ಕಾದಂಬರಿ ಕುರಿತು

ಮರಳಿ ಮಣ್ಣಿಗೆ

ಡಾ.ಶಿವರಾಮ ಕಾರಂತ

ಮರಳಿ ಮಣ್ಣಿಗೆ 

ಲೇಖಕರು :ಡಾ. ಕೆ‌. ಶಿವರಾಮ ಕಾರಂತ

ನಾನು ಶಿವರಾಮ ಕಾರಂತರ ಎಲ್ಲಾ ಕಾದಂಬರಿಗಳನ್ನು

ಓದಿಲ್ಲವಾದರೂ ಕೆಲವೊಂದನ್ನು ಓದಿದ್ದೇನೆ.  ಅದರಲ್ಲಿ ನನಗಿಷ್ಟವಾದ ಕಾದಂಬರಿ ” ಮರಳಿ ಮಣ್ಣಿಗೆ”

   ಈ ಕೃತಿಯನ್ನು ಓದುವಾಗ ಓದಿ ಮುಗಿಸುವ ತನಕ

ಪುಸ್ತಕ ಮುಚ್ಚಿಡಲು ಆಗದಷ್ಟು ಆಸಕ್ತಿ ನಮ್ಮನ್ನು ಓದಿಸಿ

ಕೊಂಡು ಹೋಗುತ್ತದೆ. ಇಡೀ ಕಥೆಯೆ ನಮ್ಮ ಕಣ್ಮುಂದೆ

ಹಾದು ಹೋಗುವ ಅನುಭವವಾಗುತ್ತದೆ. ಇದಕ್ಕೆ ಕಾರಣ

ಅಲ್ಲಿನ ಘಟನೆಗಳು, ಮಾತುಕತೆಗಳು ಹಾಗು ಪಾತ್ರಗಳು

ವಾಸ್ತವಿಕ ನೆಲೆಯಲ್ಲೇ ನಡೆಯುವಂತೆ ಭಾಸವಾಗುತ್ತವೆ.

ಇಲ್ಲಿನ ಪಾತ್ರಗಳೆಲ್ಲಾ ಗಟ್ಟಿತನದಿಂದ ಕೂಡಿರುವ ಕಾರಣ

ನಮ್ಮ ಮನಸ್ಸಿನಲ್ಲಿ ನೆಲೆಸುತ್ತವೆ. ಇಲ್ಲಿನ ಸ್ತ್ರೀ ಪಾತ್ರಗಳು

ಅಂದರೆ ಮುಖ್ಯವಾಗಿ ಸರಸೋತಿ, ಪಾರೋತಿ ಹಾಗೂ

ನಾಗವೇಣಿ ಪಾತ್ರಗಳು ತಮ್ಮ ಬದುಕಿನ ಇತಿಮಿತಿಯಲ್ಲೇ

ಕಷ್ಟಗಳೊಂದಿಗೆ ಹೋರಾಟದ ಬದುಕನ್ನು ನಿಭಾಯಿಸಿದ ರೀತಿಯಿಂದಾಗಿ ಈಗಿನ ಆಧುನಿಕ ಹೆಣ್ಣಿಗಿಂತ ಯಾವುದೇ ರೀತಿಯಲ್ಲೂ ಕಡಿಮೆಯಿಲ್ಲ. ಸ್ತ್ರೀ ಪಾತ್ರಗಳ ಮಾನಸಿಕ ತುಮುಲಗಳು ಅಂದಿನ ಕಾಲಘಟ್ಟದ ಎಲ್ಲ ಹೆಣ್ಣುಮಕ್ಕಳ

ಸ್ಥಾನಮಾನದ ಕೈಗನ್ನಡಿಯಾಗಿದೆ. ಪಾರೋತಿ ಶೋಷಿತ  ಬದುಕನ್ನು  ತಲೆತಗ್ಗಿಸಿ ಸ್ವೀಕರಿಸಿದರೆ, ಸರಸೋತಿಯು

ತನ್ನ ದುರಂತ ಬದುಕನ್ನು ಅಣ್ಣನ ಸಂಸಾರಕ್ಕೆ ಅರ್ಪಿಸಿ

ಕೊಂಡರೂ ನಿರ್ಲಕ್ಷಿಸಲ್ಪಟ್ಟಾಗ ದೌರ್ಜನ್ಯದ ವಿರುದ್ಧ

ಸಿಡಿದೇಳುವ ಮೂಲಕ ತನ್ನ ಅಸ್ಥಿತ್ವದ ಛಾಪನ್ನು ಎಲ್ಲರ ಮೇಲೂ ಒತ್ತಿದರೆ, ನಾಗವೇಣಿ ಗಂಡನ ದೌರ್ಜನ್ಯವನ್ನು

ತನ್ನ ಇತಿಮಿತಿಯಲ್ಲಿ ತಿರಸ್ಕರಿಸಿ ಮಗನಿಗಾಗಿ ತಾನೆಂದೂ ಕಂಡರಿಯದ ಕಡುಬಡತನದ ಬದುಕನ್ನ ಅನುಭವಿಸುವ ಮೂಲಕ ಸ್ವಾಭಿಮಾನಿ ಹೆಣ್ಣಾಗಿ ನೆನಪಲ್ಲುಳಿಯುತ್ತಾಳೆ

ನಾಗವೇಣಿಯು ಅಜ್ಜಿ ಸರಸೋತಿ ವ್ಯಕ್ತಿತ್ವದ ಮುಂದಿನ ಮುಂದುವರಿಕೆಯಾಗಿದೆ ಎನ್ನಲಡ್ಡಿಯಿಲ್ಲ. ರಾಮ ಐತಾಳ ಲಚ್ಚ, ರಾಮ ಈ ಮೂರು ಪಾತ್ರಗಳಲ್ಲಿ ಮೊದಲೆರಡು ಪಾತ್ರಗಳು ಸ್ತ್ರೀ ಶೋಷಣೆಯ ವಿಭಿನ್ನ ಮುಖಗಳಾಗಿ ಕಂಡು ಬಂದರೆ,ರಾಮನ ಪಾತ್ರವು ಹೆಂಗರುಳಿನದ್ದಾಗಿದೆ. ಇಡೀ ಕಾದಂಬರಿಯೇ ವಾಸ್ತವದ ನೆಲೆಯಲ್ಲಿ ಸಾಗುತ್ತ ಮುನ್ನೆಡೆಯುವುದರಿಂದ ಓದುಗರ ಮನದಾಳಕ್ಕಿಳಿದು

ಸ್ಥಾಪಿತವಾಗಿ ಬಿಡುವುದು. ಕಾರಂತರ ಬರವಣಿಗೆಯ ವೈಶಿಷ್ಟ್ಯತೆಯಿರುವುದೇ ಇಲ್ಲಿ. ಈ ಕೃತಿಯಲ್ಲಿ ಮೂರು ತಲೆಮಾರಿನ ಕಥೆಯ ಚಿತ್ರಣವಿದ್ದರೂ ಎಲ್ಲಾ ಪಾತ್ರಗಳು 

ಜೀವಂತಿಕೆಯಿಂದ ಕಣ್ಮುಂದೆ ನಿಲ್ಲುತ್ತವೆ. ಕಲ್ಪನಾ ವಿಲಾಸ ಪ್ರಸಂಗಗಳಿಲ್ಲದೆ ನೈಜತೆಗೆ ಹತ್ತಿರವಾಗಿ ನಾವು ನೋಡಿದ ಒಂದು ಸತ್ಯಕಥೆಯಂತೆ ನಿಲ್ಲುತ್ತದೆ. ಇಲ್ಲಿ ಕಡಲೂ ಸಹ ಜೀವನದ ಒಂದು ಪಾತ್ರವಾಗಿ ಜನಪದರ ಬೇರಾಗಿದೆ.

 ಒಟ್ಟಾರೆ “ಮರಳಿ ಮಣ್ಣಿಗೆ”ಕಾದಂಬರಿಯು ಈ ಮಣ್ಣಿನ ಸೊಗಡುಳ್ಳ ಅಸದೃಶವಾಗಿದ್ದು ಶಿವರಾಮ ಕಾರಂತರ

ಅನನ್ಯ ಕೃತಿಯಾಗಿದೆ.

*****************************

Leave a Reply

Back To Top