ಕಾದಂಬರಿ ಕುರಿತು

ಮರಳಿಮಣ್ಣಿಗೆ

ಡಾ.ಶಿವರಾಮ ಕಾರಂತ

ಸುಮಾವೀಣಾ

ಮರಳಿಮಣ್ಣಿಗೆ’ಯ ರಾಮನನ್ನು ನೆನಪಿಸಿದ ಕೊರೊನಾ ಕಾಲಾಳುಗಳು

  ‘ಮರಳಿ ಊರಿಗೆ”, “ಮರಳಿ ಗೂಡಿಗೆ’, ‘ಮರಳಿ ಮನೆಗೆ’, ‘ಮರಳಿ ನಾಡಿಗೆ’ ಇವೆ ಪದಗಳು ಕೊರೊನಾ ಎಮರ್ಜನ್ಸಿಯಾದಾಗಿನಿಂದ ಕೇಳುತ್ತಿರುವ ಪದಗಳು.ಆದರೆ ಇವುಗಳ ಕಲ್ಪನೆ, ಯೋಚನೆ ನಮ್ಮ ‘ಕಡಲ ತಡಿಯ ಭಾರ್ಗವ’ನಿಗೆ ಅಂದೇ ಹೊಳೆದಿತ್ತು  ಹಾಗಾಗಿ ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದಾದ ‘ಮರಳಿ ಮಣ್ಣಿಗೆ’ ಕಾದಂಬರಿಯನ್ನು ನಮ್ಮ  ಕೈಗಿತ್ತಿದ್ದಾರೆ. ಹ್ಯಾಟ್ಸ ಆಫ್ ಟು ಕಾರಂತಜ್ಜ  ಎನ್ನಬೇಕು. ‘ಮರಳಿ ಮಣ್ಣಿಗೆ’ ಕಾದಂಬರಿಯಲ್ಲಿ ರಾಮ, ಐತಾಳರು, ಲಚ್ಚ ಹಾಗು ರಾಮ ಎಂಬ ಮೂರು ತಲೆಮಾರುಗಳು ಬರುತ್ತವೆ.  ಮೊದಲನೆ ತಲೆಮಾರಿನಲ್ಲಿ   ರಾಮ ಐತಾಳರು ಮಾಡುವ ವೈದಿಕ ವೃತ್ತಿ ಹಾಗು ಪುರುಷಪ್ರಧಾನ ವ್ಯವಸ್ಥೆಯ ಧೋರಣೆಗಳು ಕಂಡು ಬರುತ್ತವೆ.  ನಂತರದ ತಲೆಮಾರಿನ ಲಚ್ಚನಲ್ಲಿ    ಆಧುನಿಕ ವಿದ್ಯಾಭ್ಯಾಸ ಅವನ ಬದುಕಿನ ನೆಲೆಯನ್ನು ಮರೆಯಿಸಿ   ಲೋಭಿ ಬದುಕಿನ ಬಿರುಗಾಳಿಯನ್ನು ಬೀಸಿಸುತ್ತದೆ. ಸುಳ್ಳು, ದುಂದು ವೆಚ್ಚ ಇತ್ಯಾದಿಗಳನ್ನು ಮಾಡುತ್ತಾನೆ.  ಈತನ ಹೆಂಡತಿ ನಾಗವೇಣಿ.  ಆಸೆ ಕಂಗಳಿಂದ ಮದುವೆಯಾಗಿ ಬಂದು ನಲುಗುತ್ತಾಳೆ.  ಗಂಡನಿಂದ ನೋವುಂಡ ನಾಗವೇಣಿ ಮಗನಿಂದ ಸಮಾಧಾನವನ್ನು ಪಡೆಯುತ್ತಾಳೆ. ಅಂತಹ ಮಗನೇ   ಮೂರನೆ ತಲೆಮಾರಿನ ರಾಮು.  ತಾಯಿಯ ಶ್ರಮವನ್ನು ಅರಿತ  ಈತ ಅತ್ಮಾಭಿಮಾನವುಳ್ಳವನಾಗಿ   ಮೆರೆಯುತ್ತಾನೆ. ರಾಮನು ಮರಳಿ ಮಣ್ಣಿಗೆ ಬಂದ  ನಂತರ ಶಾಲಾ ಮಾಸ್ತರಿಕೆ ಮತ್ತು ಕೃಷಿ ಎರಡನ್ನೂ ಆಪ್ತವಾಗಿ ದುಡಿಸಿಕೊಳ್ಳುತ್ತಾನೆ.ಹೋಟೇಲ್ ಉದ್ಯಮದಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೇಲಾದ ಪ್ರಭಾವ  ಮತ್ತು ಪ್ರಾದೇಶಿಕತೆಯ ಸೊಗಡು  ಶಿವರಾಮ ಕಾರಂತರ ಮರಳಿ ಮಣ್ಣಿಗೆ ಕಾದಂಬರಿಯ ವೈಶಿಷ್ಟ್ಯ. 1850ರಿಂದ1940 ನಡುವಿನ ಸುಮಾರು ನೂರು ವರ್ಷಗಳ ಅವಧಿಯಲ್ಲಿ ಕರಾವಳಿ ಕರ್ನಾಟಕದ ಹಳ್ಳಿಯೊಂದರಲ್ಲಿ  ತಲೆಮಾರುಗಳ ನಡುವೆ ನಡೆದ  ಸಾಮಾಜಿಕ ಪ್ರಕ್ರಿಯೆಯನ್ನು ಕಾದಂಬರಿ ತೆರೆದಿಡುತ್ತದೆ. 1942ರಲ್ಲಿ  ಪ್ರಕಟವಾದ ಈ ಕಾದಂಬರಿ ಇವತ್ತಿಗೂ ಅಕ್ಷರಷಃ ಅನ್ವಯಿಸುತ್ತದೆ.

  ‘ಮರಳಿ ಮಣ್ಣಿಗೆ’ ಕಾದಂಬರಿಯಲ್ಲಿ ಬರುವ ಮುಖ್ಯ ಪಾತ್ರ ರಾಮ  ಮುಂಬೈ ಬದುಕಿಗೆ ವಿದಾಯ ಹೇಳಿ ರೈಲು ನಿಲ್ದಾಣಕ್ಕೆ ಬಂದಾಗ ಅವನ ಫ್ರೆಂಡ್ಸ್ರೂಮಿನವರ ಜೊತೆಗೆ ಅವನ  ವಿದೇಶಿ ಚಿತ್ರ ಕಲಾ ಶಿಕ್ಷಕಿ ನೋವಾ ಕೂಢ ಬಂದು ಒಂದು ಪುಟ್ಟ ಚಿತ್ರಪಟವನ್ನು ಸುರುಳಿ  ಮಾಡಿ “ಇದು ನನ್ನ ಮನೆಯ ಹಿಂದಿನ ಗುಡ್ಡ” ಎಂದು ಹೇಳಿ ನಕ್ಕಿರುತ್ತಾಳೆ ಆಗ ರಾಮುವಿಗೆ  ನೋವಾ ತನ್ನ ನಾಡಿಂದ ಓಡಿಬಂದುದರಿಂದ ಆ ನಾಡಿಗಾಗಿ ಅವಳ ಜೀವ ಹಂಬಲಿಸುತ್ತಿದೆಯೇನೋ ಎಂದೆನಿಸಿ ಕಣ್ಣೀರು ಬರುತ್ತದೆ. ಇದೆ ನಾಡಿನ ಹಂಬಲ ತವರ ಹಂಬಲ  ಅಂದರೆ, ಅದಕ್ಕೇ ನಮ್ಮ ಜಾನಪದ ಹೆಣ್ಣುಮಕ್ಕಳು “ಕಾಸಿಗೆ ಹೋಗಲಿಕೆ ಏಸೊಂದು ದಿನ ಬೇಕ ತಾಸ್ಹೊತ್ತಿನ ಹಾದಿ ತವರೂರು” ಎಂದು  ತಾವು ಹುಟ್ಟಿದ ನೆಲವನ್ನು ಕಾಶಿಗೆ  ಹೋಲಿಸಿರುವುದು.  

   ಕಾದಂಬರಿಯಲ್ಲಿ ಅನ್ಯ ಮನಸ್ಥಿತಿಯ  ಒಂದೇ ಕುಟುಂಬದ ಮೂರು ಜನರನ್ನು ನೋಡಬಹುದು ಆದರೆ ಈಗ ಇಂಥ ಸಾವಿರ ಲಕ್ಷ  ಲಕ್ಷ ಮನಸ್ಸುಗಳು   ನಮ್ಮ ನಡುವಿವೆ. ಅನ್ಯ ದೇಶಗಳು “ಅನ್ಯದೇಶಿ” ಎನಿಸಿಕೊಂಡವರನ್ನು ಒಮ್ಮೆಗೇ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುವದಿಲ್ಲ ಅಲ್ಲೂ ಜನಾಂಗೀಯ ಭೇದ, ಹಿಂಸೆ, ತಾರತಮ್ಯ ಗಳು ಇರಬಹುದು, ಹೊಂದಾಣಿಕೆಯ ಸಮಸ್ಯೆ ಇರಬಹುದು ಭಾಷೆಯ ಸಮಸ್ಯೆ ಇರಬಹುದು.  ಇದರ ನಡುವೆ ಅತ್ಯಂತ ಚೆನ್ನಾಗಿರುವ ಕುಟುಂಬಗಳು ಇವೆ ಅದರ ಬಗ್ಗೆ ತಕರಾರಿಲ್ಲ.  

 ‘ಮೆರೆಯುತ್ತಿದ್ದ ಭಾಗ್ಯವೆಲ್ಲ ಹರಿದು ಹೋಯಿತೆನುವ ತಿರುಕ ಮರಳಿ ನಾಚಿ ಮರಳುತ್ತಿದ್ದ ಮರುಳನಂತೆಯೇ’ ಎಂಬಂತೆ ಸೋ ಕಾಲ್ಡ್ ಹೈಪ್ರೊಫೈಲ್ ಇರುವವರಿಂದ  ಮೊದಲುಗೊಂಡು ಕಡುಬಡವರವರೆಗೂ  ಎಲ್ಲಾ ಸ್ಥರದ ಉದ್ಯೋಗಕ್ಕಾಗಿ, ಅಧ್ಯಯನಕ್ಕಾಗಿ,  ದಿನಗೂಲಿಗಾಗಿ ಊರು ಬಿಟ್ಟವರು ಮರಳಿ ತಮ್ಮ ಮನೆಯನ್ನು ತಮ್ಮ ತಮ್ಮ ಹಳ್ಳಿಗಳನ್ನು ಸೇರಬಯಸುತ್ತಿದ್ದಾರೆ.  ಹಳ್ಳಿಗಳಿಂದ  ನಗರಕ್ಕೆ ವಲಸೆ  ಬರುವ ಕಾಲ ಬದಲಾಗಿ ನಗರಗಳಿಂದಲೇ ಹಳ್ಳಿಗಳಿಗೆ  ವಲಸೆ  ಹೋಗುವ ಕಾಲ ಬಂದಿದೆ. ಲಾಕ್ ಡೌನ್ ಆಗಿದೆ ಇದ್ದಲ್ಲೆ ಇರಿ ಎಂದರೆ  ಕೇಳಲಿಲ್ಲ. ಅದರಲ್ಲೂ  ರಾಯಚೂರಿನ ಹೆಣ್ಣಮಗಳು  ತನ್ನೂರಿನವರೆಗೂ  ಕಡೆಗೂ ತನ್ನ ಮನೆಯನ್ನು  ಕಡೆಗೂ ಸೇರಲೇ ಇಲ್ಲವಲ್ಲ ಹಸಿವಿನಿಂದ ಹಾಗೆ ಪ್ರಾಣ ಬಿಟ್ಟಳಲ್ಲ. ಹಾಗೆ ದೂರದ ಕಣ್ಣೂರಿನಿಂದ ಮಂಗಳೂರಿಗೆ ಕಾಲ್ನಡಿಗೆಯಲ್ಲೇ ಬಂದ ಗರ್ಭಿಣಿ ಹೆಣ್ಣು ಮಗಳು ನಡೆದೇ ಬಂದಿದ್ದಾರಲ್ಲ ಏನು ಹೇಳ ಬೇಕು ಇದಕ್ಕೆ.  ಸರಕಾರ ಇಷ್ಟು  ಉಳಿದುಕೊಳ್ಳಲು ತಾತ್ಕಾಲಿಕ ವ್ಯವಸ್ಥೆ , ಊಟದ ವ್ಯವಸ್ಥೆ ಮಾಡಿದ್ದಾರೆ ಇಷ್ಟು ಆದ ಮೇಲೂ  ಏಕೆ ಈ ಹಂಬಲ ಎಂಬ ಪ್ರಶ್ನೆ ಸಹಜವಾಗಿ ಮೂಡುವಂಥದ್ದೆ. ಇನ್ನು ವಿದೇಶಗಳಲ್ಲಿ ಇರುವವರೂ ಕೂಡ ನಮ್ಮನ್ನು “ದೇಶಕ್ಕೇ ಕರೆಸಿಕೊಳ್ಳಿ…” ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ಕಾರಣ ಇಷ್ಟೆ ತವರಿನ ಸೆಳೆತ.  ಆ ಸೆಳೆತವೇ  ಆಪ್ಯಾಯಮಾನ. ನಮ್ಮ ನಾಡಿನ ಸೌಗಂಧ ನಮಗೇ ಗೊತ್ತು. ಉಪ್ಪರಿಗೆಯ ಮೇಲಿನ ಮೆಟೀರಿಯಲ್ಸ್ಟಿಕ್  ಜೀವನ ನಿಜವಾದ ಅನುಭೂತಿಯನ್ನು ಕೊಡಲಾರದು.  ‘ಸಿರಿಗರವನ್ನು ಹೊಡೆದವರ ನುಡಿಸಲು ಬಾರದು’ ಎಂಬಂತೆ ಹಣದ ನಶೆಯೇರಿಸಿಕೊಂಡವರು,  ನಾವೇ ಎಲ್ಲಾ ಎಂಬ ಹುಂಬತನಕ್ಕೆ , ವ್ಯಾಮೋಹಗಳಿಗೆ ಒಳಗಾಗಿ ಪ್ರತಿಭಾಪಲಾಯನಗೈದವರು, ನಾವು ಭಾರತೀಯ ಸಂಜಾತರು ಎಂದು ಹೇಳಿ ಕೊಳ್ಳಲು ಹಿಂಜರಿಯುತ್ತಿದ್ದವರೆಲ್ಲಾ ಭಾರತಕ್ಕೆ ಮರಳಿ ಹೋಂ ಕ್ವಾರಂಟೈನ್ಗಳಾಗಿದ್ದರು. ಇನ್ನು ಕೆಲವರು  ಕ್ವಾರಂಟೈನ್  ಅವಧಿ ಮುಗಿದರೂ ಆಚೆ ಬಾರದೆ ಕಿಟಕಿಯ ಪರದೆ ಸರಿಸಿ ಹೊರಗೆ ಏನಾಗುತ್ತಿದೆ ಎಂದು ಮೆಲ್ಲಗೆ  ನೋಡುತ್ತಿದ್ದರು. ಇನ್ನು ನಗರ ಪ್ರದೇಶಗಳಿಂದ ಹಿಂದಿರುಗಿದವರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು “ಮರಳಿ ಮಣ್ಣಿಗೆ” ಪದಕ್ಕೆ ಘನತೆ ತಂದುಕೊಟ್ಟಿದೆ.  ‘ಮರಳಿ ಮಣ್ಣಿಗೆ’ ಕಾದಂಬರಿಯ ರಾಮನೂ ಮಾಡಿದ್ದೂ  ಕೃಷಿಯನ್ನೇ.  ಎಷ್ಟು ಸಾಂದರ್ಭಿಕವಾಗಿದೆಯಲ್ಲವೇ? ಹೌದು! ನಮಗೆ ಅನ್ಯ ದೇಶ ಅನ್ನ ಕೊಡಬಹುದು ಹಣ ಕೊಡಬಹುದು, ಸ್ಥಾನಮಾನ ಕೊಡಬಹುದು,  ಜೀವನ ಕೊಡಬಹುದು ಆದರೆ ನೆಮ್ಮದಿಯನ್ನು ಎಂದಿಗೂ ಕೊಡಲಾರದು ಎಂದೇ ನನ್ನ ಅನಿಸಿಕೆ. ವಲಸಿಗ ಹಕ್ಕಿಗಳು ತಮ್ಮ ವಿಹಾರವನ್ನು ಮುಗಿಸಿ ಸ್ವಸ್ಥಾನಕ್ಕೆ ಮರಳುವಂತೆ ತಮ್ಮ ಮೂಲ ನೆಲೆಗೆ ಮರಳಲೇಬೇಕು.

   ಅದೇನೆ ಕೊಡುಗೆ ಕೊಡುವುದಿದ್ರೂ ನಮ್ಮ ದೇಶಕ್ಕೆ ಕೊಡಬಹುದಲ್ಲವೇ? ವಿಶ್ವದ ಯಾವ ಬಲಿಷ್ಠ ರಾಷ್ಟ್ರಕ್ಕೂ ಆರ್ಥಿಕ ಸಂಪತ್ತನಲ್ಲಿ, ಭೌದ್ಧಿಕ ಸಂಪತ್ತಿನಲ್ಲಿ ಭಾರತ ಕಡಿಮೆಯೇನಿಲ್ಲ . ಕೊರೊನಾ ಎಮರ್ಜನ್ಸಿ ಬಂದ ನಂತರ ಸಾಮಾಜಿಕ ಆಧ್ಯಯನ ಕಾರರು ಮೊದಲಿನಂತಹ ದಿನಗಳು ಇನ್ನು ಇರಲಾರವು ಎಂದಿದ್ದಾರೆ. ಇನ್ನು  ಎಂಥಹ ದಿನಗಳು ಬಂದರು ಅದಕ್ಕೆ ನಾವು ಸರ್ವ ಸನ್ನಧ್ಧರಾಗಿರಬೇಕು. ಲಾಕ್ ಡೌನ್ ಕಾಲ  “ಮರಳಿ ಮಣ್ಣಿಗೆ”  ಅಲ್ಲ “ಮರಳಿ ನಮ್ಮ ಸಂಸ್ಸ್ಕೃತಿ”ಗೆ ಎಂಬಂತಾಗಿದೆ. ಕೈ ಜೋಡಿಸಿ ನಮಸ್ಕರಿಸುತ್ತಿದ್ದೇವೆ . ಮನೆಯ ಅಡುಗೆ ರುಚಿಸುತ್ತಿದೆ. ಎಲ್ಲರೂ ಒಟ್ಟಾಗಿ ಕ್ವಾಲಿಟಿ ಟೈಮ್ ಕಳೆಯುತ್ತಿದ್ದೇವೆ. ನಮ್ಮ ಅಡುಗೆಮನೆಯನ್ನು ವಿದೇಶಿ ಅಡುಗೆ ಸಾಮಾಗ್ರಿಗಳು ಆಕ್ರಮಿಸಿಕೊಂಡಿದ್ದನ್ನು ತಡೆದು  “ ಹಿತ್ತಲ ಗಿಡ ಮದ್ದಲ್ಲ “ಎಂಬಂತೆ ನೇಪಥ್ಯಕ್ಕೆ  ಸರಿದಿದ್ದ ನಮ್ಮ ಅಡುಗೆಯಲ್ಲಿ ಹಿಂದಿನಿಂದಲೂ  ಬಳಸುತ್ತಿದ್ದ ಅರಿಸಿನ ಕಾಳುಮೆಣಸು, ಬೆಳ್ಳುಳ್ಳಿ ಶುಂಠಿಗಳು ಅಡುಗೆ ಮನೆಯ ಪರಿಮಳವನ್ನು  ಹೆಚ್ಚಿಸಿವೆ. “ ಕೆಟ್ಟು ಪಟ್ಟಣ ಸೇರು” ಎಂಬ ಗಾದೆ “ಕೆಟ್ಟು ಹಳ್ಳಿ ಸೇರು” ಎಂದು ಬದಲಾಗಿದೆ.

 ಕೊರೊನಾ  ವೈರಸ್ ಬಂದಿದೆ ಸರಿ! ನಮ್ಮ ದೇಶದ  ಅರ್ಥ ವ್ಯವಸ್ಥೆಯ ಮೇಲೆ ಬಲವಾದ ಪೆಟ್ಟನ್ನೂ ನೀಡಿದೆ. ಆದರೆ ಜಾಗತಿಕ ಮಟ್ಟದಲ್ಲಿ ಭಾರತದ ಅಂತಃಶಕ್ತಿ ಏನು ಎಂಬುದನ್ನು ವೃದ್ಧಿಸಿಕೊಂಡಿದೆ. ವಿಶ್ವಸಂಸ್ಥೆಯಿಂದ ಮೊದಲುಗೊಂಡು  ಅಮೇರಿಕಾ  ಬ್ರೆಜಿಲ್  ರಾಷ್ಟ್ರಗಳು ನಮ್ಮನ್ನು ಕೊಂಡಾಡುತ್ತಿವೆ. ಮನಿ ಪವರ್ಗಿಂತ  ಈಗ ನಮ್ಮ   ಭಾರತ ಮಣ್ಣಿನ ಪವರ್ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ.  ನಮ್ಮ ದೇಶ, ನಾಡು  ಏನೂ ಅಲ್ಲ  ಎಂದ ರೋಗಗ್ರಸ್ಥ ಮನಸ್ಸುಗಳು ಕೊರೊನಾ ಬಂದಾಗಿನಿಂದ ಮರಳಿ ಮಣ್ಣಿಗೆ  ಬಂದಿವೆ ಬರುತ್ತಿವೆ.

*******************************

ಸುಮಾವೀಣಾ

Leave a Reply

Back To Top