ಕಾದಂಬರಿ ಕುರಿತು
ಮಲೆಗಳಲ್ಲಿ ಮದುಮಗಳು
ಕುವೆಂಪು
ಕಾವ್ಯ ಎಸ್.
ಕಾಡಿದ , ಅರಿವು ವಿಸ್ತಿರಿಸಿದ, ಬದುಕಿನ ಚೆಲುವು ತಿಳಿಸಿದ ಕುವೆಂಪು
ನನ್ನನ್ನು ದೀರ್ಘವಾಗಿ ಓದಿಸಿದ ಪ್ರೀತಿಯ ಕಾದಂಬರಿ ಎಂದರೆ ; ಕುವೆಂಪುರವರ “ಮಲೆಗಳಲ್ಲಿ ಮದುಮಗಳು ” ಕಾದಂಬರಿ. 712 ಪುಟಗಳಿರುವ ಈ ಬೃಹತ್ ಕಾದಂಬರಿಯಲ್ಲಿ ಪಾತ್ರವರ್ಗ, ಸ್ಥಳಗಳು, ಜಾತಿ, ಪಂಗಡಗಳ ವಿವರಣೆಗಳ ಸುತ್ತ ಹೆಣೆದುಕೊಳ್ಳುತ್ತಾ ಅಂದಿನ ಮೇಲುಜಾತಿ, ಕೀಳುಜಾತಿಯ ವಿಡಂಬನೆ, ಕೂಲಿ ಆಳುಗಳನ್ನು ನಡೆಸುಕೊಳ್ಳುತ್ತಿ ದ್ದ ಹೀನಾಯ ಸ್ಥಿತಿ, ಬ್ರಾಹ್ಮಣ ವರ್ಗದವರೇ ಶ್ರೇಷ್ಠರೆಂದು, ಉಳಿದ ವರ್ಗದವರನ್ನು ಹೀನಾಯವಾಗಿ ಕಾಣುತ್ತಾ ಅವರ ಮೂಢಾಚಾರಗಳನ್ನು ಜೀವನೋಪಾಯ ಸಂಪಾದನೆಗೆ ಬಂಡವಾಳ ವಾಗಿಸಿದ್ದ ಬ್ರಾಹ್ಮಣರ ಮನೋಧರ್ಮ, ಪುರುಷ ಪ್ರಾಧಾನ್ಯತೆಯ ಸಮಾಜ, ಮಹಿಳೆಯ ಅಸಮಾನತೆ, ಮೂಢನಂಬಿಕೆ, ಬಡತನ, ಕ್ರೈಸ್ತಧರ್ಮದ ಪ್ರಚಾರದ ವಿವಿಧ ರೀತಿಗಳು, ಮಲೆನಾಡಿನ ವರ್ಣನೆ, ಸಹ್ಯಾದ್ರಿಯ ಬೆಟ್ಟಗಳ ವರ್ಣನೆ, ದಟ್ಟ ಕಾಡಿನ ರಮಣೀಯತೆಯ ಭವ್ಯವಾದ ಕಣ್ಣುಕಟ್ಟುವ ವರ್ಣನೆ, ಕಾಡಿನ ಭೀಕರತೆ, ಕೃಷಿ, ತೋಟಗಾರಿಕೆ, ಅಂದಿನ ಆಚಾರ -ವಿಚಾರ, ಹಳ್ಳಿಯ ಸೊಗಡು, ನುರಿತ ಗ್ರಾಮ್ಯ ಭಾಷೆಯ ಸುತ್ತ ಒಂದರೊಳಗೊಂದು ಹೆಣೆದುಕೊಳ್ಳುತ್ತಾ ಸಾಗುತ್ತದೆ.
ಕಾದಂಬರಿಯಲ್ಲಿನ ಊರುಗಳಾದ ಸಿಂಬಾವಿ, ಲಕ್ಕುಂದ, ಮೇಗರವಳ್ಳಿ, ಬೆಟ್ಟಳ್ಳಿ, ಕೋಣೂರು, ತೀರ್ಥಹಳ್ಳಿ, ಕಾಗಿನಹಳ್ಳಿ ಹೂವಳ್ಳಿ, ಕಾನೂರು… ಇತ್ಯಾದಿ ಹಾಗೂ ಪ್ರಸ್ತಾಪವಾಗಿರುವ ವ್ಯಕ್ತಿಗಳಾದ ಭರಮೈಹೆಗ್ಗಡೆ, ಜಗ್ಗಮ್ಮ, ಸುಬ್ಬಣ್ಣಹೆಗ್ಗಡೆ, ಮುಕುಂದಯ್ಯ, ಚಿನ್ನಮ್ಮ, ನಾಗತ್ತೆ, ನಾಗಕ್ಕ, ವೆಂಕಟಣ್ಣ ಗೌಡ್ರು, ಲಕ್ಕಮ್ಮ, ತಿಮ್ಮಪ್ಪಹೆಗ್ಗಡೆ, ಮಂಜಮ್ಮ, ಶಂಕರಹೆಗ್ಗಡೆ, ರಂಗಮ್ಮ(ಹುಚ್ಚು ಹೆಗ್ಗಡತ್ತಿ ), ಸೀತಮ್ಮ, ಕಲ್ಲಯ್ಯಗೌಡ್ರು, ದೇವಯ್ಯಗೌಡರು, ದೇವಮ್ಮ, ರಂಗಪ್ಪಗೌಡರು, ದೊಡ್ಡಣ್ಣಹೆಗ್ಗಡೆ, ಧರ್ಮು, ಕಾಡು, ತಿಮ್ಮು, ರಾಮು, ಗುತ್ತಿ, ತಿಮ್ಮಿ, ಐತ, ಪಿಂಚಲೂ, ಬಚ್ಚ, ಕರಿಸಿದ್ದ, ಸಣ್ಣತಿಮ್ಮ,ಚಿಂಕ್ರ, ದೇಯಿ, ಅಕ್ಕಣ್ಣಿ..ಇತ್ಯಾದಿ ಪಾತ್ರಗಳೊಂದಿಗೆ ಕಾದಂಬರಿ ಬೇರೆಯದೇ ಅದ್ಭುತ ಲೋಕಕ್ಕೆ ಕರೆದೊಯ್ಯುತ್ತದೆ.
ನನ್ನನ್ನು ಅತಿಯಾಗಿ ಕಾಡಿದ ಪಾತ್ರಗಳೆಂದರೆ ಒಡಯರಿಗೆ ನಿಷ್ಠ ಆಳುಗಳಾದ (ಸ್ವಾಮಿ ನಿಷ್ಠರು )ಗುತ್ತಿ, ಐತ, ಚೊಚ್ಚಲ ಬಸಿರು ಹೊತ್ತಿದ್ದರು, ಮುಕುಂದಯ್ಯ -ಚಿನ್ನಮ್ಮರನ್ನು ಒಂದಾಗಿಸುವುದಕ್ಕಾಗಿ ಸರ್ವಸ್ವವನ್ನು ಲೆಕ್ಕಿಸದೆ ಶ್ರಮವಹಿಸುವ ಪಿಂಚಲು.
ಚಿನ್ನಮ್ಮಳಿಗೋಸ್ಕರ ಸೀರುಡಿಕೆಯಾದ ತಾಯಿ ಸ್ವರೂಪಿ ನಾಗಕ್ಕ. ಚಿಂಕ್ರ ಮತ್ತು ದೇಯಿಯ ಮಕ್ಕಳನ್ನು ತನ್ನ ಮಕ್ಕಳಾಗಿ ಪ್ರೀತಿ ತೋರುವ ಅಕ್ಕಣ್ಣಿ.
ಸ್ವಾಮಿಭಕ್ತ ಹುಲಿಯ (ಗುತ್ತಿಯ ನಾಯಿ )ತನ್ನ ಒಡೆಯನಿಗಾಗಿ ಭೋರ್ಗರೆದು ಹರಿಯುತ್ತಿರುವ ತುಂಗೆಯನ್ನು ಲೆಕ್ಕಿಸದೆ ನದಿಗೆ ಹಾರಿ ಪ್ರವಾಹದ ವಿರುದ್ಧ ಈಜಿದ ಗುತ್ತಿಯ ಪ್ರೀತಿಯ ಕುನ್ನಿ.
ಮುಕುಂದಯ್ಯ -ಚಿನ್ನಮ್ಮರ ಪ್ರೀತಿ, ಪ್ರಲಾಪ, ಅಕ್ಕರೆಯ ನಡವಳಿಕೆ.
ವೇಷ -ಭೂಷಣ, ಆಚಾರ -ವಿಚಾರಗಳಲ್ಲಿ ಕ್ರೈಸ್ತಧರ್ಮದ ಅನುಸರಿಸುತ್ತಿದ್ದ ದೇವಯ್ಯಗೌಡರು.
ದೊಡ್ಡ ವಿದ್ವಾಂಸರಾಗಿ, ಪವಾಡಪುರುಷರಾಗಿ, ಸಂನ್ಯಾಸಿಯಾಗಿ ಗೋಚರವಾದ ಗಡ್ಡದಯ್ಯ. ಗಡ್ಡದಯ್ಯ ಹೇಳಿದ ಸ್ವಾಮಿ ವಿವೇಕಾನಂದರು ಭರತಖಂಡವನ್ನು ಸಂಚರಿಸಿ, ಭೋದಿಸಿ ಹೊಸದೊಂದು ಯುಗಶಕ್ತಿಯನ್ನು ಉದ್ಬೋದನಗೊಳಿಸುವ ವಿಚಾರ.
ಸಾಬರುಗಳ ಮೋಸ -ವಂಚನೆಯ ವ್ಯಾಪಾರ, ಕೊಲೆ -ಸುಲಿಗೆ, ಹೊಡೆತಗಳು.
ಕೆಲವೊಂದು ಪಾತ್ರಗಳ ವರ್ತನೆ ನಮ್ಮನ್ನು ಕಲ್ಪನೆಗೂ ಮೀರಿ ಯೋಚನಾಲೋಕಕ್ಕೆ ತಳ್ಳಿ ಮತ್ತೆ ವಾಸ್ತವಕ್ಕೆ ಕರೆತರುತ್ತವೆ. ಈ ಕಾದಂಬರಿಯನ್ನು ಓದುತ್ತಾ ಅದರೊಳಗಿನ ಒಂದು ಪಾತ್ರವಾಗಿ, ಅಲ್ಲಿದ್ದ ಪಾತ್ರಗಳೆಲ್ಲ ನನ್ನ ಸುತ್ತಮುತ್ತಲಿನವರಂತೆ ವಿಜೃಂಭಿಸಿ ಖುಷಿ ದೊರೆತು,ಅನರ್ಘ್ಯ ಅನುಭವ ಮೈ ಹೊಕ್ಕಿತು.
ಕುವೆಂಪುರವರ ಕಲ್ಪನೆಯಲ್ಲಿ ಮೂಡಿಬಂದಿರುವ ಪ್ರತಿಯೊಂದು ಪಾತ್ರಗಳು ಅನನ್ಯ ಹಾಗೂ ಅದಮ್ಯವಾಗಿವೆ. ಕುವೆಂಪುರವರ ವಿಸ್ತೃತ ಕಲ್ಪನೆಗೆ ಪ್ರತಿಯೊಂದು ಪಾತ್ರಗಳು ಶರಣಾಗಿವೆ.
ಇಂತಹ ಬೃಹತ್ ಕಾದಂಬರಿಯಲ್ಲಿಯ ಅದ್ಭುತವಾದ ಸಾಹಿತ್ಯವನ್ನು ಸವಿಯುವಂತೆ ಮಾಡಿದ ಆತ್ಮಕ್ಕೆ ನಾ ಸದಾ ಚಿರಋಣಿ.
************************************************************
.
.
ಕಾವ್ಯ ಎಸ್
ಒಳ್ಳೆಯ ವಿಮರ್ಶೆ. ಮಲೆಗಳಲ್ಲಿ ಮದುಮಗಳು ಓದಿದ್ದರೂ ಇನ್ನೊಮ್ಮೆ ಓದುವ ಹಾಗನಿಸುವಂತೆ ಇದೆ. ಖ್ಯಾತನಾಮರುಗಳ ವಿಮರ್ಶೆಗಳಿಗಿಂತ ನಮ್ಮಂತಹ ಸಾಮಾನ್ಯರು ( ಇಲ್ಲಿರುವ ಬರಹಗಾರರು ಖ್ಯಾತನಾಮರಾಗುವುದಿಲ್ಲ ಅಂತಲ್ಲ) ಓದುಗ ದೃಷ್ಟಿಕೋನದಲ್ಲಿ ತಳೆಯುವ ಇಂತಹ ನಿಲುವುಗಳೇ ಮಹತ್ವಪೂರ್ಣವಾಗಿರುತ್ತವೆ. ಅದರಲ್ಲೂ ಕುವೆಂಪು ಅವರ ಸಾಹಿತ್ಯ ಓದುಗರಿಗೆ ಹೆಚ್ಚು ಹತ್ತಿರವಾಗುವುದಕ್ಕೆ ಇಂತಹ ದೃಷ್ಟಿಕೋನಗಳ ಅಗತ್ಯವಿದೆ. ಕುವೆಂಪು ಸಕಲ ಕನ್ನಡ ಜನಮಾನಸವನ್ನು ತಲುಪುವುದಕ್ಕೆ ಈ ರೀತಿಯ ಸರಳ ವಿಮರ್ಶೆಗಳೇ ಹೆಚ್ಚು ಸಹಾಯಕಾರಿ. ಧನ್ಯವಾದ.
ಧನ್ಯವಾದಗಳು ಸರ್