ಅಂಕಣ ಬರಹ

ಕವಿತೆ ಅನಂತ ಮೌನಗಳ ಶಬ್ದ ಸಾಗರ

ರಂಜಾನ್ ಹೆಬಸೂರು.‌ಹುಬ್ಬಳ್ಳಿ

ಕವಿತೆಗಳನ್ನು ಯಾಕೆ ಬರೆಯುವಿರಿ?

ಕವಿತೆ ಅಥವಾ ಕಾವ್ಯ ನಮ್ಮೊಳಗಿನ ಒತ್ತಡಗಳನ್ನು ಕಳೆದುಕೊಳ್ಳುವ ಒಂದು ಮಾಧ್ಯಮ ನನ್ನೊಳಗೆ ಒಡಮೂಡುವ ಸೂಕ್ಷ್ಮ ಗ್ರಹಿಕೆಯ ಸಂವೇದನಗಳು , ಒತ್ತಡಗಳು ಸಂಕಟಗಳನ್ನು , ವರ್ತಮಾನದ ತಲ್ಲಣಗಳಿಗೆ ಅನುಸಂಧಾನವಾಗಿಸುವುದು ಮುಖಾಮುಖಿಯಾಗುವುದಕ್ಕೆ ಕಾವ್ಯ ಬರೆಯುತ್ತವೆ ಒಳಗಿನ ಕತ್ತಲೆಗೆ ಬೆಳಕು ಸುರಿಯಲಿಕ್ಕೆ,ಮನುಷ್ಯ ಬದುಕಿನ ಶೋಧಕ್ಕೆ,ಕಾಡುವ ಘಟನೆಗಳಿಗೆ ಚಿತ್ರಗಳಿಗೆ, ನೋವಿಗೆ,ಸಂಕಟಕ್ಕೆ,ತಲ್ಲಣಕ್ಕೆ,ಮಿಡಿಯುವ ಕರುಳಿಗೆ,ಅವಮಾನ ನೋವು,ಹತಾಶೆ,ಕ್ರೋಧ,ಅವ್ಯಕ್ತ ಭಾವಗಳ ಅಕ್ಷರಗಳಿಗೆ ಕಾವ್ಯ ಮಾಧ್ಯಮ ವಾಗುತ್ತದೆ . ಕಾವ್ಯ ಕಾರ್ಯ ಕಾರಣವಿಲ್ಲದೆ ಹುಟ್ಟುವುದಲ್ಲ ಅನುಭವ ಘನೀಕರಣ ಗೊಂಡು ತನ್ನೊಳಗೆ ಹುಟ್ಟಿಸಿಕೊಳ್ಳುತ್ತದೆ ; ಬರೆಸಿಕೊಳ್ಳುತ್ತದೆ.ನನ್ನೊಳಗೆ ಮನೋಗತವಾಗಿ ಹುದುಗಿ ಹದವಾಗಿ ಮೆದುವಾಗಿ ಕಾವ್ಯವಾಗುತ್ತದೆ.

ಕವಿತೆ ಹುಟ್ಟುವ ಕ್ಷಣ ಯಾವುದು?

ಸವಿತಾ ನಾಗಭೂಷಣ ಅವರ ಕವಿತೆಯಂತೆ

ಕವಿತೆ ಎಂದರೆ ” ಚಪಾತಿ ಹಿಟ್ಟಿನಂತೆ ಮಡಚಿದರೆ ಚಿಕ್ಕದಾಗುತ್ತದೆ ಲಟ್ಟಿಸಿದರೆ ಅಗಲವಾಗುತ್ತದೆ.

ಕೆ.ಎಸ್ ನರಸಿಂಹಸ್ವಾಮಿ ಅವರ ಕವಿತೆಯಂತೆ ಅನುಭವದಾಳ ಕೈ ಹಿಡಿದಾಗ ಒಂದು ಕವಿತೆಯಂತೆ.

ಒಟ್ಟಿನಲ್ಲಿ ಕಾವ್ಯ ನನ್ನಂತರಂಗದ ಕತ್ತಲಿಗೆ ಪ್ರತಿಬಿಂಬದ ಬೆಳಕಾಗಿ ಕಾವ್ಯ ವಿದೆ . ಅದು ಕಾಡಿದಾಗ ಮಿಡಿದಾಗ ಕಾವ್ಯ ಸ್ಪುರಣೆಯಾಗುತ್ತದೆ.‌

ಅದೊಂದು ನಿರಾಳವಾಗಿಸುವ ಪ್ರಕ್ರಿಯೆ . ಅದು ದೀರ್ಘ ಕಾಡುವಿಕೆಯ ನಂತರ ಅದೊಂದು ಅನಂತ ಮೌನಗಳ ಶಬ್ದ ಸಾಗರ.

ಕವಿತೆ ಅದು ಒಮ್ಮೆ ಲೆ  ಮೂಕನಿಗೆ ಬಾಯಿ ಬಂದಂಗೆ ಕಂಬಾರನ ಕುಲುಮೆಯಲಿ ಸುಟ್ಟು ಹದವಾಗಿ ಮೆದುವಾದ ಕ್ಷಣ ,ಭೂತ ವರ್ತಮಾನ ಗಮಿಸಿ ಭವಿತವ್ಯಕ್ಕೆ ದಾರಿ ತೋರುವ ಮಂತ್ರಗಳು.

ಹದಗೊಂಡಾಗ ಎದೆ ತೆರೆದ ಮಾತುಗಳು.

ನಿಮ್ಮ ಕಾವ್ಯದ ವಸ್ತು ಏನು? ಕಾಡುವ ವಿಷಯ ಯಾವುದು?

ಪರಕೀಯತೆ, ಅನಾಥ ಪ್ರಜ್ಞೆ, ಲೋಕದ ಸಂಕಟಗಳು, ಏಕಾಂತ ಲೋಕಾಂತವಾದ ವರ್ತಮಾನದ ತಲ್ಲಣಗಳು,ಆತಂಕಗಳು ನನ್ನ ಕಾವ್ಯದಲ್ಲಿ ಕಾಡುವ ವಿಷಯ

ಪ್ರತಿ ಕಾವ್ಯವು ಹಾಗೆ ಮಾಗಿದಂತೆ ಅನುಭವಿಸಿದಂತೆ ಅದರ ಫಲ. ವಯೋಸಹಜವಾಗಿ ಹುಟ್ಟುವ ಆನುಭವ ಆಕಾಂಕ್ಷೆ ಗಳು, ಕನಸುಗಳು, ಆಲೋಚನೆ ಗಳು, ಮನೋಭಾವ ಗಳು ನಮ್ಮ ಕಾವ್ಯವಾಗುತ್ತದೆ.ಹಾಗೆ ಯೇ ವಯೋ ಸಹಜ ಪ್ರೀತಿ ಪ್ರೇಮ, ವಿರಹ ದುಃಖ,ಸಂತೋಷ, ಹುಡುಗಾಟಿಕೆ,ಬಾಲ್ಯ ಕಳೆದ ಕ್ಷಣಗಳು ,ಹರೆಯದ ಕಾಮನೆ,ಪ್ರೀತಿ ಎಲ್ಲವೂ ನನ್ನ ಕಾವ್ಯಗಳಲ್ಲಿ ಪಡಿಮೂಡಿವೆ ಹಾಗೆಯೆ ಎಲ್ಲ ಕವಿಗಳಲ್ಲೂ ಸಹಜವೂ ಹೌದು.

ನಿಮ್ಮ‌ಕಾವ್ಯದಲ್ಲಿ ಬಾಲ್ಯ,‌ಹರೆಯ ಇಣುಕಿದೆಯಾ?

ಹರೆಯದ ಪ್ರೇಮ ಕಾವ್ಯ ಹುಟ್ಟುವ ತಲಕಾವೇರಿ ಬಾಲ್ಯದ ಹುಡುಗಾಟ  . ಹರೆಯದ ಚೆಲ್ಲಾಟ ಕಾವ್ಯವಾಗಿ ಅನುಭವವಾಗಿ ಅನುಭಾವವಾಗಿ ವಯಸ್ಸು ಮಾಗಿದಂತೆ ಕಾವ್ಯ ಗಂಭೀರತೆಯ ಸ್ವರೂಪ ಪಡೆದುಕೊಳ್ಳುತ್ತದೆ.

ಒಂದು ತೊರೆ ಹರಿದು ನದಿಯಾಗಿ ಸಾಗರದಂತೆ ಹರಡುವ ಪ್ರಕ್ರಿಯೆ.

ಪ್ರಸ್ತುತ ರಾಜಕೀಯ ಸಂದರ್ಭಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

 ರಾಜಕೀಯ ಜ್ಞಾನ ಇಲ್ಲವೆನ್ನುವವನು ಈ ದೇಶದ ಅನಕ್ಷರಸ್ಥ.  ರಾಜಕೀಯವೆನ್ನುವುದು  ನಮ್ಮ ಕಲ್ಯಾಣಗೋಸ್ಕರ ನಾವೆ ಮಾಡಿಕೊಂಡ ಒಂದು ಜನಸೇವಕರ  ಗುಂಪು .ಆದರೆ ಲಾಭಕೋರತನವೇ ಈ ಸನ್ನಿವೇಶದ ಪ್ರಧಾನ ಅಂಶವಾಗಿದೆ .ಬಂಡವಾಳ ಶಾಹಿಗಳ ಕಪಿಮುಷ್ಠಿಯಲ್ಲಿ ಸಿಕ್ಕು ಖಾಸಗೀಕರಣದ ಗುಲಾಮತನಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳುವ ನೆಲೆಗೆ ಸಾಗುತ್ತಿದೆ.ಜನಕಲ್ಯಾಣದ ಅಂಶಗಳನ್ನು ಕ್ರೋಢೀಕರಿಸಿ ಕೊಂಡು ಅಭಿವೃದ್ಧಿ ಪಥದತ್ತ ರಾಜಕಾರಣ ಸಾಗಬೇಕಿದೆ

ದೇವರು, ಧರ್ಮದ ಬಗ್ಗೆ ನಿಮ್ಮ ನಿಲುವೇನು?

 ದೇವರು ಧರ್ಮ ಅಪ್ರಸ್ತುತ ವೆನಿಸುವ ದುರಿತ  ಕರೋನಾ ಕಾಲದಲ್ಲಿ ಇದ್ದೇವೆ.  ಆದರೆ ಅದರ ನಂಬಿಕೆಯ ಜೀವಾಲಳವೂ ಇನ್ನೂ ನಮ್ಮನ್ನು ಬದುಕಿಸುತ್ತೀವೆ. ಕ್ರೂರತೆಯ ಕಾಲದಲ್ಲೂ ಧರ್ಮ ದೇವರು ನಮ್ಮನ್ನು ರಕ್ಷಿಸುತ್ತವೆ ಅನ್ನುವ ನಂಬಿಕೆಯ ನ್ನು ಬಲವಾಗಿ ನಂಬಿಕೊಂಡದ್ದು  ನಮ್ಮ  ಭಾರತೀಯ ಪರಂಪರೆ ಆದರೆ ನಮ್ಮ ಹಿರಿಯರು ಧರ್ಮ ಮತ್ತು ದೇವರ ಪರಿಕಲ್ಪನೆಯನ್ನು ಹಿರಿದಾರ್ಥದಲ್ಲಿ ನಂಬಿಕೊಂಡು ಬಂದಿದ್ದರು ಆದರೆ ನಮ್ಮ ವಿಶ್ವಕುಟುಂಬತ್ವವನ್ನು ಸೀಮಿತಗೊಳಿಸಿ  ಆಲೋಚಿಸುತ್ತಿದ್ದೇವೆ ಆ ದಿಕ್ಕಿನಲ್ಲಿ ಚಿಂತಿಸುತ್ತಿದ್ದೇವೆ

ವಿಶಾಲಾರ್ಥದಲ್ಲಿ ಧರ್ಮ ದೇವರ ಪರಿಕಲ್ಪನೆ ಇಂದು ಇಲ್ಲದಾಗಿ ಜಗತ್ತು ಅದಃಪತನದತ್ತ ಸಾಗುತ್ತಿದೆ. ಧರ್ಮ ಮನುಷ್ಯನ ದೃಷ್ಟಿ ಕೋನವನ್ನು ಬದಲಿಸಬೇಕಿದೆ ಎಲ್ಲರೂ ಬದುಕುವ ಮನುಜಮತವನ್ನು ಪ್ರೇರಿಪಿಸುವ ವಾತಾವರಣ ನಿರ್ಮಾಣವಾಗಬೇಕಿದೆ

ಮೂರ್ತ ಅಮೂರ್ತ ಗಳ ಕಲ್ಪನೆ ಇಟ್ಟುಕೊಂಡು ದೇವರು ಧರ್ಮ ನಮ್ಮ ಕೈಯೊಳಗಿನ ಯಂತ್ರಗಳಾಗಿ ಮಾರ್ಪಟ್ಟಿವೆ

ಬಸವಣ್ಣ ಹೇಳಿದಂತೆ  ” ದಯವಿಲ್ಲದ ಧರ್ಮ ಅದಾವುದಯ್ಯ ದಯವೇ ಬೇಕು ಸಕಲ ಪ್ರಾಣೆಗಳಲ್ಲಿ” ಅನ್ನುವ ವಚನದಂತೆ “ದಯೆ ಧರ್ಮದ ಮೂಲಾಧಾರ ವಾಗಬೇಕು. ದೇವರು ಅಂತರಂಗದ ಶಕ್ತಿಯಾಗಬೇಕು ಅದು ಮನುಷ್ಯನ ಕಲ್ಯಾಣ ಬಯಸಬೇಕು ಸಕಲ ಜೀವರಾಶಿಗಳಿಗೆ ಒಳಿತು ಬಯಸಬೇಕು

ಧರ್ಮ ಮಿತಿಗಳಿಂದ ತುಂಬಿ ಮನುಷ್ಯ ನ ಅಧಃಪತನಕ್ಕೆ ಹಾದಿಯಾಗಬಾರದು

ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ?

ಮೊಹಮ್ಮದ್ ದರ್ವೇಶಿ ಹೇಳಿದಂತೆ ಕಾವ್ಯ ಚರಿತ್ರೆಯನ್ನ ಬದಲಿಸುತ್ತದೋ ಇಲ್ಲವೋ ಗೊತ್ತಿಲ್ಲ ಕವಿತೆ ವರ್ತಮಾನವನ್ನ ಬದಲಿಸುತ್ತದೋ ಇಲ್ಲವೋ ಗೊತ್ತಿಲ್ಲ ಆದರೆ ಅದು ಕವಿಯನ್ನ ಮಾತ್ರ ಬದಲಾಯಿಸುತ್ತದೆ ಎನ್ನುವಂತೆ ಜಿಎಸ್ ಶಿವರುದ್ರಪ್ಪ ಅವರು ಹೇಳಿದಂತೆ ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ನನಗೆ ಕಾವ್ಯ ಎಂದರೆ ಕಾವ್ಯ ನನ್ನನ್ನು ಮೊದಲು.  ನಂತರ ತನ್ನ ಸುತ್ತಲಿನ ಸಮಾಜವನ್ನು ಒಂದಿಷ್ಟು ಎಚ್ಚರ ವಿವರಿಸಲು ಈ ಎಚ್ಚರಿಕೆ ಅನೇಕ ಮಾಧ್ಯಮಗಳಿದ್ದರೂ ಕಾವ್ಯ ಅದರಲ್ಲೊಂದು ಕೊಳದ ತಳ ಗೊಡೆ ಗೆದ್ದಾಗ ಅದು ತಿಳಿಯಾಗಲು ಕಾವ್ಯದ ಕೆರೆಯೂ ತಿಳಿಗೆ ಕಾರಣವಾಗುತ್ತವೆ .ಸಾಹಿತ್ಯದಿಂದ ಎಲ್ಲವೂ ಬದಲಾವಣೆಯಾಗುತ್ತದೆ ಎಂದು ಕನಸು ಕಂಡವರಲ್ಲ ಅದು ಬದಲಾವಣೆಗೆ ಪ್ರಖರ ಆಯುಧ ಎನ್ನುವುದರಲ್ಲಿ ಸಂಶಯವಿಲ್ಲ

ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಕವಿ ಸಾಹಿತಿ ಯಾರು?

 ಆಂಗ್ಲಭಾಷೆ ಗಿಂತಲೂ ಹೆಚ್ಚು ಕನ್ನಡದಲ್ಲಿ ಅನೇಕ ಕವಿಗಳು ನಮ್ಮನ್ನು ಕಾಡಿದ್ದಾರೆ ಬೇಂದ್ರೆ.  ಮತ್ತು ಕುವೆಂಪು.‌

ಸು. ರಂ .ಎಕ್ಕುಂಡಿ .ಸತೀಶ್ ಕುಲಕರ್ಣಿ .

ದೇವನೂರ ಮಹಾದೇವ.

ಕಾರ್ನಾಡ,  ಸಿದ್ಧಲಿಂಗಯ್ಯ. ಎಚ್ ,ಎಸ್, ಶಿವಪ್ರಕಾಶ್.‌ ಕೆ. ಷರೀಫಾ,  ಬಾನು ಮುಷ್ತಾಕ್ ಇವರೆಲ್ಲರೂ ನನ್ನ ಇಷ್ಟದ  ಕವಿಗಳು.‌

ಇತ್ತೀಚೆಗೆ ಓದಿದ ಕೃತಿಗಳು ಯಾವವು?

 ಲಂಕೇಶರ ಅಕ್ಷರ ಹೊಸ ಕಾವ್ಯ.‌ ನೀಲು ಕವಿತೆಗಳು,

ಚನ್ನಪ್ಪ ಅಂಗಡಿಯವರ ಸ್ತೋಮ ಕಥಾಸಂಕಲನ.  ಕಿರಸೂರ ಗಿರಿಯಪ್ಪ ಅವರ ಅಲೆ ನದಿ ,  ಎಸ್.‌ ಮಕಾಂದಾರ್ ಅವರ ಅಕ್ಕಡಿ ಸಾಲು ಇತ್ತೀಚೆಗೆ ನಾನು ಓದಿದ ಸಂಕಲನಗಳು.

 ನಿಮಗೆ ಇಷ್ಟವಾದ ಕೆಲಸ ಯಾವುದು?

 ನನಗೆ ಇಷ್ಟವಾದ ಕೆಲಸ ಮಕ್ಕಳ ಜೊತೆ ಆಟ ಆಡುವುದು ಪಾಠ ಮಾಡುವುದು.

 ನಿಮಗೆ ಇಷ್ಟವಾದ ಸ್ಥಳ ಯಾವುದು?

ಕಡಲತೀರ ,ದಟ್ಟ ಪ್ರಕೃತಿಯ ಮಡಿಲು, ಅಸೀಮ ಬಯಲು

ಇಷ್ಟವಾದ ಸಿನಿಮಾ ಯಾವುದು ?

 ನನಗೆ ಇಷ್ಟವಾದ ಸಿನಿಮಾ ಮಯೂರ ಹುಲಿಯ ಹಾಲಿನ ಮೇವು ಮೈ ಅಟೋಗ್ರಾಫ್ ಮುಂಗಾರು ಮಳೆ

ನೀವು ಮರೆಯಲಾಗದ ಘಟನೆ ಯಾವುದು?

 ಅವಳ ನೆನಪುಗಳು, ವಿಕೃತಗೊಂಡ ಸಮಾಜದ ಕಹಿ ಘಟನೆಗಳು, ಸದಾ ಕಾಡುವ ಸಂಕಟಗಳ ಸಂವೇದನೆಗಳು.

***************************************

ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Leave a Reply

Back To Top