ಕವಿತೆ
ಧಿಕ್ಕಾರ… ಧಿಕ್ಕಾರ…!!
ಡಾ. ಮಲ್ಲಿನಾಥ ಎಸ್. ತಳವಾರ
ಭೋಗದ ವಸ್ತುವೆಂದು ಭಾವಿಸಿದ ಈ ಸಮಾಜಕ್ಕೊಂದು ಧಿಕ್ಕಾರ
ಹೆರಿಗೆಯ ಯಂತ್ರವೆಂದು ಭಾವಿಸಿದ ಗಂಡುಕುಲಕ್ಕೊಂದು ಧಿಕ್ಕಾರ
ನಯ ನಾಜೂಕಿನ ಬಲವಂತದ ಫೋಷಾಕು ತೊಡಿಸಿದರು ಹೆತ್ತವರು
ತಾಳ್ಮೆಯ ಅನಗತ್ಯ ಮಾಲೆ ಕೊರಳಿಗೆ ಹಾಕಿದರು ಬೆಳ್ಳಿ ಕೂದಲಿನವರು
ಬಿಟ್ಟು ಕೊಡುವುದರಲ್ಲಿಯೇ ತೃಪ್ತಿ ಪಡೆಯಬೇಕೆಂದರು ಬಂಧುಗಳು
ಗಂಡಿಗಿಲ್ಲದ ಮೌಲ್ಯ ನಮ್ಮ ಮೇಲೆ ಹೇರಿದ ಪುಸ್ತಕಗಳಿಗೊಂದು ಧಿಕ್ಕಾರ
ಕಾಮದ ಕಂಗಳಲಿ ನುಂಗುವ ತೋಳಗಳಿವೆ ನಮ್ಮ ನೆರೆಹೊರೆಯಲ್ಲಿ
ಮುಖವಾಡದಿ ಉಬ್ಬು-ತಗ್ಗುಗಳ ಕಂಡು ಜೊಲ್ಲು ಸುರಿಸುವ ನಮ್ಮವರಿದ್ದಾರೆ
ಹಣ ಚೆಲ್ಲಿ ಕನಸುಗಳನ್ನು ದೋಚುವ ಧನಿಕರು ಇದ್ದಾರೆ ಜಗದೊಳಗೆ
ಬೆತ್ತಲೆ ದೇಹಕ್ಕೆ ಬೆಣ್ಣೆ ಸವರುವ ಮಾತಿನ ಮಲ್ಲರಿಗೊಂದು ಧಿಕ್ಕಾರ
ತಮ್ಮ ದೇಹಕ್ಕಿಂತ ನಮ್ಮ ತುಂಬಿದ ಅವಯವಗಳ ಮೇಲೆ ಅವರ ಕಣ್ಣು
ಚಾವಡಿಗಳ ತುಂಬೆಲ್ಲ ಸೀರೆ, ಚೂಡಿದಾರ ಎಳೆಯುವ ನಯವಂಚಕರಿದ್ದಾರೆ
ಅಂತರ್ಜಾಲವೂ ಬಿಕರಿಯಾಗುತಿದೆ ಇಂದು ಸೌಂದರ್ಯದ ಮಣ್ಣಿನಲ್ಲಿ
ರಕ್ತಸಿಕ್ತ ಅಂಗಾಂಗಗಳ ಮೇಲೆ ಆಟ ಆಡುವ ಸಜ್ಜನರಿಗೊಂದು ಧಿಕ್ಕಾರ
ಧಿಕ್ಕಾರ.. ಧಿಕ್ಕಾರ.. ಪುರುಷಾರ್ಥಗಳಲ್ಲಿ ಕಾಮವನ್ನು ಪೂಜಿಸುವವರಿಗೆ
ಧಿಕ್ಕಾರ… ಧಿಕ್ಕಾರ.. ದಾನವ ರೂಪದಲ್ಲಿ ಅಡಗಿರುವ ಬುದ್ಧಿವಂತರಿಗೆ
*******************************
ಮಾರ್ಮಿಕ ಕವಿತೆ!!