ಅಕಾರಣ ಅಕಾಲ

ಕವಿತೆಯ ಕುರಿತು

ಅಕಾರಣ ಅಕಾಲ

ನಾಗರೇಖಾ ಗಾಂವಕರ್

Woman, Face, Girl, Portrait, Forward

ಸಾಹಿತ್ಯದ ನಿಲುವುಗಳು ಭಿನ್ನ ರೀತಿಯಲ್ಲಿ ಎಂದಿಗೂ ಅಭಿವ್ಯಕ್ತಿಗೊಳ್ಳುತ್ತಲೇ ಇರುವುವು. ಸಮಾಜದ ಓರೆಕೋರೆಗಳಿಗೆ ಕನ್ನಡಿ ಹಿಡಿಯುವ ಸಾಹಿತಿಗಳು, ಕವಿಗಳು ತಮ್ಮ ವ್ಯಕ್ತಿತ್ವವನ್ನು ಅಷ್ಟೇ ಶುದ್ಧ ಪಾರದರ್ಶಕತೆಗೆ ಒಗ್ಗಿಕೊಂಡು, ನಡೆದಂತೆ ನುಡಿಯುವ  ಛಾತಿಯುಳ್ಳವರಾಗಿರಬೇಕು. ಇಲ್ಲವಾದಲ್ಲಿ ಅದು ಅಪಹಾಸ್ಯಕ್ಕೆ ಗುರಿಯಾದ ಸಂದರ್ಭಗಳಿವೆ. ಹಾಗೇ ಕವಿತೆಯಲ್ಲಿ ಕವಿಯನ್ನು ಹುಡುಕುವ ಪ್ರಯತ್ನ ಸಲ್ಲ ಎಂಬ ವಾದವೂ ಇದೆ. ಆದರೆ ಇದು ಕೂಡಾ ಎಲ್ಲ ಸಂದರ್ಭಗಳಿಗೆ ಸರಿಯಾಗದು. ಕವಿತೆ ಭಾವನೆಗಳ ಪದಲಹರಿ. ಹಾಗಾಗಿ ಅನ್ಯರ ಅನುಭವಗಳ ಮೇಲೆ ಬರೆದ ಕವಿತೆಗಳು ಆಪ್ತವಾಗಲಾರವು. ಕವಿ ತನ್ನ ನಿಕಷಕ್ಕೆ ಒಡ್ಡಿಕೊಳ್ಳಬೇಕು. ಅನುಭವಗಳಿಗೆ ತೆರೆದುಕೊಳ್ಳಬೇಕು. ಕಂಡಿದ್ದನ್ನು ನೋಡಿದ್ದನ್ನು  ರಸಾನುಭವ ನೀಡುವಂತೆ ಕಟ್ಟಿಕೊಡಬೇಕು. ಹೀಗೆ ಹತ್ತಾರು ಬಗೆಯ ನಿಲುವುಗಳು  ಅಭಿಪ್ರಾಯಗಳು  ಆಗಾಗ ಅಭಿವ್ಯಕ್ತವಾಗಿದ್ದನ್ನು ನಾನು ಗ್ರಹಿಸಿದ್ದೆ.

ಇತ್ತೀಚಿನ ಸಮಕಾಲೀನ ಕವಿಗಳು ಅವರ ಭಾವತೀವ್ರತೆ, ಮುಕ್ತಛಂದದ ರೀತಿ ಎಲ್ಲವೂ ಹೆಚ್ಚು ಹೆಚ್ಚು ಪ್ರಚಲಿತವಾಗುತ್ತ ಅದರಲ್ಲಿಯೇ ಹೊಸ ಚಿಂತನೆಗಳು, ನೋವು ನಲಿವುಗಳು, ಬದುಕಿನ ಖುಷಿ, ಆಕ್ರೋಶಗಳು ವ್ಯಕ್ತವಾದ ಬಗೆಯಿಂದ ಹೃದಯಕ್ಕೆ ಆಪ್ತ ಎನ್ನಿಸಿಬಿಡುತ್ತಿವೆ. ಆ ಪಾತ್ರಗಳೇ ನಾವಾದಂತೆ, ಆ ನೋವು ಇಲ್ಲ ನಲಿವು ನನ್ನದೂ ಕೂಡಾ ಆಗಿರುವ ಸಾಧ್ಯತೆ. ಸಮಾಜಮುಖಿ ಎನ್ನುವುದಕ್ಕಿಂತ ತನ್ನನ್ನು ತೆರೆದುಕೊಳ್ಳುವುದು, ಇಲ್ಲ ಅವ್ಯಕ್ತಕ್ಕಿಂತ ವ್ಯಕ್ತ ನಿಲುವಲ್ಲಿ ಪಾರದರ್ಶಕವಾಗುವುದು ಇತ್ತೀಚಿನ ಬರಹಗಳಲ್ಲಿ ಹೆಚ್ಚು ಹೆಚ್ಚಾಗಿ ಕಂಡುಬರುತ್ತಿದೆ. ಅಂತಹ ಒಂದು ಆಪ್ತ ಕವಿತೆ ಸಮಕಾಲೀನ ಕವಯತ್ರಿ ನಂದಿನಿಯ –“ಅಕಾರಣ ಅಕಾಲ”

 ಕವಯತ್ರಿ ನಂದಿನಿಯ ಭಾವಜಗತ್ತನ್ನು ಒಮ್ಮೆ ನವಿರಾಗಿ ಸ್ಪರ್ಷಿಸುವ ಪ್ರಯತ್ನ ಮಾಡಿದ್ದೇನೆ. ಅಕಾರಣವಾಗಿ ಈ ಕವಿತೆಯನ್ನು ಇಷ್ಟಪಟ್ಟಿದ್ದೇನೆ.

ಅಕಾರಣ ಅಕಾಲದಲ್ಲಿ

ನನ್ನ ಹುಡುಕಿ ಬಂತು ಅದು

ಧಗೆಯ ಧೂಳು ತುಂಬಿದ

ಒಂದು ಕಡು ಮಧ್ಯಾಹ್ನ..

ಗಿಜುಗುಡುವ ಮೌನ, ಗವ್ವೆನ್ನುವ ಸದ್ದು.

ವಿರಾಮದ ಕಾಲವಿರಬೇಕು

ಜಗದ ವಿದೂಷಕನಿಗೆ

ಚಿಟ್ಟೆ ಹಾರಿಬಿಟ್ಟು ಹೂವ ಬಟ್ಟಲಲಿ

ಬಯಕೆ ತುಂಬಿಟ್ಟ

ತುಂಬಿದ ಬಿಂದಿಗೆಯಂಥ ಕಂಗಳು

ಸಂಪಿಗೆ ಎಸಳಂಥ ಬೆರಳು

ಭೇಟಿ ಆದವು ಸದ್ದಿನ

ಸೂರಿನಡಿಯಲ್ಲಿ..

ತುಸು ಹೊತ್ತು ಸುಖವಾದ ಮೌನ

ಬಿಟ್ಟಸ್ಥಳಕ್ಕೆ ಹುಟ್ಟಿಕೊಂಡವು ಮಾತು

ಗೊತ್ತಿಲ್ಲ ನನಗೆ..

ಅದು ಹೇಗೆ ಬಂತೆಂದು:

ಕಡುಧಗೆಯ ದಿನದ ದಣಿವಿಂದ ಬಂತೇ?

ಮಾಗಿಯಿರುಳಿನ ಮುಗಿಲ ಬೆಳಕಿಂದ ಬಂತೇ?

ನೆಲಮುಗಿಲು ಒಲಿದಾಗ ಅಳುಕಾಗಿ ಬಂತೇ?

ಗೊತ್ತಿಲ್ಲ ನನಗೆ

ಅದು ಯಾಕೆ ಬಂತೆಂದು:

ಬರದ ದಿನಗಳ ಬದುಕ ನೆರೆಯಾಗಿ ಬಂತೇ?

ಬಯಲೆದೆಯ ಮೇಲೊಂದು ನವಿಲಾಗಿ ಬಂತೇ?

ಬದಲಾಗದ ನೆಲೆಯ ಸೊಬಗಾಗಿ ಬಂತೇ..?

ಬಂದೇ ಬಂತು..

ಹಗಲುಗಳ ಕಸಿಯಿತು..ಹಸಿವನ್ನೆ ಕೊಂದಿತು

ಹರಿವನ್ನು ತೊರೆಯಿಸಿತು..

ಹುಡುಕಾಟ ಕೊನೆಯಾಯ್ತು

ಬಂದೇ ಬಂತು

ಸೊನ್ನೆಯಾಗಿಸಿತು ನನ್ನತನ

ಚಂದವೆನಿಸಿತು ಒಂದುತನ

ಬಂಧವೆಂದರೆ ಇದೇ ಎನಿಸಿ

ಬಂಧನವೂ ಇದೇ..?

ಬದಲಾದೆನೇ ನಾನು.. ಬೆಳಕಾದೆನೇ?

ಮುಂದಿನದೆಲ್ಲಾ ಇತಿಹಾಸ

ತಪ್ಪಿತು ದಿನಚರಿಯ ಪ್ರಾಸ.

ಕತ್ತಲಾಯಿತೆಂದು  ಹಕ್ಕಿ ಬಿಚ್ಚಿಟ್ಟ ರೆಕ್ಕೆಗಳು

ನನ್ನ ಪಕ್ಕೆ ಪಕ್ಕದಲ್ಲಿ..

ಚೆಲ್ಲಿದವು ಚುಕ್ಕಿ ಹೆಕ್ಕಿಕೋ ಎನ್ನುತ್ತಾ…

ಒಳಗೊಳಗೆ ಹದ ಬೇಗೆ.. ಬೆಂಕಿ ಕೆನ್ನಾಲಿಗೆ….

ಇಲ್ಲವೆನ್ನುವುದೇ ಸುಖವೆನುವ ಕಾಲದಲ್ಲಿ

ಇದೆ..

ಇದು ಅದೇ.. ಎನ್ನುತ್ತಾ

ಬಂದೇ ಬಂತು ಅಕಾಲದಲ್ಲಿ ಅಕಾರಣ

ಕಿರುಬೆರಳ ನೆರವಿಟ್ಟು ಕರೆಯಿತು ಹೊರಗೆ

ಎಷ್ಟು ಬಾಯಿಗೆ ಹಾಕಬೇಕಿತ್ತು ಹೊಲಿಗೆ

ಎಷ್ಟು ನೋಟಗಳಿಗೆ ಕಟ್ಟಬೇಕಿತ್ತು ಬಟ್ಟೆ

ಅಡಿಯಿಟ್ಟೆ ನಡುಗುತ್ತಾ..

ಇದು ಬೆಂಕಿ ಜಾಡು

ಎದೆಯೊಳಗೆ ಬೆಳಕ ಹಾಡು

ಒಂದು ಪ್ರೇಮದಲ್ಲಿ ಮುಳುಗುವುದೆಂದರೆ ..!

ಎಷ್ಟು ಅಸ್ಪಷ್ಟ ಸಾಲುಗಳ ಬರೆದೆ..

ಅರ್ಥವಿರಲಿಲ್ಲ.. ವ್ಯರ್ಥವಾಗಲೂ ಇಲ್ಲ..

ತೂಗಿ ಆಡಲಿಲ್ಲ.. ಸೋಗು ನಟಿಸಲಿಲ್ಲ.

ಎಷ್ಟು ದಕ್ಕಿದೆವು ನಾವು ಒಬ್ಬರಿಗೊಬ್ಬರು

ಏನೆಲ್ಲಾ ಕಳೆದದ್ದು?

ಕೂಡುವಾಸೆಗೆ ಬೇಡಿದ್ದು ಯಾರು ಮೊದಲು?

ಯಾವುದೀ ಬೆರಗು?

ಹೇಗೆ ತೆರೆದೆವು ನಾವು ಹೃದಯದ  ಬಾಗಿಲು

ಇದು.. ಇದುವೇ ತವಕ.. ನಾನು ಕಾಣದ ಲೋಕ..

ಎದೆಯೊಳಗೆ ಎದೆ ಬೆರೆತು,ಭವವೆಲ್ಲಾ ಬೆವೆತು

ಮತ್ತೆಮತ್ತೆ ಎಚ್ಚೆತ್ತು,.

ಏರುವಾಗಲೂ ಇರುವನ್ನೆ ಅರಿತು

ಕಳೆದುಹೋದೆನು ನಾನು ಪರಿಚಿತದ

ಹಾದಿಯಲಿ

ಸಂತೆಯಲ್ಲೇ ಒಂಟಿ ತಿರುಗಿ..

ನಾಳೆಯ ಮೊಗ್ಗಿಗೆ ಈ ಸಂಜೆಯೇ ಬೆಂಕಿ

ಬೇರು ಉರಿವಾಗ ಚಿಗುರಲ್ಲಿ ಹೂವು

ಮೀಯದೆ ಮಡಿಯುಟ್ಟು ಮಂಡಿಯೂರಿ

ಬಿಡಿಸಿ ಅರ್ಪಿಸದ ಹೊರತು ಬದುಕಿಲ್ಲ ಇಲ್ಲಿ

ಅಕಾಲ, ಅಕಾರಣ ಜನನಕ್ಕೆ ಹಸಿವು ಹೆಚ್ಚು.

ಎಲ್ಲಿತ್ತು ಈ ಅಳಲು?

ದಿನದಿನವೂ ಹೊಸ ಅರಳು

ಸುಖವೆನಿಸುತ್ತದೆ ಅಸೂಯೆ

ಹುಸುಹುಸಿ ದ್ವೇಷ

ಬಯಸಿ ಮಾಡುವ ಮೋಸ

ಸಂಜೆಗೊಂದಿಷ್ಟು ಮುನಿಸು

ನಾಳೆಗೇನಿದೆ ಹೊಸ ಜಗಳ?

ಅಕಾರಣ ಅಕಾಲದಲ್ಲಿ ಬಂದ

ನನ್ನ ಅಂತರಂಗ ಸಂಚಲನವೇ..

ನಾನು ನಿಟ್ಟುಸಿರಾದೆ ನೀನಲ್ಲಿ ನರಳಿ

ನಾನು ನಕ್ಕರೆ ನಿನ್ನ ನೀಲಿಮರವೂ ಹೊರಳಿ

ನೀನು ಕರೆದರೆ ಸಾಕು ಇಲ್ಲಿ ದೇವಕಣಗಿಲೆ ಅರಳಿ

ನನ್ನ

ಹಿತವಾದ ನೋವೇ. ಕಾಯದ ಕಾವೇ

ಕಾಯುವ ಸಾವೇ

ಇನ್ನೆಷ್ಟು ಸರಕುಗಳ ಪೇರಿಸಿವೆ ಇಲ್ಲಿ

ಹೇಗೆ ಅಡಗಿಸಲಿ ಎದೆಯಡಿಯ ನದಿಯನ್ನು?

ಯಾವ ಹಾದಿಯಿದು, ಎಲ್ಲಿ ತಲುಪಿಸುವುದು

ನಮ್ಮನ್ನು?

ನನ್ನ ಆತ್ಮದ ತುಂಬಾ ನಿನ್ನವೇ ಬೇರುಗಳು

ಚಿಗುರು, ಮುಗುಳು, ಎಸಳು  ಪರಿಮಳವೂ

ನೀನೇ

ನನ್ನೊಲವಿನ ಅಕಾರಣವೇ

ಸುಖವಾದ ದುಃಖಿ ನಾನು

ಗಾಳಿಯಲಿ ಹಾಡು ಹೇಳಬೇಡ ದಯಮಾಡಿ

ಹಂಬಲಿಸುವೆ ನಾನು ಇನ್ನೂ

ಇದು ಧಗೆಯ ಧೂಳು ತುಂಬಿದ

ಒಂದು ಕಡು ಮಧ್ಯಾಹ್ನ..

ಆರಂಭವಾಗಿಲ್ಲ.. ನನ್ನ ಪ್ರೀತಿಯಿನ್ನೂ..

ಇದೊಂದು ದೀರ್ಘ ಕವನ. ಇಡೀ ಒಂದು ಚಿತ್ರಣವನ್ನು ನಮ್ಮ ಕಣ್ಣಮುಂದೆ ಬೆಳ್ಳಿಪರದೆಯ ಮೇಲೆ ಚಿತ್ರ ಮೂಡಿಸಿದಂತೆ ಚಿತ್ರಿಸುತ್ತಾ ಹೋಗಬಲ್ಲದು. ಕಾವ್ಯ ಮೋಹಿ ಹೆಣ್ಣೊಬ್ಬಳ ಅಂತರಂಗದ ಅಂತಪುರದ ಗೀತೆ.

ತೀವ್ರ ಭಾವವೇ ಇಲ್ಲಿ ಸ್ಥಾಯಿ. ಕವಿತೆಯ ಪ್ರಾರಂಭದಲ್ಲಿ  ಅಕಾರಣವಾಗಿ ಅಕಾಲದಲ್ಲಿ ಬಂದದ್ದು ಏನೆಂದು ಹೊಳೆಯದೇ ವಿರಹಿಣಿಯೊರ್ವಳ ಹುಡುಕಾಟದ ಹಾಗೆ ಕಾಣುವ ಕವಿತೆ ಮಧ್ಯಭಾಗಕ್ಕೆ ಬರುತ್ತಲೇ, ಪ್ರೇಮವನ್ನು ಭಿನ್ನವಾಗಿ ಗ್ರಹಿಸುವಂತೆ ಮಾಡುತ್ತದೆ. ಕಾವ್ಯವನ್ನೆ ಪ್ರಿಯಕರನ ರೂಪದಲ್ಲಿ ಕಾಣುವ ಉತ್ಕಟತೆ ಇಲ್ಲಿದೆ. ಪ್ರಿಯ ಬೇರೆಯಲ್ಲ, ಕವಿತೆ ಬೇರೆಯಲ್ಲ..

ಅಕಾರಣ ಅಕಾಲದಲ್ಲಿ

ನನ್ನ ಹುಡುಕಿ ಬಂತು ಅದು

ಧಗೆಯ ಧೂಳು ತುಂಬಿದ

ಒಂದು ಕಡು ಮಧ್ಯಾಹ್ನ..

ಗಿಜುಗುಡುವ ಮೌನ, ಗವ್ವೆನ್ನುವ ಸದ್ದು.

ಇದು ಬಯಸಿದ್ದೂ ಅಲ್ಲ, ಪಡೆದದ್ದು ಅಲ್ಲ. ಕಾರಣವಿಲ್ಲದೇ ಬಂದಿದ್ದು, ಕಾಲವಲ್ಲದ ಕಾಲದಲ್ಲಿ ಹತ್ತಿರವಾದದ್ದು. ಕಾರ್ಯಕಾರಣ ಎನ್ನುವುದು ಎಲ್ಲರಿಗೂ ಸಮ್ಮತವಾಗಿಯೇ ಇರುವಂತಹದ್ದು. ಆದರೆ ಇದು ಎಲ್ಲ ಸಂಗತಿಗೆ ಹೊರತಾದದ್ದು. ನಡು ಮಧ್ಯಾಹ್ನ, ನಡು ವಯಸ್ಸಿನ ಹೊತ್ತು, ಮನಸ್ಸು ಬೇಗೆಯಲ್ಲಿ ಬೆಂದು ಧೂಳು ತುಂಬಿಕೊಂಡ ಹೊತ್ತು, ಮೌನದ ಅಭ್ಯಾಸವಾಗಿ ಅದೇ ಮಾತಿಗಿಂತ ಹೆಚ್ಚು ಸದ್ದು ಮಾಡುತ್ತಿದ್ದ ಹೊತ್ತು,

ಜಗದ ನಿಯಾಮಕ ತನ್ನ ಖುಷಿಯ ಕ್ಷಣದಲ್ಲಿ ವಿರಾಮದ ಅವಧಿಯಲ್ಲಿ ಇದ್ದ ಹೊತ್ತು, ಚಿತ್ತಾಕರ್ಷಕ ಚಿಟ್ಟೆಯನ್ನ ಇತ್ತ ಹಾರಿ ಬಿಟ್ಟ, ಬಯಕೆಯನ್ನೆ ಮನದ ಬಟ್ಟಲಲ್ಲಿ ತುಂಬಿಟ್ಟ ಎಂದು ತೀವ್ರವಾಗಿ ಅನುಭವಿಸುತ್ತಾ ಹೇಳುವ ಕವಯತ್ರಿ ಆಹ್ಲಾದದ ಜಗತ್ತಿನಲ್ಲಿ ಸಹೃದಯನ ಮನಸ್ಸನ್ನು ಸೆರೆ ಹಿಡಿಯುತ್ತಾರೆ.

ತುಂಬಿದ ಬಿಂದಿಗೆಯಂಥ ಕಂಗಳು

ಸಂಪಿಗೆ ಎಸಳಂಥ ಬೆರಳು. ಇಲ್ಲಿ ವ್ಯಕ್ತವಾಗುವ ಭಾವವೇ ಇಡೀ ಕವಿತೆಯ ಘನತೆಯನ್ನು ತೋರಿಸುತ್ತದೆ. ಕಂಗಳು ಬೆಳಕಾಗಿ, ಜ್ಞಾನವಾಗಿ ಕಂಡರೆ, ಬೆರಳು ಅರಿವನ್ನು ಪದಕ್ಕಿಳಿಸುವ ಬೆರಗಾಗಿ ಬಂದಿದೆ. ಅವರಿಬ್ಬರ ನಡುವಿನ ಭೇಟಿ, ಬಿಟ್ಟಸ್ಥಳಕ್ಕೆ ಹುಟ್ಟಿಕೊಂಡ ಮಾತು, ಎಂತಹ ಚಂದದ ಆಲೋಚನೆ.

ಬಂದೇ ಬಂತು ಎನ್ನುವ ಈ ಪ್ರೀತಿ ನವಿಲಾಗಿ, ಬದುಕಿನ ನೆರೆಯಾಗಿ,ನೆಲೆಯ ಸೊಬಗಾಗಿ ಬಂತೆನ್ನುವುದು  ಈ ಪ್ರೇಮದ ಮೇಲಿನ  ವ್ಯಾಮೋಹಕ್ಕೆ ಉತ್ಪ್ರೇಕ್ಷೆಯಾಗಿದೆ. ಬಂದ ದಿನದಿಂದ ನಿತ್ಯದ ಹರಿವನ್ನೆ ತೊರೆಯಿಸಿದೆ, ಹಗಲುಗಳೇ ಇಲ್ಲ ಈಗ, ಹಸಿವೆನ್ನುವುದು ದೂರ, ಇದು ಬಂಧವಾಗಷ್ಟೇ ಉಳಿಯದೇ ಬಂಧನವೂ ಆಗಿದೆ. ಆದರೆ ಕವಯತ್ರಿಗೆ .ಬೆಳಗಾಗುವ ದಾರಿಯಲ್ಲಿ ಈ ಬಂಧನವೂ ಹಿತವಾಗಿದೆ.

ಮುಂದಿನದೆಲ್ಲಾ ಇತಿಹಾಸ

ತಪ್ಪಿತು ದಿನಚರಿಯ ಪ್ರಾಸ.

ಬೆಂಕಿಯ ಕೆನ್ನಾಲಿಗೆಗೆ ಬಳಲಿದ ಹೊತ್ತು,ಹೊಸ ಕನಸುಗಳು ಮೂಡಿದ್ದು, ಹಕ್ಕಿ ಬಿಚ್ಚಿಟ್ಟ ರೆಕ್ಕೆಗಳು. ಚುಕ್ಕಿಗಳು ಅವಳ ಜೊತೆಯಾದದ್ದು,  ಆ ಸುಂದರತೆಯನ್ನು ಜೊತೆ ಮಾಡಿದ್ದು ಈ ಪ್ರೇಮ. 

ಈ ಪ್ರೇಮ ಅವಳನ್ನು ಎಷ್ಟು ಬೆಂಬಲಿಸುತ್ತಿದೆ ಎಂದರೆ ನಡೆವ ಹಾದಿಗೆ ತನ್ನ  ಕಿರುಬೆರಳನ್ನು ನೀಡಿ ಹೊರಗೆ ಬರುವುದು ಕಲಿಸಿದೆ. ಆದರೆ ಜಗದ ಬಾಯಿಗೆ  ಹೊಲಿಗೆ ಹೇಗೆ ಹಾಕಲಿ ಎಂಬ ಚಿಂತೆ,  ವಿಕಾರ ನೋಟಗಳ ಹೇಗೆ ಎದುರಿಸಲಿ ಎಂಬ ಭಯ, ಆದರೂ ಧೃತಿಗೆಡದ ಈ ಕವಿತೆ ಬೆಂಕಿಯ ಜಾಡೆನ್ನುವುದ ತಿಳಿದೂ ಬೆಳಕಾಗುವ ಹಂಬಲ ಹೊತ್ತಾಕೆ. ಈ ಪ್ರೇಮ, ಕಾವ್ಯ ಪ್ರೇಮ ಅವಳಲ್ಲಿ ಅಂತರಂಗದ ಸಂಚಲನೆಯೇ ಆಗಿದೆ.

ದ್ವೇಷ, ಅಸೂಯೆ, ಮೋಸ, ಮುನಿಸು, ಜಗಳ ಕಾವ್ಯಲೋಕದ  ನಿತ್ಯ ಕಾಯಕಗಳೆ ಆಗಿ ಮೆರದಿವೆ.

ಒಂದು ಪ್ರೇಮದಲ್ಲಿ ಮುಳುಗುವುದೆಂದರೆ ..!

ಎಷ್ಟು ಅಸ್ಪಷ್ಟ ಸಾಲುಗಳ ಬರೆದೆ..

ಅರ್ಥವಿರಲಿಲ್ಲ.. ವ್ಯರ್ಥವಾಗಲೂ ಇಲ್ಲ..

ಆ ಪುರುಷನಲ್ಲಿ, ಕಾವ್ಯ ಪುರುಷನ ಪ್ರೇಮದಲ್ಲಿ ಮುಳುಗಿದ ಸಂದರ್ಭ ಎಷ್ಟು ಅಸ್ಪಷ್ಟ ಸಾಲುಗಳಿಗೆ ಕಾರಣವಾಯಿತು ಎನ್ನುತ್ತಾಳೆ. ಆದರೆ ಅವೆಲ್ಲ ವ್ಯರ್ಥವಾಗಲಿಲ್ಲ. ಕಳೆದುಕೊಳ್ಳುತ್ತಲೇ ದಕ್ಕಿಸಿಕೊಂಡಿದ್ದು ಬಹಳಷ್ಟಿದೆ.ತೂಗಿ ಆಡಲಿಲ್ಲ.. ಸೋಗು ನಟಿಸಲಿಲ್ಲ.

ಎಷ್ಟು ದಕ್ಕಿದೆವು ನಾವು ಒಬ್ಬರಿಗೊಬ್ಬರು

ಏನೆಲ್ಲಾ ಕಳೆದದ್ದು?

ಪ್ರೀತಿಯಲ್ಲಿ ಸ್ವಾರ್ಥ ವ್ಯಕ್ತಿತ್ವರಳಿಸುವ ಬದಲು ಸಂಕುಚಿತಗೊಳಿಸುತ್ತದೆ. ಒಳಗಿನ ಸೆಲೆ ಉಕ್ಕುತ್ತಲೆ ಇರಬೇಕು. ಬರಿದಾಗದಂತೆ. ಲೌಕಿಕದ ಸುತ್ತ ನೆರೆದ ಬಯಕೆಗಳು, ಹೆಣ್ಣಿನ ಮನಸ್ಸು ಬಯಸುವ ಸುಕೋಮಲ ಪ್ರೀತಿ. ಕಾರಣವಿಲ್ಲದೇ ಬಂದ ಈ ಸಂಗತಿ ಕಾಲವಲ್ಲದ ಕಾಲದಲ್ಲಿ ಹತ್ತಿರವಾದದ್ದು,  ಅತಿರೇಕದ ಭಾವಗಳು ಎನ್ನಿಸಿದರೂ ಉತ್ಕಟತೆಯನ್ನೆ ಪ್ರೇಮದ ಮದಿರೆಯನ್ನೇ ಕವಿತೆ ಹೇಳಿದ್ದು ಮನಸ್ಸು ಅದರೊಳಗೆ ನಾನೆ ಆಗಿ, ನನ್ನೊಳಗೆ ಕವಿ ಕಂಡಂತಾಗಿ, ಬಹುಶಃ  ಒಬ್ಬ ಆರ್ದ್ರ ಮನಸ್ಸಿನ ಹೆಣ್ಣುಗಳ ಪ್ರತೀಕವಾಗಿ      ಕವಯತ್ರಿ ಕಾಣುತ್ತಾರೆ.

ನಿತ್ಯದ ಬದಲಾಗದ ದಿನಚರಿಯಲ್ಲಿ ಏಕತಾನತೆಯನ್ನೆ ಉಂಡು ನರಳಿ ಮೌನದ ಸದ್ದಿಗೆ ಮಸುಕಾಗುತ್ತಿದ್ದ ಜೀವವೊಂದರ ಬದಲಾದ ನಿಲುವು, ಹೊಸತನ, ಅದಕ್ಕೆ ಕಾರಣವಾದ ಸಂಗತಿಯೊಂದರ ಸುತ್ತ ಸುತ್ತುವ ಕವಿತೆ, ಬದುಕನ್ನೆ ತೆರೆದಿಟ್ಟದೆ. ಕಾವ್ಯ ಅವಳೊಳಗಿನ ಚೇತನವನ್ನು ಬಡಿದೆಬ್ಬಿಸಿದೆ,  ಜನರ ನುಡಿಗಳಿಗೆ ಭಯಗೊಳ್ಳುತ್ತಿದ ಆಕೆ ಈಗದನ್ನು ಮೀರಿದ್ದಾಳೆ. ಅವರ ವಕ್ರ ದೃಷ್ಟಿ ಅವಳಿಗೆ ಅಭ್ಯಾಸವಾಗುತ್ತಾ, ಹೆಜ್ಜೆಗಳು ದೃಢವಾಗುತ್ತಿವೆ.

ಆದರೂ ಯಾವುದೂ ಸ್ಥಿರವಲ್ಲ ಎಂಬ ಪ್ರಜ್ಞೆ ಆಕೆಗಿದೆ.

“ಗಾಳಿಯಲ್ಲಿ ಹಾಡು ಹೇಳಬೇಡ” ಎನ್ನುವ ಕವಯತ್ರಿ  ಇನ್ನೂ ಅಸ್ಥಿರತೆಯನ್ನು ಎದುರಿಸುತ್ತಿರುವ ಸಾಂಕೇತಿಕ. ಎಲ್ಲಿ ಪ್ರಾರಂಭವೋ ಅಲ್ಲೆ ಕೊನೆ ಎಂಬ ದರ್ಶನ ನೀಡುವಂತೆ ಮತ್ತೆ ಕೊನೆಯ ಸಾಲುಗಳು ಓದುಗನ ವ್ಯಾಕುಲ ಗೊಳಿಸುತ್ತವೆ. ಪೇಮದ ಹಾದಿಯಲ್ಲಿ ಕಾಣುವ ಎಲ್ಲ ಏಳುಬೀಳುಗಳು, ನೋವು ನಲಿವುಗಳು ಇಲ್ಲಿ ಸಹಜವಾಗಿ ಬಂದಿವೆ. ಇದು ಬರೀ ಪ್ರಿಯನ ಕುರಿತಾದ ಕನವರಿಕೆಯಲ್ಲ. ಅದಕ್ಕೂ ಮೀರಿ ತನ್ನ ತಾನು ಕಂಡುಕೊಳ್ಳುವ ದಾರಿಯಲ್ಲಿನ ಗತಿ

ಈ  ಕವಿತೆ ಅತಿಯಾದ ವಿವರಣೆಗಳ ಭಾರದಿಂದ ನಲುಗಿದೆ. ಸೂಕ್ಷ್ಮತೆಯೂ, ಕಿರಿದರಲ್ಲಿ ಹಿರಿದರ್ಥವನ್ನೂ ಹೇಳುವುದು ಕವಿತೆಯ  ಶ್ರೇಷ್ಟತೆ.ಇಲ್ಲಿ ಆ ಸಂಗತಿಗಳ ಕೊರತೆ ಕಾಣುತ್ತಿದೆ.ಆದರೂ ಕವಿತೆ ಹೃದಯವನ್ನು ಗೆದ್ದಿದೆ.

*****************

One thought on “ಅಕಾರಣ ಅಕಾಲ

  1. ಹೀಗೆ ಈ ಪತ್ರಿಕೆಯಲ್ಲಿಬರೆಯುತ್ತಿರುವ ಎಲ್ಲರೂ ತಮ್ಮ ಇಷ್ಟದ ಕವಿತೆಗಳ ಬಗ್ಗೆ ಅದರಲ್ಲೂ ಈ ಕಾಲದ ಕವಿತೆಗಳ ಬರೆಯುವುದು ಅತ್ಯಂತ ಅವಶ್ಯ. ಆ ಮೂಲಕ ಹೊಸ ಕಾಲದ ಕಾವ್ಯಗ್ರಹಿಕೆಯ ಬಗ್ಗೆ ಒಂದು ವರ್ಗ ಬೆಳೆಸಿಕೊಂಡಿರುವ ನಕಾರ ವನ್ನು ಒಡೆಯಬಹುದು.
    ನಂದಿನಿಯವರ ಇವತ್ತಿನ ಪ್ರಜಾವಾಣಿ ಪದ್ಯವೂ ಚಂದ ಇದೆ.

Leave a Reply

Back To Top