ಅಂಕಣ ಬರಹ-01

ನಾಂದಿ ಪದ್ಯ

A Bharatanatyam and Yakshagana jugalbandhi presented by students - Times of  India

ತೆಂಗಿನ ಮಡಲಿನಿಂದ ನೇಯ್ದ ತಟ್ಟಿ ಆ ಮನೆಯ ಹೊರ ಆವರಣದ ತಡೆ ಗೋಡೆ. ಮಣ್ಣಿನ ನೆಲಕ್ಕೆ ಮಣ್ಣಿನದ್ದೇ ಪರಿಮಳ. ಮಳೆಗಾಲದಲ್ಲಿ ಆ ಮನೆಯ ನೆಲವು ನೀರ ಒಸರಿಗೆ ಹಸಿ ಹಸಿಯಾಗುತ್ತದೆ. ಹೊರಗೆ ಧೋ ಎನ್ನುವ, ಹನಿಹನಿ ಟಪಟಪ ಹನಿಸಿ ಮರ್ಮರಿಸುವ, ಗುನುಗುವ, ಆರ್ಭಟಿಸುವ ಹಠಮಾರಿ ಮಳೆ.  ಚಾಪೆಯಂತೆ ಹೆಣೆದ ಆ ತಟ್ಟಿಯನ್ನು ನನ್ನ ಪುಟ್ಟ ಬೆರಳಿನಲ್ಲಿ ಅಗಲಿಸಿ ಒಂದು ಕಣ್ಣನ್ನು ಆ ಖಾಲಿಗೆ ಹೊಂದಿಸಿ..ಇನ್ನೊಂದು ಕಣ್ಣ ಮುಚ್ಚಿ ಹೊರಗೆ  ಸುಯ್ಯುತ್ತಿದ್ದ ಮಳೆಯೊಂದಿಗೆ ಮುಗ್ಧ ಮನಸ್ಸಿನ ಅವ್ಯಕ್ತ ಅನುಸಂಧಾನ ನಡೆಯುತ್ತಿತ್ತು.

ಎದೆಗೆ ಹೊಯ್ಯತ್ತಿದ್ದ ಭಾವಗಳಿಗೆ ಅಕ್ಷರದ ರೂಪವಿಲ್ಲ. ಆದರೆ ಕಣ್ಣುಗಳಲ್ಲಿ ಚುಕ್ಕಿಗಳ ಹೊಳಪು. ಸ್ಪಷ್ಟವಾಗದ ಅವರ್ಣನೀಯ ಮಾತುಗಳು ಗಿರಕಿ ಹೊಡೆಯುತ್ತಿದ್ದವು. ಅದೇ ಭಾವವನ್ನು ಹೊತ್ತು ಮುಖ ತಿರುಗಿಸುತ್ತಿದ್ದೆ. ಮಗ್ಗದ ಸೀರೆ ಉಟ್ಟ, ಉದ್ದದ ಮೂಗುತಿ, ನತ್ತು ಮೂಗಿಗೇರಿಸಿಕೊಂಡು, ಹಣೆಯಲ್ಲಿ ದೊಡ್ಡದಾಗಿ  ಹುಣ್ಣಿಮೆಯ ಚಂದ್ರನಂತ ಕುಂಕುಮ ತಂಪಾಗಿ ನಗುತ್ತಿದ್ದರೆ ..ಅದರದೇ ಬೆಳಕು ಹೊದ್ದಂತೆ ಕಣ್ಣು ಮುಖದಲ್ಲಿ ಮಿಂಚಿನಂತಹ ಬೆಳಕು ಹಾರಿಸಿ ಎದುರಿನ ಕೆಳತುಟಿ ಕಚ್ಚಿ ಕೂತ ಎರಡು ಹಲ್ಲು ಬಿಡುತ್ತಿದ್ದಳು ನನ್ನಜ್ಜಿ.   ನಾನು ಮತ್ತೆ ಕಣ್ಣನ್ನು ಹೊರಗಿನ ಮಳೆಗೆ ಸಿಲುಕಿಸುತ್ತಿದ್ದೆ.

 “ಇನ್ನು ಸ್ವಲ್ಪ ದಿನ ಆಮೇಲೆ ಆಟ ಶುರು..ಈ ಮಳೆ ನಿಲ್ಲುತ್ತಲೇ ಒಂದೊಂದೇ ಮೇಳ ಹೊರಡಲು ಶುರುವಾಗುತ್ತದೆ”.

ಒಂದೇ ನೆಗೆತಕ್ಕೆ ಆಕೆಯ ತೆಕ್ಕೆಗೆ ಜೋತು ಬೀಳುತ್ತಿದ್ದೆ. ಮಳೆಯ ಸದ್ದಿನಾಚೆ ಅದನ್ನೂ ಮೀರಿಸುವಂತೆ ಚಂಡೆಯ ಸದ್ದು ಕಿವಿಯೊಳಗೆ ಅನುರಣಿಸಿದಂತೆ ತೊನೆಯುತ್ತಿದ್ದೆ. ಬಣ್ಣಬಣ್ಣದ ವಸ್ತೃ, ಕಿರೀಟ. ಅಬ್ಬಾ!ಆ ಶಕರನ ಮುಖ, ತೆರೆದುಕೊಂಡ ಕಣ್ಣು. ಅದರ ಸುತ್ತ.ಬಣ್ಣದ ರೇಖೆಗಳು. ಅದು ರಾಕ್ಷಸ ವೇಷ.

 ಎದೆಯಲ್ಲಿ ಬಂದು ಕೂತ ಉರೂಟು ಭಯ..ಶಕಾರ ಎದ್ದ.

 ಹೋಓಓಓಒ…ಥೈ ಥೈಥೈ…

 “ಎಲ್ಲೀ…ಆ ವಶಂತ ಶೇನೆ”

 ದೇಹದೊಳಗೆ ತುಂಬಿಕೊಳ್ಳುವ ಅದು ಯಾವುದೋ ಆವೇಶ. ನಾಯಿ ಓಡಿಸಲು ಮೂಲೆಯಲ್ಲಿ ಕೂತ ಕೋಲು ಬಿಲ್ಲು ಬಾಣವಾಗಿ ಮನಸಿನೊಳಗಿನ ಆ ಪುರುಷಾಕೃತಿ ಮುಖಕ್ಕೆ ಕಟ್ಟಿದ ಕಂಗಿನ ಹಾಳೆಯ ತುಂಡಿನ ಮುಖವಾಡದಿಂದ ಅನಾವರಣಗೊಳ್ಳುತ್ತಿತ್ತು. ನನ್ನ ಪುಟ್ಟ ದೇಹವನ್ನು ತನ್ನ ಆಧೀನಕ್ಕೆ ತಂದು ಕುಣಿಸುತ್ತಿತ್ತು. 

“ಶಕರ” ಹೂಂಕರಿಸುತ್ತಿದ್ದ.

 “ಹ್ಹೇ…ವಶಂತಶೇನೆ..ಎಲ್ಲಿರುವೆ. ಬಂದೆ ನಾನು… “

ಕೇವಲ ಎರಡು ಹಲ್ಲಿನ ಬೊಜ್ಜುಬಾಯಿ ಅಗಲಿಸಿ ಈ ಸೂತ್ರಧಾರಿ ನನ್ನಜ್ಜಿ ನಗುತ್ತಿದ್ದಳು…ನಗು ನಗು..

” ಅಬ್ಬಬ್ಬಾ..ಈ ಶಕರನ ಧಾಳಿ ತಡಕೊಳ್ಳುವುದು ಕಷ್ಟ. ಏ.. ನಿಲ್ಲಿಸು..ನಿನ್ನ ವಶಂತ..ಶೇನೆ ಬರುತ್ತಾಳೆ..ಇಲ್ಲದಿದ್ರೆ ಈಗ ಕೋಲು ಬರ್ತದೆ.”

ಮತ್ತೆ ನಗು. ಆ ನಗುವಿನಿಂದ ಮತ್ತಷ್ಟು ಹುಮ್ಮಸ್ಸು ಏರಿ ತೆಂಗಿನ ಕಾಯಿಯ ತುದಿ ಸಿಪ್ಪೆ ಸಮೇತ  ( ಅದು ವಸಂತಸೇನೆಯ ಮುಡಿ) ಹಿಡಿದು ಎಳೆತರುತ್ತಿದ್ದೆ. ಕುಣಿತ..ಸುತ್ತುಸುತ್ತಿ ಸುತ್ತಿ ಗಿರ್ ಗಿಟಿ ಹಾಕಿ ಒದ್ದೆ ನೆಲದಲ್ಲಿ ಕುಸಿಯುತ್ತಿದ್ದೆ. ನನ್ನೊಳಗೆ ಚಂಡೆಯ ಅಬ್ಬರ  ಏರುತ್ತಲೇ ಇತ್ತು.  ವಸಂತಸೇನೆ ಆರ್ತಳಾಗಿ ಅಜ್ಜಿಯತ್ತ ನೋಡುವಂತೆ ಭಾಸವಾಗುತ್ತಿತ್ತು.

 “ರಕ್ಷಿಸಿ..ಎಲ್ಲಿ ನನ್ನ ಚಾರುದತ್ತ..”

“ತರ್ತೇನೆ ಈಗ ಕೋಲು..ನಿನ್ನ ಪಾಠ ಪುಸ್ತಕ ಎಲ್ಲುಂಟು. ಅದು ಚೀಲದಿಂದ ಹೊರ ಬರಲಿಕ್ಕೆ ಉಂಟಾ.. ಆಟದ ಸುದ್ದಿ ತೆಗೆದದ್ದೇ ದೊಡ್ಡ ತಪ್ಪಾಯ್ತು. ನೋಡ್ತೇನೆ ನಿನ್ನ ಮಾರ್ಕು.ಕುಂಡೆಗೆ ಬಿಸಿ ಬರೆ ಹಾಕಲಿಕ್ಕುಂಟು..ಆಮೇಲೆ ಶಕಾರ,ವಸಂತಸೇನೆ.”

ಅವಳ ಜೋರು ಕಿವಿಯ ಬದಿಯಿಂದ ಹಾದುಹೋದರೆ ಒಳಗಿಳಿದು ಸದ್ದು ಮಾಡುವುದು ಯಕ್ಷಗಾನದ ಆ ಪಾತ್ರಗಳು. ಶುರುವಾಗುತ್ತಿತ್ತು. ಪುಟ್ಟ ಮನಸ್ಸಿನೊಳಗೆ ರಂಗಿನಾಟ..ಬಣ್ಣ ಗಾಢವಾಗುತ್ತಲೇ ಹೋಗುತ್ತಿತ್ತು. ಕಲ್ಪನಾಲೋಕದೊಳಗಿನ ಒಡ್ಡೋಲಗ. ರಾಜ, ರಾಣಿ ರಾಜಕುಮಾರ, ರಾಕ್ಷಸ  ಅವತರಿಸಿ ನನ್ನಲ್ಲಿ ನಶೆ ಏರಿಸುತ್ತಿದ್ದ ಪರಿ.

 ಹನಿದ ಮಳೆ ಕ್ಷೀಣವಾಗುತ್ತಾ,ಆಗುತ್ತಾ, ಮಾಯಾ ಲೋಕದೆಡೆಗೆ ಸರಿದು ಹೋದರೆ..ಬಿಳಿಬಿಳಿ ಚಳಿ ಧರೆಗಿಳಿಯುತ್ತಿತ್ತು. ಪೆಟ್ಟಿಗೆ ಸೇರಿದ್ದ ಪುರಾಣದ ಪಾತ್ರಗಳ ರಂಗಸಜ್ಜಿಕೆ ಮೈ ಕೊಡವಿ ಎದ್ದು..ಮೇಳಗಳು ಸಂಚಾರಕ್ಕೆ ಹೊರಡುತ್ತಿದ್ದವು.

 ಇರುಳು ಕವಿಯುತ್ತಲೇ ಯುಗ ಬದಲಾಗಿ ತ್ರೇತಾ ,ದ್ವಾಪರ ತೆರೆದುಕೊಂಡು ರಾಮ,ಕೃಷ್ಣ ಎಲ್ಲರೂ ಧರೆಗಿಳಿಯುತ್ತಿದ್ದರು. ಅಜ್ಜಿಯ ಸೊಂಟದಲ್ಲಿ ಕೂತು ಆರಂಭವಾದ ನನ್ನ ಅವಳ ಈ ಯಕ್ಷಲೋಕದೆಡೆಗಿನ ಪಯಣ ಅವಳ ಕೈ ಹಿಡಿದು ನಾನು ನಡೆಸುವವರೆಗೂ ಸಾಗಿತ್ತು. 

ರಾತ್ರಿ ಬಯಲಾಟದ ವೀಕ್ಷಣೆ.. ಹಗಲಿಗೆ ಅರೆಮಂಪರಿನಲ್ಲಿ ಒಳಗಡೆಯ ಚಂಡೆಯ ಸದ್ದಿಗೆ ಸಿಕ್ಕಿದ ಕೋಲು ಹಿಡಿದು ಕುಣಿತ..ಅಮ್ಮನ ಹಳೆಯ ಸೀರೆ ತುಂಡು, ಸೋದರ ಮಾವನ ಲುಂಗಿಗಳು..ಒಡ್ಡೋಲಗದ ಪರದೆ, ಬಗೆಬಗೆಯ ವಸ್ತ್ರಗಳಾಗಿ ಕಲ್ಪನಾಲೋಕದ ಭ್ರಮರವು ಮನಸೋ ಇಚ್ಛೆ ಹಾರುತ್ತಲೇ ಇತ್ತು. ಶಾಲೆಗೆ ಹೋಗಿ ಕೂತರೂ ವೇಷ ಎದುರುಬಂದಂತೆ..

“ಬಂದಳು..ಚೆಲು..ವೆ ಚಿತ್ರಾಂಗದೆ.”

Leading lady of Yakshagana - The New Indian Express

 ಅದೆಷ್ಟು ಹೊಸ ಹೊಸ ಪಾತ್ರಗಳು ಮನಃಪಟಲದಲ್ಲಿ ಅರಳಿ ನಾನೇ ಅದಾಗಿ ರೂಪುಗೊಳ್ಳುವ ಚೆಂದವೆಂತಹುದು…ಆಹಾ..ನನಗೋ ಅವರನ್ನು ಅಲ್ಲಿಂದ ಬಿಡುಗಡೆಗೊಳಿಸಿ ಹೊರತರಬೇಕಾದ ತುರ್ತು. ಪಕ್ಕದಲ್ಲಿ ಕೂತ ಗೆಳತಿಯರಿಗೆ ಸ್ಲೇಟಿನಲ್ಲಿ ಟೀಚರ್ ಕೊಟ್ಟ ಲೆಕ್ಕ ಬಿಡಿಸಿ, ಮಗ್ಗಿ ಬರೆದು ಆಮಿಷ ಹುಟ್ಟಿಸುತ್ತಿದ್ದೆ. ಆಮೇಲೆ ನಾನು ಕಥೆ ಹೇಳುವುದನ್ನು ನೀನು ಕೇಳಬೇಕು. ಮನೆಗೆ ಓಡಬಾರದು ಹೀಗೆ ಹಲವು ಒಳ ಒಪ್ಪಂದಗಳು.

ಹೊಸ ಹೊಸ ಪಾತ್ರಗಳು ನನ್ನಲ್ಲಿ ಬಣ್ಣ ಹಚ್ಚಿಕೊಳ್ಳುತ್ತಿದ್ದವು. ರಾತ್ರಿ ಎದೆಗಿಳಿದ ಅವುಗಳ ಮಾತುಗಳು ಚೂರು ಪಾರು ಮಾರ್ಪಾಡು ಹೊಂದಿ ಬಣ್ಣದ ಚಿತ್ತಾರದ ಗ್ಲಾಸಿನಲ್ಲಿ ತುಂಬಿದ ಶರಭತ್ತಿನ ರುಚಿಯಂತೆ ವ್ಯಕ್ತವಾಗುತ್ತಿದ್ದವು. ಮತ್ತೆ ಆ ಪಾತ್ರಗಳಿಗೆ  ಹೆಸರು ಹುಡುಕುವ ಪರದಾಟ.

 ಸೌದಾಮಿನಿ, ಧಾರಿಣಿ, ಮೈತ್ರೇಯಿ, ವೈದೇಹಿ..ಎಲ್ಲರೂ ಬಿಂಕ ಲಾಸ್ಯದಿಂದ ಗೆಜ್ಜೆ ಕಟ್ಟಿ ಮನೆ ಕದ ತೆರೆದು ಹೊರಗಡೆ ಹಾರುತ್ತಿದ್ದರು.

 ಅದೊಂದು ಅದ್ಭುತ ಲೋಕ. ಅರಿವಿನ ಜಗತ್ತು ಮೊಳಕೆಗೊಳ್ಳುವ ಮುನ್ನವೇ ಅಜ್ಜಿಯೆಂಬ ಅಚ್ಚರಿಯ ಮಾಂತ್ರಿಕಳು ನನ್ನೊಳಗೆ ಕಲ್ಪನೆಯ ಪ್ರಪಂಚ ತೆರೆದು ತೋರಿಸಿ ನನ್ನನ್ನು ಅಲ್ಲಿ ಕೂರಿಸಿದ್ದಳು. ತನ್ನ ಚಿರಿಟಿ ಹೋದಂತಹ ಸೊಂಟದಲ್ಲಿ ನನ್ನ ಕೂರಿಸಿ ಥಂಡಿ ಗಾಳಿಯ ಒರೆಸುತ್ತ ದೇವಾಲಯದ ಎದುರಿನ ಗದ್ದೆ, ಶಾಲೆಯ ಎದುರಿನ ಬಯಲು, ಯಾರದೋ ಮನೆಯಂಗಳದಲ್ಲಿ ನಡೆವ ಹರಕೆಯ ಬಯಲಾಟ ಒಂದನ್ನೂ ಬಿಡದೆ ರಾತ್ರಿ ತೆಂಗಿನೆಣ್ಣೆ, ಉಪ್ಪು ಬೆರೆಸಿದ ಕುಚುಲಕ್ಕಿ ಗಂಜಿ ಉಣಿಸಿ ಕಂಡೊಯ್ಯುತ್ತಿದ್ದಳು. ಅಲ್ಲೇ ಆ ಮಣ್ಣಿನ ನೆಲದಲ್ಲಿ  ಕಣ್ಣು ಬಾಯಿ ಕಿವಿ,ಮೂಗು, ಮೈಯೆಲ್ಲ ಅರಳಿಸಿ ಕೂತು ಆಟ ನೋಡುತ್ತಿದ್ದೆ.

ಈ ಜಗದ ತಂತು ಕಡಿದು ಅಲ್ಲೆಲ್ಲೋ ಸೇರಿದಂತೆ..ಎಂತಹ ವಿಸ್ಮಯ ಪ್ರಪಂಚವದು. ದೇವತೆಗಳು ಬರುತ್ತಿದ್ದರು. ಸುಂದರ ಉದ್ಯಾನವನ, ಅತಿ ಸುಂದರ ರಾಜಕುಮಾರಿ, ಆ ರಾಜ..ಈ ರಾಕ್ಷಸ.. ಮತ್ತೆ ಯುದ್ದ..ಆರ್ಭಟ. ಅತ್ಯಂತ ಮನೋಜ್ಞವಾಗಿ, ಚಾಕಚಕ್ಕತೆಯಿಂದ ,ಕೌಶಲ್ಯದ  ಮಾತುಗಳ ಕೊಂಡಿಗಳು ಕ್ಕೋ ಕೊಟ್ಟಂತೆ,ಅರಳು ಅರಳಿದಂತೆ ಹರಡಿಕೊಳ್ಳುತ್ತಿದ್ದವು.

 ರಾಜಕುಮಾರಿಯ ಜೊತೆಗಿನ  ಸಖಿಯಾಗಿ, ಆ ರಾಜಕುಮಾರಿಯೇ ನಾನಾಗಿ ಅಲೆದಾಟ,ನಗು,ಅಳು,

ವಿರಹದ ಅರ್ಥವೇ ಇಣುಕದ ವಯಸ್ಸಿನಲ್ಲಿ ವಿರಹ ಶೃಂಗಾರ ಎಲ್ಲವೂ ತಣ್ಣಗೆ ಮುಗ್ಧ ಮನಸ್ಸಿನ ಒಳಗಿಳಿಯುತ್ತಿತ್ತು. ಆಗೆಲ್ಲ ರಾಮಾಯಣ, ಮಹಾಭಾರತದ ಕಥೆಗಳು ಹಾಗೂ ಅಲ್ಲಿ ಸಿಗುವ ಉಪಕಥೆಗಳು ಬಯಲಾಟದ ಪ್ರಸಂಗಗಳಾಗಿರುತ್ತಿದ್ದವು. ಭಕ್ತಿಪ್ರಧಾನ,ನೀತಿಭೋದಕ ಕಥೆಗಳು.

ಇಂತಹ ಸಂದರ್ಭದಲ್ಲೇ ಆ ಪುಟ್ಟ ವಯಸ್ಸಿನಲ್ಲಿ ನೋಡಿದ ವಸಂತಸೇನೆ ಎಂಬ ಪ್ರಸಂಗ ಬಹಳ ಆಳಕ್ಕಿಳಿದು ನನ್ನ ಕುಣಿಸುತ್ತಿತ್ತು. ನಿಜವೆಂದರೆ ನಂತರದ ದಿನಗಳಲ್ಲಿ ಕಥೆ ಮಾಸಿದರೂ, ಅದರಲ್ಲಿ ಬರುವ ವಸಂತಸೇನೆಯ ಪ್ರೀತಿ ಹಾಗೂ ಖಳನಾಯಕ ಶಕರನ  ಗಟ್ಟಿ ಸೀಳುಧ್ವನಿಯ ಮಾತು ಉಳಿದುಬಿಟ್ಟಿತು. ಶಕರ ಬಂದ ಎಂದರೆ ಹೆದರಿಬಿಡುತ್ತಿದ್ದೆ. ಮತ್ತೆ ನಾನೇ ಶಕರನಾಗಿ ಕುಣಿಕುಣಿದು..

‘ಎಲ್ಲಿ ಆ ವಶಂತ ಶೇನೆ ‘

ಎನ್ನುತ ಅದೇ ಶೈಲಿಯಲ್ಲಿ ದೊಡ್ಡ ಹೆಜ್ಜೆ ಇರಿಸಿ ಸಂಭ್ರಮಿಸುತ್ತಿದ್ದೆ. ಹಗಲಲ್ಲಿ ಶಕರನಾಗಿ ಬದಲಾಗುವ ನಾನು ರಾತ್ರಿ ಊಟದ ಸಮಯ ಬಂದು ಶಕರ ಎಂದರೆ ಹೆದರಿ ಗಬಗಬ ಉಣ್ಣುತ್ತಿದ್ದೆ. ರಾತ್ರೆಯಾದರೆ ನಾನು ಥೇಟು ವಸಂತಸೇನೆ!.

ರಂಗ ಏರುವ ಆಸೆ,ನಶೆ..ತೀರದ ಹುಚ್ಚಿಗೆ ಈ ಬಯಲಾಟಗಳೇ ಮೊದಲ ಸಜ್ಜಿಕೆ. ನಿಂತಲ್ಲಿ,  ಕೂತಲ್ಲಿ ಶಕರ, ವಸಂತಸೇನೆ, ಶ್ವೇತಕುಮಾರ, ದ್ರೌಪದಿ, ದಮಯಂತಿ,..ಸಾಲು ಸಾಲು ಪಾತ್ರಗಳು  ನನ್ನನ್ನು ಗಟ್ಟಿಯಾಗಿ ಆವರಿಸಿಕೊಳ್ಳತೊಡಗಿದವು. ಎಲ್ಲೋ ಒಂದಿನಿತು ಮರೆಗೆ ಹೋಗಲು ಯತ್ನಿಸಿದರೆ ಈ ಜಾದೂಗಾರಿಣಿ ಅಜ್ಜಿ‌ ಮತ್ತೆ ಮತ್ತೆ ತುತ್ತು ಇಡುವಾಗ, ತಲೆಗೆ ನೀರು ಹೊಯ್ಯುವಾಗ, ಎಣ್ಣೆಯಿಟ್ಟು ಜಡೆ ಹೆಣೆಯುವಾಗ, ಬೇಸರದ ಕ್ಷಣಗಳಲ್ಲಿ ಮುದ್ದಿಸುವಾಗ ಕಥೆಯ ಮಾಲೆ ಹೊರತೆಗೆದು ಒಂದೊಂದಾಗಿ ಬಿಡಿಸುತ್ತಿದ್ದಳು. ಓಹ್..ಎಂತಹ ಶ್ರೀಮಂತ ದಿನಗಳವು. ಆ ದಿನಗಳು ನನ್ನ ನಾಟಕ ಬದುಕಿನ ಮೊದಲ ಪುಟಗಳು ಅನ್ನಲೇ,ಅಥವಾ ಮುನ್ನುಡಿ ಬರಹ ಅನ್ನಲೇ.

************************************************************************

ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.
ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ.

11 thoughts on “

  1. ಭಾವಗೀತೆಯನ್ನೋದಿದ ಅನುಭವವಾಯಿತು..! ತಮ್ಮ ಭಾಷೆಯಲ್ಲಿ ತಮ್ಮ ತವರ ನೆಲದ ಹನಿ ಬನಿಯ ಭಾಷೆಯಾಶಯವಂತೂ ಧ್ವನಿಸುತ್ತಲೇ ಕಿವಿಯಿಂದ ಕರುಳಿಗೆ ಇಳಿಯುತ್ತದೆ… ವಸಂತ ಸೇನೆ ಅಲ್ಲಲ್ಲ ವಶಂತ ಶೇನೆ ಮನದಂಗಳದಲ್ಲೆಲ್ಲ ಕುಣಿದು ಕುಪ್ಪಳಿಸಿ ಹೃನ್ಮನದಂಗಳಗಳ ತುಂಬಿಕೊಳ್ಳುತ್ತಾಳೆ..‌! ಗೊತ್ತಿಲ್ಲದೇ ತನ್ನ ಕಲ್ಪನೆಯ ಕಲಾ ಲೋಕಕ್ಕೆ ನಮ್ಮನ್ನು ಕರೆದೊಯ್ದು ಕರತಾಡನ ಪಡೆಯುತ್ತಾಳೆ..!!!
    ಆತ್ಮಪೂರ್ವಕ ಅಭಿನಂದನೆಗಳು ಪೂರ್ಣಿಮಾಜೀ… ಶರಣಾರ್ಥಿ..!

  2. ಪುಟ್ಟ ಹೃದಯವು ಭಾವಲೋಕದ ಅಳಕ್ಕಿಳಿದು ಮಾತನಾಡುವ ಪರಿ…ತುಂಬಾ ಚೆನ್ನಾಗಿ ನವಿರಾಗಿ ಓದಿಸಿಕೊಂಡು ಹೋಗುವ ಹಾಗೆ ಬರೆದಿದ್ದೀ ಪೂರ್ಣಿ…ಖುಷಿಯಾಯ್ತು

    1. ಅಕ್ಕ..ನಿಮ್ಮ ಪ್ರೋತ್ಸಾಹದಾಯಕ ಮಾತುಗಳು ನನಗೆ,ನನ್ಙ ಬರವಣಿಗೆಗೆ ಗ್ಲೂಕೋಸ್

  3. ಕಣ್ಣುಗಳೊಳಗೆ ಚಿತ್ರ ತುಂಬುವುದೇ ಬದುಕು. ಮೊದಲು ಚಿತ್ರ ತುಂಬುವುದು, ಆಮೇಲೆ ಚಿತ್ರ ಬರೆಯುವುದು.
    ದಿನ ಬೆಳಗಾದರೆ, ನಮಗರಿವಿಲ್ಲದೆಯೇ ಹಲವು ಪಾತ್ರಗಳೊಳಗೆ ದೇಹತುಂಬಿ ನಡೆದಾಡುತ್ತೇವೆ. ಪಾತ್ರಗಳನ್ನು ಹುಡುಕಿ ನಾಟಕ ಆಡುವುದು, ರಿಕ್ರಿಯೇಟ್ ಮಾಡುವುದು, ಬ್ರಹ್ಮನ ಸೃಷ್ಟಿಗಿಂತ ಕಡಿಮೆಯಲ್ಲ. ಇರುವುದೊಂದು ದೇಹದೊಳಗೆ ಹಲವು ಮುಖಗಳು ಚತುರ್ಮುಖ,ಬಹುಮುಖ ನಾಟಕಬ್ರಹ್ಮನೇ.

    ಕಾವ್ಯದ ದನಿಯ ಗದ್ಯದಲ್ಲಿ ಪಾತ್ರ ಹುಡುಕುವ ಪ್ರಯತ್ನ ತನ್ನನ್ನು ತಾನೇ ಸೃಷ್ಟಿಗೆ ಒಪ್ಪಿಸುವ ಕ್ರಿಯೆಯೇ.

  4. ವ್ಹಾ..ನಿಮ್ಮ ಅತ್ಯಮೂಲ್ಯ ಅಭಿಪ್ರಾಯ ಖುಷಿ ಕೊಟ್ಟಿದೆ. ಜವಾಬ್ದಾರಿಯೂ ಹೆಚ್ಚಿದೆ

Leave a Reply

Back To Top