ಹಿರಿಯ ರಂಗಕರ್ಮಿ ಎಚ್.ಜಿ.ಸೋಮಶೇಖರ ಅಗಲಿಕೆ..!

ಹಿರಿಯ ಕಲಾವಿದ ದತ್ತಣ್ಣನವರ ಅಣ್ಣ ಹಿರಿಯ ರಂಗಕರ್ಮಿ ಎಚ್.ಜಿ.ಸೋಮಶೇಖರ ಅಗಲಿಕೆ..!

ಹಿರಿಯ ಕಲಾವಿದ ದತ್ತಣ್ಣ ಅವರ ಅಣ್ಣ 86 ವರ್ಷದ ಹೆಚ್.ಜಿ.ಸೋಮಶೇಖರ ರಾವ್ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸೋಮಣ್ಣ ಇಂದು ಕೊನೆಯುಸಿರೆಳೆದಿದ್ದಾರೆ.

ಬ್ಯಾಂಕ್ ಅಧಿಕಾರಿಯಾಗಿದ್ದ ಸೋಮಣ್ಣನವರಿಗೆ ಸಾಹಿತ್ಯ, ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದವರು. ಇವರು ಅನೇಕ ಪಾಶ್ಚಿಮಾತ್ಯ ಮತ್ತು ಭಾರತೀಯ ನಾಟಕ ಕರ್ತುಗಳ ಕೃತಿಗಳನ್ನು ರಂಗಭೂಮಿಯ ಮೇಲೆ ಜೀವಂತಗೊಳಿಸಿದ್ದವರು. ಇವರು ಚಿತ್ರರಂಗವನ್ನು ಪ್ರವೇಶಿಸಿದ್ದು 1981ರಲ್ಲಿ. ಅದು ಟಿ.ಎಸ್.ರಂಗಾರವರ ನಿರ್ದೇಶನದ ‘ಸಾವಿತ್ರಿ’ ಮೂಲಕ. ಖ್ಯಾತ ನಟ ಅನಿಲ್ ಠಕ್ಕರ್ರವರ ಪ್ರತಿದ್ವಂದಿಯಾಗಿ ಇವರು ನೀಡಿದ ಅಭಿನಯ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ನಂತರ ಸೋಮಣ್ಣ ಅನೇಕ ಚಿತ್ರಗಳಲ್ಲಿ ಭಾವಪ್ರಧಾನ ಮತ್ತು ಹಾಸ್ಯ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದವರು.

ರವೀ ನಿರ್ದೇಶನದ ‘ಮಿಥಿಲೆಯ ಸೀತೆಯರು’ ಇವರ ಅಭಿನಯ ಸಾಮರ್ಥ್ಯವನ್ನು ಸರಿಯಾಗಿ ಗುರುತಿಸುವಂತೆ ಮಾಡಿತು. ರವೀಯವರೇ ನಿರ್ದೇಶಿಸಿದ ಇನ್ನೊಂದು ಚಿತ್ರ ‘ಹರಕೆಯ ಕುರಿ’ಯಲ್ಲಿ ಸೋಮಶೇಖರ ರಾವ್ ನೀಡಿದ ಸೊಗಸಾದ ಅಭಿನಯಕ್ಕಾಗಿ 1992 -93ನೇ ಸಾಲಿನ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತ್ತು.

ಕೆನರಾ ಬ್ಯಾಂಕ್​ನಲ್ಲಿ ಉನ್ನತ ಅಧಿಕಾರಿಯಾಗಿದ್ದು ನಿವೃತ್ತಿ ಹೊಂದಿದ ರಾಯರಿಗೆ ಕನ್ನಡ ರಂಗಭೂಮಿಗೆ ತಮ್ಮ ಸೇವೆಯನ್ನು ಸಲ್ಲಿಸುವುದೇ ನಿಜವಾದ ಕಾಯಕವಾಯಿತು. ಸೋಮಶೇಖರ ರಾಯರ ಬದುಕಿನ ಅನುಭವ ಕಥನವು ಪ್ರಕಟವಾಗಿದೆ. ಕಿರುತೆರೆ, ಚಲನಚಿತ್ರಗಳಿಗಿಂತ ಮಿಗಿಲಾಗಿ ರಂಗ ಕೈಂಕರ್ಯವನ್ನು ಪ್ರೀತಿಸಿದ ರಾಯರು ತಮ್ಮ 86 ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಅವರು ನಮ್ಮನ್ನು ಅಗಲಿದ್ದಾರೆ..!

************************************

ಕೆ.ಶಿವುಲಕ್ಕಣ್ಣವರ

Leave a Reply

Back To Top