ಅಂಕಣ ಬರಹ
ತ್ವರಿತವಾಗಿಉತ್ತಮನಿರ್ಧಾರತೆಗೆದು
ಕೊಳ್ಳುವುದುಹೇಗೆ?
ಹಿಂದೆ ಮಾಡಿದ ನಿರ್ಧಾರಗಳು ಇಂದು ನಾವಿರುವ ಸ್ಥಿತಿಗೆ ಕಾರಣ.ಎಂಬುದು ನಮಗೆಲ್ಲ ಗೊತ್ತಿರುವ ವಿಷಯವೇ. ಆದರೂ ಹಲವೊಮ್ಮೆ ನಾವು, ಛೇ! ನಾನು ಅಷ್ಟು ತಡವಾಗಿ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಈಗ ನೋಡು ಎಷ್ಟೊಂದು ನೋವು ಅನುಭವಿಸುವ ಹಾಗಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯ್ತು. ನನ್ನ ವಿಳಂಬ ನಿರ್ಧಾರದಿಂದ ಸಾಕಷ್ಟು ನಷ್ಟವಾಗುತ್ತಿದೆ ಅಂತ ತಿಳಿಯುತ್ತಿದ್ದರೂ ಅದನ್ನು ಬದಲಿಸಿಕೊಳ್ಳಲು ಆಗುತ್ತಿಲ್ಲ ಎಂದು ಹಲಬುತ್ತೇವೆ.ನಿರ್ಧಾರಗಳು ಇಡೀ ಜೀವನವನ್ನೇ ಆವರಿಸಿವೆ. ವೃತ್ತಿ ಪ್ರವೃತ್ತಿ ಆರೋಗ್ಯ ಸಂಬಂಧಗಳು ಎಲ್ಲವೂ ನಿರ್ಧಾರದಿಂದ ನಿರ್ಧರಿಸಲ್ಪಡುತ್ತವೆ. ನನ್ನ ಜೊತೆಗೆ ಇದ್ದ ಗೆಳೆಯರು ಇದೇ ವಿಷಯದಲ್ಲಿ ಮಾಡಿದ ಸೂಕ್ತ ತ್ವರಿತ ನಿರ್ಧಾರಗಳು ಅವರ ಬದುಕನ್ನು ಉನ್ನತ ಸ್ಥಿತಿಗೆ ಏರಿಸಿದವು.
ನಿರ್ಧಾರವೆಂದರೆ. . . . . .?
‘ಮೂಲತಃ ನಿರ್ಧಾರವೆಂದರೆ ಲಭ್ಯವಿರುವ ಆಯ್ಕೆಗಳಲ್ಲಿ ಸರಿಯೆನಿಸಿದ ಒಂದನ್ನು ಆರಿಸಿಕೊಳ್ಳುವುದು.’ ‘ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ನಮ್ಮ ಜೀವನವನ್ನು ನಿರ್ಧರಿಸುತ್ತದೆ.’ನಾವು ತೆಗೆದುಕೊಳ್ಳುವ ನಿರ್ಧಾರಗಳು ಬದುಕನ್ನು ಕಟ್ಟುತ್ತವೆ ಇಲ್ಲವೇ ಕೆಡುವುತ್ತವೆ. ನಿರ್ಧಾರಗಳಿಗೆ ಬಹಳಷ್ಟು ಸಮಯ ಕಳೆಯುತ್ತೇವೆ. ಮುಂಜಾನೆ ಎಷ್ಟು ಗಂಟೆಗೆ ಏಳೋದು? ಮಧ್ಯಾಹ್ನ ಊಟಕ್ಕೇನು? ಇಂದು ಯಾವ ಯಾವ ಕೆಲಸ ಮಾಡುವುದು? ಯಾರನ್ನು ಭೇಟಿಯಾಗುವುದು ಇಂಥ ಚಿಕ್ಕ ಚಿಕ್ಕ ವಿಷಯಗಳಲ್ಲಿಯೂ ನಿರ್ಧಾರ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದೆ. ಬಿಕ್ಕಟ್ಟಿನ ಸಮಯದಲ್ಲಿ ಇಲ್ಲವೇ ಜೀವನದ ಮಹತ್ವದ ನಿರ್ಧಾರದಲ್ಲಂತೂ ಇದರ ಪಾತ್ರ ಬದುಕನ್ನೇ ಅಲ್ಲಾಡಿಸಿ ಬಿಡುತ್ತದೆ. ತ್ವರಿತ ನಿರ್ಧಾರದಿಂದ ಸಾಕಷ್ಟು ಸಮಯ ಉಳಿಸಬಹುದು.ಕಠಿಣ ನಿರ್ಧಾರಗಳನ್ನು ತ್ವರಿತವಾಗಿ ತೆಗೆದುಕೊಳ್ಳಲು ಸಮರ್ಪಕ ಗುರಿ ಹೊಂದಿರುವುದು ಮುಖ್ಯ.
ಬಿಲಿಯನ್ ಡಾಲರ್ ಪ್ರಶ್ನೆ
ನಿರ್ಧಾರಗಳೇ ಹಾಗೆ ಕೇವಲ ಕೆಲವು ಕ್ಷಣಗಳಲ್ಲಿ ಬದುಕನ್ನು ವಿಚಿತ್ರ ತಿರುವಿನಲ್ಲಿ ತಂದು ನಿಲ್ಲಿಸಿ ಬಿಡುತ್ತವೆ. ಪ್ರತಿ ಬಾರಿ ನಿರ್ಧರಿಸುವಾಗ ತುಂಬಾ ಅವಸರಿಸಿದರೂ ಕಷ್ಟ ವಿಳಂಬವಾದರೂ ಕಷ್ಟ. ಇದೊಂದು ತರಹ ಬಿಸಿ ತುಪ್ಪ ಬಾಯಲ್ಲಿ ಹಾಕಿಕೊಂಡ ಅನುಭವ ಉಗುಳಲೂ ಆಗದು. ನುಂಗಲೂ ಆಗದು. ಎನ್ನುವುದು ಹಲವರ ಅಂಬೋಣ.ಕೆಲವರ ಸಲಹೆ ಪ್ರಕಾರ ಮುಗ್ಗರಿಸಿದರಂತೂ ಅವರನ್ನು ಇನ್ನಿಲ್ಲದಂತೆ ಹಾಡಿ ಹರಸುತ್ತೇವೆ. ಸಲಹೆ ನೀಡುವವರು ಸಾರ್ವತ್ರಿಕವಾಗಿ ಯೋಚಿಸಿ ನಿರ್ಧಾರ ಪ್ರಕಟಿಸುತ್ತಾರೆ. ನಮ್ಮ ಬದುಕಿನ ಬಗ್ಗೆ ನಮಗಿಂತ ಚೆನ್ನಾಗಿ ಬೇರೆಯವರಿಗೆ ಹೆಚ್ಚು ತಿಳಿದಿರುವುದಿಲ್ಲ. ನಮಗೆ ಚೆನ್ನಾಗಿ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲವೆಂದ ಮೇಲೆ ಅನುಭವಿಗಳ ತಿಳಿದವರನ್ನು ಅವಲಂಬಿಸುವುದು ಸಾಮಾನ್ಯ. ಆದರೆ ಆ ನಿರ್ಧಾರ ಯಾವಾಗಲೂ ಒಳ್ಳೆಯ ಫಲಿತಗಳನ್ನು ಕೊಡುತ್ತದೆ ಎನ್ನುವುದು ಲಾಟರಿ ಫಲಿತಾಂಶ ಇದ್ದಂತೆ. ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಇತರರ ಮೇಲೆ ಅವಲಂಬಿಸುವುದು ಎಂದರೆ, ‘ಕುಸಿಯುತ್ತಿರುವ ಆಧಾರವನ್ನು ಗಟ್ಟಿಯಾಗಿ ಹಿಡಿದುಕೊಂಡಂತೆ.’ ಹೀಗಿದ್ದಾಗ ತ್ವರಿತ ನಿರ್ಧಾರ ತೆಗೆದುಕೊಳ್ಳುವುದು ಹೇಗೆ?ಎನ್ನುವುದು ಬಿಲಿಯನ್ ಡಾಲರ್ ಪ್ರಶ್ನೆಯಂತೆ ಕಾಡುತ್ತದೆ ಅಲ್ಲವೇ? ಹಾಗಾದರೆ ಮುಂದಕ್ಕೆ ಓದಿ.
ನನ್ನ ನಿರ್ಧಾರ ನನ್ನದು
ಪ್ರತಿಯೊಂದರಲ್ಲೂ ಪರಿಶ್ರಮ ಪಡುವ ಮನೋಭಾವವಿದ್ದರೆ ನಾವು ಅಂದುಕೊಂಡಿದ್ದನ್ನು ಸಾಧಿಸಿ ಬಿಡುತ್ತೇವೆ ಎನ್ನುವುದು ಸುಳ್ಳು. ಧೈರ್ಯದ ತ್ವರಿತ ನಿರ್ಧಾರ ತೊಟ್ಟು ಚೈತನ್ಯದೊಂದಿಗೆ ಮುಂದುವರೆದರೆ ಮಾತ್ರ ಬದುಕಿನಲ್ಲಿ ಸುಧಾರಣೆ ತಂದುಕೊಳ್ಳಬಹುದು. ಚಾಣಕ್ಯ ನೀತಿಯಲ್ಲಿ ಹೇಳಿದಂತೆ “ಕೋಳಿಯಿಂದ ನಾಲ್ಕು ಪಾಠ ಕಲಿಯಬಹುದು. ಬೇಗ ಏಳುವುದು, ಆತ್ಮ ರಕ್ಷಣೆಗೆ ಹಾಗೂ ಯುದ್ಧಕ್ಕೆ ಸದಾ ಸನ್ನದ್ಧವಾಗಿರುವುದು.ತನ್ನ ಸುತ್ತಲಿನವರಿಗೆ ಉದಾರವಾಗಿ ಹಂಚುವುದು. ತನ್ನ ಅವಶ್ಯಕತೆಗಳಿಗೆ ತಾನೇ ಸಂಪಾದಿಸುವುದು.” ಕೋಳಿ ಹೇಗೆ ತನ್ನ ಅಗತ್ಯತೆಗೆ ತಾನೇ ಸ್ಪಂದಿಸುವುದೋ ಹಾಗೆ ನಾವೂ ನಮ್ಮ ನಿರ್ಧಾರಗಳಲ್ಲಿ ಮುಖ್ಯ ಪಾತ್ರವನ್ನು ವಹಿಸಬೇಕು.ಗ್ರೀಕ್ ನಾಣ್ಣುಡಿಯಂತೆ “ಬಲ್ಲಿದವನಿಗಿಂತ ತಿಳಿದವನು ಮೇಲು.” ಇತರರು ನಮ್ಮನ್ನು ಬಲ್ಲರು ಆದರೆ ಚೆನ್ನಾಗಿ ತಿಳಿಯಲಾರರು. ಆದ್ದರಿಂದ ನಮ್ಮ ಬಗ್ಗೆ ನಾವೇ ಅರಿತು ನಿರ್ಧರಿಸುವುದು ಮೇಲು.
ಪ್ರಮಾಣ ನಿರ್ಧರಿಸಿ
ಸುಮ್ಮನೆ ಯೋಚಿಸಿದರೆ ಪ್ರತಿ ದಿನದ ಬದುಕಿನಲ್ಲಿ ಜೀವಿಸುತ್ತಿರುವುದು ನಾವು ತೆಗೆದುಕೊಳ್ಳುವ ನಿರ್ಧಾರದ ಮೇಲೆ. ತೆಗೆದುಕೊಳ್ಳುವ ನಿರ್ಧಾರಗಳು ಬದುಕನ್ನು ಬದಲಿಸುವ ತಾಕತ್ತು ಹೊಂದಿವೆ. ಮಾಡುವ ಆಯ್ಕೆಯಲ್ಲಿ ತುಸು ತಡವಾದರೂ ಬಹಳಷ್ಟು ತೊಂದರೆ ಅನುಭವಿಸುವ ತೊಂದರೆ ತಪ್ಪಿದ್ದಲ್ಲ. ಪ್ರತಿ ಸಲ ಪ್ರತಿ ವಿಷಯದಲ್ಲೂ ವಿಳಂಬ ನಿರ್ಧಾರವನ್ನು ರೂಢಿಸಿಕೊಂಡರೆ ಮುಗಿದೇ ಹೋಯಿತು.ಬಂಗಾರದಂಥ ಅವಕಾಶಗಳು ಕೈ ತಪ್ಪಿ ಹೋಗುತ್ತವೆ. ಜೀವನ ಪರ್ಯಂತ ಅದನ್ನೇ ನೆನೆ ನೆನೆದು ಕೊರಗ ಬೇಕಾಗುತ್ತದೆ.ಅವರಿವರ ಮುಂದೆ ಅದನ್ನೇ ತೋಡಿಕೊಳ್ಳುತ್ತ ಕೂರಬೇಕಾಗುತ್ತದೆ. ಹಾಗಾದರೆ ತ್ವರಿತ ನಿರ್ಧಾರ ತೆಗೆದುಕೊಳ್ಳುವುದು ಒಂದು ಕೌಶಲ್ಯ ಅಲ್ಲವೇ? ಸರಿ, ಏನಾದರೂ ಆಗಲಿ ಅಂತ ಅವಸರದಲ್ಲಿ ಏನಾದರೂ ನಿರ್ಧಾರ ಕೈಗೊಂಡರೆ ಅದನ್ನೂ ಅನುಭವಿಸಲೇಬೇಕು. ನಿರ್ಧಾರಗಳನ್ನು ಸಣ್ಣ ಮಧ್ಯ ಮತ್ತು ದೊಡ್ಡ ಎನ್ನುವ ವರ್ಗಕ್ಕೆ ಸೇರಿಸಬೇಕು.ಇದು ನಿರ್ಧಾರದ ಪ್ರಾಮುಖ್ಯತೆಯನ್ನು ಬೇರ್ಪಡಿಸುವುದು. ಸೂಕ್ತ ಸಮಯ ಹಾಗೂ ಶ್ರಮವನ್ನು ಹಾಕಲು ಅನುವು ಮಾಡಿಕೊಡುವುದು.
ಇರಲಿ ಸಮಯ ಮಿತಿ
ಸ್ವಯಂ ಸಮಯ ಮಿತಿಯು ನಿರ್ಧಾರವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುವುದು.ಯಾವುದೇ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾದರೆ ಟೈಮರ್‍ನ್ನು ಹೊಂದಿಸಿ ಮತ್ತು ನಿರ್ಧಾರದ ಪ್ರಕ್ರಿಯೆ ಪ್ರಾರಂಭಿಸಿ. 10,10,10 ವಿಧಾನ ಬಳಸಿ ಅಂದರೆ ತೆಗೆದುಕೊಂಡ ನಿರ್ಧಾರ 10 ನಿಮಿಷ, 10 ತಿಂಗಳು 10 ವರ್ಷಗಳ ನಂತರ ಖುಷಿ ನೀಡುವುದು ಎನ್ನುವುದನ್ನು ತಿಳಿದುಕೊಂಡರೆ ಸಾಕು. ತ್ವರಿತ ಉತ್ತಮ ನಿರ್ಧಾರ ಸಾಧ್ಯ. ನಿರ್ಣಯ ತೆಗೆದುಕೊಳ್ಳಬೇಕಾದ ಸಮಸ್ಯೆಯನ್ನು ಬರೆದು ಸಂಭವನೀಯ ನಿರ್ಣಯಗಳನ್ನು ಲಾಭದಾಯಕ ಅಂಶಗಳನ್ನು ವಿಶ್ಲೇಷಿಸುವುದು ಅತ್ಯಂತ ಉತ್ತಮ ವಿಧಾನ. ನಿರ್ಣಯದ ತುದಿಯನ್ನು ಸರಳವಾಗಿ ತಲುಪಲು ಸಹಾಯ ಮಾಡುತ್ತದೆ. ‘ಸಮಯ ಮಿತಿಯು ಯಾವಾಗ ಕೊನೆಗೊಳ್ಳುತ್ತದೆ ಎಂದು ತಿಳಿದಾಗ ನಾವು ನಿರ್ಧಾರದಲ್ಲಿ ಹೆಚ್ಚಿನ ಶ್ರಮವನ್ನು ಹೂಡುತ್ತೇವೆ.’ ಎಂದು ಒಂದು ಅಧ್ಯಯನ ತಂಡ ಹೇಳಿದೆ. ಅಷ್ಟೇ ಅಲ್ಲ ಕಡಿಮೆ ಆಯಾಸವನ್ನು ಅನುಭವಿಸುತ್ತೇವೆ. ಇದು ಗಡುವಿನ ಶಕ್ತಿ ಅಲ್ಲದೇ ಮತ್ತೇನೂ ಅಲ್ಲ. ದೊಡ್ಡ ಅಥವಾ ಮಹತ್ವದ ನಿರ್ಧಾರಗಳಿಗೆ ಹೆಚ್ಚಿನ ಗಡುವನ್ನು ಅನ್ವಯಿಸಿ.
ಒಳ್ಳೆಯದು ಮತ್ತು ಕೆಟ್ಟದ್ದೆಂದು ಯೋಚಿಸಿ
ಹೆಚ್ಚಿನ ವಿಶ್ಲೇಷಣೆಯು ಹೆಚ್ಚಿನ ಆಯ್ಕೆಗಳಿದ್ದಲ್ಲಿ ನಿರ್ಧರಿಸುವುದನ್ನು ಇನ್ನೂ ಹೆಚ್ಚು ನೆನಗುದಿಗೆ ಬೀಳುವಂತೆ ಮಾಡುತ್ತದೆ. ನಿರ್ಧಾರ ತೆಗೆದುಕೊಂಡಾದ ಮೇಲೆಯೂ ಫಲಿತಾಂಶದ ಕುರಿತಾಗಿ ಯೋಚಿಸುವುದು ಒಳ್ಳೆಯದಲ್ಲ. ಇಂಥ ಸಂದರ್ಭದಲ್ಲಿ ನಿರ್ಧಾರ ಮುಳಗಿಸಬಹುದು ಇಲ್ಲವೇ ತೇಲಿಸಬಹುದು. ವಿಶ್ಲೇಷಣೆ ಸಕಾರಾತ್ಮಕವಾಗಿರಲಿ. ಕೆಲವೊಮ್ಮೆ ಆಪ್ತರೊಂದಿಗೆ ಚರ್ಚಿಸಿ ನಿರ್ಧರಿಸುವುದು ಸೂಕ್ತವೆನಿಸುವುದು. ನಿರ್ಧರಿಸುವಾಗ ಆಯ್ಕೆಗಳನ್ನು ಒಳ್ಳೆಯದು ಕೆಟ್ಟದ್ದು ಎಂದು ವಿಭಜಿಸುವುದು ಸೂಕ್ತ. ಇದೊಂದು ತರಹ ಬೆಳೆಯಲ್ಲಿನ ಕಳೆ ತೆಗೆಯುವ ಪ್ರಕ್ರಿಯೆಯಂತೆ. ಒಳ್ಳೆಯ ಮತ್ತು ಕೆಟ್ಟ ಎಂಬ ಎರಡು ಕಾಲಮ್ ಮಾಡಿಕೊಂಡು ಆಯ್ಕೆಗಳನ್ನು ವಿಭಜಿಸಿ ಈ ಕೌಶಲ್ಯ ನಿರ್ಧರಿಸುವಿಕೆಯನ್ನು ಸರಳಗೊಳಿಸುತ್ತದೆ ಮತ್ತು ತ್ವರಿತಗೊಳಿಸುತ್ತದೆ. ನಿರ್ಣಯಿಸುವ ವಿಷಯದ ಕುರಿತು ಯೋಚಿಸುವುದು ಸೂಕ್ತ ಇದರಿಂದ ಸರಿಯಾಗಿ ಮೌಲ್ಯಮಾಪನ ಮಾಡಬಹದುದು. ಆದರೆ ಅತಿಯಾಗಿ ಯೋಚಿಸುವುದು ಸಮಸ್ಯೆಯಾಗುತ್ತದೆ.
ಕಾಗದದಲ್ಲಿ ಬರೆಯಿರಿ
ಎಲ್ಲ ಆಯ್ಕೆಗಳು ಹೆಚ್ಚು ಕಡಿಮೆ ಸರಿ ಸಮಾನ ಮೌಲ್ಯವನ್ನು ಹೊಂದಿವೆ ಎಂದು ತೋರುತ್ತಿದ್ದರೆ ಉತ್ತಮವೆನಿಸಿದವುಗಳನ್ನು ಪ್ರತ್ಯೇಕ ಕಾಗದದಲ್ಲಿ ಬರೆದು ನಂತರ ಯಾದೃಚ್ಛಿಕವಾಗಿ ಒಂದನ್ನು ಆರಿಸಿ ನಿರ್ಧರಿಸಬಹುದು. ನಿರ್ಧಾರಗಳು ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ ಆದ್ದರಿಂದ ಇದು ದೊಡ್ಡ ನಿರ್ಧಾರಗಳಿಗೆ ಸೂಕ್ತವಲ್ಲ. ಸಣ್ಣ ಪುಟ್ಟ ನಿರ್ಧಾರಗಳಿಗೆ ಇದು ಹೇಳಿ ಮಾಡಿಸಿದ ಕೌಶಲ್ಯದಂತೆ ಕಾರ್ಯ ನಿರ್ವಹಿಸುತ್ತದೆ.
ಈ ಕ್ಷಣದಲ್ಲಿ ಜೀವಿಸಿ
ನಿರ್ಧರಿಸುವಿಕೆ ಮಾನಸಿಕವಾಗಿ ನಮ್ಮನ್ನು ಗೊಂದಲಕ್ಕೆ ಬೀಳಿಸುತ್ತದೆ. ಪ್ರತಿ ಹೆಜ್ಜೆಯ ಫಲಿತಾಂಶವನ್ನು ನೋಡಲು ಇಚ್ಛಿಸುತ್ತೇವೆ ಹೀಗಾಗಿ ಕೈಯಲ್ಲಿರುವ ಸಮಯ ಸೋರಿ ಹೋಗುವ ಸಾಧ್ಯತೆಯೇ ಹೆಚ್ಚಿರುತ್ತದೆ. ಆದ್ದರಿಂದ ಸರಳವಾಗಿ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು. ಅತಿಯಾಗಿ ಯೋಚಿಸಿ ಸಮಯ ವ್ಯರ್ಥ ಮಾಡದಂತೆ ನಿಮ್ಮಷ್ಟಕ್ಕೆ ನೀವು ವೀಕ್ಷಕರಾಗಿ ಕಾರ್ಯ ನಿರ್ವಹಿಸಿ.ಕೆಲಸದಲ್ಲಿ ಉತ್ಪಾದಕತೆಯನ್ನು ಬಾನೆತ್ತರಕ್ಕೆ ಏರಿಸಿ ನಿರ್ಧಾರದಲ್ಲಿ ತೀವ್ರಗೊಳ್ಳಲು ಹೆಚ್ಚು ಪರಿಣಾಮಕಾರಿಯಾಗಿ ಇರಬೇಕೆಂದರೆ ವರ್ತಮಾನದತ್ತ ಹೆಚ್ಚು ಗಮನ ನೀಡಬೇಕು. ನಿರ್ಧರಿಸುವಲ್ಲಿಯೇ ಹೆಚ್ಚು ಸಮಯ ತೆಗೆದುಕೊಂಡು ಕಾರ್ಯಾನುಷ್ಟಾನಕ್ಕೆ ಸಮಯ ಇಲ್ಲದಂತೆ ಮಾಡಿಕೊಳ್ಳುತ್ತೇವೆ. ದುಡುಕಿನ ನಿರ್ಧಾರ ಹಾಳುಗೆಡುವುದೇ ಹೆಚ್ಚು. ಈ ಕ್ಷಣದಲ್ಲಿ ಜೀವಿಸಿ ನಿರ್ಣಯಿಸಿ.
ವೈಫಲ್ಯವನ್ನು ಸ್ವೀಕರಿಸಿ
ತ್ವರಿತ ನಿರ್ಧಾರ ಸದಾ ಕಾಲ ಉತ್ತಮವಾಗಿಯೇ ಫಲ ನೀಡುತ್ತವೆ ಎಂದೇನಿಲ್ಲ. ಕೆಲವೊಮ್ಮೆ ಬಿರುಗಾಳಿಯಂತೆ ಸಮಸ್ಯೆಗಳನ್ನು ತಂದು ಚೆಲ್ಲಬಹುದು. ತಪ್ಪು ನಿರ್ಧಾರಗಳು ವೈಫಲ್ಯದ ಉಡುಗೊರೆಯನ್ನು ನೀಡಬಹುದು ಆದ್ದರಿಂದ ವೈಫಲ್ಯವನ್ನು ಸ್ವೀಕರಿಸುವ ಮನೋಭಾವವನ್ನು ಹೊಂದುವುದು ಒಳಿತು. ವೈಫಲ್ಯ ಜೀವನದ ಅವಿಭಾಜ್ಯ ಅಂಗ ಅದರಿಂದ ಬಹಳಷ್ಟನ್ನು ಕಲಿಯುತ್ತೇವೆ ಎನ್ನುವುದೂ ನಿಜ.ಸೋಲು ನಮ್ಮ ಹಿನ್ನೆಡೆಗೆ ಕಾರಣವಾಗದಂತೆ ನೋಡಿಕೊಳ್ಳಬೇಕು.
ಕೊನೆ ಹನಿ
ಜೀವನ ಆಯ್ಕೆಗಳ ಸರಮಾಲೆ. ಬೇಕಾದುದನ್ನು ಆರಿಸಿಕೊಳ್ಳುವುದೇ ನಿರ್ಧಾರ. ಎಲ್ಲ ಪರಿಸ್ಥಿತಿಗಳಲ್ಲಿ ನೂರಕ್ಕೆ ನೂರರಷ್ಟು ತ್ವರಿತ ಉತ್ತಮ ನಿರ್ಧಾರ ತೆಗೆದುಕೊಳ್ಳುವಷ್ಟು ಪರಿಪೂರ್ಣರು ಯಾರೂ ಇಲ್ಲ. ಇಲ್ಲಿ ಪರಿಪೂರ್ಣತೆ ಮುಖ್ಯವಲ್ಲ. ಶೀಘ್ರ ಮತ್ತು ಪರಿಣಾಮಕಾರಿ ನಿರ್ಧಾರ ತೆಗೆದುಕೊಳ್ಳುವುದು ಮಾತ್ರ ಮುಖ್ಯ. ತ್ವರಿತ ಉತ್ತಮ ನಿರ್ಧಾರ ನಮ್ಮನ್ನು ವೃತ್ತದೊಳಗೆ ಮತ್ತು ಹೊರಗೆ ಗೆಲುವಿನತ್ತ ಕರೆದೊಯ್ಯಲು ಸಹಕಾರಿ. ನಡೆಯುವ ದಾರಿಯಲ್ಲಿ ನಿರ್ಣಯದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗುವುದು ಅಷ್ಟೊಂದು ಸುಲಭದ ಕೆಲಸವೇನಲ್ಲ ಹಾಗಂತ ಅಸಾಧ್ಯವುದುದೂ ಅಲ್ಲ. ಬದುಕಿನ ಕೆಲ ಚಿಕ್ಕ ತ್ವರಿತ ಉತ್ತಮ ನಿರ್ಣಯಗಳು ಕೆಲವೊಮ್ಮೆ ದೊಡ್ಡ ಪರಿಣಾಮವನ್ನು ಬೀರುತ್ತವೆ. ಅಂತರಂಗವು ಹೇಳಿದಂತೆ ಭಾವನೆಗಳಿಗೆ ಒತ್ತು ಕೊಟ್ಟು ತೆಗೆದುಕೊಂಡ ನಿರ್ಣಯಗಳು ಖಂಡಿತ ಒಳ್ಳೆಯ ದಾರಿಯಲ್ಲಿ ನಮ್ಮನ್ನು ನಡೆಸುತ್ತವೆ ಮತ್ತು ದೊಡ್ಡ ನಗು ಚೆಲ್ಲುವಂತೆ ಮಾಡುತ್ತವೆ.
ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು
ನಾವು ಜೀವನದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಹಲವು ಭಾರಿ ಯೋಚಿಸಿ ನಿರ್ಧಾರ ತೆಗೆದುಕೊಂಡರೆ ಮುಂದಾಗುವ ಅನಾಹುತ ತಪ್ಪಿಸ ಬಹುದು ಎಂದು ಹಲವು ಉತ್ತಮ ಉದಾಹರಣೆ ಸಹಿತ ಮಾರ್ಗ ದರ್ಶನ ನೀಡುವ ಅತ್ಯುತ್ತಮ ಬರಹ ತುಂಬಾ ಧನ್ಯವಾದಗಳು ಮೆಡಮ.. ಜಿ..
ನಿರ್ಧಾರ ತೆಗೆದುಜೊಂಡಾಗ
ಬದುಕಿನ ಹೊಸ ಪುಟ ತೆರೆದುಕೊಳ್ಳುತ್ತದೆ.
ಆ ಪುಟದ ವ್ಯಾಪ್ತಿ ಮತ್ತು ಸಾರ ನಿರ್ಧಾರದ ಮೇಲೆ ನಿರ್ಭರವಾಗಿರುತ್ತೆ.
ನಿಮ್ಮ ಅಂಕಣ, ನನಗೆ ಹಲವು ಹೊಸ ವಿಷಯಗಳನ್ನು ತಿಳಿಸಿತು.
ಧನ್ಯವಾದಗಳು