ಕವಿತೆ
ಮಧ್ಯಕಾಲ
ಸ್ಮಿತಾ ಭಟ್
ಈ ಶರತ್ ಕಾಲವೆಂದರೆ
ನೆನಪಾಗುವುದು
ಮದುವೆಯಾಗಿ ವರ್ಷಗಳು ಸಂದ
ಮಧ್ಯಕಾಲದ ಜೋಡಿ
.
ಇತ್ತ ಪ್ರೇಮವೂ ಇಲ್ಲ
ಅತ್ತ ಪಕ್ವತೆಯೂ ಇಲ್ಲ
ಬರೀ ಒಣ ಹವೆ.
ಶರವೇಗದಲಿ ಸರಿದೇ ಹೋದ
ಮಳೆ ಮತ್ತದರ ಸೆಲೆ
ರೆಂಬೆಗಂಟಿದ ಎಲೆಗಳ
ಅಮಾಯಕ ನೋಟ
ಕಳೆದ ಕಿಲ ಕಿಲ ಪ್ರೇಮದ್ದೂ.
ಮುಂಜಾವಿಗೆ ಹೊದ್ದ ಶೀಕರ
ಮುದುಡಿಯೇ ಕುಳಿತ ಅಲರು
ಬಿಸುಪಿಲ್ಲದ ವಿಷಾದ ನಸುಕು.
ಕೈ ಚಾಚಿದ ತರು
ಹಕ್ಕಿ ಕುಳಿತ ಒಲವು
ಕೊಟ್ಟ ಪುಟ್ಟ ಕಾವು
ಅಪ್ಪಿದ ಆಪ್ಯಾಯತೆಗಳಿಗೆ
ಸುಳಿಗಾಳಿಯ ಪರೀಕ್ಷೆ
ಕೊನರದ ಕಾಲದ
ಸ್ಥಬ್ಧ ಭಾವಗಳ ನಕ್ಷೆ.
ಹಗೂಽರ ರೂಢಿಯಾಗೇ ಬಿಡುತ್ತದೆ
ಉದುರುವದು ಮತ್ತು
ಚಿಗುರಿಕೊಳ್ಳುವುದೂ…
******************************
Nice