ಅಂಕಣ ಬರಹ

ಮಾತಲ್ಲಿ ಹಿಡಿದಿಡಲಾಗದ ಚಿತ್ರ…

Sculpture, Statue, Male, Modern, Stone

ಕೆಲವರ ವ್ಯಕ್ತಿತ್ವವೇ ಹಾಗಿರುತ್ತದೆ. ಜೇನು ತುಪ್ಪದಲ್ಲಿ ಅದ್ದಿ ತೆಗೆದಷ್ಟು ಸವಿಯಾಗಿ. ಅದೆಷ್ಟು ವಿನಯತೆ, ಅದೆಷ್ಟು ಭೂಮಿಗಿಳಿದ ಮನುಷ್ಯ ಎನಿಸಿಬಿಡುವಂತೆ. ಮನುಷ್ಯ ಏನೂ ಗೊತ್ತಿಲ್ಲದ ಸಂದರ್ಭದಲ್ಲಿ ಮುಗ್ಧನಷ್ಟೇ ಸ್ವಾರ್ಥಿಯೂ ಇರುತ್ತಾನೆ. ಅದು ಪುಟ್ಟ ಮಗುವಿನಲ್ಲಿ ಕಂಡು ಬರುವಂತಹ ಮುಗ್ಧತೆ ಮತ್ತು ಸ್ವಾರ್ಥ. ತದ ನಂತರ ಬೆಳೆಯುತ್ತ ಬೆಳೆಯುತ್ತಾ ಅವನ್ನು ತನಗೆ ಬೇಕಾದ ಹಾಗೆ ಬಳಸುವುದನ್ನು ಕಲಿಯುತ್ತಾನೆ. ಆದರೆ ಜ್ಞಾನ ಸಂಪಾದನೆ ಮಾಡುತ್ತಾ ಮಾಡುತ್ತಾ ವಿನೀತನಾಗಿ ಬಿಡುತ್ತಾನೆ. ಅವನೆಲ್ಲಾ ಅಹಂಕಾರವೂ ಸತ್ತುಹೋಗುತ್ತದೆ. ಜ್ಞಾನ ಸಂಪಾದನೆಗಾಗಿ ಹೊರಡುವಾಗ ನಾನು ಎಲ್ಲ ಜ್ಞಾನವನ್ನೂ ಆಪೋಶನ ತೆಗೆದುಕೊಳ್ಳಬಲ್ಲೆ ಎನ್ನುವ ಆತ್ಮವಿಶ್ವಾಸದಿಂದ ಹೊರಡುವ ಅವನು, ಜ್ಞಾನಿಯಾಗುತ್ತಾ ಆಗುತ್ತ ಅವನಿಗೆ ಒಂದು ವಿಷಯ ಅರ್ಥವಾಗುತ್ತದೆ. ಜ್ಞಾನವೆಂಬುದು ಒಂದು ಬೃಹತ್ ಸಾಗರ. ನಾನದರ ಒಂದೇ ಒಂದು ಹನಿಯನ್ನು ಮಾತ್ರ ನನ್ನದಾಗಿಸಿಕೊಳ್ಳಬಲ್ಲೆ. ಆ ಹನಿಯಾದರೂ ಅರಿವು ಮರೆವಿನ ಜಲಚಕ್ರವನ್ನು ಸದಾ ಸುತ್ತುವ ಜಲಬಿಂದು ಎನ್ನುವುದು ಅವನಿಗೆ ಅರ್ಥವಾಗುತ್ತದೆ. ಅವನಿಗೀಗ ಸಾಧನೆಯ ಹಂಬಲವಿಲ್ಲ, ಪರಮ ಸುಖದ ಚಿಂತೆಯಿಲ್ಲ. ಅವನಿಗೆ ಬದುಕಿನ ದೊಡ್ಡ ಅರ್ಥ ಯಾವುದು ಎಂಬುದು ತಿಳಿದುಬಿಟ್ಟಿರುತ್ತದೆ. ಆಗ ಅವನು ನಾನು ಎನ್ನುವ ಸ್ವಯಂಭೂತನವನ್ನು ತನಗೆ ತಾನೇ ಕಳೆದುಕೊಂಡುಬಿಡುತ್ತಾನೆ.  ಆ ಹಂತ ತಲುಪಿದ ಯಾರೇ ಆಗಲಿ, ಅವರ ಸಾಧನೆಯನ್ನ ಜಗತ್ತು ಕೊಂಡಾಡುತ್ತದೆ, ಆದರೆ ಆ ವ್ಯಕ್ತಿ ಮಾತ್ರ ಸಂಕೋಚದ ಮುದ್ದೆಯಾಗಿರುತ್ತಾನೆ.

Rare, Unseen Photos Of SP Balasubrahmanyam

ಇಷ್ಟೆಲ್ಲಾ ಹೇಳುತ್ತಿರುವಾಗ ನನ್ನ ಕಣ್ಮುಂದೆ ಇದ್ದ ಚಿತ್ರ ಎಸ್ಪಿಬಿಯವರದ್ದು. ಅವರ ವ್ಯಕ್ತಿತ್ವ ಹೀಗೆ ಸಾಮಾನ್ಯೀಕರಿಸುವ ವ್ಯಕ್ತಿತ್ವವಾಗಿತ್ತು ಎನ್ನುವದೇ ಆ ವ್ಯಕ್ತಿತ್ವದ ಶ್ರೇಷ್ಠತೆ. ಅಷ್ಟು ವಿಶಾಲವಾದ, ವಿನೀತವಾದ, ಮಗುವಿನಂಥಾ ವ್ಯಕ್ತಿ ಅವರು. ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಅವರ ಕೆಲವು ಗೀತೆಗಳನ್ನು ಕೇಳಬಹುದು. ಮಲಯಮಾರುತ ಚಿತ್ರದ “ಶಾರದೇ ದಯೆ ತೋರಿದೆ…”, ಶ್ರೀನಿವಾಸ ಕಲ್ಯಾಣ ಚಿತ್ರದ “ಪವಡಿಸು ಪರಮಾತ್ಮ ಶ್ರೀ ವೆಂಕಟೇಶ, ಮನವೆಂಬ ಮಲ್ಲಿಗೆಯ, ಹೂವ ಹಾಸಿಗೆ ಮೇಲೆ….”, ಶ್ರೀ ಮಂಜುನಾಥ ಚಿತ್ರದ “ಈ ಪಾದ ಪುಣ್ಯ ಪಾದ, ಈ ಪಾದ ದಿವ್ಯ ಪಾದ…”ಎನ್ನುವ ಈ ಮೂರು ಹಾಡುಗಳನ್ನು ನಾನಿಲ್ಲಿ ಉದಾಹರಿಸುತ್ತೇನೆ. ಈ ಹಾಡುಗಳನ್ನು ಹಾಡುವಾಗ ಅವರ ಧ್ವನಿಯಲ್ಲಿ ಒಂದು ಶರಣಾಗತಿ ಕಾಣಿಸುತ್ತದೆ, ಒಂದು ದೀನತೆ ಕಾಣಿಸುತ್ತದೆ. ಅಂತಹ ಹಾಡುಗಳನ್ನು ಹಾಡುವಾಗ ಧ್ವನಿಗೆ ಒಂದು ಮೆದುತನ ಬೇಕಿರುತ್ತದೆ, ಆದರೆ ಅದು ದುಃಖ ಆಗಿರಬಾರದು, ನೋವೂ ಆಗಿರಬಾರದು. ಅದೊಂದು ಪರಮ ಸುಖವನ್ನು ಒಂದೇ ಒಂದು ಹನಿಯನ್ನೂ ಇಲ್ಲದಂತೆ ಉಂಡು ನಿಂತವನ ಧನ್ಯತಾ ಭಾವವಾಗಿರಬೇಕು. ಅದನ್ನು ಧ್ವನಿ ಮಾತ್ರದಿಂದ ಹೊಮ್ಮಿಸಬೇಕು. ಅಂತಹಾ ಒಂದು ಶಕ್ತಿ ಎಸ್ಪಿಬಿಯವರ ಕಂಠಕ್ಕೆ ಮಾತ್ರ ಸಾಧ್ಯವೇನೋ ಎನಿಸುವಷ್ಟು ಅವರು ಸಂಗೀತ ನಿರ್ದೇಶಕರ ಏಕ ಮಾತ್ರ ಆಯ್ಕೆಯಾಗಿರುತ್ತಿದ್ದರು ಎನ್ನುವುದು ಹೊಗಳಿಕೆಯ ಅತಿಶಯೋಕ್ತಿಯಲ್ಲ, ವಾಸ್ತವ. ಬಹುಶಃ ಅವರನ್ನು ರಿಪ್ಲೇಸ್ ಮಾಡಬಹುದಾದಂತಹ ಮತ್ತೊಬ್ಬ ಗಾಯಕ ಹುಟ್ಟಿಯೇ ಇಲ್ಲವೇನೋ. ಅದೆಷ್ಟು ರೀತಿಯಲ್ಲಿ ತಮ್ಮನ್ನು ತಾವು ಪ್ರಯೋಗಕ್ಕೆ ಒಳಪಡಿಸಿಕೊಂಡಂತಹ ಗಾಯಕ ಅವರು. ಅವರ ಒಂದೊಂದು ಗೀತೆಯೂ ಒಂದೊಂದು ಪ್ರಯೋಗ, ಒಂದೊಂದೂ ಅತ್ಯಮೂಲ್ಯ ರತ್ನ. ಅವರೊಬ್ಬ ಗಾಯನ ಲೋಕದ ದೇವರು…

ಈ ಕೊರೋನಾ ನಮ್ಮನ್ನು ಎಷ್ಟೆಲ್ಲ ಪರೀಕ್ಷೆಗೆ ದೂಡುತ್ತಿದೆ. ನಾವು ತುಂಬಾ ಪ್ರೀತಿಸುವ ಅದೆಷ್ಟೋ ವ್ಯಕ್ತಿಗಳನ್ನು ನಮ್ಮಿಂದ ದೂರ ಮಾಡುತ್ತಿದೆ. ಎಲ್ಲಿಯೂ ಯಾರ ಮನೆಗೂ ಹೋಗದೆ ಇದ್ದಲ್ಲೇ ಇರುವ ಸಂಕಷ್ಟದ ನಡುವೆ ಧ್ವನಿ ಮಾತ್ರದಿಂದ ನಮ್ಮವರನ್ನು ಪ್ರೀತಿಸುವಂತಾಗಿದೆ. ಸ್ಪರ್ಷ ಮತ್ತು ಪರಸ್ಪರ ಭೇಟಿಯನ್ನು ನಿರ್ಬಂಧಿಸುತ್ತಿದೆ ಈ ಕೊರೋನಾ. ಪರಿಸ್ಥಿತಿ ಹೀಗಿರುವಾಗ ನಾವು ನಮ್ಮ ಆರಾಧ್ಯ ದೈವ ಎಂದು ಭಾವಿಸಿಕೊಳ್ಳುತ್ತಿದ್ದ ಕೆಲ ವ್ಯಕ್ತಿಗಳನ್ನೂ ಕಳೆದುಕೊಳ್ಳುವಂತಾಯಿತು. ಅದರಲ್ಲೂ ಎಸ್ಪಿಬಿಯವರು ಹೊರಟೇ ಹೋದಾಗ… ಮನಸ್ಸು ತಹಬದಿಗೇ ಬಂದಿರಲಿಲ್ಲ. ಸತ್ಯವನ್ನು ಒಪ್ಪಲು ಮನಸ್ಸು ಸಿದ್ಧವಿರಲಿಲ್ಲ. ಎಲ್ಲೇ ಅವರ ಹಾಡು ಕೇಳಲಿ, ಕಾರ್ಯಕ್ರಮ ಬರಲಿ ದುಃಖ ಉಕ್ಕುತ್ತಿತ್ತು. ದೇಶಕ್ಕೆ ದೇಶವೇ ಕಣ್ಣೀರು ಮಿಡಿಯಿತು, ಅವರಿಗೆ ಕೊನೆಯ ಶ್ರದ್ಧಾಂಜಲಿಯನ್ನು ಅರ್ಪಿಸಿತು.

ಅವರ ಮುಗ್ಧ ನಗು, ಸರಳತೆ, ವಿನಯತೆ, ವಿನೀತತೆ, ಬದುಕಿದರೆ ಹೀಗೆ ಬದುಕಬೇಕು ಎನ್ನುವಂತೆ ಬದುಕಿದ ಅವರ ಬದುಕಿನ ರೀತಿ… ಅದೆಂಥ ಆದರ್ಶ. ಆಗಾಗ  ನಾನು ನನ್ನ ತಂದೆ ತಾಯಂದಿರು ಮತ್ತು ಗುರುಹಿರಿಯರಿಗೆ ಅವರ ಪಾದಕ್ಕೆ ಹಣೆ ಹಚ್ಚಿ ನಮಸ್ಕರಿಸುತ್ತಿರುತ್ತೇನೆ. ನನ್ನ ಮಕ್ಕಳಿಂದಲೂ ಅದನ್ನು ಮಾಡಿಸುತ್ತೇನೆ. ಹಾಗೆ ಮಾಡುವಾಗ ನನಗೆ ನನ್ನ ಅಹಂಕಾರವನ್ನ ಕಳೆದುಕೊಂಡಂತೆ ಭಾಸವಾಗುತ್ತದೆ. ಮನಸ್ಸು ತಿಳಿಯಾಗುತ್ತದೆ. ಇದು ನನ್ನ ಅನುಭವ. ಎಸ್ಪಿಬಿಯಂತಹ ಮೇರು ವ್ಯಕ್ತಿ ಚೂರೂ ಅಹಂಕಾರವಿಲ್ಲದೆ ಏಸುದಾಸರ ಪಾದಪೂಜೆ ಮಾಡಿ ಅವರ ಆಶೀರ್ವಾದ ಪಡೆಯುವ ದೃಶ್ಯ ಹೃದಯ ತುಂಬಿ ಬರುವಂತೆ ಮಾಡುತ್ತದೆ. ಅಹಮ್ಮಿನ ಕೋಟೆಯೊಳಗೆ ಬಂಧಿಯಾದ ಅದೆಷ್ಟೋ ಮಂದಿಗೆ ಮಾದರಿಯಾಗಿ ಕಾಣುತ್ತದೆ ಈ ದೃಶ್ಯ. ಮತ್ತೆ ಎಸ್ಪಿಬಿಯವರು ಈಗ ತಾನೇ ಗಾಯನ ಲೋಕಕ್ಕೆ ಕಾಲಿಡುತ್ತಿರುವ ಪುಟ್ಟ ಮಕ್ಕಳನ್ನೂ ಸಹ “ಶಾರದೆ”, ಬಾಲಸರಸ್ವತಿ” ಎಂದೆಲ್ಲಾ ಹೊಗಳುತ್ತಾ ಶರಣಾಗಿಬಿಡುವಾಗ ನಮ್ಮ ಜನ್ಮ ಪಾವನವಾಯಿತೆನ್ನಿಸಿಬಿಡುತ್ತದೆ ಆ ಮಕ್ಕಳಿಗೆ. ಮತ್ತೆ ಹೊಸ ಗಾಯಕರನ್ನು ಅವರು ಉತ್ತೇಜಿಸುವ ರೀತಿಯಂತೂ ಅದ್ಭುತ. ಅಷ್ಟೇ ಅಲ್ಲ ಒಬ್ಬ ಸಾಮಾನ್ಯ ವ್ಯಕ್ತಿಯನ್ನೂ ಅವರು ಗೌರವಿಸುವ ರೀತಿ ಅನನ್ಯ.  ಇಂತಹ ಹಲವು ಕಾರರಣಗಳಿಗೂ ಎಸ್ಪಿಬಿಯವರು ಅನುಕರಣೀಯರು ಅನುಸರಣೀಯರು.

ಈ ಗಾಯನ ಗಾರುಡಿಗ ನಟನೆಯಲ್ಲೂ ಸೈ ಎನಿಸಿಕೊಂಡವರು. ಅವರು ಮಾಡಿದ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿದವರು. ಗಾಯನದ ಹೊರತಾಗಿ ನಟನೆ, ಸಂಗೀತ ನಿರ್ದೇಶನವನ್ನೂ ಮಾಡಿ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದವರು. ಸದಾ ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಾ ಅದರಲ್ಲಿ ಯಶಸ್ವಿಯಾದವರು ಎಸ್ಪಿಬಿ.

Tanikella Bharani Midhunam: Midhunam recommended for Oscar entry | Telugu  Movie News - Times of India

 2012 ರಲ್ಲಿ ಮಿಥುನಮ್ ಎನ್ನುವ ಚಿತ್ರವೊಂದು  ಬರುತ್ತದೆ. ಇದು ಅಪ್ಪದಾಸು ಎನ್ನುವ ರಿಟೈರ್ಡ್ ಟೀಚರ್ ಒಬ್ಬನ ಕತೆ‌. ಇದೊಂದು ರಮಣರ ಕತೆಯನ್ನು ಆಧರಿಸಿದ ಚಲನಚಿತ್ರ. ಇದನ್ನು ಸುಂದರ ದೃಶ್ಯಕಾವ್ಯವನ್ನಾಗಿ ತೆರೆಗೆ ತಂದವರು ತನಿಕೆಲ್ಲ ಭರಣಿ. ಮಿಥುನಮ್ ಎನ್ನುವ ಈ ಚಲನಚಿತ್ರದ ಪ್ರತಿಯೊಂದು ಫ್ರೇಮನ್ನೂ ಗಾಢವಾಗಿ ಆವರಿಸಿಕೊಂಡಿರುವ ಬುಜ್ಜೆಮ್ಮಾ ಮತ್ತು ಅಪ್ಪದಾಸು ನಮ್ಮನ್ನು ಯಾವುದೇ ಕಾರಣಕ್ಕೂ ಅತ್ತಿತ್ತ ಅಲುಗಾಡದಂತೆ ಹಿಡಿದು ಕೂರಿಸಿಬಿಡುತ್ತಾರೆ. ಅಲ್ಲೊಂದು ಸುಂದರ ದಾಂಪತ್ಯ ಗೀತೆ ಇದೆ. ಅದು ಶುದ್ಧ ಪ್ರೇಮ ಕಾವ್ಯವನ್ನು ನವಿರಾಗಿ ಹಾಡುತ್ತದೆ. ಅವರ ದಾಂಪತ್ಯವನ್ನು ತೆರೆಯ ಮೇಲೆ ನೋಡುವ ನಮ್ಮಲ್ಲಿ ಒಂದು ಕನಸು ಹುಟ್ಟುತ್ತದೆ. ನಾವೂ ಸಹ ಇಷ್ಟೇ ಪ್ರೀತಿಯಿಂದ ಬದುಕಬೇಕು ಎಂದು. ಬುಜ್ಜೆಮ್ಮ ಒಮ್ಮೆ ಹೇಳುತ್ತಾಳೆ “ಮನುಷಗಾ ಪುಟ್ಟಡಂ ಕಷ್ಟಂ ಕಾದು, ಮನುಷಗಾ ಬದುಕಡಮೇ ಕಷ್ಟಂ” ಎಂದು. ಅದರೆ ಇವರಿಬ್ಬರೂ ಅಪ್ಪಟ ಮನುಷ್ಯರಾಗಿ ಬದುಕುವವರು. ಮಕ್ಕಳು ತಮ್ಮನ್ನು ನೋಡಿಕೊಳ್ಳುತ್ತಿಲ್ಲ ಎಂಬ ನಿರಾಸೆ, ಕೋಪ, ನೋವು, ಸಂಕಟ, ತಿರಸ್ಕಾರ, ಬೇಸರ…. ಎಂಥದ್ದೂ ಇಲ್ಲ ಅವರಲ್ಲಿ. ಆದರೆ ಮಕ್ಕಳು ತಮ್ಮೊಂದಿಗಿರಲಿ ಎನ್ನುವ ಸಣ್ಣ ಆಸೆ ಮಾತ್ರ ಇದೆ. ಅದೇ ಮಮತೆಯನ್ನು ತಾವು ಸಾಕುವ ಪ್ರಾಣಿಗಳಿಗೆ ಉಣಿಸುತ್ತಾರೆ. ತಮ್ಮ ಮುದ್ದು ಗೌರಿಯ(ಹಸು) ಕರು ಕಳೆದು ಹೋದಾಗ ಅದಕ್ಕಾಗಿ ಅವರು ಪರಿತಪಿಸುವ, ಹುಡುಕುವ ರೀತಿ ನಮ್ಮನ್ನು ತಲ್ಲಣಗೊಳಿಸುತ್ತದೆ. ಕೊನೆಗೆ ಅದು ಶವವಾಗಿ ಸಿಕ್ಕಾಗ ಇವರು ಗೋಳಾಡುವ ರೀತಿ ಎಂಥವರಲ್ಲೂ ಕಣ್ಣೀರು ತರಿಸುತ್ತದೆ.

ಬುಜ್ಜೆಮ್ಮ ಯಾವಾಗಲೂ ತಮಾಷಿಗೆ ಅಪ್ಪದಾಸುವನ್ನು ರೇಗಿಸಲಿಕ್ಕಾಗಿ, “ನನ್ನನ್ನು ದ್ರಾಕ್ಷಿ ತೋಟ ಇದ್ದವನೊಬ್ಬ ಮದುವೆಯಾಗಲು ಆಸೆಪಟ್ಟಿದ್ದ. ನಾನು ಆ ದ್ರಾಕ್ಷಿತೋಟದವನನ್ನು ಮದುವೆಯಾಗಬೇಕಿತ್ತು. ಅವನನ್ನು ಮದುವೆಯಾಗಿದ್ದರೆ ಎಷ್ಟು ಸುಖವಾಗಿರುತ್ತಿದ್ದೆ. ಹೋಗಿ ಹೋಗಿ ನಿನ್ನನ್ನು ಮದುವೆಯಾಗಿ ಹಿಂಗಿದೀನಿ” ಅಂತ ರೇಗಿಸುತ್ತಿರುತ್ತಾಳೆ. ಅಪ್ಪದಾಸುವಿಗೆ ಈ ವಿಷಯ ಬಿಸಿತುಪ್ಪ. ಆದರೆ ಕೊನೆಯಲ್ಲೊಮ್ಮೆ ಇದೇ ಕಾರಣಕ್ಕೆ ಇಬ್ಬರ ನಡುವೆಯೂ ಜಗಳವಾಗುತ್ತದೆ. ಅಜ್ಜಿ ಅದೇ ಚಿಂತೆಯಲ್ಲಿ ಕಾಯಿಲೆಗೆ ಬೀಳುತ್ತಾಳೆ. ಮುನಿಸು ಬಿಟ್ಟು ಅಪ್ಪದಾಸು ಬುಜ್ಜೆಮ್ಮನ ಸೇವೆ ಮಾಡುತ್ತಾನೆ. ನನ್ನನ್ನು ಬಿಟ್ಟು ಅವಳು ಹೊರಟು ಹೋದರೆ ಏನು ಮಾಡುವುದು ಎನ್ನುವ ಚಿಂತೆಯ ಜೊತೆಗೆ ಹೋಗಲಿ ಪಾಪ ನನ್ನ ಕಣ್ಮುಂದೆಯೇ ಮುತ್ತೈದೆಯಾಗಿ ಹೋಗಲಿ ಎಂದುಕೊಳ್ಳುತ್ತಾ ಅವಳಿಗೆ ಆ ಕಾಯಿಲೆಯ ನಡುವೆಯೂ ಅಲಂಕಾರ ಮಾಡಿ ಅವಳಿಂದ ಪೂಜೆ ಮಾಡಿಸುತ್ತಾನೆ. ಅವಳಿನ್ನು ಸಾವಿನ ಅಂಚಿನಲ್ಲಿದ್ದಾಳೆ ಅನ್ನಿಸಿ ಅಜ್ಜ ಕಟ್ಟಿಗೆಯನ್ನು ಸಿದ್ದಪಡಿಸುವಾಗ ನಾವು ನಮ್ಮ ಕಣ್ಣೀರನ್ನು ಹಿಡಿದಿಡುವುದು ತುಂಬ ಕಷ್ಟ. ಅವತ್ತು ರಾತ್ರಿ ಮಲಗುವಾಗ ಹೆಂಡತಿ “ನನಗೆ ಯಾರೂ ದ್ರಾಕ್ಷಿತೋಟದವನೂ ಇರಲಿಲ್ಲ ಕಣ್ರಿ. ನಿಮ್ಮನ್ನು ರೇಗಿಸಲಿಕ್ಕಾಗಿ ಹಾಗೆ ಹೇಳುತ್ತಿದ್ದೆ ಎನ್ನುತ್ತಾಳೆ. ಅವತ್ತು ಅಪ್ಪದಾಸುವಿಗೆ ಆಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಅಕ್ಷರಶಃ ಕುಣಿದಾಡಿಬಿಡುತ್ತಾನೆ. ಅವತ್ತು ಅದೆಷ್ಟು ನೆಮ್ಮದಿಯಾಗಿ ಆರಾಮ್ ಕುರ್ಚಿಯ ಮೇಲೆಯೇ ನಿದ್ರಿಸಿಬಿಡುತ್ತಾನೆ ಎಂದರೆ, ಮರುದಿನ ಅವನನ್ನು ಹೆಂಡತಿ ಏಳಿಸಿದಾಗಲೇ ತಿಳಿಯುವುದು ಅವ ಪ್ರಾಣವನ್ನೇ ಬಿಟ್ಟಿದ್ದಾನೆ ಎಂಬುದು. ಇದೊಂದು ಮಾತಿಗಾಗಿಯೇ ಅವ ಪ್ರಾಣ ಬಿಗಿಹಿಡಿದಿದ್ದನಾ?! ಅವನ ಬುಜ್ಜೆಮ್ಮ, ” ದೇವರೇ ವಿಧವೆ ಪಟ್ಟ ಬೇಡುತ್ತಿದ್ದ ಯಾರದರೂ ಹೆಣ್ಣುಮಗಳಿದ್ದರೆ ಅದು ನಾನೊಬ್ಬಳೇ ಇರಬಹುದು. ಸಧ್ಯ ನನ್ನ ಕೋರಿಕೆಯನ್ನ ಈಡೇರಿಸಿಬಿಟ್ಯಲ್ಲ. ಎಲ್ಲಿ ನಾನೇ ಮೊದಲು ಹೋಗಿ ಇವನನ್ನು ಅನಾಥನನ್ನಾಗಿ ಮಾಡಿ ಬಿಡ್ತೀನೇನೋ ಎನ್ನುವ ಭಯ ಕಾಡ್ತಿತ್ತು. ಮೊದಲೇ ಮಗುವಿನಂಥವನು. ನಾನೂ ಇಲ್ಲದೆ ಹೋದರೆ ಹೇಗೆ ಬದುಕಿಯಾನು…” ಎಂದೆಲ್ಲಾ ಮಾತಾಡುವ ರೀತಿ ಹೃದಯಂಗಮ. ಮತ್ತೆ ಅವನು ನೆಮ್ಮದಿಯಾಗಿ ಇಹಲೋಕ ತ್ಯಜಿಸಿದ್ದರ ಬಗ್ಗೆ ಒಂಥರಾ ನೆಮ್ಮದಿ. ಆದರೆ ನಾವೆಲ್ಲ ಹೊಸ ಪೀಳಿಗೆಯ ಜನ ನಮ್ಮ ತಂದೆ ತಾಯಂದಿರನ್ನು ಹೀಗೆ ಅನಾಥರನ್ನಾಗಿ ಮಾಡುತ್ತಿದ್ದೇವಲ್ಲ ಒಮ್ಮೆ ಒಂದು ಕ್ಷಣ ಯೋಚಿಸಬೇಕಿದೆ. ದುಡ್ಡಿಗಿಂತಲೂ ದೊಡ್ಡದಾದದ್ದು ನಿಜಕ್ಕೂ ಇದೆ. ಮಾನವೀಯತೆ  ಪ್ರೀತಿ ವಾತ್ಸಲ್ಯಕ್ಕಿಂತ ದೊಡ್ಡದು ಯಾವುದೂ ಅಲ್ಲ ಅಲ್ಲವಾ….

ಹೀಗೆ ಮಾತಲ್ಲಿ ಹಿಡಿದಿಡಲಾಗದ ಅದೆಷ್ಟೋ ವಿಷಯ ಈ ಚಿತ್ರದಲ್ಲಿದೆ. ಅಥವಾ ನನ್ನ ಪದಗಳದೇ ಬಡತನವಿರಬಹುದು. ಆದರೆ ಎಸ್ಪಿಬಿ ಮತ್ತು ಲಕ್ಷ್ಮಿಯವರು ನಮ್ಮನ್ನು ಆವರಿಸುವ ಪರಿ ಅದ್ಭುತ. ಲಕ್ಷಿಯವರು ಎಸ್ಪಿಬಿಯವರಿಗೆ “ನಾನು ನಿಮ್ಮ ದೊಡ್ಡ ಫ್ಯಾನ್, ನನ್ನಷ್ಟು ದೊಡ್ಡ ಫ್ಯಾನ್ ಯಾರೂ ಇರಲು ಸಾಧ್ಯವಿಲ್ಲ” ಎಂದು ಹೇಳುತ್ತಿದ್ದ ಮಾತು ನೆನಪಾಗುತ್ತಿದೆ. ಇದು ನಮ್ಮೆಲ್ಲರ ಮಾತೂ ಸಹ ಅಂತಲೂ ಅನಿಸುತ್ತಿದೆ. ಹೃದಯ ಆರ್ದ್ರವಾಗುತ್ತಿದೆ. ಕಣ್ಣಂಚು ಒದ್ದೆ ಒದ್ದೆ. ಇನ್ನೂ ಏನೇನೋ ಬರೆಯಬೇಕೆನಿಸುತ್ತಿದ್ದರೂ ಬರೆಯಲಾಗದೆ ಹೋಗುತ್ತಿರುವೆ ಎನಿಸುತ್ತಿದೆ. ಎಸ್ಪಿಬಿ ಎನ್ನುವ ಮಹಾಸಾಗರದ ಬಗ್ಗೆ ನಾನೆಂಬ ಪುಟ್ಟ ಹಾಯಿದೋಣಿ ಎಷ್ಟು ತಾನೆ ಬರೆಯಲು ಸಾಧ್ಯ….

**************************************

ಆಶಾಜಗದೀಶ್

ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸ
ಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

2 thoughts on “

Leave a Reply

Back To Top