ಪ್ರಕೃತಿಯ ವಿಕೋಪಗಳು ಮತ್ತು ಪರಿಸರ ಸಂರಕ್ಷಣೆ

ಲೇಖನ

ಪ್ರಕೃತಿಯ ವಿಕೋಪಗಳು

ಮತ್ತು  ಪರಿಸರ ಸಂರಕ್ಷಣೆ

ಶ್ರೀನಿವಾಸ. ಎನ್.ದೇಸಾಯಿ

868 people killed in floods in 11 states: Govt - india news - Hindustan  Times

ಪ್ರಕೃತಿಯ ವಿಕೋಪಗಳು ಮತ್ತು  ಪರಿಸರ ಸಂರಕ್ಷಣೆಯ ಮುನ್ನೆಚ್ಚರಿಕೆಯ ಕ್ರಮಗಳು..

ನಾವು ನಮ್ಮನ್ನು ಹೇಗೆ ರಕ್ಷಣೆ ಮಾಡಿಕೊಳ್ಳುತ್ತೇವೆಯೋ ಹಾಗೇಯೇ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕೂಡಾ ಕ್ರಮಬದ್ಧವಾಗಿ, ಕಾಳಜಿಯಿಂದ, ಜವಾಬ್ದಾರಿಯುತವಾಗಿ ರಕ್ಷಣೆ ಮಾಡಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಯಾಕೆಂದರೆ ಇತ್ತೀಚೆಗೆ ಆಗುತ್ತಿರುವ ಪ್ರಕೃತಿಯ ವಿಕೋಪಗಳಿಂದ ನಾವು ಅಕ್ಷರಶಃ ತತ್ತರಸಿ ಹೋಗಲು ಮುಖ್ಯ ಕಾರಣ ನಾವು ಮಾಡಿರುವ ಮತ್ತು ಮಾಡುತ್ತಿರುವ ಪರಿಸರ ನಾಶಕ್ಕೆ ಇಡೀ ಭೂಮಂಡಲದ ಚಿತ್ರಣವೇ ಬದಲಾಗುತ್ತಿದೆ. ನಾವಿಲ್ಲಿ ಗಮನಿಸಬೇಕಾದ ಒಂದು ಅಂಶವೇನೆಂದರೆ, ಸುಮಾರು ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ಇದಕ್ಕಿಂತಲೂ ಹೆಚ್ಚೆಚ್ಚು ಜೋರಾಗಿ ಮಳೆ ಬರುತ್ತಿತ್ತು. ಅಂದು ವಾರಗಟ್ಟಲೆ ನಿರಂತರವಾಗಿ ಒಂದು ಘಳಿಗೆಯೂ ಬಿಡದೆ ಮಳೆ ಸುರಿಯುತ್ತಿದ್ದರೂ ಮಳೆಯ ಕಾರಣದಿಂದ ಊರಿಡೀ ಮುಳುಗುವುದಾಗಲಿ, ಮನೆಗಳು ಬೀಳುವುದಾಗಲಿ, ಪ್ರಾಣ ಕಳೆದುಕೊಳ್ಳುವುದಾಗಲಿ, ಕಿಲೋಮೀಟರ್‌ಗಳಷ್ಟು ನಡೆಯುವ ದೂರ ಇದ್ದರೂ ಶಾಲೆಗಳಿಗೆ ರಜೆ ಸಿಗುವುದಾಗಲಿ ಯಾವುದೂ ಇರಲಿಲ್ಲ.

ಆದರೆ ಈಗ ಯಾಕೆ ಹೀಗೆ..? ಹತ್ತು ತಾಸು ಬಂದ ಮಳೆಗೆ ಇಡೀ ಊರಿಗೆ ಊರೇ ಮುಳುಗಿ ನಾಶವಾಗಲು ಕಾರಣ ನಾವೇ ಅಲ್ಲವೇ.!

ನೀರು ನಿಲ್ಲಬೇಕಾದ ಜಾಗದಲ್ಲಿ ಗಗನಚುಂಬಿ ಕಟ್ಟಡಗಳು ನಿರ್ಮಾಣ ಮಾಡಿದೆವು, ನೀರು ಹರಿಯಬೇಕಾದ ಜಾಗವನ್ನೆಲ್ಲಾ ರಸ್ತೆಗಾಗಿ ಡಾಂಬರೀಕರಣ ಹಾಗೂ ಕಾಂಕ್ರೀಟ್ ಮಾಡಿದೆವು. ಮಳೆ ನೀರನ್ನು ಹೀರಿಕೊಳ್ಳುವ ಭೂಮಿಯ ಎಲ್ಲಾ ದಾರಿಗಳನ್ನು ಮನುಷ್ಯರು ಮುಚ್ಚಿದಾಗ ರಸ್ತೆಗಳು ನದಿಗಳಂತಾದವು, ಮನೆಯ ಅಂಗಳ ಈಜು ಕೊಳದ ರೂಪ ಪಡೆದು ಮನೆಯ ಒಳಗೂ ನೀರು ಹರಿದು ಬಂತು.

ಮನುಷ್ಯನ ಹೆಚ್ಚಿನ ಸೌಕರ್ಯಕ್ಕಾಗಿ ಪರಿಸರವನ್ನು ನಾಶಪಡಿಸಿದ ಪರಿಣಾಮ ಬೇಕಾದಷ್ಟು ಮಳೆ ಬರದಂತಾಯಿತು, ಮಳೆ ಬಂದರೂ ಇಡೀ ಊರೇ ಮುಳುಗಿ ಹೋಗುವಂತ ಪರಿಸ್ಥಿತಿ ನಿರ್ಮಾಣ ಮಾಡಿಟ್ಟಿದ್ದು ನಾವೇ ಅಲ್ಲವೇ.!

ಪ್ರಕೃತಿಯನ್ನು ನಾವು ನಾಶ ಮಾಡಿದ ಕಾರಣ ಪ್ರಕೃತಿ ನಮ್ಮನ್ನು ನಾಶ ಮಾಡುತ್ತಿದೆ.

ಮನುಷ್ಯನ ಅತೀ ಆಸೆ, ಏರುತ್ತಿರುವ ಜನಸಂಖ್ಯೆ, ವೈಭವೋಪೇತ ಜೀವನದ ಬಯಕೆಗಳು ಪರಿಸರವನ್ನು ಹಾಳುಮಾಡುತ್ತಿವೆ. ನಮ್ಮ ಸುತ್ತಮುತ್ತಲಿನ ನೀರು, ಗಾಳಿ, ಭೂಮಿ ಎಲ್ಲವೂ ಇಂದು ಅತೀ ಹೆಚ್ಚು ಕಲುಷಿತಗೊಳ್ಳುತ್ತಿವೆ. ಪರಿಸರ ಪ್ರೇಮಿಗಳು, ವಿದ್ಯಾವಂತರು, ಸರ್ಕಾರಗಳು ಕಾಲದಿಂದ ಕಾಲಕ್ಕೆ ಅನೇಕ ಕ್ರಮಗಳನ್ನು ಕೈಗೊಂಡು ಪರಿಸರವನ್ನು ಮಾಲಿನ್ಯದಿಂದ ರಕ್ಷಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಹಾಗಿದ್ದರೂ ಮಲೀನವಾಗುತ್ತಿರುವ ಪರಿಸರ ಇಂದು ಕೇವಲ ಮನುಕುಲಕ್ಕಷ್ಟೇ ಅಲ್ಲದೆ ಇಡೀ ವಿಶ್ವದ ಜೀವಸಂಕುಲಕ್ಕೆ ಮಾರಕವಾಗುತ್ತಲೇ ಇದೆ. ಆರೋಗ್ಯಕರ ಜೀವನಕ್ಕೆ ಅತೀ ಅಗತ್ಯಗಳಾದ ಗಾಳಿ, ನೀರು, ಆಹಾರ ವಿಷಪೂರಿತವಾಗುತ್ತಿವೆ.

 ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪರಿಸರವಾದಿಗಳೆಲ್ಲ ಒಟ್ಟಿಗೆ ಸೇರಿ ಮುಂದಿನ ಪೀಳಿಗೆಗೆ ಈ ಭೂಮಂಡಲದ ರಕ್ಷಣೆಯನ್ನು ಅರಿತುಕೊಂಡು ಪರಿಸರದ ಬಗ್ಗೆ ಅರಿವು ಮೂಡಿಸುವ ಹಾಗೂ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ  ವಿಶ್ವ ಪರಿಸರ ದಿನಾಚರಣೆ ಯನ್ನು ಆಚರಿಸಲು ಸನ್ನದ್ಧರಾದರು.ಈ  ಒಂದು ಆಚರಣೆಯ ಫಲಶೃತಿಯಾಗಿ ಇಂದು ಜಗತ್ತಿನಾದ್ಯಂತ ಪರಿಸರದ ರಕ್ಷಣೆಯಾಗುತ್ತಿದೆ, ಪರಿಸರದ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿ ಗಿಡಮರಗಳನ್ನು ನೆಟ್ಟು ಸ್ವಲ್ಪ ಮಟ್ಟಿಗಾದರೂ ಕಾರ್ಯಪ್ರವೃತ್ತರಾಗಿದ್ದಾರೆ.

ಪ್ರತಿಯೊಬ್ಬರಲ್ಲೂ ಪರಿಸರದ ಬಗ್ಗೆ ಜಾಗೃತಿ ಮೂಡಬೇಕು. ಕೇವಲ‌ ವರ್ಷಕ್ಕೆ ಒಂದೇ ದಿನ ಪರಿಸರ ರಕ್ಷಣೆಯೆಂಬುದು ಸೀಮಿತವಾಗಬಾರದು. ವರ್ಷದ ಪ್ರತಿ ದಿನವೂ ನಮಗೆ ಪರಿಸರ ದಿನವಾಗಬೇಕು. ಏಕೆಂದರೆ ಪರಿಸರ ನಮ್ಮ‌ ಜೀವನದ ಅವಿಭಾಜ್ಯ ಅಂಗ. ಪರಿಸರವಿಲ್ಲದೆ ಮಾನವನಿಲ್ಲ ಎಂಬ ನಿತ್ಯ ಸತ್ಯವನ್ನು ನಾವಿಂದು‌ ನಮ್ಮ ಜೀವನದ ಗುರಿಯನ್ನಾಗಿಸಿಕೊಂಡು ಪರಿಸರ ಸಂರಕ್ಷಣೆಯತ್ತ ಅಡಿಯಿಡೋಣ. ಅಂದಾಗ ಮಾತ್ರ ನಾವು ಸುಖ ಸಂತೋಷದಿಂದ ಬದುಕಲು ಸಾದ್ಯ. ಅದಕ್ಕಾಗಿ ನಾವೆಲ್ಲರೂ ಇಂದೇ ಪರಿಸರ ಸಂರಕ್ಷಣೆಗೆ ಕಂಕಣಬದ್ಧರಾಗಿ ನಿಲ್ಲೋಣ ಬನ್ನಿ…. ಎಲ್ಲರೂ ಒಂದಾಗಿ ಮುಂದಿನ ಪೀಳಿಗೆಯ ಉಳುವಿಗಾಗಿ ಎಲ್ಲರನ್ನೂ ಉಳಿಸೋಣ, ಬೆಳೆಸೋಣ. ಗಿಡಮರಗಳನ್ನು ಸಮೃದ್ಧವಾಗಿಸಲು ಇಂದೇ ಶಪಥ ಮಾಡೋಣ ಬನ್ನಿ…!

*****************************************************

Leave a Reply

Back To Top