ಲೇಖನ
ಆಕಾಶದೀಪದ ಪ್ರಾಧಾನ್ಯತೆ
ವೀಣಾ. ಎನ್. ರಾವ್.
ದೀಪಾವಳಿ ಬಂತೆಂದರೆ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ವಿನೂತನವಾದ ಸಂತಸ. ಹಾಗೆಯೇ ದೀಪಾವಳಿಯ ಸಮಯದಲ್ಲಿ ಅದರಲ್ಲೂ ವಿಶೇಷವಾಗಿ ಹಳ್ಳಿಗಳಲ್ಲಿ “ಆಕಾಶದೀಪ”ವನ್ನು ಮನೆಯ ಮುಂದೆ ತೂಗು ಹಾಕುತ್ತಾರೆ. ಈ ‘ಆಕಾಶದೀಪ’ವು, “ಗೂಡುದೀಪ”,”ನಕ್ಷತ್ರದೀಪ”,ಎಂದು ಪರಿಚಿತವಾದರೆ, ಹಳ್ಳಿಗಳಲ್ಲಿ “ಯಮದೀಪ”,”ವ್ಯೋಮದೀಪ” ಎಂದು ಕೂಡಾ ಕರೆಯುತ್ತಾರೆ.
ಬಿದಿರಿನ ಕಡ್ಡಿಗಳಿಂದ ಎಂಟು ಮೂಲೆಗಳಿರುವಂತೆ ಯಾವ ಆಕಾರಕ್ಕೆ ಬೇಕೊ ಆ ರೀತಿಯಾಗಿ ಕಟ್ಟಿ ಅದರ ಸುತ್ತಲೂ ಬಣ್ಣದ ಪೇಪರನ್ನು ಅಂಟಿಸಿ ಬಾಲಂಗೋಚಿಯನ್ನು ಇಳಿಬಿಟ್ಟು ಮನೆಯಲ್ಲೆ ತಯಾರಿಸುವ ಈ ‘ಆಕಾಶದೀಪ’ವು ಮನೆಯಂಗಳದಲ್ಲಿ ಕಾಣಸಿಗುತ್ತದೆ. ಸಾಂಪ್ರದಾಯಿಕವಾಗಿ ಬೆಳೆದು ಬಂದ ಈ ಆಕಾಶದೀಪ ಅದರ ಮೂಲ ರೂಪ ಆಧುನೀಕರಣತೆಯಿಂದ ಬದಲಾಗಿದೆ.
ಕೃಷಿಕರು ಸಂಧ್ಯಾಕಾಲದಲ್ಲಿ ಗದ್ದೆಗಳಿಗೆ ಹೋಗಿ ಅಲ್ಲಿ ರಂಗೋಲಿ ಹಾಕಿ ಕಾಡುಪುಷ್ಪದಿಂದ ಭೂಮಿಯನ್ನು ಪೂಜಿಸಿ ‘ನೆನೆಕೋಲು’ ಮಾಡಿ, ” ತನ್ನ ರಾಜ್ಯಕ್ಕೆ ತಾನು ಓಡೋಡಿ ಬಾ ಓ ಬಲೀಂದ್ರ ಕುಹೂ” ಎಂದು ಎಲ್ಲರೂ ಬೊಬ್ಬೆ ಹಾಕಿ ದೀಪ ಹಚ್ಚುತ್ತಾರೆ. ಹಾಗೆಯೇ ಮನೆಗೆ ಬಂದು ಅಂಗಳದಲ್ಲಿ ಬಲೀಂದ್ರನ ಸ್ವಾಗತಕ್ಕಾಗಿ ನವಗ್ರಹ ಮಂತ್ರವನ್ನೋ, ಅಥವಾ “ದಾಮೋದರಾಯ ನಭಸಿ ತುಲಾಯಾಂ ದೋಲಯಾ ಸಹ “(ಗೊತ್ತಿರುವವರು ಈ ಮಂತ್ರ ಹೇಳುತ್ತಾರೆ) ಎಂದು ಹೇಳಿ ವ್ಯೋಮದೀಪವನ್ನು ಏರಿಸುತ್ತಾರೆ. ಪಾತಾಳಕ್ಕಿಳಿದ ಬಲೀಂದ್ರನು ಸಮುದ್ರ ಮಂಥನ ಮಾಡುವಾಗ ದೇವತೆಗಳಿಗೆ ಸಹಾಯ ಮಾಡಿದಕ್ಕಾಗಿ, ಅಲ್ಲದೆ ಬಲಿ ಚಿರಂಜೀವಿಯಾಗಿರುವುದರಿಂದ ಈ ಭೂಮಿಯ ಮೇಲೆ ಒಂದು ದಿನ ಭೂಮಿಯನ್ನಾಳುವ ಅವಕಾಶವನ್ನು ದೇವತೆಗಳ ಬಳಿ ಬೇಡಿದ್ದರಿಂದ ದೀಪಾವಳಿಯ ಅಮವಾಸೆಯಲ್ಲಿ ಬಲಿ ಚಕ್ರವರ್ತಿ ಮೇಲಕ್ಕೆ ಬಂದು ರಾಜ್ಯಾಡಳಿತ ಮಾಡುತ್ತಾನೆಂದು.
ಮತ್ತೊಂದೆಡೆ ಈ ‘ಯಮದೀಪ’ವು ಆಕಾಶತತ್ವ ಮತ್ತು ವಾಯುತತ್ವ ಆಗಿರೋದರಿಂದ ಮನೆಯಲ್ಲಿರುವವರೆಲ್ಲರಿಗೂ ಆಯುಷ್ಯ ವೃದ್ಧಿಸಲಿ ಎಂಬ ಆಶಯವೂ ಇದೆ.
ಒಟ್ಟಿನಲ್ಲಿ ಅದೇನೆ ಆದರೂ ಈ ‘ಆಕಾಶದೀಪ’ವನ್ನು ಇಡುವ ಸಂಪ್ರದಾಯ ಇಂದಿಗೂ ಹಳ್ಳಿಗಳಲ್ಲಿ ಮರೆಯಾಗದೆ ಇರುವುದು ಈ ನೆಲದ ಸಂಸ್ಕೃತಿಯನ್ನು ಎತ್ತಿ ತೋರಿಸುತಿದೆ.