ಅಂಕಣ ಬರಹ
ಹೊಸ ದನಿ-ಹೊಸ ಬನಿ-೧೧
ಭಾವಕ್ಕಿಂತಲೂ ಬುದ್ಧಿಯ ನಡೆಯಲ್ಲೇ
ತವಕಿಸುವ ದಿಲೀಪ ಕುಮಾರ್ ಪದ್ಯಗಳು.
ಹೊಸ ಕಾಲದ ಹುಡುಗ ಹುಡುಗಿಯರು ಫೇಸ್ಬುಕ್ ವಾಟ್ಸ್ ಆಪಿನಂಥ ಸಾಮಾಜಿಕ ಜಾಲತಾಣದಲ್ಲಿ ಬರೆದುದನ್ನು ತಿದ್ದುವ ಮೊದಲೇ ಪ್ರಕಟಿಸಿ ಬಿಡುವುದರಿಂದ ನಿಜಕ್ಕೂ ಕವಿತೆಗಳಾಗುವ ತಾಕತ್ತಿದ್ದ ರಚನೆಗಳು ಕೂಡ ಗರ್ಭಪಾತಕ್ಕೆ ಸಿಲುಕಿ ಅಂಥ ತಾಣಗಳಲ್ಲೇ ತಿಣುಕುತ್ತಿರುವ ಕೆಲವರ ಲೈಕು ಈಮೋಜಿ ಕಮೆಂಟುಗಳಿಂದಲೇ ಉಬ್ಬಿ ಹೋಗಿ ಆ ಕವಿ ಮಿಣುಕುಗಳು ನಕ್ಷತ್ರಗಳಾಗುವ ಮೊದಲೇ ಉರಿದು ಬಿದ್ದು ಹೋಗುತ್ತಿರುವ ಕಾಲವಿದು.
ಅಪರೂಪಕ್ಕೆ ಹೊಸತಲೆಮಾರಿನ ಕೆಲವು ಹುಡುಗ ಹುಡುಗಿಯರು ತಮ್ಮ ಓದಿನ ಪ್ರಖರ ದಾರಿಯಿಂದ ಸ್ಪೂರ್ತಿಗೊಂಡು ಕಾವ್ಯ ಕ್ರಿಯೆಯಲ್ಲಿ ತೊಡಗಿರುವುದು ಸಂತಸದ ವಿಚಾರ. ಕನ್ನಡ ಮಾಧ್ಯಮದಲ್ಲಿ ಓದುವುದಿರಲಿ, ಮಾತನಾಡುವವರೂ ವಿರಳರಾಗುತ್ತಿರುವ ಹೊತ್ತಲ್ಲಿ ಈಗಾಗಲೇ ತಮ್ಮ ಹರಿತ ವಾಗ್ಝರಿ ಮತ್ತು ಮೊನಚು ವಿಮರ್ಶೆಯ ಮೂಲಕ ಪ್ರಸಿದ್ಧರಾಗಿರುವ ಚಾಮರಾಜ ನಗರದ ಯುವಕವಿ ಆರ್.ದಿಲೀಪ್ ಕುಮಾರ್ ತಮ್ಮ ಮೊದಲ ಕವನ ಸಂಕಲನ ” ಹಾರುವ ಹಂಸೆ” ಯನ್ನು ಪ್ರಕಟಿಸಿದ್ದಾರೆ.
ಚಿಕ್ಕವಯಸ್ಸಿನಿಂದಲೇ ಸಾಹಿತ್ಯ, ಸಂಗೀತ ಮತ್ತು ಚಿತ್ರಕಲೆಗಳಲ್ಲಿ ಸಮಾನ ಆಸಕ್ತಿಯಿಂದ ಸದ್ಯ ಕಾವ್ಯ, ವಿಮರ್ಶೆ, ಭಾಷಾಂತರ, ಸಂಶೋಧನೆ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಯು.ಜಿ.ಸಿ ಸೆಮಿನಾರ್ ಗಳಲ್ಲಿ ಸಂಶೋಧನಾ ಲೇಖನಗಳನ್ನು ಮಂಡಿಸಿದ್ದು ಅವರ ಲೇಖನಗಳು ಮೆಚ್ಚುಗೆ ಪಡೆದಿವೆ. ಚಾಮರಾಜನಗರದ ಪ್ರಾದೇಶಿಕ ಪತ್ರಿಕೆಯಲ್ಲಿ ಹಲವು ಲೇಖನಗಳು ಪ್ರಕಟವಾಗಿದೆ. ಮಯೂರದಲ್ಲಿ ಮೊದಲು ಕವನವೊಂದು ಪ್ರಕಟವಾಗಿದ್ದು, ಆನಂತರ ಅಂತರ್ಜಾಲ ಪತ್ರಿಕೆಯಾದ ಕೆಂಡಸಂಪಿಗೆಯಲ್ಲಿ ಮತ್ತು ಜಾಲತಾಣ ಸುಗಮದಲ್ಲಿ ಕವನಗಳು ಪ್ರಕಟವಾಗಿದೆ. “ಹಾರುವ ಹಂಸೆ” ಕವನ ಸಂಕಲನವು ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಯೋಜನೆಯ ಅಡಿಯಲ್ಲಿ ಗೋಮಿನೀ ಪ್ರಕಾಶನದಿಂದ ಪ್ರಕಟವಾದ ಮೊದಲ ಕವನ ಸಂಕಲನವಾಗಿದೆ .
ಡಾ.ಮೂಡ್ನಾಕೂಡು ಚಿನ್ನಸ್ವಾಮಿ ತಮ್ಮ ಮುನ್ನುಡಿಯ ಮೂಲಕ ಈ ಯುವ ಕವಿಯ ಸಾವಯವ ಸಾಮರ್ಥ್ಯವನ್ನು ಎತ್ತಿಹಿಡಿದಿದ್ದಾರೆ. ಹಾಗೇ ಎಚ್ಚರಿಕೆಯ ಮಾತನ್ನು ಬಲು ಸೂಕ್ಷ್ಮವಾಗಿ ಹೇಳಿದ್ದಾರೆ. ಬೆನ್ನುಡಿಯಲ್ಲಿ ಡಾ.ಎಚೆಸ್ವಿ ಕೂಡ ಬಹಳ ಮೌಲಿಕವಾದ ಮಾತನ್ನು ಬರೆದಿದ್ದಾರೆ. ಕವಿ ತನ್ನ ಮಾತಲ್ಲಿ ತನ್ನ ಕಾವ್ಯ ಕರ್ಮದ ಹಿಂದಣ ಸಿದ್ಧತೆಯನ್ನು ಸರಳವಾಗಿ ಬಿಚ್ಚಿಟ್ಟಿದ್ದಾರೆ.
ಸಂಕಲನದಲ್ಲಿ ಒಟ್ಟು ಐವತ್ತೊಂದು ಕವಿತೆಗಳಿವೆ. ನವ್ಯದ ನುಡಿಗಟ್ಟುಗಳೇ ಶೀರ್ಷಿಕೆಯಾಗಿರುವ ಸಂಕಲನದ ಎಲ್ಲ ಕವಿತೆಗಳ ತಲೆಬರಹವನ್ನು ಸಣ್ಣದೊಂದು pause ಕೊಟ್ಟು ಓದಿದರೆ ಅದೇ ಮತ್ತೊಂದು ಕವಿತೆಯಾಯಿತು! ಇಂಥ ಭಾಗ್ಯ ಮತ್ತು ಅನುಕೂಲ ಕವಿತೆಯ ಬಗ್ಗೆ ಭರವಸೆ ಮತ್ತು ಅಧ್ಯಯನದ ಮೂಲಕವೇ ಕವಿ ಬೆಳೆದಿರುವುದರ ಸೂಚನೆಯಾಗಿದೆ.
ಅಡಿಗರ ಜೊತೆಜೊತೆಗೇ ಅಲ್ಲಮ ಇಣುಕುವಾಗಲೇ ಕೆ ಎಸ್ ನ ಕೂಡ ಈ ಕವಿಯ ಜೊತೆಗೆ ಹೆಜ್ಜೆ ಇಕ್ಕುತ್ತಾರೆ. ಇನ್ನೂ ಮಜವೆಂದರೆ ಚಾಮರಾಜನಗರ ಪ್ರದೇಶದ ಮೌಖಿಕ ಕಾವ್ಯ ಪರಂಪರೆಯ ಸೊಗಡಿನ ವಾಸನೆ ಕೂಡ ಮೂಗನ್ನು ಅರಳಿಸುತ್ತದೆ.
ಪ್ರಾರ್ಥನೆ, ಬಿನ್ನಹ, ಒಂದು ಭಾವ, ಕೊಡು, ನೋ, ಸತ್ತಿಗೆ ಮುಂತಾಗಿ ಶೀರ್ಷಿಕೆಗಳನ್ನೇ ಓದುತ್ತ ಹೋದರೆ ಮತ್ತೊಂದು ಕವಿತೆ ಹುಟ್ಟುವುದು ಈ ಕವಿಯನ್ನು ಭರವಸೆಯಿಂದ ನಿಜದ ಅರಿವು ಮತ್ತು ಅಧ್ಯಯನ ಮಾಗಿಸಿದ ತಾತ್ವಿಕತೆಗೆ ಭೇಷ್ ಅನ್ನುತ್ತೇನೆ.
ದಿಲೀಪ್ ಈಗಾಗಲೇ ಒಂದು ಸಂಕಲನ ಪ್ರಕಟಿಸಿ ತುಂಬ ಹೆಸರು ಮಾಡಿದವರು. ಅಲ್ಲದೆ ತುಂಬ ಕಿರಿಯ ವಯಸ್ಸಿನ ವಿಮರ್ಶಕರು ಕೂಡ ಹೌದು. ಪಂಪನನ್ನು ವರ್ತಮಾನದಲ್ಲಿ ಅರಿತಿರುವ ಯುವಕರ ಪೈಕಿ ದಿಲೀಪ್ ಮೊದಲು ನೆನಪಾಗುತ್ತಾರೆ. ಅವರ ಫೇಸ್ಬುಕ್ ಬರಹಗಳಲ್ಲಿ ಬರಿಯ ಕವಿತೆಗಳಲ್ಲದೇ ನಾಡು, ನುಡಿ, ಸಂಸ್ಕೃತಿ, ರಾಜಕಾರಣವೂ ಸೇರಿದಂತೆ ಬದುಕಿನ ಎಲ್ಲ ಸ್ತರಗಳ ದರ್ಶನದ ಜೊತೆಗೇ ಶಾಸ್ತ್ರೀಯ ಸಂಗೀತದ ಕುರಿತ ಟಿಪ್ಪಣಿಗಳೂ ಹಾಗೂ ಈ ಕವಿಯನ್ನು ಬಹಳವಾಗಿ ಪ್ರಭಾವಿಸಿದವರ ಕುರಿತೂ ಇವೆ. ನಮ್ಮಲ್ಲಿ ಬಹುತೇಕರ ಫೇಸ್ಬುಕ್ ಪುಟಗಳು ಸ್ವಂತದ ಪಟ, ಸಾಮಾಜಿಕ ಘಟನೆಯೊಂದರ ಬಿಡುಬೀಸು ಹೇಳಿಕೆಗಳಾಗಿ ಬದಲಾಗುತ್ತಿರುವ ಕಾಲದಲ್ಲಿ ಎಲ್ಲೋ ಅಪರೂಪಕ್ಕಷ್ಟೇ ಕಾಣುವ ದಿಲೀಪನಂಥವರ ಪುಟಗಳು ಇನ್ನೂ ಅಲ್ಪ ಸ್ವಲ್ಪ ಉಳಿದಿರುವ ಮಾನವೀಯತೆಯ ಮುಖವನ್ನೂ ನಿಜಕ್ಕೂ ಆಗಬೇಕಿರುವ ನಿಜದ ಕೆಲಸಗಳನ್ನೂ ಹೇಳುತ್ತವೆ. ಜೊತೆಗೇ ಪರಂಪರೆಯನ್ನೂ ಪೂರ್ವ ಸೂರಿಗಳನ್ನೂ ಗೌರವಿಸುವ ಈ ಕವಿಯ “ಹಾರುವ ಹಂಸೆ” ಸಂಕಲನದ ಶೀರ್ಷಿಕೆಯೇ ಮೂಲತಃ ಕಂಬದಲಿಂಗನೆಂಬ ಹೆಸರಲ್ಲಿ ವಚನಗಳನ್ನು ಬರೆದ ಕಂಬದ ಮಾರಿತಂದೆಯೆಂಬ ವಚನಕಾರನ ವಚನದಿಂದ ಪ್ರಭಾವಿಸಲ್ಪಟ್ಟ ಕುರುಹಾಗಿದೆ.
ಮಹಾ ಘೋರಾರಣ್ಯದಲ್ಲಿ ಹೋಗುತ್ತಿರಲಾಗಿ
ಆಡುವ ನವಿಲ ಕಂಡು,
ಹಾರುವ ಹಂಸೆಯ ಕಂಡು,
ಕೂಗುವ ಕೋಳಿಯ ಕಂಡು,
ಬೆಳಗಾಯಿತ್ತೆಂದು ಹೋಗುತ್ತಿದ್ದೆ ಕದಂಬಲಿಂಗದಲ್ಲಿಗೆ.
ಇನ್ನು ಹೆಚ್ಚು ವಿಸ್ತರಿಸುತ್ತ ಹೋದರೆ ಸ್ವಾರಸ್ಯ ಕೆಟ್ಟೀತೆಂಬ ವಿವೇಕದಲ್ಲಿ ದಿಲೀಪರ ಕೆಲವು ಕವಿತೆಗಳನ್ನು ಪರಿಶೀಲಿಸುವ ಕೆಲಸ ಮಾಡೋಣ.
ಕೇಳಬೇಕು ಸಿಕ್ಕಾಗ
ಒಂದು ನದಿಯಿಂದ ಹರಿಯಿತೇ ಬದುಕು
ಸಪ್ತಕಂದಕಗಳ ದಾಟಿ
ನಿಲ್ಲಿಸಿ
ಇಳಿಸಿತ್ತೇ
ಸಹಸ್ರಾರದ ಮೇಲೆ
ಎಂದು ಪ್ರಾರಂಭವಾಗುವ ದಿಲೀಪರ ಬುದ್ಧನಿಗೆ ಹೆಸರಿನ ಕವಿತೆ ಈ ಕವಿಯು ಅನುಸರಿಸುತ್ತಿರುವ ದಾರಿಯನ್ನು ಮತ್ತು ಅವರು ನಂಬಿರುವ ನೆಚ್ಚಿರುವ ದಾರಿಯನ್ನೂ ತೋರುತ್ತಿದೆ.
ಅಂದ ಮಾತ್ರಕ್ಕೇ ಇವರ ಪದ್ಯಗಳು ಸರ್ವ ಗುಣ ಸಂಪನ್ನತೆಯನ್ನೇನೂ ಹೊಂದಿಲ್ಲ. ಅಪರೂಪಕ್ಕೆ ಅವರಿವರ ಮೇಲೆ ಏರಿ ಹೋಗುವ ಚಾಳಿಯ ಜೊತೆಗೇ ವ್ಯಂಗ್ಯದ ಮಾತೂ ಹೀಗೆ ಹೊರಬೀಳುತ್ತವೆ;
ಅವನೊಬ್ಬನಿದ್ದ ಗೆಳೆಯ
ಗಾಜಿನ ಬಾಟಲಿ ಸದ್ದಾದಾಗ ಓಡಿ ಬರುತ್ತಿದ್ದ
ಬಾಟಲಿ ತರೆಯುವಾಗ ಓಪನರ್ ಕೊಡುತ್ತಿದ್ದ
ಲೋಟಕ್ಕೆ ಸುರಿದಾಗ ಸೋಡದ ಹಾಗೆ
ಮುಖ ಉಬ್ಬಿಸಿ ಕೈ ಅಲುಗಾಡಿದೆ ಹಿಡಿದು
ಮುತ್ತಿಕ್ಕಿಸಿ ಲೋಟಕ್ಕೆ ಲೋಟ
ಒಟ್ಟಿಗೆ ಕೂರುತ್ತಿದ್ದ (ದುರಿತ ಕಾಲ)
ಜೊತೆಗೇ “ತೀರ್ಥಪುರದವರು ಸಿಕ್ಕಿದ್ದರು ” ಥರದ ಕವಿತೆಗಳಲ್ಲಿ ಕಾಣುವ “ತೀರ್ಥರೂಪ”ರನ್ನೂ ನಾವು ಅರಿಯಬೇಕು.
ವೈರಾಗ್ಯಕ್ಕೆ ಹೊತ್ತು ಗೊತ್ತಿಲ್ಲ
ಗಂಟೊಳಗಿನ ಸ್ವಾದದ ಆಸ್ವಾದನೆಯ ಸಾಧನೆಯ ತುದಿ ಅದೆ
ಹಾದಿ ಬೇರೆ ಬೇರೆ ಅಷ್ಟೆ
ಒಂದೊಂದು ರುಚಿಯಲೂ ಇರುವ ಸ್ವಾದ ಕಠಿಣವೆನಿಸಿದರೆ
ನಿನ್ನ ಬದುಕೂ ಬಲು ಕಠಿಣವಾಗಿದೆ
ಒಂದೊಂದು ಭಾಷೆಯ ಲೀಲೆಯಲೂ ಮನದ ಕೊನೆ ಹಾರಬೇಕು (ತೀರ್ಥಪುರದವರು ಸಿಕ್ಕಿದ್ದರು).
“ಕವಿತೆಯಲ್ಲದ ಕವಿತೆ”ಯಂಥ ರಚನೆಗಳಲ್ಲಿ ಹಿತೋಪದೇಶ ಕೂಡ ಇದೆ.
ಜನಸಾಗರ ರಕ್ತದ ಮಡುವಲ್ಲಿ
ತೇಲಿ ಮುಳುಗಿ ಈಜುವಾಗ
ನನ್ನೀ ಪ್ರೇಮಾಖ್ಯಾನದ
ಪುಟ ಪುಟವನೂ ಬಿಡದೆ
ಲೋಲುಪನಾಗಿ ಪ್ರೀತಿಯಲಿ ಓದುವೆ
ನನಗೆರಡು ಕಿವಿ ಬೇಡವೆ
ನಾನೂ ಕವಿಯಲ್ಲವೇ (“ಗೆ”)
ಎಂದು ಬೀಗುವ ವಾಸ್ತವದ ಕವಿಗಳನ್ನು ಚುಚ್ಚುತ್ತಾರೆ ಕೂಡ.
ಸ್ವಂತದ ಕವಿತೆಗಳ ಜೊತೆಗೇ ಭರ್ತೃಹರಿಯಂಥ ಹಿರಿಯರನ್ನು ಕನ್ನಡಕ್ಕೆ ಒಗ್ಗಿಸುವ ಅನುವಾದದ ಕೆಲಸಕ್ಕೂ ಇವರು ಕೈ ಹಾಕಿರುವುದು ಸಂತಸದ ಕೆಲಸ.
ಇಂದು
ಮತ್ತೆ ಮಳೆ
ಅದೇ ರಸ್ತೆಯಲಿ ಇದ್ದೇನೆ
ರಸ್ತೆ ಕೊನೆಯಲ್ಲೆ ಕಣ್ಣಿದೆ
ಗುರುತುಗಳೆಲ್ಲಾ ಅಳಿಸಿ ಕಾಲವಾಗಿದೆ
ಇಲ್ಲೆಲ್ಲಾ ಹೆಜ್ಜೆಗುರುತಿದೆ
“ಮತ್ತೆ ಮಳೆ” ಪದ್ಯದ ಸಾಲುಗಳ ಮೂಲಕ ತನ್ನಲ್ಲೂ ಇರುವ ಹತಾಶ ಪ್ರೇಮಿಯ ಹುಯಿಲನ್ನೂ ಇವರು ಕಾಣಿಸುವ ರೀತಿ ಹೊಸ ಪರಿಯದ್ದು. ದಿಲೀಪರ ಎಲ್ಲ ಪದ್ಯಗಳನ್ನೂ ಒಟ್ಟಿಗೆ ಹರಡಿಕೊಂಡು ಕೂತರೆ ಅವರೊಳಗಿನ ಕವಿಗೆ ಅನುಭವದ ಹದಕ್ಕಿಂತ ಓದಿನ ಮೂಲಕವೇ ಪಡೆದ ಜ್ಞಾನವೇ ಕೆಲಸ ಮಾಡುವುದು ಅರಿವಾಗುತ್ತದೆ. ಆ ಕಾರಣಕ್ಕೇ ದಿಲೀಪ್ ಹೃದಯದ ಪದ್ಯಗಳಿಗಿಂತ ಬುದ್ಧಿಯ ಬಲದ ಪದ್ಯಗಳ ರಚನೆಯಲ್ಲೇ ಹೆಚ್ಚು ಆಸಕ್ತರಾಗಿರುವ ಕಾರಣಕ್ಕೋ ಏನೋ ಅವರು ವರ್ತಮಾನದ ಸಂಗತಿಗಳಿಗಿಂತಲೂ ಐತಿಹ್ಯದ ಪುರಾವೆಗಳ ಬೆನ್ನುಹತ್ತುತ್ತಾರೆ ಮತ್ತು ಆ ಕಾರಣಕ್ಕೇ ನವ್ಯವು ಕಲಿಸಿಕೊಟ್ಟ ಪ್ರತಿಮೆ ಮತ್ತು ತಮ್ಮ ಅಪಾರ ಓದಿನ ಕಾರಣದಿಂದ ಕಲ್ಪಿಸಿಕೊಂಡ ರೂಪಕಗಳಲ್ಲೇ ತೊನೆಯುತ್ತಾರೆ. ನಿಜದ ಕವಿ ಇದನ್ನು ಮೀರದ ಹೊರತೂ ತನ್ನದೇ ಹಾದಿಯನ್ನು ನಿರ್ಮಿಸಿಕೊಳ್ಳಲಾರ. ಅದು ಅವರಿಗೂ ಗೊತ್ತಿದೆ. ಈ ಮಾತಿಗೆ ಸಾಕ್ಷಿಯಾಗಿ “ಪುರಂದರರಿಗೆ” ಕವಿತೆಯ ಈ ಸಾಲುಗಳನ್ನು ನೋಡಬಹುದು;
ಈಗ ಆರಂಬ ಮಾಡಿದ್ದೇನೆ
ಒಂದಷ್ಟು ಮೋಡಿಯ ಮಾಯದಮಳೆ ಬಂದಿದೆ
ನಾದದಲಿ ಪಚ್ಚೆತೆನೆ ಹುಲುಸಾಗಿ ಬೆಳೆಯಲು
ಉಸಿರಾಗಿ ಕೈ ಹಿಡಿದು ನಡೆಸಬಹುದು
ಒಳಗಿನ ಮೂಲೆ ಮೂಲೆಯಲೆಲ್ಲ ಇಂದೂ ಕೇಳುತಿದೆ
ನೀವು ಎಂದೋ ಮೀಟಿದ ತಂಬೂರಿ
ದನಿಯ ಮಾರ್ದನಿ.
“ಪುರಂದರರಿಗೆ” ಎಂದು ಹೇಳುವ ಪದ್ಯ ಸ್ವತಃ ಕವಿ ತನಗೆ ತಾನೇ ಹೇಳಿಕೊಳ್ಳುತ್ತಲೇ ಜೊತೆಗೇ ಇರುವವರ ಕಕ್ಕುಲಾತಿ ಮತ್ತು ವಿಸ್ಮೃತಿಗಳ ನಡುವೆ ಜೀಕುತ್ತದೆ ಮತ್ತು ಈ ಕವಿಯ ಮೆಚ್ಚಲೇ ಬೇಕಾದ ಪದ್ಯಗಳಲ್ಲಿ ಒಂದಾಗಿದೆ. ಇದನ್ನು ವಿಸ್ತರಿಸುವ ಹಾಗೆ ಇರುವ “ಒಮ್ಮೆಲೇ ಹೀಗಾಗಿಬಿಟ್ಟರೆ ಹೇಗೆ” ಹೆಸರಿನ ಪದ್ಯದಲ್ಲಿ ಇರುವ ಅಂತಃಶಕ್ತಿ ಬೆರಗು ಹುಟ್ಟಿಸಿ ಈ ಕವಿಯು ಮುಂದೆ ನೇಯಬಹುದಾದ ಕವಿತೆಯ ಚಮತ್ಕಾರಿಕ ಪದ ಸಂಚಯದ ವಿಶೇಷವಾಗಿಯೂ ಕಾಣಬಹುದು.
ಒಳಗೆ ಬೆಂಕಿ
ಹೊರಗೂ
ಕನಸಲ್ಲಿ ಬೆಂಕಿ ಉರಿ ತಾಕಿ
ಮೈ ಉರಿದು ಸುಟ್ಟು ಕರಕಲಾದ
ಕನಸು ಬಿದ್ದ ಕ್ಷಣ
ಮೈ ಕೈ ಕೊಡವಿ
ಗಡಿಬಿಡಿಯಲ್ಲಿ ಎದ್ದು
ಕನ್ನಡಿ ಎದುರು
ಬಲಗೈ ಎಂದು ಮುಟ್ಟಿದಾಗ ಎಡಗೈ
ಎಡಗೈ ಎಂದು ಮುಟ್ಟಿದಾಗ ಬಲಗೈ
ನೋಡಿಕೊಂಡು
ಮುಖ ಮೈ ಕೈ ಎಲ್ಲಾ ಸವರಿಕೊಂಡು
ನೀರು ಕುಡಿದ ತಕ್ಷಣ
ಅನುಮಾನ ಶುರುವಾದದ್ದು
ಬೆಂಕಿ ಬಿದ್ದದ್ದು
ಆ ಕೈ ಗಾ ಈ ಕೈ ಗಾ
ಮುಟ್ಟಿದ್ದು ನಿದ್ದೆಯಲ್ಲಾ
ಅಥವಾ
ಎಚ್ಚರದಲ್ಲಾ
ಬೆಂದು ಬೂದಿಯಾಗಿದ್ದು
ಒಳಗಾ
ಹೊರಗಾ
ನಿಜಕ್ಕೂ ಈ ಬಗೆಯ ದ್ವಂದ್ವವೇ ಪದ್ಯದ ಆಂತರ್ಯವಾದರೆ ಅದರ ಮುಂಬಗೆಯ ಬೆಂಕಿಯ ಹದ ಹುಟ್ಟಿಸುವ ಶಾಖಕ್ಕೆ ಪರ್ಯಾಯವಾಗುವುದು ಮತ್ತೊಂದು ಪದ್ಯವೇ ತಾನೆ?
ಆದರೆ ಸಾವು ಕೂಡ ಎಲ್ಲ ಕವಿಗಳನ್ನು ಕಾಡುವ ಅನಿವಾರ್ಯ ವಸ್ತುವಾದ್ದರಿಂದ ದಿಲೀಪ ಹೀಗೆ ಹೇಳುತ್ತಾರೆ;
ಕರಿನೆರಳು ಎದುರುಗೊಂಡಂತೆ
ಮಕ್ಕಳು ಆಟಿಕೆ ತೆಗೆದೆಸೆದಂತೆ ಅತ್ತ ಇತ್ತ
ಜೀವದಲಿ ಉನ್ಮಾದದಾಟ ಪಕ್ಕಸರಿದಂತೆ
ಆಸೆ ಪಡುವ ಜೀವ ಜೀಕಿದಂತೆ
ಕತ್ತಲೆಗೂ ಬೆಳಕಿಗೂ
ಜೋಕಾಲಿಯಾಟ
ಸರಿ, ಬದುಕಿನ ಮುಖಗಳನ್ನೇ ಇನ್ನೂ ಅರಿಯದ ಹುಡುಗರು ಹೀಗೆ ಸಾವಿಗೆ ಮರುಗುವುದು ಕೂಡ ಕರೋನಾ ಕಲಿಸಿದ ಪಾಠವೇ ಇರಬೇಕು!
ದಿಲೀಪ್ ತಮ್ಮ ಓದಿನ ಮೂಲಕ ಕಡ ಪಡೆದ ಸಂಗತಿಗಳಾಚೆ ನಿಜ ಬದುಕಿನ ಪಲುಕುಗಳನ್ನು ಅರಿತವರಾದರೂ ಅವರ ಮೊದಲ ಪ್ರಾಶಸ್ತ್ಯ ಸಲ್ಲುವುದು ಓದಿನ ಮೂಲಕ ಪಡೆದ ಅರಿವಿನ ಕಡೆಗೇ. ಅವರ ಓದಿನ ಹರಹು ಸಮೃದ್ಧವಾದದ್ದು ಹೌದಾದರೂ ವರ್ತಮಾನದ ರಿಕ್ತತೆಯನ್ನು ಮತ್ತು ಸ್ವಂತ ಅನುಭವಗಳ ಮೂಲಕ ಅರಿಯುವ ಬದುಕಿನ ವಿಷಣ್ಣತೆ ಕೂಡ ಕಾವ್ಯೋದ್ಯೋಗಕ್ಕೆ ಪೋಷಾಕನ್ನೂ ಪಕ್ವಾನ್ನವನ್ನೂ ಪಡೆಯುವ ಸಾಧನವೆಂಬುದನ್ನು ತಮ್ಮ ಮುಂದಿನ ಪದ್ಯಗಳ ಮೂಲಕ ಸಾಬೀತು ಪಡಿಸಲಿ ಎನ್ನುವ ಆಶಯದೊಂದಿಗೆ ಅವರ ಫೇಸ್ಬುಕ್ ಕವಿತೆಗಳ ಓದಿನ ಟಿಪ್ಪಣಿಯನ್ನು ಕೊನೆ ಮಾಡುವ ಮೊದಲು ಅವರ ಆಯ್ದ ಆರು ಕವಿತೆಗಳನ್ನು ನಿಮ್ಮ ಓದಿಗಾಗಿ ಶಿಫಾರಸು ಮಾಡುತ್ತಿದ್ದೇನೆ.
****************************************************************
ದಿಲೀಪ ಕುಮಾರ್ ಅವರ ಆಯ್ದ ಕವಿತೆಗಳು
೧. ಬುದ್ಧನಿಗೆ
ಕೇಳಬೇಕು ಸಿಕ್ಕಾಗ
ಒಂದು ನದಿಯಿಂದ ಹರಿಯಿತೇ ಬದುಕು
ಸಪ್ತಕಂದಕಗಳ ದಾಟಿ
ನಿಲ್ಲಿಸಿ
ಇಳಿಸಿತ್ತೇ
ಸಹಸ್ರಾರದ ಮೇಲೆ
ರಾಹುಲನ ಕಣ್ಣು ಇನ್ನೂ
ಒದ್ದೆ ಒದ್ದೆ
ನೀನು ಹತ್ತಿ
ಇಳಿದಿದ್ದಕ್ಕೋ
ಯಶೋಧರೆ ಧರೆಗೆ ಬಿದ್ದಿದ್ದಕ್ಕೋ
ಸುತ್ತಲಿನ ಜನರೆಲ್ಲರ
ಕಣ್ಣ ಭಾಷೆ ತೋಯಿಸಿತ್ತೇ
ಇಬ್ಬರನೂ
ಹರಿವ ನದಿಯ ಜಾಡು ಹಿಡಿದು
ಮುರಿದ ಮನವ ಬೆಸೆವ
ಕಾಯಕಕ್ಕೆ ಬಿಟ್ಟು ಹೊರಟಿದ್ದಾದರೂ ಏಕೆ
ಒಂದು ಕಾವಿ
ಜೊತೆಗೆ ಆನಂದ
ಅದು ಹೇಗೆ
ಮತ್ತೆ ಕೇಳಬೇಕು
ನಮ್ಮ ಗಲ್ಲಿಯಲಿ
ಸಪ್ತಗಿರಿಗೆ ಹೋಗುವ ದಾರಿಯಂಚಲಿ
ಸಿಕ್ಕರೆ
ಬುದ್ಧನಿಗೆ
ಬಿಟ್ಟು ಹೊಗುತ್ತಲೇ
ಉಳಿದಿದ್ದು ಹೇಗೆ
ಉಳಿಯುತ್ತಲೇ
ಅಳಿಯದ ಹಾಗೆ
ಇರುವುದು
ಹೇಗೆ
೨. ತೀರ್ಥಪುರದವರು_ಸಿಕ್ಕಿದ್ದರು
ಇಲ್ಲೇನಿದೆ ಅದೇ ನರಕ
ಮೇಲೂ ಹೆಚ್ಚೇನಿಲ್ಲ ಎನಿಸಿ
ಸುಮ್ಮನೆ ಕುಳಿತವನೆದುರು
ಬಂದು ಬುತ್ತಿ ಬಿಚ್ಚಿ
ಮಾತು ಶುರು ಮಾಡಿದರು
ಹಂಚಿ ಉಂಡೆವು ಇಬ್ಬರೂ
ಒಂದಷ್ಟು ರುಚಿ ತಿಳಿಯದ ನಾಲಿಗೆ ನನ್ನದು
ಮೆದುಳೆಲ್ಲಾ ರುಚಿಗಳ ಕಲಸುಮೇಲೊಗರ
ಎಂದೆನಷ್ಟೆ
ಒಂದೊಂದು ಗಂಟಿನಲೂ ಬದುಕಿನ ನಂಟಿದೆ
ಒಂದೊಂದು ಚೂರುಗಳೂ ವಿಶ್ವದ ತುಣುಕು
ಹೇಗಿರಬೇಕು ಯೋಚಿಸು ಬುತ್ತಿ ಕಟ್ಟಿದ ಮೆದುಳು
ಒಂದರಲಿ ಮೀಮಾಂಸೆ ಒಂದರಲಿ ಭಾಷೆ
ಮತ್ತೊಂದರಲಿ ಬದುಕ ಸಾರವಿಹ ಕಾವ್ಯ
ಮಗದೊಂದರಲಿ ವೈರಾಗ್ಯ
ಮನ ಭಾವಗಳ ಮಿಶ್ರಣ ಹೇಗಿರಬೇಕು
ಎಂದು ಮಾತು ನಿಲ್ಲಿಸಿದರು
ಕಲಿಯಬೇಕು ಮಗು
ಒಂದಷ್ಟು ಬುತ್ತಿಯ ಗಂಟು ಬಿಚ್ಚುವ ಗುಟ್ಟು
ಅವರವರೆ ಬಿಟ್ಟಿರುತ್ತಾರೆ ಗಂಟು ಬಿಚ್ಚುವ ತಂತ್ರ
ತಿಂದಾಗ ಮನ ಸೊಗವ
ಕಾಣಬೇಕು
ಊರವರಿಗೆಲ್ಲಾ ಕಾಣುವ ಹಾಗೆ ಕುಣಿಯಲೇ ಬೇಕಿಲ್ಲ
ಒಳಗಿನೊಳಗಿನ ಹೆಜ್ಜೆ ಹದ ತಪ್ಪದೆ ಇದ್ದರೆ ಸಾಕು
ಅವರಷ್ಟೇ ಬೇಡುವುದು
ವೈರಾಗ್ಯಕ್ಕೆ ಹೊತ್ತು ಗೊತ್ತಿಲ್ಲ
ಗಂಟೊಳಗಿನ ಸ್ವಾದದ ಆಸ್ವಾದನೆಯ ಸಾಧನೆಯ ತುದಿ ಅದೆ
ಹಾದಿ ಬೇರೆ ಬೇರೆ ಅಷ್ಟೆ
ಒಂದೊಂದು ರುಚಿಯಲೂ ಇರುವ ಸ್ವಾದ ಕಠಿಣವೆನಿಸಿದರೆ
ನಿನ್ನ ಬದುಕೂ ಬಲು ಕಠಿಣವಾಗಿದೆ
ಒಂದೊಂದು ಭಾಷೆಯ ಲೀಲೆಯಲೂ ಮನದ ಕೊನೆ ಹಾರಬೇಕು
ಮನ ರೆಕ್ಕೆ ಬಿಚ್ಚಿ ಬಾನಗಲ ಹಾರಬೇಕು
ಬೀಳಬೇಕು ಮೀನ ಹಾಗೆ
ಹೆಜ್ಜೆ ಕಾಣದೆ ಈಜಿಬಿಡಬೇಕು
ಹುಡುಕುವವರು ನಿನಗಿಂತ ಈಜುಗಾರರಾದರೆ
ತಿಳಿಯಲಿ ತಿಳಿಯದಿದ್ದರೆ ಇಲ್ಲ
ನಗುಮೊಗದಲಿರಬೇಕು
ಇದನು ಕಲಿತರೆ ಸಾಕು ಅಥವಾ ಅದೇ ಕಲಿಸುತ್ತದೆ
ಕಾಲ ಕಲಿಸದೆ ಮೇಲೆ ಕಳಿಸುವುದಿಲ್ಲ
ಹೋಗಿ ಬರಲೇ ಎಂದು
ಪೇಟ ಸರಿಮಾಡಿ ಧೋತ್ರ ಕೊಡವಿ
ಮದಗಜದ ಹಾಗೆ ನಡೆದುಬಿಟ್ಟರು
ಆ ಐರಾವತದ ಹೆಜ್ಜೆ ಗುರುತು
ಇನ್ನೂ ಕಾಣುತ್ತಲೇ ಇದೆ
3. ಪುರಂದರರಿಗೆ
ನಿಮ್ಮದು ಅನುದಿನವೂ
ರಾಮನಾಮ ಸ್ಮರಣೆ
ಅಥವಾ ಕೃಷ್ಣನದು
ನಮಗೆ ನಿಮ್ಮಂದಲೇ ಅವರದು
ಒಳಮನೆಯ ಮೂಲೆಯಲಿದ್ದ
ಸೋರೆ ಬುರುಡೆ ಸರಿಮಾಡಿ ತಂತಿ ಕಟ್ಟಿ
ಶ್ರುತಿ ಹಿಡಿಸಿ ಹಿಗ್ಗಿನಲಿ ಜಗ್ಗಿದಂತೆಲ್ಲಾ
ಏಕನಾದದಲಿ ತಂಬೂರಿ ನುಡಿಯುತಿದೆ
ನಿಮ್ಮ ಇರುವು ನಿಮ್ಮಿಂದ ಅವರದು
ಊರೂರು ಅಲೆದಿರಿ ಬೀದಿ ಬದಿಯಲಿ ನಲಿದಿರಿ
ವರ್ಷ ವರ್ಷ ಕಳೆದರೂ ಅದೇ ಹಳೆ ಕಥೆಯ
ಹೊಸ ವರ್ಷ ಸುರಿಸಿದರಿ
ವರದಲಿ ಎಲ್ಲಾ ಕಳೆದುಕೊಂಡವನ ವ್ಯಥೆ
ವಿರಹದಗ್ನಿಯಲಿ ದಹಿಸಿಕೊಂಡವಳ ವ್ಯಥೆ
ಒಂಟಿದೀಪದ ಮುಂದೆ ಕಾದು ಕಲ್ಲಾದವಳ ವ್ಯಥೆ
ಉಮೇದಿನಲಿ ಹಿಡಿದೆಳೆದವನ ವಂಶಕ್ಕಾದ ವ್ಯಥೆ
ಕಾಡಿನಲೆ ಕಾಲಾಕಾಲ ಹೂಡಿಸಿದ ನಿವಾಸದ ವಿಳಾಸ ಕಾಣಿಸಿ
ಕಥೆಯಾಗಿಸಿದಿರಿ
ಕಥೆ ಅಲ್ಲಿಗೇ ನಿಲ್ಲಲಿಲ್ಲ
ಮತ್ತೆಷ್ಟೋ ವರ್ಷದ ಮೇಲೆ
ಇಲ್ಲಿ ಮತ್ತೆ ತಂಬೂರಿ ತಂತಿ ಜಗ್ಗಿದೊಡನೆ
ಕಿವಿಯಲಿ ಎಲೆಗಳೆರಡು ಎದ್ದು ಬಂದಂತೆ
ಮೈ ಮರವಾದಂತೆ
ಮತ್ತದೇ ಕಥೆ ಮುಂದೆ ಬಂದಂತೆ
ನುಡಿಗಡಣ ಮೌನ ಹಾದಿಯ ಹಿಡಿದು
ಸಿಂಹಾಸನ ದಾಹಕ್ಕೆ ಬೀದಿಪಾಲಾದವರ ಕಥೆಯನ್ನೆಲ್ಲಾ
ಬೀದಿ ಬೀದಿಯಲಿ ಹಾಡಿ
ಸೂರಿರದವರಿಗೆ ಸೋರೆ ಬುರುಡೆಯಲೇ ಸೂರು ಕಟ್ಟಿದಿರಿ
ನುಡಿಯಲು ನಡೆಯಲು ಆಗದೆ
ತಲೆಯೆಲ್ಲಾ ನರೆತು ತಂಬೂರಿ ಹಿಡಿದು
ಜನ ಹುಚ್ಚನೆಂದರೂ ತಲೆ ಆಡಿಸುತ ಕುಣಿದು
ಅಲೆದಲೆದು ನಾದದ ಮೋಡಿಯಲಿ ನಲಿದು
ನಿಮಗೆ ಕಂಡಿದ್ದು ನೀವು ಉಂಡದ್ದು
ರಾಮನಾಮ ಪಾಯಸ ಕೃಷ್ಣ ನಾಮ ಸಿಕ್ಕರೆ
ಹರಿದಾರಿಯಲೆಲ್ಲಾ ಸಾಕ್ಷಿಯೆಂಬಂತೆ ಹಂಚಿದಿರಿ
ಭಕ್ತಿರಸವೇ ಆಗಿ ಹರಿದುಬಿಟ್ಟಿರಿ
ಮೊನ್ನೆಯವರೆಗೂ ಆ ಹಾದಿಯಲಿ ಬೇಲಿ ಬಿದ್ದಿರಲಿಲ್ಲ
ಹುಲ್ಲು ಹುಟ್ಟಿ ಹೆಜ್ಜೆ ಹೆಜ್ಜೆಗೂ ವಜ್ಜೆ ಎನಿಸಿರಲಿಲ್ಲ
ಕಂಡವರೆಲ್ಲಾ ಹೇಳಿದರು ಕಾಣದವರು ಹುಡುಕಿದರು
ಹುಡುಕುವಾಗ ಕಿಂಡಿಯಲಿ ರಾಜಮಾರ್ಗ ಕಂಡವರೂ ಇದ್ದಾರೆ
ಎಷ್ಟೆಲ್ಲಾ ಬದಲಾವಣೆ ಮಾಡಿ ಏನೂ ಮಾಡೇ ಇಲ್ಲವೆಂಬಂತೆ
ಸುಮ್ಮನೆ ನಡೆದವರೂ ಇದ್ದಾರೆ
ಆ ಉರಿ ಬಿಸಿಲಿನಲಿ ಆ ಸುಡು ರಸ್ತೆಯಲಿ
ತಲೆಯ ಮೇಲೆ ಕೆಂಡದ ಮಡಕೆ ಹೊತ್ತು ನಡೆದವರು ನೀವು
ನಿಮ್ಮ ಹೆಜ್ಜೆ ಗುರುತುಗಳೆಲ್ಲಾ ಇಲ್ಲೆ ಮೂಡಿದೆ
ಭವಭಾರವ ಹೊತ್ತು ನಡೆವವರಿಂದಿಗೂ ಇದ್ದಾರೆ
ತಂಬೂರಿ ಮೈಗೆ ಅಂಟಿಸಿಕೊಳ್ಳದೆ
ಭಾಷೆ ನಿರಾಯಾಸವಾಗಿ ಹುಟ್ಟಿದರೆ ನೋಡಿ
ಬರೆದದ್ದೆಲ್ಲಾ ಕಾವ್ಯವಾಗಿಬಿಟ್ಟರೆ
ನಾವೆಲ್ಲಾ ನಾದ ಭ್ರಷ್ಟರು
ನಾವು ನಿಮ್ಮಿಂದೊಂದಷ್ಟು ಕಲಿಯಬೇಕಿದೆ
ನಂಬುವುದನ್ನ ನಂಬಿದ್ದನ್ನು ಕಾಣುವ ಹಠವನ್ನ
ಒಳಹೊರಗೂ ಎರಡಾಗದ ಹಾಗೆ ಇರವುದನ್ನ
ಒಮ್ಮೆ ತುಳಿದ ಹಾದಿಯನು ಎಂದೂ ಬದಲಾಯಿಸದೆ ಇರುವುದನ್ನ
ಕಾಣದಿದ್ದಾಗ ಹುಡುಕಾಡುವುದನ್ನ ಕಂಡಾಗ ಸುಮ್ಮನಿರುವುದನ್ನ
ನಮ್ಮೊಳಗಿನ ತಂಬೂರಿ ಸೋರೆಬುರುಡೆ ಸರಿ ಮಾಡಿಕೊಂಡು
ಕಂಡ ಕಂಡವರೆದುರು ಮೀಟದೆ ಇರುವುದನ್ನ
ಈಗ ಆರಂಬ ಮಾಡಿದ್ದೇನೆ
ಒಂದಷ್ಟು ಮೋಡಿಯ ಮಾಯದಮಳೆ ಬಂದಿದೆ
ನಾದದಲಿ ಪಚ್ಚೆತೆನೆ ಹುಲುಸಾಗಿ ಬೆಳೆಯಲು
ಉಸಿರಾಗಿ ಕೈ ಹಿಡಿದು ನಡೆಸಬಹುದು
ಒಳಗಿನ ಮೂಲೆ ಮೂಲೆಯಲೆಲ್ಲ ಇಂದೂ ಕೇಳುತಿದೆ
ನೀವು ಎಂದೋ ಮೀಟಿದ ತಂಬೂರಿ
ದನಿಯ ಮಾರ್ದನಿ
4. ಹೆಜ್ಜೆಗಳಿಲ್ಲದ_ನಡಿಗೆ
ಇನ್ನು ಹೆಜ್ಜೆ ಇಡಲಾರೆ
ಉಸ್ಸೆಂದು ಕುಳಿತವಗೆ ದೈವ ಪ್ರತ್ಯಕ್ಷನಾದ
ನಡೆ ಕಡೆಯತನಕ ಜೊತೆಗಿರುವೆ
ಕೈ ಹಿಡಿ ಏಳು ನನ್ನ ಭುಜವೂ ಇದೆ
ಎಂದ
ಒಂದೊಮ್ಮೆ ಹಿಂದೆ ತಿರುತಿರುಗಿ ನೋಡಿದೆ
ಒಂದಷ್ಟು ಪಾದದ ಗುರುತು
ಮತ್ತೊಮ್ಮೆ ಖಾಲಿ ಖಾಲಿ
ಎಲಾ ಕಳ್ಳ ! ಕಿಡಿಗೇಡಿ !!
ಕೈ ಹಿಡಿ ಏಳು ನನ್ನ ಭುಜವೂ ಇದೆ
ಎಂದವನು ಮಾಡಿದನಲ್ಲ ಮೋಸ
ಕಡೆಯತನಕ ಜೊತೆಗಿರುವೆನೆಂದು
ಬಿಟ್ಟನಲ್ಲಾ ಭವದಲ್ಲೇ ಒಂಡಿಯಾಗಿ
ಓ ದೇವರೆ !
ಮಾಯಗಾರ ಮೋಸಗಾರ ಎನ್ನವುದಕ್ಕೆ ಸಾಕ್ಷಿ ಸಿಕ್ಕಿತಿಂದು
ನೋಡು ನಿನ್ನ ಹೆಜ್ಜೆ ಗುರುತುಗಳೇ ಇಲ್ಲ
ನನ್ನದು ಮಾತ್ರ ಒಂಟಿ ನಡಿಗೆ
ಖಾಲಿ ಜಾಗ ಎಳೆದೆಳೆದು ಹಾಕಿದ ನಾಕು ಹೆಜ್ಜೆ ಹಾಗೆ ಹೀಗೆ
ಬಿಟ್ಟೆಯಲ್ಲ ಒಂಟಿಯಾಗಿ !
ಮೋಸಗಾರ !!
ನಕ್ಕು ನುಡಿದ
ಇಲ್ಲಿರುವುದೆಲ್ಲಾ ನಿನ್ನ ಹೆಜ್ಜೆಗಳೇ
ಹೆಗಲ ಮೇಲೆ ನೀನು ಕುಳಿತಾಗ
ಹೆಜ್ಜೆ ಗುರುತೆಲ್ಲಿಂದ ಬಂದಾವು ?
ತ್ರಾಣ ಬಂದಾಗ ಬಿಟ್ಟೆ
ನೀ ನಡೆದೆ ನಿನ್ನದೇ ಹೆಜ್ಜೆಗಳಿವು
ಬಯ್ಯದಿರು !
ಸುಮ್ಮನೆ ನಡೆ
ತಿರುಗಿ ನೋಡಿದೆ
ಈಗ ಹೆಜ್ಜೆ ಗುರುತೇ ಕಾಣುತಿಲ್ಲ
*********************************************
ತರೀಕೆರೆ ಮೂಲದವರಾದ ಡಿ.ಎಸ್.ರಾಮಸ್ವಾಮಿಯವರು ಜೀವವಿಮಾ ನಿಗಮದ ಅಧಿಕಾರಿಯಾಗಿ ಅರಸೀಕೆರೆಯಲ್ಲಿ ನೆಲೆಸಿದ್ದಾರೆ.ಇವರ ‘ಉಳಿದ ಪ್ರತಿಮೆಗಳು’ ಕವನಸಂಕಲನಕ್ಕೆಮುದ್ದಣ ಕಾವ್ಯ ಪ್ರಶಸ್ತಿದೊರೆತಿದೆ