ಅಂಕಣ ಬರಹ

ಹೊಸ ದನಿ – ಹೊಸ ಬನಿ – ೯

ಅರ್ಥಕ್ಕೂ ಮೀರಿದ

ಅನುಭವಗಳಲ್ಲಿ ಅರಳುವ     

“ಶ್ರೀ ತಲಗೇರಿ” ಕವಿತೆಗಳು

ಅರ್ಥಕ್ಕೂ ಮೀರಿದ ಅನುಭವಗಳಲ್ಲಿ ಅರಳುವ      “ಶ್ರೀ ತಲಗೇರಿ” ಕವಿತೆಗಳು.

ಉತ್ತರ ಕನ್ನಡ ಜಿಲ್ಲೆ  ಕನ್ನಡ ಸಾಹಿತ್ಯ ಮತ್ತು ರಂಗಭೂಮಿಗೆ ತನ್ನದೇ ಆದ ವಿಶೇಷ ಕೊಡುಗೆಗಳನ್ನು ನೀಡುತ್ತಲೇ ಬಂದಿದೆ. ಯಶವಂತ ಚಿತ್ತಾಲ, ಜಯಂತ ಕಾಯ್ಕಿಣಿಯಂಥ ಅದ್ಭುತ ಪ್ರತಿಭೆಗಳನ್ನು ಮುಂಬಯಿಯ ಮಹಾಕೂಪಕ್ಕೆ ತಳ್ಳಿಯೂ ಅವರಿಂದ ಆ ಮಹಾನಗರದ ಸಕಲ ಸೂಕ್ಷ್ಮಗಳ ಪರಿಚಯ ಮಾಡಿಸುತ್ತಲೇ ತನ್ನದೇ ಆದ ಹವ್ಯಕ ಕನ್ನಡ ಮತ್ತು ಮೀನು ವಾಸನೆಯ ಸೊಗಸನ್ನು ಸೇರಿಸಿದ ಭಾಷೆಯನ್ನು ಟಂಕಿಸಿ ತನ್ಮೂಲಕ ಉತ್ತರ ಕನ್ನಡದ ಪರಿಸರದ ಮೇಲೆ ಆಧುನಿಕ ಬದುಕಿನ ಪ್ರಭಾವಗಳನ್ನು ತಲಸ್ಪರ್ಶಿಯಾಗಿಯೂ ಹೃದ್ಯವಾಗಿಯೂ ಅಭಿವ್ಯಕ್ತಿಸಿದೆ. ಅಭಿವೃದ್ಧಿಯ ಹೆಸರಲ್ಲಿ ಈ ನೆಲದ ಮೇಲಾದ ಹಲವು ದಾರುಣ ಪ್ರಯೋಗಗಳನ್ನೂ ಮತ್ತು ಆ ಎಲ್ಲ ಪ್ರಯೋಗಗಳಿಂದಾಗಿ ಅಸ್ತವ್ಯಸ್ತವಾದ ಅಲ್ಲಿನ ಜನ ಜೀವನವನ್ನೂ ಉತ್ತರ ಕನ್ನಡದ ಹಲವು ಬರಹಗಾರರು ಅದ್ಭುತವಾಗಿ ಚಿತ್ರಿಸಿದ್ದಾರೆ.

ಇದೇ ಜಿಲ್ಲೆಯ ತಲಗೇರಿ ಅನ್ನುವ ಪುಟ್ಟ ಗ್ರಾಮದ  ಶ್ರೀಧರ ಭಟ್ ಹೆಸರಲ್ಲಿ ಫೇಸ್ಬುಕ್ ಖಾತೆ ಇದ್ದರೂ ಶ್ರೀ ತಲಗೇರಿ ಎನ್ನುವ ಹೆಸರಲ್ಲೇ ಅವರು ಪದ್ಯಗಳನ್ನು ಪ್ರಕಟಿಸುತ್ತಿದ್ದಾರೆ. ಪ್ರಕೃತಿಯ ಕೌತುಕ, ನಗರದ ಗದ್ದಲ,ಮನುಷ್ಯನ ಮೂಲಭೂತ ನಡವಳಿಕೆಗಳ ಮನೋಭೂಮಿಕೆಯ ತಲ್ಲಣಗಳಲ್ಲಿ ಅತೀವ ಆಸಕ್ತಿ ತೋರುವ ಇವರ ಪದ್ಯಗಳಲ್ಲಿ ವಯಸ್ಸಿಗೂ ಮೀರಿದ ಅನುಸಂಧಾನಗಳಿವೆ. ಇತ್ತೀಚೆಗಷ್ಟೇ ‘ಒಂಟಿ ಟೊಂಗೆಯ ಲಾಂದ್ರ’ ಹೆಸರಿನ ಕವನ ಸಂಕಲನ ಇ-ಪುಸ್ತಕವಾಗಿ ಬಿಡುಗಡೆಯಾಗಿದೆ.

ವಾಟ್ಸ್ ಆಪಿನ ಹಲವು ಗುಂಪುಗಳಲ್ಲಿ “ಕಾವ್ಯ ಕೇಳಿ” ಗುಂಪು ಸದಾ ರಚನಾತ್ಮಕ ಕೆಲಸಗಳಲ್ಲಿ ತೊಡಗಿರುತ್ತದೆ. ಸುಬ್ರಾಯ ಚೊಕ್ಕಾಡಿ ಮತ್ತು ತಿರುಮಲೇಶರ ಹುಟ್ಟುಹಬ್ಬದ ಸಲುವಾಗಿ ಅನೇಕ ಬರಹಗಳನ್ನು ಈ ಗುಂಪು ಪ್ರಕಟಿಸಿತು. ಈ ಗುಂಪಿನ ಸಾಮಾನ್ಯ ಸದಸ್ಯನಾಗಿ ಪ್ರಕಟಿಸುವುದಕ್ಕಿಂತಲೂ ಅಲ್ಲಿನ ಬರಹಗಳನ್ನು ಓದುವುದರಲ್ಲೇ ಹಿತ ಕಂಡಿರುವ ನನಗೆ ಆ ಗುಂಪಿನಲ್ಲಿ “ಶ್ರೀ ತಲಗೇರಿ” ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತಂತೆ ಬರೆಯುವ ರೀತಿಯಿಂದ ಚಕಿತನಾಗಿದ್ದೇನೆ. ಮೂಲತಃ ಕಂಪ್ಯೂಟರ್ ಪ್ರೋಗ್ರಾಮರ್ ಆದ ಶ್ರೀಧರ ಭಟ್ ತಮ್ಮ ವಯಸ್ಸಿಗೂ ಮೀರಿದ ಅನುಸಂಧಾನಗಳನ್ನು ಕಾಣಿಸಿ ಚಕಿತಗೊಳಿಸುತ್ತಾರೆ. ಅವರ ಇತರ ಬರಹಗಳ ಬಗ್ಗೆಯೂ ಕುತೂಹಲವಿದ್ದರೂ ಈ ಅಂಕಣ ಕವಿತೆಗಳನ್ನು ಕುರಿತೇ ಇರುವುದರಿಂದಾಗಿ ಅವರ ಕೆಲವು ಕವಿತೆಗಳನ್ನು ಕುರಿತ ಈ ಟಿಪ್ಪಣಿಯನ್ನು ಅವರ ” ಕತ್ತಲು” ಕವಿತೆಯ ಸಾಲುಗಳ ಮೂಲಕ ಆರಂಭಿಸುತ್ತಿದ್ದೇನೆ;

ನಾವು ಕತ್ತಲನ್ನು ಕಾಯುತ್ತೇವೆ

ಕೂಡಲು ಬೇಡಲು

ಯಾವುದೋ ತುತ್ತ ತುದಿ ತಲುಪಿ

ದಂತೆ ನಿಟ್ಟುಸಿರು ಬಿಡಲು…..

ಪದ್ಯದ ಆರಂಭ ಕೂಡ ಇದೇ ಸಾಲುಗಳಿಂದಲೇ ಆಗಿದೆ. ಅಂದರೆ ಈ ಕವಿತೆಯಲ್ಲಿ ಕವಿ ತಾನು ಕಂಡುದನ್ನು ಮತ್ತೆ ಮತ್ತೆ ಕಟೆಯುವ ಸಲುವಾಗಿ ಅದೇ ಅದೇ ಸಾಲುಗಳನ್ನು ಬಳಸುತ್ತಲೇ ತನ್ನ ಅನುಭವದ ಮೂಲಕ ಕತ್ತಲನ್ನೂ ಮತ್ತು ಕತ್ತಲಿನ ಜೊತೆಗೇ ಇರುವ ಬೆಳಕನ್ನೂ ಇಲ್ಲಿ ಎದುರು ಬದುರು ನಿಲ್ಲಿಸುತ್ತಲೇ ಒಂದು ದಟ್ಟ ಅನುಭವದ ಸತ್ಯವನ್ನು ದಾಟಿಸುತ್ತಲೇ ಈ ವರೆಗೂ ಕನ್ನಡದಲ್ಲಿ ಬಂದ “ಬೆಳಕು” ಕುರಿತ ಕವಿತೆಗಳಿಗೆ ವಿರುದ್ಧವಾಗಿದ್ದರೂ ಆದರೆ ಸಶಕ್ತವಾದ ಒಂದು ಪದ್ಯವನ್ನಾಗಿಸಿದ್ದಾರೆ. ಪೂರ್ವಾಪರಗಳನ್ನು ಕತ್ತಲು ಮತ್ತು ಬೆಳಕಿನ ವಿನ್ಯಾಸದಲ್ಲಿ ಕಂಡರಿಸಿದ ಬಗೆಯೇ ಸೊಗಸಾಗಿದೆ. ಯಾವುದೋ ತುಟ್ಟ ತುದಿ ತಲುಪುತ್ತೇವೋ ಇಲ್ಲವೋ ಆದರೆ ನಿಟ್ಟುಸಿರನ್ನಂತೂ ಬಿಡುತ್ತೇವೆ ತಾನೆ?

“ಅಸ್ತಿತ್ವ” ಶೀರ್ಷಿಕೆಯ ಪದ್ಯ ಕಾಣುವುದಕ್ಕೆ ಸರಳವಾಗಿದೆ ಆದರೆ ಅದು ತನ್ನೊಳಗೇ ಇರಿಸಿಕೊಂಡಿರುವ ಪ್ರತಿಮೆ ಅಷ್ಟು ಸುಲಭಕ್ಕೆ ಎಟುಕುವುದಿಲ್ಲ. ಒಂದೆರಡು ಸಾಲುಗಳನ್ನಿಲ್ಲಿ ಕೋಟ್ ಮಾಡಿದರೆ ಪದ್ಯದ ಆಂತರ್ಯ ಸುಲಭಕ್ಕೆ ಸುಭಗಕ್ಕೆ ನಿಲುಕದ ಕಾರಣ ಇಡೀ ಪದ್ಯವನ್ನೇ ಓದುವುದು ವಿಹಿತ.

ಹೀಗೆ “ಮೌನವನ್ನಾತು ಕೂರಬೇಡ” ಎಂದು ಸುರುವಾಗುವ ಪದ್ಯದ ಸರಕು ಜಯಂತ ಕಾಯ್ಕಿಣಿಯವರ ಫೇವರಿಟ್ ಸಂಗತಿ. ಜಯಂತ್ ಸಾಮಾನ್ಯ ಸಂಗತಿಗಳ ಅಸಾಮಾನ್ಯ ವಿವರಗಳನ್ನು ಕಟ್ಟಿಕೊಡುವಂತೆಯೇ ಈ ಪದ್ಯ ಇರುವುದಾದರೂ ಇಡೀ ಪದ್ಯ ಹೊರಳಿಕೊಳ್ಳುವ ವಿಹ್ವಲತೆ ಅಷ್ಟು ಸುಲಭಕ್ಕೆ ಮರೆಯಲಾರದಂಥದು.

ಪ್ರಾಣವೇ ಪ್ರಾಣ ಹೀರಿ

ಮತ್ತೆ ವರ್ತಮಾನಕ್ಕೆ

ಮಿಲನ ಬರೀ ಸ್ಪರ್ಶವಲ್ಲ

ಮರುಹುಟ್ಟು ಆ ಗಳಿಗೆ

ಹೂ’ಗಳಿಗೆ’

ಪರಾಗ ಸ್ಪರ್ಶದ ಸಾಮಾನ್ಯ ಸಂಗತಿಯನ್ನು ಅನುನಯಿಸಿದ ರೀತಿ ಅದರಲ್ಲೂ “ಪ್ರಾಣವೇ ಪ್ರಾಣ ಹೀರಿ” ಎನ್ನುವ ರೀತಿ ಒಂದು ಜೇನ್ನೊಣ ಮತ್ತೊಂದು ಹೂವು, ಎರಡೂ ಜೀವಂತ ಇದ್ದರೂ ಅವುಗಳಲ್ಲಿ ಇರುವ ಪರಸ್ಪರ ಸಂಬಂಧಗಳನ್ನು “ಗಳಿಗೆ” (ಸಮಯ) ಕಾಯುತ್ತದಲ್ಲ ಅದನ್ನಿಲ್ಲಿ ಹೇಳಿದ ರೀತಿ ಇದುವರೆಗಿನ ಸಾಹಿತ್ಯ ಪಯಣದಲ್ಲೇ ಬೇರೆಯದೇ ಆಗಿದೆ.

”ಮಳೆಗಾಲಕಿನ್ನೂ ಅರ್ಧ ವಯಸ್ಸು’ ಎನ್ನುವ ಹೆಸರಿನ ಪದ್ಯ ಸುರುವಾಗುವ ಮೊದಲೇ ಮುಗಿದುಹೋಗಿದೆ. ಟಿಪ್ಪಣಿಯ ಸುರುವಿನಲ್ಲಿ ಹೇಳಿದ ಉತ್ತರ ಕನ್ನಡದ್ದೇ ಆದ ಪರಿಸರವನ್ನು ಚಂದಾಗಿ ಚಿತ್ರಿಸಿದ ಕವಿತೆ ಆ ಪ್ರತಿಮಾಲಂಕರದಲ್ಲೇ ಉಳಿದು ಅದನ್ನು ಓದುಗನಿಗೆ ದಾಟಿಸುವಷ್ಟರಲ್ಲಿ ವಿರಮಿಸಿ ಮುಂದೇ ಏನೋ ಆಗಬಹುದಾಗಿದ್ದ ಸಂಗತಿಗೆ ಬ್ರೇಕು ಹಾಕಿಸುತ್ತಲೇ ಸುನಂದಾ ಕಡಮೆ ಮತ್ತು ಜಯಂತರ ಕತೆ ಕವಿತೆಗಳನ್ನು ನೆನಪಿಸುತ್ತದೆ.

“ಪ್ರಶ್ನೆ” ಎನ್ನುವ ಹೆಸರಿನ ಪದ್ಯದ ಕೊನೆ ಹೀಗಿದೆ;

ಅಹಲ್ಯೆಯ ಗೌತಮರಿಗೊಪ್ಪಿಸಿದ ಹುಡುಗನೊಬ್ಬ

ಧರ್ಮದ ಗಡಿಯಲ್ಲೇ ಉಳಿದು ಹೋದ ರಾಜನಾದ

ಅಯೋಧ್ಯಾರಾಮ ನಾನು, ಸೀತೆಯಲ್ಲುಳಿದ ಪ್ರಶ್ನೆ ನಾನು

ಆದರೆ ಪದ್ಯದ ಆರಂಭದಲ್ಲೆಲ್ಲೂ ಮಹಾಕಾವ್ಯ ರಾಮಾಯಣದ ಯಾವ ಪಾತ್ರವೂ ಬಾರದೇ ಬರಿಯ ಸಂಕೇತಗಳಲ್ಲಷ್ಟೇ ಅರಳಿಕೊಳ್ಳುತ್ತಲೇ ತಿಳುವಳಿಕೆಯ ಆಳಕ್ಕೆ ಹೊರಳಿಕೊಳ್ಳುವ ಕವಿತೆ ಈ ಕವಿಯ ಮನಸ್ಸನ್ನು ಕಾಡುತ್ತಿರುವ ಸಂಗತಿಗಳನ್ನೂ ಸಂದರ್ಭಗಳನ್ನೂ ಸಾರ್ಥಕವಾಗಿ ಸಮೀಕರಿಸಿದೆ.

“ದೇವರ ವಿಳಾಸ ಹುಡುಕಿದ್ದೇನೆ” ಎನ್ನುವ ಪದ್ಯವಂತೂ ಈ ಕವಿ ಈಗಾಗಲೇ ದೇವರನ್ನು ಕುರಿತಂತೆ ಇರುವ ಎಲ್ಲ ಜಿಜ್ಞಾಸೆ ಮತ್ತು ಹೇಳಿಕೆಗಳನ್ನು ಒಳಗೊಳ್ಳುತ್ತಲೇ ನಿರಾಕರಿಸುವ ಮತ್ತು ತನ್ನದೇ ಕಾಣ್ಕೆಯನ್ನು ಕೊಡುತ್ತದೆ;

ಹೌದಲ್ಲಾ, ತನ್ನಿರುವ ಚೂರು ಚೂರೇ ಬಿಟ್ಟು

ಕಳೆದುಹೋದವ ಇದೇ ಜಂಗುಳಿಯ ಮಧ್ಯ..

ಇಲ್ಲೀಗ ಈ ಮರಗಳ ಕೆಳಗೆ ಕೂತವರೆಲ್ಲಾ

ಮುಂದೇನಾಗುವರು ?!..

ಅಲ್ಲಿಗೆ ಈ ಕವಿ ದೇವರೆನ್ನುವುದನ್ನು ಲೌಕಿಕದ ಸಂಗತಿಗಳ ಮಧ್ಯೆ ಮತ್ತು ಸಂಬಂಧಗಳ ಸೀಮಿತಾರ್ಥದಾಚೆಯ ನಿಲುಕಲ್ಲಿ ಹುಡುಕುತ್ತಿದ್ದಾನೆ. ಮೂರ್ತಿರಾಯರು ಮತ್ತು ನರಸಿಂಹಯ್ಯನವರ ದೇವರನ್ನೂ ಇಲ್ಲಿ ಸ್ಮರಿಸಿದರೆ ಸಹೃದಯರಿಗೆ ಈ ಪದ್ಯ ಬಗೆಯಲು ಇನ್ನಷ್ಟು ಸಹಕಾರಿ.

ಗುಡಿಸಲಿನ ಇತಿಹಾಸದಲಿ

ರೇಖೆ ದಾಟಿದರೆ ಸೀತೆಗೆ

ಅಪಹರಣದ ಭೀತಿ..

ರಾವಣ ಮಾರುವೇಷದಲ್ಲಿದ್ದಾನೆ..

“ಗೆರೆ” ಎನ್ನುವ ತಲೆಬರಹದ ಈ ಪದ್ಯದ ಕೊನೆ ವರ್ತಮಾನ ಮತ್ತು ಭೂತವನ್ನು ಒಗ್ಗೂಡಿಸಿದ ಭವಿಷ್ಯದ ವಾರ್ತೆಯಂತೆ ಅಂದುಕೊಂಡರೆ ಅದು ಒಟ್ಟೂ ಸಾಮಾಜಿಕತೆಯ ಸರಳ ಮೌಲ್ಯೀಕರಣ. ಮತ್ತು ಈ ಕವಿ ತನ್ನ ಅನುಭವ ಮತ್ತು ಓದಿನಿಂದ ಇತಿವೃತ್ತಗೊಳಿಸಿಕೊಂಡಿರುವ ವಿವೇಕದ ಮಿತಿ.

ಕನ್ನಡದ ಮಹತ್ವದ ಕವಿ ತಿರುಮಲೇಶರ ಸ್ಪೂರ್ತಿ ಈ ಕವಿ ಶ್ರೀ ತಲಗೇರಿ ಅವರ ಮೇಲಿರುವುದು ಸ್ಪಷ್ಟವಾಗಿದೆ. ಮತ್ತು ಕ್ವಚಿತ್ತಾಗಿ ಅಡಿಗರನ್ನೂ ರಾಮಾನುಜರನ್ನೂ ಇವರು ಆವರ್ಭಿಸಿಕೊಂಡಿರುವುದೂ ಅವರ ಕವಿತೆಗಳು ನೀಡುವ ದರ್ಶನದಿಂದ ಗುರ್ತಿಸಬಹುದು. ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಆಂತರ್ಯದಲ್ಲಿ ಸಂಕೀರ್ಣತೆ ಇಟ್ಟುಕೊಂಡಿರುವ ಕೆ ಎಸ್ ನ ಮತ್ತು ಜಿ  ಎಸ್ ಎಸ್ ಇವರಿಗೆ ದೂರ. ಏಕೆಂದರೆ ಇನ್ನೂ ೨೬ರ ಹರಯದ ಈ ಹುಡುಗನ ಕವಿತೆಗಳಲ್ಲಿ ಹುಡುಕಿದರೂ ಆ ಪ್ರಾಯಕ್ಕೆ ಸಹಜವಾಗಿ ಬರಲೇಬೇಕಾದ ಪ್ರೇಮ ಮತ್ತು ಪ್ರೀತಿ ಹಾಗೂ ಹುಡುಗ ಹುಡುಗಿಯರ ಒಲವ ಹಾಡಿನ ಸೂಚನೆಗಳೇ ಇಲ್ಲ. ಇದು ಹೀಗಾಗಬಾರದು ಎಲ್ಲ ಕವಿಗಳೂ ವಿಶೇಷತಃ ಯುವಕರು ಬರಿಯ ಜಿಜ್ಞಾಸೆ ಮತ್ತು ಪಾರಮಾರ್ಥದ ಸುಳಿಗಳಲ್ಲಿ ಇಳಿದುಬಿಟ್ಟರೆ ಲೌಕಿಕದ ಗತಿಯೇನು? ಅರ್ಥ ಮತ್ತು ಧ್ಯಾನದೀಚೆಗಿನ ವಯೋ ಸಹಜ ದಾಂಗುಡಿಗಳನ್ನೂ ಪೋಷಿಸದ ಪ್ರಜ್ಞೆ ಲೌಕಿಕವನ್ನು ಬಿಟ್ಟುಕೊಟ್ಟರೆ ಗತಿಯೇನು?

“ಬುದ್ಧ ಮೊದಲೇ ಇದ್ದ” ಎನ್ನುವ ಕವಿತೆಯ ಕಡೆಯಲ್ಲಿ

ಹಾಗೆ ನೋಡಿದರೆ

ಬುದ್ಧ ಮೊದಲೇ ಇದ್ದ

ನಡು ರಾತ್ರಿಯಲಿ ಯಶೋಧರಾ ಸಿದ್ಧಾರ್ಥರ

ತೋಳುಗಳಲಿ ಬೆಚ್ಚಗೆ ಮಲಗಿದ್ದ

ರಾಹುಲನ ತುಟಿಗಳಲಿ

ಬುದ್ಧ ಮೊದಲೇ ಇದ್ದ

ಎನ್ನುವಲ್ಲಿ ಈ ಕವಿ ಕಂಡುಕೊಂಡ ತಿಳುವಳಿಕೆಯ ಕಾವು ಮತ್ತು ಇತಿಹಾಸವನ್ನು ಬೇರೆಯದೇ ಬೆರಗಿನಿಂದ ಕಂಡ ಸತ್ಯವಾಗಿಯೂ ಕಾಣುತ್ತದೆ.

ಈ ನಡುವೆ ಅದರಲ್ಲೂ ಫೇಸ್ಬುಕ್ಕಿನ ಕವಿತೆಗಳಲ್ಲಿ ರಂಜನೆ ಮತ್ತು ನಾಟಕೀಯತೆಗಳೆ ಮಿಲಿತಗೊಂಡ ಹುಸಿಗಳೇ ಪದ್ಯಗಳೆಂದು ದಾಂಗುಣಿಯಿಡುತ್ತಿರುವ ವರ್ತಮಾನದಲ್ಲಿ ಶ್ರೀ ತಲಗೇರಿಯಂಥವರ ಪದ್ಯಗಳು ಕಾವ್ಯಾಸಕ್ತರಿಗೆ ಮತ್ತು ಬದುಕಿನ ಅರ್ಥದ ಜಿಜ್ಞಾಸುಗಳಿಗೆ ಅಲ್ಪ ಪ್ರಮಾಣದ ಸಮಾಧಾನ ಮತ್ತು ಸಾಂತ್ವನ ನೀಡುತ್ತವೆ. ಚಿಂತನೆಯೇ ಮುಖ್ಯವಾದ ಲೌಕಿಕದ ಆಕರ್ಷಕ ಸಂಗತಿಗಳಿಗೆ ಹೊರತಾದ ಈ ಬಗೆಯ ಬೌದ್ಧಿಕತೆ ಕೂಡ ಕೆಲವೇ ಜನಗಳ ಶೋಕೇಸ್ ವಸ್ತುವಾಗುತ್ತಿರುವ ಕಾಲದಲ್ಲಿ ಶ್ರೀಧರ ಭಟ್ ಅವರ ಮುಂದಿನ ಕಾವ್ಯಕೃಷಿ ಕುರಿತು ಸಹಜ ಕುತೂಹಲ ಮತ್ತು ಭರವಸೆಯನ್ನು ಹುಟ್ಟಿಸುತ್ತಿದೆ.


ಶ್ರೀ ತಲಗೇರಿ ಅವರ ಆಯ್ದ ಕವಿತೆಗಳು.

1. “ಕತ್ತಲು”

ನಾವು ಕತ್ತಲನ್ನು ಕಾಯುತ್ತೇವೆ

ಕೂಡಲು ಬೇಡಲು

ಯಾವುದೋ ತುತ್ತ ತುದಿ ತಲುಪಿ

ದಂತೆ ನಿಟ್ಟುಸಿರು ಬಿಡಲು

ಎಲ್ಲ ಕಳಕೊಂಡ

ನಿರ್ಗತಿಕರಂತೆ ಮಲಗುತ್ತೇವೆ

ಇಷ್ಟೇ ಇಷ್ಟು ಬಿರಿದ

ತುಟಿಗಳ ಡೊಂಕು ಅಗಲಿಸಿ..

ಒಂದು ತಪ್ಪೇ ಇಲ್ಲಿ ಸರಿಯಾಗಬಹುದು

ಸೋಲುವ ಯುದ್ಧದ ಸುತ್ತ ಗಿರಕಿ

ಕಠಿಣವಾದಷ್ಟೂ ಮೆದುವಿಗೆ

ಮೆದುವಾದಷ್ಟೂ ಕಠಿಣಕ್ಕೆ

ಉನ್ಮಾದ; ಸೀಮೋಲ್ಲಂಘನದ ಆವೇಶ

ಕರಗುತ್ತದೆ ಹೊತ್ತು ದೇಹ

ಗಳ ಮಿತಿಯ ಮೀರುವ ಶೋಧದಲ್ಲಿ

ಚಿಗುರು ಹುಟ್ಟುವ ಮೊದಲೇ

ಜೀವ ಚಿಗುರಬೇಕಲ್ಲ ಬಿಂದುವಾಗಿ

ಕತ್ತಲ ನೆರಿಗೆಗಳು ಬೆರಳಿಗೆ ತಾಕುವಾಗ

ಬೆಳಕಿಗೆ ಹಿಂದಿರುಗದ ಹಠ ಹಿಡಿದು

ಗುರುತಿನ ಬಟ್ಟೆ ಕಳೆದು ಕೂರುವಾಸೆ

ವ್ಯಾಪಾರವೇನು ಹುಟ್ಟಿಗೆ ಸಾವು, ಸಾವಿಗೆ ಹುಟ್ಟು

ಬ್ರಹ್ಮಾಂಡವೇ ಅಣುವಾಗಿ ಅಣುವೇ ಬ್ರಹ್ಮಾಂಡವಾಗಿ

ಎಲ್ಲಿಯ ಏಕರೂಪ, ಎಲ್ಲಿಯ ಭೌತ ತಾಪ

ಒಡೆದು ಕಡೆದು ಸಿಡಿದು ಕತ್ತಲು

ಬೀಜ ಬಿತ್ತುತ್ತದೆ ನಾಳೆಯ ಸಾಕ್ಷಿಗಾಗಿ..

ನಾವು ಕತ್ತಲನ್ನು ಕಾಯುತ್ತೇವೆ

ಕೂಡಲು ಬೇಡಲು

ಯಾವುದೋ ತುತ್ತ ತುದಿ ತಲುಪಿ

ದಂತೆ ನಿಟ್ಟುಸಿರು ಬಿಡಲು

2.

ಹೀಗೆ ಮೌನವನ್ನಾತು

ಕೂರಬೇಡ

ಒಂದು ಜೋರು ಮಳೆ

ಬರುತ್ತದೆ

ಬಚ್ಚಿಟ್ಟ ಮಾತು

ಮೆತ್ತಗೆ ಕರಗಿ ತೊಳೆದುಹೋದರೆ

ಎಲ್ಲಿ ದೋಣಿಯ ಕೋಲು ಬೀಸಲಿ

ಊರ ತುಂಬಾ ಬೀಳುವ ಮಳೆಯ

ಬಾಲ ಹಿಡಿದು

ಗುಡುಗಿನ ಮೀಸೆ ತಿರುವಬೇಕು

ಅಂದಿದ್ದೆಯಲ್ಲಾ

ಈ ಮಳೆಗೆ ತಲೆ ಬುಡ ಇಲ್ಲ

ಆದರೂ ಒಂದು ಹೆಸರು ಕೊಡು

ಇಟ್ಟುಕೊಳ್ಳುತ್ತೇವೆ

ಒದ್ದೆಯಾಗಬಹುದು

ಈ ರಾತ್ರಿ ಒಟ್ಟಿಗೇ ಕಳೆದರೆ

ಗತ್ತಿನಲ್ಲಿ ಮತ್ತಿನಲ್ಲಿ ಸ್ವಂತದಲ್ಲಿ

ರೋಮಗಳಿಗೆ ಆಗಾಗ

“ಕ್ಲಾಸ್ ಸಾವ್ದಾನ್”

ಸುಮ್ಮನೆ ಬೆತ್ತಲಾಗಬಾರದು ಹಾಗೆಲ್ಲಾ

ಒಂದೇ ಕೊಡೆಯ ಕೆಳಗೆ ಕೂರಬೇಕು

ಅದಕೆ ಮೋಡಗಳ ಚಿತ್ರವಿರಬೇಕು

ಮತ್ತೆ ಹೇಳಬೇಕೇ

ಮಳೆ ಬರಬೇಕು

3.”ಮಳೆಗಾಲಕಿನ್ನೂ ಅರ್ಧ ವಯಸ್ಸು’

ಮುಗಿದಿಲ್ಲವಿನ್ನೂ ಸಂಭಾಷಣೆ

ಅರ್ಧಕ್ಕೆ ನಿಂತ ನಿವೇದನೆ

ಎದೆಭಾರವೆಲ್ಲಾ ನಿನ್ನದೆಗೆ ನೂಕಿ

ಜೋಕಾಲಿಯಾಡುವೆನು ಹಗುರಾಗಿ ಜೀಕಿ..

ಕಂಬಳಿಯ ಕೊಪ್ಪೆಯಲಿ

ಸೇರಿಸಿಕೋ ನನ್ನ..

ಮಳೆಗಾಲಕಿನ್ನೂ ಅರ್ಧ ವಯಸ್ಸು !

ಕೊಟ್ಟಿಗೆಯ ತಡಿಯಾಚೆ

ಖಾಲಿ ಕೂತಿಹ ಚಂದ್ರ

ಒಂದೊಳ್ಳೆ ನೆರಿಗೆಯನು

ಬಿಚ್ಚಬಾರದೇ ನಾಚಿಕೆ ಸರಿಸಿ

ಇಳಿಜಾರು ಭೂಮಿಯಲಿ

ಹನಿ ಜಾರಿ ಬಿದ್ದೀತು

ಹತ್ತಿರವೇ ಇರಿಸಿಕೋ

ನನದೊಂದು ಬೊಗಸೆಯನು

ಮಳೆಗಾಲಕಿನ್ನೂ ಅರ್ಧ ವಯಸ್ಸು !

ಹಳೇ ನಿಲ್ದಾಣದಲಿ

ಕೂತಿದೆ ಹರಡಿದಾ ಕೂದಲು

ಪ್ರತಿನಿತ್ಯ ಹೀಗೇ ಒಂದು ಭೇಟಿ

ಬರುವರೇನೋ ಎಂದು

ಕಾಯುವಂತೆ ಕತ್ತೆತ್ತಿ..

ಮರಳುವುದೇನು ಆ ವಯಸ್ಸು

ಊರುಬಿಟ್ಟ ಮೋಡಗಳ

ಹಿಂದೆಯೇ ಹೋಯಿತಂತೆ ಮಳೆಗಾಲ..

ನೆನಪುಗಳಲಿ ಒಂದಾದರೂ

ದೋಣಿಯಿದ್ದೀತು ಸಾವರಿಸಿಕೊಳಲು

ಮುರಿದದ್ದೋ ಅಥವಾ ಕಟ್ಟಬೇಕಿರುವುದೋ.. !

4.

‘ಪ್ರಶ್ನೆ’.. !

ತೊಡೆಯ ಮೇಲೆ ಪುಟ್ಟ ಬೆರಳುಗಳ ಕೂರಿಸಿ

ನನ್ನಗಲ ಬೊಗಸೆಯಲಿ ತುಂಬಿಕೊಂಡು

ಕೂಡುವ ಕಳೆಯುವ ಲೆಕ್ಕ ಕಲಿಸದೇ ಹೋದೆ..

ಎಳೆ ಉಗುರಗಳ ಮೇಲೆ

ಕೊಕ್ಕರೆ ಉಂಗುರವಿಕ್ಕಿದೆ ಎಂದು

ಸುಳ್ಳು ಸುಳ್ಳೇ ಕಣ್ಣು ಮಿಟುಕಿಸದೇ

ಕಳೆದುಕೊಂಡೆ ಕುತೂಹಲದ ಕಿಲಕಿಲವ..

ಒಂದೇ ಭೂಮಿಯಲಿ ತನ್ನದೇ ಜಗದಿಂದ

ದೂರವುಳಿದ ತಂದೆ ನಾನು..

ಜಡೆಯ ಹೆಣೆಯಲಿಲ್ಲ ಅವಳು ಬಸುರಿಯಾದ ಮೇಲೂ

ಬಾಯಿಗಿಡಲಿಲ್ಲ ಒಂದೆರಡು ತುತ್ತುಗಳನೂ ಅಕ್ಕರೆಯಲಿ

ಮುತ್ತನಿಡಲಿಲ್ಲ ಭಾರ ಹೊತ್ತ ಕಂಗಳನು ಅಪ್ಪಿ

ತೋಳಿಗೊದಗಿ ಬರಲಿಲ್ಲ ನಡೆಯುವಾಗ ಮೆಲ್ಲ ಮೆಲ್ಲ..

ಬೆನ್ನುಜ್ಜಿಕೊಡಲಿಲ್ಲ ಬಿಸಿನೀರ ಸ್ನಾನದಲಿ

ಕೊನೇ ಪಕ್ಷ , ಹೊಟ್ಟೆಯನು ಮುಟ್ಟಿ

ಆಗಾಗ ಒದೆವ ಸುಖದ ಶಬ್ದ ಕೇಳಲೇ ಇಲ್ಲ..

ತೆರೆದ ಕಂಗಳ ಇದಿರು ವಿಸ್ಮಯವ ಬಿಚ್ಚಿಡಲಿಲ್ಲ

ಓಡಿ ಹೋಗಿ ಗಾಬರಿಪಡಲಿಲ್ಲ ಒಮ್ಮೆಲೇ

ಮಣ್ಣು ಕಲ್ಲುಗಳ ಬಾಯಲ್ಲಿ ತುರುಕಿಕೊಂಡಾಗ..

ಎತ್ತಿ, ಗೊತ್ತಿರದ ಲಾಲಿಯನು ಹಾಡಲಿಲ್ಲ

ನೂರು ಆಟಿಕೆಗಳ ಮುರಿದು ಹರಡಿ ರಂಪ ಕರೆದಾಗ..

ಬೆನ್ನ ಮೇಲೆ ಕೂರಿಸಿ ಉಪ್ಪುಮೂಟೆ ಅನಲಿಲ್ಲ

ಅಲೆಯಲಿಲ್ಲ ವರಾಂಡದಲೂ ಸ್ವಲ್ಪ ಹೊತ್ತು

ಹೆಗಲ ಮೇಲೆ ಕೂರಿಸಿಕೊಂಡು ಪ್ರೀತಿಯಿಂದ..

ತಲೆ ಒರೆಸಿ,ಸಾಂಬ್ರಾಣಿಯ ಹೊಗೆಯಿಡಲಿಲ್ಲ ಬಾಣಂತಿಗೆ

ಅರೆದುಕೊಡಲಿಲ್ಲ ಕರಿಮೆಣಸು, ಕಲಸಲಿಲ್ಲ ತುಪ್ಪ..

ಅಪ್ಪ ಅನ್ನಲೇ ಇಲ್ಲ ಮುಖಕ್ಕೆ ಮುಖ ಕೊಟ್ಟು ನಿಂತಾಗಲೂ

ಅಷ್ಟಕ್ಕೂ ಮಕ್ಕಳಿಗೆ ನನ್ನ ಪರಿಚಯವ ಹೇಳಲೇ ಇಲ್ಲ.. !

ಅಹಲ್ಯೆಯ ಗೌತಮರಿಗೊಪ್ಪಿಸಿದ ಹುಡುಗನೊಬ್ಬ

ಧರ್ಮದ ಗಡಿಯಲ್ಲೇ ಉಳಿದು ಹೋದ ರಾಜನಾದ

ಅಯೋಧ್ಯಾರಾಮ ನಾನು, ಸೀತೆಯಲ್ಲುಳಿದ ಪ್ರಶ್ನೆ ನಾನು!

5. “ದೇವರ ವಿಳಾಸ ಹುಡುಕಿದ್ದೇನೆ”

ಆ ತೋಟದಲಿ ಯಾರದು

ಅಷ್ಟು ಮಿಂಚು ಹುಳುಗಳ ಬಿಟ್ಟವರು

ಲಾಂದ್ರ ಕಟ್ಟಿಹರೇನು ಬಾಲಕ್ಕೆ?!

ಒಡೆದ ಹಣತೆಗಳ ಬತ್ತಿಯ ತುಂಡೋ

ಅದೆಷ್ಟೋ ಸಾವಿರ, ಹಚ್ಚಿದವರಾರು

ಅದಕೆ ಎಣ್ಣೆ ಇಕ್ಕಿದವರಾರು

ಅದ್ಯಾರೋ ಅಂದರು ದೇವರು..

ಒಡೆಯಾ, ನನಗೆ ನೀವೇ ದೇವರು

ಬೀರ, ನಮ್ಮನೆಯ ಹೊಳ್ಳಿಯಲಿ ಕೂತು ಅಂದ..

ಅವನೊಡೆಯ ನನಗೆ ಅಪ್ಪ ಮಾತ್ರ..

ದೇವಸ್ಥಾನದಲಿ ಸಿಗಬಹುದೆಂದು

ವಿಳಾಸ ಕೊಟ್ಟರು ತಿಳಿದವರು..

ಅಲ್ಲಿ ಇದ್ದುದು ಬರೀ ವಿಶೇಷ ಪೂಜೆ..

ಕೈ ಮುಗಿದರೂ ಮುಖದ ಮೇಲೆ ಬೀಳದ ನೆರಳು..

ಕಾಡಿನಲಿ ಕರೆದೆ ದೇವರನು, ಭುಸ್ಸೆಂದಿತು ಹಾವು

ಕೂತು ಕೂಗಿದೆ ಊರ ಮಧ್ಯದಲಿ

ಒಂದಿಬ್ಬರು ಕರೆದೆಯಾ ಅಂದರು

ದೇವರಾಗುವುದಿಲ್ಲವಲ್ಲಾ ಹೆಸರಿಟ್ಟುಕೊಂಡ ಮಾತ್ರಕ್ಕೆ !

ನಗರದ ಎದೆಯಲ್ಲೇನಾದರೂ ಕೂತಿರಬಹುದಾ

ನೋಡಲಿಕ್ಕೆ ಇಲ್ಲಿ ಕಣ್ಣುಗಳು ಸಂಧಿಸುವುದಿಲ್ಲ..

ಬರೀ ಬೆಳಕಿನ ವ್ಯಾಪಾರ, ದೇವರು ತೇಜಿಯಾಗಿದ್ದಾನೆ..

ಕಾಲವನು ಮತ್ತೆ ಜೋಡಿಸಿದೆ ಅಂಗೈಲಿಟ್ಟು

ದೇವರು ಸಿಗುವುದಿಲ್ಲ ಬಿಡು ಇಂಥ ಹುಡುಕಾಟದಲಿ

ಆತನೋ ಆಕೆಯೋ; ನಮ್ಮಂತೆಯೇ ದೇವರು?!..

ಇರಬಹುದು ಪೂರ ವಿರಾಗಿ, ಭೈರಾಗಿ

ಹೌದಲ್ಲಾ, ತನ್ನಿರುವ ಚೂರು ಚೂರೇ ಬಿಟ್ಟು

ಕಳೆದುಹೋದವ ಇದೇ ಜಂಗುಳಿಯ ಮಧ್ಯ..

ಇಲ್ಲೀಗ ಈ ಮರಗಳ ಕೆಳಗೆ ಕೂತವರೆಲ್ಲಾ

ಮುಂದೇನಾಗುವರು ?!..

6.

ಗೆರೆ..

ಈ ತೂತಲ್ಲಿ

ಅದೆಷ್ಟು ಆಕಾಶ..

ಅಲ್ಲೇ ಉಳಿದ

ಅರ್ಧ ರೊಟ್ಟಿ

ಈ ರಾತ್ರಿಯಾದರೂ

ಕೊಡು,

ಗೊಣಗುವಳು ಪುಟ್ಟಿ..

ಕಿಸೆಯ ತೂತಿಂದ

ಮಲ್ಲಿಗೆಯ ಪರಿಮಳ

ಸೋರುತಿದೆ..

ಆರಾಧಿಸಬಹುದೇ

ಭಕ್ತಿಯಿಂದ

ಈ ರಾತ್ರಿಯಾದರೂ

ಕುತ್ತಿಗೆಯ ಮೇಲೆ

ಯಾವ ಗೀರಿಲ್ಲದೇ..

ಅಳುಕುವಳು ಅಮ್ಮ..

ಗುಡಿಸಲಿನ ಇತಿಹಾಸದಲಿ

ರೇಖೆ ದಾಟಿದರೆ ಸೀತೆಗೆ

ಅಪಹರಣದ ಭೀತಿ..

ರಾವಣ ಮಾರುವೇಷದಲ್ಲಿದ್ದಾನೆ…. !

7. ಬುದ್ಧ ಮೊದಲೇ ಇದ್ದ.. !

ಹಾಗೆ ನೋಡಿದರೆ

ಬುದ್ಧ

ಮೊದಲೇ ಇದ್ದ

ರಕ್ತ ಸೋರುವ ಬಳ್ಳಿಯ ಕತ್ತರಿಸಿ

ಚರ್ಮವನು ಬೊಚ್ಚುಬಾಯಿ ಎಳೆವಾಗ

ಮಧ್ಯಾಹ್ನದ ತೊಟ್ಟಿಲಲಿ ಜೋಗುಳವು

ಅರೆನಿದ್ದೆಯಲಿ ಮುಖ ಸವರಿಕೊಳುವಾಗ

ಅವಳಿದ್ದಂತೆಯೇ ಇದ್ದ

ಇಸ್ತ್ರಿಯಿಲ್ಲದ ಚರ್ಮವ ಹೊದ್ದ

ಹಸಿದ ಹೊಟ್ಟೆಯ ಗೊರಗೊರ ಸದ್ದಿಗೆ

ತಣ್ಣೀರ ಕುಡಿಸಿ ಮೂಲೆಯಲಿ ಮುದುರಿ

ಅತ್ತಿಂದಿತ್ತ ಸೂರ್ಯ ಚಂದ್ರರ ಎಳೆದೆಳೆದು

ಸುದ್ದಿಯಾಗದೇ ಇದ್ದ

ಅವಲಕ್ಕಿ ತಂದವನ

ಗಂಟು ಬಿಡಿಸಿದ ಬಳಿಕ

ಕಲ್ಲಾದ ಶಾಪವನು

ಪಾದ ಮುಟ್ಟುವ ತನಕ

ಇದ್ದನಾತ ಎಲ್ಲಿಯೂ ಹೇಳದಂತೆ

ಬುದ್ಧನೆಂದರೆ ಗೆದ್ದವನೇ ಸೋತವನೇ

ಅಥವಾ ಎದ್ದವನೇ

ಇದ್ದವನೇ ಇಲ್ಲದವನೇ

ಇದ್ದೂ ಇಲ್ಲದೆಯೇ, ಇಲ್ಲದೆಯೇ ಇದ್ದು

ಸಾವುಗಳ ಲೆಕ್ಕದ ಪುಸ್ತಕದಿ

ಒಂದು ಪುಟ ಹರಿದು ಹೋದವನೇ..!

ಹಾಗೆ ನೋಡಿದರೆ

ಬುದ್ಧ ಮೊದಲೇ ಇದ್ದ

ನಡು ರಾತ್ರಿಯಲಿ ಯಶೋಧರಾ ಸಿದ್ಧಾರ್ಥರ

ತೋಳುಗಳಲಿ ಬೆಚ್ಚಗೆ ಮಲಗಿದ್ದ

ರಾಹುಲನ ತುಟಿಗಳಲಿ

ಬುದ್ಧ ಮೊದಲೇ ಇದ್ದ

**************************************

ತರೀಕೆರೆ ಮೂಲದವರಾದ ಡಿ.ಎಸ್.ರಾಮಸ್ವಾಮಿಯವರು ಜೀವವಿಮಾ ನಿಗಮದ ಅಧಿಕಾರಿಯಾಗಿ ಅರಸೀಕೆರೆಯಲ್ಲಿ ನೆಲೆಸಿದ್ದಾರೆ.ಇವರ ‘ಉಳಿದ ಪ್ರತಿಮೆಗಳು’ ಕವನಸಂಕಲನಕ್ಕೆಮುದ್ದಣ ಕಾವ್ಯ ಪ್ರಶಸ್ತಿದೊರೆತಿದೆ

6 thoughts on “

    1. ಒಳ್ಳೆಯ ಪರಿಚಯ.
      ಪದ್ಯಗಳು ಇಷ್ಟವಾದವು.
      ಧನ್ಯವಾದಗಳು ಸಂಗಾತಿಗೆ

  1. ಶ್ರೀಧರ್ ಭಟ್ ಅವರ ಗಂಭಿರವೂ ಅರ್ಥಗರ್ಭಿತವೂ ಆದ ಕವಿತೆಗಳನ್ನು ಅಷ್ಟೇ ಗಂಭೀರವಾಗಿ ಡಿ.ಎಸ್ ರಾಮಸ್ವಾಮಿಯವರು ಮಾಡಿದ್ದಾರೆ. ಇಬ್ಬರಿಗೂ ಅಭಿನಂದನೆಗಳು..

  2. ಚೆಂದದ ವಿಶ್ಲೇಷಣೆ .. ಅಷ್ಟೇ ಚೆಂದದ ಪದ್ಯಗಳು. ಬಹಳ ಇಷ್ಟವಾಯ್ತು..

  3. ಶ್ರೀ,,ಡಿ,ಎಸ್,ಆರ್,ಮಾಡಿದ ತಲಗೇರಿಯವರ ಕವನಗಳ ವಿಮರ್ಶೆ..ಕಾವ್ಯವನ್ನು ಅರ್ಥೈಸುವ ಹೊಸಪರಿಯನ್ನು ತಿಳಿಸುತ್ತದೆ.
    ಕವನ,ವಿಮರ್ಶೆ ಎರಡೂ ಕಾವ್ಯಾಸಕ್ತರ ಗಮನ ಸೆಳೆಯುವಂತಿದೆ.ಧನ್ಯವಾದಗಳು ಸರ್,ತುಂಬ ಇಷ್ಟವಾಯಿತು.

Leave a Reply

Back To Top