹೆಂಗಸು ಆತನ ರಾಗವನ್ನು ಉತ್ಸುಕತೆಯಿಂದ ಆಲಿಸಿದಳು. ಏನೂ ಅರ್ಥವಾಗಲಿಲ್ಲ. ಯಾವುದೋ ಹಳೆಯ ಹಾಡಿನ ಅಣಕ ಅದು. ಆದರೇ ಪದಗಳು ಅರ್ಥವಾದಹಾಗೆ ಅನಿಸಲಿಲ್ಲ. ಅದು ಆತನ ಸಂಕೇತ ಭಾಷೆಯಲ್ಲಿತ್ತು.

ಮೆಲ್ಲಗೆ ತನ್ನಲ್ಲಿ ತಾನೇ ನಕ್ಕು, ಸರಸರಾ ಆತನನ್ನ ದಾಟಿ ಹೋದಳು.

ಸೌಂದರ್ಯ ಬೆಣ್ಣೆಯಹಾಗೆ… ಕರಗಿಹೋಗುತ್ತಿರುತ್ತೆ. ಆದರೆ ಆನಂದ ಪಾಯಸದ ತರ ಒಂದು ದಿವ್ಯ ಅನುಭವ. ಜೀವನ ಒಂದು ಪ್ರವಾಹ. ಇವೆಲ್ಲ ಸೇರಿಸಿ ಹಾಡಿದ ಅಣಕ ಹಾಡು ಯಾರಿಗೆ ತಾನೇ ಅರ್ಥವಾದೀತು ?

ಬೆಳ್ಳನೆ ಬೆಳಗಾಯಿತು. ಚುರುಕಾಗಿ ನಡೆಯುತ್ತಿದ್ದ ಆತ ಒಂದು ಕ್ಷಣ ಶಾಕ್ ಹೊಡೆದವರ ಹಾಗೆ ಎದೆಯ ಮೇಲೆ ಕೈಯಿಟ್ಟುಕೊಂಡು ಕಲ್ಲಿನ ತರ ಹಾಗೇ ನಿಂತು ಬಿಟ್ಟ.

ಎದೆಗೆ ಯಾರೋ ಮೊನಚಾದ ಭರ್ಜಿಯಿಂದಿ ತಿವಿದಹಾಗೆ ಅನಿಸಿತು. ಆತನಿಗೆ ಹೃದಯಾಘಾತವಾಗಿತ್ತು. ಅದು ಆತನಿಗೆ ಮೊದಲನೆಯಸಲ ಅನುಭವಕ್ಕೆ ಬಂದಿತ್ತು.

ಹಣೆಯ ಮೇಲೆ ಬೆವರು ಮಡುಗಟ್ಟಿತು. ಮೈಯಲ್ಲೆಲ್ಲಾ ಛಳುಕು ಬಂದಂತಾಯಿತು. ದೇಹ ಬೆಂಡಾಗುತ್ತಿತ್ತು. ನೆಲಕ್ಕೆ ಕುಸಿದ.

ಯಾರೋ ಆತನ ಮುಖಕ್ಕೆ ನೀರು ಚೆಲ್ಲಿ, ಎಬ್ಬಿಸಿ ಕೂರಿಸಿದರು.

ಕಣ್ಣು ತೆಗೆದು ನೋಡಿ ಎದುರಲ್ಲಿ ಕಂಡ ಮಧ್ಯವಯಸ್ಸಿನ ವ್ಯಕ್ತಿಯನ್ನೊಮ್ಮೆ ಕೃತಜ್ಞತೆಯಿಂದ ನೋಡಿದ.

“ ಧಾರೆ….ಧಾರೆ…. “ ಎಂದ.

“ಏನಂದ್ರಿ ?” ಆ ಉಪಕಾರಿ ಕೇಳಿದ.

ಅವನ ಕೈಲಿದ್ದ ಬಾಟಲಿಯ ಕಡೆಗೆ ನೋಡುತ್ತಾ ಆತ “ ಧಾರೆ “ ಎಂದ.

ಅರ್ಥ ಮಾಡಿಕೊಂಡವನ ಹಾಗೆ ಅವನು ಆ ಬಾಟಲ್ ಎತ್ತಿ ನೀರು ಕುಡಿಸಿದ.

ಗುಟುಕು ಹಾಕುತ್ತಾ ಕುಡಿದು ಚೇತರಿಸಿಕೊಂಡ.

ತನ್ನ ಪ್ರಾಣ ಉಳಿಸಿದವನಿಗೆ ಕೈಯೆತ್ತಿ ನಮಸ್ಕರಿಸುತ್ತಾ “ ರತ್ನಗಳು “ ಎಂದ.

ಕೃತಜ್ಞತೆಗಳು ರತ್ನದ ಹಾಗೆ ಅಂತ ಅವನಿಗೆ ಗೊತ್ತಾಗದೇ ಈತನನ್ನ ಹುಚ್ಚನನ್ನ ನೋಡುವ ಹಾಗೆ ನೋಡಿ ನಕ್ಕ ಅವನು.

ನಮ್ಮ ಕತೆಯ ನಾಯಕ ತನ್ನ ಬೆತ್ತದ ಸಹಾಯದಿಂದ ಮೇಲೆದ್ದ. ಆ ಹೊಸಬ ಮುಂದಕ್ಕೆ ಸಾಗಿದ.

ಮತ್ತೆ ನಡೆಯಲು ಮೊದಲು ಮಾಡಿದ. ಆದರೆ ತುಂಬಾ ಹೊತ್ತು ನಡೆಯಲಾಗಲಿಲ್ಲ ಆತನಿಗೆ. ಒಂದು ಆಟೋ ನಿಲ್ಲಿಸಿ, ಹತ್ತಿ

“ ನಡೆ ” ಎನ್ನುವ ಹಾಗೆ ಸನ್ನೆ ಮಾಡಿದ.

“ ಎಲ್ಲಿಗೆ ?”

ತನ್ನ ಕಿಸೆಯಿಂದ ಒಂದು ವಿಜಿಟಿಂಗ್ ಕಾರ್ಡ್ ತೆಗೆದು ಅವನಿಗೆ ತೋರಿಸಿದ. ಅದರಲ್ಲಿ ಆತನ ಹೆಸರಿಲ್ಲ. ಅದು ನೀಲಿಮಾ ಟವರ್ಸಿನ ವಿಳಾಸವಿರುವ ಕಾರ್ಡ್. ಅದರ ಮೇಲಿನ ಒಂದು ಮೂಲೆಯಲ್ಲಿ ಪೆನ್ನಿನಿಂದ ೧೦೧ ಅಂತ ಬರೆದಿತ್ತು.

ಹತ್ತು ನಿಮಿಷಗಳಲ್ಲಿ ಆಟೋ ಅಪಾರ್ಟ್ ಮೆಂಟಿನ ಮುಂದೆ ನಿಲ್ಲುತ್ತಲೇ, ಆತ ಹಣ ಕೊಟ್ಟು ತನ ಮನೆಗೆ ನಡೆದ.

ಒಳಗೆ ಹೋಗಬೇಕೆನ್ನುವಷ್ಟರಲ್ಲಿ ಏನೋ ನೆನಪಾಗಿ ಹಿಂತಿರುಗಿದ. ಅಲ್ಲಿಗೆ ಸ್ವಲ್ಪ ದೂರದಲ್ಲಿದ್ದ ಟೀ ಹೋಟಲ್ ಕಡೆಗೆ ನಡೆದ. ಅದರ ಪಕ್ಕಕ್ಕೆ ಒಂದು ಟೆಲಿಫೋನ್ ಬೂತ್ ಇತ್ತು. ಗಾಜಿನ ಬಾಗಿಲು ತೆಗೆದು ಅದರಲ್ಲಿ ಹೋಗಿ ಕೂತ.

ಮೈ ದಣಿವಿನಂದ ನಡುಗುತ್ತಿತ್ತು.

ಕಿಸಿಗೆ ಕೈಹಾಕಿ ಯಾವುದೋ ಕಾಗದ ಹೊರಗೆ ತೆಗೆದ. ಅದರಲ್ಲಿಯ ಯಾವುದೋ ಫೋನ್ ನಂಬರ್ ನೋಡಿ ಅದನ್ನ ಅಲ್ಲಿ ಕುಳಿತಿದ್ದ ಹುಡುಗಿಗೆ ತೋರಿಸಿದ.

ಆ ಹುಡುಗಿ ಆ ನಂಬರ್ ನ ತನ್ನ ಹತ್ತಿರವಿದ್ದ ಕಾಗದದ ಮೇಲೆ ಬರೆದುಕೊಂಡಳು. ಆತ ಏನೋ ನೆನಪಿಸಿಕೊಳ್ಳುವ ಹಾಗೆ ಪ್ರಯತ್ನಿಸಿದ. ಸಾಧ್ಯವಾಗಲಿಲ್ಲ ಅಂತ ಕಂಡಿತು. ತನ್ನ ಕಿಸೆಯಲ್ಲಿಯ ವಿಜಿಟಿಂಗ್ ಕಾರ್ಡ್ ತೆಗೆದು ಅವಳಿಗೆ ಕೊಟ್ಟು “ ಈ ವಿಳಾಸಕ್ಕೆ ಒಂಬತ್ತು ಗಂಟೆಗೆ ಬರಲಿಕ್ಕೆ ಹೇಳು” ಎನ್ನುವ ಹಾಗೆ ಸನ್ನೆ ಮಾಡಿದ.

ಅವಳಿಗೆ ಅರ್ಥವಾಯಿತು.

ಫೋನ್ ರಿಂಗಾಗುತ್ತಿತ್ತು. ನಿಮಿಷದ ನಂತರ “ ಹಲೋ “ ಎಂದಳು ಆ ಹುಡುಗಿ.

ಆತ ಅವಳ ಕಡೆಗೇ ನೋಡುತ್ತಿದ್ದ.

“ ಹಲೋ….. ಈ ನಂಬರ್ ಯಾರದು ಸರ್.  ಲಾಯರ್ ಪರಮಹಂಸ ಅವರದಾ ? ಇಲ್ಲಿ ನೀಲಿಮ ಟವರ್ಸಿನ  ೧೦೧ ನೇ ಫ್ಲಾಟಿನ ಯಾರೋ ಹಿರಿಯರು ಫೋನ್ ಮಾಡ್ತಾ ಇದಾರೆ. ನಿಮ್ಮನ್ನ ಅವರ ಮನೆಗೆ ಒಂಬತ್ತು ಗಂಟೆಗೆ ಬರಲು ಹೇಳ್ತಾ ಇದ್ದಾರೆ “

ಆಕಡೆಯಿಂದ “ ಆಯಿತು” ಅಂತ ಕೇಳಿಸುತ್ತಲೇ ಫೋನ್ ಇಟ್ಟು “ ಬರ್ತಾರಂತೆ” ಎಂದಳು. ಆತ ಹಣ ಆಕೆಯ ಕೈಯಲ್ಲಿಟ್ಟು

“ ರತ್ನಗಳು, ವಜ್ರಗಳು “ ಅಂತ ಹೇಳಿ ಹೊರಬಂದ.

ಆ ಹುಡುಗಿ ಸ್ವಲ್ಪ ವಿಚಿತ್ರವಾಗಿ, ಸ್ವಲ್ಪ ಭಯದಿಂದ, ಸ್ವಲ್ಪ ಮುಜುಗರದಿಂದ, ಆಸಕ್ತಿಯಿಂದ ನೋಡುತ್ತಲೇ ಇದ್ದಳು.

ಆತ ಮನೆ ಸೇರಿ ಬೀಗ ತೆಗೆದು ಒಳಗೆ ಹೋಗಿ ಬಾಗಿಲು ಹಾಕಿಕೊಂಡ.

ಲಾಯರ್ ತಪ್ಪದೇ ಬರುತ್ತಾರೆಂದು ಆತನಿಗೆ ಗೊತ್ತು.

ಆತನಿಗೀಗ ನಿಜವಾಗ್ಲೂ ಆತಂಕ ಹೆಚ್ಚಿತ್ತು. ತನಗೆ ಮೊದಲನೆಯ ಸಲ ಈ ರೀತಿ ಎದೆ ನೋವು ಬಂದಿತ್ತು. ಮತ್ತೆ ಮತ್ತೆ ಬಂದರೆ ಬದುಕುವುದು ಕಷ್ಟ ಅಂದುಕೊಂಡ.

ಅದಕ್ಕೆ ಲಾಯರ್ ನ ಬರ ಹೇಳಿದ್ದು !

ಮಾಡ ಬೇಕಾದ ಒಂದು ಮುಖ್ಯವಾದ ಕೆಲಸ ಮಾಡಿ ಮುಗಿಸಬೇಕಾಗಿದೆ.

ಅದೇ ಆತನ ಆತುರ.

ಗೋಡೆ ಗಡಿಯಾರದ ಕಡೆಗೆ ನೋಡಿದ. ಗಂಟೆ ಎಂಟಾಗಿತ್ತು.

ಇನ್ನೊಂದು ಗಂಟೆ. ಇಷ್ಟರಲ್ಲಿ ಮತ್ತೊಂದು ಸ್ಟ್ರೋಕ್ ಬರಬಹುದು. ಆತ ಹೆಚ್ಚಾಗಿ ಆಲೋಚನೆ ಮಾಡಲಾರದಾದ. ಲಾಯರ್ ಹತ್ತಿರ ಮಾತನಾಡಬೇಕು.

ಅದಕ್ಕೆ ಲಾಯರ್ ಸಲುವಾಗಿ ದಾರಿ ಕಾಯುತ್ತಿದ್ದ.

ಕ್ಷಣಗಳು ಭಾರವಾಗಿ….. ಮೆಲ್ಲಗೆ ಸರೆಯುತ್ತಿವೆ.

ಆತ ತನ್ನ ಹಳೆಯ ಪೆಟ್ಟಿಗೆ ತೆಗೆದು ಯಾವುದೋ ಹಳೆಯ ನೆನಪುಗಳನ್ನು ತಡವುತ್ತಿದ್ದ. ಯಾವುದೋ ಫೋಟೋಗಳನ್ನು ನೋಡುತ್ತಿದ್ದ. ಯಾವುದೋ ಪತ್ರಗಳನ್ನು ಎದೆಗವಚಿಕೊಂಡು ಗೊಳೋ ಅಂತ ಕಣ್ಣೀರು ಸುರಿಸುತ್ತಿದ್ದ.

ಸಮಯ ಸರಿಯುತ್ತಿತ್ತು. ಒಂಬತ್ತು ಗಂಟೆಯಾಗುತ್ತಿದೆ. ಲಾಯರ್ ಪರಮಹಂಸ ಅಲ್ಲಿಗೆ ಬಂದು ಸ್ಕೂಟರ್ ಸ್ಟ್ಯಾಂಡ್ ಹಾಕಿ ಕರೆಗಂಟೆ ಒತ್ತಿದ. ಉತ್ತರವಿಲ್ಲ. ಯಾರೂ ಬಾಗಿಲು ತೆಗೆಯಲಿಲ್ಲ.

ಒಂದು ಸ್ವಲ್ಪ ಹೊತ್ತುನೋಡಿ ಬಾಗಿಲು ತಳ್ಳಿದ. ಸಲೀಸಾಗಿ ತೆಗೆದುಕೊಂಡಿತು.

ಒಳಗೆ ಹೋದಾಗ, ಆರಾಮ ಕುರ್ಚಿಯಲ್ಲಿ ಕೂತು ಅರೆಮುಚ್ಚಿದ ಕಣ್ಣುಗಳಿಂದ ಮೇಲುಸಿರು ಬಿಡುತ್ತಿದ್ದ ಆತ.

“ ಹಲೋ ಸರ್….. “ ಆತನ ಭುಜ ತಟ್ಟಿದ ಲಾಯರ್ ಪರಮಹಂಸ.

“ ರತ್ನಗಳು, ವೈಢೂರ್ಯಗಳು “ ಅಂತ ಗೊಣಗುತ್ತಾ ಪರಮಹಂಸನ ಕೈಹಿಡಿದು, ಕಣ್ರೆಪ್ಪೆ ಬಾಗಿಸಿದ. ಅಷ್ಟೇ. ಅವು ಮತ್ತೆ ತೆಗೆಯಲಿಲ್ಲ.

ಪರಮ ಹಂಸ ಭಾರವಾಗಿ ನಿಡುಸುಯ್ದ. ತಾನು ಬರುವವರೆಗೆ ಜೀವ ಬಿಗಿ ಹಿಡಿದ ಆ ಮುದುಕನನ್ನ ಮರುಕದಿಂದ ನೋಡಿದ. ಪಾಪ…. ಇಲ್ಲಿಯವರೆಗೂ ಎಷ್ಟು ಒದ್ದಾಡಿದ್ದಾನೋ !

ಅಂದಾಜು ಎರಡು ಗಂಟೆಗಳ ನಂತರ, ಅಲ್ಲಿ ಪತ್ರಿಕಾ ವರದಿಗಾರರು, ಟೀವೀ ಚಾನಲ್ ಗಳ ಪ್ರತಿನಿಧಿಗಳು ಹಾಜರಾಗಿ ಲಾಯರ್ ಪರಮಾನಂದ ಅವರಿಂದ ಬರುವ ವಿವರಣೆಗಾಗಿ ಕಾಯುತ್ತಿದ್ದರು.

“ ಏನು ಸರ್….. ಈತನ ವಿಚಿತ್ರ ಕತೆ ? ಇಷ್ಟಕ್ಕೂ ಈತನ್ಯಾರು ? “ ಪ್ರಶ್ನೆಗಳ ಸುರಿಮಳೆ ಶುರುವಾಯಿತು.

ಪರಮಹಂಸ ಒಂದು ಕ್ಷಣ ಭಾರವಾಗಿ ಉಸಿರುಬಿಟ್ಟು ಹೇಳಲು ಪ್ರಾರಂಭಿಸಿದರು.

“ ಈತನ ಹೆಸರು ಕಾರ್ತಿಕೇಯ. ಈತನಿಗೆ ಗೊತ್ತಿಲ್ಲದ ಭಾರತೀಯ ಭಾಷೆ ಇರದು. ವಿಶ್ವವಿದ್ಯಾಲಯಗಳಿಂದ ಅದೆಷ್ಟು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾನೋ ಯಾರಿಗೂ ಗೊತ್ತಿಲ್ಲ. ಈತ ಹುಟ್ಟಿದ್ದೆಲ್ಲಿ, ಈತನ ಸಂಬಂಧೀಕರು ಯಾರು ಅಂತ ಯಾರಿಗೂ ತಿಳಿಯದು. ನಿರಂತರ ಭಾಷೆಗಳ ಬಗ್ಗೆ ಅಧ್ಯಯನ ಮಾಡುವುದೇ ಈತನ ಹವ್ಯಾಸ. ಈತನಿಗೆ ತನ್ನ ಜೀವನದಲ್ಲಿ ಅದೊಂದು ಬಿಟ್ಟರೇ ಬೇರೇ ಆಶೆಯೇ ಇಲ್ಲವೆನ್ನುವ ಹಾಗೆ ಕಾಣುತ್ತೆ. ನನಗೆ ಹತ್ತು ವರ್ಷಗಳ ಹಿಂದೆ ಪರಿಚಯವಾದ. ಆಗ ತಾನು ಅನೇಕ ಭಾಷೆಗಳ ಬಗ್ಗೆ ಮುಖ್ಯವಾದ ಮಾಹಿತಿಯನ್ನು ಸಂಗ್ರಹಿಸಿರುವುದಾಗಿ, ಅವುಗಳನ್ನೆಲ್ಲ ಒಂದು ಪುಸ್ತಕದ ರೂಪದಲ್ಲಿ ತರುತ್ತೇನೆ ಎಂದು ಹೇಳಿದ್ದ. ಆದರೇ ಇವ್ಯಾವುದಕ್ಕೂ ಸೇರದ ಒಂದು ಹೊಸ ಭಾಷೆಯನ್ನ ತಾನು ಕಂಡು ಹಿಡಿಯಬೇಕೆಂದು ಆಲೋಚಿಸುತ್ತಿದ್ದೇನೆ ಅಂತ ನನಗೆ ಹೇಳಿದ್ದ.

ಅಂದರೆ.,,,, ಒಂದು ಪದಕ್ಕೆ ಅದರ ಅರ್ಥಕ್ಕೆ ಹೊಂದುವ ಮಾತನ್ನು ಸೇರಿಸಬೇಕೆಂಬ ಆಶೆ ಆತನದು.  ಆ ಪದವನ್ನು ಹೇಳಿದರೆ ಅದರ ಅರ್ಥ ತನ್ನಷ್ಟಕ್ಕೆ ತಾನೇ ಗೊತ್ತಾಗಬೇಕು. ಹಾಗೆ !

ಉದಾಹರಣೆಗೆ, ಕಾಫಿಯನ್ನ ಕಷಾಯ ಅಂತಿದ್ದ. ಜನ ಜೀವನದಲ್ಲಿ ಬಳಕೆಯಾಗುವ ಅರ್ಥಗಳನ್ನೇ ಅಡಿಪಾಯವಾಗಿಸಿಕೊಂಡು, ಈ ಹೊಸ ಭಾಷೆ ಇರಬೇಕೆಂದು    ಆತನ ಬಯಕೆ. ಹುಡುಗಿ ಎಂದರೆ ಚಾಕ್ಲೆಟ್, ಹಣ ಎಂದರೆ ರತ್ನಗಳು, ಹೂಗಳು ಎಂದರೆ ಹುಡುಗಿಯರು, ಹೀಗೆ ಸಾವಿರಾರು ಪದಗಳಿಗೆ ಹೊಸ ಹೆಸರು ಕೊಟ್ಟಿದ್ದ.

ಆದರೆ, ಕೊನೆಗೆ ತಾನು ಮಾಡಿದ ಪ್ರಯೋಗವೇ ತನಗೆ ಮುಳ್ಳಾಯಿತು.

ಯಾವ ಪದ ಯಾವುದನ್ನು ಸೂಚಿಸುತ್ತದೋ, ಯಾವ ಪದ ಯಾವ ಅರ್ಥಕ್ಕೆ ಹೊಂದಿಸಿಕೊಂಡಿದ್ದಾನೋ ಗೊತ್ತಾಗದೇ ಆಯಿತು. ಮೂಲ ಪದಗಳು ಮರೆತುಹೋಗಿತ್ತು. ನೀವು ಕುರ್ಚಿ ಎಂದರೆ ಆತನಿಗೆ ಪದವಿ ಅಂತ ನೆನಪಾಗುತ್ತದೆ. ಆದರೆ ಆತನ ಪದ ಧಾರೆ ಎಂದರೆ ನೀರು ಎಂದು ನಮಗೆ ತಿಳಿಯದು.

ಹೀಗೆ ಆತನ ಮೆದಳೆಲ್ಲಾ ವಿಭಿನ್ನ ಪದಗಳ ಗೋಜಲಿಂದ ತುಂಬಿಹೋಯಿತು. ಪ್ರತಿದಿನವೂ ಮೂಲ ಪದಗಳನ್ನ ನೆನಪಿಗೆ ತಂದುಕೊಳ್ಳೂತ್ತಾ, ಅವು ನೆನಪಾಗದೆ ತಲೆ ಕೆಡಿಸಿಕೊಳ್ಳುತ್ತಾ ಕಷ್ಟಪಡ ತೊಡಗಿದ.

ಯಾವ ಪದವನ್ನು ಯಾವುದಕ್ಕೆ ಬಳಸುತ್ತಿದ್ದನೋ ಮರೆತುಹೋಗಿ ತುಂಬಾ ಹಿಂಸೆಯಾಗತೊಡಗಿತು.

ಕೊನೆಗೆ…. ಇವತ್ತು ಈತನಿಗೆ ಎದೆನೋವು ಬಂತು. ತೀರಿಹೋದ.

ಈತನ್ನ ವಿಶೇಷ ಶ್ರದ್ಧೆಯಿಂದ ಈ ಹತ್ತು ವರುಷಗಳಿಂದ ಹತ್ತಿರದಿಂದ ಬಲ್ಲವನಾದ್ದರಿಂದ ಆತನ ಹೃದಯಭಾಷೆ ನನಗೆ ಸ್ವಲ್ಪ           ಗೊತ್ತಾಗುತ್ತದೆ. ಆದರೆ, ಈತ ತನ್ನ ಉಯಿಲನ್ನ ತನ್ನ ವಿಶೇಷ ಭಾಷೆಯಲ್ಲೇ ಬರೆದು ಸತ್ತಿದ್ದಾನೆ.

ಈ ಉಯಿಲನ್ನ ಹೇಗೆ ಅಧ್ಯಯನ ಮಾಡಬೇಕೋ ಅರ್ಥವಾಗುತ್ತಿಲ್ಲ. ಈತನ ಕೊನೆ ಆಶೆ ಏನು, ಅದು ಹೇಗೆ ಪೂರೈಸುವುದು ಎಂದು ತಿಳಿಯದಾಗಿದೆ. “ ಎಂದರು ಪರಮಹಂಸ ತುಂಬಾ ನೋವಿಂದ.

ಅಷ್ಟರಲ್ಲಿ ಒಬ್ಬ ಪತ್ರಿಕೆಯ  ವರದಿಗಾರ ಮುಂದೆ ಬಂದು….

“ ಸರ್…. ಇಷ್ಟಕ್ಕೂ ಈ ವಿಚಿತ್ರ ವ್ಯಕ್ತಿಯ ನಡವಳಿಕೆಯ ಮೂಲಕ ಜನರಿಗೆ ಏನಾದರೂ ಹೇಳಬಯಸುತ್ತೀರಾ ? ಈತ ಮಾಡಿದ ಕೆಲಸಕ್ಕೇನಾದರೂ ಅರ್ಥವಿದೆಯಾ ?” ಅಂತ ಕೇಳೀದ.

“ ನೀವು ಹೇಳೋದು ಸರಿ. ಮನುಷ್ಯ ಮೇಧಾವಿ ಹೌದು. ಆತನ ಮೇಧಸ್ಸಿಗೆ ಮಿತಿಗಳಿಲ್ಲ. ಆದರೆ, ಯಾವುದೇ ಹೊಸ ಆವಿಷ್ಕಾರ ಜನರಿಗೆ ಉಪಯೋಗವಾಗುವುದು, ಅವರ ಜೀವನಕ್ಕೆ ಬೆಳಕು ತರುವುದು ಆಗಿರಬೇಕೇ ವಿನಃ ಕೆಲಸಕ್ಕೆ ಬಾರದ ಪ್ರಯೋಗಗಳಿಂದ ಈ ಕಾರ್ತಿಕೇಯರ ತರ ತಮ್ಮ ಮೇಧಾ ಸಂಪತ್ತನ್ನು ವ್ಯರ್ಥ ಮಾಡಿಕೊಳ್ಳಬಾರದು. “ ಅಂತ ಮುಗಿಸಿದರು ಲಾಯರ್ ಪರಮಹಂಸ.

ನೆರೆದ ಜನ ಹೌದೆನ್ನುವಂತೆ ಕರತಾಡನ ಮಾಡಿ ತಮ್ಮ ಒಪ್ಪಿಗೆ ಸೂಚಿಸಿದರು.

ಪರಮ ಹಂಸ ಮಾತ್ರ ನೋವು ತುಂಬಿದ ಮನಸ್ಸಿನಿಂದ  ಕಾರ್ತಿಕೇಯರ ಹೃದಯಭಾಷೆಯ ಬಗ್ಗೆ ಆಲೋಚಿಸುತ್ತಿದ್ದರು.

***************************************************

2 thoughts on “ಹೃದಯ ಭಾಷೆ

Leave a Reply

Back To Top