ಕವಿತೆ
ಸ್ವಗತ
ಮಮತಾ ಶಂಕರ್
ದೂರದಲ್ಲಿ ನಾನು ನೀನು
ಒಂದಾಗಿ ಕಂಡರೂ ಒಂದಾಗದ ನಿಜ
ದೂರದ ಕಣ್ಗಳಿಗೆ ಸುಳ್ಳೆಲ್ಲವೂ ಸತ್ಯವೇ….
ನೀನು ಮೇಲೆ ತನ್ನ ಪಾಡಿಗೆ ತಾನಿರುವ ಗಗನ
ಸೂರ್ಯ ಮೋಹಿತೆ ಭೂಮಿಗೆ ತನ್ನ ಕಕ್ಷೆಯಲ್ಲೇ ಯಾನ
ನೀನು ಒಮ್ಮೊಮ್ಮೆ ಉರಿಯೆದ್ದು
ಸುರಿಸುವೆ ಕೆಂಡ ಮೈಮನಗಳಿಗೆ ;
ನಾನೋ ಹಪಹಪಿಸುವೆ ಒಂದೆರಡು
ತಂಪನಿಗಳಿಗೆ
ಹುಚ್ಚೆದ್ದು ಮಳೆ ಸುರಿಸುವೆ ಅದೆ
ಒಲವೆಂದು ಬಾನೆದೆಯ ಸೀಳಿ ;
ಕಡಲುಕ್ಕಿಸಿ ನದಿ ಸೊಕ್ಕಿಸಿ ತಳಮಳಿಸುವೆ
ಬಿಕ್ಕಳಿಸುತ ನಾನಿಲ್ಲಿ……
ನಿನ್ನಿಂದ ಅದೆಷ್ಟು ಬಾರಿ ಬಿರುಮಳೆಗೆ
ಬಿರುಗಾಳಿಗೆ ಬಿರುಬಿಸಿಲಿಗೆ ತುತ್ತಾದರೂ ನಾನು
ನಿನಗುಂಟೆ ಈ ಒಡಲೊಳಗಿಂದ
ಕಣಕಣವು ನೋವಾಗಿ ಚಿಗುರಿ ಮರ
ಹೂ ಕಾಯಿ ಹಣ್ಣಾಗುವ ಭಾರ ?
ನೀ ಸುರಿಸಿದರೂ ಬೆಳದಿಂಗಳು ಮಳೆಯ
ಕ್ಷಣವಷ್ಟೆ ; ಮತ್ತೆಲ್ಲ ಮಾಯೆ……..
ನನ್ನೆದೆಯ ನೋವುಗಳು, ನಿಟ್ಟುಸಿರುಗಳು
ತಾಕುವುದೇ ಇಲ್ಲ ನಿನಗೆ
ಏಕೆಂದರೆ ತಾಕುವುದೇ ಇಲ್ಲ
ನಾ ನಿನಗೆ ನೀ ನನಗೆ !
ಆದರೂ ಇರಬೇಕಾಗುತ್ತದೆ
ಒಬ್ಬರಿಗೊಬ್ಬರು ಪೂರಕವಾಗಿ
ಸೌಖ್ಯಯಾನಕೆ ಒಂದಾಗದ
ರೈಲು ಹಳಿಗಳ ಹಾಗೆ
ಒಂದಾಗಿ ಬಾಳುವುದೆ ಬದುಕೆಂದುಕೊಳ್ಳುವುದಕ್ಕಿಂತ
ಜೊತೆಯಾಗಿ ಸಾಗುವುದೆ ಒಲವೆಂದುಕೊಳ್ಳುತ್ತ
**************************************
ಈ ಪದ್ಯ ತುಂಬಾ ಇಷ್ಟವಾಯಿತು
ಹಲವು ಮನಗಳು ಮೆಲುಕು ಹಾಕುವ ಸಾಲುಗಳಿವು
ಧನ್ಯವಾದಗಳು ಮೇಡಂ ತಮಗೆ