ಸಜ್ಜನರ ಸಂಗ ಲೇಸು ಕಂಡಯ್ಯಾ…!

ಲೇಖನ

ಸಜ್ಜನರ ಸಂಗ ಲೇಸು

ಕಂಡಯ್ಯಾ…!

ಬಾಲಾಜಿ ಕುಂಬಾರ,

ಹನ್ನೆರಡನೇ ಶತಮಾನದ ಬಸವಣ್ಣನವರ ಸಮಕಾಲೀನ ಪ್ರಮಥರಲ್ಲಿ ವೀರಗೊಲ್ಲಾಳ ಎನ್ನುವ ತತ್ವನಿಷ್ಠೆಯ ವಚನಕಾರ ಹಾಗೂ ಅನುಭಾವಿ ಶರಣನಾಗಿದ್ದನು. ಈತನ ಮೂಲತಃ ಇಂದಿನ ವಿಜಾಪೂರ ಜಿಲ್ಲೆಯ ಸಿಂದಗಿ ತಾಲೂಕಿನ ಗೊಲಗೇರಿ ಗ್ರಾಮ. ಈತನನ್ನು ‘ಕಾಟಕೋಟ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ.

ಕುರಿ ಕಾಯುವುದು ಈತನ ಕಾಯಕವಾಗಿತ್ತು.
ಕುರಿಯ ಹಿಕ್ಕೆಯನ್ನೇ ಲಿಂಗವೆಂದು ಪೂಜಿಸಿ ಆತ್ಮಜ್ಞಾನ ಪಡೆದುಕೊಂಡು ಶರಣತತ್ವ ಪರಿಪಾಲಕನಾಗಿದ್ದನು.
ತನ್ನ ವೃತ್ತಿ ಪರಿಭಾಷೆಯನ್ನು ಹಾಗೂ ತತ್ವಪರಿಭಾಷೆಯನ್ನು ಬಳಸಿಕೊಂಡು ರಚಿಸಿರುವ ಬಹುಚಿಂತನೆಯ 10 ವಚನಗಳು ಪ್ರಸ್ತುತವಾಗಿ ಲಭ್ಯವಾಗಿವೆ.

ಅನುಭಾವಿ ವಚನಕಾರ, ವೀರಗೊಲ್ಲಾಳ ಒಬ್ಬ ಮುಗ್ಧ ಚಿಂತಕ, ಕಾಯಕ ಸಿದ್ಧಾಂತ ಮೈಗೂಡಿಸಿಕೊಂಡು ಸಾತ್ವಿಕ ಜೀವನ ಸಾಗಿಸಿದನು. “ವೀರಬೀರೇಶ್ವರ ಲಿಂಗಾ” ಎನ್ನುವ ವಚನಾಂಕಿತದಲ್ಲಿ ರಚಿಸಿದ ಈತನ ವಚನಗಳಲ್ಲಿ ‌ಲೌಕಿಕ ಬದುಕಿನ ಮೌಲ್ಯಗಳ ಅನಾವರಣಗೊಂಡಿದೆ. ಕುರಿ ಕಾಯುವ ವೃತ್ತಿ ಜೀವನದ ಅನುಭವದ ನುಡಿಗಳೇ ವಚನಗಳಾಗಿ ರೂಪಾಂತರ ಪಡೆದಿರುವುದು ಗಮನಿಸಬಹುದು. ಇದು ಕಾಯಕ ನಿಷ್ಠೆಯ ಬದ್ಧತೆಗೆ ಸಾಕ್ಷಿಯಾಗಿದೆ.

ಆತ್ಮಜ್ಞಾನ ಪರಿಶುದ್ಧತೆ, ಸಾರ್ಥಕ ಬದುಕಿನ ಮೌಲ್ಯಗಳನ್ನು ಹೇಗೆ ಸಂಪಾದಿಸಿಬೇಕು ಎನ್ನುವ ‘ಜೀವನ ಸಂದೇಶ’ ವೀರಗೊಲ್ಲನು ತುಂಬಾ ಮಾರ್ಮಿಕವಾಗಿ ಪ್ರತಿಪಾದಿಸಿದ್ದಾನೆ.

“ಕಂಥೆಯ ಕಟ್ಟಿ, ತಿತ್ತಿಯ ಹೊತ್ತು, ಮರಿಯ ನಡಸುತ್ತ ,ದೊಡ್ಡೆಯ ಹೊಡೆವುತ್ತ,
ಅಡ್ಡಗೋಲಿನಲ್ಲಿ ಹೋಹ ಚುಕ್ಕಿ ಬೊಟ್ಟಿನವ
ತಿಟ್ಟುತ್ತ, ಹಿಂಡನಗಲಿ ಹೋಹ ದಿಂಡೆಯ
ಮಣೆಘಟ್ಟನ ಅಭಿಸಂದಿಯ ಕೋಲಿನಲ್ಲಿಡುತ್ತ.
ಈ ಹಿಂಡಿನೊಳಗೆ ತಿರುಗಾಡುತಿದ್ದೇನೆ.
ಈ ವಿಕಾರದ ಹಿಂಡ ಬಿಡಿಸಿ,
ನಿಜ ನಿಳಯ ನಿಮ್ಮಂಗವ ತೋರಿ,
ಸುಸಂಗದಲ್ಲಿರಿಸು, ಎನ್ನೊಡೆಯ ವೀರಬೀರೇಶ್ವರಲಿಂಗಾ.”

ಸಾರ್ಥಕ ಬದುಕಿನ ಬಗ್ಗೆ ಸಲಹೆ ನೀಡುವ ಈ ಮೇಲಿನ ವಚನ ಸಾಲುಗಳು ಪ್ರಸ್ತುತ ಎನಿಸುತ್ತವೆ. ಹಾಗಾಗಿಯೇ ಇಂದಿಗೂ ಈತನು ಜನಪದರ ಹೃದಯದೊಳಗೆ ಅಚ್ಚಳಿಯದೇ ಉಳಿದುಕೊಂಡಿದ್ದಾನೆ.

ವೀರಗೊಲ್ಲಾಳ ವಚನದಲ್ಲಿ ಮನುಷ್ಯನ ಅಂತರಂಗ ಮತ್ತು ಬಹಿರಂಗದ ತೊಳಲಾಟದ ಕುರಿತು ವಿಶ್ಲೇಷಿಸುತ್ತಾನೆ. ಲೋಕಿಕ ಬದುಕಿನ ಗಂಟು ಹಾಕಿ, ಚಿಂದಿಯ ಬಟ್ಟೆ ತೊಟ್ಟು, ಚರ್ಮವನ್ನು ಹೊದಿಕೆ ಮಾಡಿಕೊಂಡಿದ್ದೇನೆ, ಚರ್ಮದ ಚೀಲವನ್ನು ಹೊತ್ತು, ಕುರಿ – ಮರಿಗಳ ಹಿಂಡು ನಡೆಸುತ್ತಿದ್ದೇನೆ. ಕುರಿಯ ಹಿಂಡಿನಲ್ಲಿ ದೊಡ್ಡ ಕುರಿಗಳು ಮತ್ತು ಚಿಕ್ಕ ಕುರಿಗಳು ಇರುತ್ತವೆ, ಅವುಗಳನ್ನು ತಾಳ್ಮೆಯಿಂದ ಹೊಡೆದುಕೊಂಡು ಮುನ್ನಡೆಸುತ್ತಿದ್ದೇನೆ ಎಂದು ಹೇಳುತ್ತಾನೆ. ಇಲ್ಲಿ ‘ದೊಡ್ಡ ಕುರಿ, ಚಿಕ್ಕ ಕುರಿ’ ಎಂಬುದು ಆತನ ವೃತ್ತಿಪರಿಭಾಷೆಯ ಪದಗಳು, ಆದರೆ ಅದನ್ನು ಮಾನವನ ಬದುಕಿಗೆ ಹೋಲಿಕೆಯ ನುಡಿಗಳು ಎಂಬುದು ನಾವು ಅರಿತುಕೊಳ್ಳಬೇಕಾಗಿದೆ.

ಮಾನವನ ಜೀವನದಲ್ಲಿ ಆಸೆ, ದುರಾಸೆ, ಅಪೇಕ್ಷೆ, ಆಕಾಂಕ್ಷೆ, ಕನಸುಗಳು ಇರುವುದು ಸಹಜ. ಸಣ್ಣ ಪುಟ್ಟ ತೊಂದರೆಗಳು ಎದುರಾದಾಗ ಅವೆಲ್ಲವೂ ಹಿಮ್ಮೆಟಿಸಿ ಮುನ್ನುಗ್ಗುವ ಪ್ರಯತ್ನ ಮಾಡಬೇಕು, ಬದುಕಿನ ಎಲ್ಲಾ ತೊಡಕುಗಳನ್ನು ಪ್ರೀತಿಯಿಂದ ಬಿಡಿಸಿಕೊಳ್ಳಬೇಕೆಂಬುದು ವಚನಕಾರ ವೀರಗೊಲ್ಲಾಳ ನೀಡುವ ಅನುಭವ.

ದೊಡ್ಡ ಕೆಲಸಗಳು ಕೈಗೊಂಡಾಗ ದೊಡ್ಡ ಸವಾಲುಗಳು ಎದುರಾಗುವುದು ಸರ್ವೇಸಾಮಾನ್ಯ. ಅವುಗಳಿಗೆ ಹೆಚ್ಚು ಒತ್ತು ಕೊಟ್ಟು ಮುಂದಿನ ದಾರಿ ಹುಡುಕಬೇಕಾಗುತ್ತದೆ. ಹಾಗೇ ಸಣ್ಣ ಕುರಿಗಳು ಸಾಲಾಗಿ ಸರಿದಾರಿಗೆ ನಡೆದರೆ, ದೊಡ್ಡ ಕುರಿಗಳು ಅಡ್ಡದಾರಿ ಹಿಡಿಯುತ್ತವೆ. ಅವುಗಳಿಗೆ ಸರಿದಾರಿಗೆ ತರಲು ಜ್ಞಾನ ಎಂಬ ಕೋಲು ಅವಶ್ಯವಾಗಿದೆ ಎನ್ನುವ ಚಿಂತನೆ ವಚನಕಾರರು ಪ್ರತಿಪಾದಿಸುತ್ತಾರೆ. .

ಸರಿದಾರಿ ಬಿಟ್ಟು ಅಡ್ಡದಾರಿ ಹಿಡಿಯುವ ಚುಕ್ಕಿ ಚುಕ್ಕಿ ಬಣ್ಣದ ಕುರಿಗಳನ್ನು ಬಯ್ಯುತ್ತೇನೆ, ಕೋಲಿನಿಂದ ಹೊಡೆದು ತಿದ್ದುತ್ತೇನೆ. ಅಂದರೆ ಸತ್ಯ, ನಿಷ್ಠೆ, ಸನ್ಮಾರ್ಗದಲ್ಲಿ ಹೋಗುವ ಮಾನವನು ಒಮ್ಮೊಮ್ಮೆ ಅಡ್ಡದಾರಿ ಹಿಡಿಯುತ್ತಾನೆ. ಅರಿವಿಲ್ಲದೆ ತಂತಾನೆ ಅಜ್ಞಾನದ ಕೂಪದಲ್ಲಿ ಮುಳುಗುತ್ತಾನೆ. ಅಂತಹ ಮಾನವರಿಗೆ ಅರಿವಿನ ಕೊರತೆ ಇರುತ್ತದೆ ಎಂದು ಹೇಳುತ್ತಾನೆ.

ಕುರಿಗಳಲ್ಲಿ ಒಂದೇ ರೀತಿಯ ಕುರಿಗಳು ಇರುವುದಿಲ್ಲ. ಹಾಗೇ ಮನುಷ್ಯರಲ್ಲಿಯೂ ಕೂಡ ಒಂದೇ ವಿಚಾರಧಾರೆದವರು ಇರಲು ಸಾಧ್ಯವಿಲ್ಲ. ಒಬ್ಬರು ಸತ್ಯ ಶುದ್ಧ ಶಾಂತಿ ಪ್ರೀಯರು, ಇನ್ನೂ ಕೆಲವರು ಅಹಂಕಾರ ಭಾವನೆದವರು, ಮತ್ತೆ ಕೆಲವರು ದುಷ್ಟರು, ಅಜ್ಞಾನಿಗಳು ಇರುತ್ತಾರೆ. ಮನುಜ ಪಥ ಬಿಟ್ಟು ಅವಗುಣ ಬೆಳೆಸುಕೊಂಡು ಹೋಗುವರನ್ನು ನ್ಯಾಯಪಥಕ್ಕೆ ಬರುವಂತೆ ಸೂಚಿಸುತ್ತಾನೆ.

ಕುರಿಯ ಹಿಂಡು ತೊರೆದು ಅಡ್ಡದಾರಿ ಹಿಡಿದು ಹೋಗುವ ಸೊಕ್ಕೇರಿದ ಟಗರನ್ನು ಕೋಲಿನಿಂದ ಬಾರಿಸಿ ಸತ್ಪಥದಲ್ಲಿ ಹೋಗುವಂತೆ ತಿರುಗಿಸುತ್ತೇನೆಂದು ಹೇಳುತ್ತಾನೆ. ಹಾಗೇ ಮನುಷ್ಯ ಕೂಡ ಸಾರ್ಥಕ ಜೀವನಕ್ಕೆ ಅವಶ್ಯವಾದ ಸದ್ಗುಣಗಳಿಗೆ ಒಳಗೊಳ್ಳದ ಕಾರಣ ಒಮ್ಮೊಮ್ಮೆ ಕೆಟ್ಟ ಪ್ರವೃತ್ತಿಗಳಿಗೆ ದಾಸನಾಗುತ್ತಾನೆ. ಅಂತಹ ದಾರಿಬಿಟ್ಟವರನ್ನು ಸರಿಪಡಿಸಲು ಪ್ರಜ್ಞಾವಂತರ ಅಗತ್ಯವಿದೆ. ಎಲ್ಲಿ ಕತ್ತಲೆ ಆವರಿಸುತ್ತದೆಯೋ ಅಲ್ಲಿ ಸುಜ್ಞಾನದ ಬೆಳಕು ಹರಿಯಬೇಕು, ಅಂತಹ ಕೋಲು ನಮ್ಮ ಕೈಯಲ್ಲಿ ಇರಬೇಕು ಎನ್ನುವ ರೂಪಕದ ನುಡಿಗಳು ಶರಣರು ಹೇಳುತ್ತಾರೆ.

ಜೀವನದ ಸತ್ಪಥ ಕಂಡುಕೊಳ್ಳದವರು ಮದ, ಮತ್ಸರ, ಅಹಂಕಾರ ಎಂಬ ವ್ಯಸನಗಳಿಗೆ ಒಳಪಡುತ್ತಾರೆ. ಸೊಕ್ಕೇರಿದ ಟಗರು ಹಾಗೇ ಮನುಷ್ಯ ಕೂಡ ಒಮ್ಮೊಮ್ಮೆ ತನ್ನ ನೀಚ ಬುದ್ಧಿ, ಕೌರ್ಯ, ಹಿಂಸೆ, ಶೌರ್ಯ ಪ್ರದರ್ಶಿಸಲು ಮುಂದಾಗುತ್ತಾನೆ.
ಇಂತಹ ದುರ್ಗುಣ, ದುರ್ಬುದ್ಧಿಯನ್ನು ಸರಿಪಡಿಸಲು ಶರಣರ ಮಾರ್ಗದರ್ಶನ, ಒಡನಾಟ, ತೀರ ಅಗತ್ಯವಿದೆ. ಇಂದು ಸಮಾಜದಲ್ಲಿ ಜೀವಪರ, ಜನಪರ ವಿಚಾರಧಾರೆಯ ವ್ಯಕ್ತಿತ್ವಗಳ ಸಂಖ್ಯೆ ಹೆಚ್ಚಾಗಬೇಕಾಗಿದೆ. ಮದವೇರಿದ ಟಗರುಗಳ ಸೊಕ್ಕು ಮುರಿಯಲು ಅಹಿಂಸೆಯೇ ಪರಮ ಅಸ್ತ್ರವಾಗಿದೆ. ಅದನ್ನು ಸಂಪ್ರೀತಿ, ಸುಜ್ಞಾನದ ದಾರಿ ಎಂದು ಕರೆಯುತ್ತೇವೆ.

ಕುರಿಗಳ ಹಿಂಡಿನೊಳಗೆ ತಿರುಗಾಡುವ ಅನುಭಾವಿ ವಚನಕಾರ ವೀರಗೊಲ್ಲನು ಕುರಿಗಳ ಜೊತೆಗಿನ ತನ್ನ ಒಡನಾಟದ ಅನುಭವ ತತ್ವಸಾರ ಮನುಷ್ಯನ ಬದುಕಿಗೆ ಕೇಂದ್ರಿಕರಿಸಿ ಬೋಧಿಸಲು ಪ್ರಯತ್ನಿಸುತ್ತಾನೆ. ಈ ವಿಕಾರ ಬಿಡಿಸಿ ನನ್ನೊಳಗೆ ಅಡಗಿರುವ ಘನಜ್ಞಾನ ಕರುಣಿಸು, ನಿನ್ನ ನಿಜ ಸ್ವರೂಪ ತೋರುವ ಮೂಲಕ ನನ್ನ ಅರಿವಿನ ಬೆಳಕು ತೋರಯ್ಯಾ ಎಂದು ಬೇಡುತ್ತಾನೆ.

ದೇವರ ದಿವ್ಯ ಜ್ಞಾನಕ್ಕಾಗಿ ‘ಶರಣ ಮಾರ್ಗ’ದಲ್ಲಿ ಇರಿಸು ನನ್ನೊಡೆಯನೇ ಎಂದು ಆಧ್ಯಾತ್ಮ ಗುರು ವೀರಬೀರೇಶ್ವರನಲ್ಲಿ ಬಿನ್ನಹಿಸಿಕೊಳ್ಳುತ್ತಾನೆ. ಬಸವಣ್ಣನವರ ಸ್ಥಾಪಿಸಿದ ಶರಣಮಾರ್ಗ ಸಾತ್ವಿಕ ಬದುಕಿನ ಸತ್ಪಥ ತೋರಿಸುತ್ತದೆ. ಶರಣರು ಕಾಯಕದ ಮೂಲಕ ಆತ್ಮಜ್ಞಾನ ಪಡೆದುಕೊಂಡು ದೈನಂದಿನ ಜೀವನಕ್ಕೆ ಒಳಗೊಳ್ಳುವಂತೆ ಸೂಚಿಸುತ್ತಾರೆ.

ಜೀವನದಲ್ಲಿ ಎದುರಾಗುವ ಬಹುತೇಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಇದ್ದೆ ಇರುತ್ತದೆ. ಆದರೆ ಪರಿಹಾರ ಕಂಡುಕೊಳ್ಳಲು ಬಹುತೇಕರು ವಿಫಲರಾಗುತ್ತಾರೆ. ಅದಕ್ಕೆ ಜ್ಞಾನ, ತಾಳ್ಮೆ, ಕಾಲ, ಸತ್ಯ ಮತ್ತು ಧೈರ್ಯದ ಅಗತ್ಯವಿದೆ. ಕಾಯಕದ ಅನುಭಾವದ ಮೂಲಕ ಜ್ಞಾನ ಚೈತನ್ಯ ವೃದ್ಧಿಸಿಕೊಳ್ಳಲು ಸಾಧ್ಯವಾಗಿದೆ. ಈ ದಿಸೆಯಲ್ಲಿ ಬಸವಾದಿ ಶರಣರು ಜೀವನ ಚೈತನ್ಯರಾಗಿ, ವಿಶ್ವಮಾನವರಾಗಿ ಜಗತ್ತಿಗೆ ಮಾದರಿಯಾಗಿದ್ದಾರೆ. ಶರಣರ ಜೀವನ ದರ್ಶನದ ಅನುಭಾವ ಸಾರ್ವಕಾಲಿಕ ಸತ್ಯವಾಗಿದೆ‌. ಶರಣರ ವಚನ ಅನುಭವದ ಮಾನವೀಯ ಮೌಲ್ಯಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿವೆ.

“ಕಲ್ಲು ಲಿಂಗವಲ್ಲ, ಉಳಿಯ ಮೊನೆಯಲ್ಲಿ ಒಡೆಯಿತ್ತು.
ಮರ ದೇವರಲ್ಲ, ಉರಿಯಲ್ಲಿ ಬೆಂದಿತ್ತು.
ಮಣ್ಣು ದೇವರಲ್ಲ, ನೀರಿನ ಕೊನೆಯಲ್ಲಿ ಕದಡಿತ್ತು.”

ಶರಣ ವೀರಗೊಲ್ಲಾಳ ಮತ್ತೊಂದು ವಚನದಲ್ಲಿ ಕಲ್ಲು, ಮಣ್ಣು, ಮರ ದೇವರಲ್ಲ, ಕಲ್ಲು ದೇವರು ಉಳಿಗೆ ಹೆದರಿತು, ಮರ.ದೇವರು ಉರಿಗೆ ಬೆಂದಿತು, ಮಣ್ಣು ದೇವರು ನೀರಿನಲ್ಲಿ ಕರಗಿತು. ಇಂತಹ ದೇವರು ದೇವರಲ್ಲ ಎನ್ನುವ ತಾತ್ವಿಕ ಚಿಂತನೆ ಶರಣ ವೀರಗೊಲ್ಲನು ದಾಖಲಿಸುತ್ತಾನೆ.

ಒಬ್ಬ ಸಾಮಾನ್ಯ ಕಾಯಕ ಜೀವಿ, ಇಂತಹ ಅನನ್ಯವಾದ ತತ್ವಪರಿಭಾಷೆಯ ವಚನಗಳು ರಚಿಸಿರುವುದು ಈ ನೆಲದ ಹೆಮ್ಮೆ ಎಂದಷ್ಟೇ ಹೇಳಬಹುದು. ಶರಣರ ಸಂದೇಶಗಳನ್ನು ಮತ್ತೆ ಮುನ್ನೆಲೆಗೆ ಬಂದರೆ ಈ ನೆಲ ಶಾಂತಿ, ಸೌಹಾರ್ದತೆ ಹಾಗೂ ಕಲ್ಯಾಣ (ಸಮ ಸಮಾಜ) ರಾಜ್ಯವಾಗಿ ರೂಪುಗೊಳ್ಳಲು ಸಾಧ್ಯವಿದೆ.

*****************************


Leave a Reply

Back To Top