ಅಪ್ಪಂದಿರ ದಿನದ ವಿಶೇಷ-
ಸುಜಾತಾ ರವೀಶ್
ಅಪ್ಪ ಅಂದರೆ ಆಕಾಶ

ಹೌದು ಅಣ್ಣ ನಿಜಕ್ಕೂ ನೀನು ಆಕಾಶ ನೀನೆಂಬ ನಿನ್ನ ನಿಡುನೆಳಲ ಆಸರೆಯಲಿ
ರೆಕ್ಕೆಬಿಚ್ಚಿ ಹಾರಿದ ಪುಟ್ಟ ಹಕ್ಕಿ ನಾನು
ಹದ್ದುಗಳ ಬಿರುಗಾಳಿಯ ಭೀತಿಯಿರದೆ
ಸ್ವೇಚ್ಛೆಯಲಿ ಬಾಲ್ಯ ಕಳೆದ ಮರಿಯು ನಾನು
ನೀನೆಂದರೆ ಶಿಸ್ತಿನ ಅಪರಾವತಾರ ಸತ್ಯ
ಆ ಜಾಗರೂಕತೆಯೇ ಬೆಳೆಸಿಹುದು ನಮ್ಮ
ಇಂದಿನ ಜಗ ಅರಿವ ಸಾಹಸದೆ ನೆರವಾಗಿ
ಬೆಳಕಿನತ್ತ ಕೊಂಡೊಯ್ಯುತ್ತಿರುವುದು ನಿತ್ಯ
ನೀನಿಲ್ಲವೆಂದೆನಿಸಲು ಕಾರಣವೇ ಇಲ್ಲವಲ್ಲ
ನಿನ್ನದೇ ಪಡಿನೆರಳು ಪ್ರತಿಬಿಂಬ ನಾವೆಲ್ಲ
ನಿನ್ನ ಅನಿಸಿಕೆಗಳೇ ನಮ್ಮಲ್ಲೂ ಒಡಮೂಡಿ
ಅನುದಿನವೂ ಪ್ರತಿಧ್ವನಿ ನಮ್ಮ ಸ್ವಗತವೆಲ್ಲ
ದೇಹದ ಅಣು ಅಣುವೂ ನೀವಿತ್ತ ಭಿಕ್ಷೆ
ತಿಳಿವ ಬೆಳಕ ಹಚ್ಚಿಸಿಹುದು ನೀನಿತ್ತ ಶಿಕ್ಷೆ
ನಿನ್ನ ನೆನಪುಗಳು ಸದಾ ಹೃದಯದಲಿ ಹಚ್ಚೆ
ಅಂದು ಇಂದು ಮುಂದೆಂದೂ ನಮಗೆ ರಕ್ಷೆ
ಸುಜಾತಾ ರವೀಶ್